ಏಪ್ರಿಲ್ 18 : ವಿಶ್ವ ಪರಂಪರೆಯ ದಿನ
ಜಾಗತಿಕ ಇತಿಹಾಸವು ಪರಂಪರೆಯ ಆಗರ. ಪ್ರಪಂಚದ ಪ್ರತೀ ಜೀವಿಯೂ ತನ್ನದೇ ಪರಂಪರೆಯನ್ನು ಹೊಂದಿದೆ. ಅಂತಹ ಜೀವಿಗಳಲ್ಲಿ ಮಾನವ ಜೀವಿಯ ಪರಂಪರೆ ಮಾತ್ರ ವಿಶಿಷ್ಠವಾಗಿ, ವಿಭಿನ್ನವಾಗಿ ಹಾಗೂ ವೈವಿಧ್ಯಮಯವಾಗಿದೆ. ಪ್ರತಿ ವರ್ಷ ಏಪ್ರಿಲ್ 18 ರಂದು, ವಿಶ್ವ ಪರಂಪರೆಯ ದಿನ ಎಂದು ಆಚರಿಸಲಾಗುತ್ತದೆ. ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳ ಸಂರಕ್ಷಣೆಯ ದೃಷ್ಟಿಯಿಂದ ಒಂದು ವಿಶೇಷ ಅಂತರರಾಷ್ಟ್ರೀಯ ದಿನವನ್ನು ಗುರುತಿಸಲಾಗಿದೆ. ನಾವು ಇಪ್ಪತ್ತೊಂದನೇ ಶತಮಾನದ ಆಧುನಿಕ ವೈಜ್ಞಾನಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ನಾಗಾಲೋಟದ ವೇಗದಲ್ಲಿ ಸರ್ವ ಕ್ಷೇತ್ರಗಳ ಪ್ರಗತಿಯಾಗುತ್ತಿದೆ. ಬದಲಾವಣೆ ಎಂಬುದು ಸಾಮಾನ್ಯ ಸಂಗತಿಯಾಗಿದ್ದು, ಕ್ಷಣ ಕ್ಷಣಕ್ಕೂ ತನ್ನ ವೇಗವನ್ನು ಹೆಚ್ಚಿಸುತ್ತಿದೆ. ಇಂದು ನಾವೆಲ್ಲರೂ ಬದಲಾಗುತ್ತಿರುವ ಪ್ರಪಂಚಕ್ಕೆ ಹೊಂದಿಕೊಳ್ಳುವ ನೆಪದಲ್ಲಿ ನಮ್ಮ ತನ, ಮನೆ, ಸಂಸ್ಕೃತಿ, ಮೌಲ್ಯಗಳು, ನೀತಿ-ನಿಯಮಗಳು, ರೀತಿ-ರಿವಾಜುಗಳನ್ನು ಮರೆಯುತ್ತಿದ್ದೇವೆ. ಒಮ್ಮೊಮ್ಮೆ ನಿರ್ಲಕ್ಷಿಸುತ್ತಿದ್ದೇವೆ ಎಂದರೂ ತಪ್ಪಾಗಲಾರದು. ನೇರವಾಗಿ ಹೇಳಬೇಕೆಂದರೆ ನಮ್ಮ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಪರಂಪರೆ ಎಂದಾಕ್ಷಣ ಹಲವರಿಗೆ ಹಲವು ರೀತಿಯ ಪ್ರಶ್ನೆಗಳು ಮನದಾಳದಲ್ಲಿ ಮಾಡುತ್ತವೆ. ಇಂದಿನ ಆಧುನಿಕ ಪ್ರಪಂಚದಲ್ಲಿ ವೈಯಕ್ತಿಕ, ಕೌಟಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ನೈತಿಕ, ನೈಸರ್ಗಿಕ, ಮಾನವೀಯ, ಐತಿಹಾಸಿಕ, ಸಾಂಸ್ಕೃತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಅಂದರೆ ನಮ್ಮ ಪಾರಂಪರಿಕ ಮೌಲ್ಯಗಳು ಕಳೆದು ಹೋಗುತ್ತಿವೆ. ಹಾಗಾದರೆ ನಾವೀಗ ಪರಂಪರೆ ಎಂದರೇನು ? ಪರಂಪರೆಗೆ ನಾವೇಕೆ ಮಹತ್ವ ನೀಡಬೇಕು ? ನಾವೇಕೆ ನಮ್ಮ ಪರಂಪರೆಯನ್ನು ರಕ್ಷಿಸಬೇಕು ? ಪರಂಪರೆಯ ಸಂರಕ್ಷಣೆಯಿಂದ ನಮಗೆ ಏನಾದರೂ ಪ್ರಯೋಜನವಿದೆಯ ? ಇಂದಿನ ಸಮಕಾಲೀನ ಜಗತ್ತಿನ ಹಿರಿಯರು ಅನುಭವಿಗಳು, ಮೇಧಾವಿಗಳು, ತತ್ವಜ್ಞಾನಿಗಳು ಆಗಾಗ್ಗೆ ತಮ್ಮ ಮಾತುಗಳಲ್ಲಿ ಪರಂಪರೆಯನ್ನು ಉಳಿಸಿ ಬೆಳೆಸಿ ಸಂರಕ್ಷಿಸಿ ಎಂದು ಏಕೆ ಹೇಳುತ್ತಾರೆ ? ಎಂಬೆಲ್ಲಾ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುತ್ತವೆ.
ಜಗತ್ತಿನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಪೀಳಿಗೆಗೆ ಅದನ್ನು ಸಂರಕ್ಷಿಸುವ ಮಹತ್ವವನ್ನು ಉತ್ತೇಜಿಸಲು ಈ ದಿನವನ್ನು ಸಮರ್ಪಿಸಲಾಗಿದೆ. ಈ ದಿನವು ಯುನೆಸ್ಕೋ ಅಂದರೆ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ [ UNESCO : United Nations Educational, Scientific and Cultural Organization ] ಸಂಸ್ಥೆಯು ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸಲ್ಪಟ್ಟ ಮತ್ತು ಸಂರಕ್ಷಿಸಲ್ಪಟ್ಟ ವಿಶ್ವದ ವಿಶಿಷ್ಟ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ತಾಣಗಳ ಆಚರಣೆಯಾಗಿದೆ. ಯುನೆಸ್ಕೋ - ಇದು ವಿಶ್ವಸಂಸ್ಥೆಯ ಒಂದು ಪ್ರಮುಖ ಅಂಗಸಂಸ್ಥೆ, ಇದನ್ನು 1945 ರಲ್ಲಿ ಪ್ರಾರಂಭಿಸಲಾಯಿತು. ಇದರ ಕೇಂದ್ರ ಕಛೇರಿ ಫ್ರಾನ್ಸಿನ ಪ್ಯಾರಿಸ್ ನಲ್ಲಿದೆ. ಇದರ ಇಂದಿನ ಮುಖ್ಯಸ್ಥರು ಆಡ್ರಿ ಅಜುಲಾಯ್. ಈ ಸಂಸ್ಥೆಯ ಮುಖ್ಯ ಉದ್ದೇಶ ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುವುದು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿಸುವುದು ಹಾಗೂ ವಿಶ್ವದ ವಿವಿಧೆಡೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವುದು ಮತ್ತು ನೈಸರ್ಗಿಕ ವಿಜ್ಞಾನ, ಸಾಮಾಜಿಕ ಮತ್ತು ಮಾನವಿಕ ವಿಜ್ಞಾನ ಕ್ಷೇತ್ರಗಳು ಬೆಳವಣಿಗೆಗೆ ಸಹಕಾರ ನೀಡುವುದು ಹಾಗೂ ವಿಶ್ವದ ನಾನಾ ಕಡೆಗಳಲ್ಲಿ ಇರುವ ಪಾರಂಪರಿಕ ಶ್ರೇಷ್ಠತೆಯನ್ನು ಸಾರುವಂತಹ ತಾಣಗಳನ್ನು ಪತ್ತೆ ಮಾಡುವುದು ಮತ್ತು ಅದನ್ನು ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿವೆ. ಪ್ರಸ್ತುತ ಈ ಸಂಸ್ಥೆಯಲ್ಲಿ 199 ಸದಸ್ಯ ರಾಷ್ಟ್ರಗಳಿವೆ. ಇದು ವಿಶ್ವದ ವಿವಿಧೆಡೆ ಸುಮಾರು 53 ಪ್ರಾಂತೀಯ ಕಚೇರಿಗಳನ್ನು ಹೊಂದಿದೆ.
ವಿಶ್ವ ಪಾರಂಪರಿಕ ಸಮಾವೇಶದಿಂದ ಯುನೆಸ್ಕೋ ವಿಶ್ವದಲ್ಲಿರುವ ಸ್ವಾಭಾವಿಕ ಮತ್ತು ಸಾಂಸ್ಕೃತಿಕ ವಿಶಿಷ್ಟ ಕಲೆ-ಸಂಪ್ರದಾಯಗಳನ್ನು ಬಿಂಬಿಸುವ ತಾಣಗಳ ಪಟ್ಟಿ ತಯಾರಿಸಲು ಪ್ರಾರಂಭಿಸಿತು. ವಿಶ್ವ ಪರಂಪರೆಯ ದಿನವನ್ನು ಆಚರಿಸುವ ಕಲ್ಪನೆಯನ್ನು 1982 ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆನ್ ಸ್ಮಾರಕಗಳು ಮತ್ತು ಸೈಟ್‌ಗಳು (ICOMOS) ಪ್ರಸ್ತಾಪಿಸಿತು ಮತ್ತು ನಂತರ 1983 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಅನುಮೋದಿಸಲಾಯಿತು. ಏಪ್ರಿಲ್ 18ನ್ನು ಸಮಾವೇಶದ ದಿನದ ನೆನಪಿಗಾಗಿ ಆಯ್ಕೆ ಮಾಡಲಾಯಿತು. ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿದಂತೆ ಯುನೆಸ್ಕೋ 1982ರಲ್ಲಿ ರ ಸಮಾವೇಶದಲ್ಲಿ ನಿರ್ಣಯವನ್ನು ಅಂಗೀಕರಿಸಿತು. ಇದರಲ್ಲಿ ವಿಶೇಷವಾಗಿ ಪ್ರಾಂತೀಯವಾದ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಹಾಗೂ ಸಾಂಸ್ಕೃತಿಕವಾಗಿ ಆ ರಾಷ್ಟ್ರದ ಹೆಮ್ಮೆ ಎನಿಸುವ ಹಾಗೂ ಈಗ ಅಳಿವಿನಂಚಿನೆಡೆಗೆ ಸಾಗಿರುವ ತಾಣಗಳನ್ನು ಹೆಚ್ಚಾಗಿ ಈ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ. ಹಾಗೂ ಸ್ವಾಭಾವಿಕ ತಾಣಗಳಾದ ವಿಶಿಷ್ಟ ಪ್ರಾಣಿಗಳ ಆವಾಸಸ್ಥಾನಗಳು ಹಾಗೂ ವಿಶೇಷ ಆಯಕಟ್ಟಿನ ಪ್ರದೇಶಗಳನ್ನು ಮತ್ತು ಪ್ರಾಚೀನ ಅವಶೇಷಗಳು, ಐತಿಹಾಸಿಕ ಕಟ್ಟಡಗಳು, ನಗರಗಳು, ಕಾಡುಗಳು, ದ್ವೀಪಗಳು, ಸರೋವರಗಳು, ಸ್ಮಾರಕಗಳು, ಪರ್ವತಗಳು, ಅರಣ್ಯ ಮುಂತಾದವುಗಳನ್ನು ಈ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ. ಈ ಪಟ್ಟಿಯಲ್ಲಿ ಗುರುತಿಸಿದ ತಾಣಗಳನ್ನು ಮೂಲಸ್ವರೂಪಕ್ಕೆ ದಕ್ಕೆ ಬಾರದಂತೆ ಅಭಿವೃದ್ಧಿಗೊಳಿಸಲು ಅಲ್ಲಿನ ಸ್ಥಳೀಯ ಸರ್ಕಾರಗಳ ಜೊತೆಗೆ ಯುನೆಸ್ಕೋ ಕೈಜೋಡಿಸುತ್ತದೆ
2021-22 ರ ಹೊತ್ತಿಗೆ ಸುಮಾರು 167 ದೇಶಗಳ 1120 ವಿಶ್ವ ಪರಂಪರೆಯ ತಾಣಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಅತಿ ಹೆಚ್ಚು ತಾಣಗಳನ್ನು ಇಟಲಿ ದೇಶವು ಹೊಂದಿದ್ದರೆ, ಭಾರತ ಆ ಪಟ್ಟಿಯಲ್ಲಿ ಸ್ಥಾನ ಹೊಂದಿದ ಆರನೇ ಅತಿ ದೊಡ್ಡ ದೇಶವಾಗಿದೆ ಎಂಬ ಮಾಹಿತಿಯು ಅಧ್ಯಯನದಿಂದ ತಿಳಿದು ಬರುತ್ತದೆ. ಭಾರತದಲ್ಲಿ 2021 - 22ರ ವರೆಗೆ UNESCO ಸುಮಾರು ನಲವತ್ತು (40) ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳಾಗಿ ಗುರುತಿಸಲಾಗಿದೆ ಅವುಗಳಲ್ಲಿ ಮೂವತ್ತೆರಡು (32)ಸಾಂಸ್ಕೃತಿಕ ತಾಣಗಳು, ಏಳು (7) ಸ್ವಾಭಾವಿಕ ತಾಣಗಳು, ಒಂದು (1) ಮಿಶ್ರ ತಾಣ - ಸಾಂಸ್ಕೃತಿಕ ಮತ್ತು ಸ್ವಾಭಾವಿಕ ತಾಣಗಳು. ಅವೆಂದರೆ, 1) ಅಜಂತಾ ಗುಹೆಗಳು ಮಹಾರಾಷ್ಟ್ರ. 2) ಎಲ್ಲೋರಾ ಗುಹೆಗಳು ಮಹಾರಾಷ್ಟ್ರ. 3) ಆಗ್ರಾ ಕೋಟೆ ಉತ್ತರಪ್ರದೇಶ. 4) ತಾಜ್ ಮಹಲ್ ಉತ್ತರಪ್ರದೇಶ. 5) ಕೊನಾರ್ಕಿನ ಸೂರ್ಯ ದೇವಾಲಯ ಓಡಿಸಾ. 6) ಮಹಾಬಲಿಪುರಂ ಸ್ಮಾರಕಗಳು ತಮಿಳುನಾಡು. 7) ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಅಸ್ಸಾಂ. 8) ಮಾನಸ್ ವನ್ಯಜೀವಿ ಅಭಯಾರಣ್ಯ ಅಸ್ಸಾಂ. 9) ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ ರಾಜಸ್ಥಾನ . 10) ಗೋವಾದ ಚರ್ಚೆಗಳು ಮತ್ತು ಕಾನ್ವೆಂಟ್ ಗೋವಾ . 11) ಖಜುರಾಹೋ ದ ಸ್ಮಾರಕಗಳು ಮಧ್ಯಪ್ರದೇಶ. 12) ಹಂಪಿಯ ಸ್ಮಾರಕಗಳು ಕರ್ನಾಟಕ. 13) ಪತ್ತೇಪುರ್ ಸಿಕ್ರಿ ಉತ್ತರಪ್ರದೇಶ. 14) ಪಟ್ಟದಕಲ್ಲಿನ ಸ್ಮಾರಕಗಳ ಗುಂಪು ಕರ್ನಾಟಕ. 15) ಎಲಿಫೆಂಟಾ ಗುಹೆಗಳು ಮಹಾರಾಷ್ಟ್ರ. 16) ಚೋಳ ದೇವಸ್ಥಾನಗಳು, ಬೃಹದೀಶ್ವರದೇವಸ್ಥಾನ:ಗಂಗೈಕೊಂಡ ಚೋಳಪುರಂ ಐರಾವತೇಶ್ವರ ದೇವಾಲಯ: ದಾರಾಸುರಂ, ಬೃಹದೀಶ್ವರ ದೇವಾಲಯ: ತಂಜಾವೂರು ತಮಿಳುನಾಡು. 17) ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ ಪಶ್ಚಿಮ ಬಂಗಾಳ . 18) ನಂದಾದೇವಿ ರಾಷ್ಟ್ರೀಯ ಉದ್ಯಾನವನ ಮತ್ತು ವ್ಯಾಲಿ ಆಫ್ ಫ್ಲವರ್ ರಾಷ್ಟ್ರೀಯ ಉದ್ಯಾನವನ ಉತ್ತರಖಂಡ್ . 19) ಸಾಂಚಿಯಲ್ಲಿನ ಭೌದ್ಧ ಸ್ಮಾರಕಗಳು ಮಧ್ಯಪ್ರದೇಶ. 20) ಹುಮಾಯೂನ್ ಸಮಾಧಿ ದೆಹಲಿ. 21) ಕುತುಬ್ ಮಿನಾರ್ ಮತ್ತು ಅದರ ಸ್ಮಾರಕಗಳು ದೆಹಲಿ. 22) ಭಾರತದ ಪರ್ವತ ರೈಲ್ವೇಗಳು : ಡಾರ್ಜಲಿಂಗ್- ಹಿಮಾಲಯನ್ ರೈಲ್ವೆ- ಪಶ್ಚಿಮಬಂಗಾಳ. ನೀಲಗಿರಿ ಪರ್ವತ ರೈಲ್ವೆ - ತಮಿಳುನಾಡು. ಕಲ್ಕಾ-ಶಿಮ್ಲಾ ರೈಲ್ವೆ- ಹಿಮಾಚಲ ಪ್ರದೇಶ. 23) ಬೋಧಗಯಾದ ಮಹಾಬೋಧಿ ದೇವಾಲಯಗಳು ಬಿಹಾರ. 24) ಭಿಂಬೆಟ್ಕದ ಕಲ್ಲಿನ ಆಶ್ರಯ ಗುಹೆಗಳು ಮಧ್ಯಪ್ರದೇಶ. 25) ಛತ್ರಪತಿ ಶಿವಾಜಿ ಟರ್ಮಿನಲ್ ಮಹಾರಾಷ್ಟ್ರ. 26) ಚಂಪಾನೇರ್ -ಪಾವಗಢ್ ಪುರಾತತ್ವ ಉದ್ಯಾನ ಗುಜರಾತ್ . 27) ಕೆಂಪುಕೋಟೆ ದೆಹಲಿ. 28 ) ಜಂತರ್ ಮಂತರ್ ರಾಜಸ್ಥಾನ. 29) ಪಶ್ಚಿಮ ಘಟ್ಟಗಳು ಅಗಸ್ತ್ಯಮಲೈ- ಕೇರಳ ಪೆರಿಯಾರ್- ಕೇರಳ ಅಣ್ಣಾಮಲೈ- ಕೇರಳ ನೀಲಗಿರಿ - ತಮಿಳುನಾಡು, ತಲಕಾವೇರಿ- ಕರ್ನಾಟಕ ಕುದುರೆಮುಖ ಕರ್ನಾಟಕ, ಸಹ್ಯಾದ್ರಿ - ಮಹಾರಾಷ್ಟ್ರ. 30) ರಾಜಸ್ಥಾನದ ಬೆಟ್ಟದ ಕೋಟೆಗಳು ಚಿತ್ತೋರ್ಗಡ್, ಕುಂಭಲ್ಗಢ್ ರಣತಂಬೂರ್, ಅಂಬರ್ ಕೋಟೆ, ಜೈಸಲ್ಮೇರ್ ಕೋಟೆ, ಗೂರ್ಗಾವ್ ಕೋಟೆ. 31) ರಾಣಿ ಕಿ ವಾವ್ (ರಾಣಿಯ ಸ್ನಾನ ಕೊಳ) ಗುಜರಾತ್ ನ 32) ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ ಹಿಮಾಚಲ ಪ್ರದೇಶ . 33) ನಳಂದದ ಮಹಾವೀರ ಪುರಾತತ್ವ ತಾಣ ಬಿಹಾರ. 34) ಖಾಂಗ್ ಚೆಂಡ್ ಜೊಂಗ ರಾಷ್ಟ್ರೀಯ ಉದ್ಯಾನವನ ಸಿಕ್ಕಿಂ 35) ಲೆ ಕಾರ್ಬುಸಿಯರ್ ವಾಸ್ತು ಶಿಲ್ಪದ ಕೆತ್ತನೆ ಚಂಡಿಗಡ. 36) ಅಹಮದಾಬಾದಿನ ಐತಿಹಾಸಿಕ ನಗರ ಗುಜರಾತ್. 37) ಮುಂಬೈನ ವಿಕ್ಟೋರಿಯನ್ ಮತ್ತು ಆರ್ಟ್ ಡೆಕೊ ಕಟ್ಟಡ ವಾಸ್ತುಶಿಲ್ಪ ಮಹಾರಾಷ್ಟ್ರ 38) ಜೈಪುರ ರಾಜಸ್ಥಾನ . 39) ಕಾಕತೀಯ ರುದ್ರೇಶ್ವರ ದೇವಸ್ಥಾನ( ರಾಮಪ್ಪ ದೇವಾಲಯ) ತೆಲಂಗಾಣ. 40) ಧೋಲವೀರ (ಹರಪ್ಪ ನಗರ) ಗುಜರಾತ್.
ಈ ಮೇಲಿನ ಸ್ಥಳಗಳು ನಮ್ಮ ಗ್ರಹದ ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ಅದ್ಭುತಗಳ ಒಳನೋಟವನ್ನು ಒದಗಿಸುವ ಅಮೂಲ್ಯವಾದ ಸಂಪನ್ಮೂಲಗಳಾಗಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಅವು ಮುಖ್ಯವಾಗಿವೆ. ಇವು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಇಂದು ಈ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ವಿಭಿನ್ನ ಅಂಶಗಳು ಮತ್ತು ಸವಾಲುಗಳನ್ನು ಪ್ರತಿಬಿಂಬಿಸುತ್ತವೆ. ಪರಂಪರೆಯ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಲಾಗಿದೆ ಮತ್ತು ಭವಿಷ್ಯದ ಪೀಳಿಗೆಗೆ ಈ ತಾಣಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ.
ವಿಶ್ವ ಪರಂಪರೆಯ ದಿನದಂದು, ಪ್ರತಿ ವರ್ಷ ಹೊಸ ಥೀಮ್ ಅನ್ನು ಘೋಷಿಸಲಾಗುತ್ತದೆ.
2024 ರ ವಿಶ್ವ ಪರಂಪರೆಯ ದಿನದ ಅಧಿಕೃತ ಥೀಮ್ “ವೈವಿಧ್ಯತೆಯನ್ನು ಅನ್ವೇಷಿಸಿ ಮತ್ತು ಅನುಭವಿಸಿ ” ಎಂಬುದಾಗಿದೆ.- [ DISCOVER AND EXPERIENCE DIVERSITY ] Natural landscapes, historical monuments, cultural practices, traditions, rituals and ancient ruins are part of the world's heritage. It is important to safeguard them. ಅಂದರೆ ನೈಸರ್ಗಿಕ ಭೂದೃಶ್ಯಗಳು, ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ಆಚರಣೆಗಳು, ಸಂಪ್ರದಾಯಗಳು, ಆಚರಣೆಗಳು ಮತ್ತು ಪ್ರಾಚೀನ ಅವಶೇಷಗಳು ಪ್ರಪಂಚದ ಪರಂಪರೆಯ ಭಾಗವಾಗಿದೆ. ಅವುಗಳನ್ನು ಸಂರಕ್ಷಿಸುವುದು ಮುಖ್ಯವಾಗಿದೆ ಹಾಗೂ ಅದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಾವು ಹೇಗೆಲ್ಲಾ ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಬಹುದು?
* ಸಾಧ್ಯವಿರುವಷ್ಟುಮಟ್ಟಿಗೆ ಅವಕಾಶವಿರುವ ಐತಿಹಾಸಿಕ , ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳನ್ನು ಸಂರಕ್ಷಿಸುವುದು. ಆ ಮೂಲಕ ಅಳಿವಿನಂಚಿನಲ್ಲಿರುವ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವುದು.
* ವಿಶ್ವ ಪಾರಂಪರಿಕ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು. ಅವಕಾಶವಿದ್ದರೆ ಪ್ಲಾಸ್ಟಿಕ್ ಬಳಕೆಯನ್ನು ಪರಿಪೂರ್ಣವಾಗಿ ನಿಷೇಧಿಸುವುದು.
* ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕ ರಲ್ಲಿ ಜನಜಾಗೃತಿ ಮೂಡಿಸುವುದು. ಆ ಮೂಲಕ ಪಾರಂಪರಿಕ ತಾಣಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು.
* ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಬೋಧನೆಯ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಪಾರಂಪರಿಕ ತಾಣಗಳ ಸಂರಕ್ಷಣೆಯ ವಿಚಾರಗಳ ಕುರಿತು ಅರಿವು ಮೂಡಿಸುವುದು.
* ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಂದ ಸ್ಥಳೀಯ , ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಾರಂಪರಿಕ ತಾಣಗಳ ಸಂಬಂಧ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಬೀದಿ ನಾಟಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನ ಜಾಗೃತಿ ಮೂಡಿಸುವುದು.
* ವಿಶ್ವ ರಾಷ್ಟ್ರಗಳ ಸರ್ಕಾರಗಳು ಈಗಾಗಲೇ ಜಾರಿಗೆ ತಂದಿರುವ ಪಾರಂಪರಿಕ ಸಂರಕ್ಷಣಾ ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಪಾಲನೆ ಮಾಡುವುದು.
* ಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಸಲುವಾಗಿ ಗೀತರಚನೆ , ನಾಟಕ ರಚನೆ , ಚರ್ಚಾಸ್ಪರ್ಧೆ , ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಜಾಗೃತಿ ಮೂಡಿಸಲು ಅವಕಾಶ ಕಲ್ಪಿಸುವುದು.
* ವಿಶ್ವ ರಾಷ್ಟ್ರಗಳ ಸರ್ಕಾರಗಳು ಪಾರಂಪರಿಕ ತಾಣಗಳಲ್ಲಿ ಪರಿಸರ ಸಂರಕ್ಷಣೆಯ ಪೂರಕ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿರುವವರನ್ನು ಗುರ್ತಿಸಿ, ಪ್ರಶಂಸಿಸಿ ಆರ್ಥಿಕ ಉತ್ತೇಜನವನ್ನು ನೀಡುವುದು.
ನಾವು ನಮ್ಮ ಬದುಕನ್ನು ನಡೆಸುವ ರೀತಿ ನೀತಿ, ನಮ್ಮ ವರ್ತನೆಯ ರೀತಿ ನೀತಿ, ಸಂದರ್ಭೋಚಿತವಾಗಿ ನಮ್ಮ ಪ್ರತಿಕ್ರಿಯೆಯ ರೀತಿ ನೀತಿಗಳು, ಹಿರಿಯರನ್ನು ಗೌರವಿಸುವ ಮನೋಭಾವ, ಮಕ್ಕಳನ್ನು ನಡೆಸಿಕೊಳ್ಳುವ ರೀತಿ ನೀತಿ, ಅಷ್ಟಲ್ಲದೇ ಸಾರ್ವಜನಿಕ ಬದುಕಿನಲ್ಲಿ ನಮ್ಮ ನಡುವಳಿಕೆ, ಆಹಾರ ಪದ್ಧತಿ, ನಮ್ಮ ಸಂಸಾರವನ್ನು ನಾವು ಹೇಗೆಲ್ಲಾ ಜವಾಬ್ದಾರಿಯತವಾಗಿ ಪೋಷಿಸುತ್ತವೆ ಮುಂತಾದ ಅಂಶಗಳು ಪರಂಪರೆಯ ವ್ಯಾಖ್ಯಾನ ಮಾಡುತ್ತವೆ. ನಮ್ಮ ಬದುಕು ಪ್ರಾಚೀನಕಾಲದ ಋಷಿಮುನಿಗಳಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಸ್ತುತ ಜಗತ್ತಿನ ಮೂಲಜನರಿಗೆ ಹಸ್ತಾಂತರಿಸಲ್ಪಟ್ಟ ಸಂಪ್ರದಾಯಗಳ ಪ್ರಕಾರವೇ ಪರಂಪರೆ ಎಂದು ಸಂಕ್ಷಿಪ್ತವಾಗಿ ಹೇಳಬಹುದಾಗಿದೆ. ಪರಂಪರೆಯಲ್ಲಿ ನಮ್ಮ ನೆಲ ಜಲ, ಕುಟುಂಬದ ತಲೆಮಾರುಗಳ ಭೇರುಗಳು, ನಮ್ಮೂರ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಜಾತ್ರೆ - ಉತ್ಸವಗಳು, ಆಚರಣೆಗಳು, ಆಚಾರ-ವಿಚಾರಗಳು, ರೂಢಿ- ಪದ್ಧತಿಗಳು, ಸಂಪ್ರದಾಯಗಳು, ಸಂಪೂರ್ಣ ಜನಾಂಗವೇ ಸೇರಿಕೊಂಡಿರುತ್ತದೆ. ಗೋಚರ ಮತ್ತು ಅಗೋಚರ ಸ್ವರೂಪದಲ್ಲಿ ನಮ್ಮ ಪರಂಪರೆಯು ಕೆಲವೊಂದಷ್ಟು ಅಂಶಗಳನ್ನು ಒಳಗೊಂಡಿದೆ: ಗೋಚರ ಸ್ವರೂಪದಲ್ಲಿ ಸ್ಪಷ್ಟವಾಗಿ - ನಮ್ಮ ಐತಿಹಾಸಿಕ ತಾಣಗಳು, ಕಟ್ಟಡಗಳು, ಸ್ಮಾರಕಗಳು, ವಸ್ತುಸಂಗ್ರಹಾಲಯ ದ ಕಲಾಕೃತಿಗಳು, ಪ್ರಾಕೃತಿಕವಾಗಿರುವ ನಮ್ಮ ಭೂಮಾರ್ಗ , ಜಲಮಾರ್ಗ, ಭೂದೃಶ್ಯಗಳು, ವನ್ಯಪ್ರದೇಶಗಳು, ಜೌಗು ಪ್ರದೇಶಗಳು, ಎತ್ತರದ ಪ್ರದೇಶಗಳು, ಸ್ಥಳೀಯ ವನ್ಯಜೀವಿಗಳು, ಕೀಟಗಳು, ಸಸ್ಯಗಳು, ಮರಗಳು, ಪಕ್ಷಿಗಳು ಮತ್ತು ಪ್ರಾಣಿಗಳು ಇವೆಲ್ಲವುಗಳನ್ನು ನಮ್ಮ ಪರಂಪರೆಯು ಒಳಗೊಂಡಿದೆ. ಅಗೋಚರ ಸ್ವರೂಪದಲ್ಲಿ - ನಮ್ಮ ಪದ್ಧತಿಗಳು, ರೂಢಿ - ಸಂಪ್ರದಾಯಗಳು, ಕ್ರೀಡೆಗಳು, ಸಂಗೀತ, ನೃತ್ಯ, ಜಾನಪದ, ಕರಕುಶಲ, ಕೌಶಲ್ಯ ಮತ್ತು ಜ್ಞಾನ. ಗೋಚರ, ಅಗೋಚರ ಹಾಗೂ ಪ್ರಾಕೃತಿಕ ಪರಂಪರೆಯು ನಾವು ನಂಬಿರುವ ಪುರಾಣಗಳು, ಪುಣ್ಯ ಕಥೆಗಳು, ದಂತಕಥೆಗಳು, ಸಂಪ್ರದಾಯಗಳು ಮತ್ತು ನಮ್ಮೊಂದಿಗೆ ಸದಾ ಬೆಸೆದುಕೊಂಡಿರುವ ಸಂಸ್ಕೃತಿಗಳು, ನಂಬಿಕೆಗಳು, ನೆನಪುಗಳು ನಮಗೆ ಸಾಮಾನ್ಯ ಭಾಷೆಯೊಂದನ್ನು ಮತ್ತು ಅಂತರ್ಗತ ನೋಟವನ್ನು ಒದಗಿಸುತ್ತದೆ. ಇಲ್ಲಿ ಪರಸ್ಪರ ಸಂಪರ್ಕ ಮತ್ತು ಸಂವಹನ ಸಾಧಿಸಲು ಮತ್ತು ವಿಶಿಷ್ಠ ರೀತಿಯಲ್ಲಿ ನಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಅವಕಾಶ ಒದಗಿಸುತ್ತದೆ.
ಪರಂಪರೆಯು ತಲೆಮಾರುಗಳ ಆವಾಸ ಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಹೇಳಬಹುದು. ಹಿರಿಮುತ್ತಜ್ಜ, ಮುತ್ತಜ್ಜ, ಅಜ್ಜ, ಅಪ್ಪ, ಮಗ, ಮೊಮ್ಮಗ, ಕಿರಿ ಮೊಮ್ಮಗ ಹೀಗೆ ಆರೇಳು ತಲೆಮಾರುಗಳು ಒಂದೆಡೆ ಬಾಳಿ ಬದುಕಿ ಒಂದು ನೆಲೆಗಟ್ಟನ್ನು ಭದ್ರವಾಗಿ ಹಾಕಿರುತ್ತದೆ. ಹೀಗೆ ಬಾಳಿ ಬದುಕುವ ಸಂದರ್ಭದಲ್ಲಿ ಕುಟುಂಬವು ತನ್ನ ಅವಿಸ್ಮರಣೀಯ ಅನುಭವದ ನೆನಪಿಗಾಗಿ ಕೆಲವೊಂದಷ್ಟು ನಿರ್ಮಾಣಗಳನ್ನು ಮಾಡುತ್ತದೆ. ಈ ನಿರ್ಮಾಣಗಳೇ ಭವಿಷ್ಯದ ಕಾಲಘಟ್ಟದಲ್ಲಿ ಪರಂಪರೆಯ ಕುರುಹಾಗಿ ಉಳಿದುಬಿಡುತ್ತವೆ. ಅವುಗಳ ಸಂರಕ್ಷಣೆ ಪ್ರಸ್ತತ ಸಮಕಾಲೀನ ಜಗತ್ತಿನ ಜನರ ಜವಾಬ್ದಾರಿಯಾಗಿರುತ್ತದೆ. ಸಂರಕ್ಷಣೆ ಇಲ್ಲದಿದ್ದರೆ ಪರಂಪರೆಯು ಹೇಳ ಹೆಸರಿಲ್ಲದಂತೆ ಅಳಿದು ಹೋಗುತ್ತದೆ. ಭಾರತ ದೇಶದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ಮಾಡಿ ತನ್ನ ಯಶೋಗಾಥೆಗಳನ್ನು ಬರೆದಿವೆ. ತನ್ನ ಹೆಜ್ಜೆಗುರುತುಗಳನ್ನು ಗಟ್ಟಿಯಾಗಿಟ್ಟಿವೆ. ಇಂದು ವಿಶ್ವಸರ್ಕಾರವೆನಿಸಿದ ವಿಶ್ವಸಂಸ್ಥೆಯೇ ಮುಂದೆ ಬಂದು ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿ ಅವುಗಳ ಸಂರಕ್ಷಣೆಯ ಹೊಣೆ ಹೊತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ವಿವಿಧ ರಾಜ್ಯ ಸರ್ಕಾರಗಳೂ ಸೇರಿದಂತೆ ಭಾರತ ಸರ್ಕಾರವೂ ಹಲವಾರು ರಾಷ್ಟೀಯ ಪಾರಂಪರಿಕ ತಾಣಗಳನ್ನಾಗಿ ಅಥವಾ ರಾಷ್ಟ್ರೀಯ ಸ್ಮಾರಕಗಳನ್ನಾಗಿ ಗುರುತಿಸಿ ಸಂರಕ್ಷಣೆ ಮಾಡುತ್ತಿವೆ. ಉದಾಹರಣೆಗೆ ಬೇಲೂರು ಮತ್ತು ಹಳೆಬೀಡಿನ ದೇವಾಲಯಗಳನ್ನು ಸಂರಕ್ಷಿಸುವ ಮೂಲಕ ಸಂಪೂರ್ಣ ಹೊಯ್ಸಳ ಮನೆತನವನ್ನು ಮತ್ತು ಆ ಮನೆತನನ ಆಡಳಿತಗಾರರನ್ನು ಅವಿಸ್ಮರಣೀಯವಾಗಿಸಿದೆ. ಹೊಯ್ಸಳರ ಮೂಲ, ಆಡಳಿತ ಮಾಡಿದ ಅರಸರು, ಅವರ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ, ನೃತ್ಯ, ಸಂಗೀತಗಳಕಲೆ, ವಾಸ್ತುಶಿಲ್ಪ, ಚಿತ್ರಕಲೆ ಮುಂತಾದ ಸಾಂಸ್ಕೃತಿಕ ಕೊಡುಗೆಗಳನ್ನು ಇಂದಿಗೂ ನೆನಪಿಸುತ್ತವೆ. ಚರಿತ್ರೆಯ ಪುಟ ಪುಟಗಳಲ್ಲಿ ಹೊಯ್ಸಳ ಮನೆತನವನ್ನು ಅಜರಾಮರವನ್ನಾಗಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಇಂದು ಪಾರಂಪರಿಕ ತಾಣಗಳ ಸಂರಕ್ಷಣೆ ಬಹಳ ಅಗತ್ಯವೆನಿಸಿದೆ. ಜನ ಸಮುದಾಯದಲ್ಲಿ ಪಾರಂಪರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ, ಆ ಮೂಲಕ ಪರಂಪರೆಯ ಸಂರಕ್ಷಣೆ ಅಗತ್ಯವೆಸಿದೆ. ಪಾರಂಪರಿಕ ಸಂರಕ್ಷಣೆಯಿಂದ ಹಿನ್ನೋಟದ ಅರಿವು ಮೂಡುತ್ತದೆ. ನಮ್ಮ ತನ ನಮ್ಮದಾಗಿಯೇ ಉಳಿಯುತ್ತದೆ. ಮುನ್ನೋಟದ ಅರಿವಿಗೆ ಹಿನ್ನೋಟದ ಪ್ರಜ್ಞಾನ ಪ್ರವಾಹವು ಸಹಕಾರಿಯಾಗಿರುತ್ತದೆ. ನಮ್ಮೆ ಪರಂಪರೆಯ ಅಳಿವು ಉಳಿವು ಎರಡೂ ನಮ್ಮ ಕೈಯಲ್ಲೆ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಅಷ್ಟಲ್ಲದೆ ಕೌಟುಂಬಿಕ ಪರಂಪರೆ, ರಾಜಪರಂಪರೆ, ಆಡಳಿತಾತ್ಮಕ ಪರಂಪರೆ, ಆರ್ಥಿಕ ಪರಂಪರೆ, ನೈಸರ್ಗಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಪರಂಪರೆ ಎಂಬುದು ವಿಶಿಷ್ಠ ರೀತಿಯಲ್ಲಿ ಸೇರಿಕೊಂಡಿದೆ. ಆಧುನಿಕ ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಾವೆಷ್ಟೇ ಮುಂದುವರಿದಿದ್ದರೂ ಅದಾವುದೂ ನಮ್ಮ ಪರಂಪರೆಯಿಂದ ಆಚೆಗೆ ಇರಲು ಸಾಧ್ಯವಿಲ್ಲ ಎನ್ನಬಹುದು. ಇವೆಲ್ಲವುಗಳನ್ನು ಸಂರಕ್ಷಿಸುವ ಹೊಣೆ ನಮ್ಮದಾಗಿದೆ. ಏಕೆಂದರೆ ಪರಂಪರೆಯನ್ನು ಮಲಿನ ಮಾಡುವುದು ಬಹಳ ಸುಲಭದ ಕೆಲಸ. ಆದರೆ ಪರಂಪರೆಯ ಶೀಲವಂತಿಕೆಯ ಸಂರಕ್ಷಣೆ ಬಹಳ ಕಷ್ಟ. ನಮ್ಮ ಪರಂಪರೆಯಲ್ಲಿ ಭವ್ಯತೆಯ ದಿವ್ಯತೆಯ ಮತ್ತು ನವ್ಯತೆಯ ವೈಜ್ಞಾನಿಕತೆ ಹಾಗೂ ವೈಚಾರಿಕತೆಯಿದೆ. ನಾವೆಲ್ಲರೂ ಇದನ್ನರಿತು ವಿಶ್ವದ ಪರಂಪರೆಯ ಸಂರಕ್ಷಣೆಯ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳೋಣ.
-ಕೆ.ಎನ್. ಚಿದಾನಂದ. ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ