ಧರ್ಮಸ್ಥಳದಲ್ಲಿ 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Upayuktha
0

52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ


ಧರ್ಮಸ್ಥಳದಲ್ಲಿ ಬುಧವಾರ ನಡೆದ 52ನೆ ವರ್ಷದ ಉಚಿತ ವಿವಾಹ ಸಮಾರಂಭದಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮತ್ತು ಪತ್ನಿ ಶಾಂತಾ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಮಂಗಳಸೂತ್ರ ವಿತರಿಸಿದರು.


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಮದುವೆ ಮನೆಯ ಸಂಭ್ರಮ-ಸಡಗರ. ಸಂಜೆ ಗಂಟೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 39 ಜೊತೆ ಅಂತರ್ಜಾತಿಯ ವಿವಾಹ ಸೇರಿದಂತೆ ಒಟ್ಟು 123 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಬುಧವಾರ ಬೆಳಿಗ್ಯೆಯಿಂದಲೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು ವಿತರಿಸಿದರು.


ಸಂಜೆ 6 ಗಂಟೆಯಿಂದ ವಧೂ-ವರ ಜೋಡಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಹೋದರು. ಮುಹೂರ್ತಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹೆಗ್ಗಡೆ ದಂಪತಿ ಮತ್ತು ಚಲನಚಿತ್ರ ನಟ ದೊಡ್ಡಣ್ಣ ದಂಪತಿ ಮಂಗಳಸೂತ್ರ ವಿತರಿಸಿದರು. ಆಯಾ ಜಾತಿ-ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು. ಸಂಜೆ ಗಂಟೆ: 6.45ಕ್ಕೆ ಸರಿಯಾಗಿ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದಿಕೆಯಿಂದ ವೇದ-ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಳಸೂತ್ರ ಧಾರಣೆ ಮಾಡಿದರು.


ಗಣ್ಯರ ಹಿತವಚನ:

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು: ಚಲನಚಿತ್ರನಟ ದೊಡ್ಡಣ್ಣ


ತಾಯಿ-ತಂದೆ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿ ಸಮಾಜದ ಸಜ್ಜನರಾಗಿ, ಉತ್ತಮ ಚಾರಿತ್ರ್ಯವಂತರಾಗಿ ಮತ್ತು ಸಭ್ಯ-ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು. ತನ್ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದು ಚಲನಚಿತ್ರನಟ ದೊಡ್ಡಣ್ಣ ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.


ತಾಯಿ-ತಂದೆ ಮಾಡಿದ ದಾನ-ಧರ್ಮ, ಸತ್ಕಾರ್ಯದ ಪುಣ್ಯ ಅವರ ಮಕ್ಕಳಿಗೂ ಲಭಿಸುತ್ತದೆ. ಯಾವುದೇ ನೀತಿ, ಧರ್ಮ, ಸಂಸ್ಕಾರ ಕಲಿಯಲು ವಯಸ್ಸಿನ ಇತಿ-ಮಿತಿ ಇಲ್ಲ. ರಾಮಾಯ ಮತ್ತು ಮಹಾಭಾರತದಂತಹ ಪೌರಾಣಿಕ ಕೃತಿಗಳ ಅಧ್ಯಯನದೊಂದಿಗೆ ಸ್ವಾಧ್ಯಾಯ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ಸಂಚಾರಿದೂರವಾಣಿ ಕೊಂಡುಹೋಗಬಾರದು. ದೇವರ ಎದುರು ಕಣ್ಣು ಮುಚ್ಚಬಾರಾದು. ತೆರೆದ ಕಣ್ಣುಗಳಿಂದ ಏಕಾಗ್ರತೆಯೊಂದಿಗೆ ದೇವರ ದರ್ಶನ, ಧ್ಯಾನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.


ಪ್ರೀತಿ-ವಿಶ್ವಾಸ, ಪರೋಪಕಾರ ಸೇವಾಕಳಕಳಿ, ಸಾಮಾಜಿಕ ಬದ್ಧತೆ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ಸಾಮೂಹಿಕ ವಿವಾಹದಿಂದಾಗಿ ವರದಕ್ಷಿಣೆ ಪಿಡುಗು ಮತ್ತು ಮದುವೆಗಾಗುವ ದುಂದುವೆಚ್ಚ ಕಡಿಮೆಯಾಗಿದೆ. ನೂತನ ದಂಪತಿಗಳು ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು. ಮದುವೆಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಸಂಸ್ಕಾರಯುತ ಜೀವನ ನಡೆಸಬೇಕು. ಗ್ರಾಮೀಣ ಪ್ರದೇಶವನ್ನು ತ್ಯಜಿಸಿ ನಗರಕ್ಕೆ ವಲಸೆ ಹೋಗುವುದನ್ನು ತಡೆಯಬೇಕು ಎಂದು ಕಿವಿಮಾತು ಹೇಳಿದರು. 


ಸಾಮೂಹಿಕ ವಿವಾಹಕ್ಕೆ ಅನೇಕ ಮಂದಿ ದಾನಿಗಳು ಸೀರೆ, ಮಂಗಳಸೂತ್ರ ಹಾಗೂ ಹೂಮಾಲೆಯನ್ನು ಉದಾರವಾಗಿ ದಾನ ನೀಡಿದ್ದಾರೆ. ನಿರೀಕ್ಷೆಗಿಂತಲೂ ಮಿಗಿಲಾಗಿ ದಾನ ಹರಿದುಬರುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಂತಾ ದೊಡ್ಡಣ್ಣ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಹರ್ಷೇಂದ್ರಕುಮಾರ್ ಸ್ವಾಗತಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತು ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.


ನೂತನ ದಂಪತಿಗಳು ದೇವರ ದರ್ಶನ ಮಾಡಿ ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ಹೋದರು.


ಮುಖ್ಯಾಂಶಗಳು: 

  • ಮದುವೆಗಾಗುವ ದುಂದುವೆಚ್ಚ ಮತ್ತು ವರದಕ್ಷಿಣೆ ತಡೆಗಟ್ಟಲು 1972 ರಲ್ಲಿ 88 ಜೊತೆ ಮದುವೆಯೊಂದಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದರು.
  • ಪ್ರತಿವರ್ಷ ಎಪ್ರಿಲ್/ಮೇ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ.
  • ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಿ ಮದುವೆಯ ಎಲ್ಲಾ ವೆಚ್ಚವನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುತ್ತದೆ.
  • ಕಳೆದ ವರ್ಷದವರೆಗೆ 12,777 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
  • ದೇವರ ದರ್ಶನ ಮಾಡುವಾಗ ಕಣ್ಣುಮುಚ್ಚಬಾರದು : ದೊಡ್ಡಣ್ಣ
  • ಅಪಘಾತದಲ್ಲಿ ಕಾಲಿಗೆ ಪೆಟ್ಟಾದ ಗದಗದ ಪ್ರವೀಣ ಖನ್ನೂರು ಮತ್ತು ಕವಿತಾ ಗಿಡಕೆಂಚಣ್ಣವರ್ ಪರಸ್ಪರ ಪ್ರೀತಿಸಿ ಮದುವೆಗೆ ಒಪ್ಪಿದ್ದು ಅವರಿಗೆ 12,900ನೇ ಜೋಡಿ ಎಂಬ ವಿಶೇಷ ಮಾನ್ಯತೆಯೊಂದಿಗೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಯಿತು. 
  • ಸಾಂಪ್ರದಾಯಿಕ ಶೋಭಾನೆ ಹಾಡುಗಳು ಮದುವೆಗೆ ವಿಶೇಷ ಶೋಭೆ ನೀಡಿದವು. 
  • ಧರ್ಮಸ್ಥಳದ ವತಿಯಿಂದ ನೂತನ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಿ ಸತ್ಕರಿಸಲಾಯಿತು
  • ಧರ್ಮ, ಅರ್ಥ ಮತ್ತು ಕಾಮದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಚರರಾಗಿ, ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕ ಜೀವನ ನಡೆಸುವುದಾಗಿ ದಾಂಪತ್ಯ ದೀಕ್ಷೆಯನ್ನು ಸ್ವೀಕರಿಸಿದರು. 
  • ಅನೇಕ ಮಠ-ಮಂದಿರಗಳು ಹಾಗೂ ರೋಟರಿ ಕ್ಲಬ್ ನಂತಹ ಸೇವಾ ಸಂಸ್ಥೆಗಳು ಇದನ್ನು ಮಾದರಿ ಕಾರ್ಯಕ್ರಮ ಎಂದು ಮಾನ್ಯತೆ ನೀಡಿ ಅಲ್ಲಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ತನಗೆ ಸಂತೋಷ ನೀಡುತ್ತಿದೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
  • ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗೆ ವಿವಾಹ ನೋಂದಣಿ ಕಚೇರಿಯ ಅಧಿಕಾರಿಗಳು ಅಧಿಕೃತ ಪ್ರಮಾಣಪತ್ರ ನೀಡುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top