ಶ್ರೀರಾಮ ಕಥಾ ಲೇಖನ ಅಭಿಯಾನ- 141: ರಾಮಾಯಣದ ಓದಿಗೆ ಡಿವಿಜಿ ಅವರ ಸನ್ಮಾರ್ಗದರ್ಶನ

Upayuktha
0


- ಜಿ. ವಿ. ಅರುಣ


ನಾವು ಶ್ರೀರಾಮನ ಕಥೆಯನ್ನು ಕೇಳುತ್ತಾ ಬೆಳೆದವರು. ನಾವೇ ರಾಮಾಯಣವನ್ನು ಓದಿ ಅರ್ಥಮಾಡಿಕೊಳ್ಳುವಾಗ ರಾಮಾಯಣದ ಕಥೆಯ ಅನೇಕ ಘಟನೆಗಳು ಸಾಧ್ಯವೇ ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ರಾಮಾಯಣವು ಶಾಸ್ತ್ರಗ್ರಂಥವೇ? ಚರಿತ್ರೆಯೇ? ಎಂಬ ಪ್ರಶ್ನೆಗಳಿಂದ ಪ್ರಾರಂಭವಾಗಿ, ರಾವಣನಿಗೆ  ಹತ್ತು ತಲೆ ಇತ್ತೆ? ಹನುಮಂತನಿಗೆ ಸಂಸ್ಕೃತ ಬರುತ್ತಿತ್ತೆ? ಮುಂತಾದ ಪ್ರಶ್ನೆಗಳು ಏಳುವುದು ಸಹಜ.

ಇವೆಲ್ಲಕ್ಕೂ ಸೂಕ್ತ ಉತ್ತರಗಳಿವೆ. ನಮಗೆ ಹೃದ್ಯವಾಗುವ ಹಾಗೆ ಕನ್ನಡದಲ್ಲಿ ಇವನ್ನು ಒದಗಿಸಿರುವವರು ಸನ್ಮಾನ್ಯ ಡಿ. ವಿ. ಗುಂಡಪ್ಪನವರು.


ವಿದ್ವಾನ್ ಎನ್. ರಂಗನಾಥಶರ್ಮರು ತಮ್ಮ ‘ಭಗವದ್ರನುಗ್ರಹೀತವಾದ ಲೇಖನಿಯಿಂದ’ (ಇದು ಡಿವಿಜಿಯವರ ಮಾತುಗಳು) ಶ್ರೀಮದ್ವಾಲ್ಮೀಕಿರಾಮಾಯಣವನ್ನು ಎಂಟು ಸಂಪುಟಗಳಲ್ಲಿ ಕನ್ನಡದ ಗದ್ಯದಲ್ಲಿ ಅನುವಾದಮಾಡಿ ಮಹಾದುಪಕಾರ ಮಾಡಿದ್ದಾರೆ. ರಾಮಾಯಣದ ಶ್ಲೋಕಗಳನ್ನು ಕನ್ನಡ ಲಿಪಿಯಲ್ಲಿ ನೀಡಿ, ಅವುಗಳ ಭಾವಾರ್ಥವನ್ನು ಕನ್ನಡದಲ್ಲಿ ಕೊಟ್ಟಿದ್ದಾರೆ. ಡಿವಿಜಿಯವರು ಈ ಸಂಪುಟಗಳಿಗೆ ಬರೆದಿರುವ ಮುನ್ನುಡಿಗಳಲ್ಲಿ, ಸುಮಾರು ನೂರೈವತ್ತು ಪುಟಗಳಲ್ಲಿ, ಈ ಉತ್ತರಗಳಿವೆ.


ಒಂದು ಭಾಷೆಯಲ್ಲಿ ಛಂದೋಬದ್ಧವಾದ ಮಹಾಕಾವ್ಯವು ಬರಬೇಕಾದರೆ ಅದಕ್ಕೆ ಮೊದಲು ಜನಪದಶೈಲಿಯ ರಚನೆಗಳು, ಪೆಡುಸಾದ ಭಾಷೆಯ ಕಾವ್ಯವಲ್ಲದ ಸಾಹಿತ್ಯಗಳು ನಿರ್ಮಾಣವಾಗಿರಬೇಕು. ಇದನ್ನು ಪ್ರಪಂಚದ ಅನೇಕ ಭಾಷೆಗಳಲ್ಲಿ ನಾವು ಕಾಣುತ್ತೇವೆ. ಆದರೆ ನಾವು ಆದಿಕಾವ್ಯ ಎಂದು ಕರೆಯುವ ರಾಮಾಯಣವನ್ನು "ಮಹಾಕಾವ್ಯ" ಎಂದೇ ಗುರುತಿಸುತ್ತೇವೆ. ಏಕೆಂದರೆ ಅದರ ಶೈಲಿ ಛಂದೋಬದ್ಧವಾಗಿದ್ದು ಕಾವ್ಯದ ಎಲ್ಲ ಗುಣಲಕ್ಷಣಗಳನ್ನು ಒಳಗೊಂಡಿದೆ. ನಮ್ಮ ಮೊದಲ ಕಾವ್ಯವೇ ಹೀಗಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಏಳುವುದು ಸಹಜ. ಡಿವಿಜಿಯವರು ಇದಕ್ಕೆ ಪ್ರಶ್ನಾತೀತವಾದ ಉತ್ತರವನ್ನು ಬಾಲಕಾಂಡದ ಮುನ್ನುಡಿಯಲ್ಲಿ ನೀಡಿದ್ದಾರೆ. ರಾಮಾಯಣಕ್ಕಿಂತ ಹಿಂದಿನ ವೇದಸಾಹಿತ್ಯದಲ್ಲೇ ಛಂದಸ್ಸಿನ ಪ್ರಯೋಗವಾಗಿದೆ; ಅಲ್ಲಿರುವುದು ಕಾವ್ಯಮಯವಾದ ಭಾಷೆಯೇ. ಹಾಗಾಗಿ ವೇದಗಳ ಕಾಲಕ್ಕೆ ಸಂಸ್ಕೃತವು ಮಹಾಕಾವ್ಯವನ್ನು ರಚಿಸುವ ಭಾಷೆಯಾಗಿ ಬೆಳೆದು ಪ್ರಚಲಿತವಾಗಿತ್ತು ಎಂದು ಉದಾಹರಣೆಗಳ ಸಹಿತ ತೋರಿಸಿಕೊಡುತ್ತಾರೆ. 


ಕಾವ್ಯ ಮತ್ತು ವೇದಗಳಿಗಿರುವ ಸಂಬಂಧವನ್ನು ಡಿವಿಜಿಯವರು ಹೀಗೆ ಸೂತ್ರೀಕರಿಸುತ್ತಾರೆ: "ವೇದದಲ್ಲಿ ಮನುಷ್ಯನ ಆವೇಗಾಕಾಂಕ್ಷೆಗಳು ನಿಮಿತ್ತ, ಭಗವತ್ಪ್ರಸಾದವು ಉದ್ದೇಶ. ವೇದದಲ್ಲಿ ದೈವವೂ ಮುಖ್ಯ, ಮನುಷ್ಯನು ಪ್ರಾಸಂಗಿಕ. ಕಾವ್ಯದಲ್ಲಾದರೋ ಮನುಷ್ಯನು ಮುಖ್ಯ, ದೈವವೂ ಪ್ರಾಸಂಗಿಕ. ಹೀಗೆ ಕಾವ್ಯ ವೇದಗಳು ಪರಸ್ಪರ ಪರಿಪೂರಕಗಳು."


‘ರಾಮಾಯಣವನ್ನು ಕಾವ್ಯವಾಗಿ ತಿಳಿದು ಅದರ ರಸಾಸ್ವಾದನೆ ಮಾಡಬೇಕು. ಅಲ್ಲಿ ಬರುವ ಸನ್ನಿವೇಶ, ಸಂಗತಿಗಳನ್ನು ಪ್ರಶ್ನಾತೀತವಾಗಿ ನೋಡಿದರೆ ಮಾತ್ರ ಕಾವ್ಯರಸಾಸ್ವಾದನೆ ಸಾಧ್ಯ’ ಎಂದು ಅವರು ಸಾರಿ ಹೇಳುತ್ತಾರೆ. ವಾಲ್ಮೀಕಿಗಳು ಬರೆದಿರುವ ಕಾವ್ಯದಲ್ಲಿ 'ಇನ್ ಬಿಟ್ವೀನ್ ದ ಲೈನ್' ಅನ್ನು ಹೇಗೆ ಪರಿಗಣಿಸಬೇಕು ಎಂದು ಡಿವಿಜಿಯವರು ದೃಷ್ಟಾಂತದ ಸಹಿತ ತಮ್ಮ ಮುನ್ನುಡಿಗಳಲ್ಲಿ ಕಾಣಿದ್ದಾರೆ. ಅದನ್ನು ನಾವು ಅಭ್ಯಾಸ ಮಾಡಿದರೆ, ರಾಮಾಯಣವನ್ನು ಓದಬೇಕಾದ ಸರಿಯಾದ ದೃಷ್ಟಿಯ ಅರಿವು ನಮಗೆ ಮೂಡುತ್ತದೆ.


ರಾಮಾಯಣ ಗ್ರಂಥದ ಸ್ವರೂಪವನ್ನು ಕುರಿತು ಡಿವಿಜಿಯವರು ಹೀಗೆ ಬರೆಯುತ್ತಾರೆ: “ರಾಮಾಯಣವು ಶಾಸ್ತ್ರವಲ್ಲ. ಚರಿತ್ರೆಯಲ್ಲ. ಅದು ಕಾವ್ಯ; ಆದರೆ ಶಾಸ್ತ್ರ ಚರಿತ್ರೆಗಳೆರಡನ್ನು ಒಳಗೊಂಡಿರುವ ಕಾವ್ಯ; ಶಾಸ್ತ್ರವನ್ನು ತೊರೆದ ಕಾವ್ಯವಲ್ಲ. ಚರಿತ್ರೆಯ ಆಧಾರವಿಲ್ಲದ ಕಾವ್ಯವಲ್ಲ. ಕಟ್ಟು ಕಥೆಯಲ್ಲ. ಅದು ವಾಸ್ತವಿಕ ಸಂಗತಿಗಳನ್ನು ಅಸ್ತಿಪಂಜರವಾಗಿರಿಸಿಕೊಂಡು ದೃಢಾಂಗವಾಗಿ ಪುಷ್ಟವಾಗಿರುವ ಕಾವ್ಯ.” 


ಅದರ ಮುಂದುವರಿದ ಭಾಗವಾಗಿ ಅವರು ಕಾವ್ಯ, ರಸ ಮುಂತಾದವುಗಳ ಬಗ್ಗೆ ತಿಳಿಸುತ್ತಾರೆ. ಆ ಮೂಲಕ ರಾಮಾಯಣದ ಪ್ರಯೋಜನ ಪರಿಣಾಮಗಳನ್ನು ಕುರಿತಾಗಿ ಹೀಗೆ ವಿವರಿಸುತ್ತಾರೆ: “ಕಾವ್ಯಕಲಾರಸವಾದರೋ ಪಂಚೇಂದ್ರಿಯ ಪರಿಣಾಮ ಕ್ಷೇತ್ರವಾದ ಮನಸ್ಸಿಗೆ ರಂಜನೆ ಮಾಡುವುದಲ್ಲದೆ ಅಲ್ಲಿಂದ ಜೀವಕ್ಕೂ ವ್ಯಾಪಿಸಿ ಜೀವಸ್ವಭಾವದ ಮೇಲೆ ಪರಿಣಾಮ  ಮಾಡಬಲ್ಲದ್ದಾಗುತ್ತದೆ. ಹೀಗೆ ಕಾವ್ಯಕ್ರಿಯೆ ಎರಡು ಘಟ್ಟಗಳಲ್ಲಿ ನಡೆಯಬಹುದಾಗಿದೆ: 1) ಮನೋರಂಜನೆ, 2) ಜೀವೋತ್ಕರ್ಷ.


“… ಕಾವ್ಯದ ಮಹತ್ವವು ಅದರ ಜೀವೋದ್ಧಾರ ಸಾಮರ್ಥ್ಯದಿಂದ ಬರತಕ್ಕದ್ದು. ಅಂಥಾ ಸಾಮರ್ಥ್ಯದ ಅತಿಶಯವು ಶ್ರೀಮದ್ರಾಮಾಯಣದ ಮಹಿಮೆ. 

“ಜೀವೋದ್ಧಾರವೆಂದರೆ ನೀತಿಪ್ರಭಾವ. ಆದರೆ ಕಾವ್ಯದ ನೀತಿಪ್ರಭಾವವು ಪ್ರತ್ಯಕ್ಷ ಬೋಧನೆಯಿಂದಲ್ಲ. ಅಪ್ರತ್ಯಕ್ಷ ಹೃದಯಪರಿವರ್ತನೆಯಿಂದ. ಇದು ಕಾವ್ಯದ ವಿಶೇಷಶಕ್ತಿ. ಶ್ರೀಮದ್ರಾಮಾಯಣ ನಮಗೆ ಹಾಗೆ ಉಪದೇಶಮಾಡಹೊರಟಿಲ್ಲ. ಅದು ನಮಗೆ ಕಥೆ ಹೇಳುತ್ತದೆ.


“ರಾಮಾಯಣದಲ್ಲೆಲ್ಲೂ ವಾಲ್ಮೀಕಿಗಳು ‘ರಾಮನನ್ನು ಪೂಜಿಸಿರಿ’ ಎಂದು ಸ್ಪಷ್ಟವಾಗಿ ಬೋಧನೆ ಮಾಡಿಲ್ಲ… ಆದರೆ  ರಾಮಾಯಣವನ್ನು ನಾವು ಅಭ್ಯಾಸ ಮಾಡಿದಾಗ, ಆ ಕಥಾನಾಯಕರು ಎಂಥ ಮಹಾನುಭಾವರು, ಎಷ್ಟು ಅನುಕರಣಾರ್ಹರು ಎಂದು ನಮನಮಗೆ ಅನ್ನಿಸುತ್ತದೆ… ಇದೆ ಮಹಾಕಾವ್ಯದ ಪರಮೋಪಕಾರ" ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.


ಇನ್ನು ರಾವಣನಿಗೆ ಹತ್ತು ತಲೆ ಇತ್ತೇ? ಎನ್ನುವುದಕ್ಕೆ ಡಿವಿಜಿಯವರ ಸೂಚನೆ ಹೀಗಿದೆ: “ರಾಮಾಯಣದ ಮಟ್ಟಿಗೆ ರಾವಣನಿಗೆ ಹತ್ತು ತಲೆಯಿದ್ದದ್ದನ್ನು ನಂಬಬೇಕು. ಕಾವ್ಯದಲ್ಲಿ ಮುಖ್ಯವಾದದ್ದು ಬಹಿರಂಗಸಂಗತಿಯಲ್ಲ, ಅಂತರಂಗಸಂಗತಿ. ಬಹಿರಂಗವು ಸಂಕೇತ ಮಾತ್ರ. ರಾವಣನು ಮಹಾಬಲಿಷ್ಠ, ಅತಿಶಯ ಪರಾಕ್ರಮಿ- ಎಂದು ತಿಳಿಸುವುದು ಕವಿಯ ತಾತ್ಪರ್ಯ. ಅದನ್ನು ಸೂಚಿಸಲು ದಶಶಿರಸ್ಸಿನ ಉಪಾಯ.


“ಹೀಗೆ ಹೊರವರ್ಣನೆಯ ಒಳತಾತ್ಪರ್ಯವನ್ನು ಗ್ರಹಿಸದಿದ್ದರೆ ದಶಕಂಠತ್ವ, ಕಪಿಯ ಸಂಭಾಷಣೆ, ಸಮುದ್ರಲಂಘನ, ಇಂಥ ಬಹಿರ್ಘಟನೆಗಳ ಅಸಾಮಂಜಸ್ಯವೇ ದೊಡ್ಡದಾಗಿ ಕಾವ್ಯದ ಅಂತರಂಗಾನುಭವವು ನಮಗೆ ದುರ್ಲಭವಾಗುತ್ತದೆ. ಮಹಾಕಾವ್ಯದ ಬಳಿ ಹೋಗುವವರು ತಾಯ ಬಳಿ ಹೋಗುವ ಎಳೆಮಕ್ಕಳಂತೆ ಮನಸ್ಸು ಮಾಡಿಕೊಂಡು ಹೋಗಬೇಕು. ಅಂಥ ಸರಳತೆ, ಅಂಥ ಅವಿಶಂಕೆ, ಅಂಥ ಅವಿತರ್ಕ, ಅಂಥ ಸಿದ್ಧವಿಶ್ವಾಸ - ಇವು ಇಲ್ಲದವರಿಗೆ ಕಾವ್ಯಮಾತೆ ಒಲಿಯಳು." ಮಹಾಕಾವ್ಯವನ್ನು ಓದಲು ತೊಡಗುವವರಿಗೆ ಇದಕ್ಕಿಂತ ಒಳ್ಳೆಯ ಮಾರ್ಗದರ್ಶನ ಸಿಕ್ಕುವುದಿಲ್ಲ.

ಡಿವಿಜಿಯವರು ರಾಮಾಯಣದ ಕಥೆಯ ವಿವಿಧ ಸಂದರ್ಭಗಳಲ್ಲಿ ನೀಡಿರುವ ಕೆಲವು ವಿಶ್ಲೇಷಣೆಗಳನ್ನು ಗಮನಿಸೋಣ.


ವಿಶ್ವಾಮಿತ್ರನನ್ನು ಶ್ರೀರಾಮನ ವಿದ್ಯಾವಿಕಾಸಕ್ಕೆ ಕರೆತಂದದ್ದು ‘ವಾಲ್ಮೀಕಿಯ ಸಂಧಾನ ಕೌಶಲದ ಒಂದು ಶಿಖರಾಗ್ರ’ ಎಂದು ಹೇಳುತ್ತಾ ಅದರಿಂದ ಆದ ಐದು ಪ್ರಯೋಜನಗಳತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ. 1) ಅಸ್ತ್ರಶಸ್ತ್ರೋಪದೇಶ 2) ರಾಕ್ಷಸ ಪರಿಚಯ 3) ಪೂರ್ವೇತಿಹಾಸಶ್ರವಣ 4) ಮನಃಪ್ರಸನ್ನತಾ ಸಾಧಕವಾದ ನಾನಾದೇಶಸಂಚಾರ 5) ಸಾನುರೂಪವಿವಾಹ.


ನಾವು ಇಲ್ಲಿ ನೆನಪಿಡಬೇಕಾದ್ದು "ಶ್ರೀರಾಮಚಂದ್ರನಿಗೆ ಬೇಕಾಗಿದ್ದದ್ದು ಪುಸ್ತಕಪಾಠವಲ್ಲ. ಲೋಕಪರಿಜ್ಞಾನ, ಯುಕ್ತಾಯುಕ್ತವಿವೇಚನಾಭ್ಯಾಸ, ಧರ್ಮಸೂಕ್ಷ್ಮಗ್ರಹಣಕುಶಲತೆ, ಆತ್ಮವಿಶ್ವಾಸ, ಸ್ವಕರ್ತವ್ಯಗೌರವ. ಈ ಗುಣಗಳನ್ನು ಅವನಲ್ಲಿ ಕೃಷಿ ಮಾಡಿ ಬೆಳೆಸಲು ಹೇಳಿದ ಉಪಾಖ್ಯಾನಗಳು ಸಾಧಕವಾದವು. ಮಹರ್ಷಿಯ ಸಹವಾಸದಲ್ಲಿ ಮಾಡಿದ ದೇಶಸಂಚಾರದಿಂದ ಬಾಲಕನಾದ ಶ್ರೀರಾಮನ ದೇಹಪಾಟವವೂ ಧನರ್ದಕ್ಷತೆಯೂ ಮನೋವಿಕಾಸವೂ ಬುದ್ಧಿ ಜಾಗರ್ಯವೂ ಬೆಳೆದವು.”


ರಾಮಾಯಣವನ್ನು ಅಭ್ಯಾಸ ಮಾಡುವಾಗ ಬಾಲ, ಅಯೋಧ್ಯಾ, ಕಿಷ್ಕಿಂಧಾ, ಯುದ್ಧಕಾಂಡಗಳಲ್ಲಿರುವ ಕಥೆಯು ಅವುಗಳ ಹೆಸರಿನಿಂದ ಪರಿಚಯವಾಗಿಬಿಡುತ್ತದೆ. ಆದರೆ ಸುಂದರಕಾಂಡವನ್ನು ಹಾಗೆಂದು ವಾಲ್ಮೀಕಿಗಳು ಏಕೆ ಕರೆದರು? ಎಂಬ ಪ್ರಶ್ನೆಯು ಸಹಜವಾಗಿ ಮನದಲ್ಲಿ ಮೂಡುತ್ತದೆ. ಕೆಲವರು ಅದನ್ನು ‘ಹನುಮತ್ಕಾಂಡ’ ಎಂದು ಏಕೆ ಕರೆಯಬಾರದು ಎನ್ನುತ್ತಾರೆ. ಅದಕ್ಕೆ ಅತ್ಯಂತ ‘ಸುಂದರ’ವಾದ ಸಮಾಧಾನವು ಡಿವಿಜಿಯವರ ಮಾತುಗಳಲ್ಲಿ ಹೀಗಿವೆ:


“ಸುಂದರಕಾಂಡವು ಕಥಾಸಂದರ್ಭದಿಂದ ಸುಂದರ. 

“ಪರಮ ಸುಂದರರಾದ ರಾಮಸೀತೆಯರು ವಿಯೋಗದುಃಖದಲ್ಲಿದ್ದಾಗ ಪರಸ್ಪರ ಪ್ರಿಯವಾರ್ತಾ ಸಂಧಾನದಿಂದ ಅವರಿಗೆ ಮಾನಸಿಕ ಸಮಾಗಮವಾದದ್ದು ಇಲ್ಲಿಯ ಕಥೆ. ಆ ಸುಂದರ ಸಂಧಾನಕ್ಕೆ ಸಾಧನಭೂತನಾದವನು ಆಂಜನೇಯಸ್ವಾಮಿ. ಆತನ ಸೌಂದರ್ಯದೌತ್ಯವೂ ದೌತ್ಯಸೌಂದರ್ಯವೂ ಇಲ್ಲಿಯ ವಸ್ತು.

“ನಾನಾ ಸೌಂದರ್ಯಗಳ ಸಮ್ಮೇಳನಸ್ಥಾನ ಸುಂದರಕಾಂಡ.” ಹೀಗೆ ತಿಳಿಸಿ ಇತರ ಕಾಂಡಗಳಲ್ಲಿರುವ ವಿಚಾರಗಳನ್ನು ಪಟ್ಟಿಮಾಡಿ ಇದು ಏಕೆ ಸುಂದರಕಾಂಡ ಎಂದು ನಮ್ಮ ಗಮನಕ್ಕೆ ತರುತ್ತಾರೆ. ಅಲ್ಲದೆ ಹನುಮತ್ಕಾಂಡವೆಂದು ಏಕೆ ಕರೆಯಲಾಗುವುದಿಲ್ಲ ಎನ್ನುವುದಕ್ಕೂ ಸಮಂಜಸವಾದ ವಿವರಣೆಗಳಿವೆ.


ಯುದ್ಧಕಾಂಡದಲ್ಲಿ ಆದಿತ್ಯ ಹೃದಯದ ಉಪದೇಶದ ಅನಂತರ ರಾಮನು ಮಾಡಿದ್ದು ‘ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್.’ ಅವನು ಏಕೆ ಆಚಮನ ಮಾಡಿದ? ಏಕೆ ಶುಚಿಯಾದ? ಎನ್ನುವುದಕ್ಕೆ ಡಿವಿಜಿಯವರು ಅದ್ಭುತವಾದ ವಿವರಣೆಯನ್ನು ನೀಡಿದ್ದಾರೆ - “ಯುದ್ಧಕಾರ್ಯ ಆತನಿಗೆ ಮಡಿಯ ಕೆಲಸ; ಪವಿತ್ರವಾದ ಕೆಲಸ. ಅದು ಮೈಲಿಗೆಯಿಂದ ಮಾಡಲಾಗುವ ಕೆಲಸವಲ್ಲ. ಈ ಭಾವ ಅನೇಕ ಕಡೆ ದೊರೆಯುತ್ತದೆ. 


ಯುದ್ಧವೆಂಬುದು ಉಗ್ರವಾದ ಕರ್ತವ್ಯ. ಹಗುರವಾದ ಆಟವಲ್ಲ. ಮನಸ್ಸು ಬಂದಂತೆ ಹಿಡಿದು ಹೊಡೆಯತಕ್ಕದ್ದಲ್ಲ. ಅದಕ್ಕೆ ನಿಯಮಗಳುಂಟು. ಹೀಗೆ ನಿಯಮ ವಿಧೇಯವಾಗಿದ್ದದ್ದು ಪೂರ್ವಯುಗಗಳ ಯುದ್ಧ… ಯುದ್ಧವು ಒಂದು ಧರ್ಮಕ್ರಿಯೆ. ಅದು ಒಂದು ವಿಶೇಷ ಧರ್ಮ, ಸಾಮಾನ್ಯ ಧರ್ಮವಲ್ಲ. ಅದು ಭಯಂಕರವೂ ಹೌದು, ಆದರೆ ಶುಭಂಕರವೂ ಹೌದು. ಅದರಲ್ಲಿ ಅಪಾಯವುಂಟು. ಆದರೆ ಸಮರ್ಥನ ಕೈಯಿಂದ ಆದಾಗ ಅಪಾಯವಾಗದೆ ಅನಪಾಯ ಕ್ಷೇಮಲಾಭವೇ ಆಗುತ್ತದೆ.” 


ಡಿವಿಜಿಯವರು ‘ಯುದ್ಧವೆಂಬುದು ಉಗ್ರವಾದ ಕರ್ತವ್ಯ’ ಎನ್ನುವಾಗ ನಮಗೆ ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಗೀತೋಪದೇಶದ ನೆನಪಾಗುತ್ತದೆ. ರಾಮನು ಅರ್ಜುನನಂಥಲ್ಲ. ಅವನಿಗೆ ಏನು ಮಾಡಬೇಕೆಂದು ಸ್ಪಷ್ಟವಾದ ಅರಿವಿತ್ತು. 

 

ಯುದ್ಧಕಾಂಡದಲ್ಲಿ ರಾವಣನ ವಧೆಯಾದ ಅನಂತರ ನಡೆಯುವ ಘಟನೆಯನ್ನು ಕೆಲವು ವಾಕ್ಯಗಳ ಕಥೆಯಾಗಿ ನೋಡಬಹುದು. ‘ನನ್ನ ಗಂಡನನ್ನ ನೋಡಲು ಇಚ್ಚಿಸುತ್ತೇನೆ’ ಎಂದು ಸೀತೆಯು ಹನುಮಂತನೊಡನೆ ಹೇಳಿ ಕಳುಹಿಸುತ್ತಾಳೆ. ಆಗ ರಾಮನ ಕಣ್ಣಿನಲ್ಲಿ ಕಂಬನಿದುಂಬಿ, ಕಂಠ ಗದ್ಗದಿತವಾಯಿತು, ಉಸಿರು ಬಿಸಿಯಾಯಿತು. ರಾಮನು ವಿಭೀಷಣನಿಗೆ ‘ಸೀತೆಯು ಸ್ನಾನ ಮಾಡಿಕೊಂಡು, ಅಲಂಕೃತಳಾಗಿ ಬರಲಿ’ ಎಂದು ಹೇಳಿದ. ಆದರೆ ಸೀತೆಯು ‘ತಾನು ಇರುವಂತೆಯೇ ರಾಮನನ್ನು ನೋಡಲು ಇಚ್ಚಿಸುತ್ತೇನೆ’ ಎಂದು ವಿಭೀಷಣನಿಗೆ ಹೇಳಿದಳು. ವಿಭೀಷಣನು ‘ನಮ್ಮೆಲ್ಲರಿಗೂ ರಾಜನಾದ ನಿನ್ನ ಪತಿಯು ಹೇಳುವಂತೆ ನಡೆದುಕೊಳ್ಳುವುದು ಸರಿಯಾದದ್ದು’ ಎಂದು ತಿಳಿಸಿದಾಗ ಸೀತೆಯು ಸ್ನಾನಮಾಡಿ ಅಲಂಕೃತಳಾಗಿ ಬರುತ್ತಾಳೆ. ಅವಳನ್ನು ನೋಡಿದ ರಾಮನಿಗೆ ‘ಹರ್ಷ, ದೈನ್ಯ ಮತ್ತು ರೋಷಗಳು’’ ಒಟ್ಟಿಗೆ ಉಂಟಾದವು. ಕೊನೆಗೆ ಸೀತೆಯ ಅಗ್ನಿಪ್ರವೇಶ. 


ಆ ಸಂಧರ್ಭದಲ್ಲಿ ರಾಮ, ಸೀತೆಯರ ಮನದ ಭಾವನೆಗಳು ಏನಿದ್ದಿರಬಹುದು? ರಾಮನ ನಿರ್ಧಾರ ಸರಿಯೇ? ಅವನು ನೀಡುವ ಸಬೂಬನ್ನು ಒಪ್ಪಬಹುದೇ? ಈ ಎಲ್ಲ ವಿಚಾರಗಳನ್ನೂ ಪರಿಶೀಲನೆ ಮಾಡಿ ಸುಮಾರು ಹನ್ನೆರಡು ಪುಟಗಳ ಮಹೋನ್ನತ ವಿಶ್ಲೇಷಣೆಯನ್ನು ಡಿವಿಜಿಯವರು ಯುದ್ಧಕಾಂಡದ ಉತ್ತರಾರ್ಧದ ಮುನ್ನುಡಿಯಲ್ಲಿ ನೀಡಿದ್ದಾರೆ. ಆ ಭಾಗವನ್ನು ಓದಿಯೇ ಅದರ ಸೊಬಗನ್ನು ತಿಳಿಯಬೇಕು.


ನಾನು ಇಲ್ಲಿ ಡಿವಿಜಿಯವರ ಮಹತ್ತರವಾದ ಬರವಣಿಗೆಯ ಕೆಲವು ಭಾಗಗಳನ್ನು ಮಾತ್ರ ಉದ್ಧರಿಸಿದ್ದೇನೆ. ಇದರಿಂದ ಓದುಗರು ಪ್ರಭಾವಿತರಾಗಿ ಡಿವಿಜಿಯವರು ರಾಮಾಯಣದ ಸಂಪುಟಗಳಿಗೆ ಬರೆದಿರುವ ಮುನ್ನುಡಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡುವಂತಾಗಲಿ ಎಂಬುದು ನನ್ನ ಆಶಯ. ಇದು ವಾಲ್ಮೀಕಿರಾಮಾಯಣವನ್ನು ಕಾವ್ಯವಾಗಿ ಅಭ್ಯಾಸ ಮಾಡುವುದಕ್ಕೆ ಮೊದಲು ಒಂದು ಸೂಕ್ತವಾದ ಪ್ರವೇಶಿಕೆಯಾಗುತ್ತದೆ. ಇದು ಡಿವಿಜಿಯವರು ನಮ್ಮ ರಾಮಾಯಣದ ಓದಿಗೆ ಮಾಡುವ ಸನ್ಮಾರ್ಗದರ್ಶನವಾಗುತ್ತದೆ. 


“ಶ್ರೀರಾಮಪರೀಕ್ಷಣಂ”

ಡಿವಿಜಿಯವರು ರಾಮನ ನಡವಳಿಕೆಯ ಬಗ್ಗೆ ಕಾಡುವ ಕೆಲವು ಪ್ರಶ್ನೆಗಳಿಗೆ (ವಾಲಿಯ ವಧೆ, ಸೀತೆಯ ಅಗ್ನಿಪ್ರವೇಶ ಇತ್ಯಾದಿ) ಉತ್ತರವನ್ನು “ಶ್ರೀರಾಮಪರೀಕ್ಷಣಂ” ಎಂಬ ಕಾವ್ಯಗ್ರಂಥದಲ್ಲಿ ನೀಡಿದ್ದಾರೆ. ಪ್ರೊ|| ಜಿ. ವೆಂಕಟಸುಬ್ಬಯ್ಯ ಅವರು ಬರೆದಿರುವ ಈ ಗ್ರಂಥದ ವಿಮರ್ಶಾ ಲೇಖನದ ಕೆಲವು ಸಾಲುಗಳನ್ನು ಕೆಳಗೆ ನೀಡುತ್ತಿದ್ದೇನೆ:


“ಶ್ರೀರಾಮಪರೀಕ್ಷಣಂ ಕಾವ್ಯದಲ್ಲಿ ಅಹಲ್ಯೆ, ತಾರೆ, ಮಂಡೋದರಿ, ಸೀತಾ, ಲೋಕದ ಜನ, ಲಕ್ಷ್ಮಣ ಮತ್ತು ಹನುಮಂತ- ಈ ಪಾತ್ರಗಳು ತಮತಮಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತಾರೆ. ಅವುಗಳಿಗೆ ಉತ್ತರ ನೀಡುವುದರಲ್ಲಿ ಭಗವದ್ಗೀತೆಯಲ್ಲಿ ಉಕ್ತವಾಗಿರುವ ಉತ್ತರವನ್ನೇ ರಾಮನು ಸಮರ್ಥವಾಗಿ ನೀಡುತ್ತಾನೆ. ಪರತತ್ವವು ತನ್ನ ಕಾರ್ಯವನ್ನು ತಾನೇ ಸ್ಪಷ್ಟಗೊಳಿಸುತ್ತದೆ. ಅದನ್ನು ನಂಬಿದರೆ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ದೊರಕುತ್ತದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಈ ಭಾವನೆಯನ್ನು ಶ್ರೀರಾಮಪರೀಕ್ಷಣಂ ಕಾವ್ಯದಲ್ಲಿ ಡಿವಿಜಿಯವರು ಸ್ಪಷ್ಟಗೊಳಿಸಿದ್ದಾರೆ. 

“ಮಾನವನಾಗಿ ರಾಮನ ನಡವಳಿಕೆ ಸರಿಯೇ ಎಂಬ ಪ್ರಶ್ನೆ ಇದ್ದೇ ಇದೆ. ಆದರೆ ಡಿವಿಜಿಯವರ ದೃಷ್ಟಿಯಲ್ಲಿ ರಾಮನ ನಡವಳಿಕೆ ವಿಮರ್ಶಾತೀತವಾಗಿದೆ ಎಂಬುದೇ ಆಗಿದೆ. ಕಾವ್ಯದಲ್ಲಿ ಭರತ ಮತ್ತು ಲಕ್ಷ್ಮಣರ ಭ್ರಾತೃಪ್ರೇಮದಿಂದುಂಟಾದ ನಿಸ್ಪೃಹೆ, ಹನುಮಂತನ ಸರ್ವಸಮರ್ಪಣ ಭಾವ, ಸೀತೆಯ ತಪಶ್ಶುದ್ಧಿ ಮತ್ತು ರಾಮನ ಶೌರ್ಯ ಮತ್ತು ಔದಾರ್ಯಗಳು ನಮ್ಮ ಹೃದಯಕ್ಕೆ ತಟ್ಟುವಂತೆ ಚಿತ್ರಿತವಾಗಿವೆ. ಅವರವರ ಧರ್ಮವನ್ನು ನಂಬಿ ನಡೆಯುವುದೇ ಅವರವರ ಕರ್ತವ್ಯವೆಂಬುದೇ ವಾಲ್ಮೀಕಿಯ ಸಂದೇಶ ಎಂದು ಈ ಶ್ರೀರಾಮಪರೀಕ್ಷಣಂ ಕಾವ್ಯ ಸಾರುತ್ತದೆ.” 


ನಾನು ಇಲ್ಲಿ ಡಿವಿಜಿಯವರು ಸೃಷ್ಟಿಸಿರುವ ರಾಮಾಯಣ ಸಾಹಿತ್ಯದ ಕ್ಷೀರಸಾಗರದತ್ತ ಕೈಬೆರಳನ್ನು ತೋರಿಸಿದ್ದೇನೆ. ಓದುಗರು ಅವರವರ ಆಸಕ್ತಿಗೆ, ಶಕ್ತಿಗೆ ಅನುಸಾರವಾಗಿ ಅದರ ಪಾನಮಾಡಬಹುದು.




- ಜಿ. ವಿ. ಅರುಣ


ಲೇಖಕರ ಸಂಕ್ಷಿಪ್ತ ಪರಿಚಯ:

ಜಿ.ವಿ. ಅರುಣ ಅವರ ಪೂರ್ವಿಕರ ಸ್ಥಳ ಗಂಜಾಂ. ಆದರೆ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ನಿಘಂಟು ನಿಪುಣ ಪ್ರೋ ಜಿ.ವಿ.ರವರ ಮಗ , ಮೆಕ್ಯಾನಿಕಲ್ ಇಂಜಿನಿಯರ್, ಎಂ.ಬಿ.ಎ ಪದವೀಧರ.ಮಿನಿ ನವರತ್ನ ಉದ್ದಿಮೆ ಮೆಕಾನ್ ಲಿಮಿಟೆಡ್ ನಲ್ಲಿ ಟ್ರೈನಿಯಾಗಿ ಸೇರಿ ಪ್ರಧಾನ ಮಹಾ ಪ್ರಬಂಧಕನಾಗಿ ನಿವೃತ್ತಿ ಹೊಂದಿರುತ್ತಾರೆ. ಕನ್ನಡದ ಅನೇಕ ಮಾಸಪತ್ರಿಕೆಗಳಲ್ಲಿ ಮಾಸ, ವಾರ, ದಿನಪತ್ರಿಕೆಗಳಲ್ಲಿ ಜಿ.ವಿ.ಅರುಣ ಅವರ ಸಣ್ಣಕತೆ, ವೈಜ್ಞಾನಿಕ ಲೇಖನ, ಕವಿತೆ, ಮಕ್ಕಳ ಕತೆ, ಹಾಗೂ ಹಾಸ್ಯ ಲೇಖನಗಳು, ಪ್ರಕಟವಾಗಿರುತ್ತದೆ.

ಕೃತಿಗಳು: ಇಂಧನಗಳು, ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top