ನಂತೂರು: ಇಲ್ಲಿನ ಶ್ರೀ ಭಾರತೀ ಕಾಲೇಜು ಆವರಣದ ಶಂಕರ ಶ್ರೀ ಸಭಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಶ್ರೀ ಶಂಕರ ವೇದಪಾಠ ಶಿಬಿರದ ಸಮಾರೋಪ ಸಮಾರಂಭ ರವಿವಾರ ನೆರವೇರಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹವ್ಯಕ ಮಹಾಮಂಡಲದ ವೈದಿಕ ಪ್ರಧಾನ ರಾಮಕೃಷ್ಣ ಭಟ್ ಕೂಟೇಲು ಅವರು ಮಾತನಾಡಿ, ನಗರದಲ್ಲಿ ವಿಪ್ರವಟುಗಳಿಗೆ ವೇದಾಧ್ಯಯನ ಕಲಿಯುವ ಅವಕಾಶ ಮಾಡಿದ್ದು ಉತ್ತಮ ಕಾರ್ಯ, ಇದರಲ್ಲಿ ಮೂರು ವರ್ಷವೂ ಕಲಿಯಬೇಕು, ಆಸಕ್ತರು ಮಾತ್ರ ಬಂದಿರುವುದು ಉತ್ತಮ, ಇಲ್ಲಿ ಕಲಿತ ವಿಚಾರಗಳನ್ನು ಮುಂದೆಯೂ ನಿತ್ಯ ಬದುಕಿನಲ್ಲಿ ಅನುಷ್ಠಾನಿಸಿಕೊಂಡು ಹೋದರೆ ಸಂಸ್ಕಾರಯುತ ಬದುಕು ನಮ್ಮದಾಗಲಿದೆ ಎಂದರು.
ಹವ್ಯಕ ಮಹಾಸಭಾ ಉಪಾಧ್ಯಕ್ಷೆ ಸುಮಾ ರಮೇಶ್ ಅಧ್ಯಕ್ಷತೆ ವಹಿಸಿ, ಕಳೆದ ಒಂದು ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ ವಸಂತ ವೇದಪಾಠ ಶಿಬಿರ ನಡೆದಿದೆ, ವೈದಿಕ ಪ್ರಧಾನ ಅಮೈ ಶಿವಪ್ರಸಾದರ ಅಧ್ಯಾಪಕತ್ವದಲ್ಲಿ ನಡೆದಿರುವ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಲಭ್ಯವಾಗಿದ್ದು ಉತ್ತಮ ವಿಚಾರ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಕೇಂದ್ರ ಸಮಿತಿಯ ಉಪಾಧ್ಯಕ್ಷ ಗಣೇಶ್‌ಮೋಹನ್ ಕಾಶಿಮಠ, ವೇದಪಾಠ ಶಾಲೆ ಸಮಿತಿಯ ಸಂಚಾಲಕ ಕಾಶಿಮಠ ಸುಬ್ರಹ್ಮಣ್ಯ ಭಟ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ದ.ಕ ಹವ್ಯಕ ಮಹಾಜನ ಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್, ಶ್ರೀ ಭಾರತಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಶಾಸ್ತಿç ಕಲ್ಲಾಜೆ, ರುದ್ರ ಸಮಿತಿಯ ಶ್ರೀಕೃಷ್ಣಭಟ್ ಪಯ ಉಪಸ್ಥಿತರಿದ್ದರು.
ವೇದಪಾಠ ಶಾಲೆಯನ್ನು ನಿರ್ವಹಿಸಿ ವೈದಿಕ ಪ್ರಧಾನ ಶಿವಪ್ರಸಾದ್ ಅಮೈ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ವೇದಪಾಠ ಸಮಿತಿ ಸಂಚಾಲಕ ಬಾಲಸುಬ್ರಹ್ಮಣ್ಯ ಭಟ್ ಕಬೆಕೋಡಿ ಪ್ರಸ್ತಾವಿಸಿದರು. ಬಾಲಕೃಷ್ಣ ಭಟ್ ಬಾಯಾಡಿ ನಿರೂಪಿಸಿ ವಂದಿಸಿದರು.
ಸಂಸ್ಕಾರ ಮಹತ್ವ ಸಾರಿದವರು ಶಂಕರರು
ಶ್ರೀ ಶಂಕರಾಚಾರ್ಯರು ಅದ್ವೈತ ತತ್ವವನ್ನು ಪರಿಚಯಿಸಿ, ಉಳಿಸಿದವರು, ಸನ್ಯಾಸಿಯಾಗಿ ಸರ್ವವನ್ನೂ ತಿಳಿದುಕೊಂಡು ಸರ್ವಜ್ಞ ಪೀಠಾರೋಹಣ ಮಾಡಿದರು, ಉಪನಯನ, ಸಂಸ್ಕಾರಗಳ ಮಹತ್ವವನ್ನು ಹಾಗೂ ಆತ್ಮಜ್ಞಾನ ಪಡೆಯುವುದರ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟವರು ಎಂದು ಯುವ ವಾಗ್ಮಿ ಶ್ರದ್ಧಾ ನಾಯರ್ಪಳ್ಳ ಅವರು ಹೇಳಿದರು.
ಶಂಕರ ಶ್ರೀ ವೇದಪಾಠಶಾಲೆಯ ಸಮಾರೋಪ ಸಮಾರಂಭದಲ್ಲಿ ಅವರು ಶ್ರೀ ಶಂಕರ ಜಯಂತಿ ಅಂಗವಾಗಿ ಶ್ರೀ ಶಂಕರಭಗವತ್ಪಾದರ ವಿಚಾರವಾಗಿ ಉಪನ್ಯಾಸ ನೀಡಿದರು.ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪನೆ ಮಾಡಿದ ಶಂಕರರು ಭಾರತದ ಉದ್ದಗಲಕ್ಕೂ ಸಂಚರಿಸಿದವರು, ಪೀಠಗಳ ಸ್ಥಾಪನೆ ಮಾಡುವ ಮೂಲಕ ಎಲ್ಲರೂ ಒಗ್ಗಟ್ಟಾಗಿರಬೇಕು, ವೇದ ಸುಸ್ಥಿತವಾಗಿ ಇರಬೇಕು, ಅದ್ವೈತ ಶಾಶ್ವತವಾಗಿರಬೇಕು ಎಂಬ ತತ್ವವನ್ನು ಸಾರಿದ ಪರಮಜ್ಞಾನಿಗಳಾಗಿದ್ದರು ಎಂದು ಬಣ್ಣಿಸಿದರು. ವೇದಪಾಠ ಶಿಬಿರದ ಭಾಗವಾಗಿ ಶತರುದ್ರವನ್ನು ಕೂಟೇಲು ಕೇಶವಪ್ರಸಾದ್ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ