ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಆಶಯ
ಮಂಗಳೂರು: ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಮಂಗಳೂರು ನಗರವನ್ನು ಎರಡನೆ ರಾಜ್ಯದ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶವಿದೆ. ಮಂಗಳೂರನ್ನು ಮಿನಿ ದುಬೈಯಂತೆ ಅಭಿವೃದ್ಧಿ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಎಂದು ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ‘ಬಂದರು, ವಿಮಾನ ನಿಲ್ದಾಣ, ರೈಲು, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೌಲಭ್ಯ ಹೊಂದಿರುವ ಮಂಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿನ ಸಮುದ್ರಕ್ಕೆ, ನದಿಗಳಿಗೆ ನಗರದ ಕಸ, ತ್ಯಾಜ್ಯ ನೀರು ಸೇರಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಂಗಳೂರು ಅಭಿವೃದ್ಧಿ ಬಗ್ಗೆ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಕ್ಕೆ ಸಮಗ್ರ ವರದಿ ನೀಡಿದ್ದೆ ಎಂದರು.
ನಾನು ಹುಟ್ಟಿ ಬೆಳೆದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿಯಾಗಿತ್ತು. ದುಡಿಮೆಯ ಉಳಿತಾಯದಲ್ಲಿ ಬಡಜನರಿಗೆ,ಸಮಾಜಕ್ಕೆ ಒಂದು ಪಾಲು ಮೀಸಲಿಡಲು ತೀರ್ಮಾನಿಸಿದ್ದೆ. ಮದುವೆಯ ಸಂದರ್ಭದಲ್ಲಿಯೂ ಈ ಬಗ್ಗೆ ಪ್ರಮಾಣ ಸ್ವೀಕರಿಸಿದ್ದೆ, ನನ್ನ ಪತ್ನಿಯೂ ಇದಕ್ಕೆ ಸಮ್ಮತಿಸಿದ್ದಳು. ಕೊಲ್ಲಿ ರಾಷ್ಟ್ರದಲ್ಲಿ ವೃತ್ತಿ ಬದುಕು ಮತ್ತು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಬಳಿಕ ಸಮಾಜಮುಖಿ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಅದೇ ನನ್ನ ಬದುಕಿನ ಸಾಧನೆ ಎಂದರು.
ನನ್ನ ಸಾಮಾಜಿಕ ಚಟುವಟಿಕೆಗೆ ಜಾತಿ, ಧರ್ಮ ಎಂದೂ ಅಡ್ಡಿಯಾಗಿಲ್ಲ. ರಾಜ್ಯದ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ ನಿರ್ಮಾಣ ದೇವಸ್ಥಾನ ನಿರ್ಮಾಣ ಮಾಡಿ ಜನರಿಗೆ ಸೇವೆ ನೀಡಲು ಸಾಧ್ಯವಾಗಿದೆ. ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಸೇವಾ ಮನೋಭಾವದಿಂದ ನಮ್ಮ ಯುವಕರು ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದರು.
ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾೃನಿ ಆಳ್ವಾರಿಸ್, ಜೀನ್ ಕೊಲಾಸೊ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ವಾಲ್ಟರ್ ನಂದಳಿಕೆ, ಡೆನಿಸ್ ಡಿಸಿಲ್ವ, ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಷ್ಮಿತಾ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್.ವಂದಿಸಿದರು. ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ