- ಈಶ್ವರ ದೈತೋಟ
ಸ್ವಂತ ಪತ್ರಿಕೆಗಳೆರಡರಲ್ಲೂ ಕಾರಂತರು ಆರ್ಥಿಕವಾಗಿ ಫಲಪ್ರದರೆನಿಸಿಕೊಳ್ಳದಿದ್ದರೂ ಅವರ ಪತ್ರಿಕೋದ್ಯಮ ಆಸಕ್ತಿ ಕಿಂಚಿತ್ತೂ ಕುಂದಲಿಲ್ಲ. ಇಂಗ್ಲಿಷ್ ನ ಹೆಸರಾಂತ ಪತ್ರಿಕೆ ಇಲಸ್ಟ್ರೇಟೆಡ್ ವೀಕ್ಲಿಯೂ ಸೇರಿದಂತೆ ನಾಡಿನ ಹಲವಾರು ಪತ್ರಿಕೆ ನಿಯತಕಾಲಿಕಗಳಿಗೆ ಅವರು ನಿರಂತರವಾಗಿ ಲೇಖನ ಬರೆಯತೊಡಗಿದರು. ಅಂತಿಮ ವರ್ಷಗಳಲ್ಲಿ ಅವರು ತರಂಗ ವಾರ ಪತ್ರಿಕೆಯಲ್ಲಿ ಬಾಲವನದಲ್ಲಿ ಕಾರಂತಜ್ಜನಾಗಿ ಮಕ್ಕಳ ಅಂಕಣದಲ್ಲಿ ನೂರಾರು ಮಕ್ಕಳ ಸಂದೇಹ ಕುತೂಹಲಕ್ಕೆ ಸಮಾಧಾನವೀಯುತ್ತಿದ್ದರು.
ಹಾಗೆ ನೋಡಿದರೆ ಆಡು ಮುಟ್ಟದ ಸೊಪ್ಪಿಲ್ಲವೆನ್ನುತ್ತಾರೆ, ಅದೆಷ್ಟು ನಿಜ! ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬುದೂ ಅಷ್ಟೇ ನಿಜ. ಆದರೆ ಅಡುಗೆಗೆ ಆಗದ ಆಡುಸೋಗೆಯಿರುವಂತೆ, ಕಾರಂತರಿಗಿಷ್ಟವಾಗದ ರಂಗವೆಂದರೆ ರಾಜಕೀಯವೆಂದು ನನ್ನ ಅನಿಸಿಕೆ.
ಸ್ವಾತಂತ್ರ್ಯ ಚಳವಳಿಯಲ್ಲವರು ಬಹಳ ತೀವ್ರವಾಗಿ ಧುಮುಕಿದ್ದರೂ, ಸ್ವತಂತ್ರಗೊಂಡ ಭಾರತದಲ್ಲವರು ರಾಜಕೀಯದಿಂದ ಬಹುಕಾಲ ದೂರವೇ ಇದ್ದರು. ಇದಕ್ಕೆ ಕಾರಣ, ರಾಜಕಾರಿಣಿಗಳ ಬಗ್ಗೆ ಅವರಿಗಿದ್ದ ಜಿಗುಪ್ಸೆಯೆಂದೇ ಹೇಳಬಹುದೇನೋ...
1946ರಲ್ಲಿ ಅವರು ಬರೆದ ಸಂಪಾದಕೀಯವೊಂದರಲ್ಲಿ ಅವರ ಮನಸ್ಸು ಹೀಗೆ ವ್ಯಕ್ತಗೊಳ್ಳುತ್ತದೆ. ''ರಾಜಕೀಯವಂತೂ ಎಲ್ಲರಿಗೂ ಸುಲಭವಾದ ವಸ್ತುವೆನಿಸಿಬಿಟ್ಟಿದೆ. ನಮ್ಮಲ್ಲಿ ಕಾಣಿಸುವ ರಾಜಕೀಯ, ಕೈಕಾಲು ಇಲ್ಲದ್ದು; ಇಂಕಿಲಾಬ್ ಜಿಂದಾಬಾದ್, ದೇಶಭಕ್ತಿ, ದೇಶಸೇವೆ, ಎಂಬ ಮಾತುಗಳನ್ನು ಮೆರೆಯಿಸಲು ಅವು. ಉಳಿದಂತೆ, ಇವು ರಾಜಕೀಯ ಸಂಕೇತಗಳು.
'After Independence, we are facing political leaders of all hues and spurious character! Freedom has brought into politics much more individual rivalry under many brands of political views. After knocking down 500 Rajas, we have installed ten times the number of climants who pretend to lead the country. Patriotism is now, a more risky job. It has become an unscrupulous profession too. Honest poeple who wish to serve the country cannot afford to stand as candidates for representing you and me. You and your party should be capable of investing crores to declare your 'wothiness for' representing 20% of ileterate and four times that number of 'deaf and dumb'. Hence, politics has turned out to be a very big business. Where necessary finance has to be picked out of the public pockets and offers. Its Possibility has enteed almost entrants to join the modern battle of Mahabharata! It is difficult to forecast the result as our Dharmarajas have lost status in public life and inumerable Shakunies are the an entrants to the game''.
ಇಷ್ಟೊಂದು ರೋಸಿ ಹೋಗಿದ್ದರೂ ಡಾ. ಶಿವರಾಮ ಕಾರಂತರು ಸಮಾಜದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಬಂದಾಗ ಮಾತ್ರ ಇತರರಂತೆ ರಾಜಕೀಯ ನಮ್ಮಂತಹ ಸಜ್ಜನರಿಗಿರುವುದಲ್ಲ ಎಂದು ಕೈಕಟ್ಟಿ ಕೂರಲಿಲ್ಲ, 1975-77ರ ತುರ್ತು ಪರಿಸ್ಥಿತಿಯನ್ನು ಬಹಿರಂಗವಾಗಿ ಟೀಕೆ ಮಾಡಲು ಹಿಂಜರಿಯಲಿಲ್ಲ. ಆ ಬಳಿಕ ತುರ್ತು ಪರಿಸ್ಥಿತಿಯ ರೂವಾರಿಯಾಗಿ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಹರಣಭ ಮಾಡಿದ ಶ್ರೀಮತಿ ಇಂದಿರಾಗಾಂಧಿಯವರು 77ರಲ್ಲಿ ಪಕ್ಷದೊಂದಿಗೇ ಸೋತು ಮರುವರ್ಷ ಚಿಕ್ಕಮಗಳೂರಿನಿಂದ ಮರು ಚುನಾವಣೆಗೆ ಸ್ಪರ್ಧಿಸಿದಾಗ ಕಾರಂತರು ನೇರವಾಗಿ ಖಂಡಿಸಿದರು.
ಆ ಬಳಿಕ ಇಳಿವಯಸ್ಸಿನಲ್ಲಿ ಪರಿಸರ ಚಳವಳಿಗೆ ಮಾರ್ಗದರ್ಶನ ಮಾಡತೊಡಗಿದಾಗ ಪರಿಸರದ ಕಾರಣಕ್ಕಾಗಿ ಮೊದಲ ಬಾರಿಗೆ ಕಾರವಾರದಿಂದ ಲೋಕಸಭಾ ಅಭ್ಯರ್ಥಿಯಾಗಲು ಒಪ್ಪಿಗೆ ಕೊಟ್ಟರು. ಚುನಾವಣಾ ಕಾಲದಲ್ಲಿ ಪೂರ್ವನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ ತೆರಳಿದ್ದರೂ ಅವರ ಹೆಸರಿಗಾಗಿ ಒಂದು ಲಕ್ಷ ಮತ ಚಲಾವಣೆಯಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ