ಶ್ರೀರಾಮ ಕಥಾ ಲೇಖನ ಅಭಿಯಾನ 140: ಸೀತೆ ಸಾಕ್ಷಾತ್ ಲಕ್ಷ್ಮಿಯ ಭೂರೂಪ

Upayuktha
0


-ಶ್ರೀಮತಿ ಮುತ್ತಿಗಿ ಉಷಾಬಾಯಿ


ನಕ ಮಹಾರಾಜಗೆ ಮಕ್ಕಳಿಲ್ಲದ ಕಾರಣ ಪುತ್ರಕಾಮೇಷ್ಠಿ ಯಾಗಕ್ಕಾಗಿ ಭೂಮಿಯನ್ನು ಶೋಧಿಸುತ್ತಿರುವಾಗ ಭೂಗರ್ಭದಲ್ಲಿ ಸಿಕ್ಕವಳೇ ಸೀತೆ. ಅವನಿಜೆ ಆದುದರಿಂದ ಜನಕಮಹಾರಾನಿಗೆ ಭೂಗರ್ಭದಲ್ಲಿ ದೊರೆತಳು. ಭೂಮಿಯಲ್ಲಿ ದೊರೆತ ಮಗುವಿಗೆ ಭೂಜಾತೆ ಎಂದೂ, ಜನಕ ಮಹಾರಾಜನು ಆ ಮಗುವನ್ನೇ ತನ್ನ ಮಗುವೆಂದು ಸಾಕಿದ್ದರಿಂದ ಆಮಗುವಿಗೆ ಜಾನಕಿ ಎಂದು, ಮಿಥಿಲಾಪುರದರಸನ ಮಗಳಾದುದರಿಂದ ಮೈಥಿಲಿ ಎಂದೂ, ವಿದೇಹದ ಅರಮನೆಯಲ್ಲಿ ಬೆಳೆದವಳಾದುದರಿಂದ ವೈದೇಹಿ ಎಂದೂ ಅನೇಕ ಹೆಸರುಗಳುಂಟು.


ಅಪೂರ್ವ ಸುಂದರಿಯಾದ ಸೀತೆಯನ್ನು ಜನಕ ಮಹಾರಾಜನು ಬಹಳ ಮಮತೆಯಿಂದ ಸಾಕಿದ್ದನು. ಅಪ್ರತಿಮನಾದ ವೀರಾಗ್ರಣಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟರೆ, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಯೋಚಿಸಿ," ಶಿವನಿಂದ ದತ್ತವಾದ ಈ ಧನುಸ್ಸನ್ನು ಯಾರು ಹೆದೆ ಏರಿಸುತ್ತಾರೋ ಅವರಿಗೆ" ತನ್ನ ಮಗಳನ್ನು ಕೊಡುವುದಾಗಿ ಡಂಗುರ ಹೊಯ್ಸುತ್ತಾನೆ. ಈ ವಿಷಯವನ್ನರಿತ ವಿಶ್ವಾಮಿತ್ರರು ತಮ್ಮ ಯಾಗ ರಕ್ಷಣೆಗೋಸ್ಕರ ಅಯೋಧ್ಯೆ ಇಂದ ಕರೆತಂದ ರಾಮಲಕ್ಷ್ಮಣರನ್ನು ಕರೆದುಕೊಂಡು ಮಿಥಿಲಾಪುರಿಗೆ ಬರುತ್ತಾರೆ. 


ಸ್ವಯಂವರಕ್ಕೆ ಬಂದ ಎಂತಹಾ ಭುಜಬಲಶಾಲಿಗಳಿಗೂ ಆ ಧನುಸ್ಸನ್ನು ಹೆದೆಯೇರಿಸುವುದಿರಲಿ, ಅಲುಗಾಡಿಸಲೂ ಆಗುವುದಿಲ್ಲ. ವಿಶ್ವಾಮಿತ್ರರ ಆಜ್ಞೆಯಂತೆ ಶ್ರೀರಾಮಚಂದ್ರನು ಕ್ಷಣಮಾತ್ರದಲ್ಲಿ ಹೋಗಿ ಆ ಧನುಸ್ಸನ್ನು ಹೆದೆಯೇರಿಸಿದುದಲ್ಲದೇ ಮುಂದೆ ಸೀತೆಯ ಗೊಡವೆಗೆ ಯಾರಾದರೂ ಬಂದರೆ ಅವರಿಗೆ ಇದೇಗತಿ ಎಂದು ತೋರಿಸಲೋಸುಗವಾಗಿಯೋ ಎಂಬಂತೆ ಶಿವ ಧನಸ್ಸನ್ನು ಮುರಿದು ಹಾಕಿದನು. ಸಂತೋಷದಿಂದ ಸೀತಾದೇವಿಯು ವಿಜಯಮಾಲೆಯನ್ನು ಶ್ರೀರಾಮಚಂದ್ರನ ಕೊರಳಿಗೆ ಹಾಕಿದಳು.


ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮಚಂದ್ರನು ಅರಮನೆಯ ಭೋಗಭಾಗ್ಯಗಳನ್ನು ತೊರೆದು ನಾರುಡೆಯುಟ್ಟು ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾರ್ಥವಾಗಿ ಬಿಲ್ಲು ಬಾಣಗಳನ್ನು ಧರಿಸಿ ವನವಾಸಕ್ಕೆ ಲಕ್ಷ್ಮಣ ಸೀತೆಯರಿಂದ ಒಡಗೂಡಿ ವನವಾಸಕ್ಕೆ ತೆರಳಿದನು.


ಮಾರೀಚನೆಂಬ ರಾಕ್ಷಸನು ಮಾಯಾವಿದ್ಯೆಯಿಂದ ಸುವರ್ಣ ಜಿಂಕೆಯಾಗಿ ಸೀತೆಯ ಮುಂದೆ ಸುಳಿದಾಡಿದನು. ಆ ಜಿಂಕೆಯನ್ನು ತಂದು ಕೊಡುವಂತೆ ಶ್ರೀರಾಮನಲ್ಲಿ ಬೇಡಿಕೆ ಇಟ್ಟಳೇಕೆ?. ಅದನ್ನು ಈಡೇರಿಸಲು ಜಿಂಕೆಯ ಬೆನ್ನಟ್ಟಿ ಹೊರಟನೇಕೆ?. ಇದು ಮಾಯಾಜಿಂಕೆ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲವೇ? ರಾವಣನು ಸನ್ಯಾಸಿಯ ವೇಷವನ್ನೇ ಏಕೆ ಧರಿಸಿ ಬಂದ?

 

ಸೀತೆಯನ್ನು ಕರೆದುಕೊಂಡು ಬಂದ ನಂತರ ಶ್ರೀರಾಮಚಂದ್ರನೇ ಸೀತಾದೇವಿಯ ಚಾರಿತ್ರದ ಬಗ್ಗೆ ಅನುಮಾನಿಸಿ ಅಗ್ನಿ ಪ್ರವೇಶ ಮಾಡಲು ಸೂಚಿಸಿದನೇಕೆ? ಹೆಂಡತಿಯ ಚಾರಿತ್ರ್ಯದ ಮೇಲೆ ಅನುಮಾನವಿದ್ದರೆ ಇಷ್ಟೆಲ್ಲಾ ಕಷ್ಟ ಪಡಬೇಕಿತ್ತೇ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಮಧ್ವಾಚಾರ್ಯರು ಸೂಕ್ತವಾದ ಉತ್ತರಗಳನ್ನು ತಾತ್ಪರ್ಯ ನಿರ್ಣಯದಲ್ಲಿ ನೀಡಿದ್ದಾರೆ.


"ಮಮ ಮಾಯಾ ದುರತ್ಯಯ" ಎಂಬ ಪರಮಾತ್ಮನ ವಾಕ್ಯದಂತೆ ಅವನ ಮಾಯೆಯನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಅವನ ಮಾಯೆಯ ಮುಂದೆ ದೇಶತಃ ಕಾಲತಃ ಸಮಳಾದ ಸಾಕ್ಷಾತ್ ಲಕ್ಷ್ಮೀ ದೇವಿಯೂ ಅರಿಯಳು. ಕೇವಲ ದುಷ್ಟ ಶಿಕ್ಷಣಾರ್ಥ ಹಾಗೂ ಶಿಷ್ಟ ರಕ್ಷಣಾರ್ಥವಾಗಿ ಭಗವಂತ ನಮ್ಮೆಲ್ಲರಲ್ಲಿಯೂ ನಿಂತು ನಮ್ಮ ಯೋಗ್ಯತೆಯ ಅನುಸಾರ ಈ ರೀತಿ ಆಟವಾಡಿಸುತ್ತಾನೆ.


ರಾಮಾಯಣದ ಈ ಪ್ರಸಂಗದಲ್ಲಿ ವಿಶ್ವಾಮಿತ್ರರ ಯಾಗ ಧ್ವಂಸಕ್ಕೆಂದು ಹೋದಾಗ ಶ್ರೀರಾಮನ ಬಾಣದ ರುಚಿಯನ್ನು ಮಾರೀಚ ಅರಿತಿದ್ದ. ರಾಮನಿಂದಲೇ ತನ್ನ ಅಂತ್ಯವೆಂದೂ ತಿಳಿದಿದ್ದ. ಆದರೂ ಸಾಯುವಾಗ ಒಮ್ಮೆ ಗಂಡ ಹೆಂಡತಿಯನ್ನು ಅಗಲಿಸಿಯೇ ಸಾಯೋಣ, ರಾವಣನಿಗೆ ಇದರಿಂದ ಸ್ವಲ್ಪವಾದರೂ 

ಸೀತೆಯನ್ನು ಕದ್ದೊಯ್ಯಲು ಅವಕಾಶವಾಗುತ್ತದೆ ಎಂದು ಭ್ರಮಿಸಿ ಸುವರ್ಣಮಯವಾದ ಜಿಂಕೆಯ ರೂಪಧರಿಸಿ ಪಂಚವಟಿಯಲ್ಲಿರುವ ಸೀತೆಯ ಮುಂದೆ ಸುಳಿದಾಡಿದ. ದುಷ್ಠರು ತಮ್ಮ ಅಂತ್ಯಕಾಲದವರೆಗೂ ದುಷ್ಟ ಯೋಚನೆಯನ್ನೇ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ. 


ಸಮಯವರಿತು ರಾಣನು ಸೀತೆಯನ್ನು ಕದ್ದೊಯ್ಯಲು ಪಂಚವಟಿಗೆ ಬರುವುದರೊಳಗಾಗಿ, ಪಾತಾಳ ಲೋಕದೊಳಗಿದ್ದ ಅಗ್ನಿ ತನ್ನ ಲೋಕದೊಳಗಿದ್ದ ವೇದವತಿ ಎಂಬ ಕನ್ಯೆಯನ್ನು ಕರೆತಂದು ಅಲ್ಲಿ ಬಿಟ್ಟು ಅಲ್ಲಿರುವ ಸೀತಾಮಾತೆಯನ್ನು ಪಾತಾಳ ಲೋಕಕ್ಕೆ ಕರೆದೊಯ್ದು ಪೂಜಿಸುತ್ತಿರುತ್ತಾನೆ. ರಾವಣ ಹೊತ್ತೊಯ್ದದ್ದು ಮಾಯಾಸೀತೆಯನ್ನೇ ಹೊರತು ಮೂಲಸೀತೆಯನ್ನಲ್ಲ ಎಂದು ಕನಕದಾಸರು "ಮಾಯಾಸೀತೆಯ ಒಯ್ದನ ಶಿಕ್ಷಿಸಬೇಕು" ಎಂದು ಹಾಡಿದ್ದಾರೆ. ಸೀತಾಮಾತೆಗೂ ಈ ಎಲ್ಲಾ ವಿಷಯ ಗೊತ್ತಿದ್ದರೂ ಮುಂದೆ 28ನೇ ಕಲಿಯುಗದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣಾರ್ಥವಾಗಿ ನಡೆಸುವ ನಾಟಕದಲ್ಲಿ ಇದು ಪೀಠಿಕಾ ದೃಶ್ಶವಷ್ಟೆ!


ಇನ್ನು ರಾವಣ ಸನ್ಯಾಸಿವೇಷನ್ನೇ ಏಕೆ ಹಾಕಿಕೊಂಡು ಬಂದಾ ಎಂದರೆ ಆಸೆಯನ್ನು ಗೆದ್ದವರಿಗೆ ಸನ್ಯಾಸಿ ಎಂದು ಕರೆಯುತ್ತಾರೆ. ಅಂದರೆ ಅರಿಷರ್ಡ್ಗಗಳನ್ನು ಗೆದ್ದವರಿಂದ ನನ್ನ ಪ್ರಾಣ ಹಾಗೂ ಮಾನಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಸೀತೆಯನ್ನು ನಂಬಿಸಲು ಮಾಡಿದ ಉಪಾಯ. ಶ್ರೀರಾಮನ ವೇಷವನ್ನು ಹಾಕಿಕೊಂಡು ಬಂದೇ ಸೀತೆಗೆ ಮೋಸ ಮಾಡಬಹುದೇ? ಎಂದು ಮನದಲ್ಲಿ ಯೋಚಿಸಿದ ರಾವಣಗೆ ಛೇ! ನಾನು ಶ್ರೀರಾಮನ ವೇಷವನ್ನೇನಾದರೂ ಹಾಕಿಕೊಂಡುಹೋದರೆ ಆ ವೇಷದ ಪ್ರಭಾವದಿಂದ ಏಕಪತ್ನಿ ವ್ರತಸ್ಥನಾದ ಅನ ಬುದ್ಧಿಯೇ ಬರುತ್ತದೆ ಎಂದುಕೊಂಡು ಸನ್ಯಾಸಿ ವೇಷ ಧರಿಸಿ ಬಂದನಂತೆ. ಸಜ್ಜನರ ವೇಷ ಧರಿಸಿದರೂ ಆ ಜೀವಿಗೆ ಸದ್‌ಬುದ್ಧಿ ಬರುತ್ತದೆ. ಆದರೆ ನಂಬಿಸಿ ಮೋಸಮಾಡುವ ದುಷ್ಟ ಬುದ್ಧಿ ರಾವಣನಿಗೆ.


ಶ್ರೀರಾಮಚಂದ್ರನೇ ಸೀತೆಯ ಮೇಲೆ ಅನುಮಾನಿಸಿದನೇ? ಸರ್ವಥಾ ಇಲ್ಲ. ಏಕಪತ್ನಿ ವ್ರತಸ್ಥನಾದ ಶ್ರೀರಾಮಚಂದ್ರನು ಲಂಕೆಯಿಂದ ಕರೆತಂದ ವೇದವತಿಯನ್ನು  ಹೇಗೆ ಸ್ವೀಕರಿಸಿಯಾನು? ಅವಳನ್ನು ಅಗ್ನಿಯೊಂದಿಗೆ ಕಳುಹಿಸಿ ಪಾತಾಳ ಲೋಕದಲ್ಲಿ ಅಗ್ನಿಯಿಂದ ಪೂಜೆಗೊಳ್ಳುತ್ತಿದ್ದ ಸೀತಾಮಾತೆಯನ್ನು ಕರೆಸಿಕೊಳ್ಳಲೋಸುಗ ಮಾಡಿದ ಉಪಾಯವಷ್ಟೆ. ಮೇಲ್ನೋಟಕ್ಕೆ ತಪ್ಪಾಗಿ ಕಂಡರೂ ಆಂತರಿಕವಾಗಿ ಧರ್ಮಭೀರುವಾದ ಶ್ರೀರಾಮಚಂದ್ರನು ಮರ್ಯಾದಾ ಪುರುಷನಾಗಿ ನಡೆದ.        




- ಶ್ರೀಮತಿ ಮುತ್ತಿಗಿ ಉಷಾಬಾಯಿ


ಲೇಖಕರ ಸಂಕ್ಷಿಪ್ತ ಪರಿಚಯ:

ಶ್ರೀಮತಿ ಮುತ್ತಿಗಿ ಉಷಾಬಾಯಿಯವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆನುವಂಶಿಕ ಧರ್ಮದರ್ಶಿಗಳಾದ ಮುತ್ತಿಗಿ ಶ್ರೀ ಲಕ್ಷ್ಮೀನಾರಾಯಣಾ ಚಾರ್ಯರ ಧರ್ಮಪತ್ನಿ. ಇವರು ಕೂಡ್ಲಿಗಿ ತಾಲೂಕಿನ ಚಿಕ್ಕಹಳ್ಳಿಯಾದ ಬಡೇಲಡಕು ಗ್ರಾಮದ ಮಾನಕರಿ ಹುಲಿಕುಂಟಾಚಾರ್ಯರ ಮಗಳು. ದೇವರನಾಮಗಳ ರಚನೆ ನಿರಂತರ ಓದುವುದು ಇವರ ಹವ್ಯಾಸ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top