ತವರ ನೆಲದ ಸಾಧಕನಿಗೆ "ವಾಯ್ಸ್ ಆಫ್ ವರ್ಲ್ಡ್ ಕ್ರಿಕೆಟ್" ಬಿರುದಿನ ಗೌರವ
ಕಾರ್ಕಳ: ಈಗ ಕ್ರಿಕೆಟ್ ಕಾಮೆಂಟೇಟರ್ ಜವಾಬ್ದಾರಿಯಿದೆ. ಇದರ ಬಳಿಕ ಮುಂದಿನ ದಿನಗಳಲ್ಲಿ ಕರಾವಳಿಯ ತನ್ನ ಹುಟ್ಟೂರಿನ ನೆಲಕ್ಕೆ ಕೊಡುಗೆ ನೀಡುವ ಕನಸು ಮತ್ತು ಆಸಕ್ತಿ ಇದೆ ಎಂದು ಭಾರತೀಯ ಕ್ರಿಕೆಟ್ ಮಾಜಿ ಕಪ್ತಾನ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಹೇಳಿದರು. ಉಡುಪಿ ಯರ್ಲಪಾಡಿಯ ತನ್ನ ಹಿರಿಯರ ಮೂಲ ನೆಲೆಯ ಕರ್ವಾಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ಅಪರಾಹ್ನ ಭೇಟಿ ನೀಡಿ ಸೇವೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಸಂದರ್ಶನದ ಸಾರಾಂಶ ಹೀಗಿದೆ.
ಸಂದರ್ಶನ: ಗಣೇಶ್ ಕಾಮತ್ ಎಂ. / ರಾಂ ಅಜೆಕಾರ್
* ನಿಮ್ಮ ವೃತ್ತಿ ಜೀವನದ ಹಾದಿಯನ್ನು ಅವಲೋಕಿಸಿದಾಗ ಏನನ್ನಿಸುತ್ತಿದೆ?
- ಇಲ್ಲಿ ಆತ್ಮೀಯ ನೆನಪುಗಳಿವೆ. ಬೆಳವಣಿಗೆಯ ಹಂತದಲ್ಲಿ ನಾನು ಈ ಪರಿಸರವನ್ನು ಕಂಡಿದ್ದೇನೆ. ಜೀವನದಲ್ಲಿ ದೇವರ ದಯೆ ಮುಖ್ಯ. ಕಠಿಣ ದುಡಿಮೆಯೂ ಮುಖ್ಯವಾಗುತ್ತದೆ. ತವರು ನೆಲಕ್ಕೆ ಬಂದಾಗಲೆಲ್ಲ ಸ್ಫೂರ್ತಿ ಪಡೆದಿದ್ದೇನೆ.
* ಭಾರತೀಯ ಕ್ರಿಕೆಟ್ ರಂಗದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದವರು ತಾವು. ಆ ಪೈಕಿ ಯಾವುದು ಮರೆಯಲಾಗದ್ದು?
- 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದದ್ದು, 1985ರ ಗೆಲುವು, ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯನಾಗಿ ಸಿಡಿಸಿದ ಮೊದಲ ದ್ವಿಶತಕ , ಆಸ್ಟ್ರೇಲಿಯಾದ ನೆಲದಲ್ಲಿ 2 ಟೆಸ್ಟ್ ಸರಣಿ ಗೆಲುವು, ಕಮೆಂಟೇಟರ್ ಆಗಿ 2007 ಮತ್ತು 2011ರ ವಿಶ್ವಕಪ್ ಗೆಲುವಿನ ಸಂಭ್ರಮ.
* ಭಾರತದಲ್ಲಿ ಕ್ರಿಕೆಟ್ ಪ್ರತಿಭೆಗಳೇ ಹೆಚ್ಚಿರುವುದರಿಂದ ಸ್ಪರ್ಧೆತೀವ್ರವಾಗಿದೆಯಲ್ಲ?
- ಹೌದು. ಕಠಿಣ ಪರಿಶ್ರಮವೇ ಇದಕ್ಕೆ ಪರಿಹಾರ. ಯಾವುದೇ ಅಡ್ಡ ಹಾದಿಯಲ್ಲಿ ಸವಾಲುಗಳನ್ನು ಎದುರಿಸಲಾಗದು.
* ಯುವ ಆಸಕ್ತರಿಗೆ ಕಮೆಂಟೇಟರ್ ಗಳಾಗುವತ್ತ ಕೋಚಿಂಗ್ ಸಹಾಯದ ಬಗ್ಗೆ ಯೋಚಿಸಿದ್ದೀರಾ?
- ಹೌದು. ಈಗಾಗಲೇ ಹಲವರಿಗೆ ನೆರವಾಗಿದ್ದೇನೆ. ಅದನ್ನು ಮುಂದೆಯೂ ಮಾಡಲಿದ್ದೇನೆ.
* ಕ್ರಿಕೆಟ್ ದೇವರ ಜತೆ ನಿಕಟ ವರ್ತಿಯಾಗಿದ್ದ ತಾವು ಸಚಿನ್ ಕುರಿತು ...
- ಸಚಿನ್ ತೆಂಡೂಲ್ಕರ್ ಮೊದಲ ಟೆಸ್ಟ್ ಆಡುವಲ್ಲಿಂದ ನಾನು ಆತನನ್ನು ಕಂಡಿದ್ದೇನೆ. ಅವರ ಕೊಡುಗೆ ನಂಬಲಸಾಧ್ಯವಾದದ್ದು, ಅಮೂಲ್ಯ ಅಪಾರ.
* ವೃತ್ತಿ ಜೀವನದ ಹಾದಿಯಲ್ಲಿ ಕನಸುಗಳೇನಾದರೂ?
- ನಾವು ಜೀವನದಲ್ಲಿ ಮುನ್ನಡೆಯುತ್ತಲೇ ಇರಬೇಕು. ಸಧ್ಯ ಕಮೆಂಟೇಟರ್ ಆಗಿ ನೋಡಿದ್ದನ್ನೇ ಹೇಳುವುದನ್ನು ಆನಂದಿಸುತ್ತಿದ್ದೇನೆ ಹಾಗೂ ಪ್ರೀತಿಸುತ್ತಿದ್ದೇನೆ.
ನಾಗ- ದೇವರ ಸೇವೆ...
ತಮ್ಮ ಪೂರ್ವಿಕರ ನೆಲ, ವಿಶೇಷವಾಗಿ ಇಲ್ಲಿ ಪ್ರಾರ್ಥಿಸಿದ ಬಳಿಕ ಹುಟ್ಟಿದ ಮಗಳು ಅಲೈಕಾ .. ಈ ಕಾರಣಗಳಿಂದ 2007 ರ ಬಳಿಕ ನಿರಂತರ ಕರ್ವಾಲು ದೇವಳಕ್ಕೆ ವರ್ಷಕ್ಕೊಂದು ಬಾರಿ ಭೇಟಿ ಕೊಟ್ಟು ಸೇವೆ ಸಲ್ಲಿಸುತ್ತಿರುವ ರವಿಶಾಸ್ತ್ರಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಕರ್ವಾಲಿನ ನಾಗ- ದೇವರ ಸನ್ನಿಧಿಗೆ ಅಪರಾಹ್ನ 12.30 ರ ವೇಳೆ ಉಡುಪಿಯ ವಾದಿರಾಜ ಪೆಜತ್ತಾಯ ಅವರ ಜತೆಗೆ ಆಗಮಿಸಿ ಸುಮಾರು ಒಂದೂವರೆ ಗಂಟೆಗಳ ಅವಧಿ ಕಳೆದರು.
ದೇವಸ್ಥಾನದಲ್ಲಿ ಸೇವಾ ಸಂಕಲ್ಪ, ಮಹಾಗಣಪತಿ, ಜಲದುರ್ಗೆಗೆ ಹೂವಿನ ಪೂಜೆ ಬಳಿಕ ಕುಟುಂಬದ ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆ ಸಹಿತ ಕಲ್ಪೋಕ್ತ ಪೂಜೆ, ಬಳಿಕ ವಿಷ್ಣು ಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ರವಿಶಾಸ್ತ್ರಿ ಅವರ ಸಹೋದರ ಮಂಗಳೂರಿನ ಡಾ.ಸಂತೋಷ್ ಶಾಸ್ತ್ರಿ, ಅತ್ತಿಗೆ ಕವಿತಾ ಶಾಸ್ತ್ರಿ ವಿಶ್ವಜಿತ್, ನರಸಿಂಹ ತಂತ್ರಿ, ದೇವಳದ ಆಡಳಿತ ಮೊಕ್ತೇಸರ ಕೆ.ಅನಂತ ಪಟ್ಟಾಭಿರಾವ್ , ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜಶೆಟ್ಟಿ ಮಠದ ಬೆಟ್ಟು, ಉಪಾಧ್ಯಕ್ಷ ಸುಧಾಕರ ಹೆಗ್ಡೆ,ಜತೆ ಕಾರ್ಯದರ್ಶಿ ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
"ವಾಯ್ಸ್ ಆಫ್ ವರ್ಲ್ಡ್ ಕ್ರಿಕೆಟ್ " ಗೌರವ!
ದೇವರ ದಯೆ ಮತ್ತು ಕಠಿಣ ಪರಿಶ್ರಮದಿಂದ ರವಿಶಾಸ್ತ್ರಿ ಭಾರತೀಯ ಕ್ರಿಕೆಟಿಗ, ಕಪ್ತಾನ, ಕೋಚ್, ನಿರ್ದೇಶಕ, ಕಮೆಂಟೇಟರ್ ಹೀಗೆ ಜನಪ್ರಿಯತೆಯೊಂದಿಗೆ ಬೆಳೆದಿದ್ದಾರೆ. ಕರ್ವಾಲಿಗೆ ಬಂದು ಹೋದಂತೆಲ್ಲ ಪ್ರತೀ ಬಾರಿ ಅವರು ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬಿಸಿಸಿಐ ಕಾರ್ಯದರ್ಶಿ, ಅಧ್ಯಕ್ಷ ಮಾತ್ರವಲ್ಲ ಐಸಿಸಿ ಅಧ್ಯಕ್ಷರಾಗುವಂತಾಗಲಿ ಎಂದು ಪೂಜೆ, ವೈದಿಕ ಕಾರ್ಯ ನೆರವೇರಿಸಿದ ಅಶೋಕ್ ಕಾರಂತ್ ತಮ್ಮ ಪ್ರಾರ್ಥನಾ ನುಡಿಗಳಲ್ಲಿ ಶುಭ ಕೋರಿದರು. ರವಿಶಾಸ್ತ್ರಿ ಅವರು " ವಾಯ್ಸ್ ಆಫ್ ಇಂಡಿಯನ್ ಕ್ರಿಕೆಟ್" ಆಗಿರುವುದು ನಮ್ಮೆಲ್ಲರ ಹೆಮ್ಮೆ. ಅವರನ್ನೀಗ ವಾಯ್ಸ್ ಆಫ್ ವರ್ಲ್ಡ್ ಕ್ರಿಕೆಟ್ " ಎಂದು ಗುರುತಿಸಿ ಗೌರವಿಸಲು ಸಂತಸವಾಗುತ್ತಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಕೆ.ಅನಂತ ಪಟ್ಟಾಭಿರಾವ್ ಅಭಿನಂದನಾ ಮಾತುಗಳನ್ನಾಡಿ ರವಿಶಾಸ್ತ್ರಿ ಅವರ ವೃತ್ತಿ ಜೀವನದ ಬೆಳವಣಿಗೆಯಲ್ಲಿ ಕರ್ವಾಲು ಸನ್ನಿಧಿಯ ಅನುಗ್ರಹ ವಿಶೇಷವಾಗಿದೆ. ನಮ್ಮೂರಿನ ಸಾಧಕ ಜಾಗತಿಕ ಕ್ರಿಕೆಟಿನ ಹೆಮ್ಮೆಯ ಸಾಧಕರಾಗಿ ಬೆಳೆದಿರುವುದು ಅಭಿಮಾನ ಮೂಡಿಸಿದೆ ಎಂದರು. ದೇವಳದ ವತಿಯಿಂದ ರವಿಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ನೆನಪಾದರು ಅಣ್ಣಾಮಲೈ...
ಬಂಧುಗಳ ಜತೆ ಮಾತನಾಡುತ್ತಾ ಚುನಾವಣೆಯ ವಿಷಯ, ಅಣ್ಣಾಮಲೈ ಅವರು ರಾಜಕೀಯಕ್ಕೆ ಬಂದಿರುವ ವಿಷಯ ತಿಳಿದು ಪುಳಕಿತರಾದ ರವಿಶಾಸ್ತ್ರಿ 2014ರಲ್ಲಿ ಕಾರ್ಕಳ ಎಎಸ್ಪಿ ಅಗಿದ್ದ ಅಣ್ಣಾಮಲೈ ಅವರನ್ನು ಸನ್ಮಾಸಿಸಿದ ಕ್ಷಣವನ್ನು ನೆನಪಿಸಿಕೊಂಡರು. ಕರ್ವಾಲು ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಣ್ಣಾಮಲೈ ಸಿಕ್ಕಿದ್ದರು. ಈಗ ಅವರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉನ್ನತಮಟ್ಟಕ್ಕೆ ಏರಿರುವುದು ಖುಷಿ ತಂದಿದೆ ಎಂದರು.
ಪ್ರತೀ ಬಾರಿ ತನ್ನ ಭೇಟಿಯಲ್ಲಿ ಜತೆಗಿರುತ್ತಿದ್ದ ಇದೇ ಕರ್ವಾಲಿನವರಾದ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ನೆನಪಿಸಿಕೊಂಡು ಕೊಂಚ ಭಾವುಕರಾದ ರವಿಶಾಸ್ತ್ರಿ ಮಿತ್ರನನ್ನು ಕಳೆದುಕೊಂಡ ನೋವಿದೆ. ಹಾಗಾಗಿ ಇಲ್ಲಿ ಊಟೋಪಚಾರ ಬೇಡವೆಂದಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಪರಿವಾರವನ್ನೂ ಕರೆದುಕೊಂಡು ಬರುವುದಾಗಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಆದರೂ ಒತ್ತಾಯಕ್ಕೆ ಕರಾವಳಿಯ ಬಿಸ್ಕುಟ್ ಅಂಬಡೆ, ಶೀರ, ಮಾಲ್ಟ್ ಸವಿದು ಉಡುಪಿ ಪುತ್ತಿಗೆ ಮಠಾಧೀಶರ ಭೇಟಿಗೆ ನಿರ್ಗಮಿಸಿದರು.
ಎರಡು ದಿನಗಳ ಕರಾವಳಿ ಭೇಟಿಯಲ್ಲಿ ರವಿಶಾಸ್ತ್ರಿ ಕೊಲ್ಲೂರು,ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿ ಬುಧವಾರ ನಿರ್ಗಮಿಸಲಿದ್ದಾರೆ.
ಮರೆಯಲಾಗದ ತವರ ನೆಲ!
ರವಿಶಾಸ್ತ್ರಿಯವರ ಪೂರ್ವಜರು ಕಾರ್ಕಳ ಎರ್ಲಪಾಡಿಯವರು ಐವತ್ತರ ದಶಕದಲ್ಲಿ ರವಿಶಾಸ್ರಿಯವರ ಅಜ್ಜ ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು . ಬಳಿಕ ರವಿಶಾಸ್ತ್ರಿಯವರ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ ನಲ್ಲಿ ಶಿಕ್ಷಣ ಮುಗಿಸಿ ಮುಂಬೈನಲ್ಲಿ ವೈದ್ಯರಾಗಿ ನೆಲೆಸಿದಾಗ ಅಲ್ಲೆ ಹುಟ್ಟಿ ಬೆಳೆದ ರವಿ ಶಾಸ್ತ್ರೀ ಕ್ರಿಕೆಟಿಗರಾಗಿ ಗುರುತಿಸಿಕೊಂಡರು.
ಮದುವೆಯಾಗಿ 18 ವರ್ಷಗಳ ಬಳಿಕ ಸಂತಾನ ಭಾಗ್ಯವಿಲ್ಲ ಎಂಬ ಕೊರಗಿನ ಮಧ್ಯೆ ತವರು ನೆಲದ ನಾಗ- ದೇವರು, ದುರ್ಗೆಯ ಸನ್ನಿಧಿಯಲ್ಲಿ ಸೇವೆ ಕೊಡಬೇಕು ಎಂಬ ಸಲಹೆ ಜೋತಿಷ್ಯರಿಂದ ಸಿಕ್ಕಿತು. ಕೂಡಲೇ 2007ರಲ್ಲಿ ರವಿಶಾಸ್ತ್ರಿ ಪತ್ನಿ ಸಮೇತ ಸ್ಥಳಕ್ಕೆ ಭೇಟಿ ನೀಡಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ವರ್ಷದೊಳಗೆ ಪುತ್ರಿ ಅಲೈಕಾ ಜನನ ಅವರಿಗೆ ಅವಿಸ್ಮರಣೀಯ ಸಂತಸ ನೀಡಿತ್ತು. ಕೋವಿಡ್ ಲಾಕ್ ಡೌನ್ ಹಿನ್ನೆಲೆ ಹಾಗೂ ವಲ್ಡ್ ಕಪ್ ಒತ್ತಡಗಳಿಂದ ಮೂರು ವರ್ಷ ಬರಲಾಗದ್ದು ಬಿಟ್ಟರೆ ವರ್ಷವೂ ರವಿಶಾಸ್ತ್ರಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ