ಪುಟಾಣಿ ಕತೆ: ಗಿಳಿ ಮತ್ತು ಕಾಗೆ

Upayuktha
0


ಒಂದು ಊರಿನಲ್ಲಿ ಒಂದು ದೊಡ್ಡ ಮಾವಿನ ಮರವಿತ್ತು. ಆ ಮರದಲ್ಲಿದ್ದ ಪೊಟರೆಯಲ್ಲಿ ಗಿಳಿಗಳೆರಡು ಗೂಡು ಕಟ್ಟಿ ವಾಸಿಸುತ್ತಿದ್ದವು. ಕೆಲವು ಸಮಯದಿಂದ ಕಾಗೆಯೊಂದು ಗಿಳಿಗಳಿಗೆ ತೊಂದರೆಯನ್ನು ಕೊಡುತ್ತಿತ್ತು. ಅದು ಗಿಳಿಗಳ ಮೊಟ್ಟೆಯನ್ನು ತಿನ್ನಲು ಹೊಂಚುಹಾಕಿ ಕಾಯುತ್ತಿತ್ತು. ಕೊನೆಗೊಮ್ಮೆ ಕಾಗೆಯು ಗಿಳಿಗಳ ಮೊಟ್ಟೆಯನ್ನು ತಿಂದೇ ಬಿಟ್ಟಿತು. ಇದರಿಂದ ಗಿಳಿಗಳಿಗೆ ಬಹಳ ಕೋಪ ಬಂದಿತು. ಕಾಗೆಗೆ ಬುದ್ಧಿ ಕಲಿಸಬೇಕು ಎಂದು ಯೋಚಿಸಿದವು. ಕೆಲವು ದಿನಗಳ ಬಳಿಕ ಗಿಳಿಗಳು ಕಾಗೆಯನ್ನು ಕರೆದು “ಕಾಗಕ್ಕ ನಾವು ಆಹಾರಕ್ಕಾಗಿ ಊರಿನ ನಡುವೆ ಹೋಗಿದ್ದೆವು. ಅಲ್ಲಿ ಒಂದು ಮನೆಯ ಅಂಗಳದ ಬದಿಯಲ್ಲಿ ಪುಟ್ಟ ಗಿಡವೊಂದರಲ್ಲಿ ಚಂದಚಂದದ, ಬಣ್ಣಬಣ್ಣದ, ಪುಟ್ಟಪುಟ್ಟ ಮೆಣಸಿನಕಾಯಿ ಇತ್ತು. ನಾವು ಒಂದನ್ನು ತಿಂದು ನೋಡಿದೆವು. ಅದು ಸ್ವಲ್ಪವೂ ಖಾರವಿರಲಿಲ್ಲ. ಸಿಹಿ ಅಂದರೆ ಸಿಹಿ. ರುಚಿಯೋ ರುಚಿ. ನಿನಗೆ ಬೇಕಿದ್ದರೆ ನಮ್ಮ ಜೊತೆಗೆ ಬಾ. ನಾವು ಆ ಸಿಹಿ ಮೆಣಸಿನ ಗಿಡವನ್ನು ತೋರಿಸುತ್ತೇವೆ” ಎಂದವು.



ಇದನ್ನು ಕೇಳಿದ ಕಾಗೆಯ ಬಾಯಿಯಲ್ಲಿ ನೀರು ಬಂತು. ಅದು ಗಿಳಿಗಳೊಡನೆ” ಹೌದಾ? ಸಿಹಿ ಮೆಣಸು ಸಹ ಬೆಳೀತಿದ್ದಾರಾ? ನಾನೂ ತಿನ್ನಬೇಕು. ತೋರಿಸಿ.. ಬನ್ನಿ” ಎಂದು ಅವಸರ ಮಾಡಿತು. ಗಿಳಿಗಳು ಕಾಗೆಯನ್ನು ಕರೆದುಕೊಂಡು ಊರಿನ ನಡುವೆ ಇದ್ದ ಮನೆಯ ಅಂಗಳಕ್ಕೆ ಹೋದವು. ಅಂಗಳದ ಬದಿಯಲ್ಲಿದ್ದ ಆ ಪುಟ್ಟ ಮೆಣಸಿನ ಗಿಡದಲ್ಲಿ ಬಿಳಿ, ಕೆಂಪು, ನೇರಳೆ ಮುಂತಾದ ಬಣ್ಣಗಳ ಮೆಣಸುಗಳು ಇದ್ದವು. ಗಿಳಿಗಳು ಹಾರಿ ಹೋಗಿ ಒಂದು ಕೆಂಪು  ಮೆಣಸನ್ನು ಎತ್ತಿಕೊಂಡು ಬಂದು ತಿನ್ನುವಂತೆ ನಟಿಸಿದವು. ಕಾಗೆಗೆ ಆಸೆ ತಡೆಯಲಾರದೆ ಅವಸರವಸರದಲ್ಲಿ ಆ ಸಣ್ಣ ಸಣ್ಣ ಮೆಣಸನ್ನು ಕುಕ್ಕಿ ಕುಕ್ಕಿ ನುಂಗಿತು. ಅದಕ್ಕೆ ತಾನು ತಿನ್ನುತ್ತಿರುವುದು ಗಾಂಧಾರಿ ಮೆಣಸು ಎಂದು ಗೊತ್ತಿರಲಿಲ್ಲ. ಬಾಯಿಯೆಲ್ಲ ಸಿಹಿಸಿಹಿಯಾಗುತ್ತದೆ ಎಂದು ಭಾವಿಸಿದ್ದ ಕಾಗೆಗೆ ಬಾಯಿ, ಗಂಟಲು, ಹೊಟ್ಟೆ ಎಲ್ಲಾ ಖಾರದಿಂದ ಉರಿಯಲು ತೊಡಗಿತು. ಜೋರಾಗಿ ಕಾಕಾ ಎಂದು ಕೂಗಿ ಕೊಂಡಿತು. ಮೆಣಸಿನ ಖಾರದಿಂದ ಅದರ ಸ್ವರವೂ  ಹಾಳಾಗಿ ಕೆಟ್ಟದಾಗಿ ಕೇಳಿತು.


ಗಿಳಿಗಳು ಅವುಗಳ ಮೊಟ್ಟೆಯನ್ನು ತಿಂದದ್ದಕ್ಕೆ ತನಗೆ ಹೀಗೆ ಶಿಕ್ಷೆಯನ್ನು ಕೊಟ್ಟಿವೆ ಎಂದು ಕಾಗೆಗೆ ಅರ್ಥವಾಯಿತು. ಅದರ ಗಂಟಲು ಏನು ಮಾಡಿದರೂ ಸರಿಯಾಗಲೇ ಇಲ್ಲ. ಈಗಲೂ ಅದು ಕ್ರಾಕ್ರಾಕ್ರಾ ಕ್ರಾ ಎಂದು ಬೊಬ್ಬೆ ಹಾಕುತ್ತಲೆ ಇದೆ. 


- ಅಕ್ಷರ ಕೆ.ಸಿ

6ನೇ ತರಗತಿ 

ಸುದಾನ ವಸತಿ ಶಾಲೆ ಪುತ್ತೂರು, ದ.ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top