ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಒಗ್ಗಟ್ಟನ್ನು ಸಾರಿ ಹೇಳುತ್ತದೆ. ಜೀವನಕ್ಕೆ ಬೇಕಾದ ಎರಡು ಹೊತ್ತಿನ ಊಟ, ಸುಖವಾದ ನಿದ್ದೆ, ಮಿತವಾದ ಮಾತು, ಸುಜ್ಞಾನದ ಚಿಂತನೆ ಇವೆಲ್ಲವೂ ಇದ್ದಾಗ ಬದುಕು ನೆಮ್ಮದಿಯನ್ನು ಕಂಡುಕೊಳ್ಳುತ್ತದೆ. ಇನ್ನೊಬ್ಬರಿಗೆ ಕೇಡು ಬಯಸುವುದು ತನ್ನ ಮನಸ್ಸನ್ನು ತಾನೇ ಕೊಳೆ ಮಾಡಿದಂತೆ ಹೌದು. ಬಾಯಲ್ಲಿ ನೀರು ಗುಳುಗುಳು ಮಾಡಿ ಕೆಳಗೆ ಉಗುಳುವುದೇ ಹೊರತು ಮೇಲಕ್ಕೆ ಅಲ್ಲವಲ್ಲ. ಒಂದು ವೇಳೆ ಮೇಲಕ್ಕೆ ಉಗುಳಿದರೆ ಅವರವರ ಮುಖಕ್ಕೆ ಬೀಳುವುದು. ಹಾಗೆಯೇ ಇತರರನ್ನು ನೋಡಿ ಕರುಬುವುದು, ನಂಜು ಕಾರುವುದು, ಇನ್ನೊಬ್ಬರ ಬಗ್ಗೆ ಹಿಂದಿನಿಂದ ಕುಟಿಲವನ್ನು ಮಾತಾಡುವುದು, ತನ್ನನ್ನು ತಾನು ನಿಂದಿಸಿಕೊಂಡಂತೆಯೇ ಆಗುವುದು. ಈ ಬದುಕು ಸಾಗಲು ದಾರಿ ಬೇಕು. ಆ ದಾರಿ ಸ್ವಚ್ಛ ಹಾಗೂ ಪಾರದರ್ಶಕವಾಗಿರಬೇಕು. ಆಗ ಮಾತ್ರವೇ ನೆಮ್ಮದಿಯ ಫಲ ಬರಲಾರಂಭಿಸುವುದು. ಸದಾ ಇನ್ನೊಬ್ಬರ ಬಗೆಗಿನ ಯೋಚನೆಯನ್ನು ಬಿಟ್ಟುಬಿಡಬೇಕು. ಅಂತರಂಗದೊಳಗೊಂದು ಸುತ್ತು ಹಾಕುವ ಗುಣವಿರಬೇಕು. ಶರೀರದ ಎಲ್ಲಾ ಕಡೆಗಳಿಗೂ ಆ ಮನಸ್ಸು ತಲುಪಬೇಕು. ಆಗ ಮಾತ್ರ ಪ್ರತಿಯೊಂದು ಅಂಗಾಂಗಗಳಿಗೆಲ್ಲ ಹುರುಪು ಸಿಗಲಾರಂಬಿಸುತ್ತದೆ. ಯಾವುದಾದರೂ ಒಂದು ಅಂಗವನ್ನು ನಾವು ನೆನಪಿಸಿಕೊಳ್ಳದೆ ಹೋದರೆ ನಮಗೆ ನಷ್ಟ ಉಂಟಾಗುವುದು. ಅದೇ ರೀತಿ ಉಪಕಾರ ಮಾಡಿದವರನ್ನು ಬೇಕಾದಾಗ ನೆನಪಿಸಿ ಬೇಡವಾದಾಗ ಮರೆಯುವ ಜಾಣರು ಬೇಕಾದಷ್ಟು ಇದ್ದಾರೆ. ಕಷ್ಟಗಳಿಗೆಲ್ಲ ಇನ್ನೊಬ್ಬರನ್ನು ನೆನಪಿಸಿ ಇರುವಂತಹ ಸೌಲಭ್ಯಗಳನ್ನು ತಾನೊಬ್ಬನೇ ಅನುಭವಿಸ ಬೇಕೆನ್ನುವ ಕುಲಜಾತರು ಇದ್ದಾರೆ. ದುಡಿಸಿಕೊಳ್ಳಲು ಇತರರು ಬೇಕು. ತಿನ್ನಲು ತಾನು ಮಾತ್ರ ಸಾಕು. ಇಂತಹ ಅದೆಷ್ಟೋ ಘಟನೆಗಳು ಬದುಕಿಗೆ ಪಾಠವಾಗುವುದರ ಜೊತೆಗೆ ಅವರ ಜೊತೆ ಸಂಪರ್ಕ ಕಡಿತಗೊಳಿಸಲು ದಾರಿಯೂ ಆಗಿದೆ. ಆದರೆ ನಕ್ಷತ್ರಿಕನ ರೀತಿ ಅವರ ಜಾಡ್ಯ ಬಿಡಲಾರದಂತದ್ದೇ ಆಗಿದೆ ಎಂದರೆ ತಿಂದು ಸುಖ ಅನುಭವಿಸಿದ ಮೈಗೆ ಇನ್ನೊಬ್ಬರ ಶ್ರಮದ ಅರಿವು ಗೊತ್ತಾಗುವುದಿಲ್ಲ.
ಹಾಗಾಗಿ ಮನಸ್ಸುಗಳೆಲ್ಲ ಈಗೀಗ ಶೂನ್ಯ ವೆನಿಸುವಂತಾಗಿದೆ. ಬದುಕೆಂದರೆ ಏನೇನೋ ಅಲ್ಲ. ಅದು ಸುಂದರವಾದ ನೀರವ ಭಾವನೆ ಎಂಬುದು ಲಭ್ಯವಾಗತೊಡಗಿದೆ. ಅದು ಬೇಕು, ಇದು ಸುಮ್ಮನೆ ಎಂದು ಕೆದಕಿ ಮನಸ್ಸನ್ನು ದಿಗಿಲುಗೊಳಿಸುತ್ತಾ ಕೊನೆಗೆ ಇಲ್ಲವೆನ್ನುವುದರ ಸಂಕೇತವಷ್ಟೇ ದೊರಕುವುದು. ಈಗೀಗ ಪ್ರಕೃತಿಯ ಸೊಬಗು ಯಾರ ಕಣ್ಣಿಗೂ ಕಾಣಿಸುವುದೇ ಇಲ್ಲ. ಕಾಣಿಸಲು ಪ್ರಕೃತಿ ಈಗ ಸೊಬಗಾಗಿ ಉಳಿದಿಲ್ಲ. ಬರಿಯ ಕಾಂಕ್ರೀಟ್‌ಗಳದೇ ಆಕರ್ಷಣೆ. ಅದರಿಂದಲೇ ಪ್ರತಿಷ್ಠೆಗಳ ಸಮತೋಲನವೆನ್ನುವಂತಾಗಿದೆ. ಮೊನ್ನೆ ಮೊನ್ನೆ ಹುಟ್ಟಿದ ಕೂಸು ಕೂಡ ಪ್ರಕೃತಿಯ ಇರಿಸು ಮುರಿಸಿಗೆ ಒಳಗಾಗುವಂತಾಗಿದೆ. ಗಿಡ ಮರಗಳ ಸೊಬಗು ದುಬಾರಿಯಾಗಿದೆ ಎಂದೇ ಹೇಳಬಹುದು. ಮನೆಯ ಎದುರು ಅಥವಾ ಹಿಂದೆ ಒಂದೆರಡು ಹಸಿರು ಗಿಡಗಳು ನಳ ನಳಿಸುತ್ತಿದ್ದರೆ ಮನಸ್ಸು ಪ್ರಸನ್ನಗೊಳ್ಳುತ್ತದೆ. ಬರಿಯ ಕಾಂಕ್ರೀಟ್ಗಳದೇ ನೋಟ ಯಾರನ್ನೂ ಮೆಚ್ಚಿಸಲಿಕ್ಕಿಲ್ಲವಾದರೂ ಭೂಮಿಯ ಬಿಸಿ ಇನ್ನಷ್ಟು ಏರುವುದಕ್ಕೆ ಕಾರಣವಾಗತೊಡಗಿದೆ. ಮಣ್ಣಿನ ಮೇಲೆ ಕಾಲು ಇಡುವಾಗಿನ ಹಿತ ಕಾಂಕ್ರೀಟ್ ನಲ್ಲಿಟ್ಟಾಗ ಕಾಣದು. ಒಂದು ಎರಡು ಹೆಜ್ಜೆ ಹಾಕಲೇ ಆಗುವುದಿಲ್ಲವೆಂದಾದರೆ ಇನ್ನೂ ಬೆಳಗಿನ ಒಂಬತ್ತ ರಿಂದ ಸಂಜೆಯ ಐದರವರೆಗೆ ಭೂಮಿಯೊಳಗಿನ ಅಲ್ಲಲ್ಲ ಮೇಲ್ಮೈಯು ಬಿಸಿಯಾದ ಕಾವಲಿಗೆ ನೀರು ಹೊಯ್ದಂತೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಈ ಸಂದರ್ಭದಲ್ಲಿ ಸಂಬಂಧಗಳು ಕೂಡ ಹಾಗೆ ಬಿಸಿ ಮುಟ್ಟಿಸುವ ಹಂತಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು. ಕಿರಿಯರಿರುವಾಗ ಇದ್ದ ಒಡನಾಟ ಬೆಳೆಯುತ್ತಾ ಹೋದಂತೆ ನಶಿಸುತ್ತಿರುವುದನ್ನು ಕಾಣಬಹುದು. ಒಳಗಿನ ಬಾಂಧವ್ಯಕ್ಕೂ ಸಿಮೆಂಟುಗಳ ಅಂಟು ಹಿಡಿದಿದೆಯೇನೋ ಎಂದೆನಿಸುತ್ತದೆ. ಬರಿಯ ಕರ್ತವ್ಯವನ್ನು ಕೂಡ ಗೌಣವಾಗಿ ಕಾಣುವುದು ನೋವಿನ ಸಂಗತಿ. ತಮ್ಮ ಏಳಿಗೆಗೆ ದುಡಿದವರನ್ನು ಇನ್ನಷ್ಟು ದುಡಿಸಿಕೊಳ್ಳುವುದು. ಆದರೆ ಅವರ ನೋವು ನಲಿವುಗಳಿಗೆ ಸ್ಪಂದಿಸದೇ ಬರಿದೇ ತಮ್ಮ ಚೀಲವನ್ನು ತುಂಬಿಸಿಕೊಳ್ಳುವುದೇ ಆಗಿದೆ.
ಹಾಗಾದಾಗಲೆಲ್ಲ ಈ ಬದುಕು ಬೇಸರವೆನಿಸಿದರೂ ಅಂತರಂಗದೊಳಗಿರುವ ಜ್ಞಾನಾನಂದ ಹೊರಬರುವ ತುಡಿತಕ್ಕೆ ಪ್ರೇರೇಪಿಸಬಹುದು. ಬದುಕಿನಲ್ಲಿ ಗಳಿಸಿದ್ದು ಏನೂ ಅಲ್ಲ. ಇಷ್ಟರವರೆಗೆ ಒಳಗಿರುವ ಸಂಪತ್ತನ್ನು ನೋಡುವ ಮನ ಮಾಡಿರಲೇ ಇಲ್ಲ ಎಂದು ಅರಿತುಕೊಂಡ ಮೇಲಾದರೂ ಸಾರ್ಥಕ್ಯದ ಕ್ಷಣಗಳು ಬಂದಿವೆ ಎಂದು ಅರಿಯಬಹುದು. ಅಗೋಚರದ ಆ ಕ್ಷಣಗಳೇ ಬದುಕಿನ ಮೂಲ ಎನ್ನುವ ಮಂತ್ರವನ್ನು ಮರೆತೇ ಬಿಟ್ಟು ಬಲುದೂರ ಸಾಗಿ ಬಂದವರಿದ್ದೇವೆ. ಲೌಕಿಕದ ಸುತ್ತು ಹೊಡೆದು ಏಳುಬೀಳುಗಳ ಹೊಡೆತಕ್ಕೆ ವಿನಾಕಾರಣ ನಲುಗಿ ಅವರಿವರನ್ನು ದೂಷಿಸುವುದು. ಕಾಲ ಸರಿದು ಹೋಯಿತೆಂದು ಆಮೇಲೆ ಪಶ್ಚಾತಾಪ ಪಡುವುದು ಎಲ್ಲವೂ ಕೇವಲ ನೆನಪಾಗಿ ಉಳಿಯುವುದಷ್ಟೇ. ಬಾಹ್ಯ ದರಿವಿಗೆ ಬಾರದ ಅಂತರಂಗದರಿವು ಕತ್ತಲೆಯಲ್ಲಿ ಹಚ್ಚಿಟ್ಟ ನಂದಾದೀಪದಂತೆ ತೋರುವುದು. ಉತ್ಪ್ರೇಕ್ಷೆಯ ನುಡಿಗಳು ಬರಿದೇ ಇನ್ನೊಬ್ಬರ ಆಡುವ ಆಡು ನುಡಿಗಳಷ್ಟೇ. ಖಾಲಿಯಾದ ಮನಸ್ಸಿಗೆ ಅಂತರಾತ್ಮ- ಆತ್ಮಗಳ ಸಮಾಗಮ ಸ್ಪೂರ್ತಿಯಾಗಬೇಕು. ನಿತ್ಯ ನಡೆಯುವ ನಲಿವು- ನೋವುಗಳಲ್ಲಿ ನಲಿವನ್ನು ಮಾತ್ರ ನೆನಪಿಸುತ್ತ ನೋವು ಬೇಡವೆಂದರೆ ಆಗುವುದುಂಟೇ? ಭಕ್ತಿಯ ಶ್ರಮಕ್ಕೆ ಅವೆರಡೂ ಸಿಗುವಂತಹ ಸ್ವತ್ತುಗಳೇ ಆಗಿವೆ. ನಿತ್ಯ ಭಗವನ್ನಾಮ ಸ್ಮರಣೆಯೊಂದಿಗೆ ಯೋಗ ಧ್ಯಾನಗಳ ಬಂಧವು ಪುಣ್ಯಕಾರ್ಯಗಳ ಫಲವನ್ನೇ ಅಪೇಕ್ಷಿಸುತ್ತದೆ. ಹಾಗಾಗಲು ಬದುಕನ್ನು ಬಯಲು ಮಾಡುತ್ತಾ ಸಾಗುವಂತಾಗಬೇಕು. ಅಂತರಂಗದೊಳಗಿನ ತರಂಗಗಳು ರಂಗಸ್ಥಳಗಳಲ್ಲಿ ವಿವಿಧ ನಟುವಾಂಗದಲ್ಲಿ ತೋರ್ಪಡಿಸುವ ಶಕ್ತಿ ಆತ್ಮದೊಳಗಿದೆ. ಅಡಗಿರುವ ಶಕ್ತಿಗೆ ಪ್ರೇರಣೆ ನೀಡಬೇಕಿದೆ. ಬದುಕು ಸಾಗುವ ಪರಿ ಪ್ರತಿ ಉಸಿರಿಗೂ ತಿಳಿದಿದೆ. ಆ ಉಸಿರಿಗೆ ತಿಳಿಯದೇ ಇದ್ದಾಗ ಈ ಬದುಕು ಇರುವುದಿಲ್ಲ.
- ಮಲ್ಲಿಕಾ ಜೆಆರ್ ರೈ
ಅಂಕಣಕಾರರು ತುಳು ಕನ್ನಡ ಕವಯಿತ್ರಿ
ದರ್ಬೆ ಪುತ್ತೂರು 574202
8147541549
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ