ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ಪುತ್ತೂರು: ವಿದ್ಯಾರ್ಥಿಗಳಲ್ಲಿ ವಿಪುಲವಾದ ಪ್ರತಿಭೆಗಳಿರುತ್ತದೆ.ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿರುತ್ತದೆ. ಜೊತೆಗೆ ಸ್ವಾಯತ್ತ ವಿದ್ಯಾಸಂಸ್ಥೆಗಳಿಗೆ ಇಂತಹ ಅವಕಾಶಗಳು ಹೇರಳವಾಗಿರುತ್ತದೆ. ಯುವಜನತೆ ಇಂದು ಶಿಕ್ಷಣದತ್ತ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಏನೇ ಅಡೆತಡೆ ಬಂದರೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಂದುವರೆಯಬೇಕು.ಆತ್ಮವಿಶ್ವಾಸ ಒಂದೇ ಯಶಸ್ಸಿನ ಗುಟ್ಟು ಹಾಗೂ ನಮ್ಮ ಜೀವನದ ಯಶಸ್ಸಿಗೆ ಕಾರಣಕರ್ತರಾದವರನ್ನು ನಾವು ಎಂದಿಗೂ ಮರೆಯಬಾರದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಇನ್ನೊರ್ವ ಮುಖ್ಯ ಅತಿಥಿ ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, ನಮ್ಮಲ್ಲಿ ಎಲ್ಲಾ ಆಸ್ತಿಗಿಂತಲೂ ಮಿಗಿಲಾದುದು ಹೃದಯ ಶ್ರೀಮಂತಿಕೆ. ಕಷ್ಟದಲ್ಲಿರುವವರನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ನಾವು ಎಂದಿಗೂ ಕಲಿಸಿದ ಗುರುಗಳು ಹಾಗೂ ಕಲಿತ ಕಾಲೇಜನ್ನು ಎಂದಿಗೂ ಮರೆಯಬಾರದು.ವಿವೇಕಾನಂದ ವಿದ್ಯಾಸಂಸ್ಥೆ ನಮ್ಮ ಜಿಲ್ಲೆಗೆ ಆದರ್ಶ ಸಂಸ್ಥೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆಗೈದು ಮುಂದಿನ ದಿನಗಳಲ್ಲಿ ಸಂಸ್ಕಾರಯುತ ಸತ್ಪ್ರಜೆಗಳಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಭಾರತವು ಹೆಚ್ಚಿನ ಯುವ ಜನತೆಯನ್ನು ಹೊಂದಿದ ದೇಶವಾಗಿದೆ. ನಮ್ಮ ದೇಶ ಉತ್ತಮ ಪ್ರಗತಿ ಸಾಧಿಸಬೇಕಾದರೆ ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮುಖ್ಯ .ವಿದ್ಯಾರ್ಥಿಗಳು ಕೇವಲ ಸೀಮಿತ ಚೌಕಟ್ಟುಗಳಲ್ಲಿ ತಮ್ಮನ್ನು ಬಿಂಬಿಸಿಕೊಳ್ಳದೇ ವಿದ್ಯಾಭ್ಯಾಸದ ಜೊತೆಗೆ ಇತರೆ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿಕೃಷ್ಣ ಕೆ ಎನ್ ಶುಭ ನುಡಿದರು.
ಈ ಸಂದರ್ಭದಲ್ಲಿ ಕ್ರೀಡೆ, ಎನ್ ಸಿಸಿ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ದತ್ತಿನಿಧಿ ಬಹುಮಾನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸದಸ್ಯರುಗಳಾದ ಶಂಕರ ಜೋಯಿಸ, ಶೋಭಾ ಕೊಳತ್ತಾಯ ಎನ್, ಎಂ.ಅನಂತಕೃಷ್ಣ ನಾಯಕ್, ಸುಕುಮಾರ್ ಕೊಡಿಪ್ಪಾಡಿ, ವಿಶೇಷ ಆಡಳಿತಧಿಕಾರಿ ಡಾ. ಶ್ರೀಧರ ನಾಯ್ಕ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕ ಹಾಗೂ ವಿಜ್ಞಾನ ವಿಭಾಗದ ಡೀನ್ ಶಿವಪ್ರಸಾದ್ ಕೆ. ಎಸ್ ಸ್ವಾಗತಿಸಿ, ಹಿಂದಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾವಿಭಾಗದ ಡೀನ್ ಡಾ.ದುರ್ಗಾರತ್ನ ಸಿ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ ಹಾಗೂಸ್ನಾತಕೋತ್ತರ ವಿಭಾಗದ ರಸಾಯನ ವಿಭಾಗದ ಉಪನ್ಯಾಸಕಿ ಸ್ಮಿತಾ ರೈ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜಿನ ಪದವಿ ವಿಭಾಗದ ಪತ್ರಿಕೋದ್ಯಮ ವಿದ್ಯಾರ್ಥಿಗಳ ವಿಕಸನ ಎನ್ನುವ ಪ್ರಾಯೋಗಿಕ ಪತ್ರಿಕೆಯನ್ನು ಬಲರಾಮ ಆಚಾರ್ಯ ಬಿಡುಗಡೆಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ