- ಟಿ. ದೇವಿದಾಸ್, ಕುಮಟಾ
ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಈ ದೇಶದ ಮೂಲಧಾತುಗಳು. ಇವುಗಳ ಸಾಮಾನ್ಯಜ್ಞಾನವೂ ಇಲ್ಲದ ಭಾರತೀಯನಿಲ್ಲ. ಇವುಗಳಲ್ಲಿರುವ ಜೀವನ ಮೌಲ್ಯಗಳೇ ಭಾರತೀಯರ ನಿತ್ಯಬದುಕಿನಲ್ಲೂ ಹಾಸುಹೊಕ್ಕಾಗಿವೆ. ಮನುಷ್ಯ ಬದುಕಿಗೆ ಒದಗಬೇಕಾದ ನೈತಿಕ ಮೌಲ್ಯಗಳು ಇವುಗಳಲ್ಲಿವೆ. ರಾಮಾಯಣ ಆದಿಕಾವ್ಯವಾದರೆ ವಾಲ್ಮೀಕಿ ಆದ್ಯಕವಿಯೂ ಆಡ್ಯಕವಿಯೂ ಆದ ಮೇರುಕವಿ. ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ನೂರಾರು ವಿಮರ್ಶೆಗಳು ದೇಶಭಾಷೆಯಲ್ಲಿವೆ. ಇದು ವಾಲ್ಮೀಕಿಯ ಪ್ರತಿಭಾ ಸಾಮರ್ಥ್ಯವನ್ನು ಹೇಳುತ್ತದೆ. ಇವುಗಳ ಸಾರ್ವಕಾಲಿಕ ಮೌಲ್ಯಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ಬದುಕುವ ಈ ಕಾಲಘಟ್ಟದಲ್ಲೂ ಮಹಾಕಾವ್ಯಗಳು ಮಾರಣಾಂತಿಕ ಆಕ್ರಮಣವನ್ನೆದುರಿಸಿ ಉಳಿದುಕೊಂಡಿವೆ. ಜಗತ್ತಿನ ಯಾವ ಮಹಾಕಾವ್ಯಗಳಿಗೂ ಈ ಶಕ್ತಿ ಸಾಮರ್ಥ್ಯವಿಲ್ಲ.
ಸಂಸ್ಕೃತದ ಅಭಿಜಾತವೆಂಬ ಕಾಳಿದಾಸ, ಭವಭೂತಿ, ಭಾಸ, ಹರ್ಷ, ಬಾಣಭಟ್ಟ, ಶೂದ್ರಕರೇ ಮುಂತಾದವರ ಕಾವ್ಯನಾಟಕಗಳೂ ವಿಮರ್ಶೆಗೊಳಪಟ್ಟು ಅವುಗಳ ಶ್ರೇಷ್ಠಾಂಶಗಳು ಬದುಕಿನ ಗತಿಬಿಂಬಕ್ಕಿಳಿದಿವೆ. ವಿಮರ್ಶೆಯೆಂಬುದು ಪಾಶ್ಚಾತ್ಯರ ಮಾರ್ಗವೇ ಹೊರತು ಭಾರತೀಯ ಮೂಲದ್ದಲ್ಲ. Plot Construction ಮತ್ತು Characterisation ಎಂಬೆರಡು ಕೋನಗಳನ್ನಿಟ್ಟು ಗ್ರೀಕ್ ನಾಟಕಗಳನ್ನು ವಿಮರ್ಶಿಸಿ ಪೋಷಿಸಿದವ ಅರಿಸ್ಟಾಟಲ್. ಭಾರತೀಯ ಕೃತಿಗಳಿಗೆ ವಿಮರ್ಶೆಯ ಹಂಗಿರಲಿಲ್ಲ. ಎಲ್ಲವೂ ಅಭಿಜಾತವೇ ಆಗಿದ್ದವು. ಸುಸೂತ್ರದೊಂದಿಗೆ ಸುಖಾಂತ್ಯವಿರುವ ಭಾರತೀಯ ಕಾವ್ಯಗಳಲ್ಲಿ ದುರಂತದ ಪ್ರಜ್ಞೆಯಿಲ್ಲ. ಪಾಶ್ಚಾತ್ಯರ ಕಾವ್ಯಗಳಲ್ಲಿ ದುರಂತವೂ ಮೌಲ್ಯವಾಗುತ್ತವೆ. ಪತಿಯನ್ನು ಬಿಟ್ಟು ಇನ್ನೊಬ್ಬನನ್ನು ಕೂಡುವುದು ಅವರಿಗೆ ಮೌಲ್ಯವಾಗುತ್ತದೆ. ಪತಿಯೇ ದೇವರೆನ್ನುವ ಮೌಲ್ಯಗಳಿಗೆ ಯಾವ ವಿಮರ್ಶೆಯ ಹಂಗಿರಲಿಲ್ಲ. ಸಾಹಿತ್ಯದ ನೆಲೆಯಲ್ಲೂ ಪಾಶ್ಚಾತ್ಯರ ಬಹುಪಾಲು ಕೃತಿಗಳು ಬದುಕಿನ ಗತಿಗೆ ಅನುಸಂಧಿಸಲಾರವು. ಬದುಕಿನಲ್ಲಿ ಋಜುಮಾರ್ಗವನ್ನು ಕಂಡುಕೊಳ್ಳಲು ಇವು ಪ್ರೇರಣೆ ನೀಡಲಾರವು. ಪಾಶ್ಚಾತ್ಯದೃಷ್ಟಿಯ ವಿಮರ್ಶೆಗೊಳಪಡಿಸಿ ಅಪಸವ್ಯಗೊಳಿಸಿ, ಅಪದ್ಧಗೊಳಿಸಿ ಹೊರಗಿನ ಮಾಲಿನ್ಯವನ್ನು ನಮ್ಮ ಮಹಾಕಾವ್ಯಗಳಿಗೆ ತುಂಬುವ ದುಃಸ್ಸಾಹಸದ ದುಷ್ಟವ್ಯೂಹ ಬೆಳೆಯುತ್ತಲೇ ಇದೆ. ಹಾಗಂತ ವಿಮರ್ಶಿಸಬಾರದೆಂದಲ್ಲ. ಪ್ರಾಚೀನರು ಮನುಕುಲದ ಔನ್ನತ್ಯವನ್ನು ನಾಶಗೊಳಿಸುವಂತೆ ಯಾವುದನ್ನೂ ರಚಿಸಲಿಲ್ಲ. ಆಧುನಿಕ ವಿಜ್ಞಾನವೂ ಕಾಣದ ಜಗತ್ತನ್ನು ಕಂಡು ಕಾಣಿಸಿದ ಹಿರಿಮೆ ಅವರದ್ದು. ಕಾವ್ಯ ಕೃತಿಗಳನ್ನೋದಿ ಕೈಮುಗಿದು ಭಯ-ಭಕ್ತಿ ತೋರುವ ಭರದಲ್ಲಿ ಏನೂ ಲಾಭ ಪಡೆಯದೆ ಆತ್ಮವಂಚನೆಯನ್ನೂ ಮಾಡಿಕೊಳ್ಳಬಾರದು.
ಸಮಕಾಲೀನ ಭಾರತದಲ್ಲಿ ಮಹಾಕಾವ್ಯಗಳ ಪ್ರಸ್ತುತತೆಯನ್ನು ಅರಿಯುವುದು ಹಾಗೂ ಮಹಾಕಾವ್ಯದ ಹಿನ್ನೆಲೆ, ವೈದಿಕ ಪ್ರಾಮಾಣ್ಯ, ಶ್ಲೋಕಾರ್ಥ, ಇಂಗಿತ, ಅವುಗಳ ರಸ, ಧ್ವನಿ, ಅಲಂಕಾರಗಳ ಬಗ್ಗೆ ತಿಳಿಯುವುದು- ಎರಡೂ ಬಹುಮುಖ್ಯವೇ. ಭಯೋತ್ಪಾದನೆಯ ಸುಳಿಯಲ್ಲಿ ಜಗತ್ತು ಸಿಲುಕಿದೆ. ಕೇವಲ ವೈಜ್ಞಾನಿಕ ಪ್ರಗತಿ, ಅಭಿವೃದ್ಧಿ, ಅಂತಾರಾಷ್ಟ್ರೀಯ ವ್ಯಾಪಾರ-ವಾಣಿಜ್ಯೋದ್ಯಮಗಳ ಅರಿವಾದರೆ ಸಾಲದು. ಧರ್ಮಾಂಧತೆಯ ಕ್ರೂರ ಶಕ್ತಿ, ಅದರ ವಿಕೃತ ಮುಖಗಳು, ನಾನು ಮಾತ್ರ ಬದುಕಬೇಕೆಂಬ ವಿಷಮ, ಮೃತ್ಯು ಸದೃಶ ಮತೀಯತೆ, ಮಾರೀಚ ರಾವಣ ಕಂಸ ದುರ್ಯೋಧನ ನರಕ ತಾರಕರೇ ಮುಂತಾದ ವೇಷಗಳನ್ನು ಅರಿತು ನಿಗ್ರಹಿಸದೆ ಕೇವಲ ಬೇಲಿಯನ್ನು ಭದ್ರಗೊಳಿಸಿದರೆ ಯಾವ ಸಾಧನೆಯೂ ಫಲಿಸುವುದಿಲ್ಲ. ಎಲ್ಲ ತಪ್ಪುಗಳನ್ನು ಮನ್ನಿಸಿ ಔದಾರ್ಯದ ಹೆಜ್ಜೆಗಳನ್ನಿಡುವ ಸೋಗಿನ ಬದುಕಿಗೆ ವಿರಾಮ ಹಾಕಬೇಕಿದೆ. ಕೇಡಿನ ಅರಿವಿಲ್ಲದ ಒಳಿತಿಗೆ ಅರ್ಥವಿಲ್ಲ. ಭಾರತವನ್ನು ಸಹಸ್ರ ವರ್ಷಗಳ ದಾಸ್ಯಕ್ಕೆ ನೂಕಿದ್ದೇ ಈ ಅನಿಷ್ಟ ಪರಾಂಙ್ಮುಖದ ನಮ್ಮ ಔದಾರ್ಯ. ಪ್ರಾಚೀನ ಋಷಿ ಪರಂಪರೆಯಂತೆ ಬಿಸಿರಕ್ತ ಸಂಚಲನೆಗೊಂಡು ನಿರ್ದಿಷ್ಟ ಧೋರಣೆಯ ಕಾಯಕಲ್ಪ ಸಿದ್ಧವಾಗಬೇಕಿದೆ.
ರಾಮಾಯಣದ ಅಂದಿನ ಸಂದರ್ಭವನ್ನೂ ಸರಿಹೊತ್ತಿನ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ರಾಜಕೀಯವೆಂಬುದು ಮಾರೀಚನಂತೆ. ಬಿಟ್ಟರೂ ಬಿಡದು. ರಾಮ ೧೪ ವರ್ಷ ಕಾಡಿಗೆ ಹೋಗಲಿ ಎಂದಷ್ಟೇ ಕೈಕೆ ದಶರಥನಲ್ಲಿ ಕೇಳಿದ್ದಳು. ಮಾರೀಚನನ್ನು ಕೊಲ್ಲಲಿ ಎಂದಿರಲಿಲ್ಲ. ಆದರೂ ಮಾರೀಚ ವಧೆಯಾಯಿತು. ಮಾರೀಚ ಪ್ರಕರಣವೊಂದು ಆಗದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲ. ಮಾರೀಚ ಕೇವಲ ಪ್ರಾತಿನಿಧಿಕ ರೂಪವಾಗಿ ಕಾಣುತ್ತದೆ. ಅದರ ಹಿಂದಿರುವ ರಾಮನಿರ್ನಾಮದ ಹುನ್ನಾರದ ದುಷ್ಟಶಕ್ತಿಯನ್ನು ಅರಿಯದೇ ಹೋದರೆ ರಾವಣ ಕಾಣಲಾರ. ಜಗತ್ತನ್ನು ಕಾಡುವ ಭಯೋತ್ಪಾದನೆಯ ಹಿಂದೆ ರಾವಣ-ದುರ್ಯೋಧನನಂಥವರ ವ್ಯೂಹವನ್ನು ಕಾಣಬೇಕಿದೆ. ಇಲ್ಲದೆ ಹೋದರೆ ಚಿನ್ನದ ಜಿಂಕೆಯನ್ನು ಕಂಡು ಸೀತಾಮಾತೆ ಮರುಳಾದಂತೆ ಮರುಳಾಗಿ ಮಾರೀಚನ ಜಾಲಕ್ಕೆ ಸಿಲುಕಿ ಹಿಂದೆ ಅನುಭವಿಸಿದ ಕೆಟ್ಟದಿನಗಳನ್ನು ಕಾಣಬೇಕಾದೀತು. ರಾವಣಸ್ವರೂಪೀ ರಾಜಕೀಯವನ್ನು ಗ್ರಹಿಸಬೇಕಿದೆ. ಇದು ನಮ್ಮನ್ನು ಆಳುವವರನ್ನು ಎಚ್ಚರಿಸುತ್ತದೆ. ಎಚ್ಚರಿಸಬೇಕು. ಮಹಾಕಾವ್ಯಗಳಲ್ಲಿ ಒಳ್ಳೆಯದನ್ನು ಮಾತ್ರ ಗ್ರಹಿಸಿದರೆ ಸಾಲದು. ಕೆಡುಕನ್ನೂ ಹುಡುಕಬೇಕು. ಪ್ರಜೆಗಳಿಗೆ, ಪ್ರಭುತ್ತ್ವಕ್ಕೆ ಇದುವೇ ಮುಖ್ಯ.
ನರನೂ ನಾರಾಯಣನೂ ಆಗಿದ್ದ ಶ್ರೀರಾಮ ಮಾರೀಚನ ಮಾಯದ ಬಲೆಗೆ ಬೀಳಲಿಲ್ಲವೆ? ರಾವಣನೊಂದಿಗಿನ ಯುದ್ಧದಲ್ಲಿ ಸೋಲನ್ನು ಅನುಭವಿಸಿ ಶ್ರೀರಾಮ ಪ್ರಾಣ ಉಪವೇಶಕ್ಕೂ ಮುಂದಾಗಲಿಲ್ಲವೆ? ರಾಮಾಯಣ ನಡೆಯಲು ಪ್ರಕಟ ಮಾರೀಚ ಎಷ್ಟು ಕಾರಣವೋ ಇನ್ನೊಂದು ಪ್ರಬಲ ಕಾರಣವಿದೆ. ಅದು ಶೂರ್ಪನಖೀ ಮೂಲದ್ದು. ಶೂರ್ಪನಖೀ ದುಷ್ಕಾಮದಿಂದ ಒಲಿದು ಬಂದ ಸ್ತ್ರೀಶಕ್ತಿ. ಇದರ ಮೂಲವಿರುವುದು ರಾವಣ ಹೆಣೆದ ಮಾಯಾಜಾಲದಲ್ಲಿ. ಅಚ್ಚರಿಯೆಂದರೆ, ರಾವಣ ಸತ್ತಾಗಲೂ ಇವಳು ಅಳುವುದಿಲ್ಲ. ದುರ್ಯೋಧನ ಸತ್ತ ಮೇಲೂ ಚಿರಂಜೀವಿಯಾಗಿ ಉಳಿದು ಊರೂರು ಅಲೆಯುವ ಅಶ್ವತ್ಥಾಮನಿಗೂ, ಇವಳಿಗೂ ಏನೂ ವ್ಯತ್ಯಾಸ ಕಾಣುವುದಿಲ್ಲ! ಶೂರ್ಪನಖಿಯ ಮುಗ್ಧ ಕಾಮದಾಹಕ್ಕೆ ಅವಳ ಮೂಗನ್ನು ಕೊಯ್ಯುವುದೇ ಎಂಬಷ್ಟು ಅವಳ, ಅವಳ ಹಿಂದಿರುವ ದುಷ್ಟವ್ಯೂಹ ಸಹಾನುಭೂತಿಯನ್ನು ಹುಟ್ಟಿಸುತ್ತದೆಯೆಂದರೆ ಈ ವಂಚನೆಯ ಜಾಲದ ಸಾಫಲ್ಯವನ್ನು ಗ್ರಹಿಸಬಹುದು! ಎಷ್ಟು ವಿಚಿತ್ರವಾದರೂ ಈ ಸಂಗತಗಳನ್ನು ನೋಡಿ: ತಾಟಕೆಯನ್ನು ಕೊಂದ ರಾಮ ಶೂರ್ಪನಖಿಯನ್ನು ಕೊಲ್ಲಲಿಲ್ಲ. ಅಹಲ್ಯೆಯನ್ನು ಉದ್ಧರಿಸಿದ ರಾಮ ಶೂರ್ಪನಖಿಯನ್ನು ಉದ್ಧರಿಸಲಿಲ್ಲ. ಜನಸ್ಥಾನದಲ್ಲಿ ೧೪ ಸಾವಿರ ಸೈನಿಕರನ್ನೂ ಕೊಂದ ರಾಮ ಕಿಷ್ಕಿಂಧೆಯಲ್ಲಿ ವಾಲಿಯನ್ನು ಮಾತ್ರ ಕೊಂದ; ಅದೂ ವಿವಾದದ ತೆರದಿ! ವಾನಪ್ರಸ್ಥನಾಗಿಯೂ ತಪಸ್ವಿಯಾಗಲಿಲ್ಲ. ಉಟ್ಟಬಟ್ಟೆಯಲ್ಲೇ ಕಾಡಿಗೆ ಹೋದ ರಾಮನಿಗೆ ಬಿಲ್ಲುಬಾಣಗಳ ಅಗತ್ಯವೇನಿತ್ತು? ಕಾಡಿನಲ್ಲಿದ್ದೂ ಅವನಿಗೆ ರಾಜಕಾರಣ ಏಕೆ ಬೇಕಿತ್ತು? ದುರ್ಬಲನಾದ ಸುಗ್ರೀವನ ಸಖ್ಯ ಬೆಳೆಸಿ ಸೀತೆಯ ಅನ್ವೇಷಣೆಗೆ ಮುಂದಾದ ರಾಮ ಬಲಾಢ್ಯನಾದ ವಾಲಿಯ ಸಹಾಯವನ್ನು ಏಕೆ ಯಾಚಿಸಲಿಲ್ಲ? ಸಮುದ್ರದಲ್ಲಿ ಕಲ್ಲುಗಳನ್ನು ತೇಲಿಸಿ ಸೇತುವೆ ಕಟ್ಟಿದವನಿಗೆ ಕಪಿಗಳ ಸಹಾಯ ಬೇಕಿತ್ತೇ? ಅದು ಬಿಡಿ. ರಾಮನ ರಕ್ಷಣೆಗೆ ಭರತ ಸೈನ್ಯವನ್ನು ಕಳಿಸಬಹುದಿತ್ತು, ಅಲ್ಲವೆ? ರಾವಣನನ್ನು ಕೊಂದ ರಾಮನಿಗೆ ವಿಭೀಷಣನ ಮೇಲೆ ಏಕೆ ಮೃದುಭಾವ ಹುಟ್ಟಿತು? ಶಂಭೂಕ ವಧೆಗೆ ಏನರ್ಥ? ಬದುಕಿನ ಉದ್ದಕ್ಕೂ ನೆರಳಿನಂತೇ ಇದ್ದ ಲಕ್ಷ್ಮಣನನ್ನು ಏಕೆ ರಾಮ ಗಡಿಪಾರು ಮಾಡಿದ? ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ- ಎಂದಷ್ಟೇ ಹೇಳಿಕೊಂಡ ರಾಮನ ಬದುಕನ್ನು ಕೇವಲ ನರನಾಗಿ ಮಾತ್ರ ವ್ಯಾಖ್ಯಾನಿಸಲು ಸಾಧ್ಯವೇ?
ಎಷ್ಟೇ ಆಳಕ್ಕಿಳಿದು ವಿಶ್ಲೇಷಿಸಿದರೂ ಕೊನೆಗೊಂದು ನಿಚ್ಚಳ ದೈವೀ ಅಂಶವನ್ನು ವಾಲ್ಮೀಕಿ ಬಿಗಿಯಾದ ಬಂಧದಲ್ಲಿ ಇಟ್ಟಿದ್ದಾನೆ. ಅದೊಂದು ಗಾಢ ಆಧ್ಯಾತ್ಮ. ಇದಿಲ್ಲದೆ ಮನುಷ್ಯತ್ವಕ್ಕೆ ಅರ್ಥವಿಲ್ಲ. ಆದರೆ ಕಥೆಯನ್ನಷ್ಟೇ ಓದುವವರಿಗೆ ಈ ಗಾಢತೆಯ ಅರಿವಾಗದು. ಕೇವಲ ಕಾವ್ಯಪ್ರೌಢಿಮೆಯನ್ನು ಕಾಣುವವರಿಗೆ ಇಲ್ಲಿರುವ ದೈವೀಮರ್ಮಗಳು ಕಾಣಲಾರವು. ಆಲೋಚಿಸಿ: ರಾಮನ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ ದೈವೀವಿಲಾಸ ಬೇರೆಯೇ ಇತ್ತು. ಪಾದುಕಾ ಪಟ್ಟಾಭಿಷೇಕ ನಡೆದೇ ಹೋಯಿತು. ರಾಮ ವನವಾಸಿಯಾದ. ದಶರಥ ಮಾಡಿದ ನಿರ್ಣಯ, ವರದಾನ ತಪ್ಪು ಎಂದು ರಾಮನಿಗೂ ಗೊತ್ತು. ಅದನ್ನು ಆಗಲೇ ನಿವಾರಿಸಬಹುದಿತ್ತು. ಅಲ್ಲೇ ಪಟ್ಟಾಭಿಷೇಕ ಮಾಡಿಕೊಳ್ಳುವ ಶಕ್ತಿಯೂ ಇತ್ತು. ಆದರೆ ರಾಮ ಕಾಡಿಗೆ ಹೊರಟ. ರಾಮನ ಧರ್ಮಪ್ರಜ್ಞೆಗೆ ಸಾಟಿಯಿದೆಯೇ? ಬಾಳಿಬದುಕಿ ಸಂಸಾರದ ಎಲ್ಲ ಸಾಧ್ಯತೆಗಳನ್ನೂ ಅನುಭವಿಸಿ ಮಕ್ಕಳು-ಮೊಮ್ಮಕ್ಕಳನ್ನೂ ಪಡೆದು ಜೀವನಸಂಧ್ಯೆಯಲ್ಲಿ ಕಾಣಬೇಕಾದ ಆಶ್ರಮಕ್ಕೆ ಬಾಲಕ ರಾಮ ಹೊರಟೇಬಿಟ್ಟ. ವಾರ್ಧಕೇ ಮುನಿವೃತ್ತೀನಾಂ- ಎನ್ನುತ್ತಾನೆ ಕಾಳಿದಾಸ ರಘುವಂಶದಲ್ಲಿ. ಇಕ್ಷ್ವಾಕು ಸಂಪ್ರದಾಯವಿದು. ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟುನಿಂತ ರಾಮನನ್ನು ಸೇರಿರುವ ಎಲ್ಲರೂ ಅಚ್ಚರಿಗೊಂಡು ಪ್ರಶ್ನಿಸುತ್ತಾರೆ. ಭರತನು ಬಲುಗಂಭೀರವಾಗಿಯೇ ರಾಮನಿರ್ಣಯವನ್ನು ಪ್ರಶ್ನಿಸುತ್ತಾನೆ. ಆದರೆ ಯಾವುದಕ್ಕೂ ರಾಮ ಪ್ರತಿಕ್ರಿಯಿಸುವುದೇ ಇಲ್ಲ, ಉತ್ತರಿಸುವುದೂ ಇಲ್ಲ; ಭರತನ ಮಾತಿನಲ್ಲಿರುವ ಸತ್ಯವನ್ನು ಅರಿತೂ! ಹಾಗಾದರೆ ರಾಮನಡೆಯ ಮರ್ಮವೇನು? ಇಷ್ಟೇ: ಮೊದಲು ರಾಷ್ಟ್ರರಕ್ಷಣೆ. ದುಷ್ಟ ದಮನ. ದುಷ್ಟಸಂಹಾರ. ಸಾತ್ವಿಕತನದ ಉಳಿವು. ಆಮೇಲೆ ಪಟ್ಟಾಭಿಷೇಕ. ಸ್ವಂತದ್ದನ್ನು ಬಿಟ್ಟಾಗಲೇ ಸಂತನಾಗುವುದು. ರಾಮನ ಮನದಿಂಗಿತವೇ ಹೀಗಿತ್ತೆನ್ನುತ್ತದೆ ವಾಲ್ಮೀಕಿ ರಾಮಾಯಣ. ಅಂತೂ ವನವಾಸವೆಂಬುದು ರಾಮನೊಳಿತಿಗಾಗೇ ಆಯಿತು. ದಶರಥನಿಗಿದ್ದ ಮುನಿಶಾಪದ ಅರಿವು ಕೈಕೇಯಿಗೆ ಗೊತ್ತಿತ್ತು. ಅದು ರಾಮನ ಅಂತ್ಯ ರೂಪದಲ್ಲಿ ಕೊನೆಯಾಗಬಾರದೆಂಬ ಉದ್ದಿಶ್ಯವೂ ಇತ್ತು. ಅರಾಜಕತೆ ಸೃಷ್ಟಿಯಾಗದಂತೆ ರಾಮನ ಪಾದುಕೆಯನ್ನಿಟ್ಟು ಭರತ ಅಯೋಧ್ಯೆಯನ್ನು ಕಾಪಾಡಿದ. ರಾಮನ ವನವಾಸವೂ ಭಾರತದ ಪಾಲಿಗೆ ಹಿತವನ್ನೇ ನೀಡಿತು. ದುಷ್ಟ ಸಂಹಾರ-ಶಿಷ್ಟರಕ್ಷಣೆಯಾಯಿತು. ರಾವಣ ಸಂಹಾರವಾಗಿ ಲಂಕೆಗೆ ಹೊಸದಿನಗಳು ಬಂದವು. ಇವೆಲ್ಲ ದೈವಿಮರ್ಮವೇ! ಹೀಗೆ ವಾಲ್ಮೀಕಿ ತನ್ನ ಕೃತಿಯಲ್ಲಿ ಅಡಗಿಸಿಟ್ಟ ಬೆರಗುಗಳೆಷ್ಟೋ!
ಇದು ಅಭೂತಪೂರ್ವ ಕೃತಿಯೆನಿಸಲು ಬಹುಕಾಲ ಸಂದಿರಬೇಕು. ರಾಮಾಯಣಕ್ಕೆ ಬೇಕಾದ ಸಕಲ ಪರಿಕರಗಳು ಸಿದ್ಧವಿದ್ದರೂ ವಾಲ್ಮೀಕಿಯಂಥ ಕವಿಗೆ ಕಾದು ಕೃತಿಯಾಗಿರಬೇಕು ಅನಿಸುತ್ತದೆ. ಈ ಬಗೆಯ ಕಾಯುವಿಕೆಯೂ ಒಂದು ತಪಸ್ಸು. ಇಂಥ ಉದಾತ್ತ ಕಾವ್ಯಕೃತಿಯಾಗಿ ರಾಮಾಯಣ ಮೂಡಲು ಅದು ಎಲ್ಲವನ್ನೂ ತನ್ನ ಗರ್ಭದಲ್ಲಿ ಅಡಗಿಸಿಕೊಳ್ಳಲು ಬಲಿತಾಗ ಮಾತ್ರ. ರಾಮಕಥೆ ಕೇವಲ ಕಥೆಯಷ್ಟೇ ಅಲ್ಲ. ಕವಿಯ ಕಾವ್ಯಧರ್ಮವೂ ಹೌದು. ಆ ಕಾವ್ಯಕ್ಕೆ ಸಂಪೂರ್ಣ ಆಕೃತಿ ದೊರಕಿದ್ದು ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನಿಂದಾಗಿ. ಒಮ್ಮೆ ರಾಮಾಯಣ ಸೃಷ್ಟಿಯಾಯಿತೋ ಅದು ಅರಿವಿನ ಸ್ಫೋಟ. ಇತಿಹಾಸದ ಗತಿ ಮೊದಲಿನಂತಿರಲು ಸಾಧ್ಯವಿಲ್ಲ. ಆದುದರಿಂದಲೇ ರಾಮಾಯಣವನ್ನೇ ಒಂದು ಇತಿಹಾಸವನ್ನಾಗಿ ಕಾಣಿಸಬೇಕಾಯಿತು. ಇದನ್ನು ನಾನು ಒಳಗೊಳ್ಳುವಿಕೆಯ ಇತಿಹಾಸ ಎನ್ನುತ್ತೇನೆ. ಆದುದರಿಂದಲೇ ರಾಮಾಯಣ ದಿಗ್ವಿಜಯದ, ಆಕ್ರಮಣದ ವೃತ್ತಾಂತವಲ್ಲ; ಆಕ್ರಮಣಕ್ಕೆ ಒಳಗಾದ ರಾಮ- ಸೀತೆಯರ ವೃತ್ತಾಂತ. ಎಲ್ಲ ಮುಗಿದ ಮೇಲೆ ಕನಕ ಲಂಕೆಯ ಮಣ್ಣಿನಲ್ಲಿ ನಿಂತು ತನ್ನ ಅಯೋಧ್ಯೆಯನ್ನು ರಾಮ ನೆನೆಯುತ್ತಾನೆ. ಲಂಕೆಯಲ್ಲಿ ಅವನು ಬಂದ ಕುರುಹು ಯಾವುದೂ ಇಲ್ಲ. ಇರಬಾರದು. ಸೇತುವೆ ಕೂಡ ಭಗ್ನ! ವಾಲ್ಮೀಕಿ ದೊಡ್ಡವನು. ಒಳಗೊಳ್ಳುವುದು ಮತ್ತು ಒಳಗೊಳ್ಳುವುದಕ್ಕಾಗಿ ಮಾಗುತ್ತಾ ಕಾಯುವುದು ಅವನ ಧರ್ಮ. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು ಪುರುಷೋತ್ತಮನ ಆ ಅಂಥ ರೂಪುರೇಖೆ? ಅವನು ಕವಿಯಾದದ್ದು ನಮ್ಮ ಪುಣ್ಯ ಎನ್ನುತ್ತಾರೆ ಹಿರಿಯ ಚಿಂತಕ, ವಿದ್ವಾಂಸ ಶ್ರೀ ಲಕ್ಷ್ಮೀಶ ತೋಳ್ಪಾಡಿ. ರಾಮಾಯಣವನ್ನು ನಿಸರ್ಗಭವ್ಯ ಮಹಾವನ ಎಂದವರು ಶತಾವಧಾನಿ ಡಾ.ಆರ್.ಗಣೇಶ್. ವಾಲ್ಮೀಕಿ ರಾಮಾಯಣವೇ ಇತಿಹಾಸ, ಉಳಿದವು ಕಾವ್ಯ. ಅದಕ್ಕೆಂದೇ ಅದನ್ನು ಶ್ರೀರಾಮಾಯಣ, ಶ್ರೀಮತ್ ವಾಲ್ಮೀಕಿ ರಾಮಾಯಣ ಎನ್ನುವರು. ವಾಲ್ಮೀಕಿಯು ಮಹಾಚತುರ. ಅವನ ಭಾಷೆ ದ್ರಾಕ್ಷಾಕಲ್ಪದಷ್ಟು ಲಲಿತ; ಭೋಗ್ಯ, ರಸಮಯವಾದುದು. ಪ್ರಧಾನವಾಗಿ ಅವನು ಕವಿ. ಕವಿ ಹೃದಯದ, ಋಷಿ ದರ್ಶನದ, ಕೋಮಲ ಹೃದಯದ, ಚುರುಕುಗಣ್ಣಿನ ಇತಿಹಾಸಕಾರ ಅವನು. ಶ್ರೀರಾಮಾಯಣ ಒಂದು ಸಮುದ್ರದಂತೆ. ಬೇಕಾದವರು ತಮ್ಮತಮ್ಮ ಅಭಿರುಚಿಗಳಿಗೆ ತಕ್ಕಂತೆ ಅನರ್ಘ್ಯ ರತ್ನಗಳನ್ನು ಇದರಲ್ಲಿ ಆಯ್ದುಕೊಳ್ಳ ಬರುವುದು. ಸಮುದ್ರವಿವ ರತ್ನಾಢ್ಯಂ, ಸರ್ವಶ್ರುತಿ ಮನೋಹರಂ- ಎಂಬುದರ ಅರ್ಥ ಇದು. ಉತ್ತಮ ಸಮಾಜಪ್ರಜ್ಞೆ, ಉತ್ತಮ ರಾಜಕೀಯ ಪ್ರಜ್ಞೆ, ರಾಜಲಕ್ಷಣ, ಪ್ರಜಾಲಕ್ಷಣ, ಉತ್ತಮ ಆರ್ಥಿಕವ್ಯವಸ್ಥೆ, ರಾಜನ ಹಣಕಾಸು ಧೋರಣೆಗೆ ಮಾದರಿ, ಉತ್ತಮ ಸಂಸಾರದ ಲಕ್ಷಣ, ಸುಖ ಸಹಜೀವನಕ್ಕೆ ಸೂತ್ರಗಳು, ವ್ಯಕ್ತಿಯ ಉತ್ಕರ್ಷಕ್ಕೆ ಸೋಪಾನ, ಅದರ ನಿಬಂಧನೆಗಳನ್ನು, ಸುಖ ದುಃಖ ವಿಚಾರ ಸಮನ್ವಯ, ಶಾಂತಿಗೆ ಅವಶ್ಯವಾದ ಸಾಮಾಜಿಕ ಚೌಕಟ್ಟಿನ ಕಲ್ಪನೆ, ಆಧ್ಯಾತ್ಮದ ಸೂತ್ರಗಳು, ಅದರ ಉತ್ತಮ ಕಲ್ಪನೆ- ಇವೆಲ್ಲ ಶ್ರೀರಾಮಾಯಣದಲ್ಲಿವೆ. ಕೇವಲ ಶಬ್ದ ಚಮತ್ಕಾರಗಳಿಂದೊಡಗೂಡಿದ ಬಿಡಿ ರಾಮಾಯಣಗಳೂ, ವ್ಯಾಕರಣ ಪ್ರಯೋಗ ತೋರಿಸಲು ಕವಿಗಳು ಬರೆದವೂ, ಈ ಕಾಲದ ಗಾಂಧೀವಾದವನ್ನೂ, ಸರ್ವೋದಯ ವಾದವನ್ನೂ ಅಳವಡಿಸಿ ಬರೆದವೂ, ಹೀಗೆ ನಾನಾ ದೃಷ್ಟಿಯಿಂದ ಬರೆದವು ಇಂದು ನಮ್ಮೆದುರು ಇವೆ. ಮೂಲ ವಾಲ್ಮೀಕಿ ಕೃತಿಯನ್ನು ಬಿಟ್ಟರೆ ತಮಿಳಿನ ಕಂಬ ಮಹಾಕವಿಯ ರಾಮಾಯಣವೂ, ಹಿಂದಿಯ ತುಳಸೀ ರಾಮಾಯಣವೂ ಬಹುಸುಂದರವಾಗಿದ್ದು ಮೂಲದ ದರ್ಶನಕ್ಕೆ ಬಹು ಸಮೀಪದಲ್ಲಿವೆ. ಭೋಜನ ಚಂಪೂ ರಾಮಾಯಣವೂ ಅಷ್ಟೇ. ಉಳಿದವು ಭಿನ್ನರೀತಿಯ ದರ್ಶನಗಳನ್ನೂ ಉದ್ದೇಶಗಳನ್ನೂ ಹೊಂದಿವೆ ಎನ್ನಬೇಕು. ಆದರೆ ಈ ಯಾವುವೂ ವಾಲ್ಮೀಕಿಯ ಮಾನವತೆ, ಮಾನವೀಯತೆ, ದೈವೀಕಲ್ಪನೆಗಳ ದರ್ಶನ ಸಮಗ್ರತೆಯ ಪೂರ್ಣತ್ವದ ಶಿಖರದ ಎತ್ತರಕ್ಕೇರಲಾರವು ಎಂಬುದು ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ಅಂಬೋಣ.
ಶ್ರೀರಾಮಾಯಣ ಎಂದೋ ಮುಗಿದುಹೋದ ಕಥೆಯಲ್ಲ. ಇಂದಿಗೂ ನಡೆಯುತ್ತಲೇ ಇರುವ ಕಥೆ. ಮಹಾಕಾವ್ಯಗಳ ಅರ್ಥವ್ಯಾಪ್ತಿಯ ವ್ಯಾಪಕತೆಗೆ ಇದು ಮೂಲಹೇತು. ನಾವು ಬದುಕುವ ಪ್ರಪಂಚದಲ್ಲಿ ಕೌಸಲ್ಯೆ, ರಾಮ, ಸೀತೆ, ಲಕ್ಷ್ಮಣ, ಭರತ, ಸೌಮಿತ್ರೆ, ಹನೂಮಂತ, ವಿಭೀಷಣ, ಶಬರಿ, ಗುಹರಂಥವರನ್ನು ಗುರುತಿಸುವುದು ಕಷ್ಟವಾದೀತು. ಆದರೆ ರಾವಣ, ಕುಂಭಕರ್ಣ, ಮಾರೀಚ, ಸುಬಾಹು, ಕೈಕೇಯಿ, ಮಂಥರೆಯಂಥ ಸ್ವಭಾವದವರನ್ನು ಗುರುತಿಸಬಹುದು! ಆತ್ಮವಂಚಕರು ಎಲ್ಲೆಲ್ಲೂ ಇದ್ದಾರೆಂಬುದು ರಾಮಾಯಣ ಹೇಳುತ್ತದೆ. ಬ್ರಹ್ಮದೇವ ಹೇಳುತ್ತಾನೆ: ಯಾವತ್ ಸ್ಥಾಸ್ಯನ್ತಿ ಗಿರಯಃ ಸರಿತಶ್ಚ ಮಹೀತಲೇ| ತಾವತ್ ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ||- ಭೂಮಿಯ ಮೇಲೆ ಬೆಟ್ಟಗಳೂ ನದಿಗಳೂ ಇರುವ ತನಕ ರಾಮಾಯಣ ಕಥೆಯೂ ಲೋಕಗಳಲ್ಲಿ ಪ್ರಚಾರದಲ್ಲಿರುತ್ತದೆ. ಮನುಷ್ಯ ಸ್ವಭಾವದ ಶ್ರೇಷ್ಠ-ಕನಿಷ್ಠ ನಡತೆಗಳ, ಸಂಘರ್ಷಗಳ ಪರಿಣಾಮಗಳ ಕಥೆಯಿದು. ಈ ಹಿನ್ನೆಲೆಯಲ್ಲಿ ಶ್ರೀರಾಮಾಯಣದ ಮರು ಓದು ಮತ್ತೆಮತ್ತೆ ಆಗುತ್ತಲೇ ಇರಬೇಕು. ಎಲ್ಲದಕ್ಕೂ ವಾಲ್ಮೀಕಿ ಕೃತಿಯೇ ಮೂಲವಾಗಬೇಕು. ಇಂಥ ಸೃಜನಶೀಲ ಆಕೃತಿಗಳೆಲ್ಲವೂ ಕಾವ್ಯ ಪ್ರಪಂಚಕ್ಕೆ ಬೇಕು. ಆದರೆ ಸಾರ್ವಕಾಲಿಕ ಮೌಲ್ಯಗಳನ್ನು ಅಲ್ಲಗಳೆಯುವ ಕುಯುಕ್ತಿ ಸಲ್ಲದು. ಅಂತಾರಾಷ್ಟ್ರೀಯ ರಾಮಾಯಣ ಸಮ್ಮೇಳನವನ್ನು ಮೊದಲು ಆಯೋಜಿಸಿದವರು ಇಂಡೋನೇಷ್ಯಾದ ಮುಸಲ್ಮಾನರು. ಇವೇ ಜಪಾನಿನಲ್ಲಿ ಎನಿಮೇಟೆಡ್ ಚಿತ್ರಗಳಾಗಿವೆ. ದೇಶಭಾಷೆಯಲ್ಲಷ್ಟೇ ಅಲ್ಲದೆ ರಷ್ಯನ್ ಭಾಷೆಗೂ ರಾಮಾಯಣ ಅನುವಾದವಾಗಿದೆ. ಹಿಂದೂಗಳನ್ನು ಕ್ರೈಸ್ತರನ್ನಾಗಿ ಪರಿವರ್ತಿಸುವ ಅವಸರದಲ್ಲಿ ನಮ್ಮ ಮಹಾಕಾವ್ಯಗಳು ಆಂಗ್ಲಭಾಷೆಗೆ ತರ್ಜುಮೆಗೊಂಡವು. ಕೆಲವು ಕ್ರೈಸ್ತಮಿಶನರಿಗಳು ಭಾರತೀಯರಾದರು. ಮತಾಂತರಿಸಲು ಬಂದವರೇ ಮತಾಂತರಗೊಂಡರು. ಅಂಥ ಮಹಾಕಾವ್ಯಗಳಿವು. ರಾಮಾಯಣದ ಪಠನ, ವಾಚನ, ಕೀರ್ತನ, ಪ್ರವಚನ, ಉಪನ್ಯಾಸ ಮಾಡುವ ಸಂತರು, ಸಂನ್ಯಾಸಿಗಳು, ಸ್ವಾಮೀಜಿಗಳು, ಸಾಧುಗಳು ಈ ನೆಲದಲ್ಲಿದ್ದಾರೆ. ಉಪಜೀವನಕ್ಕೂ ಇದು ಆಧಾರಸ್ತಂಭವಾಗಿದೆ. ಮನೆಮನೆಗಳಲ್ಲಿ ನಿತ್ಯವೂ ಪಠಿಸುವವರಿದ್ದಾರೆ.
ಅಂದು ರಾಮನ ಸಂಕಷ್ಟಕ್ಕೆ ಮನುಷ್ಯರಾರೂ ಒದಗದೆ ಕಪಿಸೈನ್ಯ ಬರಬೇಕಾಯಿತು. ವಾಲ್ಮೀಕಿಯನ್ನು, ರಾಮ-ಸೀತೆಯರನ್ನು ಅವಾಚ್ಯ ಪದಗಳಿಂದ ಸಂಬೋಧಿಸಿದವರಿದ್ದಾರೆ. ಜಾತಿಯ ಹಿನ್ನೆಲೆಯಿಂದ ವಾಲ್ಮೀಕಿ ಬೇಕು, ಆದರೆ ರಾಮ-ರಾಮಾಯಣ ಬೇಡ. ವ್ಯಾಸ ಬೇಕು, ಶ್ರೀಕೃಷ್ಣ ಬೇಕು. ಓಟ್ ಬ್ಯಾಂಕ್ ರಾಜಕೀಯದ ತುಷ್ಟೀಕರಣದ ಪ್ರತಿಫಲನವಾಗಿ ಮಹಾಕಾವ್ಯಗಳು ಕೇವಲ ತೋರಿಕೆಗಷ್ಟೇ ಆದರ್ಶವಾಗುತ್ತಿದೆ. ರಾಮನ ಆದರ್ಶವು ರಾಜಕಾರಣಕ್ಕೆ ಬೇಕೆಂದು ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳು ವೇದಿಕೆಯಲ್ಲಿ ಮಾತಾಡುತ್ತಾರೆ. ರಾಮಮಂದಿರ ವಿಚಾರವನ್ನಿಟ್ಟುಕೊಂಡು ಹಿಂದೂಗಳ ಮನಕ್ಕೆ ನೋವಾಗುವಂತೆಯೂ ಪ್ರತಿಕ್ರಿಯಿಸುತ್ತಾರೆ. ರಾಮಮಂದಿರ ಏಕೆ ಬೇಕು? ರಾಮನೆಂಬವ ಕಾಲ್ಪನಿಕ ವ್ಯಕ್ತಿ, ಸೇತುವೆ ಕಟ್ಟುವುದಕ್ಕೆ ಅವನು ಯಾವ ವಿವಿಯಲ್ಲಿ ಇಂಜನಿಯರಿಂಗ್ ಮಾಡಿದ್ದಾನೆ? ಭಗವದ್ಗೀತೆ ಯಾಕೆ ಬೇಕು? ಇಂಥ ಬೌದ್ಧಿಕ ದಾರಿದ್ರ್ಯಕ್ಕೆ ಕೊರತೆಯಿಲ್ಲ! ಇದೆಂಥಾ ವಿಪರ್ಯಾಸ!
ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರೂ ಬರೆದದ್ದು: ರಾಮಾಯಣ ಮಹಾಭಾರತಗಳು ಎಲ್ಲ ಭಾರತೀಯ ವರ್ಗದ ಜನರಿಗೂ, ಪ್ರಗತಿಗೆ, ಉನ್ನತ ಬೌದ್ಧಿಕತೆಯಿಂದ ಹಿಡಿದು ಸಾಮಾನ್ಯತೆಯವರೆಗೆ, ಓದು–ಬರೆಹ ಬಾರದ ಹಳ್ಳಿಗರಿಗೂ ಆವಶ್ಯವಾದ ಅಂಶಗಳು ಸಿಗುವಂತೆ ಮಾಡಿವೆ. ಬಹುಮುಖೀ ಸಮಾಜವನ್ನು ಏಕತ್ವದಲ್ಲಿ ಹಿಡಿದಿಟ್ಟ ಪ್ರಾಚೀನ ಭಾರತೀಯರ ಗುಟ್ಟು ಇಲ್ಲಿದೆ. ಆ ಬಹುಮುಖತ್ವ ಜಾತಿಗಳಲ್ಲಿರಬಹುದು, ಸ್ವಭಾವದಲ್ಲಿರಬಹುದು. ಆದರೆ ಎಲ್ಲರಿಗೂ ವೀರೋಚಿತ ಸಂಸ್ಕೃತಿ, ಪರಂಪರೆ ನೈತಿಕ ಜೀವನಾಧಾರದ ಹಿನ್ನೆಲೆಗಳನ್ನು ಸಮಾನವಾಗಿ ಇವು ಒದಗಿಸಿವೆ. ಎಲ್ಲ ವೈವಿಧ್ಯ, ದ್ವಂದ್ವ, ವೈರಸ್ಯಗಳನ್ನು ಮೀರಿ ಉಳಿಯಬಲ್ಲ ಏಕತೆಯನ್ನು, ಬೇಕೆಂತಲೇ ಪ್ರಾಚೀನರು ಇಲ್ಲಿ ಉಳಿಸಿಬಿಟ್ಟರು.
ಎ ಕಂಪಾಸ್ ಫಾರ್ ಸಿವಿಲಿಸೀಷನ್ ಎಂಬ ಮಹಾಗ್ರಂಥದಲ್ಲಿ ಗಾಂಧಿ ಅನುಯಾಯಿ ರಿಚರ್ಡ್ ಗ್ರೆಗ್ ಬರೆದದ್ದು: ಭಾರತದಲ್ಲಿ ನಾಗರಿಕತೆಯುದ್ದಕ್ಕೂ ಹಳ್ಳಿಹಳ್ಳಿಗಳಲ್ಲಿ, ಈಗಲೂ ರೈತರು, ಶ್ರಮಜೀವಿಗಳು, ಒಂದೋ ಹಲವೋ ರಾತ್ರೆಗಳನ್ನು, ವಾರವಾರವೂ ಎರಡು ಮಹಾಕಾವ್ಯಗಳ ವಾಚನ–ಶ್ರವಣಗಳಲ್ಲಿ ಕಳೆಯುವುದೂ ವಾಡಿಕೆ. ಅವರ ಜೀವನದುದ್ದಕ್ಕೂ ಈ ಅಭ್ಯಾಸ, ಪರಿಣಾಮ ಹರಿಯುತ್ತದೆ. ಇವು ಬರೀ ಸಾಹಸದ ಕಥೆಗಳಲ್ಲ. ಮಹತ್ ಜ್ಞಾನ, ಅಪೂರ್ವ ವಿವೇಕ, ತತ್ತ್ವ, ದರ್ಶನ, ಧರ್ಮ, ತುಂಬಿದ ಮಹಾಗ್ರಂಥಗಳು ಇವು. ಭಾರತೀಯ ರೈತ ಅನಕ್ಷರಸ್ಥ ಇರಬಹುದು. ಆದರೆ ಆಳದ ಮಹಾಸಂಸ್ಕೃತಿ ಯುಳ್ಳವನು. ಹಿಂದೂಧರ್ಮಕ್ಕೆ ಹೋಲಿಸಿದರೆ ಪ್ರಾಟೆಸ್ಟಂಟರಲ್ಲಿ ಇಂಥ ಸಾಂಕೇತಿಕ ಕಥೆಗಳೇ ಇಲ್ಲ. ರೋಮನ್ ಕ್ಯಾಥೊಲಿಕ್ ಪಂಗಡವೂ ಎಲ್ಲೋ ವಾಸಿ, ಅಷ್ಟೆ. ಮನುಷ್ಯ ಸಂಸ್ಕೃತಿಗೆ ಈ ನಿತ್ಯ ಸಾಂಕೇತಿಕ ಕಥೆಗಳು ಅತ್ಯಾವಶ್ಯಕ. ಇವನ್ನು ಎಲ್ಲ ವಿಶ್ವವಿದ್ಯಾಲಯಗಳೂ ಅಭ್ಯಸಿಸಬೇಕು. ಇತಿಹಾಸ ಅಭ್ಯಾಸದ ಮುಖ್ಯ ಫಲವು, ನಮ್ಮ ಪೂರ್ವಜರಿಗೆ ಗೌರವ ಕಂಡುಕೊಳ್ಳುವುದೂ, ನೈತಿಕ ನಿಯಮಗಳ ಮಾಹಿತಿಯನ್ನು ಅರಿಯುವುದೂ, ನಡೆಯುವುದೂ ಆಗಿದ್ದರೆ, ಅವನ್ನು ಈ ನಿತ್ಯಸಂಕೇತದ ಕಥೆಯಲ್ಲಿ ಕಾಣುವಂತೆ, ಬೋಳು ಇತಿಹಾಸದಲ್ಲಿ ಕಾಣುವುದಿಲ್ಲ! ಬುದ್ಧಿವಂತ ಜನವರ್ಗಕ್ಕೂ ಸಾಮಾನ್ಯ ಪ್ರಜೆಗೂ ಈ ಕಥಾನಕಗಳು ಅದ್ಭುತ ಸಾಂಸ್ಕೃತಿಕ ಕೊಂಡಿಗಳಾಗಬಲ್ಲವು. ಬರೀ ಇತಿಹಾಸವು ದ್ವಂದ್ವಗಳ ಕುರಿತು ಹೇಳಿದರೆ, ಅವನ್ನು ಮೀರಿ ಉದ್ಧಾರವಾಗುವ ದಾರಿಯನ್ನು ಇವು ತೋರಿಸುತ್ತವೆ.
- ಟಿ. ದೇವಿದಾಸ್, ಕುಮಟಾ
ಲೇಖಕರ ಸಂಕ್ಷಿಪ್ತ ಪರಿಚಯ:
ಟಿ.ದೇವಿದಾಸ್ ಉತ್ತರ ಕನ್ನಡದ ಕುಮಟಾದ ಗುಡೇಅಂಗಡಿಯವರು. ಉಡುಪಿ ಶ್ರೀ ಅದಮಾರು ಮಠ ಎಜ್ಯುಕೇಷನ್ ಕೌನ್ಸಿಲಿನ ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ವಸತಿ ವಿದ್ಯಾಕೇಂದ್ರದ ಪ್ರೌಢಶಾಲಾ ವಿಭಾಗದಲ್ಲಿ ೨೦ ವರ್ಷ ಕನ್ನಡ ಅಧ್ಯಾಪಕರಾಗಿ, 3 ವರ್ಷ ಪ್ರಾಂಶುಪಾಲರಾಗಿ ವೃತ್ತಿಯನ್ನು ಮಾಡಿದವರು. ಮೂವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಮೂರು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸುವಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಪ್ರೌಢಶಾಲಾ ಮಟ್ಟದಲ್ಲಿ ಭಕ್ತಿಕವಿ ಪುತಿನ ಹೆಸರಲ್ಲಿ ಸಾಹಿತ್ಯ ಸಂಘವನ್ನು ಕಟ್ಟಿ, ವಿಶೇಷ ಉಪನ್ಯಾಸಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಂದ ಕಗ್ಗದ ವ್ಯಾಖ್ಯಾನ ಮಾಡಿಸಿ, ಕರ್ನಾಟಕದ ಪ್ರಸಿದ್ಧ ವಿದ್ವಾಂಸರು, ಸಾಹಿತಿಗಳು, ಪತ್ರಿಕಾ ಸಂಪಾದಕರುಗಳ ಲೇಖನಗಳನ್ನೂ ಒಳಗೊಂಡಂತೆ, ವಿದ್ಯಾರ್ಥಿಗಳಿಂದ ಲೇಖನಗಳನ್ನು, ಕವಿತೆಗಳನ್ನು, ಪುಸ್ತಕ ಅವಲೋಕನವನ್ನು, ಚಿತ್ರಗಳನ್ನು ಬರೆಸಿ, ಪ್ರೌಢಶಾಲಾ ಮಟ್ಟದಲ್ಲಿ ಜನನಿ ಹೆಸರಿನ ಮ್ಯಾಗಜಿನ್ ಅನ್ನು ಹೊರತಂದವರು. ಈವರೆಗೆ ಹತ್ತು ಕೃತಿಗಳನ್ನು ಬರೆದಿದ್ದಾರೆ. ಗಾಂಧಿಯ ಕುರಿತಾದ ಕೃತಿಯೊಂದು ಪ್ರಕಟಣೆಗೆ ಸಿದ್ಧವಾಗಿದೆ. ವಿಶ್ವವಾಣಿಯ ದಾಸ್ ಕ್ಯಾಪಿಟಲ್ ಅಂಕಣಕಾರರಾಗಿದ್ದರು. ಈಗ ವೆಬ್ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಮಟ್ಟದ ಗುರುಭೂಷಣ ಪ್ರಶಸ್ತಿ, ಮಂಗಳೂರಿನ ಕದ್ರಿ ಲಯನ್ಸ್ ವಾರ್ಷಿಕ ಕಲಕ ಪ್ರಶಸ್ತಿ, ಚಿತ್ರದುರ್ಗ ಶಿಕ್ಷಣ ಜ್ಞಾನ ಪತ್ರಿಕೆಯ ಶೈಕ್ಷಣಿಕ ಆಡಳಿತ ಸೇವಾರತ್ನ ಪ್ರಶಸ್ತಿ ಪುರಸ್ಕೃತರು. ದಿನಪತ್ರಿಕೆಗಳಿಗೆ ಇವರು ವೈಚಾರಿಕ ಲೇಖನಗಳನ್ನು ಬರೆಯುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


