"ಕರಿಯ ಕಂಬಳಿ ಗದ್ದುಗೆ ಮಾಡಿ ವೀರ ದೋಳ್ಳ ತಂದು ಇಳಿದಿದೇವೋ" ಎಂಬ ಪಂದ್ಯದ ಮೂಲಕ ಹಳ್ಳಿಯ ಹಬ್ಬ, ವಿಶೇಷತೆ, ಸಂಸ್ಕೃತಿ ಸೊಗಡನ್ನು ವಿವರಿಸುತ್ತ ಆರಂಭಗೊಳ್ಳುವ ಸಿನಿಮಾ ಕಥೆ ಪ್ರೇಕ್ಷಕರ ಕಣ್ಣಿಗೂ ಮನಸ್ಸಿಗೂ ಮೋಸ ಮಾಡುವುದು ಇಲ್ಲ. ಡಾ. ರಾಜಕುಮಾರ್ ನಟಿಸಿರುವ ಚಿತ್ರಗಳ ಪಟ್ಟಿ ತುಂಬಾ ದೊಡ್ಡದಿದೆ. ಕಟ್ಟುನಿಟ್ಟಾಗಿ ಒಂದೇ ಚಿತ್ರವನ್ನು ಆರಿಸಬೇಕು ಎಂದಾದರೆ ನನ್ನ ಆಯ್ಕೆ "ಬಂಗಾರದ ಪಂಜರ"
ನಾನು ಈ ಚಿತ್ರವನ್ನು ಏನಿಲ್ಲವೆಂದರೂ ಒಂದು ಹದಿನೈದು ಬಾರಿ ನೋಡಿರಬಹುದು. ಪ್ರತಿ ಬಾರಿ ಟಿವಿಯಲ್ಲಿ ಹಾಕಿದಾಗಲು ಜಾಹೀರಾತುಗಳನ್ನು ಬಿಡದೆ ಪೂರ್ತಿ ನೋಡಿ ಮುಗಿಸುತ್ತೇನೆ. ಚಿತ್ರದಲ್ಲಿ ಬಹುವಾಗಿ ಬರುವ ಅತಿರೇಕವೆನಿಸದ ಸಹಜ ಹಾಸ್ಯ ಸನ್ನಿವೇಶಗಳು ಪ್ರತಿ ಸಾರಿ ನೋಡಿದಾಗಲೂ ಹೊಸತೆಂಬಂತೆ ನಗಿಸಿ ಮನಸ್ಸನ್ನು ಹಗುರಾಗಿಸಿದರೆ ಒಳ್ಳೆಯ ಕಥೆ ಚಿತ್ರ ಹಾಸ್ಯಕ್ಕೆ ಸೀಮಿತವಾಗದಂತೆ ನೋಡಿಕೊಳ್ಳುತ್ತದೆ.
ಇನ್ನು ಕಥೆಯಲ್ಲಿ ನೋಡುವುದು ಆದರೆ ಇದೊಂದು ಗ್ರಾಮೀಣ ಹಿನ್ನಲೆಯುಳ್ಳ ಮುಗ್ದ ಕುರುಬನೊಬ್ಬನ ಕಥೆ.
ಹಳ್ಳಿ ಬಿಟ್ಟರೆ ಬೇರೆ ನಾಡಿಲ್ಲ, ಜೀವನಾಡಿಯಂತೆ ಇರುವ ಗೆಳತಿ, ಟಗರು ಹಾಗೂ ಕುರಿಗಳ ಹಿoಡು, ಸದಾ ಮುದ್ದು ಮಾಡುವ ತಂದೆ - ತಾಯಿ, ಹಳ್ಳಿ ಜೀವನ ಹಬ್ಬ ಹರಿದಿನ, ಊರಿನ ವಿರೇಶ್ವರ ಸ್ವಾಮಿ ಗುಡಿ, ಮೇಕೆ ಕುರಿಗಳನ್ನು ಮೇಯಿಸಿಕೊಂಡು ತನ್ನ ಪ್ರೀತಿಯ ಟಗರದ ಮೇಲಾರಿಯ ಜೊತೆ ಹಾಡು ಆಡಿಕೊಂಡು ಪ್ರತಿದಿನ ಪ್ರತಿಯೊಂದು ಹಳ್ಳಿಯ ಸೊಗಡನ್ನು ಆಚರಿಸುತ್ತ ಜೀವಿಸುತ್ತ ಇರುತ್ತಾನೆ ಹಾಗೂ ಇದಿಷ್ಟು ಅವನ ಪ್ರಪಂಚ. ಈ ಎಲ್ಲಾ ವೈಖರಿಗಳು, ಭಾಷವೈಷಿಷ್ಣತೆ ನೋಡುಗರ ಪಾಲಿಗೆ ಹಳ್ಳಿ ಜೇವನ ಚಿತ್ರಣವನ್ನು ಸಂಪೂರ್ಣವಾಗಿ ಕಣ್ಣ ಮುಂದೆ ಚಿತ್ರಿಸುತ್ತದೆ ಮತ್ತು ಚಿತ್ರಕ್ಕೆ ಹಾಗೂ ಚಿತ್ರದಲ್ಲಿ ಬರುವ ಪಾತ್ರಕ್ಕೆ ಇನ್ನಷ್ಟು ಹತ್ತಿರವಾಗಿತ್ತಾರೆ.
ಸಮಾಧಾನ ಗತಿಯಲ್ಲಿ ಖುಷಿಯಿಂದ ಸಾಗುತಿರುವ ಕಥೆಯಲ್ಲಿ ಏಕಾಏಕಿಯಾಗಿ ಆಗಮಿಸುವ ಬೀರನ ಹೆತ್ತ ತಂದೆ ತಾಯಿ ಅವನ ಇಷ್ಟಕ್ಕೆ ವಿರುದ್ಧವಾಗಿ ಪಟ್ಟಣಕ್ಕೆ ಕರೆದುಹೊಯ್ಯುತ್ತಾರೆ. ದೊಡ್ಡ ಬಂಗಲೆ ಆಳುಕಾಲುಗಳು, ಒಡಹುಟ್ಟಿದವರವು ಹೀಗೆ ಮುಂತಾದ ಸಂಬಂಧಗಳು ಏನೇ ದೊರಕಿದರು ಹಕ್ಕಿಯಂತೆ ಹರಾಡುತ್ತಿದ ಮುದ್ದು ಗಿಳಿಮರಿಯನ್ನು ಪಂಜರದಲ್ಲಿ ಹಾಕಿ ಇಟ್ಟಂತೆ ಬೀರನ ಪಾತ್ರ ಸಾಗುತ್ತದೆ. ಪಟ್ಟಣ ಜೀವನದ ರೀತಿ ರಿವಾಜುಗಳನ್ನು ಹೊಂದಿಕೊಳ್ಳಲು ಬಹಳ ಪ್ರಯಸಿದರೂ ಸಾಧ್ಯವಾಗದೆ ವಿಫಲಗೊಳ್ಳುತ್ತರೆ. ಕಾರಿನ ಹಿಂದೆ ಹಠ ಬಿಡದೆ ಓಡಿ ಬಂದ ತನ್ನ ನೆಚ್ಚಿನ ಕುರಿ ಮೈಲಾರಿ ಅವನಿಗೆ ಭಾವನಾತ್ಮಕ ವಾಗಿ ಆಸೆರೆಯಾಗುತ್ತದೆ.
ತನ್ನ ಸ್ವಂತ ಮನೆಗೆ ಮರಳಿದ ಬೀರ ಅಲ್ಲಿನ ಸಿಟಿ ಸಂಸ್ಕೃತಿಯನ್ನು ಕಲಿಯಲಾಗದೆ ಪಡಿಪಾಟಲುಗಳ ಸರಮಾಲೆಯನ್ನೇ ಎದುರಿಸಬೇಕಾಗಿ ಬರುತ್ತದೆ. ಮುಂಜಾನೆಯಾದರೆ ಸ್ನಾನಕ್ಕೆ ಹೊಳೆಯತ್ತ ಸಾಗುತ್ತಿದ ಬೀರ ನಗರ ಜೀವನದಲ್ಲಿ ಬಾತ್ ಟಬ್‌ನಲ್ಲಿ ಜಳಕ ಮಾಡುವ ಪರಿಸ್ಥಿತಿ, ಬೆಳಿಗ್ಗೆಯ ಬೆಡ್ ಕಾಫಿ, ಸೂಟ್ ಬೂಟು ತೊಡುಗೆಗಳು ಎಲ್ಲ ರಿವಾಜುಗಳನ್ನು ಪಾಲಿಸಲು ಬಂದಾಗ ಹಳ್ಳಿ ನೆನಪಾಗುವುದು ಪ್ರೇಕ್ಷಕರಲ್ಲಿಯೇ ಒಂದು ರೀತಿ ಗೊಂದಲ ಉಂಟು ಮಾಡುತ್ತದೆ. ಅಣ್ಣ ಅತ್ತಿಗೆ ನಡುವಿನ ಗೊಂದಲ, ಅಪ್ಪನ ಕಟ್ಟು ನಿಟ್ಟದ ನಿಯಮವಳಿಗಳು, ಅಮ್ಮನ ಅಲ್ಪ ಸ್ವಲ್ಪ ಮುದ್ದು ಇದೆಲ್ಲವೂ ಅವನನ್ನು ಬಂಗಾರದ ಪಂಜರದಲ್ಲಿ ಹಾಕಿಟಂತೆಯೇ ಭಾಸವಾಗುತ್ತದೆ.
ಚಿತ್ರದಲ್ಲಿ ಬರುವ ಪ್ರತಿ ಘಟನೆಯು ನಿಮನ್ನು ಕುರ್ಚಿ ತುದಿಯಲ್ಲಿ ಕುರಿಸುತ್ತದೆ. ಪಾರ್ಟಿಗೆ ಎಂದು ಕರೆದು ಕೊಂಡು ಹೋದಾಗ ರಾಜ್ ಅವರ ಕೊಂಗಾಟ, ಆಂಗ್ಲ ಹಾಡನ್ನು ಕೇಳಿ ಅವರ ಸಂಭಾಷಣೆ ನಿಜಕ್ಕೂ ಮಜಾ ಕೊಡುತ್ತದೆ. ಬೀರನ ಪಾತ್ರದಲ್ಲಿ ಕಂಡು ಬರುವ ರಾಜ್ ಅವರ ಪ್ರತಿ ಮಾತು ಕಚಗುಳಿ ನಗು ತರಿಸುತ್ತದೆ.
ಇನ್ನು ಕಥೆಯಲ್ಲಿ ಬರುವ ಬೀರನ ಪಾತ್ರಕ್ಕೆ ರಾಜ್ ರವರನ್ನು ಬಿಟ್ಟರೆ ಬೇರೆ ಯಾರ ಕೈ ಅಲ್ಲು ಅಷ್ಟು ನ್ಯಾಯವದಗಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಚಿತ್ರ ನಿಧಾನ ಗತಿ ಎಂದು ಕೊಂಡಲ್ಲಿ ಹಿರಿಯ ಪೋಷಕ ನಟ ಬಾಲಕೃಷ್ಣ ಅವರ ಅರ್ಥಮಯ ಮಾತುಗಳು ಮತ್ತೊಮ್ಮೆ ಕಣ್ಣು ತೆರೆಯುವಂತೆ ಮಾಡುತ್ತದೆ. ಹೆತ್ತ ತಾಯಿ ಪಂಡರಿಬಾಯಿ ಹಾಗೂ ಸಾಕು ತಾಯಿ ಎಂ ವಿ ರಾಜಮ್ಮ ರವರ ಅಭಿನಯ ನೈಜತೆಗೂ ಸವಾಲು ಎಸೆಯುತ್ತದೆ.
ಸಿನಿಮಾರ್ಧದಲ್ಲಿ ಆಗಮಿಸುವ ತನ್ನ ಸಾಕಿದ ಅಪ್ಪ-ಅಮ್ಮ ಮತ್ತು ಹೆತ್ತವರ ಮಧ್ಯೆ ಆಯ್ಕೆಯ ಪ್ರಶ್ನೆ ಬಂದಾಗ ಸಾಕಿದವರನ್ನೇ ಅಪ್ಪಿಕೊಳ್ಳುವ 'ಬೀರ'ನ ಪಾತ್ರ ನೈಜವಾಗಿ ಮೂಡಿಬಂದು ಎಲ್ಲರ ಕಣ್ಣು ಒದ್ದೆ ಮಾಡುತ್ತದೆ. 'ರಾಜ್ ಅಭಿನಯಕ್ಕೆ ಅವರೇ ಸಾಟಿ' ಎಂದು ಮತ್ತೆ ಮತ್ತೆ ಘೋಷಿಸುವಂತಾಗುತ್ತದೆ. ಎಷ್ಟೇ ವೈಭವೋಪೇತ ಜೀವನ ಇದ್ದರೂ, ಏನೇ ಮೃಷ್ಟಾನ್ನ ಭೋಜನ ತಂದು ಸುರಿದರೂ ತನ್ನ ಆಯ್ಕೆಯ ಸ್ವಾತಂತ್ರ್ಯ ಬಯಸುವ ಜೀವ ಬಂಗಾರದ ಪಂಜರದಲ್ಲಿ ಸಂತಸಪಡಲು ಸಾಧ್ಯವೇ!
ಚಿತ್ರದ ಕೊನೆಯಲ್ಲಿ ಹಿರಿಯ ನಟರಾದ ಬಾಲಕೃಷ್ಣ ಅವರು ಹೇಳುವ ಮಾತು ಬಹು ಮಾರ್ಮಿಕವಾಗಿದೆ 'ಮರಕ್ಕೆ ಹತ್ತಿದ ಬಳ್ಳಿ, ಮನಕ್ಕೆ ಹತ್ತಿದ ಜೀವ ಎರಡನ್ನೂ ಬೇರ್ಪಡಿಸುವುದು ಸಾಧ್ಯವೇ ಇಲ್ಲ. ಬೆಳೆದ ವಾತಾವರಣದಲ್ಲೇ ಸಂತೋಷ, ತೃಪ್ತಿ ಕಂಡುಕೊಂಡಿರುವಾಗ ಅದಕ್ಕೆ ತೊಂದರೆ ಕೊಡುವುದು ಬೇಡ' ಎಂಬ ಸಂಭಾಷಣೆಯ ನಿಜಕ್ಕೂ ಶ್ಲಾಘನೀಯ. ಈ ವಾಕ್ಯದ ಮೂಲಕ ಬೀರನಿಗೆ ಕೊನೆಗೂ ಪಂಜರದಿಂದ ಬಿಡುಗಡೆ ಸಿಗುತ್ತದೆ.
- ರಕ್ಷಿತ್ ಆರ್ ಪಿ
ಎಂಜಿಎಂ ಕಾಲೇಜು, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ