ರಾಮಾಯಣದ ಸತ್ವ ಎಲ್ಲರಿಗೂ ತಲುಪಲಿ: ರಾಘವೇಶ್ವರ ಶ್ರೀಗಳು

Upayuktha
0


ಮಂಗಳೂರು: ಜೀವನ ಮೌಲ್ಯಗಳನ್ನು ತುಂಬಿ ವಿಸ್ತರಿಸುವ ಎತ್ತರಿಸುವ ರಾಮಾಯಣದಂತಹ ಕತೆಗಳ ಕೃತಿಗಳು ಜನರಿಗೆ ಸುಲಭದಲ್ಲಿ ದೊರಕುವಂತಾಗಬೇಕು. ಅದರಲ್ಲೂ ಇಂದಿನ ವಿದ್ಯಾರ್ಥಿ-ಯುವ ಸಮುದಾಯಕ್ಕೆ ಅನುಕೂಲವಾಗುವಂತೆ ಸರಳವಾಗಿ ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿರುವ 'ರಾಮಾಯಣ ಹಕ್ಕಿನೋಟ'ವು ಶ್ರೀಮದ್ವಾಲ್ಮೀಕಿ ರಾಮಾಯಣದ ಮೂಲ ಕತೆಯನ್ನು ಈ ಸಮೂಹಗಳಿಗೆ ತಲಪಿಸುವ ಉದ್ದೇಶದಿಂದ ಬರೆದು ಪ್ರಕಟಿಸಿರುವುದು ಮೆಚ್ಚತಕ್ಕ ವಿಷಯವಾಗಿದೆ ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.


ಈ ಕೃತಿಯ ಮಾರಾಟದಿಂದ ಬರುವ ಆದಾಯವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಉದ್ದೇಶಿಸಿರುವ 'ದತ್ತಿನಿಧಿ'ಗೆ ಸಮರ್ಪಣೆಯಾಗಲಿರುವುದು ಲೇಖಕ ವಿಶ್ವೇಶ್ವರ ಭಟ್ಟರ ನಿಸ್ವಾರ್ಥ ಸೇವೆಯನ್ನು ತೋರಿಸುತ್ತದೆ. ಲೇಖಕರಿಗೆ ಓದುಗರಿಗೆ ಒಳಿತಾಗಲಿ, ಲೇಖಕನ ಸದಾಶಯಗಳು ಈಡೇರಲಿ ಎಂದು ಇತ್ತೀಚೆಗೆ ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ಲೋಕಾರ್ಪಣೆಗೊಂಡ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರ "ರಾಮಾಯಣ ಹಕ್ಕಿನೋಟ- A Bird's Eye View of Raamaayana ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ಹೇಳಿದರು.


ಮಂಗಳೂರಿನ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ರಶ್ಮೀ ಕೃಪಾಲು ಸುವರ್ಣರು ಇದರ ಆಂಗ್ಲ ಭಾಷಾನುವಾದವನ್ನು ಮಾಡಿದ್ದು ಒಂದೇ  ಕೃತಿಯಲ್ಲಿ ಎರಡು ಭಾಷೆಗಳಲ್ಲಿ ಮೂಲಕತೆಯನ್ನು ಹೇಳಿರುವುದು ಇದರ ವಿಶೇಷತೆಯಾಗಿದೆ. ಮುನ್ನುಡಿಯ ಮುನ್ನೋಟವನ್ನು ಬರೆದ ಖ್ಯಾತ ಲೇಖಕ ವಿದ್ವಾನ್ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕೃತಿ ಪರಿಚಯವನ್ನು ಮಾಡಿದರು.


ಖ್ಯಾತ ರಾಮಾಯಣ ಚಿತ್ರಕಲಾವಿದ ನೀರ್ನಳ್ಳಿ ಗಣಪತಿಯವರು ಮುಖಪುಟ ಚಿತ್ರ ಹಾಗೂ ಕಾಂಡಗಳ ವರ್ಣಚಿತ್ರಗಳನ್ನು ರಚಿಸಿದ್ದು 370ಕ್ಕಿಂತ ಹೆಚ್ಚಿನ ಪುಟಗಳನ್ನು ಈ ಪುಸ್ತಕವು ಹೊಂದಿದೆ. ₹500 ಮುಖ ಬೆಲೆಯ ಈ ಪುಸ್ತಕವು ಇದೀಗ ₹450 ಕ್ಕೆ ಆಸಕ್ತ ಓದುಗರಿಗೆ ಲಭ್ಯವಾಗಲಿದ್ದು ಶಾಲೆಗಳಿಗೆ ₹425 ಕ್ಕೆ ಲಭ್ಯವಾಗಲಿದೆ ಎಂದು ಲೇಖಕ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರು ತಿಳಿಸಿರುತ್ತಾರೆ. ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಅನುವಾದಕಿ ಶ್ರೀಮತಿ ರಶ್ಮೀ ಕೃಪಾಲು ಸುವರ್ಣ ದಂಪತಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top