ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ
ಉಡುಪಿ: ಹೆಸರಾಂತ ದ್ವೈತ ಸಿದ್ಧಾಂತ ಮೇರು ವಿದ್ವಾಂಸರೂ, ಪ್ರವಚನಕಾರರೂ ಲೇಖಕರೂ ಶ್ರೀ ಕೃಷ್ಣ ಮಠ ಅಷ್ಟಮಠಗಳ ಆಸ್ಥಾನ ವಿದ್ವಾಂಸರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇಂದು ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 72 ವರ್ಷ ಪ್ರಾಯವಾಗಿತ್ತು.
ನಿನ್ನೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಹದೊಂದಿಗೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಾಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದರು.
ವಿದ್ವಾಂಸರ ಮನೆತನದಲ್ಲೇ ಜನಿಸಿದ್ದ ಉಪಾಧ್ಯಾಯರು ಸಂಪ್ರದಾಯ ನಿಷ್ಠೆ ಹಾಗೂ ವಿಪ್ರವಿಹಿತ ಕರ್ಮಾನುಷ್ಠಾನಗಳಲ್ಲಿ ಆತ್ಯಂತಿಕ ಶ್ರದ್ಧೆ ಹೊಂದಿದ್ದು ಜೀವನಪರ್ಯಂತ ಅವುಗಳನ್ನು ಪಾಲಿಸಿಕೊಂಡು ಬಂದಿದ್ದರು.
ಉಡುಪಿಯ ಪ್ರಸಿದ್ಧ ಶ್ರೀ ಮನ್ಮಧ್ವ ಸಿದ್ಧಾಂತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಅವಧಿ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಅನೇಕ ಮಠಗಳಿಂದ ಪ್ರಕಟವಾಗುತ್ತಿದ್ದ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಅನೇಕ ಮಾಸಪತ್ರಿಕೆಗಳಲ್ಲಿ ನಿರಂತರ ಅಧ್ಯಾತ್ಮಿಕ ಚಿಂತನ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದರು. ಪ್ರವಚನಕುಶಲಿಗಳೂ ಆಗಿದ್ದು ದ್ವೈತ ವೇದಾಂತ ಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರ ಮಹತ್ವದ ಕೊಂಡಿಯಾಗಿದ್ದರು.
ಮಧ್ವಶಾಸ್ತ್ರದ ಬಗ್ಗೆ ಇದಮಿತ್ಥಂ ಎಂದು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದ ಶ್ರೀಯುತರು ಶ್ರೀಕೃಷ್ಣ ಮಠ ಹಾಗೂ ಬಹುತೇಕ ಎಲ್ಲ ಮಾಧ್ವಮಠಗಳಿಂದ ವಿಶೇಷವಾಗಿ ಪುರಸ್ಕೃತರಾಗಿದ್ದರು.
ಇತ್ತೀಚೆಗಷ್ಟೆ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಂಪನ್ನಗೊಂಡ ಮಂಡಲೋತ್ಸವದಲ್ಲೂ ಭಾಗವಹಿಸಿ ಅಷ್ಟಾವಧಾನ ಸೇವೆಗೈದಿದ್ದರು.
ಅಯೋಧ್ಯೆಯಲ್ಲಿ ನೆರವೇರಿದ ಮಂಡಲೋತ್ಸವದ ಅಷ್ಟಾವಧಾನ ಸೇವೆಯಲ್ಲಿ ಶ್ರೀರಾಮನಿಗೆ ಶಾಸ್ತ್ರಾವಧಾನ ಸೇವೆ ಸಲ್ಲಿಸುತ್ತಿರುವ ವಿದ್ವಾನ್ ರಾಘವೇಂದ್ರ ಉಪಾಧ್ಯಾಯರು.
ಶ್ರೀಯುತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ.
ಕರಂಬಳ್ಳಿ ವಲಯ ಬ್ರಾಹ್ಮಣ ಸಂಘದಲ್ಲಿ ಅವರ ಪ್ರವಚನ ಮಾಲಿಕೆ ನೆರವೇರಿತ್ತು.
ಶ್ರೀಯುತ ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪಲಿಮಾರು ಮತ್ತು ಅದಮಾರು ಉಭಯ ಶ್ರೀಗಳು, ಪೇಜಾವರ ಕಾಣಿಯೂರು ಸೋದೆ ಶೀರೂರು ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರ ಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳು ಶಿವಳ್ಳಿ ಬ್ರಾಹ್ಮಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲುದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ ಮಾಜಿ ಶಾಸಕ ಕೆ ರಘುಪತಿ ಭಟ್, ಶಾಸಕ ಯಶ್ಪಾಲ್ ಸುವರ್ಣ ಹೀಗೆ ಹಲವರು ತೀವ್ರ ಸಂತಾಪ ವ್ಯಕತಪಡಿಸಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಶ್ರದ್ಧಾಂಜಲಿ
ಹಿರಿಯ ವಿದ್ವಾಂಸರಾದ, ಪರ್ಯಾಯ ಮಠದ ಆಸ್ಥಾನ ವಿದ್ವಾಂಸರೂ ಆದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇಂದು ಅಲ್ಪ ಕಾಲದ ಅಸೌಖ್ಯದ ನಿಮಿತ್ತ ಬೆಂಗಳೂರಿನಲ್ಲಿ ಇಂದು ಹರಿಪಾದ ಸೇರಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇನೆ. ಪರ್ಯಾಯ ಶ್ರೀ ಕೃಷ್ಣ ಮಠದ ಆಸ್ಥಾನದ ವಿದ್ವಾಂಸರಾಗಿ, ಅಪ್ರತಿಮ ಸಾಧಕರಾಗಿ, ಸುಗುಣ ಮಾಲಾ ಮುಂತಾದ ಪತ್ರಿಕೆಗಳಲ್ಲಿ ಸಾಧಕರ ಸಾಧನೆಗೆ ಪೋಷಕವಾದ ಲೇಖನಗಳ ಹರಿಕಾರ ಸಗ್ರಿ ಅವರಿಗೆ ಶ್ರೀಕೃಷ್ಣ ಸದ್ಗತಿ ನೀಡಲಿ.
- ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ
ಸೋದೆ ಶ್ರೀ, ಸುಬ್ರಹ್ಮಣ್ಯ ಶ್ರೀ ಸಂತಾಪ
ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಅನೇಕ ಗ್ರಂಥ ರಚನೆ ಗ್ರಂಥ ಸಂಪಾದನೆಗಳ ಸಹಿತ ವಿಶೇಷ ವಾಙ್ಮಯ ಕೊಡುಗೆಗಳನ್ನು ಸಾರಸ್ವತ ಸಮಾಜಕ್ಕೆ ಮಾಧ್ವ ಸಮಾಜಕ್ಕೆ ನೀಡಿದ್ದಾರೆ. ಅವರ ವಿದ್ವತ್ ಅಪಾರವಾದುದು. ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ. ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸೋದೆ ಮಠಾಧೀಶರು ಹಾಗೂ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳು ಸಂತಾಪ ಸೂಚಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ