ಎಸ್.ಡಿ.ಎಂ ಭೌತಶಾಸ್ತ್ರ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಉಜಿರೆ: ವಿಜ್ಞಾನದ ಮೂಲಸ್ವರೂಪದ ಪ್ರಾಥಮಿಕ ತಿಳುವಳಿಕೆಯ ಆಧಾರದಲ್ಲಿ ಅನ್ವಯಿಕ ಜ್ಞಾನ ರೂಢಿಸಿಕೊಂಡಾಗ ಹೊಸ ಆವಿಷ್ಕಾರಗಳ ಸೃಜನಶೀಲತೆ ಸಾಧ್ಯವಾಗುತ್ತದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಭೌತಶಾಸ್ತç ಹಾಗೂ ಸಂಶೋಧನಾ ವಿಭಾಗ ಮತ್ತು ಚಾಮರಾಜನಗರದ ಗ್ರಾವಿಟಿ ಸೈನ್ಸ್ ಫೌಂಡೇಷನ್ ಜಂಟಿ ಸಹಯೋಗದಲ್ಲಿ 'ಭೌತಶಾಸ್ತçದ ನೂತನ ಟ್ರೆಂಡ್, ಅವಕಾಶ ಮತ್ತು ಅನ್ವಯಿಕತೆ' ಕುರಿತು ಶುಕ್ರವಾರ ಆಯೋಜಿತವಾದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನದ ಕುರಿತ ಪ್ರಾಥಮಿಕ ತಿಳುವಳಿಕೆಯ ಆಧಾರದಲ್ಲಿಯೇ ತಂತ್ರಜ್ಞಾನದ ಅನ್ವಯಿಕತೆ ರೂಪುಗೊಳ್ಳುತ್ತದೆ. ಕುತೂಹಲದ ದೃಷ್ಟಿಕೋನವು ವಿಜ್ಞಾನದ ವಿಕಾಸಕ್ಕೆ ಭದ್ರ ತಳಹದಿ. ಕುತೂಹಲದ ಪ್ರಜ್ಞೆ ನಿರಂತರವಾಗಿದ್ದರೆ ವಿಜ್ಞಾನಿಯಾಗಿ ರೂಪುಗೊಳ್ಳಬಹುದು. ಹೊಸದೊಂದನ್ನು ಹುಡುಕುವ ಹಾದಿಯು ಪ್ರಶ್ನೆಗಳ ಮೂಲಕ ಅರ್ಥಪೂರ್ಣವಾಗುತ್ತದೆ. ಅಂಥ ಪ್ರಶ್ನೆಗಳ ಮೂಲಕ ವೈಜ್ಞಾನಿಕ ರಂಗದಲ್ಲಿ ಮಹತ್ವದ್ದನ್ನು ಸಾಧಿಸಬಹುದು ಎಂದು ಹೇಳಿದರು.
ಜೀವನದ ಪ್ರತೀ ಘಟ್ಟದಲ್ಲಿ ವಿಜ್ಞಾನವ ತಂತ್ರಜ್ಞಾನದ ಕೊಡುಗೆಗಳು ಮಹತ್ವಪೂರ್ಣ ಪಾತ್ರವಹಿಸುತ್ತವೆ. ಈ ಕೊಡುಗೆಗಳನ್ನು ನೀಡುವುದಕ್ಕೆ ವಿಜ್ಞಾನಿಗಳಿಗೆ ಸಾಧ್ಯವಾಗಿದ್ದು ಅವರೊಳಗಿನ ಪ್ರಶ್ನಾತ್ಮಕ ಪ್ರಜ್ಞೆಯಿಂದ. ಇಂಥ ಪ್ರಜ್ಞೆಯು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಪೂರಕವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಫ್ರೋ.ಎಸ್.ಎನ್. ಕಾಕತ್ಕರ್ ಮಾತನಾಡಿದರು. ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳು ಪ್ರಮುಖ ಪಾತ್ರವನ್ನು ವಹಿಸಿ ಹೊಸ ವಿಚಾರಧಾರೆಗಳಿಗೆ ನಮ್ಮನ್ನು ತೆರೆದುಕೊಳ್ಳಲು ಸಹಾಯವನ್ನು ಮಾಡುತ್ತವೆ. ಮೂಲಭೂತ ವಿಷಯಗಳ ಮೊದಲ ತಿಳುವಳಿಕೆ ಅತ್ಯಗತ್ಯ. ದಿನನಿತ್ಯದ ಜೀವನದಲ್ಲಿ ಹೊಸ ತಿರುವುಗಳಿಗೆ ಇವು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೊಸ ಹೆಜ್ಜೆಯ ಜೊತೆಗೆ ಹೊಸ ಸವಾಲುಗಳು ಎದುರಾಗುತ್ತವೆ. ಸೋಲುಗಳನ್ನು ಎದುರಿಸಬೇಕು. ಸೋಲುಗಳ ಮೆಟ್ಟಿಲು ಗೆಲುವಿನೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಕುಗ್ಗದೇ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಚಾಮರಾಜನಗರದ ಗ್ರಾವಿಟಿ ಸೈನ್ಸ್ನ ಸ್ಥಾಪಕ ಹಾಗೂ ಕಾರ್ಯದರ್ಶಿ ಅಭಿಷೇಕ್ ಎ.ಎಸ್ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಪರೀಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀವಿದ್ಯಾ ಪ್ರಾರ್ಥಿಸಿದರು. ಪ್ರೀತಿ ಭಟ್ ಸ್ವಾಗತಿಸಿ ಗೀತಾಂಜಲಿ ಪೂಜಾರಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ