ಸಾಧನೆಯಿಂದ ಪ್ರೇರೇಪಿತರಾಗೋಣ: ಡಾ ಎಂ ಮೋಹನ ಆಳ್ವ

Upayuktha
0

 

ಷಷ್ಟಬ್ದಿ ‘ನಮ್ಮೊಲುಮೆ’ ಸಮ್ಮಾನ ಸಮಾರಂಭ 

                               

ಮೂಡುಬಿದಿರೆ: ಮೂಲತಃ ಕೃಷಿ ಕುಟುಂಬದಿಂದ ಬಂದ ಪ್ರೋ ನರೇಂದ್ರ ನಾಯಕ್‌ರು ಶೈಕ್ಷಣಿಕ ಕ್ಷೇತ್ರದಲ್ಲೂ ಕೃಷಿಯ ಮೂಲಸತ್ವಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಕೃಷಿಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ (ಕುಪ್ಮಾ) ಅಧ್ಯಕ್ಷ ಡಾ. ಎಂ ಮೋಹನ ಆಳ್ವ ನುಡಿದರು.


ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮೂಡುಬಿದಿರೆಯ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕಲಾ ಪ್ರೇಮಿ, ಶಿಕ್ಷಣ ತಜ್ಞ ಪ್ರೋ ನರೇಂದ್ರ ಎಲ್ ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸಮ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.


ಸಾಧನೆಯಿಂದ ಪ್ರೇರೇಪಿತರಾಗೋಣ. ಒಬ್ಬ ಕೃಷಿಕನಲ್ಲಿರುವ ಎಲ್ಲಾ ಮೂಲ ಗುಣಗಳನ್ನು ತಾನು ಸ್ಥಾಪಿಸಿರುವ ಎಕ್ಸಪರ್ಟ್‌ ಕಾಲೇಜಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಶೈಕ್ಷಣಿಕ ಕೃಷಿಯನ್ನು ನಡೆಸುತ್ತಾ ಕರ್ನಾಟಕದ ವಿಶ್ವಾಸಾರ್ಹ ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿದ್ದಾರೆ. ಅವರ ಈ ಸಾಧನೆಯನ್ನು ನಾವೆಲ್ಲರೂ ಅವಲೋಕಿಸಿ ಪ್ರೇರೆಪಿತರಾಗುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಶಿಕ್ಷಣದ ಜೊತೆ ಜೊತೆಯಲ್ಲಿ ಕಲಾರಾಧಕರಾಗಿ ಕರ್ನಾಟಕ ಸಂಗೀತವನ್ನು ಪರಾಂಗತ ಮಾಡಿಕೊಂಡು, ಹಾರ್ಮೋನಿಯಂ ನುಡಿಸಿವುದರಲ್ಲೂ ಎತ್ತಿದ ಕೈ ಇವರದ್ದು. ಸ್ಪರ್ಧಾತ್ಮಕ ಪರೀಕ್ಷೆಗಳ  ತರಬೇತಿ ಕೆಲವು ದಶಕಗಳ ಹಿಂದೆ 300 ರೂಪಾಯಿ ಬಾಡಿಗೆ ಕೊಠಡಿಯಲ್ಲಿ ಪ್ರಾರಂಭವಾದ ಇವರ ಕೋಚಿಂಗ್ ಸೆಂಟರ್ ಇಂದು,  ಎಕ್ಸಪರ್ಟ್ ಶಿಕ್ಷಣ ಸಂಸ್ಥೆಗಳ ಮೂಲಕ ಕರ್ನಾಟಕದ ಪ್ರಸಿದ್ಧ ಪದವಿಪೂರ್ವ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. 


ದಶಕಗಳ ಹಿಂದೆ ಕರಾವಳಿ ಭಾಗದಲ್ಲಿ ಹೆಚ್ಚಿನ ಕಾಲೇಜುಗಳು ಕೇವಲ ಬೋರ್ಡ್‌ ಪರೀಕ್ಷೆಗಳಿಗೆ ಗಮನಕೊಡುತ್ತಿದ್ದ ಕಾಲದಲ್ಲಿ ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಮುಂದೆ ಬಂದವರಲ್ಲಿ ಮೊದಲಿಗರಿವರು. ಶೂನ್ಯದಿಂದ ಬಂದು, ತನ್ನ ಗುರಿಯಿಂದ ಎಂದೂ ವಿಚಲಿತರಾಗದೆ, ತಾನು ನಿರ್ವಹಿಸುವ ಕೆಲಸವನ್ನು ತಪಸ್ಸಿನ ರೀತಿಯಲ್ಲಿ ನಿರ್ವಹಿಸಿದ, ಹಿರಿಮೆ ಇವರದ್ದು.  ಬದುಕಿನ ಹಾದಿಯಲ್ಲಿ ಬದಲಾವಣೆಗೆ ಒಗ್ಗಿಕೊಳ್ಳುತ್ತಾ, ಎಂದೂ ತಾನು ನಡೆದು ಬಂದ ದಾರಿಯನ್ನು ಅಲಕ್ಷಿಸದೆ, ಮುನ್ನಡೆಯುತ್ತಿರುವ  ನರೇಂದ್ರ ನಾಯಕರು ಕುಪ್ಮಾದ ಎಲ್ಲಾ ಸದಸ್ಯರಿಗೂ ಆದರ್ಶಪ್ರಾಯರು ಎಂದರು.


ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ. ಸರ್ಕಾರ ನಿರ್ವಹಿಸಬೇಕಾದ ಕೆಲಸವನ್ನು ಪ್ರೈವೇಟ್ ವಿದ್ಯಾ ಸಂಸ್ಥೆಗಳು ಮಾಡುತ್ತಿವೆ. ಶಿಕ್ಷಣ ಎಂದೂ ವ್ಯಾಪಾರೀಕರಣವಾಗಬಾರದು. ಈ ಕ್ಷೇತ್ರದ ಪಾವಿತ್ರತೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ನಿಜವಾದ ಪ್ರೀತಿಯಿಂದ ನೀಡಿದ ಸಂಮಾನ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೋ ನರೇಂದ್ರ ಎಲ್ ನಾಯಕ್, ಈ ಸಂಮಾನ  ನಿಜವಾದ ಪ್ರೀತಿಯಿಂದ ನೀಡಿದ ಸಂಮಾನವಾಗಿದೆ. ಒಬ್ಬ ವ್ಯಕ್ತಿ  ತಾನು ಮಾಡುವ ಕೆಲಸದಿಂದ ಗೌರವ, ಪ್ರೀತಿಯನ್ನು ಗಳಿಸಲು ಸಾಧ್ಯ.  ನಾನು ಪ್ರತೀ ಕೆಲಸವನ್ನು ನಿಸ್ವಾರ್ಥದಿಂದ, ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಕಳೆಯುತ್ತೇನೆ. ಕುಪ್ಮಾದ ಇತರೆ ಸದಸ್ಯರ ಸಾಧನೆ ಮುಂದೆ ನನ್ನ ಸಾಧನೆ ಚಿಕ್ಕದು. ನಿಮ್ಮ ಸಾಧಕರ ಸಾಲಿನಲ್ಲಿ ನನಗೊಂದು ಪುಟ್ಟ ಸ್ಥಾನಕೊಡಿ, ಅಷ್ಟೇ ಸಾಕು ಎಂದು ಸಂತಸವನ್ನು ವ್ಯಕ್ತಪಡಿಸಿದರು. ಶಿಕ್ಷಣ ಪ್ರೇಮಿಗಳಿಂದ ಶಿಕ್ಷಣ ಸಂಸ್ಥೆ ಕುಪ್ಮಾದ ಜೊತೆ ಕಾರ್ಯದರ್ಶಿ ಮೈಸೂರಿನ ವಿಶ್ವನಾಥ ಶೇಷಾಚಲ ಮಾತನಾಡಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯದ ಹಿನ್ನಲೆಯುಳ್ಳವರು ಸ್ಥಾಪಿಸಿದರೆ, ಕರಾವಳಿಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣದ ಅಭಿರುಚಿಯುಳ್ಳವರು ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು. 


ತಮ್ಮ ವರ್ತನೆಯಲ್ಲಿ ಆದರ್ಶ ತುಂಬಿಕೊಂಡಿರುವವರು ನರೇಂದ್ರ ನಾಯಕರು, ನಮಗೆಲ್ಲರಿಗೆ ಕಾರ್ಯ ಸಫಲತೆಯಲ್ಲಿ ಜೀವಂತ ಉದಾಹರಣೆ ಎಂದರು. ವಿದ್ಯೆ ವಿನಯವುಳ್ಳವನಿಗೆ ಸ್ಥಾನಮಾನ ಬರುತ್ತದೆ ಎಂಬುದಕ್ಕೆ ನರೇಂದ್ರ ನಾಯಕರು ಉತ್ತಮ ಉದಾಹರಣೆ ಎಂದು ದಾವಣಗೆರೆ ಕುಪ್ಮಾ ಘಟಕದ ಸಂಯೋಜಕ ಎಸ್ ಜೆ ಶ್ರೀಧರ್ ನುಡಿದರು. ಜೀವನ ಮರಳಿ ಅರಳಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಪ್ಮಾದ ಗೌರವಾಧ್ಯಕ್ಷ ಡಾ ಎಂಬಿ ಪುರಾಣಿಕ್, ಷಷ್ಟಬ್ದಿ ಆಚರಿಸುತ್ತಿರುವ ನರೇಂದ್ರ ನಾಯಕರ ಜೀವನ ಮರಳಿ ಅರಳಲಿ ಎಂದು ಹಾರೈಸಿದರು. ಟಿ ಎಂ ಎ ಪೈ, ವಿನಯ ಹೆಗ್ಡೆ, ಕುರುಂಜಿ ವೆಂಕಟರಮಣ ಗೌಡರಂತಹ ಮಹಾನ್ ಶಿ ಕ್ಷಣ ತಜ್ಞರ ಸಾಲಿನಲ್ಲಿ ಡಾ ಮೋಹನ ಆಳ್ವರು ನಿಲ್ಲುತ್ತಾರೆ ಎಂದರು.


ಕಾರ್ಯಕ್ರಮದಲ್ಲಿ ಪ್ರೋ ನರೇಂದ್ರ ಎಲ್ ನಾಯಕ್ ಹಾಗೂ ಡಾ ಉಷಾ ಪ್ರಭಾ ನಾಯಕ್ ದಂಪತಿಗಳನ್ನು ಕುಪ್ಮಾವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭದಲ್ಲಿ ಪ್ರೋ ನರೇಂದ್ರ ಎಲ್ ನಾಯಕ್‌ರ ಜೀವನ ಆಧಾರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಶಕ್ತಿ ಶಿಕ್ಷಣ ಸಮೂಹದ ಡಾ. ಕೆ ಸಿ ನಾಯಕ್‌,  ಎಕ್ಸ್ ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ ಉಷಾಪ್ರಭಾ ನಾಯಕ್ ಇದ್ದರು. ಆಳ್ವಾಸ್  ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿ, ಕುಪ್ಮಾ ಉಪಾಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿ, ಕುಪ್ಮಾ ಉಪಾಧ್ಯಕ್ಷ ಡಾ ಸುಧಾಕರ ಶೆಟ್ಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top