ಮಾನವೀಯ ನೆಲೆಯಲ್ಲಿ ಸೇವೆಗೆ ಸಮಯ ಮಾಡಿಕೊಳ್ಳಿ: ವಿಕ್ರಮ್ ದತ್ತ

Upayuktha
0


ಮಂಗಳೂರು: ಜಗತ್ತಿನ ಯಾವುದೇ ಮೂಲೆಯಲ್ಲಿ ಮಾನವೀಯ ನೆರವು ಬೇಕಾದಾಗ ರೆಡ್‌ಕ್ರಾಸ್ ಸಂಸ್ಥೆ ಜೊತೆಗಿರುತ್ತದೆ. ಬದುಕಿನಲ್ಲಿ ಮಾನವೀಯತೆ ದೃಷ್ಟಿಯಿಂದ ಸೇವೆ ಮಾಡಲು ಒಂದಷ್ಟು ಸಮಯ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಕೆಲಸ ಮಾಡಿ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ವಿಕ್ರಮ್‌ ದತ್ತ ಸಲಹೆ ನೀಡಿದರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ವಿಭಾಗ ಮತ್ತು ಯುವ ರೆಡ್‌ಕ್ರಾಸ್ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರೆಡ್‌ಕ್ರಾಸ್ ದಿನ ಮತ್ತು ಇಂಟರ್‍ನ್‌ಶಿಪ್ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಕಾರ್ಯಕ್ರಮದ ಗೌರವಾನ್ವಿತ ಅತಿಥಿ ಭಾರತೀಯ ರೆಡ್‌ಕ್ರಾಸ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತರಾಮ್ ಶೆಟ್ಟಿ, ರೆಡ್‌ಕ್ರಾಸ್ ಕೆಲಸ ಎಂದರೆ ಕೇವಲ ರಕ್ತ ಹಂಚುವುದಲ್ಲ; ಬದಲಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಸಂಸ್ಥೆಯಾಗಿದೆ. ಜೀವನದಲ್ಲಿ ಸೂಕ್ತ ಸಮಯದಲ್ಲಿ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಸೇವಾ ಮನೋಭಾವ ಎಲ್ಲಕ್ಕಿಂತ ಮುಖ್ಯವಾದದ್ದು. ಹಾಗಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಕರುಣೆ, ಸೇವಾ ಮನೋಭಾವ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲೂ ರೆಡ್‌ಕ್ರಾಸ್ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು. 


ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್ ವಂದಿಸಿದರು. ವಿವಿಧ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಇದೇ ವೇಳೆ ರೋಶನಿ ನಿಲಯ ಕಾಲೇಜು, ಕೆನರಾ ಕಾಲೇಜು, ಪೊಂಪೈ ಕಾಲೇಜು, ಗೋಕರ್ಣನಾಥೇಶ್ವರ ಕಾಲೇಜು, ವಿಶ್ವವಿದ್ಯಾನಿಲಯ ಕಾಲೇಜು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಮಂಜುನಾಥ ಪೈ ಮೆಮೋರಿಯಲ್ ಕಾಲೇಜು, ಕಾರ್ಕಳ, ಮತ್ತು ದಯಾನಂದ ಪೈ ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು, ಬೆಸೆಂಟ್ ಕಾಲೇಜು, ಪುಂಜಾಲಕಟ್ಟೆ ಕಾಲೇಜು ಬೆಳ್ತಂಗಡಿ, ಪಾದುವ ಕಾಲೇಜು, ಗೋವಿಂದ ದಾಸ್ ಕಾಲೇಜು, ಸುರತ್ಕಲ್ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳಗಂಗೋತ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಪ್ರಮಾಣ ಪತ್ರ ವಿತರಿಸಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top