-ಸಿ. ಬಿ ಶೈಲಾ ಜಯಕುಮಾರ್, ಚಿತ್ರದುರ್ಗ
ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ, ಹರಟೆ, ಆತ್ಮಕಥನ, ವಿಮರ್ಶೆಗಳ ಸುಗ್ಗಿಯ ಕಾಲದಲ್ಲಿ ಮಹಾಕಾವ್ಯದ ರಚನೆಗೆ ಇಂಬಿಲ್ಲ ಎನ್ನುವಂತಹ ಇಪ್ಪತ್ತನೇ ಶತಮಾನದ ಆಧುನಿಕ ಸಂದರ್ಭದಲ್ಲಿ, ಕುವೆಂಪುರವರ ಸುಮಾರು ಒಂಭತ್ತು ವರ್ಷಗಳ ದೀರ್ಘ ತಪಸ್ಸು ಮತ್ತು ಧ್ಯಾನಗಳಿಂದ ಸೃಷ್ಟಿಯಾದ ಮಹಾ ಕಾವ್ಯ 'ಶ್ರೀ ರಾಮಾಯಣ ದರ್ಶನಂ'.
ಹೊಸ ಮನ್ವಂತರದಲ್ಲಿಯೂ ಯುಗ ಧರ್ಮವನ್ನು ಪ್ರತಿಪಾದಿಸುವ, ಅದ್ವಿತೀಯ ಹಾಗೂ ಅಲೌಕಿಕ ನಿತ್ಯ ಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ 'ಶ್ರೀ ರಾಮಾಯಣ ದರ್ಶನಂ' !
1968 ರಲ್ಲಿ ಜ್ಞಾನ ಪೀಠ ಪ್ರಶಸ್ತಿಯನ್ನು, 1988 ರಲ್ಲಿ ಪಂಪ ಪ್ರಶಸ್ತಿಯನ್ನು ಪಡೆದ ಕೃತಿ 'ಶ್ರೀ ರಾಮಾಯಣ ದರ್ಶನಂ'. ಡಾ. ಶಂಕರ್ ಮೊಕಾಶಿ ಪುಣೇಕರ ಅವರು ಈ ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಸಂಸ್ಕೃತ, ಹಿಂದಿ ಭಾಷೆಗಳಿಗೂ ಈ ಕೃತಿ ತರ್ಜುಮೆಯಾಗಿದೆ.
'ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ' ಎಂಬ ಹೆಸರಿನಲ್ಲಿ ಡಾ. ದೇ ಜವರೇಗೌಡರು ಕುವೆಂಪು ಮಹಾಕಾವ್ಯದ ಸಮಗ್ರ ಗದ್ಯಾನುವಾದವನ್ನು (ಆಂತರಿಕ ಭಾಷಾಂತರ) ಮಾಡಿದ್ದಾರೆ.
ರಾಮಾಯಣದ ಕಥೆ ಭಾರತೀಯರ ಪ್ರಜ್ಞೆಯ ಭಾಗವಾಗಿ ಮನದಲ್ಲಿ ಅಳಿಸಲಾಗದಂತೆ ಅಚ್ಚೊತ್ತಿದೆ. ವಾಲ್ಮೀಕಿಯ ನಂತರದಲ್ಲಿ ಸಾವಿರಾರು ಸಾಹಿತಿಗಳು ಮತ್ತೆ ಮತ್ತೆ ರಾಮಾಯಣವನ್ನು ಬರೆದರೂ ಆ ಅಮರ ಕಾವ್ಯ ಎಂದೂ ಚರ್ವಿತ ಚರ್ವಣವಾಗದ ಕೃತಿ!
ರಾಮಾಯಣಗಳ ಭಾರದಿಂದ ಫ಼ಣಿರಾಯ ತಿಣುಕುತ್ತಲೇ ಇದ್ದರೂ, ಆಸೇತು ಹಿಮಾಚಲದವರೆಗಿನ ಎಲ್ಲಾ ಭಾಷೆಗಳಲ್ಲಿಯೂ ರಾಮಾಯಣದ ಕಥೆ ಮತ್ತು ಅದರ ತಾಜಾತನ ನಳ ನಳಿಸುತ್ತಲೇ ಇದೆ!
ಕೊಲೆಯ ಕಲೆಯಲ್ಲಿ ಬಲ್ಲಿದನಾಗಿ, ಗರ್ವದಿಂದ ವರ್ತಿಸುತ್ತಿದ್ದ ಕಿರಾತಕ, ನಾರದ ಮುನಿಯಿಂದ ಕರುಣೆಯ ಮಹತ್ವವನ್ನರಿತು, ವಾಲ್ಮೀಕಿಯಾಗಿ ಪರಿವರ್ತಿತನಾಗಿ ಬರೆದ ಕಾವ್ಯ 'ರಾಮಾಯಣ'. ಮೇರು ಕವಿ ಕುವೆಂಪು ಅವರ ಅನುಭಾವ ದೃಷ್ಟಿಯಲ್ಲಿ 'ಶ್ರೀ ರಾಮಾಯಣ ದರ್ಶನಂ' ಸೃಷ್ಟಿಯಾಗಿದ್ದು 1949 ರಲ್ಲಿ! ಆಗ ಅವರ ವಯಸ್ಸು ಕೇವಲ ನಲವತ್ತೈದು ಮಾತ್ರ!
'ಶ್ರೀ ರಾಮಾಯಣ ದರ್ಶನಂ' ಅನ್ನು ಕುವೆಂಪು ಸೃಜಿಸಿದರೋ ಅಥವಾ ಕುವೆಂಪು ಅವರನ್ನೇ 'ಶ್ರೀ ರಾಮಾಯಣ ದರ್ಶನಂ' ಸೃಜಿಸಿತೋ... ಎರಡೂ ಸತ್ಯಗಳೇ...ಪರಸ್ಪರ ಪೂರಕ!
ಕುವೆಂಪು ತಾವು ನಂಬಿದ ಸಮಾನತೆ, ಸಮನ್ವಯ, ಸರ್ವೋದಯ ತತ್ವಗಳನ್ನು ತಮ್ಮ ಈ ಕೃತಿಯಲ್ಲಿ ಮಿಳಿತವಾಗಿಸಿದ್ದಾರೆ. ನಾಲ್ಕು ಸಂಪುಟಗಳ, ಐವತ್ತು ಸಂಚಿಕೆಗಳ, 22366 ಸಾಲುಗಳ ಈ ಮಹತ್ತರ ಕೃತಿಯನ್ನು ಕುವೆಂಪು ತಮ್ಮ ಆಚಾರ್ಯರಾದ ಶ್ರೀ ಟಿ ಎಸ್ ವೆಂಕಣ್ಣಯ್ಯನವರ ಮುಂದಿಟ್ಟಾಗ ಅವರು ಕೃತಿಯ ಬಾಹುಳ್ಯವನ್ನು ಗಮನಿಸುತ್ತ,'ರಾಮಾಯಣಂ ಅದು ವಿರಾಮಾಯಣ ಕಣಾ' ಎಂದು ಉದ್ಗರಿಸಿದ್ದರಂತೆ!
ಕಾವ್ಯದ ಆರಂಭದಲ್ಲೇ ಕುವೆಂಪು ಅವರು ಪಾಶ್ಚಿಮಾತ್ಯ ಹಾಗೂ ಪೌರಾತ್ಯ ಪೂರ್ವ ಸೂರಿಗಳನ್ನು ಸ್ಮರಿಸಿ; ದೇಶ, ಕಾಲ, ಭಾಷಾ, ಜಾತಿ ವಿಭೇದವನ್ನು ತೊರೆದು ಜಗತ್ತಿನ ಎಲ್ಲಾ ಕಲಾಚಾರ್ಯರಿಗೆ ತಲೆ ಬಾಗಿ ಕೈ ಜೋಡಿಸಿ ನಮಸ್ಕರಿಸುತ್ತಾರೆ.
ಪಿತೃವಚನ ಪರಿಪಾಲನೆಗಾಗಿ ಶ್ರೀರಾಮ, ಸೀತಾ, ಲಕ್ಷ್ಮಣರೊಂದಿಗೆ ವನವಾಸಕ್ಕೆ ತೆರಳಿದಾಗ, ಲಂಕಾಧಿಪತಿ ಸೀತೆಯನ್ನು ಅಪಹರಿಸುತ್ತಾನೆ. ಸುಗ್ರೀವ ಮತ್ತು ಆಂಜನೇಯರ ಸಹಕಾರದಿಂದ ರಾವಣನನ್ನು ವಧಿಸಿ, ಸೆರೆಯಿಂದ ಸೀತೆಯನ್ನು ಬಿಡಿಸುತ್ತಾನೆ! ಕಥೆ ಸುಖಾಂತವಾಗುತ್ತದೆ.
ರಾಮಾಯಣದ ಈ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದದ್ದೇ! ಹಾಗಾದರೆ ಕುವೆಂಪುರವರು ಬರೆದಿದ್ದರಲ್ಲಿ ಏನು ವಿಶೇಷ ಎಂದಿರಾ...
"ವಾಲ್ಮೀಕಿಯುಲಿದ ಕಥೆಯಾದೊಡಂ ಕನ್ನಡದಿ ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ
ಮರುವುಟ್ಟವಡೆದಂತೆ ಮಾಡಿದೀ ಕಾವ್ಯಮಂ
ವಿಶ್ವ ವಾಣಿಗೆ ಮುಡಿಯ ವೀಣೆ ಮಾಡಿಹೆನ್" ಎನ್ನುತ್ತಾರೆ ಕುವೆಂಪು! ಕಥೆ ಹಳೆಯದಾದರೂ ಅದರ ಭಾವ ನವ ನವೀನವಲ್ಲವೇ...
ಇಂದು ರಾಮಾಯಣ ಪುರಾಣವಾಗಷ್ಟೇ ಉಳಿಯದೆ ಶಾಶ್ವತ ಇತಿಹಾಸವಾಗಿ ವಿಕಾಸಗೊಳ್ಳುತ್ತಿದೆ! ರಾಮ ಶಕ್ತಿಗೆ, ರಾಮ ನಾಮಕ್ಕೆ ಎಂದೂ ಅಳಿವಿಲ್ಲವೆಂಬುದನ್ನು ನಿರೂಪಿಸುತ್ತಿದೆ!
ಸರಳ ರಗಳೆಯ ಮಹಾ ಛಂದಸ್ಸಿನಲ್ಲಿ, ಅಷ್ಟಾದಶ ವರ್ಣನೆಗಳಿಂದ, ನವರಸಗಳಿಂದ, ಅನಂತ ಉಪಮೆಗಳಿಂದ ಕಂಗೊಳಿಸುವ 'ಶ್ರೀ ರಾಮಾಯಣ ದರ್ಶನಂ' ವರ್ಣಕ ಕಥನ ಕಾವ್ಯ!
ಉಪಮಾತೀತಭಾಷೆ, ಮಾಲೋಪಮೆಗಳು,ಅನುಪ್ರಾಸ, ಕುವೆಂಪುರವರ ಉದಾತ್ತ ದೃಷ್ಟಿಯ ಸೃಷ್ಟಿ, ಕನ(ಣ)ಸುಗಳ ಪ್ರತಿಮಾ ಲೋಕ, ಸಂದರ್ಭೋಚಿತ ವಸ್ತು ವೈವಿಧ್ಯ ಮತ್ತು ಅನಂತ ದರ್ಶನವೇ ಈ ಮಹಾನ್ ಕೃತಿಯ ವಿಶೇಷ!
'ಶ್ರೀ ರಾಮಾಯಣ ದರ್ಶನಂ' ಕೃತಿಯನ್ನು ಓದುವ ಮುನ್ನ ಒಂದು ಪೂರ್ವ ಸಿದ್ಧತೆ ಬೇಕು. ಒಂದು ಹೊಸ ದೃಷ್ಟಿ ಬೇಕು. ಒಮ್ಮೆ ಓದಿ ಮುಚ್ಚಿಡುವ ಕೃತಿ ಇದಲ್ಲ! ಮತ್ತೆ ಮತ್ತೆ ಓದಿದಂತೆ, ಮೆಲುಕು ಹಾಕಿದಂತೆಲ್ಲಾ ಈ ಕೃತಿಯ ಮಹಿಮೆ, ಗರಿಮೆಗಳು ನಮ್ಮ ಅರಿವಿಗೆ ನಿಲುಕುತ್ತ ಹೋಗುತ್ತವೆ. ನಮ್ಮ ಜ್ಞಾನದ ಫ಼ರಿಧಿಯೂ ವಿಸ್ತರಿಸುತ್ತದೆ. ಭೂತಕ್ಕೆ ಕನ್ನಡಿ ಹಿಡಿದು ಭವಿಷ್ಯಕ್ಕೆ ಮುನ್ನುಡಿ ಬರೆವ ಲೋಕ ತಣಿವ ದರ್ಶನವಿಲ್ಲಿದೆ!
'ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ ವ್ಯೂಹ ರಚನೆಯೊಳ್'. ಇದು ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಸಾರ ಸರ್ವಸ್ವ!
ಕುವೆಂಪುರವರ ಎಲ್ಲದರಲ್ಲಿಯೂ ಒಳಿತನ್ನೇ ಕಾಣುವ 'ಧರ್ಮಗುಣ' ಕುಖ್ಯಾತರನ್ನೂ ಸುಖ್ಯಾತರನ್ನಾಗಿಸುತ್ತದೆ!
ಶ್ರೀ ರಾಮ ಪಟ್ಟಾಭಿಷೇಕಕ್ಕೆ ಭಂಗ ತಂದಳೆಂದು ಅಯೋಧ್ಯೆಯ ಪ್ರಜೆಗಳ ಕೋಪಕ್ಕೆ, ಯುವರಾಜ ಭರತನ ತಿರಸ್ಕಾರಕ್ಕೊಳಗಾಗಿದ್ದ, ಕೈಕೇಯಿಯ ಮೆಚ್ಚಿನ ದಾಸಿ, ಸಖಿ ಮಂಥರೆ, "ಓ ಭರತನಣ್ಣಯ್ಯ, ಓ ರಾಮಯ್ಯ! ಎಲ್ಲಿರುವೆ ಹೇಳು? ದಮ್ಮಯ್ಯ"ಎಂದು ಕೌಸಲ್ಯಾಪುತ್ರನನ್ನು ಉನ್ಮತ್ತಳಂತೆ ಅರಸಿ ಕಾಳ್ಗಿಚ್ಚಿಗೆ ಬಲಿಯಾದವಳು! ಅವಳದೇನೂ ತಪ್ಪಿಲ್ಲ, ಆಕೆ ವಿಧಿಯ ಹಸ್ತದ ಬೊಂಬೆ ಎನ್ನುತ್ತಾರೆ ಕುವೆಂಪು.
ಸೋದರ ಸುಗ್ರೀವನನ್ನು ಮನಸಾರೆ ದ್ವೇಷಿಸುತ್ತಿದ್ದ ವಾಲಿ, ಪತ್ನಿ ತಾರಾಳ ವಚನ ಮಂತ್ರದಿಂದ ವೈರ ಹತನಾಗಿ, ಶಾಂತಚಿತ್ತನಾಗಿ ಸುಗ್ರೀವನ ಬಳಿ ಸಾರಿದಾಗ, ರಾಮಬಾಣಕ್ಕೆ ಬಲಿಯಾದವನು! ಕೋಪಿಯಲ್ಲದ, ಪಾಪಿಯಲ್ಲದ ವಾಲಿ "ಮಗಳೆನಗೆ ರುಮೆ, ತಾರೆ ತಾಂ ಸಾಕ್ಷಿ! " ಎಂದು ಸೋದರಪತ್ನಿಯನ್ನು ಗೌರವದಿಂದ ಕಂಡಾತ! ವಾಲಿ ಸತಿ ತಾರಾ ಪತಿಯೊಂದಿಗೆ ಚಿತೆಯನ್ನೇರುತ್ತಾಳೆ. ಮೂಲದಲ್ಲಿಲ್ಲದ ಭಾಗಗಳಿಗೆ ಕುವೆಂಪು ಜೀವ ತುಂಬುತ್ತಾರೆ!
ಹೆಣ್ಣಾದರೂ ಮತಿ- ಧೃತಿಗಳಲ್ಲಿ ಗಂಡಿಗೆ ಸಮಾನಳಾದ (ವಿಧವೆ) ಶೂರ್ಪನಖಿ (ಚಂದ್ರನಖಿ) ರಾಮ- ಲಕ್ಷ್ಮಣರನ್ನು ಕೂಡಬೇಕೆಂಬ ರತಿಯಾಸೆಯಿಂದ, ಸೀತಾಪಹರಣಕ್ಕೆ ಕಾರಣಳಾಗಿ, ಯುದ್ಧವನ್ನು ಪ್ರಚೋದಿಸಿದವಳಾದರೂ ಅವಳಲ್ಲೊಂದು ಮಹಾ ಪರಿವರ್ತನೆ ಕುವೆಂಪುರವರ ಕೃತಿಯಲ್ಲಿ !
"ಮುನ್ನನ್ನಳಲ್ತು ನಾನಿನ್, ಲಂಕೆಯಂ ದುರ್ಗತಿಗೆ ತಂದೆ, ನಿನ್ನಡಿಯೊಳ್ ಒಂದು ಭಿಕ್ಷೆ, ಜನಕ ಕನ್ಯೆಯಂ ದಾಶರಥಿಗೊಪ್ಪಿಸುವುದೆನ್ನಾ ಮನೋರಥಂ" ಎಂದು ಅಗ್ರಜನಲ್ಲಿ ಆಕೆ ಬೇಡುತ್ತಾಳೆ. ಪಾಪ ಪ್ರಜ್ಞೆಯಿಂದ ಅಳಲುತ್ತಾಳೆ. ಪ್ರಾಯಶ್ಚಿತ್ತಕ್ಕಾಗಿ ಸೀತೆಯನ್ನು ಸೆರೆಯಿಂದ ಬಿಡಿಸಿ ಗೌರವದಿಂದ ಒಪ್ಪಿಸೆನ್ನುತ್ತಾಳೆ! ಹೀಗೆ ಶೂರ್ಪನಖಿಯನ್ನು ಅಮರಳನ್ನಾಗಿಸುತ್ತಾರೆ ಕವಿ!
ಅಶೋಕ ವನದ ನಡುವೆ ರಾಮತಪಸ್ವಿನಿ ಸೀತೆಯನ್ನು ಕಂಡಾಗಿನಿಂದ ವಿಭೀಷಣ ಕುವರಿ, ಷೋಡಶಿ ಅನಲೆಯ ಪರಿಯೇ ಬೇರೆ!
ರಾವಣ ಅನಲೆಯನ್ನು ತನ್ನನ್ನು ಕಾಪಾಡುವ ದೇವಿ, ಪುಣ್ಯವನ್ನು ಪ್ರಚೋದಿಸುವ ಶಕ್ರಿಯೆಂದೇ ಭಾವಿಸಿದ್ದಾನೆ. ಗಂಡುಗಳು ಕ್ರೋಧದಿಂದ ಮೈ ಮರೆತು ಮನುಜ ಕುಲದ ವಿನಾಶದಲಿ ತೊಡಗಿರುವಾಗ ಆಕೆ ಯುದ್ಧ ನಿಲ್ಲಿಸಲು ನಿರಂತರ ಪ್ರಯತ್ನ ಮಾಡಿದಾಕೆ! ದುರಂತವನ್ನು ಲೆಕ್ಕಿಸದೆ ವಿವೇಕವನ್ನೇ ಉಸಿರಾಗಿಸಿಕೊಂಡವಳು!
ರಾಮನ ಆಗಮನಕ್ಕಾಗಿ, ರಾವಣನ ಉದ್ಧಾರಕ್ಕಾಗಿ, ಆತ್ಮ ಮಂಗಳಕ್ಕಾಗಿ, ವೈರ ನಿವಾರಣೆಗಾಗಿ ಸದಾ ತಪೋನಿರತಳಾಗಿದ್ದ ಸೀತೆ ರಾವಣನ ಹತ್ಯೆಯಾದ ನಂತರದಲ್ಲಿ, ಪತಿಯಿಂದ ತಿರಸ್ಕೃತಳಾದಾಗ ಅಗ್ನಿ ಪ್ರವೇಶಕ್ಕೆ ಸಿದ್ಧಳಾದಳು. ಸೀತಾಮಾತೆ ಚಿತೆಯನ್ನು ಹೊಕ್ಕ ಮರುಕ್ಷಣವೇ ಶ್ರೀ ರಾಮನೂ ಉರಿಯುವ ಚಿತೆ ಪ್ರವೇಶಿಸುತ್ತಾನೆ, ಮಾನ್ಯನಾಗುತ್ತಾನೆ! ಪೂಜ್ಯೆಯನ್ನು ಪರೀಕ್ಷಿಸುವ ನೆಪದಿಂದ ರಾಮ ತನ್ನನ್ನೂ ಪರೀಕ್ಷೆಯ ಓರೆಗಿಟ್ಟ! ಪುರುಷ ಪ್ರಧಾನ ಸಮಾಜದಲ್ಲಿ ಈ ಪ್ರಸಂಗವಂತೂ ನಿತ್ಯ ನೂತನ! ಕುವೆಂಪುರವರ ರಸಸಿದ್ಧಿಗೆ ಇದು ಸಾಕ್ಷಿ!
ಶಿವ ಧನಸ್ಸನ್ನು ಮುರಿಯಲೆಂದು ಬಂದ ರಾವಣ ವಿಫ಼ಲನಾಗಿ, ತಪಗೈದು ಶಕ್ತಿಯನ್ನು ಆರ್ಜಿಸಿ ಬರುವುದರೊಳಗಾಗಿ ಶ್ರೀರಾಮ ಹರಚಾಪವನ್ನು ಭಂಗಿಸಿ ಸೀತಾ ಮಾಲೆಗೆ ಕೊರಳೊಡ್ಡಿದ್ದ. ರಾವಣ ಸೀತೆಗಾಗಿ ಆರ್ಜಿಸಿದ ತಪಃಶ್ಯಕ್ತಿಯನ್ನು ಸೀತೆಗಾಗಿಯೇ ವ್ಯಯಿಸಿದ. ದೇವ, ದಾನವ, ಗರುಡ, ಗಂಧರ್ವ, ಯಕ್ಷ, ಕಿನ್ನರರಿಂದ ಸಾವಿಲ್ಲದಿರುವ ರಾವಣನ ಆತ್ಮವಿಶ್ವಾಸದ ಮಾತುಗಳು... "ರಾವಣನ ರಸಿಕತೆಗೆ, ಸತ್ವಕ್ಕೆ, ವೀರ್ಯಕ್ಕೆ, ತೇಜಕ್ಕೆ, ಯೌವನಕ್ಕೆ ಮೆಚ್ಚಿ ವಶವಾಗದಿರ್ದ ಪವಿತ್ರಾಂಗಿಯಂ ಕಂಡೆನಿಲ್ಲಂ...ಪತಿವ್ರತೆ ಎಂಬುದೇ ಕಟ್ಟು ಕಥೆ! ನರ ಸುರ ಅಸುರ ಲೋಕದೊಳ್ ಲಂಕೇಶ್ವರನ ಸಜ್ಜೆಯಂ ಪಳಿದು, ಪೇಸುವ ಅಂಗನೆಯರಿಲ್ಲ!" ಎನ್ನುವ ರಾವಣ ನಂತರದಲ್ಲಿ 'ಹದಿಬದೆಯರಧಿದೇವಿ' ಎಂದು ಸೀತೆಯನ್ನು ಬಣ್ಣಿಸುತ್ತಾನೆ.
ಸೀತೆಯನ್ನು ಬಲದಿಂದ ಹೊತ್ತು ತಂದನಾದರೂ, ಬಲವಂತದಿಂದ ಕೂಡುವ ಪಶುವಲ್ಲ! ಕಾಮುಕ, ಕಠಿಣನಾದರೂ ಅಸಂಸ್ಕೃತನಲ್ಲ! ರಾಮನನ್ನು ಸೋಲಿಸುವುದಕ್ಕಿಂತ ಸೀತೆಯ ಸೋಲನ್ನೇ ನೆಮ್ಮಿದವನು ದೈತ್ಯ ಚಕ್ರೇಶ್ವರ!
ಆತನ ಅಹಂಕಾರವೆಲ್ಲ ನಶಿಸಿ ಮರುಹುಟ್ಟು ಪಡೆದವನು! ಶ್ರದ್ಧೆಯನ್ನು ತುಂಬಿ ಆತ್ಮವನ್ನುದ್ಧರಿಸಿದ ಸೀತೆಯನ್ನು ಪುಣ್ಯಮಾತೆ ಎಂದು ಆದರಿಸುತ್ತಾನೆ. ರಾವಣನನ್ನೇ ಗೆದ್ದ ಸೀತೆಗೆ, ರಾಮನನ್ನು ಕಪ್ಪ ಕೊಡುತ್ತೇನೆ ಎನ್ನುತ್ತಾನೆ!
ಧಾನ್ಯಮಾಲಿನಿಯ ಮರಣದ ಸಂದರ್ಭದಲ್ಲಿ ರಾವಣನ ಮಾತುಗಳು ಶೇಕ್ಸ್‌ಪಿಯರ್ ನ ಮ್ಯಾಕ್ ಬೆತ್ ನಾಟಕದ "Life is a tale told by an idiot full of sounds and fury which signifies nothing" ಮಾತುಗಳನ್ನು ಅನುರಣಿಸಿದಂತಾಗುತ್ತದೆ...
"ಬಾಳ್! ಕಳ್ಳನೊರೆದೊಂದು ಸುಳ್ಳಿನ ಸಂತೆ ! ಬರೀ ಬೊಂತೆ! ಕಡೆಗೆ ಬೆಂಕಿಯ ಹೊರೆದು, ಬೂದಿರಾಸಿಯನುಳಿವ ಅರ್ಥವಿಲ್ಲದ ಬಣಗು ಕಂಥೆ! ಇದಕೇಕಿನಿತು ಚಿಂತೆ?"
ಶಿವಭಕ್ತ ರಾವಣ, ಪತ್ನಿ, ಪುತ್ರ ವತ್ಸಲಿ ಲಂಕೇಶ, ಉದಾತ್ತ ಗುಣ ಗ್ರಾಹಿ, ಶುಚಿ ಚಾರಿತ್ರ್ಯವನ್ನು ಮೈಗೂಡಿಸಿಕೊಂಡ ಶೂರ, ಶತ್ರು ಮರ್ಧನ, ಇಂದ್ರನನ್ನೂ ಜಯಿಸಿದ ಜಿತೇಂದ್ರಿಯ, ಯಾವುದೋ ವಿಷಗಳಿಗೆಯಲ್ಲಿ ಲುಪ್ತೇಂದ್ರಿಯನಾದವನು! ಮಹತ್ತಾದ ಅನೇಕ ಗುಣಗಳ ನಡುವೆ ಒಂದೇ ಒಂದು ಅವಗುಣ, ಆತನನ್ನು ಪಾತಾಳಕ್ಕೆ ನೂಕಿತು! ಪಾಶ್ಚಾತ್ಯ ಕಲ್ಪನೆಯ ದುರಂತ ನಾಯಕನನ್ನು ನೆನಪಿಸುತ್ತಾನೆ ,ಕುವೆಂಪು ಸೃಜಿಸಿದ ರಾವಣ! ಮತ್ತೆ 'ವಿಧಿಯ ವಜ್ರೇಚ್ಛೆ' ಎನ್ನುತ್ತಾರೆ ಕುವೆಂಪು!
ಅರಿವಿಲ್ಲದೆಯೇ 'ಪಂಪ ರಾಮಾಯಣ'ದ "ಅಬ್ಧಿಯುಮೊರ್ಮೆ ಕಾಲವಶದಿಂ
ಮರ್ಯಾದೆಯಂ ದಾಂಟದೇ?"
(ಸಮುದ್ರವೂ ಒಮ್ಮೊಮ್ಮೆ ತನ್ನ ಮೇರೆ ಮೀರುವುದಿಲ್ಲವೇ"?)
ನಾಗಚಂದ್ರನ ರಾವಣನ ಈ ಸಾಲುಗಳು ಚಿತ್ತಭಿತ್ತಿಯಲ್ಲಿ ಮೂಡುತ್ತವೆ! ರಾವಣನ ದ್ವಂದ್ವ...ಹಿತ ಮತ್ತು ಪ್ರಿಯ, ಶುಚಿ ಮತ್ತು ರುಚಿ ಇವೆರಡರ ನಡುವಿನ ತಿಕ್ಕಾಟವನ್ನು, ಘರ್ಷಣೆಯನ್ನು ಕುವೆಂಪು ಅರ್ಥವತ್ತಾಗಿ ಚಿತ್ರಿಸುತ್ತಾರೆ. ಕುವೆಂಪುರವರ ರಾವಣ, ರಾಮನನ್ನೂ ಮೀರಿ ತ್ರಿವಿಕ್ರಮನಂತೆ ಶೋಭಿಸುತ್ತಾನೆ! ಪುಟಕ್ಕಿಟ್ಟ ಬಂಗಾರವೇ ಆಗಿ ಬಿಡುತ್ತಾನೆ!
ಹೆಣ್ಣನ್ನು ಗೌರವಿಸುತ್ತಿದ್ದರೆಂಬುದಕ್ಕೆ ಸಾಕ್ಷಿಯಾಗಿ ಕುವೆಂಪು, ಸೋದರ ಪುತ್ರಿ ಅನಲೆ ಹಾಗೂ ಇಂದ್ರಜಿತ್ ಪತ್ನಿ ತಾರಾಕ್ಷಿಯನ್ನು ರಾವಣನ ಮೂಲಕ 'ಅಕ್ಕಯ್ಯ' ಎಂದೇ ಕರೆಸುತ್ತಾರೆ. (ನಿಜ ಜೀವನದಲ್ಲೂ ಕುವೆಂಪು ಮಗಳು ತಾರಿಣಿಯನ್ನು ಹಾಗೂ ಸೊಸೆ ರಾಜೇಶ್ವರಿಯನ್ನು ಹಾಗೆಯೇ ಕರೆಯುತ್ತಿದ್ದರು)
"ನಿನ್ನ ವಿನಾಶಕ್ಕೆ ರಾಮಬಾಣವೇ ಬೇಡ, ಪತಿವ್ರತಾಪಹರಣವೇ ಸಾಕು"
"ಹದಿಬದೆಯ ಎದೆಯುರಿ ಲಂಕೆಯನ್ನು ದಹಿಸದೆ?"
"ಪರಸ್ತ್ರೀಯನ್ನು ಮೋಹಿಸಿದವನು ಸತ್ತನೆಂಬುದನೇ ನಂಬು" ಹೀಗೆ ಅನೇಕರಿಂದ ರಾವಣನಿಗೆ ಬುದ್ಧಿ ಹೇಳಿಸುತ್ತಾ ಓದುಗರೆದೆಗಳಲ್ಲೂ ಮೌಲ್ಯವನ್ನು ತುಂಬುತ್ತಾರೆ ಮಡಿಬಾಳ್ವೆಯ ತಾಪಸಿ ಕುವೆಂಪು! ಹಾಸ್ಯ ಪ್ರಸಂಗಗಳಿಗೂ ಇಲ್ಲಿ ಕೊರತೆಯಿಲ್ಲ!
ಮೊಗ, ಮೈಗಳಿಗೆಲ್ಲಾ ಮಸಿ ಬಳಿದುಕೊಂಡು, ಹಸಿ ಕಟ್ಟಿಗೆಯಲ್ಲಿ ಅಡುಗೆ ಮಾಡುತ್ತಿದ್ದ ಜನಕ ಸುತೆಯನ್ನು ಕಂಡು ರಾಮ 'ವಾನರಿ' ಎನ್ನುತ್ತಾನೆ, ಲಕ್ಷ್ಮಣನಿಗೂ ತೋರಿಸಿ ನಗಾಡುತ್ತಾನೆ ರಾಮ! ಸೀತೆ ಗಂಡನೊಂದಿಗೆ ಸರಸದಿಂದ ವಾದಿಸುವಾಗ 'ತರ್ಕ ಸಿಂಹಿಣಿ' ಎಂದಾಕೆಗೆ ಅಭಿದಾನವೀಯುತ್ತಾನೆ ದಾಶರಥಿ!
ಪಂಚವಟಿಯಲ್ಲಿದ್ದಾಗ ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯೆಯನ್ನು, ಸರಯೂ ನದಿಯನ್ನು ಆಗಾಗ ಸ್ಮರಿಸುವುದು... 'ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ' ಯನ್ನು ನೆನಪಿಸುತ್ತದೆ. ಕಾಡಲ್ಲಿದ್ದೂ ಊರವರನ್ನು ನೆನೆಯುವ ಪರಿ, ಸರಸ, ಸಾಮರಸ್ಯ ಹಿತವೆನಿಸುತ್ತವೆ.
ಈ ಕೃತಿಯಲ್ಲಿ ಕಾಣ ಬರುವ ಕನಸುಗಳು ಕೇವಲ ಸ್ವಪ್ನ ಚೇಷ್ಟೆಗಳಲ್ಲ, ಮುನ್ಸೂಚನೆಗಳಂತೆ ಭವಿಷ್ಯ ನುಡಿಯುತ್ತವೆ!
ಕೌಸಲ್ಯೆ, ಮಂಥರೆ, ಭರತ, ಶಬರಿ, ಸೀತಾ, ತ್ರಿಜಟೆ, ಅನಲೆ, ರಾವಣನ ಕನಸುಗಳ ಬಗ್ಗೆ ವಿವರವಾಗಿ ಬರೆಯಬೇಕೆನಿಸುವಷ್ಟು ಕುತೂಹಲಕಾರಿ ಆಗಿವೆ.ಜನ್ನ ಕವಿಯ ಯಶೋಧರನ ಕನಸೂ ನೆನಪಾಗುತ್ತದೆ!
ಈ ಕೃತಿಯಲ್ಲಿ ಲಂಕಾ ದಹನದ ಪ್ರಸ್ತಾಪವಿಲ್ಲ! ಸ್ವರ್ಣ ಲಂಕೆಯನ್ನು ಸುಡುವುದೇಕೆಂದು ಕುವೆಂಪು ಬಿಟ್ಟರೇನೋ...
"ತನ್ನ ಮುಡಿಗೆ ಲಂಕಾ ಕಿರೀಟವನದಂ ರಘುವರನಿಡಲ್, ಬಯಸಲೊಲ್ಲದೆಯೆ ಇಂದ್ರಜಿತುವಿನ ಕಂದಗಾ ಪಸುಳೆ ಮೊಮ್ಮಗನ ಮುಡಿಗೆ ತಾನೆಯೆ ತೊಡಿಸುವನಲಾ ವಿಭೀಷಣಂ" ದಶಾನನ ಹತ್ಯೆಯ ನಂತರ ಇಂದ್ರಜಿತ್ ನ ಮಗ ವಜ್ರಾರಿಗೆ ಪಟ್ಟಗಟ್ಟುತ್ತಾನೆ ವಿಭೀಷಣ! ವಿಭೀಷಣನ ಪಾತ್ರ ಕುವೆಂಪುರವರ ಅಮೃತ ಚಿಂತನೆಯಲ್ಲಿ ಔನತ್ಯಕ್ಕೇರಿತು!
ಆರ್ಯ- ದ್ರಾವಿಡ ಸಂಘರ್ಷದ ಪ್ರಸ್ತಾಪಗಳೂ ಇಲ್ಲಿವೆ! ಬಡಗರನ್ನು ನಂಬದಿರೆಂದು ರಾವಣ ವಿಭೀಷಣನಿಗೆ ಹೇಳುತ್ತಾನೆ. ಪದಗಳನ್ನು ಕುಣಿಸುವ-ಮಣಿಸುವ ಶಬ್ಧಯೋಗಿ ಕುವೆಂಪುರವರು ಸ್ವಯಂ ಪದಕೋಶ! ಆ ಪದ ಭಂಡಾರದಿಂದ ಹೆಕ್ಕಿದ ನೂತನವೆನ್ನಿಸಿದ ಒಂದಷ್ಟು ಪದಗಳನ್ನು ನಿಮ್ಮ ಮುಂದಿಡುವೆ... ನೀವೂ ಮೂಗಿನ ಮೇಲೆ ಖಂಡಿತಾ ಬೆರಳಿಡುತ್ತೀರಿ...
ವಜ್ರಮೌನ, ಚರಣ ಚುಂಬನ, ವಿರಾಣ್ಮನ, ಲಲಿತೇಂದ್ರಿಯ, ಬಿಸುಗಂಬನಿ, ಬಗೆ ಮೈಲಿಗೆ, ಕಶಾಘಾತ, ತರ್ಕಸಿಂಹಿಣಿ, ಅಶ್ರು ಮಂದಾಕಿನಿ, ಕಣ್ಗಂಗೆ, ಚಿಂತಾಬ್ಧಿ, ಋತದರ್ಶಿ, ಶುಭದರ್ಶಿ, ವಿಧಿ ವಜ್ರೇಚ್ಛೆ, ಆತ್ಮನ ವೈನತೇಯ ಯಾತ್ರೆ, ಪಾದುಕಾ ಕಿರೀಟಿ, ತತ್ವಪೀಯೂಷ, ಹಿತಂಕರಿ- ಲೋಕ ಶಂಕರಿ, ವಿಹಗೇಂದ್ರ, ಪ್ರಣಯನಿರಾಶೆ, ಸೇಡಿನಹುತ್ತ, ಕಾಮಗಮನ, ಬಾಣಪಾಣಿ, ವಾಕ್ಕೋವಿದ, ಶಿಲಾ ಮೌನಿ, ತೃಣ ಕುಟಿ, ಹೃತ್ತಾಪದ ಮೂಷೆ, ಪಕ್ಷಿ ಪರಿಷತ್ತು, ಕೋಪ ಭೀಷ್ಮತೆ, ಅದ್ರಿ ಭವ್ಯ ಸುಸ್ಥಿರ ಮುಖಮುದ್ರೆ, ತಿತಿಕ್ಷೆ... ಸಾಮಾನ್ಯರ ಬಾಯಲ್ಲಿ ಶೈತ್ಯೋಪಚಾರ, ಕಾಡು, ನೀರು... ಆದರೆ ಕುವೆಂಪುರವರಿಗದು ಶಿಶಿರೋಪಚಾರ, ಕಾನನಶ್ರೀ, ಜಲಶ್ರೀ!
ರನ್ನನ 'ಗದಾಯುದ್ಧ''ವನ್ನು, ಅಲ್ಲಿನ ನಾಟಕೀಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿದ 'ಕನ್ನಡದ ಕಣ್ವ' ಬಿ ಎಂ ಶ್ರೀ ಕಂಠಯ್ಯನವರು 'ಗದಾಯುದ್ಧಂ' ಎಂಬ ನಾಟಕವನ್ನೇ ಪುನರ್ರೂಪಿಸಿದಂತೆ, ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಕೃತಿಯಲ್ಲಿರುವ ಅನೇಕ ನಾಟಕೀಯ ದೃಶ್ಯಗಳನ್ನು ರಂಗಭೂಮಿಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಈಗಿಂದೀಗಲೇ ಪ್ರಯೋಗಿಸುವಷ್ಟು ಪರಿಪೂರ್ಣವಾಗಿವೆ!
ರಾಮ- ಸೀತಾ, ಕೈಕೇಯಿ- ಮಂಥರೆ, ಭರತ- ಕೈಕೇಯಿ, ರಾಮ- ಭರತ, ರಾಮ- ಶೂರ್ಪನಖಿ, ಲಂಕೇಶ- ಮಾರೀಚ, ರಾಮ- ಆಂಜನೇಯ- ಸುಗ್ರೀವ- ವಾಲಿ, ರಾವಣ- ಸೀತಾ, ಅನಲೆ- ಸೀತಾ, ರಾವಣ- ಮಂಡೋದರಿ, ಸೀತಾ- ಮಂಡೋದರಿ, ದಶಶಿರ- ಕನಕ ಲಕ್ಷ್ಮಿ ಲಂಕಿಣಿ- ಆಂಜನೇಯ, ಇಂದ್ರಜಿತ್- ತಾರಾಕ್ಷಿ, ಲಂಕಾ ಲಕ್ಷ್ಮಿ- ರಾವಣ... ಇತ್ಯಾದಿ ಪಾತ್ರಗಳ ಸಂಭಾಷಣೆಗಳು ಎಂದೆಂದಿಗೂ ಸಜೀವವೇ ಸೈ!
ಒಕ್ಕಣ್ಣಿನ ವಿರಾಧ , ದೀರ್ಘ ಬಾಹು ಕಬಂಧ, ಶಿಶಿರ- ವಸಂತ- ಹೇಮಂತ,ತರಹೇವಾರಿ ಮುಗಿಲುಗಳು, ಹೊನ್ನಿನ ಮಿಗ, ನಗ- ನದಿಗಳು, ಕುಂಭಕರ್ಣ ನಿದ್ರಿಸುವ ಹಾಗೂ ಊಟದ ಪರಿ, ಕುಂಭಕರ್ಣನ ಯುದ್ಧ, ಶಬರಿಯ ಕಾತುರ, ಮಹಾತ್ಮ ಮಹಾಪಾರ್ಶ್ವನ ಮರಣ, ತ್ರಿಜಟೆಯ ದುಃಖ...ಇತ್ಯಾದಿಗಳ ವರ್ಣನೆಗಳು ಕಾವ್ಯದ ಸೊಬಗನ್ನು ಹೆಚ್ಚಿಸುತ್ತವೆ.
ವಿರಾಧ ವಧೆ, ಅಗಸ್ತ್ಯ ಮಹಿಮೆ, ವಾತಾಪಿ- ಇಲ್ವಲರು, ಚಿತೆಯೇರಿದ ವೇದವತಿ, ಮೂಕಶೋಕದ ಧಾನ್ಯಮಾಲಿನಿ ಹಾಗೂ ಅತಿಕಾಯ, ವಾಲಿ- ಸುಗ್ರೀವರ ದ್ವೇಷ, ಮತಂಗ ಮುನಿಯ ಶಾಪ, ಸ್ವಯಂಪ್ರಭೆಯ ಕಥೆಗಳು ಮಹಾ ಕಾವ್ಯದ ಓಘಕ್ಕೆ ಭಂಗ ತಾರದೆ ಪೂರಕವಾಗುತ್ತವೆ!
ಕುವೆಂಪುರವರು ಗುಣವಾಚಕಗಳನ್ನು ಬಳಸುವ ರೀತಿ ಅಮೋಘವಾದುದು! ನಿದರ್ಶನಕ್ಕಾಗಿ ಒಂದನ್ನು ನಿಮ್ಮ ಮುಂದಿಡುವೆ.
'ಪ್ರಳಯ ಸ್ವರೂಪಿ ಭುವನ ಕಂಪನಕಾರಿ ಶಾಪಸುಪ್ತಿವಶಿ ಕುಂಭಕರ್ಣ!'
ಸತಿಯರಾದ ತಾರಾ ಮತ್ತುಮಂಡೋದರಿ, ಅಂತರಂಗದೊಳಗೇ ಕೊರಗುವ ಧಾನ್ಯಮಾಲಿನಿ, ವಿವೇಕಿ ಅನಲೆ, ರಕ್ಕಸಳಲ್ಲದ ರಕ್ಕಸಿ ತ್ರಿಜಟೆ ಇತ್ಯಾದಿ ಪಾತ್ರಗಳನ್ನು ಮರೆವುದೆಂತು?
ಮಲೆನಾಡಿನ ಪ್ರಕೃತಿ ಕವಿ, ಬೇಟೆಯನ್ನು ಕಣ್ಣಾರೆ ಕಂಡು ಅನುಭವವಿದ್ದ ಕವಿ ಕುವೆಂಪು, ರಕ್ಕಸ ಗುಣಗಳನ್ನಷ್ಟೇ ಬೇಟೆಯಾಡದೇ ಸಾಹಿತ್ಯಾಸಕ್ತ ಓದುಗರನ್ನೂ ಕೃತಿಯ ಮುಖಾಂತರ ಬೇಟೆಯಾಡುತ್ತಾರೆ!
"ಇತಿಹಾಸಮಲ್ತು; ಬರಿ ಕಥೆಯಲ್ತು; ಕಥೆ ತಾಂ ನಿಮಿತ್ತಮಾತ್ರಂ, ಆತ್ಮಕೆ ಶರೀರದೋಲಂತೆ. ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ ರಾಮ ರೂಪದ ಪರಾತ್ಪರನ ಪುರುಷೋತ್ತಮನ ಲೋಕಲೀಲಾ ದರ್ಶನಂ" ಹೌದಲ್ಲವೇ... ದರ್ಶನಾಭಿವ್ಯಕ್ತಿಗೆ ಈ ಕಥೆ ಒಂದು ನಿಮಿತ್ತ ಮಾತ್ರ! ಸಂಸ್ಕೃತದ ಕವಿ ಮಮ್ಮಟ 'ಕಾವ್ಯ ಪ್ರಕಾಶ'ದಲ್ಲಿ ಹೇಳುವ 'ಕಾವ್ಯ ಪ್ರಯೋಜನ' ಈ ಕೃತಿಯಿಂದ ಸಂಪೂರ್ಣವಾಗಿ ಸಿಗುತ್ತದೆ. ಇಲ್ಲಿ ವೇದೋಪನಿಷತ್ತುಗಳ ಮತ್ತು ಷಡ್ದರ್ಶನಗಳ ಸಾರವೆಲ್ಲಾ ಸಿಗುತ್ತದೆ. ದರ್ಶನ ಬೇಕಾದವರಿಗೆ ದರ್ಶನ, ಕಾವ್ಯ ಬೇಕಾದವರಿಗೆ ಕಾವ್ಯ ಸಿಗುತ್ತದೆ. ಆತ್ಮ ವಿಕಸನದ ಸಿದ್ಧಿ- ಶುದ್ಧಿಯೇ ರಾಮಾಯಣ ಮಹಾಕಾವ್ಯ ರಸಯಾತ್ರೆಯ ಮಂಗಳಕರ ದಾರಿ ಮತ್ತು ಗುರಿ! ನೀವೂ ಓದಿ! ಮನಸ್ಸು ಪ್ರಸನ್ನವಾಗುತ್ತದೆ, ಪ್ರಶಾಂತವಾಗುತ್ತದೆ!
- ಸಿ. ಬಿ ಶೈಲಾ ಜಯಕುಮಾರ್, ಚಿತ್ರದುರ್ಗ
. 9482200056
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ