18ನೇ ಲೇೂಕಸಭಾ ಚುನಾವಣಾ ಫಲಿತಾಂಶವನ್ನು ಪ್ರತಿಯೊಬ್ಬರು ಅವರವರ ದೃಷ್ಟಿ ಕೇೂನದಲ್ಲಿ ಆವಲೇೂಕನ ಮಾಡಿಕೊಂಡು ಬಂದಿದ್ದಾರೆ. ಕೆಲವರು ಬಿಜೆಪಿಗೆ ಸ್ವಂತ ಬಲ ಬರ ಬೇಕಿತ್ತು ಅನ್ನುವ ಅಭಿಪ್ರಾಯ ತಾಳಿದ್ದರೆ, ಇನ್ನು ಕೆಲವರು ಕಾಂಗ್ರೆಸ್ ನಾಯಕತ್ವದಲ್ಲಿ "ಇಂಡಿಯಾ "ಟೀಮ್ ಇನ್ನಷ್ಟು ಸ್ಥಾನ ಗಳಿಸಬೇಕಿತ್ತು ಎಂದು ಆಸೆ ಪಟ್ಟವರು ಇದ್ದಾರೆ. ಹಾಗಂತ ಈ ಎರಡು ಬಯಕೆಗಳು ತಪ್ಪಲ್ಲ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾದೇಗುಲಕ್ಕೆ ಪ್ರಜಾ ನಾರಾಯಣ ನೀಡಿದ ತೀಪು೯ಮಾತ್ರ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ ಅನ್ನಿಸಿಕೊಂಡ ಲೇೂಕ ಸಭೆಯಲ್ಲಿ ಸರ್ಕಾರ ರೂಢ ಪಕ್ಷ ಮತ್ತು ವಿಪಕ್ಷಗಳು ಶಕ್ತಿ ಸಮತೇೂಲನ ಕಾಪಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸುರಕ್ಷತವಾಗಿರ ಬಹುದು ಸರ್ವಜನರು ನೆಮ್ಮದಿಯಿಂದ ಬದುಕಲು ಸಾಧ್ಯ; ಸಂವಿಧಾನ ಹಾಕಿಕೊಟ್ಥ ಲಕ್ಷ್ಮಣ ರೇಖೆಯ ಒಳಗೆ ಕಾರ್ಯ ನಿವ೯ಹಿಸಲು ಸಾಧ್ಯ ಅನ್ನುವುದನ್ನು ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳು ಕಲಿಸಿದ ಪಾಠಗಳಿಗೆ ಇಂಬು ನೀಡುವಂತಿದೆ. ಹಾಗಾಗಿ ಈ ಬಾರಿಯ ಚುನಾವಣಾ ಫಲಿತಾಂಶ ಏಕ ಪಕ್ಷೀಯ ನಿರ್ಣಯವಾಗದಿದ್ದರೂ ಕೂಡಾ ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಗೆ ಪೂರಕವಾಗಿ ಫಲಿತಾಂಶ ಕೊಟ್ಟಿರುವುದಂತೂ ಸತ್ಯ.
18ನೇ ಲೇೂಕಸಭಾ ಚುನಾವಣಾ ಫಲಿತಾಂಶ ಮತ್ತೆ ಹತ್ತು ವರುಷಗಳ ಅನಂತರ ಸಮಿಶ್ರ ಸರಕಾರಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಟ್ಟಿದೆ. ಈಗಿನ ಪರಿಸ್ಥಿತಿಯಲ್ಲಿ ಎನ್‌ಡಿಎ ಮೈತ್ರಿಕೂಟ ಬಿಜೆಪಿಯ ಮುಂದಾಳುತನದಲ್ಲಿ ಸರ್ಕಾರ ಕಟ್ಟುವ ವಾತಾವರಣ ಸೃಷ್ಟಿ ಮಾಡಿದೆ. ಈ ಹಿಂದೆ ಕೂಡಾ ಮನಮೇೂಹನ ಸಿಂಗ್ ನಾಯಕತ್ವದಲ್ಲಿ ಯುಪಿಎ ಮೈತ್ರಿ ಕೂಟ ಪೂಣಾ೯ವಧಿಯಲ್ಲಿ ಸುಸೂತ್ರವಾಗಿ ಸರ್ಕಾರ ಮುನ್ನಡೆಸಿದ ಉದಾಹರಣೆಯೂ ನಮ್ಮ ಮುಂದಿದೆ. ಅದರ ಹಿಂದೆ ವಾಜಪೇಯಿ ಮತ್ತು ನರಸಿಂಹರಾವ್ ಇನ್ನೂ ಅನೇಕರು ಸಮಿಶ್ರ ಸರ್ಕಾರದ ಸುಖ ದು:ಖಗಳನ್ನು ಅನುಭವಿಸಿದ ನಿದಶ೯ನಗಳು ನಮ್ಮ ಮುಂದಿದೆ.
ಹಾಗಾದರೆ ಮೇೂದಿಯವರಿಗೆ ಸಮಿಶ್ರ ಸರ್ಕಾರ ನಡೆಸುವುದು ಸವಾಲಾಗ ಬಹುದೇ? ಅನ್ನುವ ಪ್ರಶ್ನೆ ಹಲವರಲ್ಲಿ ಈಗಲೇ ಕಾಡಲು ಶುರುವಾಗಿದೆ. ಇದಕ್ಕೂ ಒಂದುಕಾರಣವಿದೆ.ಇದುವರೆಗೂ ಮೇೂದಿಯವರಿಗೆ ಈ ಅತಂತ್ರ ಸಮಿಶ್ರ ಸರ್ಕಾರವನ್ನು ನಡೆಸಿದ ಅನುಭವ ಇಲ್ಲ. 2014 ಮತ್ತು 2019ರಲ್ಲಿ ಬಿಜೆಪಿ ಜೊತೆಗೆ ಇನ್ನಿತರ ಮಿತ್ರಕೂಟ ಅನ್ನುವ ಎನ್‌ಡಿಎ ಒಕ್ಕೂಟ ವಿದ್ದರೂ ಕೂಡಾ ಅವುಗಳಿಗೆ ಬಿಜೆಪಿಯನ್ನಾಗಲಿ ಅರ್ಥಾತ್ ಮೇೂದಿಯವರನ್ನು ಅಲುಗಾಡಿಸುವ ತಾಕತ್ತು ಅವರಿರಲಿಲ್ಲ. ಯಾಕೆಂದರೆ 2014ರಲ್ಲಿ ಬಿಜೆಪಿ ಸ್ವಂತ ಸರಳ ಬಹುಮತದ ಬಲದಲ್ಲಿಯೇ ಲೇೂಕ ಸಭೆಯಲ್ಲಿ ನಿಂತಿತು. ಅದೇರೀತಿ 2019ರಲ್ಲಿ ಬಿಜೆಪಿಗೆ 303 ಸ್ಥಾನಗಳು ಕೆಳಸದನದಲ್ಲಿ ಇದ್ದ ಕಾರಣ ಮೈತ್ರಿಕೂಟದ ಸದಸ್ಯರಿಗೆ ಬಿಜೆಪಿಯನ್ನು ಮೂಸಿ ನೇೂಡುವ ಶಕ್ತಿಯೂ ಇರಲಿಲ್ಲ. ಹಾಗಾಗಿಯೇ ಮೊದಲ ಬಾರಿಗೆ ಲೇೂಕಸಭೆ ಪ್ರವೇಶ ಮಾಡಿದ ಮೇೂದಿಯವರಿಗೆ ವೈಯುಕ್ತಿಕ ವರ್ಚಸ್ಸಿನಲ್ಲಿ ಸದನದ ಒಳಗೂ ಹೊರಗು ಸ್ವ ಇಚ್ಛೆಯಂತೆ ಕಾರ್ಯ ನಿವ೯ಹಣೆ ಮಾಡಲು ಸಾಧ್ಯವಾಯಿತು. ಮಾತ್ರವಲ್ಲ ಬಿಜೆಪಿ ಅಂದರೆ ಮೇೂದಿ; ಮೇೂದಿ ಅಂದರೆ ಬಿಜೆಪಿ ಅನ್ನುವ ತರದಲ್ಲಿ ಮುದ್ರೆ ಒತ್ತಲು ಸಾಧ್ಯವಾಯಿತು. ಇದು ಇವರನ್ನು ವಿಶ್ವಗುರು ಅನ್ನುವ ಮಟ್ಟಿಗೆ ಬೆಳೆಸಿಕೊಂಡು ಹೋಯಿತು. 70ರ ದಶಕದಲ್ಲಿ ಹೇಗೆ ಇಂದಿರಾ ಗಾಂಧಿಯವರನ್ನು "ಇಂಡಿಯಾ ಅಂದರೆ ಇಂದಿರಾ; ಇಂದಿರಾ ಅಂದರೆ ಇಂಡಿಯಾ "ಅನ್ನುವ ತರದಲ್ಲಿ ಡಿ.ಕೆ. ಬರುವಾನಂತಹವರು ವ್ಯಾಖ್ಯಾನಿಸುವ ಮಟ್ಟಿಗೆ ತಮ್ಮ ಛಾಪನ್ನು ಜನ ಮಾನದಲ್ಲಿ ಒತ್ತಿಯೇ ಬಿಟ್ಟರು. ಅದೇ ರೀತಿಯಲ್ಲಿ ಈ ಕಳೆದ ಹತ್ತು ವರುಷಗಳಲ್ಲಿ ಮೇೂದಿಯವರು ಕೂಡಾ ವಿಶ್ವ ಗುರು ಅವತಾರ ಪುರುಷ ಅನ್ನುವ ತರದಲ್ಲಿ ತಮ್ಮ ಆರಾಧಕರ ಮನಸ್ಸಿನಲ್ಲಿ ಗುರುತಿಸಿಕೊಂಡರು. ಈ ಹತ್ತು ವರುಷಗಳ ಅವಧಿ ಮೇೂದಿಯವರ ಪಾಲಿಗೆ ಒಂದು ಸುಖದ ಸುವಣ೯ಯುಗ ಅಂದರೂ ತಪ್ಪಾಗಲಾರದು.
ಈಗ ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಇಂದಿನ ಅತಂತ್ರ ಸಮಿಶ್ರ ಸರ್ಕಾರದ ಪರಿಸ್ಥಿತಿಯಲ್ಲಿ ಮೇೂದಿಯವರ ಆಡಳಿತ ವೈಖರಿ ನಡೆನುಡಿ ನಿರ್ಧಾರಗಳು ಮೊದಲಿನಂತೆ ಮುಂದುವರಿಸಲು ಸಾಧ್ಯವಾ? ಹತ್ತು ವರುಷಗಳ ಅವಧಿಯಲ್ಲಿ ಯಾರಿಗೂ ತಲೆಬಾಗದ ಮೇೂದಿಯವರಿಗೆ ಈಗಿನ ತಮ್ಮ 240 ಸ್ಥಾನಗಳನ್ನು ಹಿಡಿದುಕೊಂಡು ಮೈತ್ರಿ ಕೂಟದ ಜೊತೆ ವ್ಯವಹರಿಸಲು ಅವರ ನೈಜ ಒಳ ಮನಸ್ಸು ಒಪ್ಪಿಗೆ ಕೊಟ್ಟೀತೆ? ಒಂದು ಕಡೆ ಬಿಹಾರದ ನಿತೀಶ್ ಬಾಬು, ಇನ್ನೊಂದು ಕಡೆ ಆಂಧ್ರದ ಚಂದ್ರಬಾಬು. ಈ ಎರಡು ಬಾಬುಗಳ ಮಧ್ಯೆ ಸರಾಗವಾಗಿ ಉಸಿರಾಡಲು ಸಾಧ್ಯವೇ? ಇದಾಗಲೇ 2029 ತನಕ ಕನಸು ಕಟ್ಟಿಕೊಂಡ ಒಂದು ರಾಷ್ಟ್ರ ಒಂದು ಚುನಾವಣೆ ಮಹಿಳಾ ಮೀಸಲಾತಿ ಸಮಾನ ನಾಗರಿಕ ಸಂಹಿತೆ. ಅಲ್ಪಸಂಖ್ಯಾತರ ಮೀಸಲಾತಿ ಮುಂತಾದ ಮೇೂದಿ ಅಮಿತ್ ಶಾ ಯೇೂಚನೆ ಯೇೂಜನೆಗಳು ಕಾರ್ಯ ಸಿದ್ಧಿಯಾಗಲು ಆಂಧ್ರದ ಚಂಡಮಾರುತ, ಬಿಹಾರದ ಬಿಸಿಗಾಳಿ ಅವಕಾಶ ಮಾಡಿಕೊಡಬಹುದೇ? ಬರೇ ಅಧಿಕಾರ ಒಂದೇ ಸಾಕು ಅನ್ನುವುದಾದರೆ ಉಸಿರು ಬಿಗಿ ಹಿಡಿದುಕೊಂಡು ಕೂತುಕೊಳ್ಳಬೇಕು. ಇದಕ್ಕೆಲ್ಲ ಮೇೂದಿಯವರ ತನು ಮನ ಒಪ್ಪಿಗೆ ಕೊಟ್ಟೀತೆ?ಅನ್ನುವ ಪ್ರಶ್ನೆ ಇದಾಗಲೇ ಮೇೂದಿಯವರ ಅಭಿಮಾನಿ ದೇವತೆಗಳ ಮನಸ್ಸಿನಲ್ಲಿ ಮೂಡಿ ಬರಲು ಶುರುವಾಗಿದೆ.
ಅಂತೂ 2024 ಅನ್ನುವುದು ಮೇೂದಿಯವರ ನಿಜವಾದ ನಾಯಕತ್ವದ ಗುಣವನ್ನು ಪರೀಕ್ಷೆ ಮಾಡುವ ಸಂಧಿಕಾಲವೂ ಹೌದು. ಮೇೂದಿಯವರ ತಾಳ್ಮೆ ನಡೆ ನುಡಿಯನ್ನು ಒರೆ ಹಚ್ಚುವ ಪರ್ವ ಕಾಲವೂ ಹೌದು. 2024ರ ಫಲಿತಾಂಶ ಸಮರ್ಪಕ ಸರ್ಕಾರವು ಬೇಕು, ಜೊತೆಗೆ ಸರ್ಕಾರ ದಾರಿ ತಪ್ಪಿ ನಡೆಯದಂತೆ ಕಾಯುವ ವಿಪಕ್ಷವೂ ಅಗತ್ಯ ಅನ್ನುವುದಕ್ಕೆ ಶಕ್ತಿ ತುಂಬಿದ ಪ್ರಜಾ ನಾರಾಯಣನ ಸಮತೇೂಲನ ತೀರ್ಪು ಅನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ..
- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ