ಶ್ರೀರಾಮ ಕಥಾ ಲೇಖನ ಅಭಿಯಾನ-147: ರಾಮಾಯಣದಲ್ಲಿ ರಾಜಕೀಯ ನೆಲೆಗಳು

Upayuktha
0


-ಶ್ರೀನಿವಾಸ ಜಾಲವಾದಿ, ಸುರಪುರ


ರಾಮಾಯಣವೆಂದರೆನೇ ಅದು ಮೌಲ್ಯ ಪ್ರತಿಪಾದನೆಗಳ, ಸತ್ಯ ಸುಂದರ ಶ್ರೇಷ್ಠರ ಸಂಗಮ ಎಂದು ಮೇಲ್ನೊಟಕ್ಕೆನೇ ಗೊತ್ತಾಗುತ್ತದೆ. ಭಾರತದಲ್ಲಿ ರಾಮಾಯಣ ಮಹಾಭಾರತಗಳು ಜನರ ಮನದಲಿ ಹಾಸು ಹೊಕ್ಕಾಗಿವೆ. ಪ್ರತಿಯೊಂದನ್ನು ಈ ಮಹಾಕಾವ್ಯಗಳಲ್ಲಿನ ಘಟನೆಗಳಿಗೆ ಹೋಲಿಸಿ ನೋಡಲಾಗುತ್ತದೆ. ದೇಶದದಲ್ಲಿ ಟಿವಿ ಭರಾಟೆ ಇನ್ನೂ ಅಷ್ಟೊಂದು ಪ್ರಮಾಣದಲ್ಲಿ ಇರದ ಸಂದರ್ಭದಲ್ಲಿ, ದೂರದರ್ಶನದಲ್ಲಿ ಹಿಂದಿ ಧಾರಾವಾಹಿ ರೂಪದಲ್ಲಿ ಮೂಡಿ ಬಂದ ಈ ರಾಮಾಯಣ ಮಹಾಭಾರತಗಳು ಹೊಸ ಸಂಚಲನವನ್ನೇ ಸೃಷ್ಟಿಸಿದ್ದವು. ರಾಮನ ಪಾತ್ರ ಮಾಡಿದ್ದ ಕಲಾವಿದ ಅರುಣ ಗೋವಿಲ್ ಅವರನ್ನು ಜನರು ಸಾಕ್ಷಾತ್ ಶ್ರೀರಾಮನೆಂದೇ ನೋಡುತ್ತಿದ್ದರು.


ಇದಕ್ಕೆ ನೀವು ಸಮೂಹ ಸನ್ನಿ ಅಂದರೂ ಪರವಾಗಿಲ್ಲ, ಆದರೆ ದೈವತ್ವದ ರಾಶಿ ರಾಶಿನೇ ಜನರ ಎದುರಿಗಿತ್ತು, ಮಾತ್ರವಲ್ಲ ಆದರ್ಶಗಳ ಮಹಲುಗಳು, ಗುಡಿಸಲಿನ ಗಂಧ, ಶಬರಿಯ ಮುಗ್ಧ ಪ್ರೀತಿ ಸಿಂಚನದ ಭಕ್ತಿಯ ಪರಾಕಾಷ್ಠತೆ, ಲಕ್ಷ್ಮಣನ ನಿರ್ವಾಜ್ಯ ಪ್ರೀತಿ, ಸಹೋದರ ವಾತ್ಸಲ್ಯ, ಅತ್ತಿಗೆಯನ್ನು ತಾಯಿಯೆಂದು ಪೂಜಿಸುವುದು, ಎಲ್ಲರ ಆರಾಧ್ಯ ದೈವ ಹನುಮಂತನ ಸ್ವಾಮಿನಿಷ್ಠೆ, ಸೀತೆಯ ಸರಳತೆ, ಪತಿಭಕ್ತಿ, ಬಾಳಿನಲ್ಲಿ ಎಷ್ಟೇ ತೊಂದರೆ ಬಂದರೂ ಕೂಡ ಇನ್ನೊಬ್ಬರ ಮೇಲೆ ಆರೋಪ ಮಾಡದೇ, ಎಲ್ಲವನ್ನೂ ಸಮಚಿತ್ತದಿಂದ ಸಹಿಸುವದು....... ಅದಕ್ಕೆ ಕವಿ ಕೇಳುತ್ತಾನೆ, 'ವೈದೇಹಿ ಏನಾದಳೋ.......' ಎಂದು.


ಭರತನ ನಿಷ್ಠೆ, ಮುಗ್ಧತೆ, ಅಣ್ಣನ ಮೇಲಿನ ಪ್ರೀತಿ, ಅದು ವರ್ಣಿಸದಳ! ಪಟ್ಟಾಭಿಷಿಕ್ತನಾಗಬೇಕಿದ್ದ ರಾಮನು, ತಂದೆ ದಶರಥನ ಪ್ರೀತಿಯ ಪತ್ನಿ ಕೈಕೆಯಿಯ ಮಾತಿನಂತೆ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟು ನಿಂತಾಗ, ತಾಯಿಯ ಆಶಯದಂತೆ ಸಿಂಹಾಸನವನ್ನು ಏರಬೇಕಿದ್ದ ಭರತನು ಅದನ್ನು ನಿರಾಕರಿಸುತ್ತಾನೆ! ಅದು ಅಣ್ಣನ ಅಧಿಕಾರ ನಾನ್ಯಾರು ಅದನ್ನು ಅನುಭವಿಸಲು? ಎನ್ನುತ್ತಾನೆ. ಇದನ್ನು ಈ ಸಂದರ್ಭದಲ್ಲಿ ಊಹಿಸಿಕೊಳ್ಳಲು ಸಾಧ್ಯವೆ? ಅಂದೂ ರಾಜಕೀಯವಿತ್ತು, ಇಂದೂ ರಾಜಕೀಯವಿದೆ! ಆದರೆ ಅಜಗಜಾಂತರ ವ್ಯತ್ಯಾಸವಿದೆ. ನಿಜ ಮೌಲ್ಯಗಳನ್ನು ಕಾಣಲು ನಾವು ರಾಮಾಯಣಕ್ಕೇ ಹೋಗಬೇಕು.ಅಲ್ಲಿಯ ಎಲ್ಲ ಪಾತ್ರಗಳೂ ಮೌಲ್ಯದಲ್ಲಿ ಅದ್ದಿ ತೆಗೆದಂತಿವೆ. ಅಲ್ಲಿಯೂ ಕೆಟ್ಟವರಿದ್ದಾರೆ, ದುಷ್ಟತನವಿದೆ, ಆದರೆ ಈಗಿನ ಅತಿ ಕೆಟ್ಟ ರಾಜಕಾರಣಕ್ಕೆ ಹೋಲಿಸಲಾಗದು. ಅಲ್ಲಿಯೂ ರಾವಣ, ಕುಂಭಕರ್ಣ, ಮಂಥರೆ, ಶೂರ್ಪನಖಿ, ಇಂದ್ರಜಿತು, ವಾಲಿ ಮುಂತಾದ ದೃಷ್ಟಿಬೊಟ್ಟುಗಳು ಇರಬಹುದು. ಆದರೆ ಈಗಿನಷ್ಟು ಮಕಾಳ ಹೀನರು ಆಗಿರಲಿಲ್ಲ. ಉತ್ತಮ ಅಂಶಗಳನ್ನು ನಾವು ಬಿಟ್ಟು, ಬರೀ ಕೆಟ್ಟದ್ದನ್ನೇ ಆರಿಸಿ ಕೊಳ್ಳುತ್ತೇವೆ. ಮತ್ತೆ ಅದನ್ನು ಸಮರ್ಥಿಸಿಕೊಳ್ಳುತ್ತೇವೆ! ಇದು ಇಂದಿನ ಬಹು ದೊಡ್ಡ ದುರಂತ!


        'ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಂ

         ಆರೂಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ        

         ಕೋಕಿಲಮ್'


ಈ ಸುಂದರವಾದ ವಾಲ್ಮೀಕಿ ಮುನಿಯನ್ನು ವಂದಿಸುವ ರೂಪಕಾಲಂಕಾರದ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ.


'ಕಾವ್ಯವೆಂಬ ಮರದ ಮೇಲೆ ಕುಳಿತು ರಾಮ ರಾಮಾ ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರಗಳು' ಎಂದು ಇದರ ಅರ್ಥ.


ಮಹರ್ಷಿ ವಾಲ್ಮೀಕಿ ಕೊಟ್ಟಿರುವ ಈ ಶ್ರೇಷ್ಠ ಕೃತಿ ಹಾಗೂ ರಾಮನೆಂಬ ಮರ್ಯಾದಾ ಪುರುಷೋತ್ತಮರಿಗಾಗಿ ಜಗತ್ತು ಅವರಿಗೆ ಸದಾ ಕೃತಜ್ಞವಾಗಿದೆ. ರಾಮನ ಈ ಮೌಲ್ಯಗಳಿಗಾಗಿ ನಾವು ಮರಳಿ ಏನೂ ಕೊಡಲು ಸಾಧ್ಯ ಹೇಳಿರಿ?


ದೇವದೇವನು ಬಲ್ಲ ಈ ಅಮೃತ ಸಂಜೀವಿನಿಯೇ ನಮ್ಮ ಸೌಭಾಗ್ಯ. ದುಷ್ಟರು ಎಲ್ಲ ಕಾಲಕೂ ಇರುತ್ತಾರೆ, ಅದೇನೂ ಹೊಸತಲ್ಲ. ಆದರೆ ಸಂಯಮಿಗಳು ಹಾಗೂ ತನ್ನಲ್ಲಿ ಅಗಾಧ ಶಕ್ತಿಯಿದ್ದರೂ ಅದನ್ನು ತೋರಗೊಡದೇ, ಸಾಮಾನ್ಯರಲ್ಲಿ ಅತೀ ಸಾಮಾನ್ಯನೆಂಬಂತೆ ಇದ್ದು, ಎಲ್ಲರ ಮನವ ಗೆದ್ದವ ನಿಜಕ್ಕೂ ಅದು ನಮ್ಮ ಪಾಲಿಗೆ ಪವಾಡವೇ ಸರಿ, ಅತಿಶಯೋಕ್ತಿಯೇ ಸರಿ!


ಎಲ್ಲ ಇದ್ದೂ ಇಲ್ಲದಂತೆ ಬದುಕಿದ ಶ್ರೀರಾಮ,ಸದಾ ಆಸ್ತಿಕರ ಪಾಲಿನ ಸುದೈವವೇ ಸರಿ. ಉತ್ತಮ ರಾಜಕೀಯ ಮೌಲ್ಯಗಳು,ರಾಜಕೀಯದ ನೆಲೆಗಳು ರಾಮಾಯಣದಲ್ಲಿ ಹೇರಳವಾಗಿ ಸಿಗುತ್ತವೆ. ಆದರೆ ಅವುಗಳನ್ನು ನಮ್ಮ ನಾಯಕರು ಮುಖವಾಡ ಧರಿಸುತ್ತಾರೆ! ಅವುಗಳನ್ನು ಅಪಮೌಲ್ಯಗೊಳಿಸಿ 'ಇದಂಮಿತ್ಥಂ'...... ಇದೇ ಸರಿ ಎಂದೇ ವಾದಿಸುತ್ತಾರೆ. ತಾನು ಮಾಡಿದ್ದೇ ಸರಿ ಎನ್ನುವವ ಹೇಗೆ ತಾನೇ ರಾಮನಾಗುತ್ತಾನೆ?


'ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇಧಸೇ

 ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ'


ಮಹರ್ಷಿಗಳು 'ಹುತ್ತ'ದಿಂದ ಹೊರ ಬಂದು 24000 ಶ್ಲೋಕಗಳ ರಾಮಾಯಣ ರಚಿಸಿದ್ದು,ಇದಕ್ಕೂ ಮೊದಲು ಅವರು ನಾರದ ಮಹರ್ಷಿಗಳಿಗೆ ಒಬ್ಬ ಅತ್ಯಂತ ಪರಿಪೂರ್ಣನಾದ ವ್ಯಕ್ತಿ ಯಾರಾದರೂ ಇರುವರೆ? ಎಂದು ಪ್ರಶ್ನಿಸಿದಾಗ,ನಾರದರು ರಾಮನೆಂಬ ಸುಧೆಯಾಮೃತವಿದೆ ಎಂದು ಹೇಳಿರುತ್ತಾರೆ.


ವಲ್ಮೀಕ ಎಂದರೆ 'ಹುತ್ತ' ಎಂದು ಅರ್ಥ, ಹುತ್ತದಿಂದ ಎದ್ದು ಬಂದ ಪ್ರಚೇತನ ಸುತನೆಂಬ ಸಂತ, ರಾಮಗಾಥೆ ಹೇಳುತ್ತಾರೆ. ರಾಮನು ಒಬ್ಬ ಮಗನಾಗಿ, ಪತ್ನಿಗೆ ಪತಿಯಾಗಿ, ತಾಯಂದಿರಿಗೆ ಆದರ್ಶ ಮಗನಾಗಿ, ಲಕ್ಷ್ಮಣ ಭರತ ಶತೃಘ್ನರಿಗೆ ಶ್ರೇಷ್ಠ ಮಾರ್ಗದರ್ಶಕನಾಗಿ, ಸೀತಾರಾಮನಾಗಿ, ಪರಮ ಭಕ್ತ ಹನುಮನ ಆರಾಧ್ಯ ದೈವನಾಗಿ, ಪ್ರಜೆಗಳ ಹಿತಚಿಂತಕನಾಗಿ, ಸದಾ ಮಂದಸ್ಮಿತನಾಗಿ, ಶಿಷ್ಟ ರಕ್ಷಕ ದುಷ್ಟ ಶಿಕ್ಷಕನಾಗಿ, ಗೌರವ ಎಂಬ ಶಬ್ದಕ್ಕೆನೇ ಅಪಾರ ಪ್ರಮಾಣದ ಗೌರವ ತಂದು ಕೊಟ್ಟಂತಹ ಅಪರೂಪದ ವ್ಯಕ್ತಿತ್ವವನ್ನು ಚಿತ್ರಿಸಿದ ವಾಲ್ಮೀಕಿ ಋಷಿಗಳ ದೈವತ್ವಕ್ಕೆ ಒಂದು ದೊಡ್ಡ ನಮಸ್ಕಾರ. ರಾಮಾಯಣ ಹಾಗೂ ಶ್ರೀರಾಮ ಸದಾ ಕಾಲದ ವಿಸ್ಮಯ!


ಕೆಲ ಶತಕಗಳ,ದಶಕಗಳ ಹಿಂದೆ ರಾಜಕೀಯ ಮೌಲ್ಯಗಳು ಇದ್ದವು. ನಾಯಕರು ಪ್ರಜೆಗಳಿಗೆ ಆದರ್ಶರಾಗಿದ್ದರು. ನಾಯಕರ ಬಗ್ಗೆ ಅಪಾರ ಗೌರವ ಅಭಿಮಾನಗಳು ಇದ್ದವು. ಸಾರ್ವಜನಿಕ ದುಡ್ಡು ಎಂದರೆ ಅದನ್ನು ಸ್ವಂತಕ್ಕೆ ಬಳಸಲು ನಾಯಕರು ಹಿಂಜರಿಯುತ್ತಿದ್ದರು. ಅದಕ್ಕೆ ರಾಮಾಯಣದ ಆದರ್ಶಗಳು ಕಾರಣವಾಗಿದ್ದವು. ರಾಮ ಅವರ ಮನಭಿತ್ತಿಯಲಿ ಸದಾ ಸರ್ವರಿಗೂ ಒಳ್ಳೆಯದನ್ನೇ ಮಾಡುವಂತೆ ಬಹುಶಃ ಪ್ರೇರೇಪಿಸುತ್ತಿದ್ದನು ಅಂತ ಕಾಣುತ್ತೆ, ಅದಕ್ಕೆ ಅವರ ಸಂಸ್ಕಾರ ವಿಚಾರ ಲಹರಿಯೂ ಕಾರಣ. ನೈತಿಕತೆ ತುಂಬ ಮಹತ್ವದ ಪಾತ್ರ ವಹಿಸುವ ಕಾಲಘಟ್ಟವದು. ಬರಬರುತ್ತಾ ನೈತಿಕ ಮೌಲ್ಯಗಳು ಕುಸಿಯುತ್ತಾ ಬಂದವು. ಅಧಿಕಾರ ಹಣ ಸಂಪತ್ತು ಅವರನ್ನು ಅಧ:ಪತನಕ್ಕೊಯ್ದವು. ಲಂಪಟತನ ಹೆಚ್ಚಿತು, ನಾನು ನನ್ನದು ಎಂಬ ಸ್ವಜನ ಪಕ್ಷಪಾತ ವಿಜೃಂಭಿಸಲಾರಂಭಿಸಿತು. ಹೆಂಡ್ತಿ ಮಗ ಮಗಳು ಇವರಲ್ಲೇ ಅಧಿಕಾರ ಇರಬೇಕೆಂಬ ವ್ಯಾಮೋಹ ರಾಕ್ಷಸನಂತೆ ಕುಣಿಯಲಾರಂಭಿಸಿತು. ಇಡೀ ದೇಶದ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆದರೂ ತೃಪ್ತಿ ಇಲ್ಲದಾಯಿತು. ತಾನು ಚಿರಂಜೀವಿ ಎಂದು ತಿಳಿದುಕೊಂಡ ಶತಮೂರ್ಖರನ್ನು ಕಂಡು ದೈವ ನಕ್ಕಿತು. ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಕೈಕೇಯಿ ಹೇಳಿದ ಒಂದೇ ಮಾತಿಗೆ ಸರ್ವಾಲಂಕಾರ ತೆಗೆದು ನಾರು ಮಡಿಯುಟ್ಟು ಕಾಡಿಗೆ ವನವಾಸಕ್ಕೆ ಹೋಗಲು ಸಿದ್ದನಾದ ರಾಮ, ಅವನನ್ನು ಅನುಸರಿಸಿದ ಸೀತಾ ಲಕ್ಷ್ಮಣರು. ಹೇಗಾದರೂ ಹೊಂಚು ಹಾಕಿ ಅಧಿಕಾರ ಕಬಳಿಸಿ ಮೆರೆಯಬೇಕೆನ್ನುವ ಇಂದಿನ ನಾಯಕರೆಂಬ ಭ್ರಮೆಗಳೆಲ್ಲಿ, ಅಧಿಕಾರ ತನ್ನ ಕಾಲು ಬದಿ ಬಂದೂ ಬಿದ್ದರೂ, ಅದನ್ನು ಆಗು ಮಾಡಿದ ತಾಯಿಯನ್ನು ಕನಿಕರದಿಂದ ನೋಡಿ, 'ರಾಮ ಅಣ್ಣಾ ನೀನು ಮಾತ್ರ ಈ ಸಿಂಹಾಸನದ ಒಡೆಯ, ನಾವ್ಯಾರು ಅಲ್ಲ ದಯವಿಟ್ಟು ಕಾಡಿಗೆ ಹೋಗಬೇಡಣ್ಣಾ' ಎಂದು ದೀನನಾಗಿ ಭಕ್ತಿಯಿಂದ ಅಣ್ಣನನ್ನು ಬೇಡಿಕೊಂಡ ಭರತನಲ್ಲಿ? ಆದರೂ ರಾಮ ಪಿತೃವಾಕ್ಯ ಪರಿಪಾಲಕನಾಗಿ ಅಡವಿ ಸೇರಲು, ಅವನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು, ಶ್ರೀರಾಮನ ಹೆಸರಿನಿಂದ ಹದಿನಾಲ್ಕು ವರುಷ ರಾಜ್ಯಭಾರ ಮಾಡಿದ ಮಹಾಪುರುಷ ಭರತ.


ಶ್ರೀರಾಮಚಂದ್ರನು ಭರತನಿಗೆ ಸಮಾಧಾನ ಹೇಳಿ, 'ನೀನು ಪ್ರಜೆಗಳ ಹಿತದೃಷ್ಟಿಯಿಂದ ರಾಜ್ಯವಾಳು, ನಾನು ಹದಿನಾಲ್ಕು ವರುಷಗಳ ನಂತರ ಖಂಡಿತ ಬರುತ್ತೇನೆ ಎಂದ' ಅದಕ್ಕೆ ಭರತನು' ಅಣ್ಣಾ ನಿನ್ನ ಹೆಸರಿನಿಂದಲೇ ರಾಜ್ಯಭಾರ ಮಾಡುತ್ತೇನೆ ನಿನ್ನ ಮಾತನ್ನ ಮೀರಲಾರದೆ, ಆದರೆ ನೀನು ಹದಿನಾಲ್ಕು ವರ್ಷಗಳ ನಂತರ ಒಂದೇ ಒಂದು ಕ್ಷಣ ಬರಲು ತಡವಾದರೆ ನಾನು ಅಗ್ನಿಕುಂಡಕ್ಕೆ ಹಾರಿ ಪ್ರಾಣ ಬಿಡುತ್ತೇನೆ, ನಿನಗಾಗಿ ನಾನು ಹಾಗೂ ಇಡೀ ರಾಜ್ಯವೇ ಚಾತಕ ಪಕ್ಷಿಯಂತೆ ಕಾಯುತ್ತೇವೆ' ಎಂದು ಹೇಳುತ್ತಾನೆ!


ಇದನ್ನು ಈಗ ಊಹಿಸಲು ಕೂಡ ಸಾಧ್ಯವಿಲ್ಲ! ಅವನು ಹೋದರೇ ಸಾಕು ಮತ್ತೇ ಮರಳಿ ಬರದಂತೆ ವ್ಯವಸ್ಥೆ ಮಾಡಲಾಗುತ್ತದೆ! ಇದು ನಶಿಸಿದ ದೊಡ್ಡ ರಾಜಕೀಯ ಮೌಲ್ಯ.


ಇನ್ನು ಲಕ್ಷ್ಮಣ, ರಾಮನ ನಂತರ ಅವನೇ ಉತ್ತರಾಧಿಕಾರಿಯಾಗಬಹುದಿತ್ತು, ಕೈಕೇಯಿ ತನ್ನ ಮಗನಿಗೆ ಪಟ್ಟಗಟ್ಟಬೇಕೆಂದು ಹೇಳಿದ್ದರೂ ಕೂಡ, ಭರತ ಒಲ್ಲೆ ಎಂದಾಗ ಲಕ್ಷ್ಮಣ ರಾಜ್ಯಭಾರ ಮಾಡಬಹುದಿತ್ತು, ಆದರೆ ಅವನು ತನ್ನ ಪತ್ನಿ ಊರ್ಮಿಳೆಯನ್ನೂ ಬಿಟ್ಟು ರಾಮನ ಜೊತೆ ಹೊರಟು ಬಿಟ್ಟ! ಇದನ್ನು ಈಗಿನವರಿಂದ ಊಹಿಸಲು ಸಾಧ್ಯವೆ? ಅಲ್ಲಿ ಕಾಡಿನಲ್ಲಿ ಅಣ್ಣ ಅತ್ತಿಗೆಯರ ಸೇವೆ ಮಾಡಿಕೊಂಡು ಇದ್ದ. ಸೀತೆ ಮಾಯಾಜಿಂಕೆ ಬೇಕು ಎಂದು ರಾಮನನ್ನು ಒತ್ತಾಯಿಸಿದಾಗ, ರಾಮ ಲಕ್ಷ್ಮಣನಿಗೆ ಸೀತೆಯ ಬಗ್ಗೆ ಲಕ್ಷ್ಯವಿಡು ಎಂದು ಮಾರೀಚನೆಂಬ ಚಿನ್ನದ ಮಾಯಾಜಿಂಕೆ ಬೆನ್ನಟ್ಟುತ್ತಾನೆ, ರಾವಣನ ಕಿರಿಕಿಯಿಂದ ಬಂದ ಮಾರೀಚ ರಾಮನ ಬಾಣಕ್ಕೆ ಗುರಿಯಾಗಿ ಸಾಯುವಾಗಲೂ 'ಹೇ ಲಕ್ಷ್ಮಣ , ಹೇ ಸೀತೆ 'ಎಂದು ರಾಮನಂತೆ ಧ್ವನಿ ತೆಗೆದು ಚೀರಿ ಸಾಯುತ್ತಾನೆ. ಆಗ ಸೀತೆಯು ಲಕ್ಷ್ಮಣನಿಗೆ 'ಹೋಗಿ ನೋಡು ನಿಮ್ಮ ಅಣ್ಣನಿಗೆ ಏನಾಯಿತೆಂದು?' ಎಂದಾಗ,'ಅಣ್ಣನಿಗೆ ಏನೂ ಆಗಿರಲ್ಲ, ನೀವು ಕಾಳಜಿ ಮಾಡಬೇಡಿರೆಂದು' ಹೇಳಿದರೂ, ಸೀತೆ ಲಕ್ಷ್ಮಣನಿಗೆ 'ನಿನ್ನ ದೃಷ್ಟಿಕೋನವೇ ಬೇರೆ ಇದೆ' ಎಂದು ನಿಂದಿಸಿದಾಗಲೂ ಕೋಪಗೊಳ್ಳದೇ, ಅನಿವಾರ್ಯವಾಗಿ ಹೋಗಲೇಬೇಕಾದ ಸಂದಭ೯ ಬಂದಾಗ, ಗುಡಿಸಲು ಮುಂದೆ ಮೂರು ಗೆರೆ ಹಾಕಿ, ಇದನ್ನು ದಾಟಿ ಬರಬೇಡಿರಿ ಅತ್ತಿಗೆ ಎಂದು ಹೇಳಿ ಹೋಗುತ್ತಾನೆ. ಆಗ ರಾವಣ ಸನ್ಯಾಸಿ ವೇಷದಿಂದ ಬಂದು ಭಿಕ್ಷೆ ಬೇಡುವ ನೆಪದಿಂದ ಸೀತೆಯನ್ನು ಪುಸಲಾಯಿಸಿ ಆ 'ಲಕ್ಷ್ಮಣ ರೇಖೆ'ಯನ್ನು ದಾಟಿಸಿ ಹೊತ್ತೊಯ್ಯುತ್ತಾನೆ. ಇಂತಹ ಅಪರೂಪದ ವ್ಯಕ್ತಿತ್ವ ಲಕ್ಷ್ಮಣನದು. ಇಡೀ ತನ್ನ ಜೀವನವನ್ನು ಪರರಿಗಾಗಿ ತ್ಯಾಗ ಮಾಡಿದ ಧೀರೋಧಾತ್ತ ಪುರುಷ! ಈಗಿನ ಕಾಲದಲ್ಲಿ ಇಂಥವರು ಇರುವುದುಂಟೆ?


ಇಂಥಹ ಲಕ್ಷ್ಮಣನೂ, ಕೊನೆಗೆ ಯುದ್ಧ ಮುಗಿದು ರಾವಣ ಹತನಾಗಿ, ಅವನ ಸಂಸ್ಕಾರವನ್ನೂ ಯಾವ ರಾಗದ್ವೇಷಗಳಿಲ್ಲದೆ ವಿಭೀಷಣನಿಂದ ರಾಮ ಮಾಡಿಸುತ್ತಾನೆ. 'ತನ್ನಣ್ಣ ದುಷ್ಟ ರಾಕ್ಷಸ, ಅವನ ಅಂತ್ಯ ಸಂಸ್ಕಾರ ತಾನು ಮಾಡುವುದಿಲ್ಲ' ಎಂದು ಶ್ರೀರಾಮನಿಗೆ ವಿಭೀಷಣ ಹೇಳುತ್ತಾನೆ.

ಆಗ ರಾಮ ಹೇಳುತ್ತಾನೆ,' ಸತ್ತ ನಂತರವೂ ದ್ವೇಷ ಸಾಧಿಸಬಾರದು, ರಾವಣ ಶ್ರೇಷ್ಠ ಶಿವಭಕ್ತ, ಅವನು ನನಗೂ ಅಣ್ಣನೇ, ನೀನು ಅಂತ್ಯಸಂಸ್ಕಾರ ಮಾಡದಿದ್ದರೇ ನಾನು ಮಾಡುತ್ತೇನೆ' ಎಂದು. ಈಗಾಗಲೇ ಜಟಾಯು ಪಕ್ಷಿಯ ಅಂತ್ಯಸಂಸ್ಕಾರವನ್ನು ರಾಮಚಂದ್ರನೇ ಮಾಡಿ ಬಂದಿರುತ್ತಾನೆ.

ಆಗ ಸರಿ ಎಂದು ಒಪ್ಪಿಕೊಂಡು ವಿಭೀಷಣನು ಅಣ್ಣನ ಅಂತ್ಯಸಂಸ್ಕಾರ ನೆರವೇರಿಸುತ್ತಾನೆ. ಎಲ್ಲ ಮುಗಿದು ವಿಭೀಷಣನಿಗೆ ಲಂಕೆಯ ಪಟ್ಟಗಟ್ಟಿ, ಪುಷ್ಪಕ ವಿಮಾನದಲ್ಲಿ ಮರಳಿ ಅಯೋಧ್ಯೆಗೆ ಮರಳುವಾಗ ವಿಮಾನದಿಂದ ಕೆಳಗೆ ಲಂಕೆ ನೋಡಿದಾಗ ಲಕ್ಷ್ಮಣನಿಗೆ ಅಲ್ಲಿ ಬರೀ ಬಂಗಾರವೇ ಕಾಣುತ್ತದೆ. ಅವನು ರಾಮನಿಗೆ ಹೇಳುತ್ತಾನೆ,' ಇಲ್ಲಿಯೇ ಬಂಗಾರದ ರಾಶಿಯಿದೆ, ಸಮೃದ್ಧಿಯಿದೆ ಅಯೋಧ್ಯೆಗೆ ಹೋಗುವುದು ಬೇಡ, ಇಲ್ಲಿಯೇ ರಾಜ್ಯಭಾರ ಮಾಡೋಣ' ಎಂದು. ಅದಕ್ಕೆ ರಾಮ ಹೇಳುತ್ತಾನೆ,'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಎಂದು. ಜನ್ಮ ನೀಡಿದ ತಾಯಿ ಜನುಮ ನೀಡಿದ ಸ್ಥಳ ಸ್ವರ್ಗಕ್ಕಿಂತ ಮಿಗಿಲು ಎಂದು.


ಇಲ್ಲಿ ಹಾಗೂ ಎಲ್ಲೆಲ್ಲಿಯೂ ಶ್ರೀರಾಮ ನಿಷ್ಠೆಯ, ರಾಜಧರ್ಮದ ಪತಾಕೆ ಹಾರುತ್ತದೆ ಸದಾ. ಈ ಮೌಲ್ಯಗಳೆಲ್ಲ ಇಂದು ದುರ್ಬಿನು ಹಚ್ಚಿ ಹುಡುಕಿದರೂ ಸಿಗುವುದಿಲ್ಲ!


ಆದರೆ ನನಗೆ ವಿಚಿತ್ರ ಎನಿಸಿದ್ದು, ಎಲ್ಲವನ್ನೂ ಪರಿತ್ಯಾಗ ಮಾಡಿದ, ತ್ಯಾಗ ಶಬ್ದಕೊಂದು ಹೊಸ ಪರಿಭಾಷೆ ಕಲ್ಪಿಸಿದ ಲಕ್ಷ್ಮಣ, ಬಂಗಾರಕ್ಕಾಗಿ ಏಕೆ ಆಶೆಪಟ್ಟ? ಇದೂ ಒಂದು ರೀತಿಯ ಮಾಯೆಯೆ ಇರಬಹುದು!


'ಶಬರಿ'.........ಇಡೀ ರಾಮಾಯಣದ ಟೈಸ್ಟ್ ಇರುವುದೇ ರಾಮಚಂದ್ರ ಶಬರಿಯನ್ನು ಭೇಟಿಯಾಗುವುದರಲ್ಲಿ. ಶಬರಿ ಎಂದರೇ ಅದು ಬರೀ ಹೆಸರಲ್ಲ,ಅದು ಭಕ್ತಿ ಪರಾಕಾಷ್ಠೆಯ ಉಸಿರು! ಇಡೀ ಜೀವನವನ್ನು ಶಬರಿ ಕಾದಿರುವಳು ರಾಮ ಬರುವನೆಂದು! ತಾನು ಪ್ರತಿ ಬೋರೆ ಹಣ್ಣಿನ ರುಚಿ ನೋಡಿ, ಅದರಲ್ಲಿ ರುಚಿಯಾದುದನ್ನು ಮಾತ್ರ ತೆಗೆದಿಟ್ಟು ತನ್ನ ಸ್ವಾಮಿಗೆ ಕೊಡಲೆಂದು, ಎಂಥ ಅದ್ಭುತವಲ್ಲವೆ ಇದು!


ಇಲ್ಲಿ ಭಕ್ತಿ ಕೋಟಿ ರೂಪಾಯಿಯ ಸೀರೆ ಉಟ್ಟಿಲ್ಲ, ಕೆಜಿಗಟ್ಟಲೇ ಬಂಗಾರ ವಜ್ರ ವೈಢೂರ್ಯ ತೊಟ್ಟಿಲ್ಲ. ಬರೀ ಸಾಧಾರಣ ಸೀರೆ ಉಟ್ಟ ಆದರೆ ಮೈತುಂಬ ಮನ ತುಂಬ ಭಕ್ತಿ ಪ್ರೀತಿ ವಿಶ್ವಾಸ ನಂಬಿಕೆ ಮಾನವೀಯ ಮೌಲ್ಯಗಳನ್ನು ತನಗೇ ತಿಳಿಯದಂತೆ ಧರಿಸಿದ, ಶ್ರೇಷ್ಠ ಪರಂಪರೆಯೊಂದು ನಮ್ಮ ಕಣ್ಣ ಮುಂದಿದೆ. ಶ್ರೀರಾಮನಾದರೂ ಅವಳ ಪ್ರೀತಿಯ ಭಕ್ತಿಯ ಎಂಜಲು ತಿಂದು ಮುಗುಳ್ನಕ್ಕು ಅವಳ ಇಡೀ ಜೀವನದ ಮಹತ್ವಾಕಾಂಕ್ಷೆಯನ್ನು ಈಡೇರಿಸಿದ ದೈವ. ಇಲ್ಲಿ ಈ ಶಬರಿ ಭೇಟಿಯ ಸನ್ನಿವೇಶವನ್ನು ವರ್ಣಿಸಲು ರಾಮಾಯಣದಲ್ಲಿ ಶಬ್ದಗಳು ಸೋತಿವೆ, ಇಲ್ಲಿ ಗೆದ್ದಿರುವುದು ಬರೀ ಪ್ರೀತಿ ಮಾತ್ರ. ಅದಕ್ಕೆ ರಾಮಚಂದ್ರನು ಸರ್ವ ಕಾಲಕ್ಕೂ ಸರ್ವರಿಗೂ ಸೇರಿದವನಾಗುತ್ತಾನೆ. ಮಾನವತೆಯ ಪ್ರತಿರೂಪವೇ ಆಗಿಬಿಡುತ್ತಾನೆ. ಈ ಮೌಲ್ಯಗಳು ಹೃದಯದಿಂದ ಬಂದಿದ್ದು, ಯಾರ ಒತ್ತಾಯಕ್ಕೋ ಅಥವಾ ಈಗಿನವರಂತೆ ಅಧಿಕಾರ ಪಡೆಯಲು ಟಿವಿಗೆ ಪತ್ರಿಕೆಗೆ ಪೋಜು ಕೊಡಲು ಅಲ್ಲ. ಈ ಮೌಲ್ಯಗಳನ್ನು ಎಷ್ಟು ಜನ ನಮ್ಮ ನಾಯಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ? ಬಹುಶಃ ಇದು ಪ್ರಶ್ನೆಯಾಗಿಯೇ ಉಳಿಯುತ್ತದೆ.


ನಾವು ಇನ್ನೊಬ್ಬರಿಗೆ ಗೌರವಿಸಿದರೆ ಅವರೂ ಗೌರವಿಸುತ್ತಾರೆ. ಇಲ್ಲಿ ವಾಲಿಯಿಂದ ಮೋಸ ಹೋದ ವಾನರ ದೊರೆ ಸುಗ್ರೀವನಿಗೆ ರಾಮ ಸಹಾಯ ಮಾಡಿದ. ಆಗ ಇಡೀ ವಾನರ ಸೇನೆ ಹನುಮಂತನ ನೇತೃತ್ವದಲ್ಲಿ ರಾಮನಿಗೆ ಸೀತೆಯನ್ನು ಹುಡುಕಲು ಬೆಂಗಾವಲಾಗಿ ನಿಲ್ಲುತ್ತದೆ. ರಾಮಸೇತು ನಿರ್ಮಾಣವಾಗುತ್ತದೆ. ಅದೂ ಬರೀ ಕೇವಲ ಐದು ದಿನಗಳಲ್ಲಿ! ಈಗಿನ ರಾಜಕೀಯದಂತೆ ಇಲ್ಲಿ ಯಾವ ಟೆಂಡರ್ ಇಲ್ಲ, ಪರ್ಸೆಂಟೇಜ್ ಇಲ್ಲ, ಕಮಿಶನ್ ಇಲ್ಲ.ಇದ್ದದ್ದು ಬರೀ ಭಕ್ತಿ ಎಂಬ ದೊಡ್ಡ ಶಕ್ತಿ! ಎಲ್ಲ ವಾನರರೂ ಕಲ್ಲುಗಳ ಮೇಲೆ ಶ್ರೀರಾಮ ಎಂದು ಬರೆದು ನೀರಲ್ಲಿ ಒಗೆಯುತ್ತಿರುತ್ತಾರೆ, ಅವು ಮುಳುಗುವುದಿಲ್ಲ ತೇಲುತ್ತವೆ. ಅದನ್ನು ನೋಡಿ ಪ್ರಭು ತಾನೂ ಕಲ್ಲು ನೀರಲ್ಲಿ ಹಾಕಿದರೇ ಅದು ಡುಮಕ್ ಎಂದು ಮುಳುಗಿ ಬಿಡುತ್ತದೆ. ಸದ್ಯ ಯಾರೂ ನೋಡಿಲ್ಲವೆಂದು ಪ್ರಭು ಸಮಾಧಾನ ಪಟ್ಟುಕೊಂಡು ನೋಡಿದರೆ ಹಿಂದೆಯೇ ಇದ್ದ ಭಂಟ ಹನುಮಂತ ನಗುತ್ತಾನೆ. ಪ್ರಭು ಹೀಗೇಕಾಯಿತಿದು?ಎಂದು ಹನುಮಂತನಿಗೆ ಕೇಳುತ್ತಾನೆ. ಆಗ ರಾಮಭಂಟ ಹನುಮ ಹೇಳುತ್ತಾನೆ,'ಪ್ರಭು ನಾವು ನಿನ್ನ ನಂಬಿ ನಿನ್ನ ಹೆಸರು ಹೇಳಿ ನೀರಲ್ಲಿ ಕಲ್ಲು ಹಾಕಿದರೆ ಅದು ತೇಲುತ್ತದೆ, ಆದರೆ ಭಕ್ತರು ನಿನ್ನನ್ನೇ ಆಶ್ರಯಿಸಿರುತ್ತಾರೆ, ಅಂಥದರಲ್ಲಿ ಸಕಲ ಗ್ರಹ ಬಲ ನೀನೇ ಸರಸಿಜಾಕ್ಷನಾದ ನೀನೇ ಕಲ್ಲನ್ನು ನೀರಲ್ಲಿ ಹಾಕಿದರೇ ಅದು ಹೇಗೆ ತೇಲಿತು? ಕಾಯುವವನೇ ಕೊಂದರೆ? ಹಾಗಾಗುತ್ತದೆ ಪ್ರಭು,ನಿನ್ನ ಅಭಯ ಹಸ್ತ ಸದಾ ಎಲ್ಲರ ಮೇಲಿರಲಿ' ಎಂದು


ಇದು ಎಲ್ಲರಿಗೂ ಸಾಧ್ಯವೆ? ಸತ್ಯ ನ್ಯಾಯ ನೀತಿ ಧರ್ಮ ಪ್ರತಿಪಾದಕ, ಏಕಪತ್ನಿ ವೃತಸ್ಥ, ಸದಾ ಸಂಯಮಿ, ತಾಳ್ಮೆಯ ಪ್ರತಿರೂಪಿ, ಹಿರಿಯರನ್ನು ಗೌರವಿಸುವವ,ಕಿರಿಯರನ್ನು ಪ್ರೋತ್ಸಾಹಿಸುವ, ಅಧಿಕಾರ ವ್ಯಾಮೋಹ ಇಲ್ಲದ    ನಿರ್ಮೋಹಿಯಾದವನಿಗೆ,ಧರ್ಮ ಪರಿಪಾಲಕನಿಗೆ, ಬಡವ ಬಲ್ಲಿದ, ದೀನ ದುರ್ಬಲರನ್ನು ಒಂದೇ ರೀತಿಯಲ್ಲಿ ಕಾಣುವ, ಹೆಣ್ಣು ಮಕ್ಕಳನ್ನು ಗೌರವಿಸುವ, ಸಕಲ ವಿದ್ಯಾ ಪರಿಣಿತನೂ ಆದ ವಿಶಾಲ ಮನೋಭಾವ ಹೊಂದಿರುವ ಸದ್ಗುಣಿಗೆ ಮಾತ್ರ ಸಾಧ್ಯ. ಅಂಥವನು ವೈದೇಹಿ ಪತಿ ಶ್ರೀರಾಮನಲ್ಲದೇ ಬೇರೆ ಯಾರಿರಲು ಸಾಧ್ಯ? ಇಂಥ ನಾಯಕರು ನಮ್ಮಲ್ಲಿ ಸಿಗುವುದುಂಟೆ?


ರಾಮಾಯಣದ ಸತ್ಯಪಥದ ರಾಜಕೀಯ ನಿಲುವುಗಳು ಮೌಲ್ಯಗಳು ಸರ್ವಕಾಲಕ್ಕೂ ಮಾನ್ಯ. ಅವರಂತೆ ನಡೆದರೆ ರಾಮರಾಜ್ಯವಾಗುವುದು ಖಂಡಿತ. ಆದರೆ ರಾಕ್ಷಸಿ ಮನೋಭಾವದ ವಿತಂಡವಾದಿಗಳಿಗೆ ಇದು ರುಚಿಸುವುದೆ? ಖಂಡಿತ ಸಾಧ್ಯವಿಲ್ಲ! ತಮ್ಮ ಖೆಡ್ಡಾ ತಾವೇ ತೋಡಿಕೊಳ್ಳುತ್ತೇನೆ ಎಂದು ಹೇಳುವವರಿಗೆ ಏನು ಹೇಳುವುದು ಹೇಳಿ ಸಜ್ಜನರೆ?


ರಾಮ ಸೀತೆ ಲಕ್ಷ್ಮಣ ಭರತ ಶತೃಘ್ನ ಹನುಮ ಶಬರಿ....... ಇವರು ಸರ್ವ ಕಾಲಕೂ ಸಲ್ಲುವವರು. ಎಲ್ಲ ಕಾಲದ ರೋಲ್ ಮಾಡೆಲ್ ಇವರು. ಇವರನ್ನು ಅರಿತರೆ ಅನುಸರಿಸಿದರೆ ಲೋಕ ಕಲ್ಯಾಣ ಗ್ಯಾರಂಟಿ. ಇಲ್ಲದಿರೆ ಅದು ಬರೀ ಭ್ರಮೆ.


'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ


ಕಷ್ಟಗಳ ಕೊಡಬೇಡ ಎನಲಾರೆ ರಾಮ

ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ


ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ

ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ


ಕಣ್ಣು ಕಳೆದರೂ ನಿನ್ನ ಕನಸು ಕೊಡು ರಾಮ

ನನ್ನ ಹರಣಕೆ ನಿನ್ನ ಚರಣ ಕೊಡು ರಾಮ

ಆರಂಭ ಅಸ್ತಿತ್ವ ಅಂತ್ಯ ನೀ ರಾಮ'


ಇಡೀ ರಾಮಾವತಾರವನ್ನು ಕವಿ ಗಜಾನನ ಶರ್ಮ ಇಲ್ಲಿ ಹಿಡಿದಿಟ್ಟಿದ್ದಾರೆ. ರಾಮನಲ್ಲಿ ಏನಿದೆ? ಎಂದರೆ, ರಾಮನಲ್ಲಿ ಏನಿಲ್ಲ? ಎನ್ನಬೇಕಾಗುತ್ತದೆ. ಇಲ್ಲಿ ಉತ್ತಮತ್ವದ ಪರಿಪಾಕವೇ ಇದೆ, ರಾಜಕೀಯ ಚಾಣಾಕ್ಷತೆ ಇದೆ, ಕ್ಷಮಿಸುವ ಔದಾರ್ಯತೆ ಇದೆ, ಮೌಲ್ಯಗಳಿಗೆ ಬೆಲೆ ಇದೆ, ಆರಾಧನೆ ಇದೆ, ಔದಾರ್ಯ ಇದೆ, ಶ್ರೇಷ್ಠತೆಯ ಪರಾಕಾಷ್ಠೆ ಇದೆ, ಬಡವರ ಬಗ್ಗೆ ಅಂತಃಕರುಣೆ ಇದೆ, ಸೊಕ್ಕಿದವರ ಹೆಡಮುರಿ ಕಟ್ಟುವ ಬಗೆಯೂ ಇದೆ, ಸಂಜೀವಿನಿ ಇದೆ, ಸಂತೋಷದ ಕಡಲೂ ಇದೆ, ದುಃಖ ಸಹಿಸುವ ಅಪಾರ ತಾಳ್ಮೆ ಇದೆ, ಸಾಹಸಕ್ಕೂ ಸೈ ಸಹನೆಗೂ ಸೈ, ಇಡೀ ಸಂಜೀವಿನಿ ಪರ್ವತವನ್ನೇ ತರುವ ಹನುಮ ಧೀ ಶಕ್ತಿ ಇದೆ, ಭೂಮಿ ಪುತ್ರಿ ವೈದೇಹಿ,ಲವಕುಶರೂ, ಮಹರ್ಷಿಗಳೂ, ಎಲ್ಲರೂ ಇದ್ದಾರೆ. ಇವರ ಜೊತೆ ಶ್ರೇಷ್ಠ ಶಿವಭಕ್ತ ರಾವಣ, ಕುಂಭಕರ್ಣ, ಇಂದ್ರಜೀತರೂ ಇದ್ದಾರೆ. ಪರಮ ಸಾಧ್ವಿ ಮಂಡೋದರಿಯ ಉಪಸ್ಥಿತಿ ಇದೆ. ಬಹುಶಃ ಈ ರಾಮಾಯಣವೇ ಈ ಜಗದ ಜೀವ ಚೈತನ್ಯವಾಗಿದೆ. ರಾಜಕೀಯ ನೆಲೆಗಳು ಇಲ್ಲಿ ಮಾನವೀಯ ಮೌಲ್ಯಗಳಲ್ಲಿ ರೂಪಿತಗೊಂಡಿವೆ. ಇಲ್ಲಿ ಸ್ವಾರ್ಥ ಸ್ವಜನ ಪಕ್ಷಪಾತ ಇಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳು ಇಣುಕಿ ಹಾಕಿ ಮತ್ತೇ ಗೂಡು ಸೇರಿವೆ. ಆದರೆ ಈಗ ಎಲ್ಲ ಕಡೆಗೆ ವಿಜೃಂಭಿಸುತ್ತಿರುವುದು ಬರೀ ಅರಿಷಡ್ವರ್ಗಗಳೇ!

ಕೆಟ್ಟದ್ದು ಈಗ ಬೇಗ ಸೆಳೆಯುತ್ತದೆ. ಆದರೆ ಅದರ ಆಯುಷ್ಯವೂ ಕೂಡ ಕಡಿಮೆಯೇ! ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದರೂ ಅದರ ಸುತ್ತಲೇ ಸುತ್ತುತ್ತದೆ ಪತಂಗ! ಆ ರೀತಿ ನಡೆದಿದೆ ಇಂದಿನ ಲೋಕ ವ್ಯವಹಾರ. ಶ್ರೀರಾಮನೆಂಬ ಆತ್ಮವಿಶ್ವಾಸ ಸದಾ ನಮ್ಮೊಡನಿರಲಿ ಎಂಬ ಸದಾಶಯ ನಮ್ಮದು.




-ಶ್ರೀನಿವಾಸ ಜಾಲವಾದಿ, ಸುರಪುರ


ನಿವೃತ್ತ ಉಪಪ್ರಾಂಶುಪಾಲರು

ನಿಕಟಪೂರ್ವ ಅಧ್ಯಕ್ಷರು ತಾಲೂಕಾ ಕ.ಸಾ.ಪ 

ಸಂಚಾಲಕರು ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ

ಗಾಂಧಿ ಚೌಕದ ಹತ್ತಿರ

ಸುರಪುರ-585224

ಜಿಲ್ಲಾ ಯಾದಗಿರಿ

ಮೊ.9886563179 / 8105693179



ಲೇಖಕರ ಸಂಕ್ಷಿಪ್ತ ಪರಿಚಯ: 


ಶ್ರೀ ಶ್ರೀನಿವಾಸ ಜಾಲವಾದಿ ಅವರು, ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಸಲ್ಲುವವರು. ಕಾವ್ಯ, ಕಥೆ, ಕೀರ್ತನೆ, ವಿಡಂಬನೆ, ಭಕ್ತಿಗೀತೆ, ಭಾವಗೀತೆ, ವೈಚಾರಿಕ, ಧಾರ್ಮಿಕ, ನಾಟಕ ಇತ್ಯಾದಿ ಎಲ್ಲವನ್ನೂ ಭರಿಸಬಲ್ಲ ಪ್ರತಿಭೆ. ಸದಾ ಲವಲವಿಕೆಯ ಜೀವನ ಮುಖಿ ಈ ಜಾಲವಾದಿ. 

ಎಲ್ಲ ಬಗೆಯ ಪ್ರಕಾರಗಳಲ್ಲಿ ಬರೆಯುವ ಅವರದು ಚೇತೋಹಾರಿ ಬರವಣಿಗೆ. ಅವರಿಗೆಲಲಿತ ಕಲೆಗಳಲ್ಲಿ ಆಸಕ್ತಿ; ಲಲಿತ ಪ್ರಬಂಧಗಳಲ್ಲಿ ಅನುರಕ್ತಿ.

ಜೀವನ ಅನುಭವಗಳ ಸಂಕಲಿಸಿ ಅಕ್ಷರ ರೂಪ ನೀಡಬಲ್ಲ ಅಪರೂಪದ ಲೇಖಕ. ಧೋರಣೆಗಳು, ಕಟ್ಟುಪಾಡುಗಳು, ಸಾಮಾಜಿಕ ಪಿಡುಗುಗಳು ಬೀಸುವ ಜಾಲಗಳನ್ನು ಲೀಲಾಜಾಲವಾಗಿ ಬೇಧಿಸಬಲ್ಲ ಚತುರರು. ಸ್ವಯಂ ಪ್ರೇರಣೆಯಿಂದ ಬರಹದ ಬುಗ್ಗೆ ಉಕ್ಕಿಸಬಲ್ಲ ಉತ್ಸಾಹಿ. ವಾಚ್ಯದಲ್ಲಿಯೂ ವಾಗರ್ಥ ಹೊರಡಿಸಬಲ್ಲ ಶ್ರೀನಿವಾಸ ಜಾಲವಾದಿಯವರು ಕಾವ್ಯದೊಂದಿಗೆ ಅನುಸಂಧಾನಗೈದವರು. ವಿಶಿಷ್ಟ ಹಾಸ್ಯ ಪ್ರಜ್ಞೆಯಿಂದ ಅನೇಕ ವೃತ್ತಾಂತಗಳನ್ನು ರಚಿಸಿ ಓದುಗರನ್ನು ರಂಜಿಸಿದವರು.

ಸಾಂಪ್ರದಾಯಿಕ ಶಿಕ್ಷಣದಲ್ಲಿಲ್ಲದ ಬದುಕುವ ಕಲೆಯನ್ನು ತಮ್ಮ ಬರಹಗಳ ಮೂಲಕ ಕಲಿಸಿಕೊಟ್ಟವರು. ಶ್ರೀನಿವಾಸ ಜಾಲವಾದಿ ಅವರ ಸೃಜನಶೀಲ ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆಯಲ್ಲಿ ಕಾವ್ಯದ ಹೊಳಪು, ಮಂದಹಾಸ, ಸೂಕ್ಷ್ಮಮತಿತ್ವ, ವಿಡಂಬನೆ, ಪ್ರಾಸಲಾಲಿತ್ಯ, ಪದಲಾಲಿತ್ಯ ಮುಂತಾದ ಮಜಲುಗಳಿವೆ. ಪ್ರಚಲಿತ ವಿದ್ಯಮಾನಗಳ ವಿವೇಚನೆಯಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top