ಮಂಗಳೂರು: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಎಂಬ ಪಿಡುಗು ಆಚರಣೆಯಲ್ಲಿ ಇರದೇ ಇರಬಹುದು. ಆದರೆ ದೇಶದ ಬಹುತೇಕ ಕಡೆಗಳಲ್ಲಿ ಈ ಪದ್ಧತಿ ಇಂದಿಗೂ ಜೀವಂತವಾಗಿದೆ. ಅಂತಹ ಅಮಾನುಷ ಪದ್ಧತಿ ವಿರುದ್ಧ ಯುವ ಜನತೆ ಧ್ವನಿ ಎತ್ತಬೇಕು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಆಂತರಿಕ ಗುಣಮಟ್ಟ ಖಾತರಿಕೋಶ (ಐ.ಕ್ಯೂಎ.ಸಿ), ಗ್ರಂಥಾಲಯ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಡಾ. ಬಿ. ಅರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳ ಪ್ರದರ್ಶನ ಮತ್ತು ಪುಸ್ತಕ ವಿಮರ್ಶೆ "ಗ್ರಂಥಾವಲೋಕನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಲತಾ ಪಂಡಿತ್ ಮಾತನಾಡಿ, ಶೋಷಣೆಗೆ ಒಳಗಾದವರಿಗೆ ನ್ಯಾಯ ಒದಗಿಸುವಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ರಚನಾ ಸಭೆಯಿಂದ ಹಿಡಿದು ಸಂವಿಧಾನದ ರಚನೆ ಸಂದರ್ಭಲ್ಲಿಯೂ ಬಹಳಷ್ಟು ಶ್ರಮಿಸಿದ್ದಾರೆ. ಐದು ಮೂಲಭೂತ ಹಕ್ಕುಗಳು ದೊರಕದೇ ಇದ್ದಾಗ ಆರನೇ ಮೂಲಭೂತ ಹಕ್ಕು 'ಸಂವಿಧಾನಬದ್ಧ ಪರಿಹಾರದ ಹಕ್ಕ'ನ್ನು ಸೇರಿಸಿ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ವಿಶಿಷ್ಟವಾಗಿರುವಂತೆ ಮಾಡಿದವರು. ನಾವು ಮಾಡುವ ಕೆಲಸದಿಂದ ಶ್ರೇಷ್ಠರಾಗಬೇಕೇ ವಿನಃ ಹುಟ್ಟಿನಿಂದಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದವರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಮಕೃಷ್ಣ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ. ಆರ್., ಗ್ರಂಥಪಾಲಕಿ ಡಾ. ವನಜಾ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತಾದ ಪುಸ್ತಕಗಳ ವಿಮರ್ಶೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ