ಮಂಗಳೂರು: ರಾಜ್ಯದಲ್ಲಿ ಯಾವಾಗೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬರುತ್ತದೋ ಆಗೆಲ್ಲ ಈ ರಾಜ್ಯದಲ್ಲಿ ಆತಂಕವಾದ ತಾಂಡವವಾಡುತ್ತದೆ. ಕಾಂಗ್ರೆಸ್ ಗೆ ಬಹುಮತ ಬಂದು ಮೆರವಣಿಗೆ ಮಾಡುವಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗುತ್ತದೆ. ರಸ್ತೆಯಲ್ಲಿ ಮೊಳಗಿದ ಆ ಘೋಷಣೆ, ವಿಧಾನ ಸೌಧದೊಳಗೂ ವ್ಯಾಪಿಸುತ್ತದೆ. ದೇಶವಿರೋಧಿ ಹೇಳಿಕೆ ಕೊಟ್ಟವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದರೂ ಅವರನ್ನು ಕಾಂಗ್ರೆಸ್ ಸರಕಾರ ಬಂಧಿಸಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರದ ತುಷ್ಟೀಕರಣ ನೀತಿ, ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮ ಇವತ್ತು ಹಿಂದೂಗಳ ಮೇಲೆ ಅತಿ ಹೆಚ್ಚು ಹಲ್ಲೆಗಳು ಮತ್ತು ಹತ್ಯೆಗಳು ಪ್ರಾರಂಭವಾಗಿವೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ನಿರಂಜನ್ ಹಿರೇಮಠರ ಪುತ್ರಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆದಿದೆ. ಆ ಹತ್ಯೆಯ ಹಿನ್ನೆಲೆಯನ್ನು ತನಿಖೆ ಮಾಡುವುದಕ್ಕೆ ಮೊದಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹಗುರವಾದ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯನವರ ಕಾಯಂ ಚಾಳಿ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿ.ಕೆ. ಶಿವಕುಮಾರ್ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಆತನಿಗೆ ಉಗ್ರಗಾಮಿ ಸಂಘಟನೆ ಜತೆಗೆ ಲಿಂಕ್ ಇದೆ ಎಂಬುದು ತನಿಖೆಯಿಂದ ಸಾಬೀತಾದಾಗ ವಿಷಯಾಂತರ ಮಾಡುವ ಕೆಲಸ ಮಾಡಿದರು. ಅವತ್ತು ಡಿಜಿಪಿಯವರು ಕುಕ್ಕರ್ ಬಾಂಬ್ ಪ್ರಕರಣ ಭಯೋತ್ಪಾದನಾ ಕೃತ್ಯ ಎಂದು ಹೇಳಿದಾಗ ಡಿಕೆಶಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ನಿರಂತರವಾಗಿ ಈ ಕೃತ್ಯಗಳು ನಡೆಯುವಾಗ ತನಿಖೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಳಿನ್ ನುಡಿದರು.
ತುಷ್ಟೀಕರಣದ ನೀತಿ:
ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣ ನಡೆದಾಗ ಕಾಂಗ್ರೆಸ್ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು. ಮೊನ್ನೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆದಾಗಲೂ ಅದನ್ನು ತಿರುಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿತು. ಉದಾಹರಣೆಗೆ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್‌ನ ಶಾಸಕರಾಗಿದ್ದರು. ಅವರ ಮನೆಗೆ ಬೆಂಕಿ ಹಚ್ಚುವ ಕೆಲಸ ನಡೆದಾಗಲೂ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಅವರ ಮನೆಗೆ ಹೋಗಲಿಲ್ಲ, ಸಾಂತ್ವನ ಹೇಳಲಿಲ್ಲ. ಆಗ ನಾನು ರಾಜ್ಯಾಧ್ಯಕ್ಷನಾಗಿದ್ದೆ. ಡಿಜೆ ಹಳ್ಳಿ ಕೆಜಿ ಹಳ್ಳಿಗೆ ಹೋಗಿದ್ದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೂ ಹೋಗಿದ್ದೆ. ಮೊನ್ನೆ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಆದಾಗ ಕಾಂಗ್ರೆಸ್‌ನ ಯಾವ ನಾಯಕನೂ ತಮ್ಮದೇ ಕಾರ್ಪೊರೇಟರ್ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ನಳಿನ್ ವಿವರಿಸಿದರು.
ಈ ಘಟನೆಯನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತವೆ. ಕಳೆದ 10 ತಿಂಗಳುಗಳಿಂದ ನಿರಂತರವಾಗಿ ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಬೆಳಗಾವಿಯಲ್ಲಿ ಸ್ವಾಮೀಜಿಯ ಹತ್ಯೆ ಇರಬಹುದು, ಇದ್ಯಾವುದನ್ನೂ ಕಾಂಗ್ರೆಸ್ ಸರಕಾರ ಪೂರ್ಣ ತನಿಖೆ ನಡೆಸಿಲ್ಲ. ಹಿಂದೆ ನಮ್ಮ ಸರಕಾರ ಇದ್ದಾಗ ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ಮಂಗಳೂರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆಯಿತು. ತಕ್ಷಣ ನಮ್ಮ ಸರಕಾರದಿಂದ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕೆಲಸ ಮಾಡಲಾಯಿತು. ಇವತ್ತು ನೇಹಾ ಕುಟುಂಬಕ್ಕೂ ಸಾಂತ್ವನ ಪರಿಹಾರ ನೀಡಬೇಕು ಎಂದು ನಳಿನ್ ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರಕ್ಕೋಸ್ಕರ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ತೋರಿಕೆಗಾಗಿ ಎಸ್‌ಡಿಪಿಐಗೆ ಬೈಯ್ಯುತ್ತಿದ್ದ ಕಾಂಗ್ರೆಸ್ ಇಂದು ಬಹಿರಂಗವಾಗಿಯೇ ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ಚುನಾವಣೆಗೆ ಒಟ್ಟಾಗಿ ಹೋಗುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಆದ ಸಂದರ್ಭದಲ್ಲಿ ಎನ್‌ಐಎ ತನಿಖೆ ನಡೆಸಿದಾಗ ಆ ಕೃತ್ಯದಲ್ಲಿ ಪಿಎಫ್‌ಐ ಭಾಗಿಯಾಗಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂತು. ಆ ಕೂಡಲೇ ಕೇಂದ್ರ ಸರಕಾರ ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತು. ಅದರ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆಗೆ ಈಗ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ.
ನಳಿನ್ ಮಾತಿನ ಮುಖ್ಯಾಂಶಗಳು:
ಇಡೀ ದೇಶದಲ್ಲಿ ಆ ತನಿಖೆ ಆಧಾರದಲ್ಲಿ ಮೋದಿ ಸರಕಾರ ಪಿಎಫ್‌ಐ ನಿಷೇಧ ಮಾಡಿದೆ. ಅಂತಹ ದಿಟ್ಟವಾದ ತೀರ್ಮಾನ ತೆಗೆದುಕೊಂಡ ಕಾರಣ ಅನಂತರ ಅಂತಹ ಘಟನೆಗಳು ಕಡಿಮೆಯಾಗಿವೆ. ಆದರೆ ಇವತ್ತು ಸಿದ್ದರಾಮಯ್ಯ ಸರಕಾರದ ತುಷ್ಟೀಕರಣ ನೀತಿಯಿಂದಾಗಿ ಇಂತಹ ಘಟನೆಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿವೆ. ಕಾರಣ, ತಾವು ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ಧೈರ್ಯವನ್ನು ಸಮಾಜ ಘಾತುಕ ಶಕ್ತಿಗಳಲ್ಲಿ ಸಿದ್ದರಾಮಯ್ಯ ಸರಕಾರ ತುಂಬಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ - ಈ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇವೆ ಎಂದು ಹೇಳಿದ್ದಾರೆ. ಈ ದೇಶದಲ್ಲಿ ಮೊದಲ ಹಕ್ಕು ಮುಸ್ಲಿಮರಿಗೆ ಸೇರಿದ್ದು ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳುತ್ತಾರೆ. ಇಲ್ಲಿರುವ ಸಂಪತ್ತಿನಲ್ಲಿ ಬಹುಪಾಲನ್ನು ಅವರಿಗೆ ಹಂಚಬೇಕು ಎನ್ನುತ್ತಾರೆ. ಮೊನ್ನೆ ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತಿನಲ್ಲಿ ಸಮಾನ ಹಂಚಿಕೆ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಇಲ್ಲಿರುವ ಜನರ ಒಡವೆಗಳನ್ನು ಆಸ್ತಿಯನ್ನು ವಶಪಡಿಸಿಕೊಂಡು ಮುಸ್ಲಿಮರಿಗೆ ಹಂಚುತ್ತೇವೆ ಎನ್ನುವ ದಾಷ್ರ್ಟ್ಯ ಪ್ರದರ್ಶಿಸುತ್ತಾರೆ. ನಮ್ಮ ತಾಯಂದಿರು, ನಮ್ಮ ಸೋದರಿಯರು ಸಂಗ್ರಹ ಮಾಡಿರುವ ಸಂಪತ್ತನ್ನು ವಶಪಡಿಸಿಕೊಂಡು ಅನ್ಯ ಕೋಮಿನವರಿಗೆ ಹಂಚುತ್ತೇವೆ ಎನ್ನುವ ಮಾತನಾಡುತ್ತಾರೆ ರಾಹುಲ್ ಗಾಂಧಿ. ಈಗಾಗಲೇ ಸಿದ್ದರಾಮಯ್ಯ ಈ ರಾಜ್ಯದಲ್ಲಿ ಇಂತಹ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಂದ ನಂತರ ಇಲ್ಲಿಯ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ.
ತನಿಖೆಗಳ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್:
ಹಲ್ಲೆಗಳ ಬಗ್ಗೆ ತನಿಖೆ ಮಾಡುತ್ತಿಲ್ಲ. ಬಾಂಬ್ ಸ್ಫೋಟದ ತನಿಖೆ ಮಾಡುತ್ತಿಲ್ಲ. ಇವತ್ತು ಎನ್‌ಐಎ ಸಕ್ರಿಯವಾಗಿ ಇರುವುದರಿಂದ ನಾವು ಬದುಕಿದ್ದೇವೆ. ಕಾಂಗ್ರೆಸ್ಸೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ, ಎನ್‌ಐಎ ಸಂಸ್ಥೆಯೇ ಇಲ್ಲದಿರುತ್ತಿದ್ದರೆ, ಏನಾಗುತ್ತಿತ್ತು ಯೋಚಿಸಿ. ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಕರ್ನಾಟಕ ಸರಕಾರ 15 ಲಕ್ಷ ಪರಿಹಾರ ಕೊಡುತ್ತದೆ. ಆದರೆ ಹತ್ಯೆಗೊಳಗಾದ ಕನ್ನಡಿಗರ ಕುಟುಂಬಕ್ಕೇ ಈ ಸರಕಾರ ಪರಿಹಾರ ನೀಡುತ್ತಿಲ್ಲ. ಕೊಡಗಿನಲ್ಲಿ ಸಿದ್ದಾಪುರದಲ್ಲಿ ಮನೆ ಮನೆ ಸಂಪರ್ಕ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಯಿತು. ಆ ತನಿಖೆಯನ್ನೂ ಮಾಡಬೇಕು. ಅದರ ಹಿಂದೆ ಏನಿದೆ, ಅದು ಅಪಘಾತವೆ, ಅಪಘಾತ ಮಾಡಿ ಪಲಾಯನವೆ? ಎಂಬುದು ತನಿಖೆಯಾಗಬೇಕಿದೆ.
ರಾಜ್ಯದಲ್ಲಿ ಚುನಾವಣೆಯ ವಾತಾವರಣ ಬಿಜೆಪಿ ಪರವಾಗಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಅಲೆ ಇದೆ. ಕೇರಳದಲ್ಲಿ ಪ್ರವಾಸ ಮಾಡಿ ಬಂದಾಗ, ಅಲ್ಲಿನ ಜನತೆ ಕೂಡ ಮೋದಿಯವರ ಉತ್ತಮ ಆಡಳಿತ ಮೆಚ್ಚಿಕೊಂಡು ಬಿಜೆಪಿಯನ್ನು ಆಶೀರ್ವದಿಸಲು ಮುಂದಾಗಿದ್ದಾರೆ. ಮೋದಿ ಅವರು ಕೊಟ್ಟಿರುವ ಹತ್ತುವರ್ಷಗಳ ಅಭಿವೃದ್ಧಿಪರ ಆಡಳಿತ, ಜನ ಕಲ್ಯಾಣ ಯೋಜನೆಗಳು ಜನರ ಮನಸ್ಸಿಗೆ ಮುಟ್ಟಿವೆ. ವಿಶೇಷವಾಗಿ ಭ್ರಷ್ಟಾಚಾರ ರಹಿತ ಆಡಳಿತ, ಭಯೋತ್ಪಾದನೆ ಮುಕ್ತ ದೇಶವನ್ನು ನಿರ್ಮಾಣ ಮಾಡಿರುವುದು, ಮತ್ತು ಜಗತ್ತಿನಲ್ಲಿ ಭಾರತಕ್ಕೆ ಇಂದು ದೊರೆಯುವ ಗೌರವ- ಇವೆಲ್ಲ ದೇಶದ ಜನತೆಗೆ ಮನವರಿಕೆಯಾಗಿದೆ. ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ.
ಚುನಾವಣೆ ಬಂದಾಗ ಕಾಂಗ್ರೆಸ್ ಬಿಜೆಪಿ ವಿರುದ್ಧ, ಪ್ರಧಾನಿ ಮೋದಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತದೆ. ಈಗಾಗಲೇ ಕೇಂದ್ರ ಸರಕಾರ www.shetapatra.in ಎಂಬ ವೆಬ್ ತಾಣದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ ಎಲ್ಲ ಯೋಜನೆಗಳು ಸ್ಕೀಮ್‌ಗಳ ವಿವರವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
* ಮನಮೋಹನ್ ಸಿಂಗರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಬಂದಿರುವುದು ಕೇವಲ 80 ಸಾವಿರ ಕೋಟಿ ರೂ ಅನುದಾನ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅವಧಿಯಲ್ಲಿ 2.5 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಅಂದರೆ ಯುಪಿಎ ಅವಧಿಯ ಅನುದಾನಕ್ಕಿಂತ ಎರಡೂವರೆ ಪಟ್ಟಿಗಿಂತಲೂ ಹೆಚ್ಚು ಅನುದಾನ ಕರ್ನಾಟಕಕ್ಕೆ ಬಂದಿದೆ.
* ಈ 75 ವರ್ಷಗಳಲ್ಲಿ ಮಾಡಿರುವ ಸಾಧನೆ- ಈ ದೇಶವನ್ನು ರಾಜ್ಯವನ್ನು ಲೂಟಿ ಮಾಡಿದ್ದು, ಕಾಂಗ್ರೆಸ್‌ನ ದಾಖಲೆ. ಹಿಂದೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಎಷ್ಟು ಅನುದಾನ ಬಂದಿದೆ, ಮೋದಿ ಸರಕಾರದಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದನ್ನು ಒಮ್ಮೆ ತುಲನೆ ಮಾಡಿ ನೋಡಿ. ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ರಾಷ್ಟ್ರೀಯ ಹೆದ್ದಾರಿಗೆ ಎಷ್ಟು ಅನುದಾನ ಬಂದಿದೆ? ಇವತ್ತು ನಿತಿನ್ ಗಡ್ಕರಿ ಅವರ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಒಮ್ಮೆ ದಯವಿಟ್ಟು ಹೋಲಿಸಿ ನೋಡಿ. ನಿಮ್ಮದೇ ಸರಕಾರ, ನಿಮ್ಮದೇ ಅಧಿಕಾರಿಗಳು ಇದ್ದಾರೆ. ದಾಖಲೆಗಳನ್ನು ತರಿಸಿ ನೋಡಿ ಎಂದು ನಳಿನ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಚುನಾವಣಾ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಅರ್ವಾರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


