ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
‘
ಬೆಂಗಳೂರು: 'ತಂತ್ರಜ್ಞಾನ, ಮನುಷ್ಯರ ಬದುಕನ್ನು ಉನ್ನತೀಕರಿಸುವುದಕ್ಕೆ ಇರುವ ಸಾಧನವೇ ಹೊರತು ಅವರ ಸವಲತ್ತುಗಳನ್ನು ಕಬಳಿಸುವುದಕ್ಕಲ್ಲ. ನಾವೇ ಕಂಡುಹಿಡಿದ, ಅಭಿವೃದ್ಧಿ ಪಡಿಸಿದ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂದೆಂದೂ ನಮ್ಮ ಉದ್ಯೋಗಗಳನ್ನು ನಾಶಮಾಡುವುದಿಲ್ಲ, ಬದಲಿಗೆ ನಾವು ಬೇರೆ ಬೇರೆ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಮನುಷ್ಯನ ಬುದ್ದಿ ಮುಂದೆ ಕೃತಕ ಬುದ್ದಿಮತ್ತೆ ನಿಜಕ್ಕೂ ಶೂನ್ಯ. ಅದು, ಮನುಷ್ಯ ತನ್ನ ಸೌಲಭ್ಯಕ್ಕಾಗಿ ನೇಮಿಸಿಕೊಂಡಿರುವ ನೌಕರ ಮಾತ್ರ. ಆದರೆ ಕೃತಕ ಬುದ್ದಿಮತ್ತೆಯಿಂದ ಕ್ಷಿಪ್ರಗತಿಯಲ್ಲಿ ಒದಗುವ ಕರಾರುವಾಕ್ಕಾದ ಮಾಹಿತಿಗಳು ನಿಜಕ್ಕೂ ಪ್ರಶಂಸಾರ್ಹ. ಈ ಮಾಹಿತಿಗಳನ್ನಾಧರಿಸಿ ಮತ್ತಷ್ಟು ಸಂಶೋಧನೆ ನಡೆಸಬೇಕಾದದ್ದು ನಮ್ಮ ಮೇಲಿರುವ ಗುರುತರ ಹೊಣೆ' ಎಂದು ಒರಾಕಲ್ ಕನ್ಸಲ್ಟಿಂಗ್ ಗ್ಲೋಬಲ್ ಸರ್ವಿಸಸ್ ಸಂಸ್ಥೆಯ ಪೂರೈಕೆ ಸರಪಳಿ ನಿರ್ವಹಣೆಯ ಹಿರಿಯ ನಿರ್ದೇಶಕ ಸೆಂಥಿಲ್ ಇಂದಿರನ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‌ಮೆಂಟ್ ಅಧ್ಯಯನ ವಿಭಾಗ ಆಯೋಜಿಸಿದ್ದ 'ಉತ್ಪಾದನೆ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ದಿಮತ್ತೆಯ ಪಾತ್ರ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ದೇಶದ ಅಭಿವೃದ್ಧಿಯ ತಳಹದಿ - ಜನರ ಆರೋಗ್ಯ ಭಾಗ್ಯ. ಜನ ಆರೋಗ್ಯದಿಂದಿದ್ದರೆ ಮಾತ್ರ ಅವರೆಲ್ಲ ದೇಶದ ಪ್ರಗತಿಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ. ಅದರಿಂದಲೇ ಸರ್ಕಾರ ಜನರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇದಕ್ಕೆ ಸಹಕಾರ ನೀಡುವುದು ಕೃತಕ ಬುದ್ದಿಮತ್ತೆ. ನಮ್ಮನ್ನು ಕಾಡುವ ಶೇಕಡಾ 96ರಷ್ಟು ಸಾಂಕ್ರಾಮಿಕ ಜಾಡ್ಯಗಳನ್ನು ಸುಲಭವಾಗಿ ನಿಯಂತ್ರಿಸಲು ಕೃತಕ ಬುದ್ದಿಮತ್ತೆ ನಮಗೆ ಬೃಹತ್ ಪ್ರಮಾಣದಲ್ಲಿ ನೆರವು ಒದಗಿಸುತ್ತದೆ. ಅಷ್ಟೇ ಅಲ್ಲದೆ ರೋಗವನ್ನು ಪತ್ತೆ ಹಚ್ಚುವುದರಿಂದ ಹಿಡಿದು ಸೂಕ್ತ ಚಿಕಿತ್ಸೆಯ ತನಕ ಕೃತಕ ಬುದ್ದಿಮತ್ತೆ ಪ್ರಮುಖ ಪಾತ್ರ ವಹಿಸುತ್ತದೆ', ಎಂದು ಅವರು ವಿಶ್ಲೇಷಿಸಿದರು.
ಅನಲಿಟಿಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಕುಮಾರ್ ವಿಚಾರ ಸಂಕಿರಣದ ಮುಖ್ಯ ಭಾಷಣವನ್ನು ಸೋದಾಹರಣವಾಗಿ ಪ್ರಸ್ತುತ ಪಡಿಸಿದರು. ವಿಶನ್ ಕರ್ನಾಟಕ ಫೌಂಡೇಶನ್‌ನ ಅಧ್ಯಕ್ಷ ಕಿಶೋರ್ ಜಾಗೀರ್‌ದಾರ್, ಟೀಮ್ ಮೈಕ್ರೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ಅನೇಜ, ಸಿಸ್ಕೋ ಸಿಸ್ಟಮ್ಸ್ ಸಂಸ್ಥೆಯ ರೂಪಾಲಿ ಚೌಹಾನ್, ಎಐ ನೆಕ್ಸಸ್ ಹೆಲ್ತ್ಕೇರ್‌ನ ಸಂಸ್ಥಾಪಕ ನಿರ್ದೇಶಕ ಪೀಟರ್ ಪೌಲ್ ಪುಷ್ಪರಾಜ್ ಹಾಗೂ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ಶಿವಕುಮಾರ್ ಅವರು ದೇಶಾದ್ಯಂತ ಆಗಮಿಸಿದ್ದ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಜತೆ ದಿನವಿಡೀ ಸಂವಾದ ನಡೆಸಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್, ಪ್ರೊ. ಎಸ್. ನಾಗೇಂದ್ರ, ಡಾ. ಧರ್ಮಾನಂದ, ಡಾ. ಹರೀಶ್, ಡಾ. ಲಕ್ಷೀ, ಡಾ. ಪವನ್ ಕುಮಾರ್ ಹಾಗೂ ಇತರೆ ಶಿಕ್ಷಕ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.