ಮಂಗಳೂರು: ವಾರ್ಷಿಕೋತ್ಸವ ಕಾಲೇಜಿನ ಸಂಪ್ರದಾಯ ಮತ್ತು ಸಡಗರ. ಹಾಗಾಗಿಯೇ ಇದನ್ನು ಉತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ. ಇಂದಿನ ಕಾಲದಲ್ಲಿ ಬಹುತೇಕ ವಿದ್ಯಾರ್ಥಿಗಳು ಒತ್ತಡದಿಂದ ಬಳಲುತ್ತಿರುವುದು ವಿಪರ್ಯಾಸ. ಒತ್ತಡ ನಿವಾರಿಸುವ ಕೆಲಸವನ್ನು ವಾರ್ಷಿಕೋತ್ಸವ ಮಾಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ವೈ. ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ 119ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಮುಂದಿನ ಪಯಣದ ಕುರಿತು ಗೊಂದಲಗಳಿರುವು ದರಿಂದ ಒತ್ತಡ ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ವಿನೋದ ಇಲ್ಲದಿದ್ದರೆ ಒತ್ತಡ ಉಂಟಾಗುತ್ತದೆ. ದೈನಂದಿನ ಕೆಲಸ ಅದೇ ದಿನ ಪೂರ್ಣಗೊಳಿಸಿದರೆ ಒತ್ತಡ ಇರುವುದಿಲ್ಲ. ಸ್ಪರ್ಧಾ ಜಗತ್ತಿನಲ್ಲಿ ಗುರಿ ಸಾಧಿಸಲು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಪ್ರತಿ ಸಾಧನೆಯ ಹಿಂದೆ ವಿದ್ಯಾಸಂಸ್ಥೆಗಳ ಪ್ರಯತ್ನವಿರುತ್ತದೆ. ಹಾಗಾಗಿ ಸಂಸ್ಥೆಯ ಕೀರ್ತಿ ಹೆಚ್ಚಿಸುವ ಕೆಲಸ ಮಾಡಿ. ತಾಂತ್ರಿಕ ಬೆಳವಣಿಗೆಗಳಿಂದ ತತ್ತರಿಸದೆ, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು. ನನಗೆ ಬದುಕನ್ನು ಕಲಿಸಿಕೊಟ್ಟದ್ದು ಈ ಕಾಲೇಜು. ಕಾಲೇಜು ಮಟ್ಟದ ಸ್ಪರ್ಧೆಗಳಿಂದ ಆರಂಭವಾದ ಕಲಾ ಜೀವನ ವಿಶ್ವವೇ ನನ್ನತ್ತ ತಿರುಗಿ ನೋಡುವಂತೆ ಮಾಡಿತು. ಅಂದು ವೇದಿಕೆ ಕೆಳಗಿದ್ದೆ; ಆದರೆ ಇಂದು ವೇದಿಕೆ ಮೇಲೆ ಇರುವಂತೆ ಮಾಡಿದ್ದು ಈ ವಿದ್ಯಾಸಂಸ್ಥೆ. ಶಿಕ್ಷಣದ ಜೊತೆಗೆ ಉತ್ತಮ ನಡವಳಿಕೆ ಕಲಿಸುವಲ್ಲಿ ಎಂದಿಗೂ ಈ ಸಂಸ್ಥೆ ಸಾಕ್ಷಿಯಾಗಿದೆ. ಸಂಗೀತದ ಗೀಳು ಹತ್ತಿಸಿದ ಈ ಕಾಲೇಜು ಸಂಗೀತ ಬದುಕಿನ ಮೊದಲ ಗುರು. ಬದುಕಿನಲ್ಲಿ ವೈಯಕ್ತಿಕ ಆಸಕ್ತಿ ಕಡೆಗೆ ಹೆಚ್ಚು ಗಮನ ಹರಿಸಿ. ಸಾಧನೆಯತ್ತ ಮುಖ ಮಾಡಿ ಎಂದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವಿತ್ ಗಟ್ಟಿ, ಈ ಸಂಸ್ಥೆಯು ಅನೇಕ ಸಾಧಕರಿಗೆ ಸಾಧನೆಯ ದಾರಿ ಕಲ್ಪಿಸಿದೆ. ಅನೇಕ ಸಂಘಗಳು ಕಾಲೇಜಿನ ಕೀರ್ತಿ ಹೆಚ್ಚಿಸಿದೆ. ಬೋಧಕರ ವಿದ್ಯಾಶೀರ್ವಾದ ವಿದ್ಯಾರ್ಥಿಗಳ ಬದುಕಿಗೆ ನಿರಂತರ ದಾರಿ ದೀಪ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಹಕಾರವನ್ನು ನೆನೆದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ಅಲ್ಲದೇ, ಕ್ರೀಡಾ ವಿಭಾಗದ ವತಿಯಿಂದ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್, ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಶಿವಪ್ರಸಾದ್ ರೈ, ಸಹ ಕಾರ್ಯದರ್ಶಿ ಪ್ರಗತಿ, ಲಲಿತ ಕಲಾ ಸಂಘದ ಕಾರ್ಯದರ್ಶಿ ವಿಕಾಸ್ ರಾಜ್, ಸಹ ಕಾರ್ಯದರ್ಶಿ ಕೇಸರಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ