|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೇ 8 : ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ

ಮೇ 8 : ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನ



ಸಾಮ್ರಾಜ್ಯ ವಿಸ್ತರಣಾ ನೀತಿಯನ್ನು ಯೂರೋಪಿನ ಇತಿಹಾಸದಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಆಡಳಿತಾತ್ಮಕ ಧೋರಣೆಗಳ ಮೂಲಕ ವಿಶ್ವವನ್ನೇ ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಸೋಲು ಗೆಲುವುಗಳನ್ನು ಯೂರೋಪ್ ಕಂಡಿದೆ. ಇದೇ ಹಿನ್ನೆಲೆಯಲ್ಲಿ ಯೂರೋಪ್ ಖಂಡದಲ್ಲಿ ಕ್ರಿ.ಶ.1859 ರಲ್ಲಿ ಫ್ರಾನ್ಸ್ ಮತ್ತು ಆಸ್ಟ್ರೀಯಾ ದೇಶಗಳ ನಡುವೆ ಸೋಲ್ಛರಿನೋ ಎಂಬ ಯುದ್ಧ ಭೂಮಿಯಲ್ಲಿ ಯುದ್ಧವು ನಡೆಯಿತು. ಸೋಲ್ಫರಿನೋ ಎಂಬ ಸ್ಥಳದಲ್ಲಿ ಫ್ರಾನ್ಸ್ ನ ಚಕ್ರವರ್ತಿ ಮೂರನೇ ನೆಪೋಲಿಯನ್ನನು ತನ್ನ ಕೇಂದ್ರ ಕಛೇರಿಯನ್ನು ಸ್ಥಾಪಿಸಿಕೊಂಡಿದ್ದನು. ಫ್ರೆಂಚ್ ವಸಾಹತು(ಕಾಲೋನಿ)ಗಳಲ್ಲಿ ಭೂಮಿ ಮತ್ತು ನೀರಿನ ಹಕ್ಕುಗಳನ್ನು ಸ್ಪಷ್ಟವಾಗಿ ತಿಳಿಸಿಲ್ಲ ಮತ್ತು ವಸಾಹತುಶಾಹಿ ಅಧಿಕಾರಿಗಳು ಈ ಕುರಿತು ಯಾವುದೇ ಸಹಕಾರ ನೀಡುತ್ತಿಲ್ಲ ಎಂಬ ಮಾಹಿತಿಯನ್ನು ಫ್ರಾನ್ಸ್ ಚಕ್ರವರ್ತಿ ಮೂರನೇ ನೆಪೋಲಿಯನ್ ಗೆ ತಿಳಿಸಬೇಕಿತ್ತು. ಪರಿಣಾಮವಾಗಿ, ಕ್ರಿ.ಶ.1859 ರಲ್ಲಿ ಜೀನ್ ಹೆನ್ರಿ ಡ್ಯೂನಾಂಟ್ ಎಂಬ ಸಾಮಾಜಿಕ ಕಾರ್ಯಕರ್ತನು ಫ್ರೆಂಚ್ ಚಕ್ರವರ್ತಿ ಮೂರನೇ ನೆಪೋಲಿಯನ್ ಗೆ ನೇರವಾಗಿ ಮನವಿ ಮಾಡಲು ನಿರ್ಧರಿಸಿದರು. ಚಕ್ರವರ್ತಿ ಮೂರನೇ ನೆಪೋಲಿಯನ್ ಆ ಸಮಯದಲ್ಲಿ ಲೊಂಬಾರ್ಡಿಯಲ್ಲಿ ತಮ್ಮ ಸೈನ್ಯದೊಂದಿಗೆ ಇದ್ದರು. ನೆಪೋಲಿಯನ್ನನ ಪ್ರಧಾನ ಕಛೇರಿಯು ಸೋಲ್ಫೆರಿನೊ ಎಂಬ ನಗರದಲ್ಲಿತ್ತು. ಡ್ಯೂನಾಂಟ್ ರವರು ಮೂರನೇ ನೆಪೋಲಿಯನ್ ರವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸೋಲ್ಫೆರಿನೊಗೆ ಧಾವಿಸಿದರು. 


ಜೀನ್ ಹೆನ್ರಿ ಡ್ಯೂನಾಂಟ್ ಜೂನ್ 24, 1859 ರ ಸಂಜೆ ಸೋಲ್ಫೆರಿನೊಗೆ ಬಂದರು, ಅದೇ ದಿನ ಫ್ರಾನ್ಸ್ ಮತ್ತು ಆಸ್ಟ್ರಿಯಾ ನಡುವೆ ಯುದ್ಧವು ಸಂಭವಿಸಿತ್ತು. ಭೀಕರ ದೃಶ್ಯ ಹೆನ್ರಿ ಡ್ಯುನಾಂಟ್ ರವರ ಕಣ್ಣ ಮುಂದೆ ಕಾಣಿಸಿತು. ನರಳಾಟ, ಗೋಳಾಟದಂತಹ ಭಯಾನಕ ದೃಶ್ಯ ಹೆನ್ರಿ   ಡ್ಯುನಾಂಟ್ ರವರ ಹೃದಯವನ್ನು ಕಲಕಿತು. ನಲವತ್ತು ಸಾವಿರ ಜನ ಗಾಯಗೊಂಡವರು, ಸಾಯುತ್ತಿರುವವರು ಮತ್ತು ಸತ್ತವರು, ಯುದ್ಧಭೂಮಿಯಲ್ಲಿ ಉಳಿದುಕೊಂಡವರು ಮತ್ತು ಆರೈಕೆಯನ್ನು ಒದಗಿಸಲು ಸ್ವಲ್ಪ ಪ್ರಯತ್ನಗಳು ಕಂಡುಬಂದವು. ಇದನ್ನು ಕಂಡು ಆಘಾತಕ್ಕೊಳಗಾದ, ಹೆನ್ರಿ ಡ್ಯುನಾಂಟ್ ಸ್ವತಃ ನಾಗರಿಕ ಜನರನ್ನು ಸಂಘಟಿಸಲು ಉಪಕ್ರಮವನ್ನು ತೆಗೆದುಕೊಂಡರು. ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು, ಗಾಯಗೊಂಡ ಮತ್ತು ಅನಾರೋಗ್ಯದ ಸೈನಿಕರಿಗೆ ಸಹಾಯವನ್ನು ಒದಗಿಸಲು. ಅವರಿಗೆ ಸಾಕಷ್ಟು ಸಾಮಗ್ರಿಗಳು ಮತ್ತು ಸರಬರಾಜುಗಳ ಕೊರತೆಯಿತ್ತು, ಮತ್ತು ಡ್ಯೂನಾಂಟ್ ಸ್ವತಃ ಅಗತ್ಯ ವಸ್ತುಗಳ ಖರೀದಿಯನ್ನು ಆಯೋಜಿಸಿದರು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ಸಹಾಯ ಮಾಡಿದರು. ಸಂಘರ್ಷದಲ್ಲಿ ಗಾಯಗೊಂಡವರಿಗೆ ಅವರ ಪರವಾಗಿ ಸೇವೆ ಸಲ್ಲಿಸಲು ಅವರು ಜನರಿಗೆ ಮನವರಿಕೆ ಮಾಡಿದರು. ಫ್ರೆಂಚ್ ಮತ್ತು ಬ್ರಿಟಿಷರು ವಶಪಡಿಸಿಕೊಂಡ ಆಸ್ಟ್ರಿಯನ್ ವೈದ್ಯರ ಬಿಡುಗಡೆಯನ್ನು ಪಡೆಯುವಲ್ಲಿ ಅವರು ಯಶಸ್ವಿಯಾದರು. 


ಈ ಹಿನ್ನೆಲೆಯಲ್ಲಿ 1863 ರಲ್ಲಿ " ಯುದ್ಧದಲ್ಲಿ ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ" ಎಂಬುದಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿತವಾಯಿತು. ಈ ಅಂತರಾಷ್ಟ್ರೀಯ ಸಂಸ್ಥೆಯೇ ಮುಂದಿನ ದಿನಗಳಲ್ಲಿ "ವಿಶ್ವ ರೆಡ್ ಕ್ರಾಸ್ ಸಂಸ್ಥೆ" ಎಂಬುದಾಗಿ ಹೆಸರಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕರಾದ ಜೀನ್ ಹೆನ್ರಿ ಡ್ಯುನ್ಯಾಂಡ್ ರ ಜನ್ಮ ದಿನದ ಸವಿನೆನಪಿಗಾಗಿ ಪ್ರತಿ ವರ್ಷ ಮೇ 8 ರಂದು, ಪ್ರಪಂಚದಾದ್ಯಂತ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನವನ್ನು ಆಚರಿಸಲಾಗುತ್ತದೆ. ಮಾನವ ಜೀವನದ ಸುರಕ್ಷತೆ ಮತ್ತು ಆರೋಗ್ಯವನ್ನು ಸಂರಕ್ಷಣೆಯನ್ನು ಬಯಸುವುದು, ಪ್ರಥಮ ಚಿಕಿತ್ಸೆ, ಮತ್ತು ವೈದ್ಯಕೀಯ ತುರ್ತು ಸ್ಥಿತಿಗಳು, ಹಠಾತ್ ಮರಣದಿಂದ ಜನರ ಸಂರಕ್ಷಣೆ ಇತ್ಯಾದಿಗಳಿಗೆ ಸಹಾಯ ಮಾಡಲು, ರಕ್ತದಾನ ಮಾಡಲು ಜಾಗೃತಿ ಮೂಡಿಸುವುದು ಮತ್ತು ನೈಸರ್ಗಿಕ ವಿಕೋಪಗಳು, ಹಠಾತ್ ಹಿಂಸೆಯಿಂದ ಬಳಲುತ್ತಿರುವ ಜನರಿಗೆ ವೈದ್ಯಕೀಯ ಸಹಾಯವನ್ನು ಒದಗಿಸುವ ಉದ್ದೇಶದಿಂದ ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ. ಅಷ್ಟಲ್ಲದೇ ವಿವಿಧ ಮಾನವೀಯ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಪ್ರವಾಹಗಳು ಮತ್ತು ಹಠಾತ್ ವಿಪತ್ತುಗಳಿಂದ ಜನರನ್ನು ತಡೆಯಲು ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನವನ್ನು ಆಚರಿಸಲಾಗುತ್ತದೆ. 


ಜೀನ್ ಹೆನ್ರಿ ಡ್ಯೂನಾಂಟ್ ರವರು ಮೇ 8, 1828 ರಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಉದ್ಯಮಿ ಜೀನ್-ಜಾಕ್ವೆಸ್ ಡ್ಯುನಾಂಟ್ ಮತ್ತು ಆಂಟೊನೆಟ್ ಡ್ಯುನಾಂಟ್-ಕೊಲ್ಲಾಡನ್ ಅವರ ಮೊದಲ ಮಗನಾಗಿ ಕ್ಯಾಲ್ವಿನಿಸ್ಟ್ ಧಾರ್ಮಿಕ ಕುಟುಂಬದಲ್ಲಿ ಜನಿಸಿದರು. ಅವರ ಪೋಷಕರು ಸಾಮಾಜಿಕ ಕಾರ್ಯದ ಮೌಲ್ಯವನ್ನು ಒತ್ತಿಹೇಳಿದರು ಮತ್ತು ಅವರ ತಂದೆ ಅನಾಥರಿಗೆ ಮತ್ತು ಪೆರೋಲಿಗಳಿಗೆ ಸಹಾಯ ಮಾಡುವಲ್ಲಿ ಸಕ್ರಿಯರಾಗಿದ್ದರು, ಆದರೆ ಅವರ ತಾಯಿ ಅನಾರೋಗ್ಯ ಮತ್ತು ಬಡವರೊಂದಿಗೆ ಕೆಲಸ ಮಾಡುತ್ತಿದ್ದರು. ಈ ಗುಣವು ಹೆನ್ರಿ ಡ್ಯುನಾಂಟ್ ರವರಲ್ಲಿ ಒಪ್ಪಿ ಅಪ್ಪಿಕೊಂಡಿತ್ತು. ಮುಂದಿನ ದಿನಗಳಲ್ಲಿ ತಮ್ಮ ಬದುಕನ್ನು ಜಿನೀವಾ ಸೊಸೈಟಿಯಲ್ಲಿ ಕೆಲಸ ಮಾಡಿದರು. ಅಲ್ಲಿ ಭಿಕ್ಷೆ ನೀಡುವುದು, ಅನಾಥರಿಗೆ ಸಹಾಯ ಮಾಡುವುದು, ಸಹಕಾರ ನೀಡುವ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜೀವನೋಪಾಯಕ್ಕಾಗಿ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದೇಶದ ವ್ಯಾಪಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಕೆಲವೊಮ್ಮೆ ಆರ್ಥಿಕ ಲಾಭವನ್ನು ಗಳಿಸಿದರು ಮತ್ತೆ ಕೆಲವೊಮ್ಮೆ ಆರ್ಥಿಕ ದಿವಾಳಿಗೂ ಒಳಗಾದರು. ಅವರು ಮುಂದಿನ ದಶಕಗಳನ್ನು ಬಡತನ ಮತ್ತು ಅಸ್ಪಷ್ಟತೆಯಲ್ಲಿ ಕಳೆದರು. ಸ್ವಿಸ್ ಹಳ್ಳಿಯಾದ ಹೈಡೆನ್‌ನಲ್ಲಿ ನೆಲೆಸುವ ಮೊದಲು ಯುರೋಪಿನಾದ್ಯಂತ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿದ್ದರು. 1895 ರಲ್ಲಿ, ಡ್ಯುನಾಂಟ್ ಒಬ್ಬ ಪತ್ರಕರ್ತನಿಂದ ಮರುಶೋಧಿಸಲ್ಪಟ್ಟನು. ಅದು ಡ್ಯುನಾಂಟ್ ಗೆ ಹೊಸ ನಿರೀಕ್ಷೆ ಮತ್ತು ಬೆಂಬಲವನ್ನು ತಂದಿತು. ಇವರ ಶಾಂತಿಯುತ ಕಾರ್ಯ ಚಟುವಟಿಕೆಗಳನ್ನು ಗಮನಿಸಿದ ಸ್ವಿರ್ಟ್ರ್ಜಲೆಂಡ್ ನ ನೊಬೆಲ್ ಸಂಸ್ಥೆಯು ಕ್ರಿ.ಶ. 1901 ರಲ್ಲಿ ಫ್ರೆಂಚ್ ಶಾಂತಿಪ್ರಿಯ ಫ್ರೆಡೆರಿಕ್ ಪಾಸ್ಸಿ ಜೊತೆಗೆ ಜೀನ್ ಹೆನ್ರಿ ಡ್ಯುನಾಂಟ್ ರವರಿಗೂ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಅವರು ಅಕ್ಟೋಬರ್ 30, 1910 ರಲ್ಲಿ ಹೈಡೆನ್‌ ಎಂಬಲ್ಲಿ ನಿಧನರಾದರು. 


ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ (IFRC) ಅನ್ನು ಮೊದಲು 1919 ರಲ್ಲಿ ಪ್ಯಾರಿಸ್ ನಲ್ಲಿ ಸ್ಥಾಪಿಸಲಾಯಿತು. ನಂತರ ಇಂಟರ್ ನ್ಯಾಷನಲ್ ಫೌಂಡೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ ಆಗಿ ಬದಲಾಗಿ ಐದು ಸ್ಥಾಪಕ ಸದಸ್ಯರನ್ನು ಹೊಂದಿದೆ. ಅವುಗಳೆಂದರೆ ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್. 1984 ರಲ್ಲಿ, ಈ ದಿನವನ್ನು ಅಧಿಕೃತವಾಗಿ "ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಡೇ" ಎಂದು ಹೆಸರಿಸಲಾಯಿತು. ಅಂದಿನಿಂದ ಪ್ರತಿವರ್ಷ ಮೇ 8 ರಂದು ವಿಶ್ವದ ಎಲ್ಲಾ ರಾಷ್ರಗಳಲ್ಲಿಯೂ  "ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಡೇ" ಎಂದು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸಂಸ್ಥೆಯು ಪ್ರತೀ ವರ್ಷ ಥೀಮ್ ಒಂದನ್ನು ಪ್ರಕಟಿಸುತ್ತದೆ. 2024 ರಲ್ಲಿ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದಂದು ಗೊತ್ತುಪಡಿಸಿದ ಥೀಮ್ ಎಂದರೆ "ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಪ್ರತಿಫಲವಾಗಿದೆ." [ I GIVE WITH JOY, AND THE JOY I GIVE IS REWARD ] ಈ ಸಂದೇಶವು ಸಂತೋಷದ ಭಾವನೆಯೊಂದಿಗೆ ನೀಡುವ ಅಥವಾ ಕೊಡುವಿಕೆಯ ಕಲ್ಪನೆಯನ್ನು ಉತ್ತೇಜಿಸುತ್ತದೆ ಮತ್ತು ನೀಡುವ ಅಥವಾ ಕೊಡುವ ಕ್ರಿಯೆಯಲ್ಲಿ ಅನುಭವಿಸುವ ಸಂತೋಷವು ಪ್ರತಿಫಲದಾಯಕ ಫಲಿತಾಂಶವಾಗಿದೆ ಎಂಬುದನ್ನು ತೋರಿಸುತ್ತದೆ. 


ಇಂತಹ ರೆಡ್ ಕ್ರಾಸ್ ಸಂಸ್ಥೆಯು ಸಾರ್ವಜನಿಕ ಬದುಕಿನ ಶಾಂತಿಗಾಗಿ, ಸಾರ್ವಜನಿಕ ಬದುಕಿನ ಸೌಲಭ್ಯಗಳನ್ನು ನೀಡುವುದಕ್ಕಾಗಿ, ಜಾಗತಿಕ ಶಾಂತಿ ಪಾಲನೆಗಾಗಿ, ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ, ಅನುಕಂಪ, ಸಹಾಯ, ಸಹಕಾರವನ್ನು ಬಯಸುವುದಕ್ಕಾಗಿ ಸ್ಥಾಪನೆಯಾಗಿದೆ. ಪ್ರಾಕೃತಿಕ ಹಾಗೂ ಇನ್ನಿತರ ವಿಕೋಪಗಳಲ್ಲಿ, ಹಿಂಸೆಗಳಲ್ಲಿ ನೊಂದ ಜನರಿಗೆ ಸಾಂತ್ವಾನ ಹೇಳಲು, ಸಹಾಯ ಮಾಡಲು ಸ್ಥಾಪನೆಯಾದ ಸಂಸ್ಥೆಯಾಗಿದೆ. ಮಲೇರಿಯಾ, ಡೆಂಗ್ಯೂ, ಪ್ಲೇಗ್, ಕ್ಷಯರೋಗ, ಏಡ್ಸ್ , ಕೋವಿಡ್-19 ನಂತಹ ರೋಗಗಳ ವಿರುದ್ಧ ನಾವು ಹೇಗೆ ಜಾಗೃತರಾಗಿರಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆ ಇದಾಗಿದೆ. ಇಂದು ಭಾರತವು ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ರೆಡ್ ಕ್ರಾಸ್ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯು ಅಸ್ತಿತ್ವದಲ್ಲಿದ್ದು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಅಂಗಸಂಸ್ಥೆಗಳನ್ನು ಪ್ರಾರಂಭಿಸಿದೆ. ತನ್ನ ಕಾರ್ಯಕ್ರಮಗಳನ್ನು ನಾಲ್ಕು ಮುಖ್ಯ ಕ್ಷೇತ್ರಗಳಾಗಿ ವರ್ಗೀಕರಿಸಿಕೊಂಡಿದೆ. ಅವೆಂದರೆ 1) ಮಾನವೀಯ ತತ್ವಗಳು ಮತ್ತು ಮೌಲ್ಯಗಳನ್ನು ಉತ್ತೇಜಿಸುವುದು 2) ವಿಪತ್ತು ಪ್ರತಿಕ್ರಿಯೆ 3) ವಿಪತ್ತು ಸಿದ್ಧತೆ 4) ಸಮುದಾಯದಲ್ಲಿ ಆರೋಗ್ಯ ಮತ್ತು ಕಾಳಜಿಯನ್ನು ನೀಡುವುದು. ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಾದ ಪ್ರೌಢಶಾಲೆ , ಕಾಲೇಜು ಮತ್ತು  ವಿಶ್ವವಿದ್ಯಾನಿಲಯಗಳಲ್ಲಿ  ಜ್ಯೂನಿಯರ್ ರೆಡ್ ಕ್ರಾಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳನ್ನು ಕ್ರಮವಾಗಿ ಪ್ರಾರಂಭಿಸುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ಸಾಧ್ಯವಾದಷ್ಟು ದೇಶದ ಉದ್ದಗಲಕ್ಕು ಹರಡುತ್ತಿದೆ. ಜಾಗತಿಕ ಶಾಂತಿ ಸ್ಥಾಪನೆ ಹಾಗೂ ಸೇವಾ ಮನೋಭಾವವನ್ನು ಹೊಂದಿರುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಇಂದು ಕೋಟ್ಯಂತರ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯು ಶಾಂತಿ ಮತ್ತು ಸಹಕಾರದ ಹಿನ್ನಲೆಯಲ್ಲಿ ಮೂರು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬರುತ್ತದೆ. ನಾವೆಲ್ಲರೂ ಜಗತ್ತಿನ ಶಾಂತಿಯನ್ನು ಬಯಸುತ್ತ  ವಿಶ್ವದ ಎಲ್ಲಾ ನಾಗರಿಕರಿಗೂ ವಿಶ್ವ ರೆಡ್ ಕ್ರಾಸ್ ದಿನದ ಶುಭಾಶಯಗಳನ್ನು ಹಂಚೋಣ. 


-ಕೆ.ಎನ್. ಚಿದಾನಂದ. ಹಾಸನ. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post