ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಇಂಟರ್ಲಾಕಿಂಗ್ ಪೇವರ್ಸ್ ನಿರ್ಮಾಣ

Upayuktha
0

 



ಮೂಡುಬಿದಿರೆ: ಅನುಪಯುಕ್ತ ಪ್ಲಾಸ್ಟಿಕ್‌ಗಳನ್ನು ಬಳಸಿ ಗುಣಮಟ್ಟದ ಇಟ್ಟಿಗೆ (ಬ್ರಿಕ್ಸ್) ಹಾಗೂ ಪರಸ್ಪರ ಬೆಸೆಯುವ (ಇಂಟರ್ಲಾಕಿಂಗ್) ಪ್ರಿಕಾಸ್ಟ್ ಪೇವರ್ಸ್ ಅನ್ನು ಆಳ್ವಾಸ್  ಎಂಜಿನಿಯರಿಂಗ್  ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್) ವಿಭಾಗವು ಅಭಿವೃದ್ಧಿ ಪಡಿಸಿದ್ದು, ಮೈಸೂರಿನ ಜಾಗೃತ್ ಟೆಕ್ ಕಂಪೆನಿ ಜೊತೆ ವಾಣಿಜ್ಯ  ಉತ್ಪನ್ನದ ಪೇಟೆಂಟ್ (ಪೇಟೆಂಟ್ ಸಂಖ್ಯೆ: 542790)  ಪಡೆದಿದೆ. ಈ ಆವಿಷ್ಕಾರವು ಪರಿಸರ ಸಂರಕ್ಷಣೆ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗಿದೆ.


ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಿದ್ದೇಶ್ ಜಿ.ಕೆ. ಮಾರ್ಗದರ್ಶನ ಹಾಗೂ ಡಾ. ಗುರುಪ್ರಸಾದ್  ನೇತೃತ್ವದಲ್ಲಿ ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಅರ್ಜುನ್ ಸುನಿಲ್ ರಾವ್ ಅವರ ಸಹಕಾರದೊಂದಿಗೆ ಮೈಸೂರು ಮೂಲದ ಪರಿಸರ ಸ್ನೇಹಿ ಸಂಶೋಧನಾ ಕಂಪನಿ ‘ಜಾಗೃತ್ ಟೆಕ್ಪ್ರೈ ವೇಟ್ ಲಿಮಿಟೆಡ್’ ಜೊತೆಗೂಡಿ ಸಂಶೋಧನೆ ನಡೆಸಲಾಗಿತ್ತು.


ಬ್ರಿಕ್ಸ್ ಗುಣಲಕ್ಷಣ, ಗುಣಮಟ್ಟ, ಸ್ಥಿರತೆ ಕುರಿತು ಬೆಂಗಳೂರಿನ ಬೆಯೂರೊ ವೆರಿಟಾಸ್  ಬ್ರಿಕ್ಸ್ ಪ್ರಯೋಗಾಲಯ ಹಾಗೂ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಚಿತ್ರದುರ್ಗದ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯ ವರದಿ ನೀಡಿದ್ದು, ಇಂಟರ್ಲಾಕಿಂಗ್ ಪಾವರ್ ಈಸ್- 15658 ಸ್ಟ್ಯಾಂಡರ್ಡ್ಸ್ ನ ನ ಮೊದಲ ಕೋಷ್ಟಕದಲ್ಲಿ ನಿಗದಿ ಪಡಿಸಿದ ಕಂಪ್ರೇಶನ್ ಸಾಮರ್ಥ್ಯ ಹೊಂದಿದೆ ಎಂದು ದೃಢಪಡಿಸಿದ್ದಾರೆ.


ಈ ವರದಿ ಆಧಾರದಲ್ಲಿ ಭಾರತ ಸರ್ಕಾರದ ಪೇಟೆಂಟ್  ನಿಯಂತ್ರಕ ಇಲಾಖೆಯು ಈ ಮಾದರಿ ಪೇವರ್ಸ್  ತಯಾರಿಕಾ ವಿಧಾನಕ್ಕೆ 20 ವರ್ಷಗಳ ವರೆಗೆ ಪೇಟೆಂಟ್ ಮಂಜೂರು ಮಾಡಿದೆ. ಈ ಪೇವರ್ಸ್ ಮೈಸೂರಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೈಗಾರಿಕೆಯಲ್ಲಿ ವಾಣಿಜ್ಯೀಕರಣಗೊಂಡಿದ್ದು, ಜಾಗೃತ್ ಟೆಕ್  ಕಂಪೆನಿಯ ಮುಖ್ಯಸ್ಥ ದಿನೇಶ್ ಬೋಪಣ್ಣ ಆಳ್ವಾಸ್   ಎಂಜಿನಿಯರಿಂಗ್  ಮತ್ತು ತಂತ್ರಜ್ಞಾನ ಕಾಲೇಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಆವಿಷ್ಕಾರಕ್ಕೆ ಪ್ರೋತ್ಸಾಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಸಾಧನೆಗೆ ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top