|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-146: ರಾಮಾಯಣದ 'ರಾಕ್ಷಸ ಸ್ತ್ರೀ' ಪಾತ್ರಗಳು

ಶ್ರೀರಾಮ ಕಥಾ ಲೇಖನ ಅಭಿಯಾನ-146: ರಾಮಾಯಣದ 'ರಾಕ್ಷಸ ಸ್ತ್ರೀ' ಪಾತ್ರಗಳು


ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ ಕೃತಿ


- ಸುಗುಣ ಬಿ. ಆರ್. ಬೆಂಗಳೂರು


ತ್ರನಾರ್ಯಸ್ತು ಪೂಜ್ಯಂತೇ ತತ್ರರಮಂನ್ಸೇ ದೇವತಾಃ |

ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾ ಫಲಾ ಕ್ರಿಯಾ ||


ಸನಾತನ ಭಾರತದ ಹಿಂದು ಸಂಸ್ಕೃತಿ ಸ್ತ್ರೀಗೆ ಕೊಟ್ಟಿರುವ ವಿಶೇಷ ಸ್ಥಾನಮಾನ ಇಲ್ಲಿದೆ. ದೇವತೆ, ಮಾನಿನಿ, ರಾಕ್ಷಸಿ ಯಾವ ರೂಪದಲ್ಲಿ ಇದ್ದರೂ ಹೆಣ್ಣಿಗೆ ಮೂಲಭೂತವಾಗಿ ಸ್ವಾಭಾವಿಕವಾಗಿ ಅಂತರ್ಯಾಮಿಯಾಗಿ ಅನೇಕ ಸದ್ಗುಣಗಳು ಸಹಜವಾಗಿ ಅವಳಲ್ಲಿ ಆವಿರ್ಭವಿಸಿ ಹೊರಹೊಮ್ಮುತ್ತವೆ. 

ಇಲ್ಲಿ ರಾಮಾಯಣದ `ರಾಕ್ಷಸ ಸ್ತ್ರೀ ಪಾತ್ರದ ಚಿಂತನೆಯಲ್ಲಿ ಗಮನಿಸಬಹುದಾದ ಕೆಲವು ಅಂಶಗಳನ್ನು ನೋಡೋಣ ಬಾಲ್ಯದಲ್ಲಿ ಹನುಮಂತನ ಸಾಹಸಗಳನ್ನು ಪುಟ್ಟ ಮಕ್ಕಳಿಗೆ ರೋಚಕ ಕಥೆಗಳ ಮೂಲಕ ತಿಳಿಸುತ್ತಿದ್ದ ಹಿರಿಯರು, ಸುರಸೇ, ಸಿಂಹಿಕೆಯರ ಬಗ್ಗೆ ಅದ್ಭುತವಾಗಿ ವರ್ಣಿಸುತ್ತಿರುವುದನ್ನು ಕಾಣುತ್ತೇವೆ. ದೇವತೆಗಳಿಂದಲೇ ವರಪಡೆದ ಸುರಸೆ, ವಿಕಾರ ಘೋರ ರಾಕ್ಷಸಿ, ವಾನರ ಶ್ರೇಷ್ಠನನ್ನು ಆಹಾರವಾಗಿ ಸ್ವೀಕರಿಸುವ ಪ್ರಯತ್ನದಲ್ಲಿದ್ದಾಗ ಅವನೊಡನೆ ನಡೆಸಿದ ಸಂಭಾಷಣೆ ಗಮರ್ನಾಹವಾದುದು ಬ್ರಹ್ಮನಿಂದ ವರಪಡೆದ ಎಂದೆಲ್ಲ ಸಂಬೋಧೀಸುತ್ತಾಳೆ. ದೇವತೆಗಳಿಂದ ಶಾಪ ಪಡೆದ ಅವಳು, ಕೊನೆಗೆ ತನ್ನ ನಿಜರೂಪ ತೋರಿ ಎಲೈ ಹರಿಶ್ರೇಷ್ಠನೇ ಸುಖ ಪ್ರಯಾಣದಿಂದ ಕಾರ್ಯಸಿದ್ಧಿಯನ್ನು ಪಡೆ ಎಂದು ಹಾರೈಸುವಳು.


ನಂತರದ ಪಾತ್ರ ಕಾಮರೂಪಿಣಿ ಬೃಹದಾಕಾರದ ಸಿಂಹಿಕ ಕೇವಲ ಛಾಯಾಗ್ರಹಣದಿಂದ ಹನುಮಂತನನ್ನು ತನ್ನತ್ತ ಸೆಳೆದಾಗ ಮೇಧಾವಿ ಹನುಮಂತ ಹುಣ್ಣಿಮೆಯಂದು ಗ್ರಹಣ ಕಾಲದ ಚಂದ್ರನಂತಹ ಅವಳ ಬಾಯಲ್ಲಿ ಪ್ರವೇಶಿಸಿ ಸಂಹಾರ ಮಾಡಿದನು. 


ಮುಂದೆ ಲಂಕಾಧಿದೇವತೆ ಲಂಕಿಣಿ ಪರಮ ಕ್ರುದ್ದಳಾಗಿ ವಾನರಾಧಮನೇ ಎನ್ನುತ್ತಾ ಆಕ್ರಮಣ ಮಾಡಿದರೂ, ನಂತರ ಗರ್ವರಹಿತಳಾಗಿ ಮಹಾಪುರುಷಾ, ಹರೀಶ್ವರ ಬ್ರಹ್ಮನ ವರದಂತೆ ದರ್ಶನದಿಂದ ಸತ್ಯವನ್ನು ಕಾಣುತ್ತಿದ್ದೇನೆ ನಿನ್ನ ಕಾರ್ಯದಲ್ಲಿ ಜಯಶಾಲಿಯಾಗೆಂದು ಹಾರೈಸಿದಳು. 


ಮತ್ತೊಬ್ಬ ರಕ್ಕಸಿ `ಸರನೆ` ಅತ್ಯಂತ ಮೃದುಭಾಷಿಣಿಯಾಗಿ ಆತ್ಮೀಯ ಗೆಳತಿಯಾಗಿ ಸೀತೆಗೆ ಸಮಾಧಾನಪಡಿಸಿದ್ದನ್ನು ಕಾಣುತ್ತೇವೆ.


ಇನ್ನೊಮ್ಮೆ ಸೀತೆಯ ಮೇಲೆ ಕೋಪಗೊಂಡ ರಾವಣನನ್ನು ಧಾನ್ಯಮಾಲಿನೀ ಎಂಬ ರಕ್ಕಸಿಯು ಅವನಿಗೆ ವ್ಯರ್ಥಪ್ರಯತ್ನ ಬೇಡವೆಂದೂ, ಬಯಸಿ ಬಂದ ತಮ್ಮಿಂದಲೇ ಸುಖ ಸಂತೋಷವನ್ನು ಪಡೆಯಿರೆಂದು ಸಮಾಧಾನ ಮಾಡುವಳು.


ಮುಂದುವರಿದ ಕಥಾಪ್ರಸಂಗಗಳಲ್ಲಿ ರಾವಣನ ಆಜ್ಞೆಯಂತೆ ಸೀತೆಯನ್ನು ಮನವೋಲಿಸುವ ಪ್ರಯತ್ನದಲ್ಲಿ ತೊಡಗಿದ್ದ ಏಕಜಟಾ, ಹರಿಜಟಾ, ಪ್ರಘಸಾ, ವಿಕಟಾ, ದುರ್ಮುಖಿ, ಎಲ್ಲರೂ ರಾವಣನ ಮಹಿಮೆಗಳ ಬಗ್ಗೆ ಸಮಾಧಾನದಿಂದಲೇ ಹೇಳಿ, ಒಲಿಸಲು ಪ್ರಯತ್ನಿಸಿದರು, ಆದರೂ ಸಫಲತೆ ಸಿಗದಾಗ ಕೋಪಗೊಂಡ ವಿನತಾ, ವಿಕಟಿ, ಚಂಡೋದರಿ, ಅಜಾಮುಖಿ, ಶೂರ್ಪನಖಿ, ಇವರೆಲ್ಲ ರಾವಣನ ಒಪ್ಪಿಗೆ ಪಡೆದು ನಿಕುಂಭಿಳಿ, ಭದ್ರಕಾಳಿ ದೇವತೆಯ ಸನ್ನಿಧಿಯಲ್ಲಿ ಸೀತೆಯನ್ನು ಆಹಾರವಾಗಿ ಸ್ವೀಕರಿಸಿ ನಲಿದು ಕುಣಿಯೋಣ ಎಂದು ಆರ್ಭಟಿಸಿದರು. ಆದರೆ ಎಲ್ಲರಿಂದ ಬೇದರಿಕೆಯೇ ಹೊರತು ಯಾರು ಸೀತೆಯನ್ನು ಸ್ಪರ್ಶಿಸಿ ಹಿಂಸಿದಲಿಲ್ಲ.


ಮುಂದೆ ನಾವು ಕಾಣುವ ವಿಭೀಷಣ ಪುತ್ರಿ, ಜ್ಞಾನವೃದ್ಧೆ ತ್ರಿಜಟಾ (ತ್ರಿಜಟೆ) ತನ್ನ ವಿನಾಶ ಸೂಚಿಸುವ ಕನಸನ್ನು ಹೇಳಿ ಯಾರೂ ಸೀತೆಗೆ ತೊಂದರೆ ಕೊಡದೆ ಗೌರವ ನೀಡುವಂತೆ ಮನವೋಲಿಸಿದಳು. ತ್ರಿಜಟೆ ಮತ್ತೊಂದು ಘೋರ ಸನ್ನಿವೇಶದಲ್ಲಿ ಮೂರ್ಛಿತ ರಾಮನನ್ನು ತೋರಿಸಿ ಶವವೆವಂದು ಎಲ್ಲರೂ ಹೆದರಿಸಿದಾಗ ಸೀತಾದೇವಿಗೆ ಸುತ್ತಲಿನ ರಣರಂಗ ಸನ್ನಿವೇಶದ ಸೂಕ್ಷ್ಮತೆಯನ್ನು ಗಮನಿಸಿ ವಿವರಿಸಿ ಶ್ರೀರಾಮ ಜೀವಂತವಾಗಿದ್ದಾನೆಂದು ಖಚಿತವಾಗಿ ದೃಢಪಡಿಸುತ್ತಾಳೆ. 


ಮುಂದೆ ರಾವಣನನ್ನು ಅಗಲಿದ. ದುಃಖಿತರಾದ ಅವನ ಸತಿಯರು ತಮ್ಮ ದುಃಸ್ಥಿತಿಯ ಬಗ್ಗೆ ವಿಧವಿಧವಾಗಿ ಶೋಕಿಸಲಾರಂಭಿಸಿದರು. ಆದರೆ ಅವರ ಅಂತಹ ಹೀನಾಯ ಸ್ಥಿತಿಯಲ್ಲೂ, ಅವನ ತಪ್ಪುಗಳಿಂದ ಒದಗಿದ ತಮ್ಮ ದುರ್ಗತಿಗೆ, ಸೀತಾ ಮಾತೆ ಕಾರಣವೆಂದು ಒಮ್ಮೆಯೂ, ಆಕ್ರೋಶ, ದುಃಖ ನಿಂದನೆಯ ನುಡಿಗಳನ್ನು ಹೊರಹಾಕಲಿಲ್ಲ. 


ನಂತರ ಬಂದ ಮಹತ್ತರ ಸನ್ನಿವೇಶದಲ್ಲಿ ಮಂಡೋದರಿಯು `ಕಾಲವೇ ರಾಮನ ರೂಪದಲ್ಲಿ ಲಂಕೆಗೆ ವಿನಾಶ ತಂದಿದೆ` ಎಂದಳು. ಮುಂದುವರೆದು ತಾನಾಗಲೀ, ಹಿತೈಷಿಗಳಾಗಲೀ ಹೇಳಿದ ವಿವೇಕದ ನುಡಿಗಳನ್ನು ಕೇಳದೇ, ರಾವಣ ಲಂಕೆಗೂ ತಮಗೂ ತಂದ ಕೇಡಿನ ಬಗ್ಗೆ ದುಃಖಿಸಿದಳು. 

ಯುದ್ಧಕ್ಕೆ ಮುನ್ನ ತಾನು ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸು ಎಂದಾಗ, ರಾವಣ ಆ ಸಂದರ್ಭದಲ್ಲಿ ಅದು ತನ್ನ ಪರಾಕ್ರಮಕ್ಕೆ ಅನುಮಾನವೆಂದೂ `ರಣಾಗ್ರದೊಳ್ ರಾಮನಂ ಲಕ್ಷ್ಮಣನಂ ಪಿಡಿದು ತಂದು, ಕೊಟ್ಟಪೆಂ ಸೀತೆಯಂ` ಎಂದು ಹೇಳಿದನು ಮತ್ತು `ಕದಡಿದ ಸಲಿಲಂ ತಿಳಿವಂದದೆ ತನ್ನಿಂತಾನೆ ತಿಳಿದ ದಶವದನಂಗಾದುದು ವೈರಾಗ್ಯಂ ಸೀತೆಯೊಳುದಾತ್ರನೊಳ್ ಪುಟ್ಟದಲ್ಲೇ ನೀಲೀರಾಂಗಂ ಎಂಬ ಕವಿಯೊಬ್ಬರ ಮಾತನ್ನು ಇಲ್ಲಿ ಸ್ಮರಿಸಬಹುದು. 


ಎಲ್ಲ ಸಂದರ್ಭಗಳಲ್ಲೂ ರಾಕ್ಷಸ ಸ್ತ್ರೀ ಪಾತ್ರಗಳು ಒಮ್ಮೆಯೂ ಸೀತೆಯ ಮೇಲೆ ಕ್ರೌರ್ಯ ದೌರ್ಜನ್ಯ ತೋರಲಿಲ್ಲ ಅವಳ ದುಃಖ ಆದರ್ಶ ಪ್ರಾಯವಾದುದು. ಇವರೆಲ್ಲರಲ್ಲಿ ತ್ರಿಗುಣಗಳಲ್ಲಿ ತಾಮಸ ಪ್ರವೃತ್ತಿ ಮೈದುಂಬಿ ಚಿಮ್ಮಿದರೂ ಅಲ್ಲಲ್ಲಿ ಸಾತ್ತ್ವಿಕತೆಯನ್ನು ಕಾಣುತ್ತೇವೆ. ಆದರೆ ಕೆಲವೊಮ್ಮೆ ಭೀಷ್ಮ ಅನ್ನದ (ಉಪ್ಪಿನ) ಋಣದಿಂದ ನಿಸ್ಸಹಾಯಕನಾಗಿ ದುರಾಚಾರ ತಡೆಯದಂತಾದ ರೀತಿ, ತಾಮಸಿ ಸ್ವಭಾವದ ರಾಕ್ಷಸ ಪಾತ್ರಗಳು ಕರ್ತವ್ಯ ಬದ್ಧರಾಗಿ ಸಹಜತೆಯಿಂದ ಕಾಠಿಣ್ಯ ತೋರಿದ್ದಾರೆ. 


ಏನೇ ಆದರೂ ಎಂಥಾ ಸಂದರ್ಭಗಳಲ್ಲೂ ಸ್ತ್ರೀ ಪಾತ್ರಗಳು ತಮ್ಮ ಉದಾತ್ಮ ಗುಣಗಳನ್ನೇ ಎಂದರೆ ತ್ಯಾಗ ಕರುಣೆಯನ್ನೇ ತೋರುತ್ತಾರೆಂಬುದಕ್ಕೆ ಮೇಲಿನ ಘಟನೆಗಳ ರಕ್ಕಸ ಸ್ತ್ರೀ ಪಾತ್ರಗಳು ಸಹ ನಿದರ್ಶನಗಳೆಂಬುದರಲ್ಲಿ ಸಂದೇಹವಿಲ್ಲ. 

ಆದರೆ ಇಂದು ಕಲಿಯವೈಪರೀತ್ಯದಿಂದಾಗಿ, ಮಾನವ ಶರೀರವನ್ನು ಪಡೆದಿರುವ ಕೆಲವು ಸಾತ್ವಿಕರು ದೇವಮಾನವರಾದರೆ, (ಶ್ರೀಶಾರದಮಾತೆ) ತಾಮಸೀ ಗುಣಗಳನ್ನೇ ಕರಗತ ಮಾಡಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ಈ ಸಮಾಜದ ಕೆಲವು ಸ್ತ್ರೀಯರು (ಕ್ಷಮೆಯಿರಲಿ) ಯಾವ ರಾಕ್ಷಸ ಸ್ತ್ರೀ ಪಾತ್ರಗಳಿಗೂ ಕಡಿಮೆಯಿಲ್ಲದ್ದನ್ನು ಕಾಣಬಹುದು. 


ಇಂದಿನ `ಈ ಪರಿಸ್ಥಿತಿಯ` ಬಗ್ಗೆ `ಭಗವದ್ಗೀತೆಯ ಪ್ರಥಮ ಅಧ್ಯಾಯದ `ಅರ್ಜುನ ವಿಷಾದಯೋಗ` ದಲ್ಲೇ ಶ್ರೀ ಕೃಷ್ಣ ಪರಮಾತ್ಮನು 40 ರಿಂದ 45 ಶ್ಲೋಕಗಳಲ್ಲಿ ಅರ್ಜುನನ ಮಾತುಗಳ ಮೂಲಕ ವಿವರಿಸಿದ್ದಾನೆ. ಕೌರವರು ದುಷ್ಟರೇ ಆದರೂ ಕುಲಕ್ಷಯದಿಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಆ ಪಾಪಕ್ಕೆ ತಾನು ಕಾರಣನಾಗುತ್ತೇನೆಂದು ಅರ್ಜುನ ಚಿಂತಿಸಿದನು. ಅದಕ್ಕಿಂತ ಕೌರವರು ತನ್ನನ್ನು ಕೊಂದರೂ ತನಗೆ ಅದೇ ಶ್ರೇಯಸ್ಕರವೆಂದು ಹೇಳುತ್ತಾನೆ. ಕುಲದ ನಾಶದಿಂದ, ಸನಾತನ ಕುಲ ಧರ್ಮಗಳ ನಾಶ, ಅದರಿಂದ ಹೆಚ್ಚುವ ಪಾಪ, ನಂತರ ದೂಷಿತರಾಗುವ ಕುಲ ಸ್ತ್ರೀಯರು ಎಲ್ಲದರ ಪರಿಣಾಮ ವರ್ಣಸಾಂಕರ್ಯ ಉಂಟಾಗುವುದು ಅಲ್ಲದೆ, ನರಕ, ಪಿತೃಗಳ ಅಧೋಗತಿ, ಕುಲ, ಧರ್ಮ, ಜಾತಿಧರ್ಮಗಳ ನಾಶ, ಎಲ್ಲವೂ ಸಂಭವಿಸುವುದೆಂದು ಹೇಳಿರುವುದನ್ನು ಕಾಣಬಹುದು. 




- ಸುಗುಣ ಬಿ. ಆರ್. ಬೆಂಗಳೂರು. 

6360195973


ಲೇಖಕರ ಸಂಕ್ಷಿಪ್ತ ಪರಿಚಯ 

ಸುಗುಣ ಬಿ.ಆರ್ ಅವರು ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿದ್ದು, ಅನೇಕ ಪ್ರತಿಭಾನ್ವಿತ ಶಿಷ್ಯರ ಮೆಚ್ಚುಗೆ ಗೌರವಕ್ಕೆ ಪಾತ್ರರಾಗಿದ್ದಾರೆ. ನಿವೃತ್ತಿ ಜೀವನದಲ್ಲಿ- ವೇದಾಂತ ಭಾರತಿ ಶಿಕ್ಷಕರೊಬ್ಬರಾಗಿ ಶಾಲೆಗಳಲ್ಲಿ ಸಂಘಗಳಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರು `ಶ್ರೀ ಮೇಧಾಶಕ್ತಿ` ಭಜನಾ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರೂ ಹೌದು. ವಾಲ್ಮೀಕಿ ರಾಮಾಯಣ ಪಾರಾಯಣ ಅಲ್ಲದೆ  ಸುಂದರಕಾಂಡ ಪಾರಾಯಣ ನಡೆಸುತ್ತಾರೆ. ಜನವರಿ 22ರ ಶ್ರೀರಾಮ ಕಾರ್ಯಕ್ರಮಕ್ಕೆ ಅನೇಕ ವಿವಿಧ ಸಕ್ರಿಯ ಸೇವೆ ಮಾಡಿದ್ದಾರೆ, ಮಕ್ಕಳ ಬೇಸಿಗೆ ಶಿಬಿರ, ವಿಭಿನ್ನ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಅದಮ್ಯ ಚೇತನ ಕಾರ್ಯಕರ್ತೆಯಾಗಿ 15 ದಿನ ಅಯೋಧ್ಯೆಯಲ್ಲಿ ಸೇವೆ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post