ಸಾಮಾಜಿಕ ಜೀವನದಲ್ಲಿ ವ್ಯಕ್ತಿತ್ವದ ಮಹತ್ವ

Upayuktha
0

 



ಭೂಮಂಡಲದಲ್ಲಿ ವಾಸಿಸುವ ಎಲ್ಲಾ ಜೀವಸಂಕುಲಗಳಲ್ಲಿ ಮನುಷ್ಯ ವಿಭಿನ್ನವಾಗಿ ನಿಲ್ಲುವುದಕ್ಕೆ ಕಾರಣ ಆತನ ಆಲೋಚನ ಶಕ್ತಿ ಮತ್ತು ಆತ ಜೀವನ ನಡೆಸುವ ಶೈಲಿ. ಅಲ್ಲದೆ ಮನುಷ್ಯ ಸಂಘಜೀವಿಯು ಆಗಿರುವುದರಿಂದ ತನ್ನ ಬದುಕಿಗೆ ಅನುಕೂಲವ ಹಾಗೆ ತನ್ನ ಸುತ್ತ ಮುತ್ತ ಸಮಾಜವನ್ನು ಕಟ್ಟಿಕೊಂಡು ಅದಕ್ಕೆ ಆದ ಚೌಕಟ್ಟನ್ನು ಹಾಕಿಕೊಂಡು ಬೇರೆಲ್ಲ ಜೀವಿಗಳಿಗಿಂತ ಸೌಕರ್ಯುಯುತವಾದ ಬದುಕನ್ನು ಕಟ್ಟಿಕೊಳ್ಳಲು ಯಶಸ್ವಿಯಾಗಿದ್ದಾನೆ. ಇಂತಹ ಸಮಾಜದಲ್ಲಿ ಎಲ್ಲಾ ಸ್ಥರದ ವ್ಯಕ್ತಿಗಳು ತಮ್ಮ ತಮ್ಮ ಬದುಕನ್ನು ನಡೆಸುತ್ತಿದ್ದು ಒಂದಿಷ್ಟು ಜನ ಸಮಾಜದ ಮುನ್ನೆಲೆಗೆ ಬರದೆಯೇ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದರೆ ಇನ್ನೊಂದಿಷ್ಟು ಜನ ಸಾಮಾಜಿಕವಾಗಿ ಮುನ್ನೆಲೆಗೆ ಬಂದು ಸಮಾಜದ ಎಲ್ಲ ಹಂತದ ಜನರನ್ನು ತಲುಪಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ನಡೆಸಿ ಜನಸಾಮಾನ್ಯರಿಗೆ ಆದರ್ಶ ನೆನಪಿಸಿಕೊಳ್ಳುತ್ತಿದ್ದಾರೆ.


ಹೀಗಿದ್ದಾಗ ಸಾಮಾಜಿಕವಾಗಿ ಬದುಕಲು ಇಚ್ಚಿಸುವವರ ಬದುಕು ತೆರೆದ ಪುಸ್ತಕದಂತೆ ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ, ಒಂದು ಕಾಲವಿತ್ತು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಏರಿದವರ ಮತ್ತು ಜನಸಾಮಾನ್ಯರ ನಡುವೆ ಪತ್ರಿಕೆಗಳು, ರೇಡಿಯೋ ಸಂವಹನ ಮಾಧ್ಯಮವಾಗಿದ್ದವು. ಅಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಒಂದೇ ಇರಬೇಕಿತ್ತು ಇಲ್ಲವಾದಲ್ಲಿ ಕೇಳಿ ತಿಳಿದುಕೊಳ್ಳಬೇಕಿತ್ತು. ಹಾಗಾಗಿ ಅಂದು ಸಾಮಾಜಿಕ ಜೀವನದಲ್ಲಿ ಇರುವ ವ್ಯಕ್ತಿಗಳ‌ ಜೀವನದ ಶೈಲಿ ಮತ್ತು ಆತನ ಸಾಮಾಜಿಕ ನಡವಳಿಕೆ ಸಮಾಜದ ಮೇಲೆ ಪರಿಣಾಮ ಬೀರಲು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಸಮಯ ಕಳೆದಂತೆ ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಹೊಸ ಹೊಸ ಅನ್ವೇಷಣೆಗಳ ಮೂಲಕ ಬದುಕನ್ನು ಸುಧಾರಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾನೆ.


ಒಂದು ಊರಿನಿಂದ ಮತ್ತೂಂದು ಊರಿಗೆ ತೆರಳುವುದಕ್ಕೆ ಕಷ್ಟಪಡುತ್ತಿದ್ದ ಕಾಲದಿಂದ ತನ್ನ ಅಂಗೈಯಲ್ಲಿ ಪ್ರಪಂಚ ನೋಡುವ ಮಟ್ಟಿಗೆ ಮನುಷ್ಯ ಇಂದು ಬೆಳೆದು ನಿಂತಿದ್ದಾನೆ. ಇಂತಹ ಕಾಲಮಾನದಲ್ಲಿ ನಾವು ಇರುವಾಗ ಸಾಮಾಜಿಕ ಜೀವನದಲ್ಲಿ ತೊಡಗುವ ವ್ಯಕ್ತಿಗಳ ವೈಯಕ್ತಿಕ ಜೀವನದಲ್ಲಿ ಒಂದು ರೀತಿ, ಸಮಾಜದ ಎದುರು ಇನ್ನೊಂದು ರೀತಿ‌ ತುಂಬಾ ಸಮಯದವರೆಗೂ ಬದುಕುವುದು ತುಂಬಾ ಕಷ್ಟಕರವಾದದ್ದು. 


ಎಂದು ಸಾಮಾಜಿಕವಾಗಿ ಒಬ್ಬ ವ್ಯಕ್ತಿ ಬೆಳೆಯತೊಡಗುತ್ತಾನೋ ಅಂದಿನಿಂದಲೆ ಆತನನ್ನು ಅನುಸರಿಸುವ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಅನುಸರಿಸುವ ವ್ಯಕ್ತಿಗಳ ಪ್ರಮಾಣ ಬೇರೆ ಬೇರೆ ಇರಬಹುದು ಆದರೆ ಒಂದಿಷ್ಟು ಜನ ಇದ್ದೇ ಇರುವರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಜನಪ್ರಿಯತೆ ಜಾಸ್ತಿಯಾದಷ್ಟು ಜವಾಬ್ದಾರಿಗಳು ಹೆಚ್ಚಾಗುತ್ತವೆ ಏಕೆಂದರೆ ಪ್ರತಿ ಮಾತು, ನಡತೆ ಮತ್ತು ಜನಪ್ರೀಯರಾರುಡುವ ಆದರ್ಶದ ಮಾತುಗಳು ಸಮಾಜದ ಮೇಲೆ ಅಗಾಧವಾದ ಪರಿಣಾಮ ಉಂಟುಮಾಡುತ್ತದೆ. ಇಷ್ಟೊಂದು ದೊಡ್ಡ ಜವಾಬ್ದಾರಿ ಸ್ಥಾನದಲ್ಲಿ ಕುಳಿತುಕೊಂಡಿರುವ ವ್ಯಕ್ತಿಗಳೇ ತಮ್ಮ ಬದುಕಿನಲ್ಲಿ ಅವರು ಮಾಡುವ ಉಪದೇಶದ ಒಂದು‌ ಭಾಗವನ್ನು ಅನುಸರಿಸದೆ, ಎಲ್ಲಾ ಅನಾಚಾರಗಳನ್ನು ಮಾಡಿ ಅದು ಸಮಾಜದ ಮುಂದೆ ಅನಾವರಣಗೊಂಡರೆ ಸಮಾಜದ ಸ್ವಾಸ್ಥ್ಯ ಎಷ್ಟು ಕೇಡುವುದು ಎನ್ನುವುದಕ್ಕೆ ಇಂದು ನಾವು ನೀವೆಲ್ಲರೂ ಸಾಕ್ಷಿಯಾಗುತ್ತಿದ್ದೆವೆ. ಅಧಿಕಾರ, ಪ್ರಭಾವ ಬೀರುವ ಶಕ್ತಿ ಮತ್ತು ಜನಪ್ರಿಯತೆ ಅಮಲು ತಲೆಗೇರಿದಾಗ ಇಂತಹ ಅಪಸವ್ಯ ಕೆಲಸಗಳು ಹಲವಾರು ನಡೆಸುತ್ತಿರುತ್ತಾರೆ.


ಸಮಾಜದಲ್ಲಿ ಕಾಣಿಸಿಕೊಳ್ಳುವ ತನಕ ನಾವು ಇಂತಹವರನ್ನೇ ಆದರ್ಶ ಪ್ರಿಯರು ಎಂದು ತಲೆಯ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತೆವೆ. ಒಂದು ಸಾಮಾಜವಾಗಿ ನಾವು ಜನಸಾಮಾನ್ಯರು ಯಾರನ್ನು ಅನುಸರಿಸಬೇಕು ಎನ್ನುವುದರಲ್ಲಿ ಸೋಲುತ್ತಿರುವುದೆ ಇಂತಹ ಘಟನೆಗಳು ಒಂದರ ಮೇಲೊಂದು ಆಗಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.‌ ಯಾವ ಸಮಾಜದಲ್ಲಿ ಧನಾತ್ಮಕವಾದ ವಿಚಾರ ಹೊರಡಬೇಕಿತ್ತೊ ಅಂತಹ ಸಮಾಜದಲ್ಲಿ ದಿನನಿತ್ಯ ನಾವು ಇಂದು ಕೇಳುತ್ತಿರುವ ಸುದ್ದಿಗಳನ್ನು ನೋಡಿದಾಗ ಆಧುನಿಕತೆಯಲ್ಲಿ ಎಷ್ಟು ಮುಂದುವರಿಯುತ್ತಿದ್ದೇವೋ ಸಾಮಾಜಿಕವಾಗಿ ಅಷ್ಟೇ ಕುಸಿಯುತ್ತಿದ್ದೇವೆ. ಆದರ್ಶ ಪ್ರಿಯರು ಎನಿಸಿಕೊಳ್ಳಬೇಕಾದವರು ವ್ಯಭಿಚಾರ, ಭ್ರಷ್ಟಾಚಾರ, ಕೊಲೆ ಸುಲಿಗೆಗಳ ವ್ಯವಹಾರದಲ್ಲಿ ತೊಡಗಿದಾಗ ಅವರನ್ನೇ ಅನುಸರಿಸುವ ಜನರಿಗೆ ಯಾವ ಸಂದೇಶವನ್ನು ನೀಡುವರು ಎನ್ನುವುದನ್ನು ನಾವು ನೀವೆಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕು? ಇಂದು ಸಮಾಜವಾಗಿ ನಾವು ಇಂತಹ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕದೇ ಹೋದಲ್ಲಿ ಮುಂದೆ ಯಾರನ್ನು ದೂಷಿಸುವ ಹಕ್ಕು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.


- ಪ್ರದೀಪ ಶೆಟ್ಟಿ ಬೇಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top