ಉಚಿತ- ಖಚಿತ ಎಂದ ಕಾಂಗ್ರೆಸ್ ಜನರಿಗೆ ಕೊಟ್ಟಿದ್ದು ಬೆಲೆ ಏರಿಕೆಯ ಗ್ಯಾರಂಟಿ ಮಾತ್ರ: ಶಾಸಕ ಕಾಮತ್ ವಾಗ್ದಾಳಿ

Upayuktha
0

 



ಮಂಗಳೂರು: ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಕರ್ನಾಟಕದ ಜನತೆಯ ಮೇಲೆ ಸರ್ಕಾರ ದ್ವೇಷ ಸಾಧನೆಗೆ ಹೊರಟಿದ್ದು ಬೆಲೆ ಏರಿಕೆಯ ಅಸ್ತ್ರವನ್ನು ಉಪಯೋಗಿಸಿದೆ. "ಎಲ್ಲವೂ ಉಚಿತ, ಪ್ರತಿಯೊಬ್ಬರಿಗೂ ಖಚಿತ, ಇದು ನಮ್ಮ ಗ್ಯಾರಂಟಿ" ಎನ್ನುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನಿರಂತರವಾಗಿ "ಬೆಲೆ ಏರಿಕೆಯ ಗ್ಯಾರಂಟಿ" ನೀಡಿದ್ದರ ಪರಿಣಾಮವಾಗಿ ರಾಜ್ಯದ ಜನರು ಕಂಗಾಲಾಗಿದ್ದಾರೆ ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ತೀವ್ರ ವಾಗ್ದಾಳಿ ನಡೆಸಿದರು.


ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್‌ ಡೀಸೆಲ್ ದರ ಏರಿಸಿ ಜನತೆಯನ್ನು ಇನ್ನಷ್ಟು ಸಂಕಟಕ್ಕೆ ದೂಡಿದೆ ಎಂದು ಸರಕಾರದ ನಡೆಯನ್ನು ಖಂಡಿಸಿದರು.


ಈಗಾಗಲೇ ಹಾಲು, ವಿದ್ಯುತ್, ಸಾರಿಗೆ ದರ, ಮನೆ ತೆರಿಗೆ, ರಿಜಿಸ್ಟ್ರೇಷನ್, ಸ್ಟ್ಯಾಂಪ್ ಡ್ಯೂಟಿ, ವಾಹನ ನೋಂದಣಿ, ಅಬಕಾರಿ ಸುಂಕ, ಸೇರಿದಂತೆ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನಸಾಮಾನ್ಯರಿಗೆ ಇದು ಬಹುದೊಡ್ಡ ಹೊಡೆತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ಇನ್ನೂ ಹೆಚ್ಚಳವಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ, ಇಡೀ ದೇಶದ ಯಾವೊಂದು ರಾಜ್ಯದಲ್ಲೂ ತೈಲ ಬೆಲೆ ಏರಿಸದಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಧಿಡೀರನೆ ಜನಸಾಮಾನ್ಯರ ಜೇಬಿಗೆ "ಕೈ" ಹಾಕಿರುವುದು ಕಾಂಗ್ರೆಸಿನ ನೈಜ ಮುಖದ ಅನಾವರಣವಾಗಿದೆ.

ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದ್ದು ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಒಂದೇ ಒಂದು ರೂಪಾಯಿ ಬಿಡುಗಡೆಯಾಗುತ್ತಿಲ್ಲ. ಆದರೂ ಮುಖ್ಯಮಂತ್ರಿಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಸುಭದ್ರವಾಗಿದೆ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪದೇ ಪದೇ ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಹೊರೆ ಯಾಕೆ? ಎಂದು ಅವರು ಪ್ರಶ್ನಿಸಿದರು.

   



ಬ್ರಹ್ಮಾಂಡ ಭ್ರಷ್ಟಾಚಾರ:

ಈ ಸರ್ಕಾರ ತನ್ನ ಘೋಷಿತ ಗ್ಯಾರಂಟಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕುವ ಬದಲು ರಾಜ್ಯದಲ್ಲಿ ಸರ್ಕಾರದ ಮೂಲಕವೇ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮೊದಲು ನಿಲ್ಲಿಸಬೇಕು. ಇತ್ತೀಚಿಗೆ ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಗಳ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆ ಹಾಗೂ ಸಚಿವರೊಬ್ಬರ ತಲೆದಂಡವಾಗಿದ್ದನ್ನು ರಾಜ್ಯ ಮಾತ್ರವಲ್ಲದೇ ಇಡೀ ದೇಶವೇ ಕಂಡಿದೆ. ಹಾಗಿದ್ದೂ ಅದಕ್ಕೆ ಕಡಿವಾಣ ಹಾಕದೇ ಜನಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಹೊರೆಯನ್ನು ಹಾಕುವುದರಿಂದ ಜನಾಕ್ರೋಶದ ಕಟ್ಟೆಯೊಡೆಯುವುದು ನಿಶ್ಚಿತ ಎಂದು ಕಾಮತ್ ಹೇಳಿದರು.



ಸುಳ್ಳು ಗ್ಯಾರಂಟಿಗಳಿಂದ ರೋಸಿ ಹೋದ ಜನತೆ:

ಹಿಮಾಚಲ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಸುಳ್ಳು ಗ್ಯಾರಂಟಿ ಅಸ್ತ್ರ ಪ್ರಯೋಗಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಲ್ಲಿನ ಜನರನ್ನು ನಂತರ ಭ್ರಮ ನಿರಸನಗೊಳಿಸಿತ್ತು. ಈಗ ಕರ್ನಾಟಕದ ಜನರ ಸರದಿಯಾಗಿದೆ. ಕಾಂಗ್ರೆಸ್ ಪಕ್ಷದ ಹುಟ್ಟು ಗುಣವೇ ಜನರನ್ನು ಮೂರ್ಖರನ್ನಾಗಿಸೋದು. ನಾಡಿನ ಪ್ರಜ್ಞಾವಂತ ಜನತೆ ಇಂತಹ ಜನ ವಿರೋಧಿ ಸರ್ಕಾರವನ್ನು ತೊಲಗಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಈಗೇನಾದರೂ ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳಿಪಟಗೊಳ್ಳುವುದು ಮಾತ್ರವಲ್ಲ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಗಳನ್ನು ಸಹ ಕಳೆದುಕೊಳ್ಳಲಿದೆ. ಅಷ್ಟರಮಟ್ಟಿಗೆ ಜನರು ಈ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿದ್ದಾರೆ ಎಂದು ಕಾಮತ್ ನುಡಿದರು.


ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಾಳೆ (ಜೂ. 20) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಅದರ ಅಂಗವಾಗಿ ಮಂಗಳೂರು ನಗರ ದಕ್ಷಿಣದ ಮ ಮಂಡಲದ ವತಿಯಿಂದ ಅಧ್ಯಕ್ಷ ರಮೇಶ್ ಕಂಡೆಟ್ಟು ಹಾಗೂ ತಮ್ಮ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಯಲಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. ಬೆಲೆ ಏರಿಕೆಯನ್ನು ಹಿಂಪಡೆಯುವ ವರೆಗೂ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top