Nature is our best teacher ಅನ್ನೋದು ವಿಚಾರವಂತರ ಮಾತು. ಅಂದರೆ ನಿಸರ್ಗ ಅಥವಾ ಪ್ರಕೃತಿಯೇ ನಮ್ಮ ಅತ್ಯುತ್ತಮ ಶಿಕ್ಷಕ, ಹೌದು, ಯಾವಾಗೆಲ್ಲಾ ನಮ್ಮ ಅಂದರೆ ಮನುಷ್ಯನ ವರ್ತನೆ ನಿಸರ್ಗದ ಮೇಲೆ ಮಿತಿಮೀರುತ್ತದೆಯೋ, ಆವಾಗೆಲ್ಲ ನಿಸರ್ಗವು ಪಾಠ ಕಲಿಸುತ್ತಲೇ ಬಂದಿದೆ. ಇದು ಮನುಷ್ಯನಿಗೆ ತಿಳಿಯದ ವಿಚಾರವೇನೂ ಅಲ್ಲ. ಆದರೂ ಮಿತಿಮೀರಿದ ಅಹಂಭಾವದಿಂದ ಒಂದಲ್ಲಾ ಒಂದು ರೂಪದಲ್ಲಿ ನಿಸರ್ಗದ ಮೇಲೆ ಅಟ್ಟಹಾಸ ಮೆರೆಯುತ್ತಾ ಬಂದಿದ್ದಾನೆ. ನಿಸರ್ಗವನ್ನು ಯಾರೂ ಮೀರಬಾರದು ಎಂಬ ನಿಯಮವೊಂದಿದೆ. ಅದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಒಂದುವೇಳೆ ಒಪ್ಪಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ನಿಸರ್ಗವೇ ಒಪ್ಪಿಸುತ್ತದೆ.
ನಾವು ಅಂದರೆ ಈ ಭೂಮಿಯ ಮೇಲಿನ ಎಲ್ಲರೂ ಮತ್ತು ಎಲ್ಲವೂ ನಿಸರ್ಗ ಮಾತೆಯ ಮಡಿಲಲ್ಲಿ ಸುರಕ್ಷಿತವಾಗಿದ್ದೇವೆ. ನಿಸರ್ಗವು ನಮ್ಮ ಮನಸ್ಸನ್ನು ರೂಪಿಸುತ್ತದೆ ಹಾಗೂ ನಮ್ಮ ಆಲೋಚನಾ ಮಾರ್ಗವನ್ನು ವಿಶಾಲಗೊಳಿಸುತ್ತ ದೆ. ಆಕಾಶವು ನಿಸರ್ಗದ ಒಂದು ಭಾಗವಾಗಿದ್ದು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಎಲ್ಲವನ್ನು ಒಳಗೊಂಡಿದೆ. ಹಿಮದಿಂದ ಆವೃತವಾದ ಬೆಟ್ಟಗುಡ್ಡಗಳು, ಹರಿಯುವ ನದಿ ತೊರೆಗಳು, ಕೆರೆ ಸರೋವರಗಳು ನಿಸರ್ಗದ ಮತ್ತೊಂದು ಭಾಗವಾಗಿದೆ. ಬೀಜದಿಂದ ಮೊಳಕೆಯೊಡೆಯುವ ಕುಡಿಗಳು, ಮೊಗ್ಗುಗಳು, ಹೂವುಗಳು, ಹೀಚುಗಳು, ಕಾಯಿಗಳು, ಹಣ್ಣುಗಳು ಇತ್ಯಾದಿಗಳು ನಿಸರ್ಗದ ಅತ್ಯಮೂಲ್ಯ ಕೊಡುಗೆಗಳಾಗಿವೆ. ನೀರು, ಗಾಳಿ, ಬೆಳಕು, ಶಾಖ ಇವು ನಿಸರ್ಗವು ಜೀವಿಸಂಕುಲಕ್ಕೆ ನೀಡಿದ ಅತ್ಯುತ್ಕೃಷ್ಟ ವರದಾನಗಳಾಗಿವೆ. ನಮ್ಮ ದಿನನಿತ್ಯದ ಊಟ, ತೊಡುವ ವಸ್ತ್ರ , ವಾಸದ ಮನೆ ಎಲ್ಲವನ್ನೂ ನಾವು ನಿಸರ್ಗದ ಮೂಲಕವೇ ಪಡೆದಿದ್ದೇವೆ. ಈ ಅದ್ಭುತ ಉಡುಗೊರೆಗಳ ಭವ್ಯವಾದ ಮತ್ತು ಆಕರ್ಷಣೀಯವಾದ ವರದಾನವು ನಮಗೆ ಸಂತೋಷದ ಜೊತೆ ರೋಮಾಂಚನವನ್ನು ನೀಡುತ್ತದೆ. ನಿಸರ್ಗದ ಎಲ್ಲಾ ಕೊಡುಗೆಗಳು ನಮ್ಮ ಮನಸ್ಸಿಗೆ ಸಮಾಧಾನ, ನೆಮ್ಮದಿ ನೀಡುತ್ತವೆ.
ವಸಂತಕಾಲದಲ್ಲಿ ನಿಸರ್ಗವು ಅತ್ಯುತ್ತಮವಾಗಿ ರುತ್ತದೆ. ವಿವಿಧ ಬಣ್ಣಗಳಿಂದ ಅರಳುವ ಹೂವುಗಳು ಸುಗಂಧದಿಂದ ಗಾಳಿಯನ್ನು ತುಂಬಿ ಪರಿಮಳ ನೀಡುತ್ತವೆ. ಶರತ್ಕಾಲವು ಮಾನವನ ಮನಸ್ಸಿನ ಮೇಲೆ ತನ್ನದೇ ಆದ ಮೋಡಿ ಮಾಡಿದೆ. ತಂಪಾದ ಗಾಳಿಯು ಎಲೆಗಳ ಮೂಲಕ ಹರಿಯುವಾಗ ಸಂಗೀತವನ್ನು ಉಂಟುಮಾಡುತ್ತದೆ. ಚುಮು ಚುಮು ಚಳಿಗಾಲವು ಆಕರ್ಷಣೀಯವಾಗಿರು ತ್ತದೆ. ಹಿಮವು ನೋಡುಗರ ಕಣ್ಮನ ಸೆಳೆಯುತ್ತದೆ. ಬೀಸುವ ಗಾಳಿ, ತೇಲುವ ಮೋಡಗಳು, ಕಾಮನಬಿಲ್ಲು, ಜಲಪಾತಗಳು, ಎಲ್ಲವೂ ನಮಗೆ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸುತ್ತದೆ. ಆದ್ದರಿಂದಲೇ ವಿವಿಧ ಕವಿವರ್ಯರು ವಿಭಿನ್ನ ಹಾಗೂ ವಿಶಿಷ್ಠ ರೀತಿಯಲ್ಲಿ ತಮ್ಮ ಕಾವ್ಯಗಳಲ್ಲಿ ಈ ವಸ್ತುಗಳ ಸೌಂದರ್ಯವನ್ನು ಕೊಂಡಾಡಿ ಮತ್ತು ಆರಾಧಿಸಿದ್ದಾರೆ. ನಿಸರ್ಗದಲ್ಲಿ ಲಭ್ಯವಿರುವ ಎಲ್ಲವೂ ವಿಸ್ಮಯ ಜಗತ್ತನ್ನು ನಿರ್ಮಾಣ ಮಾಡಿವೆ.
ಮೂಡಲ ಮನೆಯ ಒಡೆಯನು ಬಾನಂಗಳದಲ್ಲಿ ತೋರಿಸುವ ಸೂರ್ಯೋದಯ ನೋಟವು ಸುಂದರವಾದ ಚಿತ್ರದೃಶ್ಯವನ್ನು ಪ್ರಸ್ತುತಪಡಿಸುತ್ತದೆ. ಹಸಿರು ಹುಲ್ಲಿನ ಮೇಲೆ ಇಬ್ಬನಿ ಹನಿಗಳು ಮುತ್ತುಗಳಂತೆ ಹೊಳೆಯುತ್ತವೆ. ಸೂರ್ಯನ ಕಿರಣಗಳಲ್ಲಿ ಸ್ನಾನ ಮಾಡಿದ ಹೂವುಗಳು, ಹಣ್ಣುಗಳು, ಮರಗಳು ಪ್ರಕಾಶಮಾನವಾಗಿ ಮತ್ತು ಸುಂದರವಾಗಿ ಕಾಣುತ್ತವೆ. ಮರಗಳಲ್ಲಿನ ಹಕ್ಕಿಗಳ ಚಿಲಿಪಿಲಿ ಕಲರವವು ತನ್ನದೇ ಆದ ಸಂಗೀತ ಲೋಕವನ್ನೇ ಸೃಷ್ಠಿಸುತ್ತದೆ. ರಾಶಿ ರಾಶಿ ನಕ್ಷತ್ರಗಳಿಂದ ಕೂಡಿದ ರಾತ್ರಿಯು ಆಭರಣಗಳನ್ನು ತೊಡಿಸಿದ ನೀಲಿ ಸುಂದರಿಯಂತೆ ಕಾಣುತ್ತದೆ. ಚಂದ್ರನು ತನ್ನ ಬೆಳಕಿನಿಂದ ಹಿತವಾದ ಪರಿಣಾಮವನ್ನು ನಿಸರ್ಗದಲ್ಲಿ ಉಂಟು ಮಾಡುತ್ತಾನೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ನೋಡಿದಾಗ ನಮ್ಮ ಮನಸ್ಸು ಪ್ರಪುಲ್ಲಿತವಾಗಿ ಆರೋಗ್ಯ ಇಮ್ಮಡಿಸುತ್ತದೆ. ಧನಾತ್ಮಕ ಚಿಂತನೆಗಳಿಗೆ ಅವಕಾಶ ನೀಡುತ್ತದೆ.
ಮಾನವರಾದ ನಾವು ಇಂದು 21ನೇ ಶತಮಾನದ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಿತಿಮೀರಿದ ಸಾಧನೆ ಮಾಡಿದ್ದೇವೆ. ಇದರ ಪರಿಣಾಮ ನಿಸರ್ಗದ ಮೇಲೆ ಆಗಬಾರದ ಆಗುಹೋಗುಗಳು ಸಂಭವಿಸುತ್ತಿವೆ. ನಿಸರ್ಗವು ನಮ್ಮ ಜೀವ ಸಂರಕ್ಷಕವೂ ಹೌದು ಮತ್ತು ವಿನಾಶಕವೂ ಹೌದು ಎಂಬುದನ್ನು ಅರ್ಥಮಾಡಿ ಕೊಳ್ಳುವ ಕಾಲ ಸನ್ನಿಹಿತವಾಗಿ ಬಹುದಿನಗಳಾಗಿವೆ. ನಿಸರ್ಗದೊಂದಿಗಿನ ಸಂವಹನವು ಮನುಷ್ಯನಿಗೆ ಜೀವಮಾನದ ಅಗತ್ಯ ಎಂದು ನಾವು ಅರಿತಿದ್ದೇವೆ. ನಿಸರ್ಗವನ್ನು ನಿರ್ಲಕ್ಷಿಸಿ ಯಾವುದೇ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅಂತೆಯೇ, ನಿಸರ್ಗದ ಮೇಲಿನ ಮಾನವನ ಹಿಡಿತವು ಕ್ಷಾಮ, ಪ್ರವಾಹ, ಆಮ್ಲ ಮಳೆ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತವೆ. ನದಿಗಳಲ್ಲಿ ಪ್ರವಾಹ ಬರುವುದು, ಭೀಕರ ಮಳೆಯಿಂದಾಗುವ ಹಾನಿ, ಭೂಕಂಪ, ಜ್ವಾಲಾಮುಖಿಯಾಗುವುದು, ವಾತಾವರಣ ದಲ್ಲಿ ತಾಪಮಾನ ಏರಿಕೆಯಾಗುವುದು, ಸುನಾಮಿಗಳುಂಟಾಗುವುದು, ಭೀಕರ ಬರಗಾಲವುಂಟಾಗುವುದು, ಮರುಭೂಮಿ ಯಾಗಿ ಪರಿವರ್ತನೆಯಾಗುವುದು, ಭೀಕರ ಬಿರುಗಾಳಿಯುಂಟಾಗುವುದು, ಭಯಾನಕ ರೋಗರುಜಿನಗಳನ್ನುಂಟುಮಾಡುವುದು ಮುಂತಾದವು ನಿಸರ್ಗ ಪುಸ್ತಕದ ಒಂದೊಂದು ಅಧ್ಯಾಯಗಳು. ಪ್ರತಿಯೊಂದು ಅಧ್ಯಾಯವೂ ಮಾನವ ಜೀವನದ ಬೆಳವಣಿಗೆಗೆ ಚಾಟಿ ಏಟಿನ ಹೊಡೆತಗಳಾಗಿರುತ್ತವೆ. ಮನುಷ್ಯ ತಿದ್ದಿ ನಡೆದಾಗ ಪ್ರಕೃತಿ ಶಾಂತ ಸ್ವಭಾವದಿಂದಿರುತ್ತದೆ. ಇದೇ ಮನುಷ್ಯ ನಿಸರ್ಗವನ್ನು ಶೋಷಣೆ ಮಾಡುವಾಗ, ಇಡೀ ಪ್ರಕೃತಿ ಮಾತೆಯೇ ರೌದ್ರಾವತಾರ ತಾಳಿ ಮನುಷ್ಯ ತನ್ನನ್ನು ತಾನೇ ಮುಟ್ಟಿನೋಡಿಕೊಳ್ಳುವಂತೆ ಹೊಡೆತಗಳನ್ನು ಹೊಡೆಯುತ್ತದೆ. ಪ್ರಕೃತಿಯ ಹೊಡೆತಕ್ಕೆ ಸಿಕ್ಕ ಮನುಷ್ಯ ಚೇತರಿಸಿಕೊಳ್ಳಲು ಅನಿರ್ದಿಷ್ಟ ಕಾಲಾವಧಿಯೇ ಬೇಕಾಗುತ್ತದೆ. ಉದಾಹರಣೆಗೆ ಇತ್ತೀಚೆಗಷ್ಟೆ ಕೊರೊನ ರೋಗ ಹರಡುವಿಕೆಯಿಂದಾಗಿ ಮಾನವನ ಜೀವನ ಮತ್ತು ಬೆಳವಣಿಗೆಯನ್ನು ಇಡೀ ವಿಶ್ವದಲ್ಲಿ ಒಂದು ಶತಮಾನದಷ್ಟೇ ಹಿಂದಕ್ಕೆ ಸೆಳೆದಿದೆ. ಕೊರೋನ ಮಹಾಮಾರಿ ನಮಗೆಲ್ಲ ಸ್ವಚ್ಚತೆಯ ಪಾಠವನ್ನು ಹೇಳಿಕೊಟ್ಟಿದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳವಂತೆ ಮಾಡಿದೆ. ಕೊರೊನಾ ರೋಗದ ಹರಡುವಿಕೆಗಿಂತ ಮೊದಲು, ಎಲ್ಲಕ್ಕಿಂತ ಮಿಗಿಲಾಗಿ ಮಾನವ ಸಂಬಂಧಗಳ ಬಾಂಧವ್ಯವನ್ನು ಗಾಳಿಗೆ ತೂರಿದ್ದೆವು. ಈಗ ಅದನ್ನು ಸರಿಪಡಿಸಿ ಮತ್ತೆ ಸಂಬಂಧಗಳನ್ನು ಬೆಸೆದಿದೆ. ಮೊದಲು ಸಂಸ್ಕೃತಿ ಮತ್ತು ಶಿಷ್ಟಾಚಾರವನ್ನು ಮರೆತಿದ್ದೆವು. ಈಗ ಅವುಗಳನ್ನು ಕಲಿಸುತ್ತಿದೆ. ಅತಿವೇಗದ ಬೆಳವಣಿಗೆಗೆ ವಿರಾಮವನ್ನು ನೀಡಿ ಸಂಯಮದ ಪಾಠವನ್ನು ಕಲಿಸುತ್ತಿದೆ. ಇಷ್ಟೆಲ್ಲಾ ಆದರೂ ನಾವು ಪಾಠ ಕಲಿಯದೆ ಹೀಗೇ ಪ್ರಕೃತಿಯ ಮೇಲೆ ಅತಿಕ್ರಮಣ ಮಡುತ್ತಾ ಹೋದರೆ, ಪ್ರಕೃತಿಯು ಇನ್ನೂ ಭಯಾನಕವಾಗ ಬಹುದು. ಇಲ್ಲಿ ಮುಖ್ಯವಾಗಿ ಮಾನವರಾದ ನಾವು ಅರ್ಥಮಾಡಿಕೊಳ್ಳಬೇಕು. ಬನ್ನಿ ಇಂದಿನಿಂದ ಪ್ರಕೃತಿಯನ್ನು ಉಳಿಸೋಣ. ಎಲ್ಲರೂ ಪ್ರಕೃತಿಯನ್ನು ಆರಾಧಿಸೋಣ. ಇಂದು ನಾವು ನೆಡುವ ಒಂದು ಸಸಿ ಭವಿಷ್ಯದ ಉಸಿರು ಎನ್ನೋಣ, ನಮ್ಮ ಎಲ್ಲಾ ಲೋಪದೋಷಗಳನ್ನು ತಿದ್ದಿ ಸರಿಮಾಡಲು ಪ್ರಕೃತಿಗಿಂತ ಉತ್ತಮ ಶಿಕ್ಷಕರಿಲ್ಲ ಎಂಬುದನ್ನು ಅರಿತು ಸಹಬಾಳ್ವೆ ಮತ್ತು ಸನ್ನಡತೆಯ ಸಹಕಾರದೊಂದಿಗೆ ಖುಷಿಯಾಗಿರೋಣ.
-ಕೆ. ಎನ್. ಚಿದಾನಂದ. ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ