ಕ್ಷೇತ್ರ ದರ್ಶನ: ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನ

Upayuktha
0

ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಏ.21ರಿಂದ 30ರ ವರೆಗೆ



ಶ್ರೀ ಗುರುಭ್ಯೋ ನಮಃ 

ಶ್ರೀ ಶಂಕರನಾರಾಯಣ ಪ್ರಸನ್ನಃ 

ಶ್ರೀ ಅನ್ನಪೂರ್ಣೇಶ್ವರೀ ಪ್ರಸನ್ನಾ 


ಶ್ರೀ ಕ್ಷೇತ್ರೇ ಕುಂಟಿಕಾನೇ ವಿಲಸತು ಸತ್ತ್ವೌ ಭಕ್ತಾಭೀಷ್ಟ ಪ್ರದಾಯಕೌ| 

ಶೂಲಚಕ್ರಧರೌ ದೇವೌ ಶುಭೌ ಶಂಕರನಾರಾಯಣೌ ||  


ಆಸ್ತಿಕರ ಶ್ರದ್ಧಾಭಕ್ತಿಗಳ ದಿವ್ಯಸಾನ್ನಿಧ್ಯವಿರುವ ಸನಾತನ ಭವ್ಯ ಪರಂಪರೆಯ ದ್ಯೋತಕವಾದ, ಭಗವಂತನ ಅಸ್ತಿತ್ವಕ್ಕೆ ಹಾಗೂ ಆರಾಧನೆಗೆ ಮೀಸಲಾದ ಸ್ಥಳಗಳೇ ದೇವಾಲಯಗಳು ಮತ್ತು ಮಠಗಳು. ಅವಿಚ್ಛಿನ್ನವಾದ ಸಂಬಂಧಗಳು ಅವುಗಳೊಳಗೆ ಬೆಸೆಯಲ್ಪಟ್ಟಿವೆ. ಇಂತಹ ಪರಮ ಪಾವನವಾದ ಒಂದು ಸ್ಥಳ ಕುಂಟಿಕಾನಮಠ ಶ್ರೀ ಶಂಕರನಾರಾಯಣ ಸ್ವಾಮೀ ಕ್ಷೇತ್ರ. ಈ ಕ್ಷೇತ್ರವು ಪ್ರಕೃತ ರಾಜಕೀಯ ಡೊಂಬರಾಟಗಳಿಂದ ಕೇರಳಕ್ಕೆ ಸೇರಿಹೋದರೂ ಸಾಂಸ್ಕೃತಿಕವಾಗಿ ಕನ್ನಡನಾಡಿನ ಅವಿಭಾಜ್ಯ ಅಂಗವಾಗಿರುವ ಕಾಸರಗೋಡು ತಾಲೂಕಿನ ನೀರ್ಚಾಲು ಗ್ರಾಮದ ಹೃದಯಭಾಗದಲ್ಲಿ ವಿರಾಜಮಾನವಾಗಿದೆ.  


ಇದೊಂದು ಪ್ರಕೃತಿದತ್ತವಾದ ನಿಸರ್ಗ ರಮಣೀಯವಾದ ಕ್ಷೇತ್ರ. ಶ್ರೀ ದೇವರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಪರಮಪವಿತ್ರವಾದ ತೀರ್ಥವಿದೆ. ಈ ತೀರ್ಥವು ಆಗ್ನೇಯ ದಿಕ್ಕಿಗೆ ಹರಿದು ವರದಾ ನದಿಯನ್ನು ಸೇರುತ್ತದೆ. ದೇಗುಲದ ಎದುರುಭಾಗದಲ್ಲಿಯೇ ಸದಾಕಾಲವೂ ತುಂಬಿಹರಿಯುವ ತೀರ್ಥವಾಹಿನಿಯಾದ ವರದಾನದಿಯು ಜುಳುಜುಳು ಶಬ್ದಮಾಡುತ್ತಾ ಪ್ರವಹಿಸುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಸದಾಕಾಲವೂ ಶ್ರೀ ದೇವರಿಗೆ ಈ ನದಿಯ ನೀರೇ ಅಭಿಷೇಕಮೂಲವಾಗಿದೆ. 


ಕುಂಬ್ಳೆ ಬದಿಯಡ್ಕ ಹೆದ್ದಾರಿಯಲ್ಲಿರುವ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಎಂಬಲ್ಲಿಂದ ಮುಂಡಿತ್ತಡ್ಕ ರಸ್ತೆಯಲ್ಲಿ ಅನತಿದೂರದಲ್ಲಿ ದೇವರಮೆಟ್ಟು ಎಂಬ ಐತಿಹಾಸಿಕ ಸ್ಥಳವಿದೆ. ಅಲ್ಲಿಂದ ಮುಂದುವರಿದಾಗ ಕುಂಟಿಕಾನ ಹಿರಿಯಬುನಾದಿ ಶಾಲೆ ಕಂಡುಬರುವುದು. ಶಾಲೆಯ ಮುಂಭಾಗದ ರಸ್ತೆಯು ನೇರವಾಗಿ ಭಕ್ತರನ್ನು ಶ್ರೀ ಕ್ಷೇತ್ರಕ್ಕೇ ಕೊಂಡೊಯ್ಯುವುದು. 


ಕಾಸರಗೋಡಿನ ಕನ್ನಡಿಗರಿಗೆ ಪಂಜಸೀಮೆ, ವಿಟ್ಳಸೀಮೆ, ಕೋಳ್ಯೋರು ಸೀಮೆ, ಹಾಗೂ ಕುಂಬ್ಳೆ ಸೀಮೆಗಳ ಸಂಬಂಧ ಅವಿನಾಭಾವ. ಪ್ರಕೃತ ಸೂಚಿಸಿರುವ ನಾಲ್ಕು ಸೀಮೆಗಳಲ್ಲಿ ಕುಂಟಿಕಾನದ ಶ್ರೀ ಕ್ಷೇತ್ರವು ಕುಂಬ್ಳೆ ಸೀಮೆಯ ಕಾರಣಿಕ ಸ್ಥಳಗಳಲ್ಲಿ ಒಂದಾಗಿದೆ. ಕುಂಬ್ಳೆ ಸೀಮೆಯ ಪ್ರಾಚೀನ ದೇವಾಲಯಗಳಾದ ಅಡೂರು, ಮಧೂರು, ಕಾವು (ಮುಜುಂಗಾವು/ಮುಜುಂಗೆರೆ), ಕಣ್ಯಾರ (ಕಣ್ವಪುರ/ಕಣಿಪುರ) ಎಂಬ ನಾಲ್ಕು ಕೇತ್ರಗಳು ಇಲ್ಲಿ ಸೀಮೆಯ ದೇವಸ್ಥಾನಗಳೆಂಬ ಖ್ಯಾತಿಗೆ ಪಾತ್ರವಾಗಿವೆ. ಇವುಗಳಲ್ಲದೆ ಬೇರೆಬೇರೆ ಸಮಾಜದವರಿಗೆ ಸೇರಿದ ಹಲವು ವಿಶಿಷ್ಟ ಕ್ಷೇತ್ರಗಳೂ ಇಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಹವ್ಯಕ ಬ್ರಾಹ್ಮಣರೇ ಸ್ಥಾಪನೆಮಾಡಿದ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನವು ಇಂದು ಸಕಲ ಭಗವದ್ಭಕ್ತರಿಗೂ ಆರಾಧನಾಲಯವಾಗಿರುವುದು ಶ್ರೀದೇವರ  ಕಾರಣಿಕಕ್ಕೆ ದಿವ್ಯಸಾಕ್ಷಿಯಾಗಿದೆ.  


ಇದೇ ರೀತಿಯಲ್ಲಿ ಹವ್ಯಕ ಬ್ರಾಹ್ಮಣರೇ ಸ್ಥಾಪಿಸಿದ ಇಂತಹದೇ ಇನ್ನೂ ಮೂರು ಕ್ಷೇತ್ರಗಳು ಕುಂಬ್ಳೆ ಸೀಮೆಯಲ್ಲಿವೆ. ಅವುಗಳೆಂದರೆ ಕುಂಬ್ಳೆ ಸಮೀಪದ ಕಾನ ಮಠ, ನೀರ್ಚಾಲ ಕಿಳಿಂಗಾರು ಸಮೀಪದ ಲಸ್ಕ್ರಿ ಮಠ ಮತ್ತು ಬದಿಯಡ್ಕ ಸಮೀಪದ ಇಕ್ಕೇರಿ ಮಠ. ಇವೆಲ್ಲವೂ ಶ್ರೀ ಶಂಕರನಾರಾಯಣ ದೇವರ ಆರಾಧನಾಲಯಗಳೆನ್ನುವುದು ಬಹಳ ವಿಶೇಷ. ಶಂಕರನಾರಾಯಣ ಎಂದರೆ ಐಕ್ಯದ ಪ್ರತೀಕ. ಇವೆರಡೂ ಸ್ವತಂತ್ರಸಾನ್ನಿಧ್ಯಗಳಾಗಿವೆ. ಪರಿಪಾಲಕನೂ ಸಂಹಾರಕನೂ ಜೊತೆಯಾಗಿ ಅನುಗ್ರಹಿಸುವ ಸ್ಥಳವಿದಾಗಿದೆ. ಇಲ್ಲಿ ಶಿವ ಮತ್ತು ವಿಷ್ಣು ಇಬ್ಬರೂ ಒಂದೇ ಪೀಠದಲ್ಲಿ ಅಭೇದವಾಗಿ ಪೂಜಿಸಲ್ಪಡುತ್ತಾರೆ. ಇದು ನಮ್ಮೂರಿನ ಭಗವದ್ಭಕ್ತರ ಅದ್ವೈತ ಕಲ್ಪನೆಗೆ ದಿವ್ಯಸಾಕ್ಷಿಯಾಗಿದೆ. ಜಗದ್ಗುರು ಶ್ರೀ ಶಂಕರಾಚಾರ್ಯರು ತೋರಿಸಿಕೊಟ್ಟ ಆರಾಧನೆಯ ನೈಜಕ್ರಮವಿದು.  


ಸುಮಾರು ನಾಲ್ಕೂವರೆ ಶತಮಾನಗಳಿಗೂ ಹಿಂದೆ ಕುಂಟಿಕಾನ ಎಂಬಲ್ಲಿ ಗಂಗಾಧರ ಭಟ್ಟನೆಂಬ ವೇದವೇದಾಂಗ ಪಾರಂಗತನಾದ ನಿಷ್ಠಾವಂತ ಬ್ರಾಹ್ಮಣನೊಬ್ಬನಿದ್ದ.ಅವನು ಮಂತ್ರವಾದ ವಿದ್ಯೆಯಲ್ಲಿಯೂ ನಿಷ್ಞಾತನಾಗಿದ್ದನು. ಆದರೂ ಸಂತಾನವಿಲ್ಲದ ದೊಡ್ಡಕೊರತೆಯೊಂದು ಅವನನ್ನು ಕಾಡುತ್ತಿತ್ತು. ಅವನು ಈ ಬಗ್ಗೆ ಜೋಯಿಸರಲ್ಲಿ ಪ್ರಶ್ನೆಯಿರಿಸಿ ವಿಚಾರಿಸಿದಾಗ "ಮನೆದೇವರಾದ ಶಂಕರನಾರಾಯಣ ಸ್ವಾಮಿಯನ್ನು ಆರಾಧಿಸಿ ತೃಪ್ತಿಪಡಿಸಬೇಕು" ಎಂದು ತಿಳಿದುಬಂತು. ಕೂಡಲೇ ಆ ವಿಪ್ರನು ಕೋಳ್ಯೂರು ಸೀಮೆಗೆ ಹೋಗಿ ಅಲ್ಲಿರುವ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪೂಜೆ, ವ್ರತ, ಉಪವಾಸಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಿರಲು ಶ್ರೀ ಪರಮಾತ್ಮನು ಅವನಿಗೆ ಸ್ವಪ್ನದಲ್ಲಿ ದರ್ಶನವಿತ್ತು ಆತನ ಅಭೀಷ್ಟವನ್ನು ಪೂರಯಿಸುವ ವಚನವಿತ್ತು ಮಾರ್ಗದರ್ಶನವನ್ನು ಮಾಡಿದನು. 


ಆ ಪ್ರಕಾರ ಗಂಗಾಧರ ಭಟ್ಟನು ಕುಂಬ್ಳೆ ಸೀಮೆಯ ಗದ್ದೆಮನೆಯ ಕುಳಮರ್ವದ ಹಿರಿಯ ಗುರಿಕ್ಕಾರರನ್ನೂ ಕರೆದುಕೊಂಡು ಕೇರಳದ ಕೊಲ್ಲಂ ಸಮೀಪದ ಕಿಳಿಮಾನೂರು ಎಂಬಲ್ಲಿಗೆ ಹೋದನು‌. ಅಲ್ಲಿರುವ ತನ್ನ ಕುಲಗುರುಗಳಾದ ಕಿಳಿಂಗಾರು ಮನೆತನದ ಪುರೋಹಿತರನ್ನು ಭೇಟಿಮಾಡಿ ಭಗವಂತನ ಸಂಕಲ್ಪವನ್ನು ತಿಳಿಸಿದನು. ಆಗ ಆ  ಪುರೋಹಿತರು ಸಂತೋಷಗೊಂಡು ತನ್ನಲ್ಲಿರುವ ವಿಶಿಷ್ಟವಾದ ಪಂಚಲೋಹದ ಶಂಕರನಾರಾಯಣ ವಿಗ್ರಹವನ್ನು ನೀಡಿ ಆಶೀರ್ವದಿಸಿದರು.  


ಅನಂತರ ಗಂಗಾಧರ ಭಟ್ಟನು ತನ್ನ ಮನೆಯಲ್ಲಿಯೇ ಆ ವಿಗ್ರಹವನ್ನಿರಿಸಿ ಪೂಜಿಸುತ್ತಾ ಬಂದನು. ತತ್ಫಲವಾಗಿ ಅವನಿಗೆ ಪುತ್ರನೊಬ್ಬನುದಿಸಿದನು. ಆದರೆ ಆ ಪುತ್ರನ ಕಾಲದಲ್ಲಿ ಶುದ್ಧಾಚಾರಗಳು ಕಡಿಮೆಯಾದುದರಿಂದ ದೇವರಿಗೆ ಆ ಮನೆಯಲ್ಲಿರಲು ಇಷ್ಟವಾಗಲಿಲ್ಲವೆಂದು ತಿಳಿದುಬಂತು. ಆದುದರಿಂದ ಗಂಗಾಧರ ಭಟ್ಟನ ಮಗನು ಸಮೀಪದಲ್ಲೇ ಹೊಸ ದೇವಾಲಯವೊಂದನ್ನು ಕಟ್ಟಿಸಿದನು. ಅನಂತರ ಅದರಲ್ಲಿ  ಮೇಷಮಾಸದ ಆರ್ದ್ರಾ ನಕ್ಷತ್ರದ ಶುಭಮುಹೂರ್ತದಲ್ಲಿ ಕುಲಪುರೋಹಿತರಿಂದ  ಶ್ರೀ ಶಂಕರನಾರಾಯಣ ದೇವರ ವಿಗ್ರಹವನ್ನು ವಿಧ್ಯುಕ್ತವಾಗಿ ಪ್ರತಿಷ್ಠೆ  ಮಾಡಿಸಿ ಭಕ್ತಿಯಿಂದ ಪೂಜಿಸತೊಡಗಿದನು. ಅನಂತರ ಪ್ರತಿವರ್ಷವೂ ಆರ್ದ್ರಾ ನಕ್ಷತ್ರದ ಅದೇ ಶುಭ ಮುಹೂರ್ತದಲ್ಲಿ ವಾರ್ಷಿಕ ಉತ್ಸವವು 'ಮಠದಾಯನ' ಅಥವಾ 'ಮಠದ್ದೇವಕಾರ್ಯ'  ಎಂಬ ಹೆಸರಿನಿಂದ ಇಂದಿಗೂ ಇಲ್ಲಿ  ನಡೆದುಬರುತ್ತಿದೆ. 


ಧನುರ್ಮಾಸ ೧೮ ಕ್ಕೆ ಕೋಳ್ಯೂರಿನಲ್ಲಿ ಮಂಡಲಪೂಜೆ. ಕೋಳ್ಯೂರಿನ ದೇವರ ಅನುಗ್ರಹದಿಂದ ಕುಂಟಿಕಾನ ಮಠದ ಸ್ಥಾಪನೆಯಾದುದರ ಸವಿನೆನಪಿಗಾಗಿ ಅದೇ ದಿನ ಶ್ರೀ ಮಠದಲ್ಲಿಯೂ ವಿಶೇಷ ಪೂಜೆ, ಸೇವೆಗಳನ್ನು ನೆರವೇರಿಸುತ್ತಾರೆ.ಬಹಳ ಕಾರಣಿಕ ಕ್ಷೇತ್ರವಾದ ಇಲ್ಲಿ ಶ್ರೀ ಶಂಕರನಾರಾಯಣ ದೇವರೊಂದಿಗೆ ಶ್ರೀ ಅನ್ನಪೂರ್ಣೇಶ್ವರೀ ದೇವಿ, ಉಳ್ಳಾಕುಳು ದೈವ, ಧೂಮಾವತಿ ದೈವ, ರಕ್ತೇಶ್ವರಿ ಮೊದಲಾದ ದಿವ್ಯಶಕ್ತಿಗಳು ನೆಲೆಸಿ ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿರುವುದು ಇಲ್ಲಿನ ಕಾರಣಿಕವೆಂದೇ ಹೇಳಬೇಕು. 

ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಪರಂಪರೆಯ ಶ್ರೀ ರಾಮಚಂದ್ರಾಪುರ ಮಠವು ಅಖಿಲ ಹವ್ಯಕ ಸಮುದಾಯಕ್ಕೆ ಮತ್ತು ಇತರ ಅದೆಷ್ಟೋ ಸಮುದಾಯದವರಿಗೂ ಮಾರ್ಗದರ್ಶನ ಮಾಡುತ್ತಾ ಶಿಷ್ಯರ ಅಭ್ಯುದಯವನ್ನು ಬಯಸುವ ವಿಶಿಷ್ಟವಾದ ಮಠ. ಅದರ ಶಾಖೆಗಳು ಇಂದು ನಾಡಿನ ಹಲವು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕುಂಬ್ಳೆ ಸೀಮೆಗೆ ಶ್ರೀ ಗುರುಗಳ ಸವಾರಿ ಆಗಮಿಸಿದಾಗ ಶ್ರೀಶ್ರೀಗಳಿಗೆ ಮೊಕ್ಕಾಂ ಮಾಡಲು, (ಉಳಿದುಕೊಳ್ಳಲು) ಶ್ರೀ ಗುರು ಪಾದಪೂಜೆ, ಭಿಕ್ಷೆ ಮೊದಲಾದ ಸತ್ಕಾರ್ಯಗಳನ್ನು ನೆರವೇರಿಸಲು ಸಕಲ ಸೌಕರ್ಯಗಳೂ ಇರುವ ಸ್ಥಳವೆಂದರೆ ಕುಂಟಿಕಾನ ಮಠದ ಶ್ರೀ ಶಂಕರನಾರಾಯಣ ದೇವಾಲಯವೆಂದೇ ಹೇಳಬೇಕು. ಕುಂಟಿಕಾನ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಶತಮಾನಗಳಿಂದ ಅವಿನಾಭಾವ ಸಂಬಂಧ ಬೆಳೆದುಬಂದಿದೆ. ಬ್ರಹ್ಮೈಕ್ಯರಾದ ಪೂರ್ವ ಗುರುಗಳೊಬ್ಬರು ಶ್ರೀ ಶಂಕರನಾರಾಯಣ ದೇವಾಲಯದ ಮುಂಭಾಗದ ನದೀನೀರಿನಲ್ಲಿ ತಮ್ಮ ತಪಶ್ಶಕ್ತಿಯಿಂದ ಅಂಗಾತ ಮಲಗಿ ಯೋಗಸಾಧನೆ ಮಾಡಿದ ಉದಾಹರಣೆಯೂ ಇದೆ. ಶ್ರೀ ಶ್ರೀಗಳು ಆನೆಯ ಮೇಲೇರಿ ಸವಾರಿ ಬಂದ ಉದಾಹರಣೆಯೂ ಇದೆ. ಇನ್ನೂ ಹಲವು ಐತಿಹ್ಯಗಳನ್ನೂ ಊರಿನ ಹಿರಿಯರು ನೆನಪು ಮಾಡುತ್ತಿದ್ದಾರೆ. 


ಕೂಟುಕಟ್ಟಿನ ಭಕ್ತಜನರ ಸಂಪೂರ್ಣ ಸಹಕಾರದಿಂದ ಇಲ್ಲಿ ನಿತ್ಯನೈಮಿತ್ತಿಕ ಕಾರ್ಯಗಳನ್ನು ಮಠದ ಮನೆಯವರು ವ್ಯವಸ್ಥಿತವಾಗಿ ನಡೆಸಿಕೊಂಡುಬರುತ್ತಿದ್ದಾರೆ‌. ಅಲ್ಲದೆ ಹಲವು ಬಗೆಯ ವಿಶೇಷ ಸತ್ಕಾರ್ಯಗಳನ್ನೂ ಆಗಾಗ ಊರಪರವೂರ ಭಕ್ತಜನರ ಸಹಕಾರದಿಂದ ನಡೆಸಲಾಗುತ್ತಿದೆ. ೨೦ನೇ ಶತಮಾನದಲ್ಲಿ ಅಭೂತಪೂರ್ವವೂ ಪರಮ ಪುಣ್ಯಪ್ರದವೂ ಆಗಿರುವ ಮೂರು ಮಹೋತ್ಸವಗಳು ಇಲ್ಲಿ ಜರಗಿವೆ. ಅವುಗಳ ಕುರಿತಾದ ಮಾಹಿತಿಗಳು ಹೀಗಿವೆ --[೧] ಶ್ರೀ ಮದ್ಭಾಗವತ ಸಪ್ತಾಹ ಯಜ್ಞ (ತಾ - 18 - 8 - 1988 ರಿಂದ 26 - 8- 1988 ರ ವರೆಗೆ),[೨] ಶ್ರೀಕೃಷ್ಣ ಯಜುಸ್ಸಂಹಿತಾ ಯಾಗ (ತಾ- 31 - 1- 1990 ರಿಂದ 7 - 2 - 1990 ರ ವರೆಗೆ) ಮತ್ತು [೩]ಶ್ರೀ ರಾಮೋತ್ಸವ (ತಾ- 17 - 3 - 1999 ರಿಂದ 26 - 3 - 1999 ರ ವರೆಗೆ).  


ಪ್ರಕೃತ ಶ್ರೀ ಕುಂಟಿಕಾನ ಮಠದಲ್ಲಿ ಯಾವುದೇ ರೀತಿಯ ಜಾತಿಭೇದವಿಲ್ಲದೆ ಹಿರಿಯರು, ಕಿರಿಯರು, ಮಾತೆಯರು, ಮಕ್ಕಳು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ರಾತ್ರಿಹಗಲು ಶ್ರಮದಾನದ ಮೂಲಕ ಅದೆಷ್ಟೋ ತಿಂಗಳುಗಳ ಕಾಲ ದುಡಿದು ದೇವಾಲಯವು ಸಂಪೂರ್ಣ ಜೀರ್ಣೋದ್ಧಾರಗೊಂಡು ಇದೀಗ ಬ್ರಹ್ಮಕಲಶೋತ್ಸವದ ಸಡಗರದಲ್ಲಿ ಅಲಂಕೃತವಾಗಿ ಶೋಭಿಸುತ್ತಿದೆ. ಇದು ಇಂದು ನಿಜವಾದ ಅರ್ಥದಲ್ಲಿ 'ಸರ್ವಜನಾಂಗದ ಶಾಂತಿಯ ತೋಟ' ಎಂಬ ಕೀರ್ತಿಗೆ ಪಾತ್ರವಾಗಿದೆ‌.  


"ಸಂಘಟನೆ ಪ್ರಾರಂಭವಾಗಿರುವುದೇ ಕುಂಟಿಕಾನ ಮಠದಲ್ಲಿ. ಬಿಂದುವಾಗಿ ಪ್ರಾರಂಭವಾಗಿದ್ದು ಇಂದು ಸಿಂಧುವಾಗಿದೆ. ಸಹಸ್ರ ಸಹಸ್ರ ಕಾರ್ಯಕರ್ತರ ಶಕ್ತಿಯ ಫಲವಾಗಿ ಅದೆಷ್ಟೋ ಕಾರ್ಯಗಳು ನಡೆದಿವೆ. ಅನೇಕ ಸಮಾಜಸ್ತರದ ಮಹತ್ಕಾರ್ಯಗಳು ಇಲ್ಲಿಂದಲೇ ಆರಂಭಗೊಂಡಿವೆ. ಮಾತೆಯರ ಸಂಘಟನೆಗೂ ಆರಂಭ ದೊರಕಿರುವುದು ಕುಂಟಿಕಾನ ಮಠದಿಂದಲೇ. ಸಮುದ್ರ ಆಕಾಶಗಳಿಗೆ ಹೋಲಿಸಬಹುದಾದಂತಹ ಸೇವೆಯನ್ನು ಮಾತೆಯರೂ ಮಾಡಿದ್ದಾರೆ.ಗುರುಮಠದ ಅನೇಕಾನೇಕ ಮಹತ್ಕಾರ್ಯಗಳಿಗೆ ಪೀಠಿಕೆ ಇಲ್ಲಿಂದಲೇ ಆರಂಭವಾಗಿದೆ" ಎಂಬ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಅಭಿಪ್ರಾಯವು ಶ್ರಮಿಕ ವರ್ಗಕ್ಕೆ ಸಂತೋಷವನ್ನುಂಟುಮಾಡುವುದರಲ್ಲಿ ಸಂದೇಹವಿಲ್ಲ. 


ಶ್ರೀ ಕ್ಷೇತ್ರದ ಶತಮಾನಗಳ ಇತಿಹಾಸದಲ್ಲಿ ಇದುವರೆಗೆ ಬ್ರಹ್ಮಕಲಶೋತ್ಸವ ಜರಗಿದ ಕುರಿತು ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ! ಆದುದರಿಂದ ಒಂದು ರೀತಿಯಲ್ಲಿ ಹೇಳುವುದಾದರೆ ಎಲ್ಲರೂ ತಿಳಿದಂತೆ ಇದುವೇ ಪ್ರಪ್ರಥಮ ಬ್ರಹ್ಮಕಲಶೋತ್ಸವ ಎಂದೇ ಹೇಳಬೇಕು. ಕುಲಗುರುಗಳಾದ ಪರಮಪೂಜ್ಯ ಗೋಕರ್ಣಮಂಡಲಾಚಾರ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿರುವುದು ನಾಡಿನ ಪುಣ್ಯ. ಶ್ರೀ ಶಂಕರಾಚಾರ್ಯ ಪರಂಪರೆಯ ಮತ್ತೊಬ್ಬ ಮಹಾನ್ ಯತಿವರ್ಯರೂ ಸನಾತನ ಸಂಸ್ಕೃತಿಯ ಆಧಾರಸ್ತಂಭವೂ ಆಗಿರುವ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಶುಭನಾಂದಿಯನ್ನು ಹಾಡುವುದು ನಿಜವಾಗಿಯೂ 'ಚಿನ್ನದ ಗುಲಾಬಿಗೆ ಪರಿಮಳವೂ ಸೇರಿಕೊಂಡಂತೆ' ನಾಡಿನ ಸೌಭಾಗ್ಯವೇ ಸರಿ‌.  


ದಿನಾಂಕ 21 - 4 - 2024 ರಿಂದ ತೊಡಗಿ 30 - 4 - 2024 ರ ವರೆಗೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ತಾಂತ್ರಿಕ ಹಾಗೂ ಹಲವು ರೀತಿಯ ವಿಶೇಷ ಸೇವೆಗಳೊಂದಿಗೆ ವಾರ್ಷಿಕೋತ್ಸವ ದ ಜತೆಗೆ ಜರಗಲಿರುವುದು. ಸಕಲ ಭಗವದ್ಭಕ್ತರಿಗೂ ಬ್ರಹ್ಮಕಲಶೋತ್ಸವಕ್ಕೆ ಆತ್ಮೀಯ ಸ್ವಾಗತ.  


ಶ್ರೀ ಶಂಕರನಾರಾಯಣ ಸನ್ನಿಧಿ 

ಶಂಕರನ ಜತೆಯಲ್ಲಿ ನಾರಾಯಣನು ನೆಲಸಿರುವ ದೇಗುಲದಿ  

ಶಂಕೆಯಿಲ್ಲದೆ ಬಂದು ವಿವಿಧ ಕೈಂಕರ್ಯಗಳ ತೊಡಗಿ | 

ಅಂಕಿತವ ಬದಿಗಿರಿಸಿ ಪರಿಶುದ್ಧ ಭಕ್ತಿಯಲಿ ಮಿಂದು  

ಅಂಕುರಾರ್ಪಣ ಮಾಡಿ ಜೀವನದ ಸಕಲ ಸುಖಗಳಿಗೆ || 

        || ಭದ್ರಂ - ಶುಭಂ - ಮಂಗಲಂ ||

           


-ವಿ.ಬಿ.ಕುಳಮರ್ವ, ಕುಂಬ್ಳೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top