ಅನಂತ ಸಂಸಾರ ಸಮುದ್ರ ತಾರಾ-
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್|
ವೈರಾಗ್ಯಸಾಮ್ರಾಜ್ಯದ ಪೂಜನಾಭ್ಯಾಮ್
ನಮೋ ನಮಃ ಶ್ರೀಗುರುಪಾದುಕಾಭ್ಯಾಮ್||
ಶ್ರೀಗುರುಗಳ ಮೇಲಿನ ಶ್ರದ್ಧಾಭಕ್ತಿಗಳಿಂದಲೇ ಈ ಅನಂತವಾದ ಸಂಸಾರ ಸಾಗರವನ್ನು ದಾಟಿ ಮೋಕ್ಷದ ಪಥ ಸೇರಲು ಸಾಧ್ಯ ಎಂಬುದು ಶ್ರೀರಾಮಚಂದ್ರಾಪುರ ಮಠದ ಶಿಷ್ಯಭಕ್ತರಾದ ನಮಗೆಲ್ಲ ತಿಳಿದಿದೆ.
ಪಾದುಕೆಗಳು ಪರಮಾತ್ಮ ಸ್ವರೂಪ ಎಂಬ ಪೂಜ್ಯ ಭಾವನೆ ಹೊಂದಿರುವ ಪರಂಪರೆ ನಮ್ಮದು. ಹದಿನಾಲ್ಕು ವರ್ಷಗಳ ಕಾಲ ಶ್ರೀರಾಮ ದೇವರ ಪ್ರಾತಿನಿಧ್ಯ ಸ್ವರೂಪವಾದ ಪಾದುಕೆಗಳು ರಾಜ್ಯಭಾರ ನಡೆಸಿದ ಪಾವನ ಭೂಮಿಯ ಪ್ರಜೆಗಳು ನಾವು.
'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ದಾಸವಾಣಿಯಂತೆ ಶ್ರೀಗುರುಗಳಿಗೆ ಶರಣಾಗಿ ಬದುಕನ್ನು ಪಾವನಗೊಳಿಸುವ ಗುರಿ ಹೊಂದಿರುವ ಶಿಷ್ಯಬಂಧುಗಳಿಗೆಲ್ಲ ಶ್ರೀಗುರುಪಾದುಕೆಗಳ ಮಹತ್ವದ ಅರಿವಿದೆ.
ಶೋಭಕೃತ್ ಸಂವತ್ಸರದ ಗುರುಪೂರ್ಣಿಮೆಯಂದು ಶ್ರೀಗುರುಗಳಿಂದ ಪರಿಗ್ರಹಗೊಂಡಿರುವ ಶ್ರೀರಾಮಚಂದ್ರಾಪುರ ಮಠದ ಸ್ವರ್ಣಪಾದುಕೆಗಳು ಶ್ರೀಗುರುಗಳ ಮಹತ್ವಪೂರ್ಣ ಕಲ್ಪನೆಯ ಭಾಗವಾಗಿದೆ.
ಶ್ರೀರಾಮಚಂದ್ರಾಪುರಮಠದ ಅವಿಚ್ಛಿನ್ನ ಗುರುಪರಂಪರೆಯ ಸಮಗ್ರ ಯತಿವರೇಣ್ಯರ ಪ್ರಾತಿನಿಧ್ಯ ಸ್ವರೂಪವಾದ ಸ್ವರ್ಣಪಾದುಕೆಗಳ ಸೇವೆಯಿಂದ ಶಿಷ್ಯಬಂಧುಗಳ ಇಷ್ಟಾರ್ಥಗಳು ಈಡೇರಿ ಬದುಕು ದಿವ್ಯಸ್ಥಿತಿಯನ್ನು ಹೊಂದುತ್ತದೆ.
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಹೋನ್ನತ ಆಶಯದಂತೆ ಶ್ರೀಗಳ ಪ್ರತಿನಿಧಿಯಾದ ಸ್ವರ್ಣಪಾದುಕೆಗಳು ವಲಯ ಸಂಚಾರ ಕೈಗೊಂಡು ಭಿಕ್ಷಾಂಗ ಸೇವೆಗಳು ಹಾಗೂ ಪಾದುಕಾಪೂಜೆಗಳನ್ನು ಸ್ವೀಕರಿಸುತ್ತಿವೆ.
ಸ್ವರ್ಣಪಾದುಕೆಗೆ ಸಮರ್ಪಣೆಯಾದ ಕಾಣಿಕೆಗಳೆಲ್ಲವೂ ಸನಾತನ ಭಾರತೀಯ ಸಂಸ್ಕೃತಿಯ ಸಂವರ್ಧನೆಯ ಸಂಕಲ್ಪದಿಂದ ಶ್ರೀಗುರುಗಳು ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಲ್ಲಬೇಕೆಂಬುದು ಶ್ರೀಗುರುಗಳ ಆಶಯ.
ಶ್ರೀಗುರುಗಳನ್ನು ತಮ್ಮ ನಿವಾಸಕ್ಕೆ ಕರೆಸಿ ಭಿಕ್ಷಾ ಸೇವೆ ಸಲ್ಲಿಸಲು ಅನಾನುಕೂಲವಿರುವ ಶಿಷ್ಯಬಂಧುಗಳಿಗೂ ಶ್ರೀಸ್ವರ್ಣಪಾದುಕೆಯನ್ನು ಮನೆಗೆ ಕರೆತಂದು ಭಿಕ್ಷಾಂಗ ಸೇವೆ ಸಲ್ಲಿಸುವ ಮೂಲಕ ಶ್ರೀಗುರುಗಳ ಅನುಗ್ರಹವನ್ನು ಪಡೆಯಬಹುದು. ಈ ಮೂಲಕ ಶ್ರೀಗುರುಗಳ ಕೃಪೆ ಹಾಗೂ ವಿವಿವಿ ಯ ಅಭಿವೃದ್ಧಿಗೆ ಕೈ ಜೋಡಿಸುವ ಪುಣ್ಯಕಾರ್ಯದ ಸದವಕಾಶವು ಲಭಿಸುತ್ತದೆ.
ಸಂಘಟನಾ ಚಾತುರ್ಮಾಸ್ಯದ ನಂತರ ವಲಯಗಳಲ್ಲಿ ಸಂಚಾರ ಕೈಗೊಂಡಿರುವ ಶ್ರೀಗುರುಗಳ ಪ್ರತಿನಿಧಿಯಾದ ಸ್ವರ್ಣಪಾದುಕೆಯ ಸೇವೆಯ ಅವಕಾಶಗಳನ್ನು ಶಿಷ್ಯಬಂಧುಗಳು ಪೂಜ್ಯ ಭಾವನೆಯಿಂದ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಅನೇಕ ಶಿಷ್ಯಬಂಧುಗಳು ಶ್ರೀಗುರು ಭಿಕ್ಷೆಯ ಜೊತೆಗೆ ಸ್ವರ್ಣಮಂಟಪ ಹಾಗೂ ಸ್ವರ್ಣಪಾದುಕಾ ಪೂಜೆಯನ್ನು ನೆರವೇರಿಸಿ ಆ ಮೂಲಕ ಸ್ವರ್ಣಭಿಕ್ಷೆಯ ಸೌಭಾಗ್ಯವನ್ನು ತಮ್ಮದಾಗಿಸಿ ಶ್ರೀಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಶ್ರೀಗುರುಗಳ ಪ್ರತಿನಿಧಿ ಸ್ವರೂಪವಾದ ಸ್ವರ್ಣಪಾದುಕೆಗಳು ವಲಯಗಳಿಗೆ ಬಂದಾಗ ಶ್ರೀಗುರುಗಳು ಚಿತ್ತೈಸಿದಷ್ಟೇ ಶ್ರದ್ಧಾಭಕ್ತಿಗಳಿಂದ ಸ್ವರ್ಣಪಾದುಕೆಗಳನ್ನು ಸ್ವಾಗತಿಸಬೇಕಿದೆ. ಶ್ರೀಗುರು ಭಿಕ್ಷೆ, ಶ್ರೀಗುರುಪಾದುಕಾ ಪೂಜೆಗಳನ್ನು ನೆರವೇರಿಸುವಂತಹ ಪೂಜ್ಯ ಭಾವನೆಯಿಂದ ಸ್ವರ್ಣಪಾದುಕಾ ಭಿಕ್ಷಾಂಗ ಸೇವೆಗಳನ್ನು ಸಲ್ಲಿಸಬೇಕಿದೆ. ಈ ಮೂಲಕ ಶ್ರೀಗುರುಗಳ ವಿಶೇಷ ಅನುಗ್ರಹ ಗಳಿಸಿ ನಮ್ಮೆಲ್ಲರ ಬದುಕನ್ನು ಪಾವನವಾಗಿಸಿ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು.
-ಶ್ರೀಮತಿ ಪ್ರಸನ್ನಾ ವಿ.ಚೆಕ್ಕೆಮನೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ