ಮಂಗಳೂರು: ಕರ್ನಾಟಕ ರಾಜ್ಯಕ್ಕೆ ನರೇಂದ್ರ ಮೋದಿಯವರು ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದಾರೆ. ಆ ಕಾರಣಕ್ಕೆ ರಾಜ್ಯದ ಜನ ಕಾಂಗ್ರೆಸ್ ಕೈಗೆ ಚೊಂಬು ನೀಡುವುದು ಗ್ಯಾರಂಟಿ. ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು. ಹಾಗಾಗಿ ಜನತೆ ನಿಮಗೆ ಚೊಂಬು ಕೊಡುವುದು ಗ್ಯಾರಂಟಿ. ಸಿದ್ದರಾಮಯ್ಯ ಸರಕಾರ ಬಂದು ಒಂದು ವರ್ಷವಾಯ್ತು. ಈ ಸರಕಾರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಕೊಟ್ಟ ಅನುದಾನವೆಷ್ಟು ಬಹಿರಂಗಪಡಿಸಿ. ನಮ್ಮ ಶಾಸಕರಿಗಲ್ಲ, ಕಾಂಗ್ರೆಸ್ ಶಾಸಕರಿಗೆ ಕೊಟ್ಟ ಹಣವನ್ನಾದರೂ ಬಹಿರಂಗಪಡಿಸಿ ನೋಡೋಣ. ನಮ್ಮ ಶಾಸಕರು ಇಲ್ಲಿದ್ದಾರೆ. ಅವರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಶಾಸಕರ ನಿಧಿಗೆ ಹಣ ಬಂದಿಲ್ಲ. ತಲಾ 2 ಕೋಟಿ ರೂ ನೀಡಬೇಕಿತ್ತು. ಅದು ಬಂದಿಲ್ಲ. ಸುಳ್ಳು ಗ್ಯಾರಂಟಿ ಘೋಷಣೆಗಳ ನೆಪದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಈ ಸರಕಾರದಲ್ಲಿ ಹಣವಿಲ್ಲ. ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ಗ್ಯಾರಂಟಿಯನ್ನೂ ಸಮರ್ಪಕವಾಗಿ ಕೊಡುತ್ತಿಲ್ಲ. ನೀವೇ ಘೋಷಣೆ ಮಾಡಿದ ಗ್ಯಾರಂಟಿಯನ್ನಾದರೂ ಸಮರ್ಪಕವಾಗಿ ಕೊಡಿ ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇರಳ ಸರಕಾರವಂತೂ ದಿವಾಳಿಯಾಗಿದೆ. ಈಗ ಕರ್ನಾಟಕದ ಕಾಂಗ್ರೆಸ್ ಸರಕಾರವೂ ರಾಜ್ಯವನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ 3 ವರ್ಷದಲ್ಲಿ ದಿವಾಳಿ ಗ್ಯಾರಂಟಿ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಇವರಲ್ಲಿ ಹಣವಿಲ್ಲ. ಕುಡಿಯುವ ನೀರಿನ ಪೂರೈಕೆಗೆ ಹಣವಿಲ್ಲ. ಮಠ ಮಂದಿರಗಳಿಗೆ, ಶಾಲೆಗಳ ಅಭಿವೃದ್ಧಿಗೆ ಅನದಾನವಿಲ್ಲ, ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ಅನುದಾನವಿಲ್ಲ. ಕಾಂಗ್ರೆಸ್‌ನ ಮಂತ್ರಿಗಳ ಮನೆ ಬಾಗಿಲಿಗೆ ಮಾತ್ರ ಅನುದಾನ ಹೋಗುತ್ತಿದೆ. ಕಾಂಗ್ರೆಸ್ಸಿನ ಶಾಸಕರೇ ಈ ಮಾತು ಹೇಳುತ್ತಿದ್ದಾರೆ.
ಈ ಜಿಲ್ಲೆಯ ಅಭಿವೃದ್ಧಿಗೆ ಕಳೆದ 33 ವರ್ಷಗಳಲ್ಲಿ ಬಿಜೆಪಿಯ ಲೋಕಸಭಾ ಸದಸ್ಯರಿಗೆ ಆಶೀರ್ವಾದ ಮಾಡಿದ್ದಾರೆ.12 ವರ್ಷಗಳ ಕಾಲ ಧನಂಜಯ ಕುಮಾರ್, 5 ವರ್ಷಗಳ ಕಾಲ ಡಿ.ವಿ ಸದಾನಂದ ಗೌಡರು, 15 ವರ್ಷಗಳ ಕಾಲ ನನಗೆ ಆಶೀರ್ವಾದ ಮಾಡಿದ್ದಾರೆ. ಮಂಗಳೂರು ಬಂದರು, ವಿಮಾನ ನಿಲ್ದಾಣ ಶ್ರೀನಿವಾಸ ಮಲ್ಯರು ಮಾಡಿದ್ದು ಎಂಬುದನ್ನು ನಾವು ಒಪ್ಪತ್ತೇವೆ. ಅವರನ್ನು ಆರಾಧಿಸುತ್ತೇವೆ. ಆದರೆ ಅವರ ಕಾಲದಲ್ಲಿ ನಿರ್ಮಾಣಗೊಂಡ ಯೋಜನೆಗಳನ್ನು ಅನಂತರದ ಕಾಲದಲ್ಲಿ ಕಾಂಗ್ರೆಸ್‌ನವರು ಏನಾದರೂ ಅಭಿವೃದ್ಧಿ ಮಾಡಿದ್ದಾರೆಯೆ? ಅವುಗಳ ಅಭಿವೃದ್ಧಿಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪ್ರಗತಿ ಹೊಂದಬೇಕಾದರೆ, ಹೊಸ ರನ್‌ವೇಗಳನ್ನು ಮಾಡಬೇಕಾದರೆ ಬಿಜೆಪಿ ಸರಕಾರವೇ ಬರಬೇಕಾಯಿತು. ಕಾಂಗ್ರೆಸ್‌ನವರು ಅದಕ್ಕೆಲ್ಲ ಅಡ್ಡಗಾಲು ಹಾಕಿದವರು. ಇವತ್ತಿಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವವವರು ಕಾಂಗ್ರೆಸ್ ಪಕ್ಷದವರು. ಇದನ್ನು ನೀವೇ ಪ್ರತ್ಯಕ್ಷವಾಗಿ ಕಾಣುತ್ತಿದ್ದೀರಿ ಎಂದು ನಳಿನ್ ವಿವರಿಸಿದರು.
ಮಂಗಳೂರು ಅಭಿವೃದ್ಧಿ ವಿಚಾರ:
ಹಿಂದೆ ಸುರತ್ಕಲ್‌ನಲ್ಲಿ ಕೆಆರ್‍ಇಸಿ ಇತ್ತು. ಅದನ್ನು ಎನ್‌ಐಟಿಕೆ ಮಾಡಿ ಅಭಿವೃದ್ಧಿಪಡಿಸಿದವರು ನಾವು. ಮಂಗಳೂರು ಬಂದರನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದು ಬಿಜೆಪಿ ಕಾಲದಲ್ಲಿ. ಧನಂಜ ಕುಮಾರ್ ಕಾಲದಲ್ಲಿ ಆಯ್ತು ಬಳಿಕ ಈಗ ಮೋದಿ ಸರಕಾರ 4000 ಕೋಟಿ ರೂ ಅನುದಾನ ನೀಡಿ ಅಭಿವೃದ್ಧಿ ಮಾಡಿದೆ. ಅವರೇ ಶಿಲಾನ್ಯಾಸ ಮಾಡಿದ್ದರು. ಈಗ ಮಾದರಿಯಾದ ಪೋರ್ಟ್ ಆಗಿದೆ. ಇಮಾನ ನಿಲ್ದಾಣ ಈಗ 24 ಗಂಟೆ ಚಾಲನೆಯಲ್ಲಿದೆ. ನಾನು ಸಂಸದನಾದ ಆರಂಭದ ಹೊತ್ತಿಗೆ ಮಧ್ಯಾಹ್ನದ ವರೆಗೆ ಮಾತ್ರ ಕಾರ್ಯಾಚರಣೆ ಇತ್ತು. ಅಂತಾರಾಷ್ಟ್ರೀಯ ವಿಮಾನಗಳು ಹೋಗುತ್ತಿವೆ. ಮುಂದಕ್ಕೆ ಇನ್ನಷ್ಟು ರನ್ ವೇ ವಿಸ್ತರಣೆಗೆ ಅಡ್ಡಿ ಮಾಡಿದವರು ಇದೇ ಕಾಂಗ್ರೆಸ್. 84 ಎಕರೆ ಭೂಸ್ವಾಧೀನ ಬಾಕಿ ಇದೆ. ಅದು ಪೂರ್ಣಗೊಂಡರೆ ವಿಮಾನ ನಿಲ್ದಾಣದ ವಿಸ್ತರಣೆ ಇನ್ನಷ್ಟು ಸುಗಮವಾಗುತ್ತದೆ. ಅದನ್ನು ಆಗದಂತೆ ಈಗಲೂ ತಡೆಯುತ್ತಿರುವವರು ಕಾಂಗ್ರಸ್‌ನವರು ಎಂದು ಸಂಸದರು ಆರೋಪಿಸಿದರು.
ವಿಮಾನ ನಿಲ್ದಾಣ, ಬಂದರು, ರೈಲ್ವೇ ಅಭಿವೃದ್ಧಿ ಕಾರ್ಯಗಳು ಮೋದಿ ಸರಕಾರದಲ್ಲಿ ಆಗಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣ ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಯಾಗುತ್ತಿದೆ. ಎರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಾವು ನಿರ್ಮಿಸಿದ್ದೇವೆ. ಯಾಕೆ ಕಾಂಗ್ರೆಸ್ ಇದ್ದಾಗ ಆಗಲಿಲ್ಲ? ಎಂದ ನಳಿನ್ ಪ್ರಶ್ನಿಸಿದರು. ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣ 24 ಕೋಟಿ, ಬಂಟ್ವಾಳದ ರೈಲು ನಿಲ್ದಾಣ 25 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಮಂಗಳೂರು ಜಂಕ್ಷನ್ 350 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಕಾಮಗಾರಿ ಆರಂಭವಾಗಿದೆ ಎಂದರು.
ಹೇಗಿತ್ತು ಮಂಗಳೂರು... ಮನಪಾ ಬಹಳ ವರ್ಷಗಳ ಕಾಳ ಆಡಳಿತ ನಿಷ್ಕ್ರಿಯವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇ ನಗರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಿತು. ಬಿಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರಸ್ತೆಗಳ ಕಾಂಕ್ರಿಟೀಕರಣ ಆರಂಭವಾಯಿತು. ಕೃಷ್ಣ ಪಾಲೆಮಾರ್ ಸಚಿವರಾಗಿದ್ದಾಗ 100 ಕೋಟಿ ರೂ ಅನುದಾನ ಬಂತು. ಬಳಿಕ ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಗಳ ಅಡಿಯಲ್ಲಿ ಮಂಗಳೂರು ನಗರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ಬಂದಿದೆ. ಸಿದ್ದರಾಮಯ್ಯನವರು ಒಮ್ಮೆ ಕಣ್ಣು ತೆರೆದು ನೋಡಲಿ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕ್ರೀಡಾಂಗಣ ನಿರ್ಮಾಣವಾಗಿದೆ. ಸರಕಾರಿ ವೆನ್ಲಾಕ್ ಆಸ್ಪತ್ರೆ ಮೊದಲು ಹೇಗಿತ್ತು? ಈಗ ಹೇಗಿದೆ, ಒಮ್ಮೆ ನೋಡಿ. ಗುಣಮಟ್ಟ ಹಾಗೂ ಸೌಲಭ್ಯಗಳಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೆನ್ಲಾಕ್ ಅಭಿವೃದ್ಧಿಯಾಗಿದೆ. ಕೋವಿಡ್ ಬಂದಾಗ ನನ್ನ ಸಂಸದ ನಿಧಿಯಿಂದ 2 ಕೋಟಿ ರೂ ಹಣ ನೀಡಿ, ಬೇರೆ ಬೇರೆ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನಿಧಿಗಳನ್ನು ಪಡೆದುಕೊಂಡು 110 ವೆಂಟಿಲೇಟರ್‍ಗಳನ್ನು ತರಿಸಿದೆವು. ಮೊದಲು ಇದ್ದಿದ್ದು 16 ವೆಂಟಿಲೇಟರ್‍ಗಳು. ಅದರಲ್ಲಿ 12 ವೆಂಟಿಲೇಟರ್‍ಗಳು ಕೆಲಸ ಮಾಡುತ್ತಿರಲಿಲ್ಲ. ಆಕ್ಸಿಜನ್ ಘಟಕ ಇರಲಿಲ್ಲ. ಇವತ್ತು ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್ ಘಟಕ ನೀಡಿದ್ದೇವೆ. ಮನೆಮನೆಗೆ ನೀರು ಪೂರೈಕೆ ಮಾಡಿದ್ದೇವ ಎಂದು ಸಾಧನೆಗಳ ಪಟ್ಟಿ ನೀಡಿದರು ನಳಿನ್.
ಹೆದ್ದಾರಿ ಅಭಿವೃದ್ಧಿ:
2009ರಲ್ಲಿ ಮೊದಲ ಸಲ ಸಂಸದನಾಗಿ ಬಂದಾಗ ಇಲ್ಲಿ ಮೂಲ್ಕಿಯಿಂದ ಬಿ.ಸಿ ರೋಡ್ ತನಕ ಇರ್ಕಾನ್ ಕಂಪನಿಯ ಮೂಲಕ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಆದರೆ ಕಾಮಗಾರಿ ಆರಂಭಿಸಿ 11 ವರ್ಷವಾದರೂ ಪೂರ್ಣಗೊಳ್ಳದೆ ಅರ್ಧಕ್ಕೆ ಯೋಜನೆ ನಿಂತಾಗ ಎನ್‌ಎಂಪಿಟಿ ಮೂಲಕ ಕಾಮಗಾರಿ ನಡೆಸಿ ಆ ಭಾಗದ ಹೆದ್ದಾರಿ ಚತುಷ್ಪಥ ಪೂರ್ಣಗೊಳಿಸಿದ್ದು ಬಿಜೆಪಿ ಸರಕಾರ. ಆಗ ಅದು ಮಾತ್ರ ಚತುಷ್ಪಥ ರಸ್ತೆಯಾಗಿತ್ತು. ಈಗ ಮಂಗಳೂರಿನಿಂದ ಅಡ್ಡಹೊಳೆ, ಬಿಕರ್ನಕಟ್ಟೆಯಿಂದ ಸಾಣೂರು ವರೆಗಿನ ಕಾಮಗಾರಿ, ಬಿ.ಸಿ ರೋಡ್‌ನಿಂದ ಚಾರ್ಮಾಡಿ ವರೆಗಿನ ಹೆದ್ದಾರಿಯಲ್ಲಿ ಪುಂಜಾಲಕಟ್ಟೆ ವರೆಗೆ ಕಾಮಗಾರಿ ಮುಗಿದಿದೆ. ತಲಪಾಡಿಯಿಂದ ಹೆಜಮಾಡಿ ವರೆಗಿನ ಕಾಮಗಾರಿ ಪೂರ್ತಿಯಾಗಿದೆ. ಪೆರಿಯ ಶಾಂತಿಯಿಂದ ಶಿರಾಡಿ ವರೆಗೆ ಕಾಮಗಾರಿಗೆ ಟೆಂಡರ್ ಆಗಿದೆ.. ದಕದ ಮಾಣಿ-ಮೈಸೂರ ರಸ್ತೆಯಲ್ಲಿ ಅಂದು ಯಡಿಯೂರಪ್ಪ ಸರಕಾರ ಅಭಿವೃದ್ಧಿಪಡಿಸಿತ್ತು. ಈಗ ಅದು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಳಿನ್ ವಿವರಿಸಿದರು.
ಪಾಸ್‌ಪೋರ್ಟ್ ಕಚೇರಿ ಮಂಗಳೂರಿಗೆ ಬಂದಿದ್ದು ಎಸ್.ಎಂ ಕೃಷ್ಣ ಅವರು ಬಿಜೆಪಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ. ಎಂಆರ್‍ಪಿಎಲ್ ಬಂದಿದ್ದು ಧನಂಜಯ ಕುಮಾರ್ ಕಾಲದಲ್ಲಿ, ಎಸ್‌ಇಝಡ್ ಅವರ ಕಾಲದಲ್ಲಿ, ನರೇಂದ್ರ ಮೋದಿ ಅವರ ಸರಕಾರದಲ್ಲಿ ಇವುಗಳ ಅಭಿವೃದ್ಧಿ ಆಯಿತು. ಎರಡನೇ ಹಂತದ ವಿಸ್ತರಣೆ ಆರಂಭವಾಯಿತು. ಇಂದಿರಾಗಾಂಧಿ ಶಿಲಾನ್ಯಾಸ ಮಾಡಿದಾಗ ಬಂದರಿನಲ್ಲಿ ಮೀನುಗಾರಿಕಾ ಜೆಟ್ಟಿಗೆ ಅವಕಾಶ ಇರಲಿಲ್ಲ. ಈಗ ಪ್ರಧಾನಿ ಮೋದಿ ಅವರು ಸಾಗರಮಾಲಾ ಯೋಜನೆಯಲ್ಲಿ ಅನುದಾನ ಕೊಟ್ಟಿದ್ದಾರೆ. ದೇಶದಲ್ಲಿ ಒಂದೇ ಒಂದು ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಕೊಚ್ಚಿಯಲ್ಲಿ. ಇಂದು 1000 ಕೋಟಿ ವೆಚ್ಚ ಮಾಡಿ ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಅನಂತಕುಮಾರ್ ಅವರ ಸಚಿವರಾಗಿದ್ದಾಗ ಎರಡು ಪ್ಲಾಸ್ಟಿಕ್ ಪಾರ್ಕ್ ಗೆ ಅನುಮತಿ ಕೊಟ್ಟರು. ಒಂದು ಪಂಜಾಬ್‌ನಲ್ಲಿ ಒಂದು ಮಂಗಳೂರಿನಲ್ಲಿ. ಆ ಪ್ಲಾಸ್ಟಿಕ್ ಪಾರ್ಕ ಈಗ ನಿರ್ಮಾಣವಾಗುತ್ತಿದೆ ಎಂದು ನಳಿನ್ ಮಾಹಿತಿ ನೀಡಿದರು.
ಅಂಕಿ-ಅಂಶಗಳು:
1, 13,000 ಕೋಟಿ ರೂ.ಗಳನ್ನು ನರೇಂದ್ರ ಮೋದಿ ಸರಕಾರ ಈ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಿದೆ. ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಮಂಗಳೂರು ನಗರದಲ್ಲಿ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆದವು. ಗ್ರಾಮಸ್ವರಾಜ್ಯದ ಕಲ್ಪನೆ ಅಡಿಯಲ್ಲಿ ಸಂಸದರ ಆದರ್ಶ ಗ್ರಾಮದ ಯೋಜನೆ ರೂಪಿಸಲಾಗಿದೆ. ಬಳ್ಪ ಇಂದು 60 ಕೋಟಿ ರೂ ವೆಚ್ಚದಲ್ಲಿ ಆದರ್ಶ ಗ್ರಾಮವಾಗಿ ಅಭಿವೃದ್ಧಿಯಾಗಿದ್ದು ಬಿಜೆಪಿ ಕಾಲದಲ್ಲಿ. ಜಲಜೀವನ್ ಮಿಷನ್ ಅಡಿಯಲ್ಲಿ 1,78,000 ನಳ್ಳಿಗಳ ಜೋಡಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 1,50,000 ರೈತರು ಫಲಾನುಭವಿಗಳಾಗಿದ್ದಾರೆ.
ಸ್ವಚ್ಛ ಭಾರತದ ಅಡಿಯಲ್ಲಿ 10 ಸಾವಿರ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ. ಉಜ್ವಲಾ ಯೋಜನೆ ಅಡಿಯಲ್ಲಿ 80,000 ಗ್ಯಾಸ್ ಕನೆಕ್ಷನ್‌ಗಳನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 10 ಸಾವಿರ ಕುಟುಂಬಗಳಿಗೆ ಅಕ್ಕಿ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 17 ಲಕ್ಷ ಕುಟುಂಬಗಳಿಗೆ ಮನೆ ನೀಡಲಾಗಿದೆ.
ಗ್ರಾಮ ಸಡಕ್ ಯೋಜನೆಯಲ್ಲಿ 264 ಕಿ.ಮೀ ರಸ್ತೆ ನಿರ್ಮಾಣವಾಗಿದೆ. ಆಯುಷ್ಮಾನ್ ಯೋಜನೆ ಅಡಿಯಲ್ಲಿ 4.5 ಲಕ್ಷ ಜನ ನೋಂದಣಿಯಾಗಿದ್ದಾರೆ. ಮುದ್ರಾ ಸಾಲ ಸೌಲಭ್ಯ 3 ಲಕ್ಷ ಜರೊಗೆ 5 ಸಾವರ ಕೋಟಿ ಸಾಲ ವನ್ನು ಹಂಚಲಾಗಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಲ್ಲಿ 13,000 ಕುಟುಂಬಗಳಿಗೆ, ಸ್ವನಿಧಿ ಯೋಜನೆಯಲ್ಲಿ 29,000 ಕುಟುಂಬಗಳಿಗೆ, ಶ್ರಮ್ ಯೋಜನೆಯಲ್ಲಿ 2.5 ಲಕ್ಷ ಕುಟುಂಬಗಳು, ಉಜಾಲಾ ಯೋಜನೆಯಡಿ 20 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗಿದೆ. ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಮೊಬೈಲ್ ದೂರವಾಣಿ ನೆಟ್‌ವರ್ಕ್ ಸಮಸ್ತೆ ಬಗೆಹರಿಸಲು 60 ಹೊಸ ಟವರ್‍ಗಳನ್ನು ಹಾಕಲಾಗಿದೆ ಎಂದು ಸಂಸದರು ಲೆಕ್ಕ ನೀಡಿದರು.
ರಾಷ್ಟ್ರೀಯ ಹಿತದ ವಿಚಾರಗಳಲ್ಲಿ ದಕ್ಷಿಣ ಕನ್ನಡ ಜನತೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಯುವ ನಾಯಕ, ದೇಶವನ್ನು ಕಾಯುವ ಕಾಯಕ ಮಾಡಿ ಬಂದ ಮಾಜಿ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ನಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ಜಿಲ್ಲೆಯ ಜನತೆ ಅವರನ್ನು ದಾಖಲೆಯ ಅಂತರದ ಮತಗಳಿಂದ ಗೆಲ್ಲಿಸುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು ನಳಿನ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


