-ವಸಂತ್ ಗಿಳಿಯಾರ್
ಕಲ್ಲಡ್ಕ ಪ್ರಭಾಕರ್ ಭಟ್ಟರನ್ನ ಮೊತ್ತ ಮೊದಲ ಸಲ ನಾನು ನೋಡಿದ್ದು ಕಾರ್ಕಳದಲ್ಲಿ. ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭಕ್ಕೆ ಭಟ್ಟರು ಬಂದಿದ್ದರು, ಆಗೆಲ್ಲ ನಾವು ಎಳೆಯರು, ದೇಶಪ್ರೇಮದ ಪ್ರೇಮಿನೊಳಗೆ ನಮ್ಮನ್ನ ಕಟ್ಟು ಹಾಕಿದ್ದೇ ಪ್ರಭಾಕರ ಭಟ್ಟರ ಆ ಅಮೋಘ ಉದ್ಘೋಷಣ. ‘ಸುಮ್ಮನೇ ಬದುಕಿದರೆ ಆ ಬದುಕಿಗೊಂದು ಅರ್ಥವಿಲ್ಲ, ಬದುಕಿಗೊಂದು ಗುರಿ ಇರಲಿ, ಆ ಗುರಿಯ ಕಡೆಗೇ ಅನುದಿನವೂ ನಡೆಯಿರಿ, ನಿಮ್ಮ ಜೀವನದ ಪರಮ ಪದವೇ ಆ ಗುರಿ ಎಂದೇ ಅರಿಯಿರಿ, ಗುರಿ ನಿಮ್ಮ ಪರಮಾತ್ಮನಾಗಲಿ ಪರಮಾಪ್ತನಾಗಲಿ ಎಂದಿದ್ದರು ಭಟ್ಟರು.
ಕರಾವಳಿಯಲ್ಲಿ ಕಮಲದ ಸುಳಿವೇ ಇಲ್ಲದ ಕಾಲದಿಂದ ನಳಿನಿ ನಳ ನಳಿಸುವ ದಿನಗಳ ತನಕ ಅದರ ಹಿಂದೆ ಭಟ್ಟರ ಅವಿರತವಾದ ಶ್ರಮವಿದೆ. ಪಕ್ಷವನ್ನ ಗೆಲ್ಲಿಸುವುದು ಮಾತ್ರವೇ ಭಟ್ಟರ ಟಾರ್ಗೆಟ್ ಆಗಿರಲಿಲ್ಲ. ಧ್ಯೇಯ ಕಮಲವನ್ನು ಅರಳಿಸುವುದೇ ಅವರ ಧ್ಯೇಯವಾಗಿತ್ತು. ಅನಾಮತ್ತು ಆರು ದಶಕಗಳ ಕಾಲ ತನ್ನ ಯೌವನವನ್ನು, ಆಯಸ್ಸನ್ನು, ಸುಖವನ್ನು, ಸಂಪತ್ತನ್ನು ಕಲ್ಲಡ್ಕ ಭಟ್ಟರು ತನ್ನ ಜೀವನ ಮೌಲ್ಯವಾದ ಅವಿಚ್ಛಿನ್ನ ರಾಷ್ಟ್ರೀಯವಾದಕ್ಕೆ, ಹಿಂದುತ್ವಕ್ಕೆ ಧಾರೆ ಎರೆದವರು.
ಭಟ್ಟರ ಕೊಲ್ಲಲು ನೂರಾರು ಸಂಚುಗಳು!
ನಾಗಪುರದ ಡಾಕ್ಟರ್ ಜೀ ಹಾಗೇ ಕಲ್ಲಡ್ಕ ಮಾಣಿಯ ಡಾಕ್ಟರ್ ಜೀ ಆ ಕಾಲಕ್ಕೆ ಎಂ.ಬಿ.ಬಿ.ಎಸ್. ಮುಗಿಸಿದವರು. ವೈದ್ಯರಾಗಿ ಪ್ರಸಿದ್ಧಿಯೂ ಅವರಿಗಿತ್ತು. ಆ ಕಾಲಕ್ಕೇ ಪತ್ನಿ ಕಮಲಾ ಪ್ರಭಾಕರ್ ಭಟ್ ಪ್ರಸಿದ್ಧ ಪ್ರಸೂತಿ ತಜ್ಞೆ. ಅವರಿಬ್ಬರೂ ಸಮಾಜಕ್ಕಾಗಿಯೇ ದುಡಿದರೇ ಹೊರತು ತಮಗಾಗಿ ಅಲ್ಲ. ದಿನಬೆಳಗಾದರೆ ನೂರಾರು ಕೇಸುಗಳ ಹೆಟ್ಟಿಸಿಕೊಂಡು ತನ್ನ ಉರಿ ಭಾಷಣದ ಕಾರಣಕ್ಕೇ ಅರಿಗಳನ್ನ ಹೆಚ್ಚಿಸಿಕೊಂಡು ಅನುದಿನದ ಅನು ಕ್ಷಣವೂ ತತ್ವ ಸಿದ್ದಾಂತಕ್ಕೆ ಬದ್ಧರಾಗಿ ಬದುಕುತ್ತಿದ್ದ ಭಟ್ಟರಿಗೆ ಮನೆಯಲ್ಲಿ ಮಡದಿಯೂ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಟ್ಟಿದ್ದರು! ಅದೆಷ್ಟೋ ಸಾರಿ ಭಟ್ಟರ ಉಸಾಬರಿಗೆ ತನ್ನ ದುಡಿಮೆಯ ಕಾಸು ಕೊಟ್ಟವರು ಕಮಲಾ ಭಟ್!
ಹಿಂದುತ್ವದ ಬೆಂಕಿ ಚೆಂಡಿನಂತೆ ಪ್ಜ್ವಲಿಸುತ್ತಿದ್ದ ಪ್ರಭಾಕರ್ ಭಟ್ಟ್ಟರ ಕೊಲೆಗೆ ದಾವುದ್ ಇಬ್ರಾಹಿಂ ಕೂಡ ಸಂಚು ರೂಪಿಸಿದ್ದ! ರಶೀದ್ ಮಲಬಾರಿ ಪಿಸ್ತೂಲಿನ ಜೊತೆಗೇ ತೀರಾ ಮಂಗಳೂರಿನ ತನಕ ಬಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ! ಭಟ್ಟರನ್ನ ಕೊಲ್ಲಿಸಲು ಸಂಚು ಹೂಡಿದ್ದ ಮಾಡೂರು ಯೂಸೆಫ್ ಜೈಲಿನೊಳಗೇ ವಿಕ್ಕಿ ಶೆಟ್ಟರ ಹುಡುಗರಿಂದ ಕೊಲೆಯಾಗಿ ಹೋಗಿದ್ದ. ಉಗ್ರರ ಹಿಟ್ ಲಿಸ್ಟಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಸಾಲಿನಲ್ಲೇ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿತ್ತು! ಸರ್ಕಾರವೇ ಒತ್ತಾಯದಿಂದ ಕೊಡಿಸಿದ ಗನ್ ಮ್ಯಾನುಗಳು ಬಿಟ್ಟರೆ ಪ್ರಭಾಕರ ಭಟ್ಟರಲ್ಲಿ ರಕ್ಷಣೆಗೆ ಅಂತ ಇದ್ದದ್ದು ತನ್ನ ಶಲ್ಯ ಮಾತ್ರ! ಅವರ ಆಪ್ತರ ಬಳಿ ಮಾತಾಡುತ್ತಾ ತಿಳಿದದ್ದು ಎಪ್ಪತ್ತರ ಪ್ರಾಯದ ತನಕವೂ ಭಟ್ಟರು ತನ್ನ ವಸ್ತ್ರ ತಾನೇ
ಒಗೆದು, ಒಣಗಿಸಿ ಬೇಕಾದರೆ ಅದಕ್ಕೆ ತಾನೇ ಇಸ್ತ್ರಿ ತೀಡಿಕೊಳ್ಳುತ್ತಿದ್ದವರು. ಅದು ಅವರ ಸ್ವಾವಲಂಬಿ ಬದುಕನ್ನ ಸೂಚಿಸುತ್ತದೆ ಅಷ್ಟೇ ಅಲ್ಲದೇ ತನ್ನ ಕೆಲಸ ತಾನೇ ಮಾಡಿಕೊಳ್ಳಬೇಕು ಎನ್ನುವ ಮೌಲ್ಯವನ್ನು ಬದುಕಿ ತೋರಿಸುತ್ತದೆ.
ಧ್ವಜದಂಡದಂತೆ ಬದುಕಿದವರು!
ಭಟ್ಟರಲ್ಲಿ ಯಾವ ಕೋಮಿನ ವಿರುದ್ಧವೂ ವಿನಾಕಾರಣದ ದ್ವೇಷವಿಲ್ಲ, ಅವರವರ ಧರ್ಮ ಪಾಲನೆಗೆ ಭಟ್ಟರ ವಿರೋಧ ಎಂದಿಗೂ ಇಲ್ಲ. ಭಾರತದ ಮುಸಲ್ಮಾನ, ಕ್ರೈಸ್ತ ಕೂಡ ಹಿಂದು ಎನ್ನುವುದು ಭಟ್ಟರ ವಾದ. ಹಿಂದು ಧರ್ಮದ ಸಿದ್ಧಾಂತಕ್ಕೆ, ಪರಂಪರೆಗೆ ಧಕ್ಕೆ ಯಾರೇ ತಂದರೂ ಯಾವ ಮುಲಾಜೂ ಇಲ್ಲದೇ ಭಟ್ಟರು ಸಿಡಿದು ನಿಲ್ಲುತ್ತಾರೆ! ಅದು ಎಲ್ಲರಿಗೂ ಇಷ್ಟವಾಗುವುದಿಲ್ಲ! ಯಾರಿಗೋ ಇಷ್ಟವಾಗಲಿ ಎನ್ನುವ ಕಾರಣಕ್ಕೆ ಭಟ್ಟರು ಹೇಳಬೇಕಾದದ್ದನ್ನು ಹೇಳದೇ ಉಳಿಯುವುದಿಲ್ಲ! ತನ್ನ ಮೊನಚು ಮತ್ತು ನೇರವಾದ ಮಾತಿನಿಂದಲೇ ಅವರಿಗೆ ಲಕ್ಷಾಂತರ ಶತ್ರುಗಳಿದ್ದಾರೆ! ಮತ್ತು ಕೋಟ್ಯಾಂತರ ಅಭಿಮಾನಿಗಳೂ ಇದ್ದಾರೆ! ಅವರ ಮಾತು ಅದು ಚಾಟಿಯ ಏಟು. ಭಟ್ಟರು ಕೊಡುವ ತೀರ್ಪು ಸುಪ್ರೀಂ ಕೋರ್ಟಿನಲ್ಲಿಯೂ ಇರದ ಕಟ್ಟುನಿಟ್ಟಿನದ್ದು! ಮುಂದೆ ಕೂತವ ದೇಶದ ಪ್ರಧಾನ ಮಂತ್ರಿಯಾದರೂ ಅವರಿಗೆ ಯಾವ ಮುಲಾಜೂ ಇಲ್ಲ! ತಾನು ಹೇಳಬೇಕಾದದ್ದನ್ನು ಹೇಳಿಯೇ ಭಟ್ಟರು ತನ್ನ ಶಲ್ಯ ಕೊಡವಿಕೊಂಡು ಎದ್ದು ನಡೆದು ಬಿಡುತ್ತಿದ್ದರು.
ಇಂದು ದಕ್ಷಿಣ ಭಾರತದಲ್ಲಿ ಭಗವಾ ಧ್ವಜ ಅಮರಧ್ವಜದಂತೆ ಪಟ ಪಟಿಸುತ್ತಿದೆ,ಗಗನಚುಂಬಿಯಾಗಿ ಹಾರುವ ಆ ಧ್ವಜ ಎಲ್ಲರ ಕಣ್ಣಿಗೂ ಬೀಳುತ್ತದೆ ಆದರೆ ಅದಕ್ಕೆ ಕಾರಣ ಧ್ವಜದಂಡ! ಅದೇ ತೆರನಾಗಿ ಆರು ದಶಕದಿಂದಲೂ ಹಿಂದುತ್ವದ ಧ್ವಜದಂಡವಾಗಿ ನಿಂತವರು ಕಲ್ಲಡ್ಕ ಪ್ರಭಾಕರ್ ಭಟ್ಟರು ಎಂದು ಯಾವ ಮರ್ಜಿಯೂ, ಮುಲಾಜೂ ಇಲ್ಲದೇ ಹೇಳಬಹುದು. ತನ್ನ ತತ್ವ ಸಿದ್ಧಾಂತಕ್ಕಾಗಿ ಬದುಕನ್ನೇ ತೇಯ್ದ, ಪ್ರಾಣವನ್ನೇ ಪಣವಾಗಿ ಇರಿಸಿದ ಭಟ್ಟರು ಅಂದಿಗೂ ಇಂದಿಗೂ ಆ ಸೂರ್ಯನ ಹಾಗೇ ಪ್ರಚಂಡತೇಜಸ್ವಿಯಾಗಿ ಮಿನುಗುತ್ತಿದ್ದಾರೆ.
ಭಟ್ಟರ ಶಾಲೆಯನ್ನೊಮ್ಮೆ ನೋಡಿ ಬನ್ನಿ!
ನೀವೊಮ್ಮೆ ಸಾಧ್ಯವಿದ್ದರೆ ಭಟ್ಟರು ಕಟ್ಟಿಸಿದ ಶ್ರೀ ರಾಮ ವಿದ್ಯಾಕೇಂದ್ರವನ್ನ ನೋಡಿಬರಬೇಕು. ಬೆರಳೆಣಿಕೆಯ ಮಕ್ಕಳಿಂದ ಆರಂಭಗೊಂಡ ಆ ಶಾಲೆ ಇಂದಿಗೆ ಈ ದೇಶದ ಮಹತ್ವದ ಆಸ್ತಿ. ಅದು ಜ್ಯೇಷ್ಠ ಭಾರತದ ಶ್ರೇಷ್ಠ ಭವಿತವ್ಯ ನಿರ್ಮಿಸುವ ದೇವಮಂದಿರ. ಇಂದು ಭಟ್ಟರ ಶಾಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿಯ ತನಕವೂ ಅಲ್ಲಿ ಉಚಿತ ಶಿಕ್ಷಣ, ಒಂದೇ ಒಂದು ರೂಪಾಯಿ ಡೊನೇಶನ್ ಇಲ್ಲ, ಸರ್ಕಾರ ಬಿಸಿ ಊಟ ಕೊಡುವುದಕ್ಕೂ ದಶಕದ ಹಿಂದೇ ಭಟ್ಟರು ತನ್ನ ಶಾಲೆಯಲ್ಲಿ ಅವಿಷ್ಟೂ ಮಕ್ಕಳಿಗೆ ಬಿಸಿಯೂಟ ಕೊಟ್ಟವರು, ಆ ಮಕ್ಕಳಿಗೆ ಅನ್ನ, ವಸ್ತ್ರ, ಪುಸ್ತಕ ಎಲ್ಲವೂ ಉಚಿತ, ಆ ಪರಿಸರದ ಸುತ್ತ ಮುತ್ತಲಿನ ಮೂರು ನಾಲ್ಕು ತಾಲೂಕಿನಿಂದ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ, ದೇಶದ ಬೇರೆ ಬೇರೆ ರಾಜ್ಯದ ಮಕ್ಕಳೂ ಅಲ್ಲಿ ಓದುತ್ತಿದ್ದಾರೆ! ಶ್ರೀ ರಾಮ ವಿದ್ಯಾಕೇಂದ್ರ ಪಂಚಮುಖಿ ಶಿಕ್ಷಣದ ಮಾದರಿಯಲ್ಲಿ ನಡೆಯುತ್ತಿದೆ. ಶಾರೀರಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನ ಅಲ್ಲಿ ಕಲಿಸಲಾಗುತ್ತದೆ. ಆ ಶಾಲೆಯಲ್ಲಿ ಓದಿದ ಪ್ರತೀ ಮಗುವೂ ಸಂಸ್ಕಾರಶೀಲನಾಗುತ್ತಾನೆ, ಕಲ್ಲಡ್ಕ ಪ್ರಭಾಕರ ಭಟ್ಟರ ಜೀವಿತದ ಬಹುದೊಡ್ಡ ಸಾಧನೆ ಅವರು ಕಟ್ಟಿಸಿದ ಆ ಶಾಲೆ! ಪ್ರಾಯ ಎಂಬತ್ತು ದಾಟಿದರೂ ಭಟ್ಟರು ಇಂದಿಗೂ ಆ ಶಾಲೆಗಾಗಿ ಬೇಡುತ್ತಾರೆ! ಬೇಡಿ ತಂದು ಶಾಲೆ ಕಟ್ಟಿದ್ದಾರೆ, ಮಕ್ಕಳಿಗೆ ವಸ್ತ್ರ, ಪುಸ್ತಕ, ಅಕ್ಷರ, ಅನ್ನ, ಆಶ್ರಯವಿಕ್ಕಿದ್ದಾರೆ! ಅಷ್ಟು ಸಂಖ್ಯೆಯ ಮಕ್ಕಳು ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ರಾಜ್ಯದ ಏಕೈಕ ಶಾಲೆ ಭಟ್ಟರದ್ದು! ಅದು ಪ್ರತಿಭೆಗಳ ನಕ್ಷತ್ರಪುಂಜ! ಅಲ್ಲಿ ಓದುವ ಅದೆಷ್ಟೋ ಮಕ್ಕಳು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯ ಕಾರಣಕ್ಕೆ ಪ್ರಶಸ್ತಿ, ಪುರಸ್ಕಾರ ಪದಕಗಳ ಗೊಂಚಲು ಬಾಚಿಕೊಂಡು ಬಂದವರು..
ಹಿಂದು ಸಾಮರಸ್ಯದ ಸಾಮ್ರಾಟ !
ನನ್ನ ಗೆಳೆಯರಾದ ಸಾಲಿಗ್ರಾಮದ ಗಣೇಶ್ ಉಡುಪರು ಭಟ್ಟರ ಮೂವತ್ತೈದು ವರ್ಷದ ಹಿಂದಿನ ಘಟನೆಯ ನೆನಪನ್ನು ಹೇಳಿಕೊಳ್ಳುತ್ತಾರೆ, ಈ ಭಾಗಕ್ಕೆ ಯಾವುದೋ ಕಾರ್ಯಕ್ರಮಕ್ಕೆ ಬಂದ ಭಟ್ಟರು ಕೋಡಿ ಬೆಂಗ್ರೆ ಮೂಲದ ಸಂಘದ ಶಿಶುಮಂದಿರದ ಮಾತಾಜಿಯೊಬ್ಬರ ಮನೆಗೆ ಭೇಟಿ ಕೊಟ್ಟು ಅವರಿಂದ ರಾಖಿ ಕಟ್ಟಿಸಿಕೊಂಡು ಮಡಿಲು ಜಿಡಿಕೆ ತಟ್ಟಿನ ಆ ಪುಟ್ಟ ಗುಡಿಸಲಿನ ಒಳಗೇ ಕೂತು ಅವರಿಂದ ನೀರು ದೋಸೆ ಮಾಡಿಸಿ ತಿಂದಿದ್ದರು.
ಹಿಂದು ಸಮಾಜದಲ್ಲಿ ಜಾತಿ ಬೇಧ ಮೀರಿ ಸಾಮರಸ್ಯ ಬೆಳಗಬೇಕು ಎಂದು ಭಾಷಣ ಮಾತ್ರ ಮಾಡದೇ ಬದುಕಿನಲ್ಲಿಯೂ ಅಳವಡಿಸಿಕೊಂಡವರು ಪ್ರಭಾಕರ್ ಭಟ್ ಎನ್ನುವುದಕ್ಕಷ್ಟೇ ಈ ಘಟನೆಯನ್ನು ಉಲ್ಲೇಖಿಸುತ್ತಿದ್ದೇನೆ. ಅವರನ್ನ ಹಿಂದು ಹೃದಯ ಸಾಮ್ರಾಟ್ ಎನ್ನುತ್ತಿದ್ದೇವೆ! ಅದರ ಜೊತೆಗೇ ಅವರು ಹಿಂದು ಸಮಾಜದ ಸಾಮರಸ್ಯದ ಸಾಮ್ರಾಟನೂ ಹೌದು.
ತನ್ನ ಮೆಚ್ಚಿ ನುಡಿದರೂ ಸಿಡಿಯುವ, ಹೊಗಳಿಕೆಯನ್ನ ಎಂದೂ ಸಹಿಸದೆ ದಹಿಸುವ ಭಟ್ಟರಿಗೆ ಇಂದು ಅವರ ಶಿಷ್ಯರು ಅವರಿಂದ ಬೈಸಿಕೊಂಡೂ, ಬಲವಂತದಿಂದ ಸಹಸ್ರ ಚಂದ್ರ ದರ್ಶನ ಶಾಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ತನ್ನ ಜೀವಿತದಲ್ಲಿ ಸಹಸ್ರ ಸಾರಿ ಬಿದಿಗೆ ಚಂದ್ರನ ದರ್ಶನ ಮಾಡಿರಬೇಕು ಅಂದರೆ ಅವನಿಗೆ 82 ವರ್ಷ 6 ತಿಂಗಳು ವಯಸ್ಸಾಗಿರಬೇಕು. ಆತ ಆ ಸಮಯಕ್ಕೆ ಪತ್ನಿ ಸಮೇತನಾಗಿರಬೇಕು. ಆಗ ಅವನಿಗೆ ಸಹಸ್ರ ಚಂದ್ರ ದರ್ಶನ ಶಾಂತಿಯನ್ನು ಮಾಡಿಸಿಕೊಳ್ಳುವ ಯೋಗ ಬರುತ್ತದೆ, ಎನ್ನುತ್ತದೆ ಶಾಸ್ತ್ರ. ಇದಕ್ಕಾಗಿ ಭಟ್ಟರ ಶಿಷ್ಯಪಡೆ ಹಠಕ್ಕೆ ಬಿದ್ದು ಇಂದು ಕಾರ್ಯಕ್ರಮ ಕಲ್ಲಡ್ಕದಲ್ಲಿ ನಡೆಯುತ್ತಿದೆ.
ಕಲ್ಲಡ್ಕ ಪ್ರಭಾಕರ ಭಟ್ಟರ ಬದುಕಿನ ಪ್ರಭೆ ಅತ್ಯಂತ ಪ್ರಭಾವಶಾಲಿ. ಅವರೊಬ್ಬ ಹಿಂದು ಸಮಾಜಕ್ಕೆ ಮಹಾನ್ ತೇಜಸ್ಸು ನೀಡಿದ ಧ್ಯೇಯಸೂರ್ಯ. ಸಂಘಟನೆ ನೂರಾರು ಸವಾಲುಗಳನ್ನ ಎದುರಿಸಿದಾಗ ‘ಅದೆಲ್ಲದಕ್ಕೂ ಎದೆ ಕೊಡಲು ಭಟ್ಟರಿದ್ದಾರೆ’ಎಂದು ಮುನ್ನುಗ್ಗಿದ ಉದಾಹರಣೆಗಳುಂಟು. ಹಿಂದು ಸಮಾಜ ಮತ್ತು ಹಿಂದು ಸಂಘಟನೆಯ ಸಂಕಟಗಳ ನಿಜವಾದ ಟ್ರಬಲ್ ಶೂಟರ್ ತಾನಾಗಿದ್ದರು. ಈ ಸಮಾಜಕ್ಕಾಗಿ ದುಡಿಯುವ ವ್ಯಕ್ತಿನಿರ್ಮಾಣದಲ್ಲಿ ಯಾರಿಗೂ ಸಾಟಿ ಇಲ್ಲದ ಕಿಂಗ್ ಮೇಕರ್ ಕೂಡ ಭಟ್ಟರೆ. ಅವರ ಜೀವಿತದ ಮಹತ್ವದ ದಿನವಾದ ಇಂದು ಅವರಿಗೆ ಗೌರವಪೂರ್ಣ ಅಕ್ಷರ ನಮನಗಳು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ