ಮೇ 10 ಅಕ್ಷಯ ತೃತೀಯ- ಪರಶುರಾಮ ಜಯಂತಿ
ಕಾಲ ಕಾಮ ಪರಶುರಾಮ
ಮಹಾ ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ದೈಹಿಕ ಮತ್ತು ಬೌದ್ಧಿಕತೆಯ ದೃಷ್ಟಿಯಿಂದಲೂ ಪರಿಪೂರ್ಣ ಅವತಾರ. ಅದು ಆದದ್ದು ಇದೇ ಅಕ್ಷಯ ತೃತೀಯದಂದು. ಜಮದಗ್ನಿ-ರೇಣುಕೆಯ ಮಗನಾಗಿ ಜನನ. ದೈವೀ ಸ್ವರೂಪ ಮತ್ತು ಪವಾಡಗಳ ಹೊರತಾಗಿ ಶ್ರೀ ಪರಶುರಾಮನ ವ್ಯಕ್ತಿತ್ವವನ್ನು ಅವಲೋಕಿಸಿದಾಗ ಆತ ಒಬ್ಬ ಮಹಾನ್ ನಾಯಕ. ಆದರ್ಶ ಗುರು. ತ್ರೇತಾಯುಗದಲ್ಲೂ ಯುಗ ಧರ್ಮವನ್ನು ಮೀರಿ ಅತ್ಯಾಚಾರ-ಅನಾಚಾರ-ಭ್ರಷ್ಟಾಚಾರವೆಂಬ ಸಹಸ್ರಬಾಹುಗಳ ಕಾರ್ತವೀರ್ಯನ ರೂಪದಲ್ಲಿ ಪ್ರಕಟವಾದಾಗ ಕೊಡಲಿಯೆತ್ತಿ ಸಮರ ಸಾರಿ ಜಯಶೀಲರಾದ ಗಂಡುಗಲಿ.
ತಂದೆಯ ಮಾತನ್ನು ನಡೆಸಿ ಕೊಡುವಲ್ಲಿ ಕಾಣುವ ಅಸಾಧಾರಣ ಪಿತೃಭಕ್ತಿ. ಮೃತಳಾದ ತಾಯಿ, ತಮ್ಮಂದಿರನ್ನು ಬದುಕಿಸಲು ವರವನ್ನು ಬೇಡುವಲ್ಲಿ ಕಂಡು ಬರುವ ಅನನ್ಯ ಅಸಾಧಾರಣ ಮಾತೃಭಕ್ತಿ. 21 ಸಾರಿ ಭೂ ಪ್ರದಕ್ಷಿಣೆ ಮಾಡಿ ಕ್ಷತ್ರಿಯ ಸಂಹಾರದಿಂದ ಗಳಿಸಿದ ಭೂಮಿಯನ್ನು ತಾನು ಅನುಭವಿಸದೇ ಸ್ವಜನರಿಗೆ ದಾನವಿತ್ತ ಉದಾರತೆ, ಕೊಡಲಿಯೆಸೆದು ಸಮುದ್ರ ರಾಜನಿಂದ ಪಡೆದ ಭೂಮಿಯಲ್ಲಿ ತೋರಿದ ಹೊಸ ಸೃಷ್ಟಿಯ ಸಾಮರ್ಥ್ಯ. ಅನಂತರ ಲೋಕ ಕಲ್ಯಾಣಾರ್ಥವಾಗಿ ಮಹೇಂದ್ರ ಪರ್ವತದಲ್ಲಿ ತಪಸ್ಸಾಚರಣೆ ಹಾಗಾಗಿ ಚಿರಂಜೀವಿ. ಭವಿಷ್ಯ ಪುರಾಣದಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ಇದರ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.
ನಮ್ಮ ಕರ್ನಾಟಕಕ್ಕೂ ಪರಶುರಾಮನಿಗೂ ನಿಕಟ ಸಂಬಂಧವಿದೆ. ಕನ್ನಡ ನಾಡಿನ ಒಂದು ದೊಡ್ಡ ಭಾಗವನ್ನು ಪರಶುರಾಮ ಕ್ಷೇತ್ರ ಎನ್ನುತ್ತೇವೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ಶ್ರೀರಾಮ ಪರಶುರಾಮ ಸಂಧಿಸಿದ ಸ್ಥಳ ಭಾರ್ಗವ ಪುರಿ. ಮಹಾಭಾರತದ ವೀರಯೋಧ ಕರ್ಣ ತನ್ನ ಸ್ವಯಂಕೃತ ಅಪರಾಧದಿಂದ ಪರಶುರಾಮರಿಂದ ಶಾಪಗ್ರಸ್ತನಾದ. ಹಾಗಾಗದೇ ಇದ್ದಲ್ಲಿ ಮಹಾಭಾರತದ ಕಥೆಯೇ ಬೇರೆಯಾಗುತ್ತಿತ್ತೇನೋ ಪರಶುರಾಮನನ್ನು ಕಾಲಕಾಮನೆಂದೂ ಕರೆಯಲಾಗುತ್ತದೆ. ಸೃಷ್ಟಿ-ಸ್ಥಿತಿ-ಲಯಗಳೆಂಬ ತ್ರಿವಿಧ ವ್ಯಾಪಾರಕ್ಕೆ ಕಾಲ ಮತ್ತು ಕಾಮಗಳು ಪ್ರೇರಕ. ಕಾಲವೆಂಬುದು ಶಿವ ಸ್ವರೂಪ ಮತ್ತು ಕಾಮವೆಂಬುದು ವಿಷ್ಣು ಸ್ವರೂಪವೆಂದಾದಲ್ಲಿ ಕಾಲಕಾಮ (ಪರಶುರಾಮ) ಶೈವ-ವೈಷ್ಣವ ಪಂಥಗಳಿಬ್ಬರಿಗೂ ಮಾನ್ಯ.
ಪರಮಾತ್ಮನ ಅವತಾರಗಳೆಲ್ಲವೂ ದುಷ್ಟಶಿಕ್ಷಣ ಶಿಷ್ಟರಕ್ಷಣೆಗಾಗಿಯೇ, ದಶಾವತಾರಗಳು ನಿರ್ದಿಷ್ಟವಾದ ಕಾರ್ಯಸಾಧನೆಗಾಗಿ ಭಗವಂತನು ಮಾಡುವ ಅವತಾರ. ಪರಮಾತ್ಮನು ಪರಶುರಾಮನಾಗಿ ಅವತಾರ ಪಡೆಯುವುದು ಆರನೇಯ ಅವತಾರವಾಗಿ ಇದರ ಔಚಿತ್ಯವೆಂದರೆ ಅರಿಷಡ್ವರ್ಗಗಳನ್ನು ಬಿಟ್ಟರೆ ಮಾತ್ರ ಪರಮಾತ್ಮನ ಅನುಗ್ರಹವನ್ನು ಪಡೆಯಬಹುದು . ಅದ್ಭುತ,ಊಹಿಸಲಸಾಧ್ಯ, ಭೂಲೋಕದಲ್ಲಿ ಪ್ರತಿಯೊಬ್ಬರಿಗೂ ಕಾಣಿಸಿಕೊಂಡ ದಶಾವತಾರಗಳ ಪ್ರಥಮರೂಪ ,ಚಿರಂಜೀವಿಯಾಗಿ ಅನಂತಕಾಲದ ತನಕ ದುಷ್ಟರನ್ನು ಶಿಕ್ಷಿಸುತ್ತ , ಶಿಷ್ಟರನ್ನು ರಕ್ಷಿಸುತ್ತಿರುವ ರೂಪ.ವೈವಸ್ವತ ಮನ್ವಂತರದ 19 ನೇ ತ್ರೇತಾಯುಗ,ವೈಶಾಖ ಶುದ್ಧ ದ್ವಿತೀಯದಂದು ಅವತಾರ ,ಸುಮಾರು 4 ಕೋಟಿ ವರ್ಷಗಳಿಂದಲೂ ಹಿಂದೆ ಅವತಾರವೆತ್ತಿದ ಈ ರೂಪ ಇಂದಿಗೂ ಮಹೇಂದ್ರ ಪರ್ವತದಲ್ಲಿ ಶಿಷ್ಟರ ರಕ್ಷಣೆಗಾಗಿ ತಪಗೈಯುತ್ತ ನಿಂತಿದೆ.
ದೇವರಿಲ್ಲ ,ಧರ್ಮವೆಲ್ಲವೂ ಮೂಢನಂಬಿಕೆ, ಹಸುಗಳನ್ನು ಮತ್ತು ವಿಪ್ರರನ್ನು ಪೂಜಿಸಬೇಕಿಲ್ಲ ಎಲ್ಲರೂ ಸಮಾನರು ಹೀಗೆ ಪ್ರಚಾರ ಮಾಡುವ ದುಷ್ಟರ ಸಂಹಾರವೇ ಈ ಅವತಾರದ ಮುಖ್ಯ ಉದ್ದೇಶ .ಅಜ್ಞಾನವೆಂಬ ಮಹಾಪರ್ವತವು ಅನಾದಿಕಾಲದಿಂದಲೂ ಮೋಕ್ಷಮಾರ್ಗಕ್ಕೆ ಅಡ್ಡಿಯಾಗಿದೆ. ,ಇವೆಲ್ಲದರ ನಿಗ್ರಹಕ್ಕಾಗಿ ಪರಶುರಾಮ ನಮ್ಮ ಹೃದಯಕ್ಕೆ ಬರಬೇಕು .
ಪರಶುರಾಮ ಅವತಾರ ಒಂದು ವಿಶಿಷ್ಟ ಕಾರ್ಯವನ್ನು ನಡೆಸಲು ಪಡೆದದ್ದಾಗಿದೆ. ಈ ಅವತಾರದಿಂದ ಜಗಕ್ಕೆ ಪಿತೃಭಕ್ತಿ ಮತ್ತು ಪಿತೃವಾಕ್ಯಪರಿಪಾಲನೆ, ಸ್ತ್ರೀಯಾದವಳು ಹೇಗೆ ವರ್ತಿಸಬೇಕು ಎನ್ನುವುದು ಮುಖ್ಯ ಅಂಶವಾಗಿರುತ್ತದೆ. ಚಂದ್ರವಂಶದ ಜಮದಗ್ನಿ ಋಷಿಪುತ್ರನಾಗಿ ಭಗವಂತ ಅವತರಿಸಿದ , ಅರ್ಘ್ಯಪಾದ್ಯಾದಿಗಳಿಗೆ ನದಿಯಿಂದ ನೀರು ತರಲು ಹೋದ ಜಮದಗ್ನಿ ಪತ್ನಿ ರೇಣುಕೆಯು ಗಂಧರ್ವರು ನೀರಿನಲ್ಲಿ ಸರಸವಾಡುತ್ತಿರುವಾಗ ತಾನು ಮಾನಸಿಕ ವ್ಯಭಿಚಾರದೋಷಕ್ಕೆ ಈಡಾದಳು, ಇದನ್ನು ತಮ್ಮ ದಿವ್ಯಶಕ್ತಿಯಿಂದ ಅರಿತ ಜಮದಗ್ನಿ ಪರಶುರಾಮನಿಗೆ ತಲೆಕಡಿಯಲು ತಿಳಿಸಿದರು .
ಸಣ್ಣತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆಯೇ ಏನಿಸಬಹುದು, ಹೌದು ಇದು ಉದ್ದಾರದ ದಾರಿ ,ಋಷಿಗಳಿಗೆ ಬರುವ ಕೋಪ ತಾಪವಲ್ಲ; ಅನುಕಂಪ ,ತನ್ನ ಹೆಂಡತಿ ಮಾಡಿರುವ ಪಾಪದ ಪರಿಹಾರಕ್ಕಾಗಿ ಇದೊಂದು ಉಪಾಯ .ಗೌತಮರು ಅಹಲ್ಯೆಗೆ ಶಾಪವಿತ್ತು ಉದ್ದರಿಸಿದಂತೆ . ತಾಯಿಯ ತಲೆಕಡಿದ ಪರಶುರಾಮನಿಗೆ ಪಾಪ ತಟ್ಟಲಿಲ್ಲವೆ ? ಸರ್ವಥಾ ಇಲ್ಲ .ಪಿತೃವಾಕ್ಯ ಪರಿಪಾಲನೆ ಮಾಡಿದ ಮತ್ತು ತಾಯಿಯನ್ನು ಉದ್ಧರಿಸಿದ ಮಹಾಪುಣ್ಯವೆ ಬರುತ್ತದೆ. ಆದರೆ ಗಂಡನಾದ ಜಮದಗ್ನಿಗೆ ಈ ಪಾಪದ ಲೇಪ ತಟ್ಟಲಾಗಿ ಮುಂದೆ ಕಾರ್ತವೀರ್ಯಾಜುನನ ಮಕ್ಕಳು ಮತ್ತು ಸೈನಿಕರು ಬಂದು ತಪೋನಿರತರಾದ ಜಮದಗ್ನಿಯ ತಲೆಯನ್ನು ಕತ್ತರಿಸಿದರು. ಆ ಸಂದರ್ಭದಲ್ಲಿ 21 ಬಾರಿ ತಾಯಿಯು ಆರ್ತಧ್ವನಿ ಮಾಡುವುದರಿಂದ 21 ಸಲ ಸಂಚರಿಸಿ ಅವರ ಕುಲವನ್ನೆ ಸಂಹರಿಸಿ, ತಾಯಿಗೆ ಸಂತೋಷ ಪಡಿಸುತ್ತಾನೆ . ಸಮಸ್ತಭೂಲೋಕವೇ ಪರಶುರಾಮದೇವರ ಅಧೀನವಾದ ಮೇಲೆ ಸಮುದ್ರದ ಮೇಲೆ ಕೊಡಲಿಯೆಸೆದ ,ಸಮುದ್ರ ಹಿಂದಕ್ಕೆ ಸರಿದು ಜಾಗ ಬಿಟ್ಟಿಕೊಟ್ಟಿತು. ಅದೇ ಕೊಂಕಣ ತೀರ, ಗೋವಾದಿಂದ ಕೇರಳದವರೆಗೆ ಹರಡಿರುವ ಪರಶುರಾಮ ಕ್ಷೇತ್ರ.
ಉಳಿದ ಭಗವದ್ರೂಪವನ್ನು ಪ್ರತಿಮೆ ಮೊದಲಾದವುಗಳಲ್ಲಿ ಪೂಜಿಸಿದರೆ, ಪರಶುರಾಮನನ್ನು ಅಗ್ನಿಯಲ್ಲಿ ಪೂಜಿಸಬೇಕು. ಮತ್ತು ಈ ರೂಪ ಶುಕ್ರಗ್ರಹಕ್ಕೆ ಸಂಬಂಧ ಪಟ್ಟಿದ್ದು ಶುಕ್ರಗ್ರಹದ ಬಲಾಬಲಗಳನ್ನು ಚಿಂತಿಸುವ ದಶಾವತಾರ ಅಂತರ್ಗತ ಪರಶುರಾಮನು ಸಂಹಾರಕನು ಮಾತ್ರವಲ್ಲದೆ ವೀರ್ಯಕಾರಕನೂ ಅರ್ಥಾತ್ ಸದ್ವಂಶಗಳನ್ನು ವೃದ್ದಿಗೊಳಿಸುವನು ಆಗಿರುವವನು.
ರೇಣುಕೇಯ ಮಹಾವೀರ್ಯ ಕೃತವೀರ್ಯಸುತಾಂತಕ |ಆಯುಃ ಪ್ರಯಚ್ಛ ಮೇ ರಾಮ ಜಾಮದಗ್ನ್ಯಾ ನಮೋಸ್ತುತೇ ||
- ಡಾ. ಗುರುರಾಜ ಪೋಶೆಟ್ಟಿಹಳ್ಳಿ ,
ಸಂಸ್ಕೃತಿ ಚಿಂತಕರು
9739369621, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ