ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಬಹುಮುಖ ಪ್ರತಿಭೆ. ಶಿಕ್ಷಕಿಯಾಗಿ, ಪತ್ರಕರ್ತೆಯಾಗಿ, ಕಾರ್ಯ ನಿರ್ವಹಿಸುತ್ತಲೇ ಸಾಮಾಜಿಕ ಕಾರ್ಯಗಳಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ನಿರೂಪಕಿ ಯಾಗಿಯೂ, ಲೇಖಕಿಯಾಗಿಯೂ, ಕವಿಯಿತ್ರಿಯಾಗಿಯೂ ತಮ್ಮನ್ನು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೊಂದ ಮಹಿಳೆಯರ ಪರವಾಗಿ ಹೋರಾಟವನ್ನು ಮಾಡುತ್ತಿರುತ್ತಾರೆ. "ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ" ಎಂಬ ತಮ್ಮದೇ ಆದ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿಕೊಂಡು ಎಲ್ಲರಿಗೂ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಹಲವಾರು ಸಂಘ-ಸಂಸ್ಥೆಗಳಲ್ಲಿ ಜಿಲ್ಲಾಧ್ಯಕ್ಷರಾಗಿ ರಾಜ್ಯಮಟ್ಟದಲ್ಲಿ ಪದಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಸರ್ವತೋಮುಖ ಪ್ರತಿಭೆಗಾಗಿ ಸಾಕಷ್ಟು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರು ಒಳ್ಳೆಯ ಸಂಘಟಕಿಯೂ ಹೌದು. ಇದು ಇವರ ಚೊಚ್ಚಲ ಕವನ ಸಂಕಲನ. ಇಲ್ಲಿ ನೂರಕ್ಕೂ ಹೆಚ್ಚು ಕವನಗಳಿವೆ. ಎಲ್ಲವೂ ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು. ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕವಿತ್ರಿಯು, ಲೇಖನದ ಮುಖಾಂತರ ಕವಿತೆಗಳ ಮುಖಾಂತರ ತಮ್ಮದೇ ಆದ ಓದುಗರ ಬಳಗವನ್ನು ಸೃಷ್ಟಿಸಿದ್ದು ಎಲ್ಲೆಡೆಯು ಚಿರಪರಿಚಿತರಾಗಿದ್ದಾರೆ. ಹತ್ತಾರು ವಿಷಯಗಳ ಮೂಲಕ ತಮ್ಮ ಮನದೊಳಗಿನ ಭಾವಗಳನ್ನು ಹೊರಹಾಕಿದ್ದಾರೆ. "ನೀಲ ಪ್ರತಿಮಾನ ಮಂಜು" ಕವನ ಸಂಕಲನವು 2024 ರ ಆವೃತ್ತಿಯಾಗಿದ್ದು. ಎಲ್ಲಾ ಕವನಗಳು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಬೆಲೆಯೂ 120 ಆಗಿದ್ದು. 60 ಪುಟಗಳನ್ನು ಒಳಗೊಂಡಿದೆ. ಇವರ ಕವನಗಳ ಶೀರ್ಷಿಕೆಗಳೇ ಓದುಗರಲ್ಲಿ ಕುತೂಹಲ ಮೂಡಿಸುತ್ತವೆ. "ಮೌನ ಮಾತಾಗಿ" ಎಂಬ ಕವನದಲ್ಲಿ
"ಮೌನದೊಂದಿಗೆ ಮಿಳಿತವಾಗಿ
ಬಂದು ತಾಕುವ ಅಳುದನಿಗೆ
ಕಂಗಳು ಕೊಳವಾಗದೇನು
ಅದು ಅಳುವಲ್ಲ ಗಾಳಿಯ
ಜೈಂಕಾರ ಎನ್ನದಿರು"... ಎಂಬ ಸಾಲುಗಳು ಮನಮುಟ್ಟುವಂತಿವೆ. ಏಕೆಂದರೆ ನಾವು ಮೌನದ ಹಲವಾರು ಪರಿಯನ್ನು ತಿಳಿಸಿರುವುದಲ್ಲ ನೋಡಬಹುದು.
ಮೌನದ ಆಳ, ಅಗಲ, ವಿಸ್ತರಿಸುತ್ತ ಅದರ ಶಕ್ತಿ ಎಷ್ಟು ಅಗಾಧ ಎಂದು ಹೇಳುತ್ತಾರೆ. "ಮಡಿಲಲ್ಲಿ ಮಗುವಾಗಿ ನೀನು" ಎಂಬ ಕವನದಲ್ಲಿ ಕಂದನ ಬಗೆಗಿನ ಮಮತೆಯನ್ನೂ, ತಾಯ್ತನದ ಸಾರ್ಥಕತೆಯನ್ನೂ ಕಣ್ಮುಂದೆ ತರುತ್ತಾರೆ. ಮಗಳ ಬಗೆಗಿನ ಪ್ರೀತಿಯನ್ನೂ ಮತ್ತೊಂದು ಕವನದಲ್ಲಿ ಹಂಚಿಕೊಂಡಿದ್ದಾರೆ. ಜೀವನದ ರಹಸ್ಯ ವಿಷಯಗಳನ್ನು, ನೋವುಗಳನ್ನು ಇತರರೊಡನೆ ಹಂಚಿಕೊಳ್ಳದೆ ಅಂತರ್ಮುಖಿ ಆಗಿರುತ್ತ ಎಲ್ಲರೊಡನೆ ಸೌಹಾರ್ದಯುತವಾಗಿ ಬಾಳೋಣ ಎಂದು ಹೇಳುತ್ತಾರೆ. ಏಳಿಗೆ ಹೊಂದುತ್ತಾ ಮುಂದೆ ನಡೆಯುವವರ ಬಗ್ಗೆ, ಅಸೂಯೆ ಪಡುವವರ, ಹಿಂದೆಳೆಯುವವರ ಬಗ್ಗೆ ತಮ್ಮ ಅಸಮಾಧಾನವನ್ನು ಕವನವೊಂದರಲ್ಲಿ ನಿರ್ಭಿಡೆಯಿಂದ ಹೇಳಿದ್ದಾರೆ. ದೈವಬಲವಿದ್ದರೆ, ಪ್ರತಿಭೆಯಿದ್ದರೆ ಏಳಿಗೆಯ ದಾರಿಯಲ್ಲಿ ಯಾರೂ ಅಡ್ಡಿಯಾಗಲಾರರು ಎಂದು ವಿಶ್ವಾಸವನ್ನು ತೋರಿದ್ದಾರೆ. ಗ್ರಾಮದೇವತೆ, ಕಾಳಿಕಾಂಬ, ಹಾಸನಾಂಬ ದೇವಿಯರ ಬಗ್ಗೆಯೂ ಕವನಗಳನ್ನು ಬರೆದು ತಮ್ಮ ಭಕ್ತಿಯನ್ನೂ ಮೆರೆದಿದ್ದಾರೆ.
"ಇತರರನ್ನು ಮೆಚ್ಚಿಸಲಿಕ್ಕಲ್ಲ, ನಮ್ಮ ಸಂತೋಷಕ್ಕಾಗಿ ಬರೆಯಬೇಕು" ಎಂಬುದನ್ನು "ಲೇಖನಿ"ಯ ಮೂಲಕ ಹೇಳಿಸಿರುವುದು ಸುಂದರವಾದ ಕಲ್ಪನೆ. ಪ್ರಕೃತಿಯ ಬಗ್ಗೆ ಲೇಖಕಿಗಿರುವ ಪ್ರೀತಿಯೂ ಎರಡು ಕವನಗಳಲ್ಲಿ ವ್ಯಕ್ತವಾಗಿವೆ.
ಪ್ರಕೃತಿಯ ಜೊತೆಗಿದ್ದರೆ ಮನಸ್ಸಿಗೆ ಶಾಂತಿ ದೊರೆಯುವುದು, ಬೇರೇನೂ ಬೇಕಿಲ್ಲ ಎಂದು ನಿಸರ್ಗದ ರಮಣೀಯತೆಯನ್ನು
ವರ್ಣಿಸುತ್ತಾ,
ಪ್ರಕೃತಿ ನೀ ಜೊತೆಗೆ ಇರಲು ಎಂಬ ಕವನವು ಅದ್ಭುತವಾದ ಮನ ಮುಟ್ಟುವ ಸಾಲುಗಳಾಗಿವೆ.
"ಅಂದು ಇಂದು ಎಂದೆಂದು ನೀ ಇರದೇ
ಬದುಕು ಸಾಧಿಸಲು ಆಗುವುದೇ
ಜುಳು ಜುಳು ನಾದದ ನೀರು ನೋಡು
ಹರಿಯುತಿರಲು ನೋಡಲು ಮೂಡುವುದು ಹಾಡು" ಎಂಬುದು ಅದ್ಭುತವಾದಂತಹ ಮನಮುಟ್ಟುವ ಸಾಲುಗಳಾಗಿವೆ.
ಪ್ರಕೃತಿ ಮಾತೆಯನ್ನು ವಿಕೋಪ ತೋರದಿರಿ. ಅದು ಮನುಕುಲಕ್ಕೇ ವಿನಾಶ ಎಂದು ಕವನವೊಂದರಲ್ಲಿ ಕೋರಿದ್ದಾರೆ. ಮತ್ತೊಂದು ಕವನದಲ್ಲಿ ನೋವುಗಳಾದಾಗಲೇ ಸಂತೋಷದ ಬೆಲೆ ತಿಳಿಯುವುದು ಎಂಬ ಸುಂದರ ತತ್ವವನ್ನು ಹೇಳಿದ್ದಾರೆ. ವರುಣನ ಆರ್ಭಟದಿಂದಾಗುವ ತೊಡಕುಗಳನ್ನು ವಿವರಿಸುತ್ತ, ಅತಿವೃಷ್ಟಿ ಅನಾವೃಷ್ಟಿಗಳು ಬೇಡ ಎಂದು ವರುಣನನ್ನು ಪ್ರಾರ್ಥಿಸಿದ್ದಾರೆ. ಈ ಕವನ ಸಂಕಲನದ ಶೀರ್ಷಿಕೆಯಲ್ಲಿ ಒಂದು ಕವನವನ್ನ ರಚಿಸಿದ್ದು. ಬಹಳಷ್ಟು ಅರ್ಥಪೂರ್ಣವಾಗಿದೆ.
"ನಿನ್ನಿಂದ ನನ್ನಿಂದ ಎನ್ನದಿರು ಎಲ್ಲಿಯೂ
ಸಾಗುತಿರು ಶಾಂತಿಯ ಸಾಗರದಲಿ
ಫಲವಿದೆ ಸಹಿಸುತ ನಡೆಯೆ ತಾಳ್ಮೆಯಲಿ
ನೀಲ ಪ್ರತಿಮಾನ ಮಂಜುವಿನ ರೀತಿಯಲಿ"...
ಕವಿತ್ರಿಯು ಈ ಮೇಲಿನ ಸಾಲುಗಳಲ್ಲಿ ಬಹಳ ಅರ್ಥವನ್ನು ತುಂಬಿದ್ದಾರೆ. ಒಂದು ಕುಟುಂಬದಲ್ಲಿ ಯಾರಿಂದ ಏನು ಇಲ್ಲ. ಎಲ್ಲರಿಂದಲೂ ಸಂಸಾರ ಎಂಬುದು ನಡೆಯಬೇಕು. ಶಾಂತಿಯಿಂದ ನಡೆಯಬೇಕು, ತಾಳ್ಮೆ ಬೇಕು, ಅವರ ಅರ್ಥ ನೀಲಾಕಾಶದಲ್ಲಿ ಪ್ರತಿಬಿಂಬ ಮೂಡುವ ರೀತಿ, ಮಂಜು ಹನಿಗಳು ಬಿದ್ದಾಗ ಎಲ್ಲರೂ ಸಂತಸ ಪಡುವ ರೀತಿಯಲ್ಲಿ ಸಂಸಾರ ಹೋಗುತ್ತಿರಬೇಕು ಎಂಬುದು ಕವಿಯಿತ್ರಿಯ ಆಶಯವಾಗಿದೆ.
ಸೋದರ ವಾತ್ಸಲ್ಯ, ಮಗುವಿನ ಮಮತೆ, ಸ್ತ್ರೀಯ ವಿಶೇಷತೆ, ಕನ್ನಡದ ಹಿರಿಮೆ, ಪುನೀತ್ ರಾಜ್‌ಕುಮಾರ್, ಲೀಲಾವತಿ ಅಮ್ಮ ಅವರುಗಳಿಗೆ ಶ್ರದ್ಧಾಂಜಲಿ, ಇಂಥವುಗಳ ಬಗ್ಗೆಯೂ ಲೇಖಕಿ ಗಮನ ಹರಿಸಿ ಸುಂದರ ಕವನಗಳನ್ನು ಬರೆದಿದ್ದಾರೆ. ಎಲ್ಲ ಮನುಷ್ಯರ ದೇಹದಲ್ಲಿ ಹರಿಯುವ ರಕ್ತ ಒಂದೇ ಬಣ್ಣ. ಜಾತಿ, ಧರ್ಮಗಳ ಬಗ್ಗೆ ಭೇದ ಮಾಡುವುದು ಬೇಡ ಎಂಬ ತತ್ವವನ್ನೂ ಹೇಳಿದ್ದಾರೆ. ತನ್ನ ತಂದೆಯ ಬಗ್ಗೆ ಅಭಿಮಾನ ತೋರಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಜೆಗಳಿಗೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸಬೇಕೆಂದೂ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದೂ, ನಂಬಿ ಗೆಲ್ಲಿಸಿದ ಪ್ರಜೆಗಳಿಗೆ ವಿಶ್ವಾಸದ್ರೋಹ ಮಾಡಬಾರದೆಂದು ಕವನವೊಂದರಲ್ಲಿ ಹೇಳುತ್ತಾ, ಸರ್ಕಾರ ಮಾಡಬೇಕಾದ ಕೆಲಸಗಳನ್ನೂ ನೆನಪಿಸಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಉಂಟಾಗುವ ಗೊಂದಲದ ಬಗ್ಗೆಯೂ ಕವನವಿದೆ. ಇವರ ಕವನಗಳಲ್ಲಿ ಸಾಮಾಜಿಕ ಜೀವನದ ಬಗ್ಗೆ ಲೇಖಕಿಗಿರುವ ಕಳಕಳಿಯನ್ನು ಕಾಣಬಹುದು. ದೇವರ ಬಗ್ಗೆ ಒಂದು ಕವನ "ನಮ್ಮೂರ ಗ್ರಾಮ ದೇವತೆ" ಬಗ್ಗೆಯೂ ಬರೆದಿದ್ದಾರೆ. ಎಲ್ಲ ವಿಷಯ ವಸ್ತುಗಳ ಬಗ್ಗೆ ಆಶಯವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಪ್ರತಿಮಾ ಅವರು ನಿಜಜೀವನದಲ್ಲಿ ಇರುವಂತೆಯೇ ಬರವಣಿಗೆಯಲ್ಲೂ ದಿಟ್ಟತನವನ್ನು ತೋರಿದ್ದಾರೆ. ಯಾವುದೇ ಕಟ್ಟುಪಾಡಿಗೂ ಒಳಪಡದ ಬರವಣಿಗೆ ಇವರದು. ಮನಸ್ಸಿನ ಒಳತೋಟಿಗಳನ್ನು ನಿರ್ಭಿಡೆಯಿಂದ ದಾಖಲಿಸಿದ್ದಾರೆ. ಸಾಮಾಜಿಕ ಅನ್ಯಾಯಗಳನ್ನು ವಿರೋಧಿಸುವ ಹಲವು ಕವನಗಳು ಇಲ್ಲಿವೆ.. "ನೀಲ ಪ್ರತಿಮಾನ ಮಂಜು" ಹೆಸರಿನ ಈ ಕೃತಿ ಹೆಚ್. ಎಸ್. ಪ್ರತಿಮಾ ರವರ ಕವನ ಸಂಕಲನ. ಇವರು ಇಲ್ಲಿ ಆಯ್ದುಕೊಂಡಿರುವ ವಿಷಯಗಳು ಸಮಾಜದ ಓರೆಕೋರೆಗಳು, ಕೌಟುಂಬಿಕ ಸಂಬಂಧಗಳು, ನಿಸರ್ಗ ಇಂಥವು ಹೆಚ್ಚಿವೆ. ಪ್ರಸಕ್ತ ವಿಷಯಗಳ ಬಗ್ಗೆಯೂ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಒಳ್ಳೆಯ ಕವಯಿತ್ರಿಯಾಗಿರುವ ಲಕ್ಷಣ. ಇವರ ಸಾಹಿತ್ಯಸೇವೆ ನಿರಂತರವಾಗಿ ಸಾಗಲಿ, ಇವರು ಕಾಲಿಟ್ಟಿರುವ ಎಲ್ಲ ಕ್ಷೇತ್ರಗಳಲ್ಲೂ ಎತ್ತರೋತ್ತರ ಅಭಿವೃದ್ಧಿಯಾಗಲಿ, ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಪ್ರತಿಮಾ ಹಾಸನ್ ರವರನ್ನು ಅರಸಿ ಬರಲಿ ಎಂದು ಹಾರೈಸುತ್ತೇನೆ. ಈ ಪುಸ್ತಕವು ಜೂನ್ ತಿಂಗಳಿನಲ್ಲಿ ಅಕ್ಷರನಾದ ಪ್ರಕಾಶನದಿಂದ 30 ಕೃತಿಗಳ ಅನಾವರಣದ ಜೊತೆಗೆ ಬಿಡುಗಡೆಯಾಗಲಿದೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ.
- ಮಾಲತಿ ಮೇಲ್ಕೋಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ