ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣ ಗೌಡ

Upayuktha
0





ಹಾಸನ: ಶಿಕ್ಷಣ ಸೇವೆಯೇ ನನ್ನ ಪೂಜೆ ಎನ್ನುವ ಸಹೃದಯವಂತ, ಸರಳ, ಸ್ನೇಹಜೀವಿ, ಶಿಕ್ಷಣ ತಜ್ಞರು ಆಗಿರುವ ಜಿಲ್ಲಾ ಉಪನಿರ್ದೇಶಕರ ಕಛೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೆ.ಬಿ. ತಮ್ಮಣ್ಣಗೌಡರು 2024-2025 ನೇ ಸಾಲಿನಲ್ಲಿ ಜಿಲ್ಲಾಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇವರು ಅಜಾತಶತೃ, ನಿಗರ್ವಿ, ಶಿಕ್ಷಣ ಕ್ಷೇತ್ರದ ಭೀಷ್ಮನೆಂದೇ ಹೆಸರಾಗಿದ್ದಾರೆ.


ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಹೋಬಳಿಯ ಜಿನ್ನೇನಹಳ್ಳಿಯಲ್ಲಿ ಜೆ.ಎನ್. ಬೊಮ್ಮೇಗೌಡ ಮತ್ತು ಲಕ್ಷ್ಮಮ್ಮ ಇವರ ಪುತ್ರರಾಗಿ ದಿನಾಂಕ: 15-08-1964 ರಂದು ಜನಿಸಿದರು. ಎಂ.ಎಸ್ಸಿ(M.Sc)- ಪರಿಸರ ವಿಜ್ಞಾನ, ಎಂ.ಎ (M.A).- ಸಮಾಜಶಾಸ್ತ್ರ, ಎಂ. ಇಡಿ (M.Ed)- ಶಿಕ್ಷಣಶಾಸ್ತ್ರ, ಎಂ.ಎಲ್. ಐ.ಎಸ್ಸಿ ( M.L..I.Sc),- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಮತ್ತು ಪಿಜಿಡಿ ಹೆಚ್ ಆರ್ ಎಂ ( PGDHRM) ಕ್ಷೇತ್ರಗಳಲ್ಲಿ ವಿದ್ಯಾರ್ಹತೆ ಪಡೆದ ಇವರು 12-09-1992 ರಲ್ಲಿ ಸಹ ಶಿಕ್ಷಕನಾಗಿ ಸರ್ಕಾರಿ ಸೇವೆಗೆ ಸೇರಿದ್ದು ಸರ್ಕಾರಿ ಪ್ರೌಢಶಾಲೆ, ಅಕ್ಕನಹಳ್ಳಿ ಕ್ರಾಸ್, ಚನ್ನರಾಯ ಪಟ್ಟಣ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದರು.


ನಂತರ ಶಾಲಾ ತನಿಖಾಧಿಕಾರಿಯಾಗಿ ಬಿ.ಇ.ಓ. ಕಛೇರಿ, ಚನ್ನರಾಯಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿದ ಇವರು ನಂತರ ಡಯಟ್ ಮಂಗಳೂರು ಇಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅದಾದಮೇಲೆ ಹಾಸನ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಂದಲಿ ಇಲ್ಲಿ ಕರ್ತವ್ಯ ನಿರ್ವಹಿಸುವಾಗ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಪ್ರಾಮಾಣಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಶಿಸ್ತು, ಸ್ವಚ್ಛತೆ, ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾವರಣದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ನೀರುಣಿಸಿ ಬೆಳೆಸಿದ್ದಾರೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಮತ್ತು ಪರೀಕ್ಷಾ ಸಿದ್ಧತೆಯಲ್ಲಿ ಅನೇಕ ಕ್ರಿಯಾಯೋಜನೆಗಳನ್ನು ರೂಪಿಸಿ ಅದರಂತೆ ಅನುಪಾಲನೆ ಮಾಡಿದ್ದು ಎಸ್.ಎಸ್.ಎಲ್ ಸಿ (SSLC) ವಿದ್ಯಾರ್ಥಿಗಳ ಉತ್ತಮ ಗುಣಮಟ್ಟದ ಫಲಿತಾಂಶಕ್ಕೆ ಕಾರಣರಾಗಿದ್ದು ಪ್ರತೀ ವರ್ಷವೂ ಹೆಚ್ಚು ಅಂಕಗಳಿಸಿದ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಪ್ರೋತ್ಸಾಹಧನವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರುತ್ತಾರೆ. ಅಂದಿನ ಶ್ರಮ ಇಂದು ಫಲ ನೀಡಿದೆ ಎನ್ನುವಂತೆ ಇವರ ಕೈಯಲ್ಲಿ ಅಭ್ಯಾಸ ಮಾಡಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ವಿದೇಶಗಳಲ್ಲಿ ಉದ್ಯೋಗವನ್ನು ಸಂಪಾದಿಸಿ ತಮ್ಮ ಸ್ವಂತಕಾಲ ಮೇಲೆ ತಾವು ನಿಂತು ಯಶಸ್ವಿಯಾಗಿ ಜೀವನ ನಡೆಸುತ್ತಿದ್ದಾರೆ.


ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವೆಂಬಂತೆ 2004 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿ, 2019 ರಲ್ಲಿ ಕರ್ನಾಟಕ ಸಂಘ, ಮಂಡ್ಯದಿಂದ ಪರಿಸರ ವಿಜ್ಞಾನ ಶಿಕ್ಷಕ ಪ್ರಶಸ್ತಿ, 2020 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರಿಂದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ, 31-01-2020 ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊಯ್ಸಳ ಶ್ರೀ ಪ್ರಶಸ್ತಿ, 10-11-2022 ರಲ್ಲಿ ವಿಸ್ತಾರ ನ್ಯೂಸ್ ಚಾನಲ್ ರವರ ವಿಸ್ತಾರ ಕನ್ನಡ ಸಂಭ್ರಮದ ಶಿಕ್ಷಣ ಕ್ಷೇತ್ರದಲ್ಲಿ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಿದೆ. 01-01-2019 ರಲ್ಲಿ ಪಬ್ಲಿಕ್ ಟಿ.ವಿ. ಚಾನಲ್ ಇವರನ್ನು ಪಬ್ಲಿಕ್ ಹೀರೊ ಆಗಿ ಗುರುತಿಸಿದೆ. 26-10-2020 ರಲ್ಲಿ ಟಿ.ವಿ.-5 ಚಾನಲ್ ಇವರನ್ನು " ನಮ್ಮ ಬಾಹುಬಲಿ" ಎಂಬ ಕಾರ್ಯಕ್ರಮದಲ್ಲಿ ಸಂದರ್ಶನ ನಡೆಸಿ ಪರಿಚಯಿಸಿದೆ.


ಪ್ರಸ್ತುತದಲ್ಲಿ ಹಾಸನ ಜಿಲ್ಲಾ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ದಕ್ಷ ಹಾಗೂ ಪ್ರಾಮಾಣಿಕ ಸೇವೆಯ ಕೊಡುಗೆಯನ್ನು ಪರಿಗಣಿಸಿ ನಗರದ ಕಲಾ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಸನ್ಮಾನಿಸಿದೆ.

 

ಈ ಸಂದರ್ಭದಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿಗಳಾದ ಸತ್ಯಭಾಮ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮೊಹಮ್ಮದ್ ಸುಜಿತ್, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮುದ್ದೇಗೌಡ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು ಮತ್ತಿತರು ಹಾಜರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top