ಡಾ|| ಮೀರಾಕುಮಾರ್
ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದೆ
ವಾಲ್ಮೀಕಿಯ ಶ್ರೀರಾಮನು ಸಕಲಜನ ಮನೋಹರನಾದ ಸುಂದರ ಪುರುಷ. ಭಕ್ತಜನ ವಲ್ಲಭನಾದ ಇವನನ್ನು ತಮ್ಮ ತಮ್ಮ ಇಷ್ಟಾರ್ಥಸಿದ್ಧಿಗಳಿಗಾಗಿ ಒಲಿಸಿಕೊಳ್ಳಲು ಪೂಜೆಗೈದ ಭಕ್ತವೃಂದ ತಮತಮಗೆ ಇಷ್ಟವಾದಂತೆ ಇವನನ್ನು ಚಿತ್ರಿಸಿಕೊಂಡಿದೆ. ಸಂತಾನಾಕಾಂಕ್ಷಿಗಳಿಗೆ ಕೌಸಲ್ಯ ಪುತ್ರನಾದ `ಬಾಲರಾಮ`ನು ಇಷ್ಟ ದೇವತೆಯಾದರೆ, ಮುಕ್ತಿ ಕನ್ಯೆಯ ಬೆನ್ನು ಹತ್ತಿದವರಿಗೆ `ತಾರಕ ರಾಮನೇ` ಗತಿ. ಭೋಗಾಕಾಂಕ್ಷಿಗಳಿಗೆ `ಪಟ್ಟಾಭಿರಾಮ`ನು ಬೇಕಾದರೆ, ವೀರರಸ ಪ್ರತಿಪಾದಕರಿಗೆ `ಪ್ರತಾಪರಾಮ`ನು ಕುಲದೈವ. ಶಿವವಿಷ್ಣು ಭೇದವಿಲ್ಲದ ಮಹಾನುಭಾವರಿಗೆ `ಶಿವರಾಮನು` ಕಾಣಿಸಿಕೊಂಡರೆ, ದಂಡಕಾರಣ್ಯವಾಸಿಗಳಾಗಿದ್ದ ಮುನಿಜನರಿಗೆ `ಕೋದಂಡ ರಾಮ`ನು ಅತಿಪ್ರಿಯನಾದ ಅತಿಥಿ.
ಹೀಗೆ ವಿವಿಧ ನಾಮರೂಪಗುಣ ವಿಶೇಷಗಳಿಂದ ಕೂಡಿದ ಶ್ರೀರಾಮಚಂದ್ರನ ಕಲ್ಪನೆ ಕೇವಲ ಕವಿಕೃತವಲ್ಲ, ಸಾವಿರ ವರ್ಷಗಳಿಂದ ಭಕ್ತರು, ಭಾಗವತರು, ಮಂತ್ರ-ತಂತ್ರವೇತ್ತರು, ಆಗಮಿಕ-ಸ್ಥಪತಿಗಳು, ಹಲವು ವಿಧವಾದ ಶ್ರೀರಾಮನ ವಿಗ್ರಹಗಳನ್ನು ಕಲ್ಪಿಸಿ ಭಕ್ತರ ಇಷ್ಟಾರ್ಥ ಪೂರೈಸಲು ಪ್ರಯತ್ನಿಸಿದ್ದಾರೆ. ಅಗಸ್ತ್ಯ ಸಂಹಿತೆ, ರಾಮಕಲ್ಪ, ಪಾಂಚರಾತ್ರ, ರಾಮಾರ್ಚನ ಚಂದ್ರಿಕಾ, ರಾಮೋತ್ಸವ ರತ್ನಾಕರ - ಮುಂತಾದ ಗ್ರಂಥಗಳಲ್ಲಿ ಕಂಡುಬರುವ ಕೆಲವು ವಿಗ್ರಹ ಲಕ್ಷಣಗಳನ್ನು ಇಲ್ಲಿ ವಿವರಿಸಿದೆ.
ರಾಮನ ಶಿಲ್ಪ ಸಾಮಾನ್ಯವಾಗಿ ದ್ವಿಭುಜ ಸ್ಥಾನಕ ಭಂಗಿಯಲ್ಲಿ, ಮಧ್ಯಮ ದಶತಾಳ ಪ್ರಮಾಣದಲ್ಲಿ ತ್ರಿಭಂಗದಲ್ಲಿ ಇರುತ್ತದೆ, ಧರ್ನುಧಾರಿಯಾಗಿರುವಂತೆ ಚಿತ್ರಿಸುವುದೇ ವಾಡಿಕೆ ಪಕ್ಕದಲ್ಲಿ ಸೀತೆ ಲಕ್ಷ್ಮಣರೂ ಹತ್ತಿರವೇ ಹನುಮಂತನೂ ಇರುತ್ತಾರೆ, ಸೀತೆಯನ್ನು ರಾಮನ ಬಲಗಡೆ ನವಾರ್ಧತಾಳ ಪ್ರಮಾಣದಲ್ಲಿ ಮಾಡಿ ನಿಲ್ಲಿಸುತ್ತಾರೆ. ರಾಮನ ಭುಜಕ್ಕೆ ಸೀತೆ ಬರಬೇಕಷ್ಟೇ , ಎಡಗಡೆ ಲಕ್ಷ್ಮಣನು ದಶತಾಳ ಪ್ರಮಾಣದಲ್ಲಿರುತ್ತಾನೆ; ಅವನು ರಾಮನ ಕಿವಿಯವರೆಗೆ ಇರಬೇಕಷ್ಟೇ , ಹನುಮಂತ ಸಪ್ತತಾಲ ಪ್ರಮಾಣದಲ್ಲಿದ್ದರೇ ಸಾಕು ; ಅಂಜಲಿಬದ್ದನಾಗಿ ಅಥವಾ ನಮ್ರತೆಯನ್ನು ಸೂಚಿಸಲು ಬಾಯಿಯನ್ನು ಬಲಗೈಯಿಂದ ಅಡ್ಡಹಿಡಿದಂತೆ ಕಾಣಿಸುತ್ತಾನೆ , ಸೀತೆಗೂ ಹನುಮಂತನಿಗೂ ಕರಂಡ ಮುಕುಟ; ರಾಮ ಲಕ್ಷ್ಮಣರಿಗೆ ಕಿರೀಟ ಮುಕುಟ; ರಾಮಸೀತೆಯರನ್ನೂ ಸಿಂಹಾಸನದ ಮೇಲೆ ಕೂರಿಸಿ ಲಕ್ಷ್ಮಣ ಭರತ ಶತೃಘ್ನ, ಹನುಮಂತ ಇರುವ ಪಟ್ಟಾಭಿರಾಮ ಮೂರ್ತಿಗಳು ಇರುತ್ತವೆ,
ತಾರಕರಾಮ
ಪುಷ್ಪಕ ವಿಮಾನದ ಮಧ್ಯೆ ಕಲ್ಪವೃಕ್ಷದ ಅಡಿ ಚಿನ್ನದ ಮಹಾಪಂಟಪ ಅದರಲ್ಲಿ ಸೀತಾ ಸಮೇತನಾಗಿ ವೀರಾಸನದಲ್ಲಿ ವ್ಯಾಖ್ಯಾನ ಮುದ್ರೆಯಿಂದ ಶ್ರೀರಾಮಚಂದ್ರನು ಕುಳಿತಿದ್ದಾನೆ. ಸುತ್ತಲೂ ಸೋದರರೂ, ಮುನಿಜನರೂ ಮಂಡಿಸಿದ್ದಾರೆ. ಶ್ರೀರಾಮನ ಮುಂದುಗಡೆ ಹನುಮಂತನು ಕುಳಿತು ರಾಮತತ್ತ್ವವನ್ನು ಪರಿವೃತ ಮಹಾಜನತೆಗೆ ವಿವರಿಸುತ್ತಿದ್ದಾನೆ. ಇದು ರಾವಣ ಸಂಹಾರಾನಂತರ ಪುಷ್ಪಕದಲ್ಲಿ ನಂದಿ ಗ್ರಾಮಕ್ಕೆ ಬಂದಿಳಿದು ಅಲ್ಲಿಂದ ಭರತನನ್ನೂ ಕೂಡಿಕೊಂಡು ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಚಿತ್ರ-ಲೋಕ ಕಂಟಕನಾದ ರಾವಣನನ್ನು ಸಂಹರಿಸಿ ಲೋಕತಾರಕನಾದ ಶ್ರೀರಾಮ ತತ್ತ್ವವನ್ನೇ ಪ್ರಭಂಜನ ಸುತನು ವಿವರಿಸುತ್ತಿದ್ದಾನೆ. ಈ ವಿವರಣೆಯನ್ನು ಹೋಲುವ ಶಿಲ್ಪಕೃತಿಯೊಂದು ರಾಮೇಶ್ವರದ ದೇವಾಲಯದ ಗೋಡೆಯ ಮೇಲೆ ಇದೆ ಎಂದು ತಿಳಿದುಬರುತ್ತದೆ.
ಚತುರ್ಭುಜ ರಾಮ
ಭದ್ರಾಚಲದಲ್ಲಿ ಸಂತ ರಾಮದಾಸರಿಂದ ಪೂಜಿಸಲ್ಪಟ್ಟ, ಇಂದಿಗೂ ಭಕ್ತಜನ ಸಮೂಹವನ್ನು ಆಕರ್ಷಿಸುತ್ತಿರುವ ಚತುರ್ಭುಜ ರಾಮಚಂದ್ರ ಬಹು ಸುಂದರವಾದ ಮೂರ್ತಿಯೆಂದು ಪ್ರಸಿದ್ಧಿ ಪಡೆದಿದೆ. ವಾಮಾಂಕದಲ್ಲಿ ದೇವಿಯನ್ನು ಕುಳ್ಳಿರಿಸಿಕೊಂಡು ಕುಳಿತಿರುವ ಈ ಸ್ವಾಮಿಯ ಬಲಗಡೆಯ ಎರಡು ಕೈಗಳಲ್ಲಿ ಶಂಖ ಮತ್ತು ಬಾಣವೂ, ಎಡಗಡೆಯ ಕೈಗಳಲ್ಲಿ ಚಕ್ರ ಮತ್ತು ಧನಸ್ಸೂ ಕಂಗೋಳಿಸುತ್ತಿವೆ. ಕೇಯೂರಾದಿ ಭೂಷಣಗಳಿಂದ ಆಲಂಕೃತವಾದ ಸ್ವಾಮಿಯ ಬಲಗಡೆ ಅಂಜಲಿ ಬದ್ಧನಾದ ಲಕ್ಷ್ಮಣಸ್ವಾಮಿಯು ನಿಂತಿದ್ದಾನೆ. ಈ ಅಪೂರ್ವ ಕಲ್ಪನೆಯಲ್ಲಿ ಆಂಜನೇಯನಿಲ್ಲದಿರುವುದು ಗಮನಾರ್ಹ.
ಶಿವರಾಮ
ಶಿವರಾಮ ಕಲ್ಪನೆಯಲ್ಲಿ ಶ್ರೀರಾಮನು ಪರಿಪೂರ್ಣ ಶಿವನೇ ಆಗಿದ್ದಾನೆ. ಮೂರು ಕಣ್ಣು, ಶಿರಸ್ಸಿನಲ್ಲಿ ಚಂದ್ರ, ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ವರದಮುದ್ರೆ, ಭಸ್ಮಲೇಪಿತವಾದ ವಿಶಾಲವಾದ ಹಣೆ ಮತ್ತು ದೇಹ, ಈ ಶಿವರಾಮನ ಎಡಗಡೆ ಮಂಡಿಸಿರುವ ಸೀತಾದೇವಿ ಚತುರ್ಭುಜಗಳು, ಎರಡು ಬಲಗೈಗಳಲ್ಲಿ ಅಂಕುಶ ಮತ್ತು ಬಾಣ. ಎಡಗಡೆಯ ಎರಡು ಕೈಗಳಲ್ಲಿ ಪಾಶ ಮತ್ತು ಧನಸ್ಸು, ಈ ಉಮಾ-ಸೀತೆಯ ಶಿರೋಭೂಷಣವು ಚಂದ್ರನೇ, ಈಕೆಗೂ ಮೂರು ಕಣ್ಣು.
ವೀರರಾಮ
ಇದು ಯುದ್ಧರಂಗದಲ್ಲಿ ಶತ್ರುಗಳನ್ನು ನಿಗ್ರಹಿಸುತ್ತಿರುವ ``ವೀರಶ್ರೀ ಬಂಧುರಾಂಗ``ನಾದ ಶ್ರೀರಾಮನ ಚಿತ್ರ. ಇಲ್ಲಿ ಸೀತೆಯಲ್ಲ, ಆಂಜನೇಯನೂ ಇಲ್ಲ. ಎಡಗೈಯಲ್ಲಿ ನೆಲದ ಮೇಲೆ ಊರಿನ ಧನಸ್ಸು ಬಲಗೈಯಲ್ಲಿ ಬಾಣವನ್ನು ನೆಲಕ್ಕೂರಿಕೊಂಡು ದ್ವಿಭಂಗಿಯಲ್ಲಿ ನಿಂತಿರುವ ನಿಲುವು. ಕೆಂಡವನ್ನುಗುಳುತ್ತಿರುವ ಕಣ್ಣುಗಳಿಂದ ಇಂದ್ರನ ಭಕ್ತಿಗೂ ಪಾತ್ರನಾಗಿರುವ ಈ ವೀರರಾಮನ ಬಲಗಡೆಗೆ ಇಂದ್ರಾಯುಧವನ್ನು ಧರಿಸಿ ಅಂಜಲಿಬದ್ಧನಾಗಿ ಲಕ್ಷ್ಮಣಸ್ವಾಮಿ ನಿಂತಿದ್ದಾನೆ.
ಪ್ರತಾಪರಾಮ
ವೀರರಾಮನನ್ನೂ ಮೀರಿದ ರುದ್ರರೂಪಿ, ರಾಕ್ಷಸ ಕುಲವನ್ನು ಮರ್ದಿಸಲು ಸನ್ನದ್ಧನಾಗಿ ನಿಂತಿರುವ ಈ ಪ್ರತಾಪರಾಮನಿಗೆ ಮೂರು ಕಣ್ಣು, ಇಪ್ಪತ್ತು ಕೈಗಳು ಎರಡು ಕೈಗಳಲ್ಲಿ ಮಾತ್ರ ವರ ಅಭಯ ಮುದ್ರೆಗಳನ್ನು ತೋರುತ್ತಿದ್ದು ಇನ್ನುಳಿದ ಹದಿನೆಂಟು ಕೈಗಳಲ್ಲೂ ಹದಿನೆಂಟು ಶಸ್ತಾçಸ್ತçಗಳನ್ನು ಧರಿಸಿ ನಿಂತಿರುವ ರಾಮನೀತ.
ಪಟ್ಟಾಭಿರಾಮ
ರಾವಣ ಸಂಹಾರಾನಂತರ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗುತ್ತಿರುವ ಸೀತಾರಾಮನ ಈ ಚಿತ್ರ ವೈಭವೋಪೇತವಾದುದು, ನೇತ್ರಾನಂದಕರವಾದುದು. ನೀಲ ಕಮಲದಂತೆ ಕಂಗೊಳಿಸುವ ಶ್ಯಾಮಲನಾದ ಶ್ರೀರಾಮನ ಎಡಗಡೆಗೆ ಭೂಸುತೆ ಮಂಡಿಸಿದ್ದಾಳೆ. ಪಾದಗಳ ಬಳಿ ಅಂಜಲಿಬದ್ಧನಾಗಿ ಆಂಜನೇಯನು ನಿಂತಿದ್ದಾನೆ. ಬೆನ್ನಹಿಂದೆ ಎಂದಿನಂತೆ ಲಕ್ಷ್ಮಣಸ್ವಾಮಿಯು ಅಂಗರಕ್ಷಕನಾಗಿದ್ದಾನೆ. ಅಕ್ಕಪಕ್ಕಗಳಲ್ಲಿ ಭರತ, ಶತ್ರುಘ್ನರೂ ವಾಯುವ್ಯಾದಿ ನಾಲ್ಕು ಮೂಲೆಗಳಲ್ಲಿ ಸುಗ್ರೀವ, ವಿಭೀಷಣ, ಅಂಗದ ಮತ್ತು ಜಾಂಬವಂತರೂ ಭಕ್ತಿಭಾವದಿಂದ ನಿಂತಿದ್ದಾರೆ.
ವಾಲ್ಮೀಕಿರಾಮ
ಮೇಲಿನ ವಿವಿಧ ಕಲ್ಪನೆಗಳಿಗೆಲ್ಲ ಆಧಾರವಾದ ವಾಲ್ಮೀಕಿಯ ಶ್ರೀರಾಮ ಮೂರ್ತಿಯ ಲಕ್ಷಣಗಳು ಸುಂದರಕಾಂಡದಲ್ಲಿ ಹನುಮಂತನಿಂದ ವಿವರಿಸಲ್ಪಟ್ಟಿವೆ. ಶ್ರೀರಾಮನ ಪರಿಚಯ ಹನುಮಂತನಿಗೆ ಇದೆಯೇ ಎಂಬುದನ್ನು ಪರೀಕ್ಷಿಸಲೇ ಎಂಬಂತೆ ಸೀತಾದೇವಿ ಅವನನ್ನು ಪ್ರಶ್ನಿಸುತ್ತಾಳೆ. ``ಯಾನಿ ರಾಮಸ್ಯ ಲಿಂಗಾನಿ ಲಕ್ಷ್ಮಣಸ್ಯ ಚವಾನರ ತಾನಿಭೂಯಃ ಸಮಾಚಕ್ಷ್ವ.. ಕೀದೃಶಂ ತಸ್ಯ ಸಂಸ್ಥಾನಂ ರೂಪಂ ರಾಮಸ್ಯ ಕೀದೃಶಂ``
ಆಗ ಮಾರುತಿಯು ಸಂತೋಷದಿಂದ ಶ್ರೀರಾಮನ ಗುಣಕಥನವನ್ನೆಲ್ಲ ಮಾಡಿದ ಮೇಲೆ ``ವಿಗ್ರಹ`` ಲಕ್ಷಣಗಳನ್ನೂ ವಿವರಿಸುತ್ತಾನೆ. ``ಶ್ರೀರಾಮನು ವಿಶಾಲವಾದ ಹೆಗಲುಳ್ಳವನು, ನೀಳಾದ ತೋಳುಗಳುಳ್ಳವನು, ಆತನ ಕಂಠವು ಶಂಖದಂತಿರುವುದು; ಆತನ ಮುಖವು ಮಂಗಳಕರವಾದ ಕಳೆಯೊಡಗೂಡಿರುವುದು. ಆತನು ಲೋಕಕ್ಕೆಲ್ಲಾ ತಿಳಿದೇ ಇರುವುದು. ಅಲ್ಲದೆ ಶ್ರೀರಾಮನಿಗೆ ಭೇರಿಯ ಧ್ವನಿಯಂತಹ ಕಂಠವಿರುವುದು; ಶ್ಯಾಮಲವೂ, ಮನೋಹರವೂ ಆದ ದೇಹಚ್ಛಾಯೆಯುಳ್ಳವನೂ, ಮಹಾಪರಾಕ್ರಮಶಾಲಿಯೂ ಆದ ಆತನು ಬಹಳ ಉದ್ದವೂ, ಬಹಳ ಗಿಡ್ಡವೂ ಅಲ್ಲದ ದೇಹವುಳ್ಳವನು. ಹೆಚ್ಚು ಕಡಿಮೆಯಿಲ್ಲದೆ ಸಮವಾಗಿರುವ ಅವಯವಗಳುಳ್ಳವನು. ಎಲೈ ಸೀತಾದೇವಿಯೆ! ಆತನ ಅವಯವ ಸಂಸ್ಥಾನದಲ್ಲಿ ಇನ್ನೂ ಕೆಲವು ವಿಶೇಷಗಳನ್ನು ಹೇಳುವನು, ಕೇಳು, ಸಾಮುದ್ರಿಕ ಲಕ್ಷಣವನ್ನನುಸರಿಸಿ ಶ್ರೀರಾಮನ ಎದೆ, ಮಣಿಬಂಧಗಳು, ಹಿಡಿಗಳು ಇವು ಮೂರೂ ಬಲಿಷ್ಠವಾಗಿರುವುವು. ಕಣ್ಣಾಲಿಗಳು, ಬಾಹುಗಳು, ವೃಷಣಗಳೂ, ಎರಡು ಮೊಣಕಾಲುಗಳೂ ಇವು ಮೂರವಯವಗಳು ಹೆಚ್ಚು ಕಡಿಮೆಯಿಲ್ಲದೆ ಸಮನಾಗಿರುವುದು, ಅವನ ಹೊಟ್ಟೆ, ಹೊಕ್ಕಳು, ಎದೆ ಇವು ಮೂರೂ ಉಬ್ಬಿರುವುವು; ಅವನ ಕಡೆಗಣ್ಣು, ಉಗುರು, ಅಂಗೈ, ಅಂಗಾಲುಗಳೆಂಬ ಮೂರವಯವಗಳೂ ಕೆಂಪಾಗಿರುವುವು; ಕಂಠಧ್ವನಿ, ನಡಿಗೆ, ಹೊಕ್ಕಳು ಇವು ಮೂರೂ ಮೃದುವಾಗಿರುವುವು; ಅವನ ಹೊಟ್ಟೆ, ಕುತ್ತಿಗೆ, ಈ ಎರಡೂ ಸ್ಫುಟವಾದ ತ್ರಿವಳೀರೇಖೆಗಳಿಂದ ಕಂಗೊಳಿಸುತ್ತಿರುವುವು. ಆತನಿಗೆ ಸ್ತನಾಗ್ರಗಳು, ಪಾದರೇಖೆಗಳು, ಸ್ತನಗಳು ಎಂಬ ಈ ಮೂರು ಆಳಕ್ಕಿರುವುವು. ಅಲ್ಲದೆ ಅವನ ಕೊರಳು, ಲಿಂಗ, ಬೆನ್ನು, ಮೊಳ ಕಾಲುಗಳು ಈ ನಾಲ್ಕು ಹ್ರಸ್ವವಾಗಿರುವುವು. ಅವನ ಶಿರಸ್ಸಿನಲ್ಲಿ ಶುಭ ಸೂಚಕರುಗಳಾದ ಮೂರು ಸುಳಿಗಳಿರುವುವು. ಅವನ ಅಂಗುಷ್ಟ ಮೂಲದಲ್ಲಿ ನಾಲ್ಕು ವೇದ ರೇಖೆಗಳಿರುವುವು.
ವಜ್ರ, ಧ್ವಜ, ಶಂಕಾಂಕುಶ ರೇಖೆಗಳು ಅವನ ಅಂಗೈಯಲ್ಲಿಯೂ ಅಂಗಾಲುಗಳಲ್ಲಿಯೂ ಇರುವವು. ಅವನ ಹಣೆಯಲ್ಲಿಯೂ ಈ ನಾಲ್ಕು ರೇಖೆಗಳಿರುವುವು. ಆತನು ನಾಲ್ಕು ಮೊಳ (ತೊಂಬತ್ತಾರುಗುಲ) ಪ್ರಮಾಣದ ದೇಹವುಳ್ಳವನು. ಅವನ ಎರಡು ತೋಳುಗಳೂ, ಎರಡು ತೊಡೆಗಳೂ, ಎರಡೂ ಮೊಣಕಾಲುಗಳೂ, ಎರಡು ಕೆನ್ನೆಗಳು ಹೆಚ್ಚು ಕಡಿಮೆಯಿಲ್ಲದೆ ಸಮವಾಗಿರುವುವು. ಎಲೌ ಜನಕರಾಜ ಪುತ್ರಿಯೆ! ಆತನ ಹುಬ್ಬುಗಳು, ಮೂಗಿನ ಹೊಳ್ಳೆಗಳು, ಕಣ್ಣುಗಳು, ಕಿವಿಗಳು, ತುಟಿಗಳು, ಸ್ತನಾಗ್ರಗಳು, ಮೊಳಕೈಗಳು, ಮಣಿಕಟ್ಟುಗಳು, ಮೊಳಕಾಲುಗಳು, ಅಂಡಗಳು. ಕಟಿಪ್ರದೇಶಗಳು, ಕೈಕಾಲುಗಳು, ಪಕ್ಕೆಗಳು ಎಂಬ ಈ ಹದಿನಾಲ್ಕು ಸಮಪ್ರಮಾಣದಿಂದಿರುವುವು. ಆತನಿಗೆ ಕೋರೆದಾಡೆಗಳಂತಿರುವ ನಾಲ್ಕು ಹಲ್ಲುಗಳಿರುವುವು. ಆತನ ನಡಿಗೆಯೂ ಸಿಂಹ, ಹುಲಿ, ಆನೆ, ವೃಷಭಗಳ ನಡಿಗೆಗೆ ಸಮಾನವಾದುದು. ಆತನ ತುಟಿ, ಮುಸುಡಿ, ಮೂಗು ಇವು ಮೂರೂ ದೊಡ್ಡವಾಗಿರುವುವು. ಆತನು ಮಹಾಕಾಂತಿಯೊಡಗೂಡಿದ ಕಣ್ಣುಗಳನ್ನೂ, ದಂತಗಳನ್ನೂ, ದೇಹಚರ್ಮವನ್ನೂ, ಪಾದಗಳನ್ನೂ, ತಲೆಗೂದಲುಗಳನ್ನೂ ಉಳ್ಳವನು. ಆತನ ಬೆನ್ನೆಲುಬು, ಮೈ, ಬೆರಳುಗಳು, ಕೈ, ಮೂಗು, ಕಣ್ಣು, ಕಿವಿ, ಮೇಢ್ರ ಈ ಎಂಟೂ ದೀರ್ಘವಾಗಿರುವುವು' ಮುಖ, ನೇತ್ರ, ಜಿಹ್ವೆ, ತುಟಿಗಳು, ಮುಸುಡಿ, ಸ್ತನಗಳು, ನಖ, ಕೈ, ಕಾಲು ಎಂಬ ಈ ಹತ್ತೂ ಆತನಲ್ಲಿ ಪದ್ಮಾಕಾರದಿಂದೊಪ್ಪುತ್ತಿರುವುವು. ತಲೆ, ಹಣೆ, ಕಿವಿ, ಕಂಠ, ಎದೆ, ಹೃದಯ, ವಕ್ತ್ರ, ಕೈ ಕಾಲು, ಪೃಷ್ಠಗಳೆಂಬ ಈ ಹತ್ತವಯವಗಳೂ ದೊಡ್ಡವಾಗಿರುವುವು. ತೇಜಸ್ಸು ಅಥವಾ ಕಾಂತಿ, ಕೀರ್ತಿ, ಸಂಪತ್ತು ಇವು ಮೂರರಿಂದಲೂ ಆತನು ಲೋಕದಲ್ಲಿ ಪ್ರಸಿದ್ಧನಾಗಿರುವನು. ಇಷ್ಟೇ ಅಲ್ಲದೆ ಪರಿಶುದ್ಧನಾದ ಮಾತಾಪಿತೃ ವಂಶಗಳುಳ್ಳವನಾತನು. (ಅಥವಾ, ಅತಿಶುಭ್ರವಾದ ದಂತ ನೇತ್ರಗಳುಳ್ಳವನು) ಆತನ ಕಂಕಳು, ಹೊಟ್ಟೆ, ಎದೆ, ಮೂಗು, ಹೆಗಲು, ಹಣೆ ಇವು ಆರೂ ಉನ್ನತವಾಗಿರುವುವು. ಆತನ ತಲೆಗೂದಲು, ಮೀಸೆ, ಉಗುರು, ಬೆರಳಿನ ಗಿಣ್ಣುಗಳು, ಮೈ ಗೂದಲು, ಲಿಂಗ, ದೃಷ್ಟಿ, ಬುದ್ಧಿ ಇವು ಒಂಬತ್ತೂ ಸೂಕ್ಷ್ಮವಾಗಿರುವುವು``.
ಈ ಮೇಲಿನ ವರ್ಣನೆ ಸಾಮುದ್ರಿಕ ಶಾಸ್ತ್ರದನ್ವಯ ಚಕ್ರವರ್ತಿಯ ಲಕ್ಷಣಗಳನ್ನು ಸೂಚಿಸುತ್ತವೆಯೆಂದು ವ್ಯಾಖ್ಯಾನಕಾರರು ಅಭಿಪ್ರಾಯ ಪಡುತ್ತಾರೆ.
(ವಿವಿಧ ಮೂಲಗಳಿಂದ)
(ಆಕರ : ದೇವತೆಗಳು ಹಾಗೂ ಹಬ್ಬಗಳು ಲೇ : ಮ .ಶ್ರೀಧರಮೂರ್ತಿ ಮತ್ತು ಮೂರ್ತಿಶಿಲ್ಪ ನೆಲೆ-ಹಿನ್ನೆಲೆ ಲೇ: ಎಸ್.ಕೆ.ರಾಮಚಂದ್ರರಾವ್)
- ಕಲಾ ಕಣ್ಮಣಿ ಡಾ|| ಮೀರಾಕುಮಾರ್
9901398112
ಲೇಖಕರ ಸಂಕ್ಷಿಪ್ತ ಪರಿಚಯ:
ವರ್ಣ ಸಂಯೋಜನೆ ಹಾಗೂ ಸೂಕ್ಷ್ಮ ಕುಸುರಿ ಕಲೆೆಯಿಂದ ಗಮನ ಸೆಳೆಯುವ ಮೈಸೂರು ಚಿತ್ರಕಲೆ, ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೆ ಒಂದು ವಿಶಿಷ್ಟ ಪ್ರಕಾರವಾದ ಈ ಶೈಲಿ ನೋಡುಗರಿಗೆ ಒಂದು ತ್ರಿ– ಆಯಾಮದ ಅನುಭವ ನೀಡುತ್ತದೆ . ಕಲೆ - ಕೌಶಲ - ಭಕ್ತಿ ಮತ್ತು ವೈಭವಗಳ ಒಟ್ಟು ಮೊತ್ತವೇ ಆಗಿರುವ ಈ ಪ್ರಕಾರದ ಚಿತ್ರ ರಚನೆ ಸುಲಭದ ವಿಷಯವಲ್ಲ ಎನ್ನುವ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದೆ ಶ್ರೀಮತಿ ಮೀರಾಕುಮಾರ್ ಬೆಂಗಳೂರು ಕಲಾಮಂದಿರ ಸ್ಕೂಲ್ ಆಫ್ ಆರ್ಟ್ ಮೂಲಕ ಫೈನ್ ಆರ್ಟ್ ಡಿಪ್ಲೊಮಾ ಪಡೆದ ಕಲಾತಪಸ್ವಿ.
1951ರ ನವೆಂಬರ್ 29ರಂದು ಬಿ.ಸಿ.ನೀಲಕಂಠಯ್ಯ, ಪ್ರಪುಲ್ಲಮುಖಿ ದಂಪತಿಗಳ ಮಗಳಾಗಿ, ನವನಾಗರೀಕತೆಯ ಬೆಂಗಳೂರಿನಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣಾದಿಗಳನ್ನು ಮುಗಿಸಿ, ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು ಗಳಿಸಿ, ಪಾರಂಪರಿಕ ವರ್ಣಚಿತ್ರಕಲೆಯಲ್ಲಿ ಆಸಕ್ತರಾಗಿ, ಅ.ನ.ಸುಬ್ಬರಾಯರು ಮತ್ತು ಗೋವಿಂದರಾಜುರವರ ಸ್ಪೂರ್ತಿ ಸಹಕಾರದಿಂದ ಅವರ ಕಲಾಮಂದಿರದಲ್ಲಿ ಚಿತ್ರಕಲೆಯಲ್ಲಿ ಶಿಕ್ಷಣ ಪಡೆದು, ಪರಿಣಿತಿಯನ್ನು ಗಳಿಸಿದರು.
ಪ್ರಾರಂಭದ ದಿನದಲ್ಲಿ ಆಧುನಿಕ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ಆ ತುಡಿತದಿಂದ ಬಿಡಿಸಿಕೊಳ್ಳಲಾಗದೆ ವೃತ್ತಿ ಪರ ಕಲಾವಿದೆಯಾಗಿ ಪರಿವರ್ತಿತರಾಗಿ, ಸಾಂಪ್ರದಾಯಿಕ ಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಪಾರಂಪರಿಕ ಮೈಸೂರು ಶೈಲಿಯಲ್ಲಿ ಚಿತ್ರ ನಿರ್ಮಾಣದಲ್ಲಿ ಅವರಿಗಿರುವ ಅಭಿರುಚಿ ಅತಿಶಯೋಕ್ತಿಯಾದದ್ದು. ಚಿತ್ರ ವಿನ್ಯಾಸ, ವರ್ಣಗಳ ಮಿಲನ, ಮುಖಮಂಡಲದ ಮೆರಗು, ಸುತ್ತಲ ಪರಿಸರ ಎಲ್ಲದಕ್ಕೂ ಸೂಕ್ತ ಸ್ಥಾನಗಳನ್ನು ನೀಡಿ ರಚಿಸಿರುವ ಚಿತ್ರಗಳು ನಮ್ಮ ದೇಶದಲ್ಲಷ್ಟೇ ಅಲ್ಲದೇ 32ಕ್ಕೂ ಹೆಚ್ಚು ದೇಶಗಳಲ್ಲಿ ಕಂಗೊಳಿಸುತ್ತಿವೆ.
ಜೊಸ್ಸೋ ವರ್ಕ್ ಎಂಬೋಸ್ ಮೊದಲಾದ ಹಲವು ಕ್ಲಿಷ್ಟಕರ ಹಂತಗಳಲ್ಲಿ ಮೈದೆಳೆಯುವ ಈ ಕಲೆಯಲ್ಲಿ ನೈಜತೆಗಾಗಿ ಚಿನ್ನದ ತಗಡನ್ನು ಉಪಯೋಗಿಸುವುದರಿಂದ ಭಾರಿ ವೆಚ್ಚದಾಯಕ . ಇವರ ಚಿತ್ರಗಳಲ್ಲಿ ಕಂಡು ಬರುವ ಹಿನ್ನೆಲೆಯ 'ಪರದೆ' ಚಿತ್ರಕ್ಕೊಂದು ಮೆರಗು ನೀಡುತ್ತದೆ , ರಾಜ್ಯ ಮಟ್ಟದ 25 , ರಾಷ್ಟ್ರ ಮಟ್ಟದ 10, ಅಂತರಾಷ್ಟ್ರೀಯ ಮಟ್ಟದ 5 ಕಲಾಪ್ರದರ್ಶನಗಳಲ್ಲಿ ಪ್ರತ್ಯಕ್ಷ ಭಾಗಿ ಇವರ ಕಲಾ ಪ್ರೇಮಕ್ಕೆ ಸಾಕ್ಷಿ. ಕಲೆಯ ಅಧ್ಯಯನಕ್ಕೆ ಲಂಡನ್, ಪ್ಯಾರಿಸ್, ಆಸ್ಟ್ರಿಯಾ ದೇಶಗಳೂ ಸೇರಿದಂತೆ ಅನೇಕ ದೇಶ ವಿದೇಶಗಳ ಪ್ರವಾಸ. ಅಪರೂಪದ ಕಲಾಕೃತಿಗಳ ಸಂಗ್ರಹ ಇವರ ಮನೆ. ವಿಶ್ವಂಭರ ಕಲಾದೇಗುಲ . 'ಕಲಾಕಸ್ತೂರಿ' ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅಭಿಜಾತ ಕಲಾವಿದೆಯ ಅಪ್ರತಿಮ ಸಾಧನೆ ಗುರುತಿಸಿ ನ್ಯೂ ಕ್ರಿಶ್ಚಿಯನ್ ಯೂನಿವರ್ಸಿಟಿರವರು ಗೌರವ ಡಾಕ್ಟರೇಟ್ ಪದವಿ ನೀಡಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಸಂದಿದೆ.
ಕೆ.ಪಿ. ರತ್ನಾಕರ ಭಟ್ಟರ ಶ್ರೀ ಗೀತಾಂತರಂಗ ಪುಸ್ತಕದಲ್ಲಿ ಬರುವ 18 ಅಧ್ಯಾಯಗಳಿಗೆ ಚಿತ್ರಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಅನೇಕ ಪುಸ್ತಕಗಳಿಗೆ ವರ್ಣರಂಜಿತ ಮುಖಪುಟಗಳನ್ನು ರಚಿಸಿಕೊಟ್ಟಿದ್ದಾರೆ. ಇವರು ರಚಿಸಿರುವ ರಾಜರಾಜೇಶ್ವರಿ ಚಿತ್ರವು ನಾಡಿನ ಚಿತ್ರಾಸಕ್ತರ ಮನಸೂರೆಗೊಂಡಿದೆ. ಶ್ರೀಮತಿಯವರು ಕರ್ನಾಟಕ ಕಲಾ ಮೇಳ, ಅ.ನ.ಸುಬ್ಬರಾಯರ ಜನ್ಮ ಶತಾಬ್ದಿ, ಮೈಸೂರು ದಸರಾ ವಸ್ತು ಪ್ರದರ್ಶನ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಪ್ರದರ್ಶನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ 'ಕೃಷ್ಣನ ಹೆಸರೇ ಲೋಕಪ್ರಿಯ'' ಕೃತಿಗೆ ಮಾಡಿಕೊಟ್ಟ ನವನೀತ ಕೃಷ್ಣನ ಮುಖಪುಟ ವಿನ್ಯಾಸ ಜನಮನ ಸೂರೆಗೊಂಡಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ