ಆ ದಿನ ಮಂಗಳೂರಿಗೆ ಹೋಗಬೇಕಿತ್ತು. ಬೆಳಗ್ಗೆ ಸೂರ್ಯೋದಯವಾಗುವ ಮುನ್ನವೇ ಹೊರಡುವ ಆಕೆ ಮಾತ್ರ ಅಂದು ತಡವಾಗಿ ಏದ್ದ ಕಾರಣ ಸುಮಾರು 9 ಗಂಟೆಯ ನಂತರದ ಬಸ್ಸಿನಲ್ಲಿ ಹೋಗಬೇಕಾಯಿತು. ಸೀಟಿಗಾಗಿ ಎಲ್ಲರಿಗಿಂತಲೂ ಬೇಗನೆ ಹತ್ತಿದರೂ ಎಲ್ಲಿಯೂ ಸಿಗದೆ ಮುಂದೆ ಹೋಗಿ ಮಂಗಳೂರಿನವರೆಗೂ ನಿಂತುಕೊಂಡೆ ಹೋಗಬೇಕಾಯಿತು. ಮುಂದೆ ನಿಂತ ಕಾರಣ ಎಲ್ಲರೂ ಆಕೆಯನ್ನೇ ಗಮನಿಸುತ್ತಿದಂತೆ ಕಾಣುತ್ತಿತ್ತು. ಹೀಗೆ ಕಂಬಿಯ ಹಿಡಿದು ಕೈ ನೋವಾಗಿ ನಿಂತು ದಣಿವಾಗಲು ಪ್ರಾರಂಭಿಸಿತು. ಆಕೆಯನ್ನು ಗಮನಿಸಿ ಪಕ್ಕದಲ್ಲಿಯೇ ಕುಳಿತಿದ್ದ ಮೂರು ಹೆಂಗಸರು ಗುಂಪಾಗಿ ಕುಳಿತು ಏನೇನೋ ಚರ್ಚಿಸುತ್ತ ಇದ್ದರು. ಅದರಲ್ಲಿ ಒಂದು ಕರುಣಾಮಯಿ ಹೆಂಗಸು ಕರೆದು ಬಾ ಮಗ ಕುಳಿತುಕೋ ಎಂದು ಮೆಲ್ಲನೆ ಹೇಳಿದರು. ಮೂರು ಜನ ಕುಳಿತು ಸೀಟು ಭರ್ತಿಯಾಗಿತ್ತು. ಪುನಃ ತಾನೇಕೆ ಕುಳಿತು ಹಿಂಸೆ ನೀಡಲಿ ಎಂದಾಕೆ ಹಾಗೆ ನಿಂತುಕೊಂಡು ಪ್ರಯಾಣ ಮುಂದುವರಿಸಿದಳು.
ಹೀಗೆ ಸ್ವಲ್ಪ ಹಿಂದೆ ನೋಡಿದಾಗ ಕಿಟಕಿಯ ಬದಿಯಲ್ಲಿ ಕುಳಿತಿದ್ದ ಆತ ಆಕೆಯನ್ನೇ ನೋಡಿದಂತಾಯಿತು. ಮೊದಲೇ ಪ್ರೀತಿಯ ತಾಪತ್ರೆಯಿಲ್ಲದೆ ಸ್ವತಂತ್ರ ಜೀವನವಾದ್ದರಿಂದ ಸುಮ್ಮನೆ ಬಸ್ಸಿನ ಮುಂದಿನ ದಾರಿಯ ನೋಡುತ್ತಾ ನಿಂದಳಾಕೆ. ಆದರೂ ಮನವ್ಯಾಕೋ ಹುಡುಗನತ್ತ ನೋಡುವಂತೆ ಸೂಚಿಸುತ್ತಿತ್ತು. ಅಷ್ಟರಲ್ಲಿ ಆತ ಕಿಟಕಿಯತ್ತ ತಲೆಯನಿಟ್ಟು ಮಲಗಿದ್ದ. ಇನ್ನೇನು ಮಂಗಳೂರು ತಲುಪುತ್ತಾ ಬರುವರಷ್ಟರಲ್ಲಿ ಆತನನ್ನು ನೋಡಿದಾಗ ನಿದ್ದೆಯಿಂದ ಎದ್ದು ಮೈಮುರಿದುಕೊಂಡು ಆಕೆಯತ್ತ ನೋಡತೊಡಗಿದ. ಆತನ ಕಣ್ಣು ಸಂಭಾಷಣೆಗೆ ತಯಾರಾಗಿದ್ದರೂ ಈಕೆ ಮಾತ್ರ ದೃಷ್ಟಿ ತಪ್ಪಿಸಿ ಆಗಾಗ ಮುಂದೆ ನೋಡುತ್ತಿದ್ದಳು. ಹೀಗೆ ಕೊನೆಗೂ ಆಕೆಯ ನಿಲ್ದಾಣ ಬಂದಾಗ ಇಳಿಯಲು ಮುಂದಾದಳು. ಇನ್ನೇನು ಆಕೆ ಇಳಿದು ಬಿಡುತ್ತಾಳೆಂದು ತಿಳಿದಾಗ ಆತ ಮಾತ್ರ ನೋಡುತ್ತಲೇ ಇದ್ದ. ಈಕೆಯೂ ಮಿಂಚಿನಂತೆ ನೋಡಿ ಮರೀಚಿಕೆಯಂತೆ ಮರೆಯಾದಳು.
- ಯಶೋದ,
ದ್ವಿತೀಯ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ