ಉಜಿರೆ: ಮನೆ ಮನೆಗೂ ತೆರಳಿ ಮತಯಾಚಿಸುತ್ತಿರುವ ರಾಜಕಾರಣಿಗಳು, 'ಚುನಾವಣೆ ನಾವೇ ಹೊಣೆ', 'ಮತ ಚಲಾಯಿಸಲು ಮರೆಯದಿರಿ ಮತವನ್ನು ಮಾರದಿರಿ' ಎಂಬ ಫಲಕಗಳು. ಮತಚಲಾವಣೆಯ ಮಹತ್ವವನ್ನೇಳುತ್ತಿರುವ ವಿದ್ಯಾರ್ಥಿಗಳು. 'ಹಕ್ಕೊಂದನ್ನು ನೀಡಿದೆ ಸಂವಿಧಾನ, ತಪ್ಪದೇ ಮಾಡೋಣ ಮತದಾನ' ಎಂಬ ಘೋಷವಾಕ್ಯಗಳು ಕೇಳಿಬಂದದ್ದು ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಂಗಳದಲ್ಲಿ.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತದಾನ ಜಾಗೃತಿ ಮೂಡಿಸುವ ಸಲುವಾಗಿ ರೂಪಿಸಿದ ಬೀದಿ ನಾಟಕವನ್ನು ಶುಕ್ರವಾರದಂದು ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಒಳಾಂಗಣದಲ್ಲಿ ಪ್ರಸ್ತುತ ಪಡಿಸಿದರು.
ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಮತಗಳಿಗಾಗಿ ಹೇಗೆಲ್ಲಾ ಸುಳ್ಳು ಆಶ್ವಾಸೆಗಳನ್ನು ನೀಡುತ್ತಾರೆ ಎಂಬ ವಿಷಯವನ್ನು ವೆಂಕಣ್ಣ ಮತ್ತು ಲಲಿತಕ್ಕ ಎಂಬ ಪಾತ್ರಗಳ ಮೂಲಕ ಚೊಕ್ಕವಾಗಿ ನಿರೂಪಿಸಿದರು.
ಆಸೆ,ಆಮಿಷಗಳಿಗೆ ತುತ್ತಾಗಿ ತನ್ನ ಮತವನ್ನು ಮಾರಿಕೊಳ್ಳುವ ಕುಡುಕ ಮತ್ತು ತನ್ನದೊಂದು ಮತದಿಂದ ಏನೂ ಬದಲಾಗುವುದಿಲ್ಲ ಎಂದು ದೃಢವಾಗಿ ನಂಬಿದ ಮಹಿಳೆಯ ಪಾತ್ರಗಳಿಂದ ಚುನಾವಣೆಗಳ ನೈಜ ಪ್ರಾಮುಖ್ಯತೆ ಅರಿಯದೆ ಜನ ಹೇಗೆಲ್ಲ ತಮ್ಮನ್ನ ತಾವೆ ವಂಚಿಸಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ತಲುಪಿಸಿದರು. ಕೇವಲ ಒಂದು ಮತದಿಂದ ಸುಲುಗೆಕೋರ ರಾಜಕಾರಣಿಯೊಬ್ಬ ಗದ್ದುಗೆಯೇರಿ, ನಿಷ್ಠಾವಂತ ಜನನಾಯಕಿ ಲಲಿತಕ್ಕಳಿಗೆ ಅನ್ಯಾಯವಾಗುವ ಮೂಲಕ ಜನರಿಗೆ ಮತವೊಂದರ ಪ್ರಾಧಾನ್ಯತೆ ತಿಳಿಯುತ್ತದೆ. ಸಂವಿಧಾನ ನಮಗೆ ನೀಡಿರುವ ಶ್ರೇಷ್ಠ ಹಕ್ಕೊಂದನ್ನ ತಪ್ಪದೆ ಚಲಾಯಿಸಬೇಕು ಎನ್ನುವ ಸಂದೇಶವನ್ನು ನೀಡಿ. ಜನಾಭಿವೃದ್ಧಿಗಾಗಿ ದುಡಿವ ಸಮರ್ಥ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆಯನ್ನು ನಾಟಕ ನೆನಪಿಸಿತು.
ಎಸ್.ಡಿ.ಎಮ್. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ., ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ದೀಪ ಆರ್.ಪಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಸ್ವಯಂಸೇವಕರಾದ ಸಿಂಚನ ಕಲ್ಲುರಾಯ, ಚಂದ್ರಿಕ, ವಾಣಿ, ರಾಮಕೃಷ್ಣ ಶರ್ಮ, ವೈಷ್ಣವಿ ಇತರರು ನಾಟಕದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ