ಮೇ 15: ವಿಶ್ವ ಕುಟುಂಬ ದಿನ

Upayuktha
0


ಮಾನವ ಸಮಾಜದಲ್ಲಿ ಕುಟುಂಬವು ಅತೀ  ಚಿಕ್ಕ ಘಟಕವಾಗಿದೆ ಮತ್ತು ಜಗತ್ತಿನಲ್ಲಿಯೂ ಕುಟುಂಬವು ಚಿಕ್ಕ ಘಟಕವಾಗಿದ್ದು ಅತೀ ಸೂಕ್ಷ್ಮ ಘಟಕವೂ ಆಗಿದೆ. ಇದು ಸಾಮಾಜಿಕ ಸಂಘಟನೆಯ ಮೂಲಭೂತ ಘಟಕವಾಗಿದ್ದು ಸಾಮರಸ್ಯದಿಂದ ಬದುಕಲು ಮತ್ತು ಪರಸ್ಪರ ಸಹಕಾರ ಮತ್ತು ಸೌಹಾರ್ದಯುತ ಸಂಬಂಧಗಳನ್ನು ನಿರ್ಮಿಸಲು ಕಲಿಸುವ ನೆಲೆಯಾಗಿದೆ. ಪ್ರತಿಯೊಬ್ಬ ಮನುಷ್ಯನು ಯಾವುದಾದರೂ ಕುಟುಂಬದ ಸದಸ್ಯನೇ ಆಗಿರುತ್ತಾನೆ. ಏಕೆಂದರೆ ಕುಟುಂಬದ ಹೊರತಾಗಿ ಅವನ ಅಸ್ತಿತ್ವವನ್ನು ಊಹಿಸಿಕೊಳ್ಳಲಾಗುವುದಿಲ್ಲ. ಬದಲಾವಣೆ ಜಗದ ನಿಯಮವಾಗಿರುವುದರಿಂದ ಅಂತಹ ಹಲವಾರು ಬದಲಾವಣೆಗಳನ್ನು ಸ್ವೀಕರಿಸಿ, ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯು ಸ್ವತಃ ಪರಿಷ್ಕರಿಸಬಹುದು ಅಥವಾ ಬದಲಾವಣೆಗೆ ಹೊಂದಿಕೊಳ್ಳಬಹುದು. ಆದರೆ ಕುಟುಂಬ ಎಂಬ ಸಂಸ್ಥೆಯ ಅಸ್ತಿತ್ವವು ಗಟ್ಟಿಯಾಗಿ ನೆಲೆಯೂರಿದೆ.


ಕುಟುಂಬವು ಸಂಘಟನೆಯ ಮೂಲಕ ಮಾಡಲ್ಪಟ್ಟಿರಬಹುದು ಮತ್ತು ವಿಘಟನೆಯ ಮುರಿದುಹೋಗಿರಬಹುದು, ಆದರೆ ಕುಟುಂಬದ ಅಸ್ತಿತ್ವವನ್ನು ನಿರಾಕರಿಸಲಾಗುವುದಿಲ್ಲ. ಇಂದು ಕುಟುಂಬದಲ್ಲಿ ವ್ಯಕ್ತಿಯ ದೃಷ್ಟಿಕೋನ ಬದಲಾಗಿದೆ ಮತ್ತು ಅವನ ಮೌಲ್ಯಗಳು ಬದಲಾಗಿವೆ. ಆದರೆ ಅವನ ಅಸ್ತಿತ್ವವನ್ನು ಪ್ರಶ್ನಿಸಲಾಗುವುದಿಲ್ಲ. ನಾವು ಎಷ್ಟೇ ಆಧುನಿಕ ಸಿದ್ಧಾಂತದಲ್ಲಿ ಬೆಳೆಯುತ್ತಿದ್ದರೂ, ಕೊನೆಯಲ್ಲಿ, ಮದುವೆಯ ಸಂಸ್ಥೆಯೊಂದಿಗಿನ ನಮ್ಮ ಸಂಬಂಧವನ್ನು ಕುಟುಂಬವಾಗಿ ಬದಲಾಯಿಸಿಕೊಳ್ಳುವುದರಲ್ಲಿ ಮಾತ್ರ ನಾವು ತೃಪ್ತಿಯನ್ನು ಅನುಭವಿಸುತ್ತೇವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಸಂತೋಷ ನೀಡುವ ತಾಣ ಕುಟುಂಬವಾಗಿದೆ. ಕುಟುಂಬವು ಸಹಕಾರಿ ಸಂಘಟನೆಯಾಗಿದೆ.


ಅಪ್ಪ ಕುಟುಂಬದ ಯಜಮಾನ. ಅಪ್ಪ ದೇವರನ್ನು ಪೂಜಿಸಿ ಬೇಡಿಕೊಳ್ಳುವಾಗ, "ಓ ದೇವರೆ ನಮ್ಮ ಮನೆಯ ಎಲ್ಲರನ್ನು ರಕ್ಷಿಸು, ಹೆಂಡತಿ ಮಕ್ಕಳು ತಾವು ತಿಳಿಯದೇ ಮಾಡುವ ತಪ್ಪುಗಳನ್ನು ಕ್ಷಮಿಸು ಪರಮಾತ್ಮ" ಎನ್ನುತ್ತಾನೆ. ಅಮ್ಮ ದೇವರಲ್ಲಿ ಭಕ್ತಿಯಿಂದ, "ಓ ದೇವರೆ, ನನ್ನ ಗಂಡ ಮತ್ತು ಮಕ್ಕಳಿಗೆ ಆರೋಗ್ಯ ಕೊಟ್ಟು ದಯಪಾಲಿಸು. ಕುಟುಂಬದ ಎಲ್ಲರನ್ನು ಕಾಪಾಡು. ಯಾರಿಗೂ , ಎಲ್ಲಿಯೂ ತೊಂದರೆಯಾಗದಂತೆ ರಕ್ಷಿಸು." ಎನ್ನುತ್ತಾಳೆ. ಮಗಳು ದೇವರಲ್ಲಿ ಬೇಡಿಕೊಳ್ಳುವಾಗ, "ಪರಮಾತ್ಮ, ನನ್ನ ಅಪ್ಪ, ಅಮ್ಮ, ಸಹೋದರ ಮತ್ತು ನನ್ನನ್ನು ಎಲ್ಲರನ್ನು ಕಾಪಾಡು" ಎನ್ನುತ್ತಾಳೆ. ಮಗ ದೇವರಲ್ಲಿ ಪ್ರಾರ್ಥಿಸುವಾಗ, "ಸ್ವಾಮಿ, ನೀನು ದಯಾಕರನೂ, ದಯಾಮಯನಾದ ಭಗವಂತನಾಗಿದ್ದೀಯ. ನಮ್ಮ ಕುಟುಂಬದಲ್ಲಿ ಅಪ್ಪ, ಅಮ್ಮ, ಸಹೋದರಿ ಮತ್ತು ನನ್ನನ್ನು ಎಲ್ಲ ದುಷ್ಟ ಶಕ್ತಿಗಳಿಂದ ಕಾಪಾಡು. "ಎನ್ನುತ್ತಾನೆ. ಕುಟುಂಬವೊಂದರಲ್ಲಿನ ಸದಸ್ಯರು ದೇವರಲ್ಲಿ ಪ್ರತಿನಿತ್ಯ ಹೀಗೆ ಪ್ರಾರ್ಥಿಸುತ್ತಾ ಒಬ್ಬರಿಗೊಬ್ಬರು ನೈತಿಕ, ಮಾನಸಿಕ ಬೆಂಬಲವನ್ನು ನೀಡುತ್ತಾರೆ. ಒಬ್ಬರನ್ನೊಬ್ಬರು ಯಾರೂ ಬೇರ್ಪಡಿಸಿಕೊಳ್ಳುವುದಿಲ್ಲ. ಕಾರಣ ಅದೊಂದು ಕುಟುಂಬ. ಕುಟುಂಬದಲ್ಲಿ ಸರ್ವ ಸದಸ್ಯರ ಬೇರುಗಳು ಮನಸ್ಸಿನ ಆಳದಲ್ಲಿ ಹುದುಗಿರುತ್ತವೆ. 


ಇಪ್ಪತ್ತೊಂದನೇ ಶತಮಾನದ ಈ ಸ್ಪರ್ಧಾತ್ಮಕ ಜಗತ್ತು ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆಯನ್ನು ಅತೀ ಭರದಿಂದ ಕಾಣುತ್ತಿದೆ. ಕುಟುಂಬವೆಂಬ ಜೈವಿಕ ನೆಲೆಗಟ್ಟಿನಲ್ಲಿಯ ಕಾರ್ಯಾತ್ಮಕ ಮತ್ತು ರಚನಾತ್ಮಕತೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬಂದಿವೆ. ಇಂದು ವಿಶ್ವ ಕೌಟುಂಬಿಕ ದಿನ. ಇದನ್ನು ಅಂತರರಾಷ್ಟ್ರೀಯ ಕುಟುಂಬ ದಿನ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1993 ರಲ್ಲಿ ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮೇ 15 ರಂದು ಕುಟುಂಬದ ಕುರಿತು ವಿಶೇಷ ಘೋಷಣಾ ವಾಕ್ಯವನ್ನು ಘೋಷಿಸುವ ಮೂಲಕ ಕೌಟುಂಬಿಕ ನೆಲೆಯ ಸಂರಕ್ಷಣೆಗೆ ಆದ್ಯ ಗಮನ ನೀಡುತ್ತಿದೆ. ಅಂತೆಯೇ ಎಲ್ಲಾ ರಾಷ್ಟ್ರಗಳಲ್ಲಿ ಕುಟುಂಬದ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.


ಕುಟುಂಬವು ಒಂದು ಸಾಮಾಜಿಕ, ಸಾರ್ವತ್ರಿಕ ಅತ್ಯಂತ ಸರಳ ಮತ್ತು ಸೂಕ್ಷ್ಮ ಸಂಸ್ಥೆಯಾಗಿದೆ. ಕುಟುಂಬವಿಲ್ಲದೇ ಸಮಾಜವಿಲ್ಲ. ಮಾನವನ ಸಾಮಾಜಿಕ ಜೀವನದ ತಳಹದಿ ಮತ್ತು ಜೈವಿಕ ಆಧಾರ. ಆದ್ದರಿಂದ ಕುಟುಂಬದ ಬೇರುಗಳು ಸಾಮಾಜಿಕ ವ್ಯವಸ್ಥೆಯಲ್ಲಿಹಾಸುಹೊಕ್ಕಾಗಿವೆ. ಕುಟುಂಬವು ಎಲ್ಲಾ ಸಂಸ್ಥೆಗಳ ಮಾತೃಸಂಸ್ಥೆ ಯಾಗಿದ್ದು ಮಾನವನ ಸಾಮೂಹಿಕ ಜೀವನದ ಕೇಂದ್ರ ಶಕ್ತಿಯಾಗಿದೆ.


ಕುಟುಂಬ ಎಂಬ ಪದವು ಇಂಗ್ಲಿಷ್ ನ 'ಫ್ಯಾಮಿಲಿ' ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ಈ 'ಫ್ಯಾಮಿಲಿ' ಎಂಬ ಪದವು ಲ್ಯಾಟಿನ್ ಭಾಷೆಯ 'ಫ್ಯಾಮುಲಸ್' ಎಂಬ ಪದದಿಂದ ಜನ್ಮತಾಳಿದೆ. 'ಫ್ಯಾಮುಲಸ್' ಎಂದರೆ ಆಳು ಅಥವಾ ಸೇವಕ ಎಂದರ್ಥ. ರೋಮನ್ನರು ಹಿಂದಿನ ಕಾಲದಲ್ಲಿ ಆಳುಗಳನ್ನು ಕೂಡ ಕುಟುಂಬದ ಸದಸ್ಯರೆಂದು ಪರಿಗಣಿಸಿದ್ದರೆಂದು ಸಮಾಜಶಾಸ್ತ್ರೀಯ ಇತಿಹಾಸದಿಂದ ತಿಳಿದುಬರುತ್ತದೆ. ಮೆಕೈವರ್ ಮತ್ತು ಪೇಜ್ ಎಂಬ ಸಮಾಜಶಾಸ್ತ್ರಜ್ಞರು ಹೇಳುವಂತೆ ಸಂತತಿಯ ಉತ್ಪತ್ತಿ ಮತ್ತು ಶಿಶುಗಳ ಪಾಲನೆ- ಪೋಷಣೆಯ ಕಾರ್ಯಗಳನ್ನು ನಿರ್ವಹಿಸುವುದರ ಸಲುವಾಗಿ, ಲೈಂಗಿಕ ಸಂಬಂಧದ ಆಧಾರದ ಮೇಲೆ ರಚಿತವಾದ, ಸಾಕಷ್ಟು ಖಚಿತವಾದ ಮತ್ತು ಧೀರ್ಘ ಕಾಲ ಬಾಳುವ ಸಮೂಹವೇ ಕುಟುಂಬವಾಗಿದೆ. ಆದ್ದರಿಂದಲೇ ಕುಟುಂಬಕ್ಕೆ ಕುಟುಂಬವೇ ಸಮಾನವೆಂದು ಹೇಳಲಾಗಿದೆ.


ಕುಟುಂಬದಲ್ಲಿ ಸಂಗಾತಿಗಳ ಒಡನಾಟ, ಸಂಗಾತಿಗಳ ಆಯ್ಕೆಗೆ ಅವಕಾಶ, ವೈವಾಹಿಕ ರೂಪ, ಹೆಸರು ಸೂಚಿಸುವ ಪದ್ದತಿ, ಜೊತೆ ಜೊತೆ ವಾಸ, ವಂಶಾವಳಿಯ ಗುರುತು ಹಚ್ಚುವಿಕೆ, ಕೌಟುಂಬಿಕ ಸದಸ್ಯರ ಆರ್ಥಿಕ ಹಿತರಕ್ಷಣೆ ಇವು ಕುಟುಂಬದ ಸಾಮಾನ್ಯ ಲಕ್ಷಣಗಳಾಗಿವೆ. ಅಂತೆಯೇ ಕುಟುಂಬದ ವಿಶಿಷ್ಟ ಲಕ್ಷಣಗಳನ್ನು ನಾವು ಕಾಣಬಹುದು. ಕುಟುಂಬವು ಸಾರ್ವತ್ರಿಕ ಸಂಸ್ಥೆ. ಕುಟುಂಬದಲ್ಲಿ ಭಾವನಾತ್ಮಕತೆಯೇ ಆಧಾರವಾಗಿದೆ. ಚಿಕ್ಕ ಆಕಾರವನ್ನು ಹೊಂದಿರುವ ಕುಟುಂಬವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತದೆ. ಸಾಮಾಜಿಕ ವ್ಯವಸ್ಥೆಯ ಕೇಂದ್ರ ಬಿಂದು ಕುಟುಂಬವೇ ಆಗಿದೆ. ಹೊಣೆಗಾರಿಕೆಯುಳ್ಳ ಸದಸ್ಯರನ್ನು ಹೊಂದಿದ್ದು ಕುಟುಂಬವು ಸಾಮಾಜಿಕ ನಿಯಂತ್ರಣದ ಸಂಸ್ಥೆಯಾಗಿದೆ. ಕುಟುಂಬವು ಕೆಲವೊಮ್ಮೆ ಶಾಶ್ವತ ರೂಪ ಮತ್ತು ಕೆಲವೊಮ್ಮೆ ಅಶಾಶ್ವತ ರೂಪವನ್ನು ಪಡೆದಿರುತ್ತದೆ.


ಕುಟುಂಬವು ಮೂಲಭೂತ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವೆಂದರೆ ವಿವಾಹ ಸಂಸ್ಥೆಯನ್ನು ರೂಪಿಸುತ್ತದೆ. ಲೈಂಗಿಕ ತೃಷೆಯ ಈಡೇರಿಕೆಗೆ ಅವಕಾಶ ಕಲ್ಪಿಸಿ ಸಂತಾನೋತ್ಪತ್ತಿಗೆ ನೆರವಾಗುತ್ತದೆ. ಮಕ್ಕಳ ರಕ್ಷಣೆ, ಲಾಲನೆ- ಪಾಲನೆ, ಪೋಷಣೆ ಮಾಡಲು ಆಶ್ರಯವನ್ನು ಒದಗಿಸುತ್ತದೆ. ಸಾಂಸ್ಕೃತಿಕ ವಾಹಿನಿಯ ಸಾಧನವಾಗಿದೆ. ಕೌಟುಂಬಿಕ ಸದಸ್ಯರನ್ನು ಸಾಮಾಜೀಕರಣಗೊಂಡ  ಶಿಲ್ಪಿಗಳನ್ನಾಗಿಸುತ್ತದೆ. ಆಗತಾನೇ ಹುಟ್ಟಿದ ಮಗುವಿಗೆ ಸಾಮಾಜಿಕ ಸ್ಥಾನ ನೀಡುವ ಮೂಲಕ ಕುಟುಂಬವು ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ, ಮಮತೆ, ವಾತ್ಸಲ್ಯ, ಭಾವನೆಗಳನ್ನು ನೀಡುತ್ತದೆ. ಇಷ್ಟಲ್ಲದೆ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಹಾಗೂ ಮನೋರಂಜನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಎಲ್ಲಾ ಸಂಸ್ಥೆಗಳಂತೆ ಇಂದು ಕುಟುಂಬದಲ್ಲಿಯೂ ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ.


ಕುಟುಂಬದಲ್ಲಿ ತಾಯಿಯೇ ಮುಖ್ಯಸ್ಥಳಾಗಿರುವ ಮಾತೃಪ್ರಧಾನ ಕುಟುಂಬವಿದೆ ಹಾಗೆಯೇ ತಂದೆಯೇ ಮುಖ್ಯಸ್ಥನಾಗಿರುವ ಪಿತೃಪ್ರಧಾನ ಕುಟುಂಬವೂ ಇದೆ. ನಾಲ್ಕೈದು ತಲೆಮಾರುಗಳು ಒಟ್ಟಿಗೆ ವಾಸಿಸುವ ಅವಿಭಕ್ತ ಕುಟುಂಬಗಳೂ ನಮ್ಮಲ್ಲಿ ಕಾಣಸಿಗುತ್ತವೆ. ಆದರೆ ಇತ್ತೀಚಿನ ಆಧುನೀಕರಣ, ಸಂಸ್ಕೃತೀಕರಣ, ಪಾಶ್ಚಾತ್ಯೀಕರಣ, ಕೈಗಾರಿಕೀಕರಣ ಮತ್ತು ನಗರೀಕರಣಗಳ ಪ್ರಭಾವದಿಂದಾಗಿ ಇಂದು ಆಧುನಿಕ ಕೇಂದ್ರ ಕುಟುಂಬಗಳು ಅಥವಾ ಒಂಟಿ ಕುಟುಂಬಗಳು ಹೆಚ್ಚಾಗುತ್ತಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳ ವರ್ಚಸ್ಸು ಹಾಗೂ ಧಾರ್ಮಿಕ ನಂಬಿಕೆ, ನೈತಿಕ ನಿಯಮಗಳ ಅಧಃಪತನ, ವ್ಯಕ್ತಿವಾದ, ಸೌಂದರ್ಯಸ್ವಾದದ ಪ್ರಭಾವ, ಸ್ತ್ರೀಯರ ಆರ್ಥಿಕ ಸ್ವಾವಲಂಬನೆಯ ಪರಿಣಾಮ, ಮಹಿಳಾ ಸ್ಥಾನಮಾನದ ಸುಧಾರಣೆ, ಮಹಿಳಾ ವಿಮೋಚನಾ ಹೋರಾಟದ ಪ್ರಭಾವ, ವೈವಾಹಿಕ ಬಿಕ್ಕಟ್ಟಿನ ಪರಿಣಾಮ, ಮಕ್ಕಳ ಜನನದ ಇಳಿಮುಖ ಹಾಗೂ ಪೋಷಕರು - ಯುವಕರ ನಡುವಿನ ಸಂಘರ್ಷ ಇವೆಲ್ಲಾ ಕಾರಣಗಳು ಅವಿಭಕ್ತ ಕುಟುಂಬವನ್ನು ಒಡೆದು ಸಣ್ಣ ಸಣ್ಣ ಕುಟುಂಬಗಳನ್ನಾಗಿಸಿವೆ.


ವಿಶ್ವದಲ್ಲಿ ಎಷ್ಟೇ ಮಹಾಸಮರಗಳು ಸಂಭವಿಸಿದ್ದರೂ ಕುಟುಂಬವೆಂಬ ಸಂಸ್ಥೆ ಅಲುಗಾಡದೆ ಹಿಮಾಲಯದಂತೆ ಅಚಲವಾಗಿ ನಿಂತಿದೆ. ಇಂತಹ ಅಭೂತಪೂರ್ವ ಸಂಸ್ಥೆ ಕುಟುಂಬವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಭಾವನಾತ್ಮಕ, ದೈಹಿಕ- ಮಾನಸಿಕ ವಿಚಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ವಾಹಿನಿಯಾಗಿ ವರ್ಗಾಯಿಸುತ್ತಿರುವುದನ್ನು ಮನಗಂಡು ವಿಶ್ವಸಂಸ್ಥೆಯು ವಿಶ್ವ ಕೌಟುಂಬಿಕ ದಿನವನ್ನು ಘೋಷಿಸಿ ಆಚರಿಸುವ ಮೂಲಕ ಕುಟುಂಬವೆಂಬ ಪರಿಕಲ್ಪನೆಗೆ ಮನೋಜ್ಞ ಪ್ರಾಮುಖ್ಯತೆಯನ್ನು ನೀಡಿರುವುದು ಹೆಮ್ಮೆಯ ವಿಷಯವಾಗಿದೆ.


- ಕೆ.ಎನ್. ಚಿದಾನಂದ ಹಾಸನ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top