4567: ನಾಲ್ಕು ಸಾವಿರದ 'ಐನೋರಾ' ಅರವತ್ತೇಳು- ಒಂದು ವಿಶಿಷ್ಟ ಸಂಖ್ಯೆ

Upayuktha
0

(ಒಂದು ವಿಶಿಷ್ಟ ಲಘು ಬರಹ) 



"ದರ್ಶನ್ ಬ್ಲಾಕ್ ಸ್ಟೋನ್ ಅಗರ್‌ಬತ್ತಿ - ಒಂದು ವಿಶಿಷ್ಟ ಪರಿಮಳ" ಅಂತ ವಿದ್ಯಾ ಬಾಲನ್ ಹೇಳುವ ಹಾಗೆ,  "ನಾಲ್ಕು ಸಾವಿರದ ಐನೋರಾ ಅರವತ್ತೇಳು- ಒಂದು ವಿಶಿಷ್ಟ ಸಂಖ್ಯೆ" ಅಂತ ಮೇಲುಕೊಪ್ಪದ ಸಂಖ್ಯಾ ಜೋತಿಷಿ ಅನಾರ್ಯವರ್ದಿಯವರು  ಇವತ್ತಿಂದ ಹೇಳೋದಕ್ಕೆ ಶುರು ಮಾಡಿದಾರೆ!!!


ಅದೇನು ಇವತ್ತಿಂದ!!?


ಅದು ಒಂದು ವಿಶಿಷ್ಟ ಸಂಖ್ಯೆಯಾಗಿ ಇವತ್ತು ಕಂಡಿದ್ದರಿಂದ!!


ಅದರಾಗೇನು ಅಷ್ಟು ವೈಶಿಷ್ಠತೆ!!?


ಅದನ್ನು ಮೇಲುಕೊಪ್ಪದ ಅನಾರ್ಯವರ್ದಿಯವರನ್ನೇ ಐನೋರಾ, ಇದೊಂದು ಸಮಸ್ಯೆಗೆ ಪರಿಹಾರ ಹೇಳಿ ಅಂತ ಕೇಳೋಣ, ಬನ್ನಿ.


ಓವರ್ ಟು ಅನಾರ್ಯವರ್ದಿ ವೀಡಿಯೋ ಪೆನ್‌ಡ್ರೈವ್!!! (ಲ್ಯಾಪ್‌ಟ್ಯಾಪ್‌ಗೆ ಕನೆಕ್ಟ್ ಮಾಡಲಾಗಿದೆ ಅಂತ ಭಾವಿಸಿಕೊಂಡು ಕೇಳ್ತಾ ಹೋಗಿ) 


***


ಅನಾರ್ಯವರ್ದಿ:


"ಒಂದೇ ಬಾಜಿನ, ರಮ್ಮಿ ಆದ ನಾಲ್ಕು ಇಸ್ಪೀಟ್ ಕಾರ್ಡ್‌ನ್ನು ಜೋಡಿಸಿದಂತೆ ಕಾಣುವ 4567 ಅನ್ನುವುದು ಒಂದು ಸರಳ ಸಂಖ್ಯೆ.  ಇವತ್ತು ರಾಜಕೀಯ ವ್ಯಕ್ತಿಯೊಬ್ಬರು ತಮ್ಮ ಸ್ಟಾರ್ ಸರಿಯಿಲ್ಲದೆ, ಯಾವುದೋ ರಾಶಿ ನಕ್ಷತ್ರ ಸಂಖ್ಯಾ ದೋಷ ಗಳಿಂದ,  ಜೈಲಿನ ಸರಳುಗಳ ಹಿಂದೆ ಕಂಬಿ ಎಣಿಸುವಂತಾದ ಖೈದಿಗೆ ಕೊಟ್ಟ ಸಂಖ್ಯೆ."


"ಹೋಮ, ಹವನ, 'ಮಂತ್ರಿ'ಸಿದ ಲಿಂಬೇ ಹಣ್ಣುಗಳಿಗೂ ನಕ್ಷತ್ರ ದೋಷಗಳು ಪರಿಹಾರ ಕಾಣದಿರುವುದು ಒಂದು ದುರಂತ ಗ್ರಹಗತಿಯೇ ಸರಿ." 


"ಸಮಸ್ಯೆಗಳಿಗೆ ಈ ಕಲಿಯುಗದಲ್ಲಿ ಉತ್ತರ ಸಿಗುವುದು ಸಂಖ್ಯೆಗಳಿಂದಲೇ ಹೊರೆತು, ಲಿಂಬೆ ಹಣ್ಣಿನಿಂದಲ್ಲ!!!"


"ಬಿಡಿ, ಅದೂ ಅಂತಹ ವಿಶೇಷ ನಕ್ಷತ್ರ ಸಂಖ್ಯಾ ದೋಷ ಏನೂ ಅಲ್ಲ.  ನಕ್ಷತ್ರ ಗತಿ, ಗ್ರಹ ಗತಿಗಳು ಬದಲಾಗಿ ದಿನಾಂಕದ ಸಂಖ್ಯೆ ಬದಲಾದಾಗ, ಬೇಲ್ ಸಿಗಬಹುದು.  ಅವರು 4567 ಸಂಖ್ಯೆಯ ಬಿಳಿ ಶರ್ಟ್ ಬಿಚ್ಚಿಟ್ಟು, ಕಪ್ಪು ಕಲೆ ಇಲ್ಲದ ಶುದ್ದ ಬಿಳಿ ಶರ್ಟ್ ಧರಿಸಬಹುದು. ಅದ್ಯಾವುದೂ ವಿಶೇಷ ಅಲ್ಲ."


"ವಿಶೇಷ ಇರುವುದು ಅದೇ ನಂಬರಿನ ಒಂದು ನಕ್ಷತ್ರ ಪುಂಜ ಇರುವುದು!!!."


"NGC 4567 ಎಂಬ ಹೆಸರಿನ ನಕ್ಷತ್ರ ಪುಂಜ.  ಗ್ಯಾಲಕ್ಸಿ."


"ಈ NGC 4567 ನಕ್ಷತ್ರ ಪುಂಜದ ಪಕ್ಕದಲ್ಲಿ NGC 4568 ಎನ್ನುವ ಇನ್ನೊಂದು ನಕ್ಷತ್ರ ಪುಂಜ ಇದೆ." 


"NGC 4567 ಮತ್ತು NGC 4568  ಎರಡು ಗ್ಯಾಲಕ್ಸಿಗಳು ಪರಸ್ಪರ ಸಂಪರ್ಕಗೊಂಡಂತೆ ಅಥವಾ ಬಂಧಿಯಾಗಿರುವಂತೆ ಇವೆ.  ಹಾಗಾಗಿಯೇ ಈ ಎರಡು  NGC 4567 ಮತ್ತು NGC 4568  ನಕ್ಷತ್ರ ಪುಂಜಗಳಿಗೆ ಸಯಾಮಿ ಟ್ವಿನ್ಸ್ ಅಂತಲೂ ಹೆಸರಿದೆ."


"ಈ ಎರಡು ಗೆಲಕ್ಸಿಗಳು ಪರಸ್ಪರ ಘರ್ಷಣೆ ಮತ್ತು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿವೆ ಹಾಗು ಇನ್ನು ಕೆಲವೇ ವರ್ಷಗಳಲ್ಲಿ ಅಂದರೆ ಸುಮಾರು 500 ದಶಲಕ್ಷ ವರ್ಷಗಳಲ್ಲಿ ಈ ಗೆಲಕ್ಸಿಗಳು ಒಂದೇ ದೀರ್ಘವೃತ್ತದ ಗೆಲಾಕ್ಸಿಯಾಗಿ ಒಗ್ಗೂಡುತ್ತವೆ ಅಂತ 1784 ರಲ್ಲಿ ವಿಲಿಯಂ ಹರ್ಷಲ್ ಎಂಬುವವರು ಈ ಗ್ಯಾಲಕ್ಸಿಗಳನ್ನು ಕಂಡು ಹಿಡಿದು, ಮಾಹಿತಿ ಬರೆದಿಟ್ಟಿದ್ದಾರೆ!!!  ಅಂದರೆ ಸುಮಾರು 500 ದಶಲಕ್ಷ ವರ್ಷಗಳ ನಂತರ ಈ ಎರಡು ನಕ್ಷತ್ರ ಪುಂಜಗಳು ಒಂದೇ ನಕ್ಷತ್ರ ಪುಂಜವಾಗಿ ಸಿಂ'ಹಾಸನ' ಏರಲಿವೆ!!!"


"ಇನ್ನೂ ವಿಶೇಷ ಇರುವುದು ಈ ಎರಡು ಪುಟ್ಟ ನಕ್ಷತ್ರ ಪುಂಜ ಇರುವುದು ಕನ್ಯಾರಾಶಿ ನಕ್ಷತ್ರ ಪುಂಜ ಸಮೂಹದ ಒಳಗಡೆ!!!"


(ಪೆನ್‌ಡ್ರೈವ್‌ನಲ್ಲಿ ಜಾಗ ಇಲ್ಲದ ಕಾರಣ, ಮಾತುಗಳು ಇಲ್ಲಿಗೆ ನಿಂತು ಹೋಗಿವೆ!!)


**


ಅನಾರ್ಯವರ್ದಿಯವರು ಇಷ್ಟೆಲ್ಲ ಸಂಖ್ಯೆ ಕತೆ ಹೇಳ್ತಾರಲ್ಲ, ಹೇಗೆ ಸಾಧ್ಯ? ಎಂದು ಒಂದು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ (SIT) ಮಾಡಿ ರಹಸ್ಯ ಮಾಹಿತಿ ಕಲೆ ಹಾಕಿದಾಗ ಗೊತ್ತಾಗಿದ್ದು, ಅನಾರ್ಯವರ್ದಿಯವರು ಗೂಗಲ್ ವಿಕಿಪೀಡಿಯಾದಿಂದ ಇದನ್ನೆಲ್ಲ ಸಂಗ್ರಹಿಸಿ ಕತೆ ಹೇಳ್ತಾರೆ ಅಂತ!!! 


ಹೌದು ಗೂಗಲ್‌ನಲ್ಲಿ ಹೋಗಿ NGC 4567 ಅಂತ ಸರ್ಚ್ ಕೊಟ್ರೆ, 500 ದಶ ಲಕ್ಷ

ವರ್ಷಗಳ ಮುಂದಿನ ಸ್ಟಾರ್‌ಗಳ ಧಾರವಾಹಿಯ ಸ್ಕ್ರಿಪ್ಟ್ ಕೂಡ ಸಿಗುತ್ತೆ!!!


**


ಅದು ಹೋಗಲಿ, ಜೈಲಿನಲ್ಲಿ ಹಾಫ್ ತೋಳಿನ ಬಿಳಿ ಅಂಗಿಯ ಮೇಲೆ 4567 ಅಂತ ಪ್ರಿಂಟ್ ಮಾಡಿ ಶರಟು ತೊಡುವಂತೆ ಮಾಡ್ತಾರೆ.  ಒಂದು ವೇಳೆ 4567 ಅಂತ ಬರೆಯುವ ದಶಮಾನ ಪದ್ದತಿ ಇಲ್ಲದೆ, ಬರಿ ಬೈನರಿ ಸಂಖ್ಯಾ ಲಿಪಿ ಮಾತ್ರ ಇದ್ದಿದ್ದರೆ.....

ಶರಟಿನ ಮೇಲೆ 4567 ಎಂಬ ಸಂಖ್ಯೆಯನ್ನು:

1000111010111

ಅಂತ ಉದ್ದ ಬರೆಯಬೇಕಾಗುತ್ತಿತ್ತು!!!


ಅಥವಾ 


ರೋಮನ್ ಸಂಖ್ಯೆಯಲ್ಲಿ ಬರೆಯುವ ಪದ್ದತಿ ಇದ್ದಿದ್ದರೆ 4567 ಸಂಖ್ಯೆಯನ್ನು: MMMMDLXVII ಎಂದು ಬರೆಯಬೇಕಾಗುತ್ತಿತ್ತು.


ಸದ್ಯ, 4567ನ್ನು 4567 ಅಂತಲೇ ಬರೆಯುವ ದಶಮಾನ ಪದ್ದತಿಯೊಂದು ಬಂದು, ಗಣಿತ ಪರೀಕ್ಷೆಯಲ್ಲಿ ಎಲ್ಲರೂ ಡಿಸ್ಟಿಂಗ್ಷನ್‌ನಲ್ಲಿ ಫೇಲಾಗುವ ದುರವಸ್ಥೆ ತಪ್ಪಿದೆ.


ಅದಕ್ಕಿಂತ ಸಂಖ್ಯಾ ಜೋತಿಷಿ ಅನಾರ್ಯವರ್ಧಿಯವರ ಕತೆ ಏನಾಗಬೇಕಿತ್ತು!!?


ನನ್ನ ಮೊಬೈಲ್ ನಂಬರನ್ನು  1000110011001111011110111000010000  ಅಂತ ಬರೆಯಬೇಕಾಗಿತ್ತು!!!


ವಿಸಿಟಿಂಗ್ ಕಾರ್ಡ್ ಮಾಡಿಸಲು A4 ಶೀಟ್ ಬೇಕಾಗುತ್ತಿತ್ತು!!!


**

ಇನ್ನು ಈ 4567 ಎನ್ನುವುದು ಒಂದು ವಿಶಿಷ್ಟ ಪರಿಮಳದ ಅವಿಭಾಜ್ಯ ಸಂಖ್ಯೆ.  ಅವಿಭಾಜ್ಯ ಸಂಖ್ಯೆ ಅಂದರೆ, ಆರನೆ ಕ್ಲಾಸಿನಲ್ಲಿ ಗಣಿತದಲ್ಲಿ ಕಲಿತಂತೆ ಒಂದು ಮತ್ತು ಉಲ್ಲೇಖಿತ ಸಂಖ್ಯೆ ಹೊರತಾಗಿ ಬೇರೆ ಯಾವುದರಿಂದಲೂ ಭಾಗಿಸಲಾಗದ ಸಂಖ್ಯೆ.


4567 ಅನ್ನು 1 ರಿಂದ ಭಾಗಿಸಬಹುದು

4567 ಅನ್ನು 4567 ರಿಂದ ಭಾಗಿಸಬಹುದು. 

ಅಷ್ಟೆ.  


**

ಹಡಗು ನಿರ್ಮಾಣದ ಅಂತರರಾಷ್ಟ್ರೀಯ ಕ್ವಾಲಿಟಿ ಮಾನದಂಡಕ್ಕೆ ISO 4567 ಸರ್ಟಿಫಿಕೇಟ್‌ನ ಮಾನ್ಯತೆ ಕೊಡಲಾಗುತ್ತದೆ.

**

ಇದಿಷ್ಟು 4567 ರ ಸ್ಟೋರಿ!!!

ಈ 4567 ಸಂಖ್ಯೆಯ ಮಹತ್ವವನ್ನು ಪೆನ್ ಡ್ರೈವ್‌ನಲ್ಲಿ ಕಾಪಿ ಪೇಸ್ಟ್ ಮಾಡಿ,  ಸ್ಟೋರ್ ಮಾಡಿ ಇಟ್ಕೊಳಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248 (ದಶಮಾನ ಪದ್ದತಿಯಲ್ಲಿ!!)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top