ಉಜಿರೆ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಶನಿವಾರ ಧರ್ಮಸ್ಥಳಕ್ಕೆ ಬಂದಾಗ ಅವರಿಗೆ ಪ್ರವೇಶದ್ವಾರದಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಡಿ. ಹರ್ಷೇಂದ್ರಕುಮಾರ್ ಸಚಿವರುಗಳನ್ನು ಸ್ವಾಗತಿಸಿದರು. ಬಳಿಕ ದೇವರದರ್ಶನ ಮಾಡಿ, ವಿಶೇಷಪೂಜೆ ಸಲ್ಲಿಸಿ, ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದೆಲ್ಲೆಡೆ ಸಕಾಲದಲ್ಲಿ ಮಳೆಯಾಗಿದೆ. ಒಳ್ಳೆಯ ಬೆಳೆಯೂ ಆಗಿ ರಾಜ್ಯದ ಸಮಸ್ತ ಜನರಿಗೆ ಕಲ್ಯಾಣವಾಗಿ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸಲು ಧರ್ಮಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದರು.
ದೇವಸ್ಥಾನದಲ್ಲಿ ಮಹಿಳೆಯರು ಸರ್ಕಾರದ ವಿವಿಧ ಕಲ್ಯಾಣಕಾರ್ಯಗಳ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಶೇಷವಾಗಿ ಮಾಸಿಕ ಕೊಡುವ 2000/- ನೆರವಿನ ಬಗ್ಯೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ವೀರೇಂದ್ರ ಹೆಗ್ಗಡೆಯವರು ಕೂಡಾ ಸರ್ಕಾರದ ಪ್ರಗತಿಪರ ಯೋಜನೆಗಳ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು ಎಂದು ಅವರು ಹೇಳಿದರು.
ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ ಮತ್ತು ಕೆ. ಅಭಯಚಂದ್ರ ಜೈನ್, ಶಾಸಕ ಅಶೋಕ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿಯ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್, ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿ ಸಚಿವರುಗಳು ಮಂಗಳೂರಿಗೆ ಪ್ರಯಾಣ ಬೆಳೆಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ