ನಾವು ಚಿಕ್ಕವರಿದ್ದಾಗಿನಿಂದಲೂ ಈಗಿನ ವರೆಗೂ ಪ್ರಾಮಾಣಿಕತೆ ಎಂಬ ಶಬ್ಧವನ್ನು ಕೇಳಿಯೇ ಇರುತ್ತೇವೆ. ಮುಂದೆಯೂ ಆಗಾಗ ಕೇಳುತ್ತಿರುತ್ತೇವೆ ಮತ್ತು ಹೇಳುತ್ತಿರುತ್ತೇವೆ. ಪ್ರಾಮಾಣಿಕತೆ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ ಭಾವನೆ. ಇದು ನಮ್ಮ ನಂಬಿಕಾರ್ಹ ನಡವಳಿಕೆಯನ್ನು ತೋರಿಸುತ್ತದೆ. ಪ್ರಾಮಾಣಿಕತೆ ಎಂಬುದು ವಿಶ್ವಾಸಾರ್ಹ ನಡತೆ. ಋಜುತ್ವ, ಸತ್ಯಸಂಧತೆ, ನಡತೆಯ ಸಾಚಾತನ, ಸಕಾರಾತ್ಮಕ ಹಾಗೂ ನೀತಿಯುತ ಗುಣಗಳೆಂಬ ಅರ್ಥ ಹೊಂದಿದೆ. ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಮೋಸ ಮಾಡುವುದು, ಯಾಮಾರಿಸುವುದು, ನಂಬಿಕೆ - ದ್ರೋಹ ಬಗೆಯುವುದು, ನಿಂದಿಸುವುದು, ಹಿರಿಯರನ್ನು ಗೌರವಿಸದಿರುವುದು ಈ ಎಲ್ಲಾ ಗುಣಗಳು ಪ್ರಾಮಾಣಿಕತೆಗೆ ವಿರುದ್ಧವಾದುವು. ಹಾಗಾದರೆ ಪ್ರಾಮಾಣಿಕತೆಯ ಮುಖ್ಯ ಗುಣಗಳೆಂದರೆ: ಪ್ರಾಮಾಣಿಕ ವ್ಯಕ್ತಿಯಾಗಿರುವವನು ಸುಳ್ಳು ಹೇಳುವುದಿಲ್ಲ, ಮೋಸಮಾಡುವುದಿಲ್ಲ, ಕಳ್ಳತನದ ಗುಣ ಹೊಂದಿರುವುದಿಲ್ಲ. ಮತ್ತೊಬ್ಬರ ವಸ್ತುವಿಗೆ ಆಸೆ ಪಡುವುದಿಲ್ಲ. ಪ್ರಾಮಾಣಿಕ ವ್ಯಕ್ತಿಯು ನಿಷ್ಠಾವಂತನಾಗಿಯೂ, ನಿಷ್ಪಕ್ಷಪಾತವಾಗಿಯೂ ಮತ್ತು ನಿಷ್ಕಪಟವಾಗಿಯೂ ಇರುತ್ತಾನೆ. ಪ್ರಾಮಾಣಿಕತೆ ತನ್ನದೇ ಆದ ಮೌಲ್ಯವನ್ನು ಹೊಂದಿರುತ್ತದೆ. ಪ್ರಾಮಾಣಿಕತೆಯು ಸಕಾರಾತ್ಮಕ ಅಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸುತ್ತದೆಯೋ ಅಷ್ಟೇ ನಿಷ್ಠುರವಾಗಿ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಪ್ರಾಮಾಣಿಕತೆಗೆ ಭಯ ಎಂಬುದೇ ಇರುವುದಿಲ್ಲ. ಪ್ರಾಮಾಣಿಕತೆಯು ಆಡಂಬರವಿಲ್ಲದ, ಸೌಶೀಲ್ಯ ಗುಣಗಳ ನ್ಯಾಯಯುತವಾದ, ವಂಚನೆಯಿಂದ ಮುಕ್ತವಾದ ನಡತೆ ಎಂದೂ ಹೇಳಬಹುದು. ವಾಸ್ತವಿಕತೆಗೆ ಬದ್ಧವಾಗಿರುವುದೂ ಕೂಡ ಪ್ರಾಮಾಣಿಕತೆಯೆ ಆಗಿದೆ. ಪ್ರಾಮಾಣಕತೆ ವಿಚಾರದ ಕುರಿತಂತೆ ಶಾಲೆಯಲ್ಲಿ ನನಗೆ ಶಿಕ್ಷಕರು ಹೇಳಿದ ಕಥೆಗಳ ಉದಾಹರಣೆಗಳನ್ನು ನೀಡಬಯಸುತ್ತೇನೆ.
ಗಾಂಧೀಜಿ ಚಿಕ್ಕ ಹುಡುಗನಿದ್ದಾಗ ಅವರನ್ನು ಮೋಹನ್ ಎಂದು ಕರೆಯಲಾಗುತ್ತಿತ್ತು. ಒಂದು ದಿನ ಅವರ ಶಾಲೆಗೆ ಶ್ರೀ. ಗಿಲೆಸ್ ಎಂಬ ಸ್ಕೂಲ್ ಇನ್ಸೆಕ್ಟರ್ ಬಂದು, ಮೋಹನ್ ಓದುತ್ತಿದ್ದ ತರಗತಿಯ ಮಕ್ಕಳನ್ನು ಪರೀಕ್ಷಿಸಿದರು. ಇನ್ಸ್ಪೆಕ್ಟರ್ ಮೊದಲು ಐದು ಇಂಗ್ಲಿಷ್ ಪದಗಳನ್ನು ಓದಿದರು. ನಂತರ ಮಕ್ಕಳಿಗೆ ಆ ಪದಗಳನ್ನು ಬರೆಯುವಂತೆ ಹೇಳಿದರು. ಮೋಹನ್ ನಾಲ್ಕು ಪದಗಳನ್ನು ಸರಿಯಾಗಿ ಬರೆದನು, ಅವನಿಗೆ “ kettle ” ಎಂಬ ಪದದ ಸ್ಪೆಲ್ಲಿಂಗ್ ಬರೆಯಲು ತಿಳಿದಿರಲಿಲ್ಲ. ಅವನ ಗೊಂದಲ ಮತ್ತು ಹಿಂಜರಿಕೆಯನ್ನು ಗಮನಿಸಿದ ಶಿಕ್ಷಕರು ಅವನ ಪಕ್ಕದಲ್ಲಿ ಇದ್ದ ಹುಡುಗನ ಸ್ಲೇಟಿನಿಂದ ನಕಲು ಮಾಡುವಂತೆ ಸನ್ನೆ ಮಾಡಿದರು. ಆದರೆ ಮೋಹನ್ ಇದನ್ನು ಕಡೆಗನಿಸಿದನು. ಮಿಕ್ಕಿದ್ದ ಹುಡುಗರು ಎಲ್ಲಾ ಪದಗಳನ್ನು ಸರಿಯಾಗಿ ಬರೆದಿದ್ದರು. ಮೋಹನ್ ನಾಲ್ಕು ಪದಗಳನ್ನು ಮಾತ್ರ ಬರೆದನು. ಇಸ್ಪೆಕ್ಟರ್ ಶಾಲೆಯಿಂದ ತೆರಳಿದ ನಂತರ ಶಿಕ್ಷಕರು ಅವನನ್ನು ಬೈದರು, “ ನಾನು ನಿನ್ನ ಪಕ್ಕದಲ್ಲಿ ಇದ್ದ ಹುಡುಗನನ್ನು ನೋಡಿ ಬರೆಯಲು ಹೇಳಿದೆನು ” “ ನಿನಗೆ ಇದನ್ನು ಕೂಡ ಮಾಡಲು ಸಾಧ್ಯವಿಲ್ಲವೆ? ” ಎಂದು ಕೋಪದಿಂದ ಹೇಳಿದರು. ಅದಕ್ಕೆ ಮೋಹನ್ , " ಕ್ಷಮಿಸಿ ಸರ್, ನನ್ನ ತಾಯಿ ಬೇರೋಬ್ಬರಿಂದ ಏನನ್ನೂ ಕದಿಯಬಾರದೆಂದೂ, ಯಾವಾಗಲೂ ಪ್ರಾಮಾಣಿಕತೆಯಿಂದ ಇರಬೇಕೆಂದು ಹೇಳಿದ್ದಾರೆ. ಆದ್ದರಿಂದ ನನಗೆ ಪಕ್ಕದ ಹುಡುಗನಿಂದ ನಕಲು ಮಾಡಲು ಸಾಧ್ಯವಾಗಲಿಲ್ಲ " ಎಂದು ಹೇಳಿದನು. ಶಿಕ್ಷಕರು ಗಾಂಧೀಜಿಯ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದರು.
ಭಾರತದ ಇತಿಹಾಸದಲ್ಲಿ ಪ್ರಸಿದ್ಧ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಮಹಾ ಬುದ್ದಿವಂತ, ಅಷ್ಟೇ ಅಲ್ಲ, ವೃತ್ತಿಯಲ್ಲಿ ಪ್ರಾಮಾಣಿಕ ಕೂಡ. ಒಮ್ಮೆ ಚಂದ್ರಗುಪ್ತ ಹಾಗೂ ಚಾಣಕ್ಯ ಜನರ ಕಷ್ಟ- ಸುಖವನ್ನು ತಿಳಿಯಲು ರಾತ್ರಿ ಹೊತ್ತು ವೇಷ ಬದಲಾಯಿಸಿಕೊಂಡು ಸಂಚಾರ ಹೊರಟರು. ಅದು ಚಳಿಗಾಲವಾದ್ದರಿಂದ ಬಹಳ ಚಳಿಯಿತ್ತು. ಬಡಜನ ಚಳಿಯಿಂದ ನಡುಗುತ್ತಿರುವುದನ್ನು ನೋಡಿದ ರಾಜ ಚಂದ್ರಗುಪ್ತ ಮೌರ್ಯನು ಚಾಣಕ್ಯನಿಗೆ ಹೀಗೆಂದು ಹೇಳಿದನು. " ಗುರುಗಳೇ, ಬಡಜನರು ಹೊದಿಕೆ ಇಲ್ಲದೆ ಚಳಿಯಲ್ಲಿ ನಡುಗುತ್ತಿದ್ದಾರೆ. ಇವರಿಗೆ ಕಂಬಳಿ ಕೊಡುವ ವ್ಯವಸ್ಥೆ ಆಗಬೇಕು." ಎಂದು ಹೇಳಿದನು. ರಾಜನ ಆದೇಶದಂತೆ ಕಂಬಳಿಗಳು ಸಿದ್ಧವಾದವು. ಎಲ್ಲಾ ಕಂಬಳಿಗಳನ್ನು ಚಾಣಕ್ಯನ ಮನೆಯಲ್ಲಿ ಇಡಲಾಯಿತು. ಚಾಣಕ್ಯನ ಮನೆ ಬಹಳ ಚಿಕ್ಕದಾಗಿದ್ದು , ಅದರಲ್ಲಿಯೇ ಒಂದು ಕಡೆ ಗೋಡೆಯ ಮೂಲೆಗೆ ಜೋಡಿಸಲಾಗಿತ್ತು. ಇದನ್ನು ಗಮನಿಸಿದ ಕಳ್ಳರು ರಾತ್ರಿ ಚಾಣಕ್ಯನ ಮನೆಗೆ ನುಗ್ಗಿ ಕಂಬಳಿಗಳನ್ನು ಕದಿಯಬೇಕೆಂದು ಯೋಚಿಸಿದರು. ಆ ದಿನ ರಾತ್ರಿಯೇ ಚಾಣಕ್ಯನ ಮನೆ ಪ್ರವೇಶಿಸಿದ ಕಳ್ಳರಿಗೆ ಕಾಣಿಸಿದ್ದು ಒಂದೆಡೆ ಜೋಡಿಸಿಟ್ಟ ಕಂಬಳಿಗಳು, ಮತ್ತು ಅಲ್ಲೇ ಸ್ವಲ್ಪ ದೂರದಲ್ಲಿ ಚಾಣಕ್ಯ ಮತ್ತು ಅವನ ತಾಯಿ ಹರಕು ಕಂಬಳಿ ಹೊದ್ದು ಮುದುರಿ ಮಲಗಿದ್ದನ್ನು ನೋಡಿದ ಕಳ್ಳರಿಗೆ ಆಶ್ಚರ್ಯವಾಯಿತು. ಕಂಬಳಿಗಳ ರಾಶಿಯೇ ತನ್ನ ಮನೆಯಲ್ಲಿ ಇದ್ದರೂ ಚಾಣಕ್ಯ ಮತ್ತು ಅವನ ತಾಯಿ ಅದನ್ನು ಹೊದೆಯದೆ, ಹರಕು ಕಂಬಳಿಯನ್ನು ಹೊದ್ದು ಚಳಿಯಲ್ಲಿ ಮುದುಡಿ ಮಲಗಿದ್ದಾರಲ್ಲ ಎಂದು ಯೋಚಿಸಿದ ಕಳ್ಳರಿಗೆ ತಾವು ಬಂದ ಉದ್ದೇಶವೇ ಮರೆತು ಹೋಯಿತು. ಏಕೆ ಹರಿದ ಕಂಬಳಿ ಹೊದ್ದು ಮುದುಡಿ ಮಲಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಳ್ಳರ ಯಜಮಾನ ಚಾಣಕ್ಯನನ್ನು ಎಬ್ಬಿಸಿ " ಅಯ್ಯಾ, ನಿಮ್ಮ ಮನೆಯಲ್ಲಿ ಕಂಬಳಿ ರಾಶಿಯೇ ಇದೆ, ಆದರೂ ನೀವಿಬ್ಬರೂ ಹರಿದ ಕಂಬಳಿ ಹೊದ್ದು ಚಳಿಯಿಂದ ಮುದುಡಿ ಮಲಗಿದ್ದೀರಲ್ಲಾ, ಇದಕ್ಕೆ ಕಾರಣವೇನು?' ಎಂದು ಹೇಳಿದ. ಆಗ ಚಾಣಕ್ಯ " ಅಯ್ಯಾ ಯಜಮಾನ, ಈ ಕಂಬಳಿಗಳಲ್ಲಿ ಒಂದೇ ಒಂದನ್ನು ಹೊದ್ದು ಮಲಗಿದರೂ ನಾನೂ ನಿಮ್ಮಂತೆಯೇ ಆಗಿ ಬಿಡುತ್ತೇನಲ್ಲಾ' ಎಂದ. ಈ ಮಾತು ಕಳ್ಳರ ಯಜಮಾನನಿಗೆ ಅರ್ಥವಾಗಲಿಲ್ಲ. ನೋಡಿ, ನನ್ನ ಬಳಿ ಹರಿದ ಕಂಬಳಿಯಾದರೂ ಇದೆ. ಮಹಾರಾಜರು ಏನೂ ಇಲ್ಲದವರಿಗೆಂದು ಕಳಿಸಿರುವ ಕಂಬಳಿಗಳನ್ನು ಕದ್ದು ಹೊದ್ದು ನಾನೂ ಕಳ್ಳನಾಗಲೇ?' ಎಂದ. ಇದನ್ನು ಕೇಳಿದ ಕಳ್ಳರಿಗೆ ತಮ್ಮ ತಪ್ಪಿನ ಅರಿವಾಯಿತು. ಕಳ್ಳತನದಿಂದ ಬೇರೆಯವರಿಗೆ ತೊಂದರೆ ಆಗುತ್ತದೆ ಎಂಬ ಅರಿವು ನಮಗೆ ಬಾರದೆ ಹೋಯಿತಲ್ಲ ಎಂದು ಪಶ್ಚಾತಾಪ ಪಟ್ಟರು. ಚಾಣಾಕ್ಯನು ಕಳ್ಳರನ್ನು ಉದ್ದೇಶಿಸಿ, " ಚಿಂತಿಸಬೇಡಿ, ಪಶ್ಚಾತ್ತಾಪದಿಂದ ಪಾಪಿಯೂ ಪರಮನಾಗುತ್ತಾನೆ. ಇನ್ನು ಮುಂದೆ ನೀವ್ಯಾರೂ ಕಳ್ಳತನ ಮಾಡಬೇಡಿ ಎಂದು ಬುದ್ಧಿವಾದ ಹೇಳಿದನು." ಚಾಣಕ್ಯನ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಅವರೆಲ್ಲ ಚಾಣಕ್ಯನಿಗೆ 'ನೀವು ನಮ್ಮ ಕಣ್ಣು ತೆರೆಸಿದಿರಿ, ಇನ್ನು ಮುಂದೆ ನಾವು ಕಳ್ಳತನ ಮಾಡುವುದಿಲ್ಲ. ಕಷ್ಟಪಟ್ಟು ದುಡಿದು ಬದುಕುತ್ತೇವೆ ಎಂದು ನಮಸ್ಕರಿಸಿ ಹೊರಟು ಹೋದರು. ಇದಕ್ಕೆ ಹೇಳೂದು ಅನ್ನಿಸುತೆ . HONESTY IS THE BEST POLICY ಎಂದು. ಸತ್ಯ ಹರಿಶ್ಚಂದ್ರ, ಗೋಪಾಲಕೃಷ್ಣ ಗೋಖಲೆ, ಲಾಲ್ ಬಹಾದ್ದೂರ್ ಶಾಸ್ತ್ರಿ, ಗುಲ್ಜಾರಿಲಾಲ್ ನಂದ ಮುಂತಾದ ನಾಯಕರನ್ನು ಪ್ರಾಮಾಣಿಕತೆಗೆ ಹೆಸರಿಸಬಹುದು.
ಪ್ರಾಮಾಣಿಕತೆಯು ವ್ಯಕ್ತಿಗೆ ಸಮಾಜದಲ್ಲಿ ಒಂದು ಉತ್ತಮ ಗೌರವದ ಸ್ಥಾನವನ್ನು ನೀಡುವಂತೆ ಪ್ರೇರೇಪಿಸುತ್ತದೆ. ಜನರ ನಂಬಿಕೆಗೆ ಪಾತ್ರನಾಗಿ ಜನಪ್ರಿಯನಾಗುತ್ತಾನೆ. ಪ್ರಾಮಾಣಿಕನಾದ ವ್ಯಕ್ತಿ ನಿಷ್ಠುರವಾದಿಯಾದರೂ ನಿಷ್ಠಾವಂತನಾಗಿರುತ್ತಾನೆ. ತನ್ನ ಕೆಲಸಗಳಿಂದ ಆತ್ಮ ಸಂತೃಪ್ತಿಯನ್ನು ಹೊಂದುತ್ತಾನೆ. ಪ್ರಾಮಾಣಿಕತೆಯು ವ್ಯಕ್ತಿಗೆ ಧೈರ್ಯ, ಛಲ, ನಂಬಿಕೆ, ವಿಶ್ವಾಸ, ಶ್ರದ್ಧೆ ಮತ್ತು ನಿಷ್ಠೆಗಳನ್ನು ಕಲಿಸುತ್ತದೆ. ಪ್ರಾಮಾಣಿಕತೆಯು ಸತ್ಯ, ಶಿಸ್ತು, ಸಂಯಮ, ಸದ್ಗುಣ ಮತ್ತು ಸ್ವಾತಂತ್ರ್ಯವನ್ನು ಮೂಡಿಸುತ್ತದೆ. ಈ ಎಲ್ಲಾ ಗುಣಗಳನ್ನು ಮತ್ತು ಗುಣವಂತರನ್ನು ಮಾದರಿಯಾಗಿಟ್ಟುಕೊಂಡು ನಾವೂ ಪ್ರಾಮಾಣಿಕತೆಯ ಬದುಕನ್ನು ನಗುನಗುತ್ತಾ ಸಾಗಿಸೋಣ.
-ಕೆ. ಎನ್. ಚಿದಾನಂದ . ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ