|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ- 144: ರಾಮಾಯಣದ ಪುರುಷ ಪಾತ್ರಗಳು

ಶ್ರೀರಾಮ ಕಥಾ ಲೇಖನ ಅಭಿಯಾನ- 144: ರಾಮಾಯಣದ ಪುರುಷ ಪಾತ್ರಗಳು



- ಡಾ ಉಷಾ ವಿ ಅಗರಖೇಡ, ಬೆಂಗಳೂರು


ಶ್ರೀರಾಮಾವತಾರ ಮಹಾವಿಷ್ಣುವಿನ ಎರಡು ಪ್ರಖ್ಯಾತ ಅವತಾರಗಳಲ್ಲಿ ಒಂದಾಗಿದೆ. ಶ್ರೀರಾಮ ಆದರ್ಶ ಪುರುಷ. ಅವನ ಪುಣ್ಯ ಚರಿತ್ರೆಯಾದ ರಾಮಾಯಣವು ಚಿರಸ್ಥಾಯಿಯಾದ ಮಹಾಕಾವ್ಯವಾಗಿದೆ. ಅವನ ನಾಮದ ತಾರಕ ಮಂತ್ರವು (ಶ್ರೀರಾಮ ಜಯರಾಮ ಜಯ ಜಯ ರಾಮ) ಸಂಸಾರವೆಂಬ ಭಾವಸಾಗರವನ್ನು ದಾಟಿಸುವ ಸರಳ, ಸುಲಭ ಮಂತ್ರ ಎಂದು ಪ್ರಸಿದ್ಧವಾಗಿದೆ. ಮಹರ್ಷಿ ವಾಲ್ಮೀಕಿ ಬರೆದ ಹಿಂದೂಗಳ ಪವಿತ್ರ ಗ್ರಂಥವೇ ರಾಮಾಯಣ. ಇದರಲ್ಲಿ 24,000 ಶ್ಲೋಕಗಳು ಮತ್ತು ಏಳು ಕಾಂಡಗಳಿವೆ. ಇದು ಸಾವಿರಾರು ವರ್ಷಗಳ ಹಿಂದಿನ ತ್ರೇತಾಯುಗದ ಕಥೆಯಾಗಿದ್ದರೂ ಸತ್ಯ ಕಥೆಯಾಗಿದೆ. ಇಕ್ಷಾಕು, ದಿಲೀಪ, ರಘು ಮೊದಲಾದ ಸೂರ್ಯವಂಶದ ರಾಜರಂತೆ ಸತ್ಯ ಪರಾಕ್ರಮಿಯೂ, ಸತ್ಯಶಾಲಿಯಾದ ದಶರಥನ ಕಥೆಯನ್ನು ಒಳಗೊಂಡಿದೆ. ವಾಲ್ಮೀಕಿ ರಚಿತ ಶ್ರೀಮದ್ ರಾಮಾಯಣವು ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜೀವನದಿ. ಆದರ್ಶ ಪುರುಷನೆನಿಸಿ ನಡೆದ ಶ್ರೀ ರಾಮನ ದಿವ್ಯಗಾದೆಯು ಹೌದು. ನಿತ್ಯ ಬದುಕಿನಲ್ಲಿ ನಾವು ಕಾಣುವ ಎಲ್ಲಾ ಸ್ವಭಾವಗಳ ಪರಿಚಯದಂತಹ ಪಾತ್ರಗಳು ಇದರಲ್ಲಿ ಇವೆ. ಸಾಕ್ಷಾತ್ ಭಗವಂತನ ಕಥೆಯಾದುದರಿಂದ ಸುಂದರವಾದ ಅನುಭವವಾಗುವುದು.


ಶ್ರೀರಾಮಾಯಣದ ಪುರುಷ ಪಾತ್ರಗಳು ಸಂಕ್ಷಿಪ್ತದಲ್ಲಿ


1. ವಾಲ್ಮೀಕಿ ಮಹರ್ಷಿಗಳು

ವಾಲ್ಮೀಕಿ ಸಂಸ್ಕೃತ ಕವಿಗಳು. ರಾಮಾಯಣ ಮಹಾಕಾವ್ಯ ಕರ್ತೃರಾಗಿದ್ದಾರೆ. ಅವರು ಮೊದಲು ರಾಮಾಯಣ ರಚಿಸಿದ್ದರಿಂದ ಆದಿಕವಿ ಎನ್ನುವರು. ಇದು ೨೪,೦೦೦ ಶ್ಲೋಕಗಳಿಂದಲೂ, ೭ ಕಾಂಡದಿಂದಲೂ ಕೂಡಿದ ಬೃಹತ್ ಗ್ರಂಥವಾಗಿದೆ. ಕಣ್ಮುಂದೆ ನಡೆದಂತೆ ರಾಮಾಯಣ ಕಥೆಯ ಆಗುಹೋಗುಗಳನ್ನು ಒಳಗಣ್ಣಿನಿಂದ  ನೋಡಿ ಕಾವ್ಯ ದರ್ಶನ ರೂಪಕವಾಗಿ ಚಿತ್ರಿಸಿದ್ದಾರೆ. ವಾಲ್ಮೀಕಿಯ ಜನ್ಮನಾಮ ರತ್ನಾಕರ ಪ್ರಚೇತಮುನಿಯ ಕುಮಾರನಾದರೂ ದೌಭಾಗ್ಯದಿಂದ ಬೇಡರ ಪಾಳ್ಯದಲ್ಲಿ ಬೆಳೆದು ಬೇಡರಂತೆ ವರ್ತಿಸುತ್ತಿದ್ದರು. ನಾರದ ಮುನಿಯ ಉಪದೇಶದಿಂದ ಕಣ್ತೆರೆದು ಅವರಿಗೆ ಶರಣು ಹೋಗಲು ಅರ್ಹನಲ್ಲದ ಕಾರಣ ‘ರಾಮನಾಮ’ ಮಂತ್ರವನ್ನು ‘ಮರಾ’ ಎಂದು ಉಪದೇಶಿಸಿದರು. ಕ್ರಮೇಣ ವ್ಯಾಧನ ಬಾಯಿಯಿಂದ ‘ರಾಮ ರಾಮ’ ಎಂಬ ಉಚ್ಚಾರಣೆಯು ಪ್ರಾರಂಭವಾಗಿ ‘ರಾಮನಾಮ’ ಜಪದಿಂದ ಪಾಪ ತೊಳೆದು ಹೋಯಿತು. ಎಷ್ಟೋ ದಿನಗಳು ತಪದಲ್ಲಿ ಕಳೆದಾಗ ಅವರ ಮೇಲೆ ದೊಡ್ಡದಾದ ಹುತ್ತು (ವಲ್ಮೀಕ) ಬೆಳೆಯಿತು, ನಂತರ ಮತ್ತೆ ಅಲ್ಲಿಗೆ ಬಂದ ನಾರದರು ‘ವಾಲ್ಮೀಕಿ ಮುನಿ’ ಎಂದು ಸಂಬೋಧಿಸಿ ರಾಮಾಯಣ ಕಥೆಯನ್ನು ಉಪದೇಶಿಸಿದರು.


ವಾಲ್ಮೀಕಿ ಋಷಿಗಳು ಗಂಗಾನದಿಯ ಸಮೀಪದ ತಮಸಾ ತೀರದ ಆಶ್ರಮದಲ್ಲಿ ಇರುತ್ತಿದ್ದರು. ಒಂದು ದಿನ ನದಿ ತೀರದಲ್ಲಿ ಕ್ರೌಂಚಪಕ್ಷಿಗಳ ಸರಸವನ್ನು ನೋಡುತ್ತಿರುವಾಗ ವ್ಯಾಧನ ಬಾಣದಿಂದ ಗಂಡು ಕ್ರೌಂಚಪಕ್ಷಿಯು ಹತವಾಯಿತು. ಆ ದೃಶ್ಯ ನೋಡಿ ಅವರ ಮುಖದಿಂದ ಶೋಕಗೀತೆಯು ಹೊರಟು, ಅದೇ ರಾಮಾಯಣ ಕಾವ್ಯಕ್ಕೆ ನಾಂದಿಯಾಯಿತು. ಕಥೆಯ ಸೂತ್ರದಾರರು ಅವರಾದರೂ ಅವರ ಪಾತ್ರವು ಕೊನೆಗೆ ಬರುವದು. ಗರ್ಭಿಣಿ ಸೀತೆಗೆ ಆಶ್ರಯ ಕೊಟ್ಟು, ಲವಕುಶರನ್ನು ಪರಿಪಾಲನೆ ಮಾಡಿ, ವಿದ್ಯಾಭ್ಯಾಸವನ್ನು ಮಾಡಿಸಿದರು. ಮುಂದೆ ಅವರಿಂದ ಶ್ರೀ ರಾಮನ ಎದುರು ಸಂಪೂರ್ಣ ರಾಮಾಯಣ ಕಾವ್ಯವನ್ನು ಹಾಡಿಸಿದರು. ಸೀತಾದೇವಿಯು ಭೂಮಿ ತಾಯಿಯ ಒಡಲಲ್ಲಿ ಸೇರಿದಾಗ ಮೂಕ ಪ್ರೇಕ್ಷಕರಾಗಿದ್ದರು.


ಜಗತ್ತಿಗೆ ಆದಿಕವಿ ಎನಿಸಿದವರು ಪ್ರಪಂಚದಲ್ಲಿ ಸಾಹಿತ್ಯ ಹುಟ್ಟಲು ಕಾರಣರಾಗಿ ಜಗತ್ತಿಗೆ ಆದರ್ಶ ಪ್ರಾಯವಾದ ಮಹಾನ್ ಗ್ರಂಥದ ರಚನೆ ಮಾಡಿದುದು ಅಲ್ಲದೆ ಅನೇಕ ಆದರ್ಶಗಳನ್ನು ಸಾರಿದ ಮಹನೀಯರು.


2. ದಶರಥ ಮಹಾರಾಜ

ದಶರಥನು ಶೂರ ರಾಜನು ಸತ್ಯನಿಷ್ಠನಾಗಿದ್ದನು. ಹತ್ತು ದಿಕ್ಕಿನಲ್ಲಿಯೂ ಅವನ ರಥ ಸಂಚಾರಕ್ಕೆ ಪ್ರತಿರೋಧವಿರಲಿಲ್ಲ. ಅದಕ್ಕೆ ಅವನು ದಶರಥನೆನಿಸಿದ್ದನು. ದೇವಾಸುರರ ಯುದ್ಧದಲ್ಲಿ ಯಾವಾಗಲೂ ದೇವತೆಗಳಿಗೆ ಸಹಾಯವನ್ನು ಮಾಡುತ್ತಿದ್ದನು. ಇಂಥದೇ ಒಂದು ಪ್ರಸಂಗದಲ್ಲಿ ಯುದ್ಧಕ್ಕೆ ಹೋದಾಗ ಅವನ ಹೆಂಡತಿ ಕೈಕೇಯಿ ಅವನಿಗೆ ಸಹಾಯ ಮಾಡಿ  ವರವನ್ನು ಪಡೆದು ಮುಂದೆ ಅದನ್ನು ಉಪಯೋಗಿಸಿದ್ದು ರಾಮಾಯಣದ ಕಥೆಯಲ್ಲಿ ಮರೆಯಲಾರದ ಪ್ರಸಂಗವಾಗಿದೆ.


ದಶರಥ ಮಹಾರಾಜನು ಸ್ವಾಯಂಭೂ ಮನುವಿನ ಅವತಾರವೆಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ದಶರಥ ಸಮರ್ಥ ಅಡಳಿತಗಾರನಾಗಿದ್ದನು. ಅವನ ರಾಜಧಾನಿ ಅಯೋಧ್ಯೆಯಲ್ಲಿ ಪ್ರಜಾಪಾಲಕನಾಗಿ ರಾಜ್ಯಭಾರ ಮಾಡುತ್ತಿದ್ದನು. ಸಂತಾನವಿಲ್ಲದ ದಶರಥನು ಸನತ್ಕುಮಾರರ ಹೇಳಿಕೆಯಂತೆ ಋಷ್ಯಶೃಂಗ ಮುನಿಗಳನ್ನು ಕರೆತಂದು ಪುತ್ರಕಾಮೇಷ್ಠಿ  ಯಜ್ಞವನ್ನು ಮಾಡಿ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಂಥ ಅಮೂಲ್ಯ ಮಕ್ಕಳನ್ನು ಪಡೆದನು. ರಾಜನ ಯೌವ್ವನ ಕಾಲದಲ್ಲಿ ಬಂದು ಘಟನೆಯು ಸಂಭವಿಸಿತ್ತು. ಶಬ್ದವೇಧಿ ಅಸ್ತ್ರ ತಿಳಿದ ರಾಜನು ನೀರು ತುಂಬುವ ಶಬ್ದ ಕೇಳಿ ಮೃಗವೆಂದು ಭ್ರಮಿಸಿ ಬಾಣವನ್ನು ಬಿಟ್ಟಾಗ ಶ್ರವಣನೆಂಬ ಮುನಿಬಾಲಕನ ಮೃತ್ಯುವಿಗೆ ಕಾರಣವಾಯಿತು. ಅವನ ಅಂಧ ತಂದೆ- ತಾಯಿಯರು ರಾಜನಿಂದ ಸುದ್ದಿಯನ್ನು ತಿಳಿದು ಸಂಕಟಪಟ್ಟು, ನೀನು ಹೀಗೆಯೇ ನಮ್ಮಂತೆ ಪುತ್ರಶೋಕದಿಂದ ಸಾಯುವಂತಾಗಲಿ ಎಂದು ಶಪಿಸಿದರು. ಎಲ್ಲವೂ ವಿಧಿಯಾಟದಂತೆ ನಡೆಯುವುದು. ಮುಂದಿನ ರಾಮಾಯಣ ಕಥೆಯು ಇದಕ್ಕೆ ಸಾಕ್ಷಿಯಾಗಿದೆ. ಪ್ರೀತಿಗೆ ಪಾತ್ರನಾದ ಶ್ರೀ ರಾಮನಿಗೆ ಪಟ್ಟಗಟ್ಟಲು ಸಾಧ್ಯವಾಗದೇ ಪತ್ನಿ ಕೈಕೇಯಿಯ ಹಟಕ್ಕೆ ಮಣಿದು ನಿಸ್ಸಾಹಾಯಕನಾಗಿ ಪುತ್ರ ಶೋಕದಿಂದ ಮರಣಿಸುತ್ತಾನೆ. 


ದಶರಥನ  ಪಾತ್ರ ಮಹತ್ತರವಾದ ಪಾತ್ರ ಜಗತ್ತಿನಲ್ಲಿ ಹಿರಿಯರು ಮಾಡಿದ ತಪ್ಪು ಕಿರಿಯರು ಬೆಲೆ ತೆರಬೇಕಾಗುತ್ತದೆ. ಸಂತೋಷದಲ್ಲಿರುವಾಗ ಮಾತನ್ನು ಕೊಟ್ಟು ಆ ಮಾತಿಗೆ ಸಿಲುಕಿ ಕೊಂಡರೆ ತೊಂದರೆ ಅನುಭವಿಸ ಬೇಕಾಗುತ್ತದೆ. ಪ್ರಾಯದ ಹೆಂಡತಿ ಎಂದು ಅತೀ ಪ್ರೀತಿ ತೋರಿಸಿದರೆ ಜೀವಕ್ಕೂ ತೊಂದರೆಯಾಗ ಬಹುದು ಮತ್ತು ಮಕ್ಕಳ ಮೇಲೆ ಅತಿಯಾದ ಮೋಹ ಇಟ್ಟು ಕೊಳ್ಳಬಾರದು ಎಂಬ ಸಂದೇಶ ನೀಡುವ ಪಾತ್ರವಾಗಿದೆ. ಇನ್ನೂ ಅನೇಕ ಸಂದೇಶ ನೀಡುತ್ತದೆ.


3. ಶ್ರೀರಾಮಚಂದ್ರ

ರಾಮಾಯ  ರಾಮಭದ್ರಾಯ ರಾಮಚಂದ್ರಾಯ ವೇಧಸೇ||

ರಘುನಾಥಯ ನಾಥಾಯ ಸೀತಾಯ ಪತಯೇ ನಮಃ||

ಶ್ರೀ ರಾಮ  ರಕ್ಷಾ ಸ್ತೋತ್ರ

  

ಯುಗಯುಗಗಳು ಕಳೆದರೂ ವಾಲ್ಮೀಕಿ ರಾಮಾಯಣದ ಶ್ರೀ ರಾಮನು ಅಚ್ಚಳಿಯದೇ ಉಳಿದಿದ್ದಾನೆ. ‘ಮರ್ಯಾದಾ ಪುರುಷೋತ್ತಮ’ನೆಂಬ ವರ್ಣನೆಯು ಸಾಮಾನ್ಯರ ನಾಲಿಗೆಯಲ್ಲಿ ಇವತ್ತಿಗೂ ಇರುವುದೇ ಇದಕ್ಕೆ ಸಾಕ್ಷಿ ಎನ್ನಬಹುದು. ಮಾನವ ಅವತಾರಿಯಾಗಿ ಮರ್ಯಾದೆಯನ್ನು ಗಗನಕ್ಕೆ ಎತ್ತರಿಸಿ ತೋರಿಸಿ ಮಾನವನು ಅರ್ಥಪೂರ್ಣವಾಗಿ ಬಾಳನ್ನು ಇತರಿಗಾಗಿ ಬಾಳಬೇಕೆಂಬುದನ್ನು ತೋರಿಸಿಕೊಟ್ಟು ಭಾರತೀಯರ ಹೃದಯದಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದ್ದಾನೆ.


ಉತ್ತಮ ಪುತ್ರನಾಗಿ, ಆದರ್ಶ ಪತಿಯಾಗಿ ಏಕಪತ್ನಿವ್ರತನಾಗಿ, ನೆಚ್ಚಿನ ಸ್ನೇಹಿತನಾಗಿ, ನೆಚ್ಚಿನ ಸೋದರರಾಗಿ, ತಾಯಿಯ ಮಮತೆಯ ಮಗನಾಗಿ, ಪ್ರೀತಿಯ ಪ್ರಭುವಾಗಿ ಮತ್ತು ಧರ್ಮರಕ್ಷಕನಾಗಿ, ಮುನಿಪುಂಗವರಿಗೆ ಕಿಂಕರನಾಗಿ ಹೀಗೆ ಎಲ್ಲಾ ಪಾತ್ರಗಳಲ್ಲಿ ವಿಭೃಂಭಿಸಿದ್ದಾನೆ. ಇಷ್ಟೆಲ್ಲ ರಾರಾಜಿಸುವ ಮಹಾಪುರುಷನಾಗಿರುವುದು ಶ್ರೀರಾಮನಿಗೆ ಮಾತ್ರ ಸಾಧ್ಯವೆಂದು ಅನಿಸುವುದು. ಶ್ರೀರಾಮನ ಗುಣಗಳ ಬಗ್ಗೆ ಹೇಳಬೇಕೆಂದರೇ ರೂಪ, ಶೀಲ, ಪರಾಕ್ರಮ, ಸತ್ಯಪ್ರಿಯತೆ, ಶಾಂತ ಸ್ವಭಾವ, ಶರಣಾಗತರನ್ನು ಕೈಬಿಡದ ಔದಾರ‍್ಯ, ಸಂಯಮ ಮತ್ತು ಅಸ್ತ್ರ ಶಸ್ತ್ರ ನಿಪುಣತೆ ಹೀಗೆ ಸಹಸ್ರಾರು ಗುಣಗಳನ್ನು ಎಣಿಸಲಾರೆವು. ಶ್ರೀರಾಮನನ್ನು ಯಾರಿಗೂ ಹೋಲಿಸಲಾಗದು. ಅವನಿಗೆ ಅವನೇ ಸಾಟಿ ಎಂದೆಂನ್ನಬೇಕು.


ಚಿಕ್ಕವಯಸ್ಸಿನಿಂದಲೇ ಅತುಲ ಪರಾಕ್ರಮಿಯಾದ ಶ್ರೀ ರಾಮನು ವಿಶ್ವಮಿತ್ರರ ಯಜ್ಞ ರಕ್ಷಣೆಗಾಗಿ ನಿಂತಾಗ ವಿಘ್ನಕಾರಕರಾಗಿ ಖರ, ದೂಷಣ, ತಾಟಕಾ, ಸುಬಾಹು ಮುಂತಾದ ರಾಕ್ಷಸರನ್ನು ಸಂಹರಿಸಿದನು. ಜನಕರಾಜನÀ ಸಭೆಯಲ್ಲಿ ಅಸಾಧ್ಯವಾದ ಅತೀಭಾರವಾದ ಶಿವ ಧನುಸ್ಸನ್ನು ಶ್ರೀ ರಾಮನು ಲೀಲಾಜಾಲವಾಗಿ ಎತ್ತಿ ಮುರಿದು ಸೀತೆಯನ್ನು ವರಿಸಿದನು. ಪ್ರತಿಯೊಂದು ಘಟನೆಯಲ್ಲಿಯೂ ಶ್ರೀ ರಾಮನ ವ್ಯಕ್ತಿತ್ವ ಎದ್ದು ಕಾಣುವುದು. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ  ತೆರಳಿದ್ದು, ಭರತನಿಗೆ ಪಾದುಕೆ ಕೊಟ್ಟದ್ದು, ಸುಗ್ರೀವನ ಸಖ್ಯ ಸೇತುಬಂಧನ ರಾವಣನ ಸಂಹಾರ, ಪರಿಶುದ್ಧ ಸೀತೆಗೆ ಅಗ್ನಿಪರೀಕ್ಷೆ ಹೀಗೆ ಪ್ರಸಂಗಗಳು ನಡೆಯುವವು. ರಾಮರಾಜ್ಯವು ಸುಭಿಕ್ಷೆ ಕಾಲವಾಗಿತ್ತು, ಸತ್ಯಲೋಕದ ಸಮವಾಗಿತ್ತು. ಹೀಗೆ ಪ್ರಜಾಪರಿಪಾಲನೆ ಮಾಡಿ ತನ್ನ ಕಾಲವನ್ನು ಸಮಾಪ್ತಿಗೊಳಿಸಿದನು.


ರಾಮ ಜೀವನದಲ್ಲಿ ಏನೆಲ್ಲಾ ಮಾಡಿದರೆ ಆದರ್ಶ ಪುರುಷನಾಗಿ ಬಾಳಬಹುದು ಎಂದು ಜನರಿಗೆ ತೋರಿಸಿದ್ದಾನೆ. ಅವನ ಗುಣಗಳು ನಮ್ಮ ಜೀವನದುದ್ದಕ್ಕೂ ಅಳವಡಿಸಿ ಕೊಳ್ಳ ಬೇಕಾದ ಅಂಶಗಳನ್ನು ತಿಳಿಸುತ್ತದೆ. ಸಂಯಮ, ಶಾಂತತೆ, ಮಾತಾ ಪಿತೃ ವಾಕ್ಯ ಪರಿಪಾಲನೆ, ಕೈ ಹಿಡಿದ ಸಂಗಾತಿಯನ್ನುನ್ನು ಕಷ್ಟದ ಕಾಲದಲ್ಲಿ ಬಿಡದೆ ಇರುವುದು, ಸಹೋದರರ ಸ್ನೇಹ, ಸಕಲ ಜೀವಿಗಳೊಂದಿಗೂ ವಿಶ್ವಾಸ ಪೂರ್ಣವಾಗಿ ಬದುಕುವ ಗುಣ ರಾಮನಿಂದ ಕಲಿಯಲೇ ಬೇಕು. ಎಂತಹ ಕಠಿಣ ಸಮಯ ಬಂದರೂ ಕೊಟ್ಟ ಮಾತಿಗೆ ತಪ್ಪದೇ ಧರ್ಮವನ್ನು ಕಾಪಾಡಿ ಕೊಂಡು ಆದರ್ಶವಾಗಿ ಬದುಕುವ ಪಾತ್ರ ಶ್ರೀರಾಮಚಂದ್ರನದ್ದು.


4. ಲಕ್ಷ್ಮಣ

ಶೇಷಾವತಾರಿ ಲಕ್ಷ್ಮಣ ಶ್ರೀ ರಾಮನ ತಮ್ಮನಾಗಿ ಅನವರತ ಸೇವೆೆ ಮಾಡಿದ್ದು, ಅವನು ಶ್ರೀರಾಮನಿಗೆ ಎಷ್ಟು ನಿಕಟ, ಪ್ರಿಯವಾದವನು ಎಂಬುದನ್ನು ರಾಮಾಯಣ ಕಥೆಯಲ್ಲಿ ನೋಡುತ್ತೇವೆ. ವನವಾಸದಲ್ಲಿ ಹದಿನಾಲ್ಕು ವರ್ಷ ನಿದ್ರೆ ಇಲ್ಲದೇ ಕಳೆದಿದ್ದಾನೆ. ಕೆಲವೊಂದು ಪ್ರಸಂಗದಲ್ಲಿ ಭಾತೃಪ್ರೇಮದಿಂದ ಸಿಡುಕು ಮಾತನ್ನು ಆಡಿದ್ದನ್ನು ಕಾಣುವೆವು. ಸೀತಾಪಹರಣ ಆದ ನಂತರ ಸುಗ್ರೀವನ ಭೇಟಿಯಾದಾಗ ಅವನು ಸೀತೆಯು ಎಸೆದ ಆಭರಣವನ್ನು ತೋರಿಸಿದಾಗ ಲಕ್ಷ್ಮಣನು ಅತ್ತಿಗೆಯ ಕಾಲಿನ ಉಂಗುರವನ್ನು ಮಾತ್ರ ನಾನು ಕಂಡಿರುವೆನೆಂದು ಹೇಳಿದನು. ಇದರಿಂದ ಅವನ ನೈಜ ವ್ಯಕ್ತಿತ್ವವನ್ನು ಗೋಚರಿಸುವುದು.


ಲಕ್ಷ್ಮಣನಿಗೆ ಅಣ್ಣನ ಪ್ರೀತಿ ಭಕ್ತಿಯ ಮುಂದೆ ಯಾವುದು ಕಾಣುವುದಿಲ್ಲ ಎನಿಸಿದರೂ ಪರಸ್ಪರ ಭ್ರಾತೃ ಪ್ರೇಮಕ್ಕೆ ಈಗಲೂ ಉದಾಹರಣೆಯಾಗುತ್ತಾನೆ. ಲಕ್ಷ್ಮಣ ಮುಂಗೋಪಿ ಆಗಿದ್ದರೂ ವಿಧೇಯತೆಯ ಮೂರ್ತಿ ಆಗಿದ್ದ, ಅಣ್ಣನ ಪ್ರತಿವಾಕ್ಯವನ್ನು ಚಾಚೂ ತಪ್ಪದೇ ಪರಿಪಾಲನೆ ಮಾಡಿದ.


5. ರಾವಣ

ರಾಮಾಯಣ ಕಥೆಯಲ್ಲಿ ಶ್ರೀರಾಮ, ಸೀತಾ, ಹನುಮಂತರ ಪಾತ್ರದಂತೆ ರಾಮಣನ ಪಾತ್ರವೂ ಮುಖ್ಯವಾಗಿದೆ. ಅವನ ಅಸುರನಲ್ಲದಿದ್ದರೂ ಅಸುರಿ ಭಾವದಿಂದ ವರ್ತಿಸಿದ್ದರಿಂದ ರಾಕ್ಷಸ ರಾವಣನೆಂದು ಪ್ರಖ್ಯಾತನಾದನು. ವಿಶ್ರವಸು ಮುನಿಗಳ ಮಗನಾಗಿದ್ದರೂ ಸುಮಾಲೀ ಅಸುರನ ಪುತ್ರಿ ಕೈಕಸಿ ತಾಯಿಯಿಂದ ಅಸುರಿಭಾವವು ಒದಗಿರಬಹುದೆಂದು ತೋರುವದು. ರಾವಣನ ವೇದಾಧ್ಯಾಯನ ಸಂಪನ್ನನಾಗಿದ್ದು, ವೀಣಾವಾದನ ಸಂಗೀತಗಾರನಾಗಿದ್ದನು. ಇವನು ಪರಮಶಿವ ಭಕ್ತನಿದ್ದನೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ದೇವದಾನವರಿಂದ ಸಾವು ಬರಬಾರದೆಂದು ವರ ಪಡೆದಿದ್ದನು. ಇದರಿಂದ ಕೊಬ್ಬಿದ ರಾವಣನು ತನ್ನ ಅಣ್ಣ ಕುಬೇರನನ್ನು ಸೋಲಿಸಿ, ಪುಷ್ಪಕವಿಮಾನ ಪಡೆದನಲ್ಲದೇ, ಎಲ್ಲಾ ದಿಕ್ಪಾಲಕÀರನ್ನು ಹಿಂಸಿಸಿ ಸೆರೆ ಹಿಡಿದನು. ಋಷಿಗಳಿಗೆ ತೊಂದರೆ ಕೊಟ್ಟನು. ಸ್ತ್ರೀಚಾಪಲ್ಯದಿಂದ ತಂಗಿ ಶೂರ್ಪನಿಕೆಯ ಮಾತಿಗೆ ಮರುಳಾಗಿ ಸೀತೆಯನ್ನು ಅಪಹರಿಸಿ ತನ್ನ ಮೃತ್ಯುವನ್ನು ಬರಮಾಡಿಕೊಂಡನು. ಶ್ರೀರಾಮ ಬಾಣಕ್ಕೆ ತುತ್ತಾದನು.


ರಾವಣನ ಪಾತ್ರವು ಹೇಗೆ ಬದುಕ ಬಾರದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ವಿದ್ಯಾವಂತ ಆದರೆ ಅಹಂಕಾರಿ, ಶೂರ ಆದರೆ ಅದರ ದುರ್ಬಳಕೆ, ಸಿರಿವಂತ ಆದರೆ ಎಲ್ಲ  ಚಂದ ಇರುವದು ತನಗೆ ಬೇಕೆಂಬ ಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ದುರ್ಮಾಗಿ ಎನಿಸಿ ಕೊಂಡು ವಿನಾಶ ಹೊಂದಿದ.


6. ವಿಭೀಷಣ

ಕೆಸರಿನಲ್ಲಿಯ ಪರಿಶುದ್ಧವಾದ ಕಮಲವು ಭಗವಂತನಿಗೆ ಅರ್ಪಿತವಾದಂತೆ ವಿಭೀಷಣದ ಪಾತ್ರವಿದೆ. ರಾಮಣನ ತಮ್ಮನಾದರೂ ಸಾತ್ವಿಕ ಸ್ವಭಾವದ ದೈವಭಕ್ತನಾಗಿದ್ದನು. ಬ್ರಹ್ಮನ ಕುರಿತು ತಪಸ್ಸನ್ನು ಮಾಡಿದಾಗ ಶ್ರೀಹರಿಯಲ್ಲಿ ಅನವರತ ಭಕ್ತಿಯನ್ನು ಇಡುವಂತೆ ಅನುಗ್ರಹಿಸೆಂದು ಬೇಡಿದ್ದಾನೆ. ದುಷ್ಟ ಅಣ್ಣನಿಗೆ ಸೀತೆಯನ್ನು ಒಪ್ಪಿಸೆಂದು ಬೋಧನೆ ಮಾಡಿದರೂ ಫಲಿಸಲಿಲ್ಲ. ಅವನಿಂದ ಅಪಮಾನಿತನಾಗಿ ಶ್ರೀರಾಮನಲ್ಲಿ ಶರಣು ಬಂದಿದ್ದಾನೆ. ಸತ್ಯಕ್ಕೆ ಜಯವೆಂಬಂತೆ ರಾಮಣನ ಸಂಹಾರ ನಂತರ ಲಂಕಾಧೀಶನಾಗಿದ್ದಾನೆ.


ಪ್ರಪಂಚದಲ್ಲಿ ಭ್ರಾತೃ ದ್ರೋಹಿ, ಮನೆಯಲ್ಲಿ ದ್ರೋಹಿ ಎನಿಸಿ ಕೊಂಡರೂ ಧರ್ಮದ ಮಾರ್ಗ ಬಿಡದ ಶ್ರೇಷ್ಠ ವ್ಯಕ್ತಿ, ರಾಕ್ಷಸ ಮಾತೆಯಲ್ಲಿ ಜನಿಸಿದರೂ ಸಾತ್ವಿಕ ಗುಣಗಳನ್ನು ಅನುಸರಿಸಿ ಶ್ರೀರಾಮನಲ್ಲಿ ಶರಣು ಬಂದಾಗ ರಾಜ ಗೌರವ ಪಡೆದ ವ್ಯಕ್ತಿ. ನಮ್ಮ ಆಚರಣೆ ಧರ್ಮ ನಮಗೆ ಗುರುತು ಕೊಡುವುದಲ್ಲದೆ ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿದೆ.


7. ಹನುಮಂತ

ದಾಸೋಹಂ ಕೋಸಲೇಂದ್ರಸ್ಯ ಎಂದು ಎದೆ ತಟ್ಟಿ ರಾವಣನ ಎದುರು ಹೇಳಿದ ಭಕ್ತಾಗ್ರೇಸರ ಹನುಮಂತನ ಪಾತ್ರ ಅಬಾಲ ವೃದ್ಧರಿಂದ ಎಲ್ಲರಿಗೂ ಭಕ್ತಿ ಮಾಡಲು ಆದರ್ಶನಾಗಿದ್ದಾನೆ. ಸಾಗರೋಲಂಘನ ಮಾಡುವಾಗ ತನ್ನ ಶಕ್ತಿಯನ್ನು ಗುರುತಿಸಿಕೊಳ್ಳದೆ ಇದ್ದರೂ ನೆನಪಿಸಿದಾಗ ಕಾರ್ಯ ಪ್ರವರ್ತನಾದ ಹನುಮಂತ ಅಗಾಧ ಶಕ್ತಿಯ ಸ್ವಾಮಿ, ರಾವಣನ ಗರ್ಭಭಂಗ ಮಾಡುವುದರ ಜೊತೆಗೆ ತನ್ನ ಚತುರತೆ ಹಾಗೂ ರಾಜಧರ್ಮದ ಜ್ಞಾನವನ್ನು ಪ್ರದರ್ಶಿಸುತ್ತಾನೆ, ಲಂಕಾದಹನದ ಮೂಲಕ ಶತ್ರುಗಳಿಗೆ ನಮ್ಮ ಶಕ್ತಿ ಎಷ್ಟಿದೆ ಎಂದು ತೋರಿಸಿದ ಚಾಣಾಕ್ಷ,, ಸಂಜೀವನಿ ಬೆಟ್ಟತದಂದ್ದು ಶಕ್ತಿಯ ದುರುಪಯೋಗ ಅಂತ ಹೇಳುವವರು ಇದ್ದರೂ ಸಮಯದ ಮಹತ್ವ ತಿಳಿದು ನಡೆಯ ಬೇಕು ಎಂಬ ಸಂದೇಶ ನೀಡಿದ್ದಾನೆ. ತಾನು ಕೂಡ ಬಹಳ ಗುಣಗಳ ಮಾಲೀಕ ನಾಗಿಯೂ ಸ್ವಾಮಿ ಭಕ್ತಿಗೆ ಪ್ರತೀಕನಾದ ಹನುಮಂತ ನಮ್ಮ ಜೀವನಕ್ಕೆ ಆದರ್ಶ.



- ಡಾ. ಉಷಾ ವಿ. ಅಗರಖೇಡ, ಬೆಂಗಳೂರು 560048

ಮೊಬೈಲ್: 88847 11960 


ಲೇಖಕರ ಸಂಕ್ಷಿಪ್ತ ಪರಿಚಯ

ಹವ್ಯಾಸೀ ಲೇಖಕರು, ಹವ್ಯಾಸ ಲೇಖನ ಬರೆಯುವುದು, ಎಂಟು ವರ್ಷ ಹರಿದಾಸ ಸಾಹಿತ್ಯ ಅಧ್ಯಯನ, ಅನನ್ಯಭಕ್ತಿ ಸಂಶೋಧನಾ ಪ್ರಬಂಧ ಬರೆದು ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಹರಿದಾಸ ಸಾಹಿತ್ಯ ಮಾಣಿಕ್ಯ ಪ್ರಶಸ್ತಿ, ಹರಿದಾಸ ಸಾಹಿತ್ಯ ಪರಿಮಳ ಪ್ರಶಸ್ತಿ, ಹರಿದಾಸ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಗೀತಾಮೃತ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಪ್ರಶಸ್ತಿ ಮುಂತಾದವುಗಳು ಬಂದಿವೆ. 1. ಯುರೋಪ್ ಪ್ರವಾಸ ಕಥನ, 2. ಉತ್ತರ ಭಾರತ ಯಾತ್ರಾ ಪ್ರಬಂಧ, 3, ಅನನ್ಯಭಕ್ತಿ ಹರಿದಾಸರ ಜೀವನ ಮತ್ತು ಕೃತಿಗಳ ಸಮೀಕ್ಷೆ, 4,.ಕುಸುಮಾಂಜಲಿ ಭಕ್ತಿ ಪದಗಳು- ಪುಸ್ತಕಗಳನ್ನು ಪ್ರಕಟಿಸಿದ್ದಾರೆ.  ತಾರತಮ್ಯದಂತೆ ಬರೆದು ಕಳಿಸುವ ಪತ್ರಿಕೆಗಳು, ಮೋದಕ ಮಾಸಪತ್ರಿಕೆ, ವಿಜಯ ಸಂಪದ ಮಂತ್ರಾಲಯ ಪತ್ರಿಕೆ, ಗುರು ಸಾರ್ವಭೌಮ ಮಂತ್ರಾಲಯ ಪತ್ರಿಕೆ, ಹಿಂದು ವಾಣಿ ರಾಷ್ಟ್ರೋತ್ಥಾನ ಪತ್ರಿಕೆ, ಹರಿದಾಸ ವಾಹಿನಿ ಮಾಸಪತ್ರಿಕೆ ಸಂಯುಕ್ತ ಕರ್ನಾಟಕ  ಉದಯವಾಣಿ, ಸಂದರ್ಶನ ಸ್ಥಾನೀಯ ಪತ್ರಿಕೆ ಮುಂತಾದವುಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


1 Comments

  1. ತುಂಬಾ ಸಾರ್ಥಕ ಜೀವಿ ನೀವು ಉಷಾ ಅವರೇ ನಿಮ್ಮ ಸಾಧನೆಗೆ ಭಗವಂತನ ಅನುಗ್ರಹ ಆಶೀವಾರದ ಇರಲಿ

    ReplyDelete

Post a Comment

Post a Comment

Previous Post Next Post