ಎಸ್.ಡಿ.ಎಂ ಸಂಖ್ಯಾಶಾಸ್ತ್ರ ವಿಚಾರ ಸಂಕಿರಣ
ಉಜಿರೆ: ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಣಿತರು ಸಂಖ್ಯಾಶಾಸ್ತ್ರದ ಮೌಲಿಕತೆಯನ್ನು ಅರ್ಥೈಸಿಕೊಂಡು ಕಾರ್ಯೋನ್ಮುಖರಾದರೆ ವ್ಶೆಜ್ಞಾನಿಕ, ತಾಂತ್ರಿಕ ಆವಿಷ್ಕಾರಗಳ ಸ್ವರೂಪ ಬದಲಾಯಿಸಿ ಹೊಸ ಹೆಜ್ಜೆಗಳನ್ನು ಇನ್ನಷ್ಟು ತೀವ್ರಗೊಳಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಸಂಖ್ಯಾಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಟಿ.ಪಿ.ಎಂ. ಪಕ್ಕಳ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗಗಳು ಶನಿವಾರದಂದು ‘ಸಂಖ್ಯಾಶಾಸ್ತ್ರದ ಒಳನೋಟ ಮತ್ತು ಡೇಟಾ ಸೈನ್ಸ್ನ ಟ್ರೆಂಡ್’ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಣಿತರು ನಡೆಸುವ ಪ್ರಯೋಗಗಳ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರವನ್ನೂ ಪರಿಗಣಿಸಬೇಕು. ಇದರಿಂದ ವ್ಶೆಜ್ಞಾನಿಕ, ತಾಂತ್ರಿಕ ಪ್ರಯೋಗಗಳಿಗೆ ಹೊಸ ಆಯಾಮ ದೊರಕುತ್ತದೆ. ಆಗ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳು ವಿವಿಧ ವಲಯಗಳ ಕಾರ್ಯನಿರ್ವಹಣೆಗೆ ಬೇಕಾಗುವ ತಾಂತ್ರಿಕ ಸಾಫ್ಟ್ವೇರಗಳನ್ನು ವಿನೂತನವಾಗಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಗೆ ಹೊಸ ವೇಗ ದೊರಕುತ್ತದೆ ಎಂದರು.
ಕಳೆದ ಒಂದು ದಶಕದ ಅವಧಿಯಲ್ಲಿ ತಂತ್ರಜ್ಞಾನದ ಸ್ವರೂಪ ನಿರಂತರ ಬದಲಾಗುತ್ತಲೇ ಇದೆ. ಇದನ್ನು ತಂತ್ರಜ್ಞಾನ ವಲಯದ ಪರಿಣತರು ಸೂಕ್ಷ್ಮವಾಗಿ ಗಮನಿಸಬೇಕು. ಸಂಖ್ಯಾಶಾಸ್ತ್ರದಂತಹ ಜ್ಞಾನಶಿಸ್ತಿನ ವಿಶೇಷತೆಯನ್ನೂ ಗೊತ್ತುಮಾಡಿಕೊಳ್ಳಬೇಕು. ಆ ಮೂಲಕ ತಾಂತ್ರಿಕತೆಯ ಪ್ರಯೋಜನಗಳನ್ನು ಹಿಂದಿಗಿಂತಲೂ ವಿಭಿನ್ನವಾಗಿ ತಲುಪಿಸುವ ಕೌಶಲ್ಯಜ್ಞಾನವನ್ನು ದಾಟಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು.
ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಿಗ್ ಡೇಟಾದಂತಹ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ಇದರೊಂದಿಗೆ ಸಂಖ್ಯಾಶಾಸ್ತ್ರಜ್ಞರಿಗೆ ತಮ್ಮ ಜ್ಞಾನಶಿಸ್ತನ್ನು ವಿಸ್ತರಿಸಿಕೊಳ್ಳುವ ಅವಕಾಶಗಳೂ ರೂಪುಗೊಳ್ಳುತ್ತಿವೆ. ಅಲ್ಲದೇ ವೃತ್ತಿಪರ ಕೋರ್ಸ್ಗಳು ಸಂಖ್ಯಾಶಾಸ್ತ್ರದೊಂದಿಗೆ ನಂಟನ್ನು ಪ್ರತಿಷ್ಠಾಪಿಸಿಕೊಳ್ಳುತ್ತಿವೆ. ಹೊಸ ಕಾಲದಲ್ಲಿ ಇಂಜಿನಿಯರಿಂಗ್ ಜನಪ್ರಿಯ ಕೋರ್ಸ್ ಆಗಿದ್ದು ದುರದೃಷ್ಟವಶಾತ್ ಅಲ್ಲಿ ಸಂಖ್ಯಾಶಾಸ್ತ್ರಕ್ಕೆ ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಮಾಹಿತಿ ಪ್ರಧಾನ ಜಗತ್ತಿನಲ್ಲಿ ವೃತ್ತಿಪರ ಕೋರ್ಸ್ಗಳಲ್ಲಿ ಸಂಖ್ಯಾಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಪ್ಯೂಟರ್ ಡೇಟಾ ವಿಜ್ಞಾನಿಗಳು ಹಾಗೂ ಸಂಖ್ಯಾಶಾಸ್ತ್ರಜ್ಞರು ಒಂದಾಗಬೇಕು. ಆಗಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹೆಚ್ಚಿನ ಬೋಧನೆ ಮತ್ತು ಕಲಿಕೆಗೆ ಹೊಸ ರೂಪ ತಂದುಕೊಳ್ಳಬಹುದಾದ ಅವಕಾಶಗಳು ಸೃಷ್ಟಿಯಾಗುತ್ತವೆ. ಸಾಂಪ್ರದಾಯಿಕ ಆಲೋಚನೆಗಳನ್ನು ಮೀರಿ ಹೊಸಕಾಲಕ್ಕೆ ಅನುಗುಣವಾಗುವಂತೆ ಬದಲಾಗುವುದಕ್ಕೆ ಅನುವು ಮಾಡಿಕೊಡುತ್ತವೆ. ಆಗ ಉತ್ತಮ ಭವಿಷ್ಯ ಕಂಡುಕೊಳ್ಳುವ ಹೆಜ್ಜೆಗಳು ನಿಖರವಾಗುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸಂಖ್ಯಾಶಾಸ್ತ್ರವು ನಿಖರ ಅಂಕಿ-ಅಂಶಗಳ ಆಧಾರದಲ್ಲಿ ಕರಾರುವಕ್ಕಾದ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ ಎಂದರು. ಸಂಖ್ಯಾಶಾಸ್ತ್ರಜ್ಞನ ಪ್ರಜ್ಞಾಪೂರ್ಣ ತೊಡಗಿಸಿಕೊಳ್ಳುವಿಕೆಯು ವಿವಿಧ ಸಂಶೋಧನಾ ವಲಯಗಳು ನೆಚ್ಚಿಕೊಳ್ಳಬಹುದಾದ ಅಂಕಿ-ಅಂಶ ಸಂಬಂಧಿತ ಅಧ್ಯಯನ ಮಾದರಿಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ಫೋಬಿಯಾ ಅಂದರೆ ಹೆದರಿಕೆ. ಎಲ್ಲರಿಗೂ ವಿಜ್ಞಾನದ ತಾಯಿಯಾದ ಗಣಿತ ಹಾಗೂ ಸೋದರಿಯಾದ ಸಂಖ್ಯಾಶಾಸ್ತ್ರದ ಹೆದರಿಕೆ ಇದೆ ಎನ್ನುತ್ತಾರೆ. ಆದರೆ ಪ್ರತೀ ಕ್ಷೇತ್ರದಲ್ಲಿ ಅಂಕಿಅಂಶ ಆಧಾರಿತವಾಗಿ ಅಭಿವೃದ್ಧಿ ನಡೆಸಲು ಸಂಖ್ಯಾಶಾಸ್ತ್ರಅತ್ಯಗತ್ಯ ಎಂದರು.
ವಿಚಾರ ಸಂಕಿರಣದ ಆಶಯ ಭಾಷಣಕಾರ, ಕ್ಯಾಲಿಕಟ್ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ಮನೋಹರನ್, ಗುಲ್ಬರ್ಗಾ ವಿ.ವಿ.ಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ವಿ. ಧಂದ್ರಾ, ಬೆಂಗಳೂರು ವಿ.ವಿ.ಯ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ.ವಿ ಪಂಡಿತ್ ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಸವಿತಾ ಕುಮಾರಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಪ್ರೀತಾ, ಗೀತಶ್ರೀ ಹಾಗೂ ಕೃತಿ ಪ್ರಾರ್ಥನೆ ಸಲ್ಲಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ನಿಖಿತಾ ಶೆಟ್ಟಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಪ್ರಿಯಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ