-ಕೆ.ವಿ. ಪದ್ಮಾವತಿ
ರಾಮಾಯಣ ಸಾಮುದಾಯಿಕ ಸಾಂಸ್ಕೃತಿಕ ಕೋಶವಾಗಿದ್ದು, ಅದೊಂದು ಕಥೆ, ಆದರ್ಶ ನಡವಳಿಕೆ, ಆಗಿರುವಂತೆ, ಆರ್ಯ ದ್ರಾವಿಡ ಸಂಘರ್ಷದ ಕಥನ ಅಂತೆಯೇ ಬ್ರಾಹ್ಮಣ, ಶೂದ್ರ, ಉತ್ತರ ದಕ್ಷಿಣ ಭಾರತ, ಭೂಮಾಲೀಕರು ಭೂರಹಿತರು, ವರ್ಣಗಳ ಘರ್ಷಣೆ, ಸಂಸ್ಕೃತೀಕರಣದ ವಿರುದ್ಧದ ದಂಗೆ, ಜೊತೆಗೆ ಸಂಸ್ಕೃತಿ ವಿಕಾಸದ ಅಂದಿನ ಆಧುನಿಕ ನಾಗರಿಕ ಹಂತದ ಪ್ರತೀಕವಾಗಿ ಕಾಣುತ್ತದೆ. ನಾಗರೀಕತೆಯೆಂದು ಕರೆಯುವ ಶ್ರೀರಾಮನ ಹಂತವು. ಹಾದು ಬಂದ ಸಂಸ್ಕೃತಿ ವಿನ್ಯಾಸಗಳನ್ನು ರಾವಣಾದಿಗಳ ಜೀವನ ವಿಧಾನವು ಪ್ರತಿನಿಧಿಸಿದರೆ, ವಾಲಿ ಸುಗ್ರೀವ ಆಂಜನೇಯಾದಿಗಳ ಸಂಸ್ಕೃತಿ ವಿನ್ಯಾಸಗಳು ರಾವಣಾದಿಗಳ ಜೀವನ ವಿಧಾನಕ್ಕಿಂತ ಹಿಂದಿನ ವಾನರ ವಿಕಾಸದ ಹಂತವನ್ನು ಸೂಚಿಸುತ್ತದೆ. ಹೀಗೆ ಹಲವಾರು ಹಂತದ ಸಂಸ್ಕೃತಿ ರೂಪಕಗಳು ಒಟ್ಟಿಗೆ ರಾಮಾಯಣದಲ್ಲಿ ವಿಜೃಂಭಿಸುತ್ತದೆ.
ಕಾವ್ಯ ಕಟ್ಟಿದ ವಾಲ್ಮೀಕಿ ಕೆಳಜಾತಿಯಿಂದ ಆವಿರ್ಭವಿಸಿದ ಮುನಿ ಎಂದ ಅಂಶವನ್ನು ತುಂಬ ಪ್ರಚಲಿತಗೊಳಿಸಲಾಗಿದೆ. ಜನಪದೀಯ ಹಾಡುಗಳನ್ನು ಹಾಡುತ್ತಿದ್ದ ಹಾಡುಗರೆಲ್ಲರೂ ಸಮಾಜದ ಕೆಳವರ್ಗದಿಂದ ಬರುತ್ತಿದ್ದರು ಎಂಬ ಐತಿಹಾಸಿಕ ಹಿನ್ನಲೆಯನ್ನು ಗಮನಿಸಿದರೆ ವಾಲ್ಮೀಕಿಯ ಶೂದ್ರತ್ವ ಅಸಂಭವವೇನಲ್ಲ.
ರಾಮಾಯಣವು ಒಂದಲ್ಲ ಒಂದು ಬಗೆಯಲ್ಲಿ ಸರ್ವವ್ಯಾಪಿ, ಸರ್ವಪ್ರಭಾವಶಾಲಿ ಗುಣವನ್ನು ಹೊಂದಿದೆ. ರಾಮಾಯಣ ಸೀತೆ, ಲಕ್ಷ್ಮಣ, ಹನುಮಂತ ಮುಂತಾದ ಪಾತ್ರಗಳು ಹಾಗೂ ರಾಮಾಯಣದ ಏಕಮುಖೀ ಕಥಾವಸ್ತುವನ್ನು ಎಲ್ಲ ಜನರೂ ಸ್ಮರಿಸುತ್ತಾರೆ. ಮಹಾಭಾರತಕ್ಕೆ ಈ ಬಗೆಯ ಮನ್ನಣೆ ಇಲ್ಲ, ವಸ್ತು ವಿಸ್ತಾರ ಹಾಗೂ ಪಾತ್ರ ವೈವಿಧ್ಯದಿಂದಾಗಿ ಮಹಾಭಾರತವು ಸೀಮಿತ ಪ್ರಮಾಣದ ವಾಚಕರು ಹಾಗೂ ಶ್ರೋತೃಗಳನ್ನು ಆಕರ್ಷಿಸಿದೆ.
ರಾಮಾಯಣವನ್ನು `ರಾಮಚರಿತಮಾನಸ'ವಾಗಿ ಅಂದರೆ ಮಾನುಷ ಮತ್ತು ಭಾವನಾ ಪ್ರಪಂಚದ ಚಿತ್ರಣವಾಗಿ, ಮನಸ್ಸಿನ ವ್ಯಾಪಾರಗಳ ರಂಗವಾಗಿ ಕಾಣುವ ಪ್ರಯತ್ನ ಸಮಕಾಲೀನ ಜಗತ್ತಿಗೆ ಅದರಲ್ಲೂ ಮಹಿಳೆಯ ಭಾವನಾತ್ಮಕ ನೆಲೆಗಟ್ಟಿಗೆ ತುಂಬಾ ಪ್ರಸ್ತುತ ಎನಿಸಬಲ್ಲದು.
ರಾಮಾಯಣದಂತಹ ಮಹಾಕಾವ್ಯವನ್ನು ರಾಮ ಸೀತೆಯಂಥ ಪಾತ್ರಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ಕಾಣುವ ಒಳನೋಟಗಳನ್ನು ಹೆಚ್ಚು ಸಂಕೀರ್ಣ ಎನಿಸುವುದಷ್ಟೇ ಅಲ್ಲ. ಧಾರ್ಮಿಕ ಸರಿತಪ್ಪುಗಳಿಗಿಂತ ಜೀವನಕ್ಕೆ ಉಪಯುಕ್ತ ಎನ್ನುವಂತ ಸಂಕೇತಗಳನ್ನು ಅದು ನೀಡುತ್ತದೆ.
ಮರ್ಯಾದಾ ಪುರುಷೋತ್ತಮ
ಆತ ಮರ್ಯಾದಾ ಪುರುಷೋತ್ತಮ. ಅವನ ಜೀವನವೆಂದರೆ ಸದ್ಗುಣಗಳ ಮೊತ್ತ. ಅವನು ಅಯೋಧ್ಯಾ ರಾಮ. ಶ್ರೀರಾಮ ಕೋದಂಡರಾಮ ದಶರಥ ರಾಮ ರಾಜಾರಾಮ, ಎಲ್ಲವೂ ಅವನೇ ಅವನು ಆಡಳಿತ ಹೇಗಿರಬೆಕು ಎಂದು ತೋರಿಸಿಕೊಟ್ಟ ಮನುಷ್ಯನೊಬ್ಬ ಹೇಗೆ ಬದುಕಬೇಕು ಎಂಬುದಕ್ಕೆ ಮಾದರಿ ಒದಗಿಸಿದ. ಹೀಗಾಗಿ ಅವನು ಅಂದು ಮಾತ್ರವಲ್ಲ, ಇಂದೂ ಮುಂದೆಯೂ ಅನುಕರಣೀಯ ವ್ಯಕ್ತಿ, ವ್ಯಕ್ತಿತ್ವ. ಇಂಥ ರಾಮನ ಕುರಿತು ಹೇಳುವುದೇಂದರೆ ಸುಲಭದ ಮಾತಂತೂ ಅಲ್ಲ. ಏಕೆಂದರೆ, ಅರ್ಥ ಮಾಡಿಕೊಂಡಷ್ಟೂ ಇನ್ನೇನೋ ಇದೆ ಎಂಬಂತೆ ಅಗಾಧವಾದುದು ರಾಮನ ಗಾಥೇ. ಅವನೆಂದರೆ ರಾಷ್ಟ್ರ, ಅವನೆಂದರೆ ಬದುಕು ಅವನೆಂದರೆ ಆದರ್ಶ ಅವನು ಅಪ್ಪಟ ಮನುಷ್ಯ, ಮನುಷ್ಯನೊಬ್ಬ ತಾನು ಬದುಕುವ ರೀತಿಯಿಂಲೇ ದೇವರಾಗಲು ಸಾಧ್ಯ ಎಂದು ತೋರಿಸಿಕೊಟ್ಟವನು.
ರಾಮನೆಂದರೆ ರಾಷ್ಟ್ರ ಹೇಗೇ? ಅವನ ಆಡಳಿತ ಕಲ್ಪನೆಯೇ ನಾವಿಂದು ಕನಸು ಕಾಣಲೂ ಸಾಧ್ಯವಿರದ ರಾಮರಾಜ್ಯ. ರಾಮನೆಂದರೆ ವ್ಯವಸ್ಥೆ. ಒಂದು ಸಮಾಜದ ನೆಮ್ಮದಿಯ ಬದುಕು ಹೇಗಿರಬೇಕು, ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆಯನ್ನು ಆಡಳಿತವೊಂದು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಮಾದರಿ. ರಾಮನೆಂದರೆ ಬದುಕು. ಭಾವನೆ ಹಾಗೂ ಕರ್ತವ್ಯದ ಸಂಘರ್ಷ ಹಾಗೂ ಅವನ್ನು ಅವನು ನಿರ್ವಹಿಸಿದ ರೀತಿ ಸದಾ ಪ್ರಕಾಶಿಸುವ ಬೆಳಕು. ಇಂಥ ಸಂಘರ್ಷದಲ್ಲಿ ಪ್ರಜೆಗಳ ಹಿತವನ್ನು ಬಯಸುವ ಆಡಳಿತಗಾರ ಹೇಗಿರಬೇಕು ಎನ್ನುವುದಕ್ಕೆ ಆತ ಸಾರ್ವಕಾಲಿಕ ಉದಾಹರಣೆ. ರಾಮನ ಬದುಕಿನುದ್ದಕ್ಕೂ ನೋಡಿ, ಅಲ್ಲಿ ಸ್ವಹಿತ ಹಾಗೂ ಕರ್ತವ್ಯದ ಸಂಘರ್ಷದಲ್ಲಿ ಕರ್ತವ್ಯವೇ ಗೆಲುವು ಸಾಧಿಸಿದೆ. ಹಾಗೆಂದ ಮಾತ್ರಕ್ಕೆ ಭಾವನೆಗಳಿಗೆ ಕಣ್ಣಂಚು ಒದ್ದೆಯಾಗದಷ್ಟು ಕಠೋರ ಹೃದಯಿ ಅವನಲ್ಲ. ರಾಮನೆಂದರೆ ಆದರ್ಶ ಪಾತ್ರ. ಪಿತೃ ವಾಕ್ಯ ಪರಿಪಾಲನೆಗಾಗಿ ವನವಾಸ ಮಾಡುವ ಮೂಲಕ ಅವಧಿಯನ್ನೆಲ್ಲ ಲೋಕಹಿತಕ್ಕೆ ಮುಡಿಪಾಗಿಟ್ಟವನು, ಕಾಂಚನ ಮೃಗವೆಂಬ ಭ್ರಮೆಯ ಬೆಂಬತ್ತಿದ್ದು ಆತನ ದಿಕ್ಕನ್ನು ಮತ್ತಷ್ಟು ವಿಸ್ತರಿಸಿತು. ಸೀತೆಯ ಅಪಹರಣದ ನೆವದಿಂದಾಗಿ ಇಂಥ ಕರ್ತವ್ಯದ ದಾರಿಗಳು ಆತನ ಪಾಲಿಗೆ ತೆರೆದುಕೊಂಡವು. ವಾಲಿಯ ನಿಗ್ರೆಹ, ಸುಗ್ರೀವನ ಸ್ನೇಹ, ಲಂಕೆಗೆ ಪಯಣ, ರಾವಣನ ಸಂಹಾರ, ವಿಭೀಷಣನೆಂಬ ಸಜ್ಜನ ವ್ಯಕ್ತಿಗೆ ಲಂಕೆಯ ಅಧಿಕಾರ ಕೊಟ್ಟಿದ್ದು... ಇತ್ಯಾದಿ.
ರಾಮನೆಂದರೆ ದೇವರು. ಅದನ್ನು ವಿವರಿಸಬೇಕಾಗಿಲ್ಲ. ರಾಮ ಭಜನೆ ನಿರಂತರ. ಗಾಂಧೀಜಿಯವರೂ ರಘುಪತಿ ರಾಘವ ರಾಜಾರಾಮ ಅಂದರು. ಅವರಿಗೂ ರಾಮದೇವರು ಪ್ರಿಯ. ಆದರ್ಶದಲ್ಲಿ, ರಾಜನೀತಿಯಲ್ಲಿ, ವ್ಯಕ್ತಿತ್ವದಲ್ಲಿ ದಾಸವರೇಣ್ಯರ ಪಾಲಿಗಂತೂ ರಾಮನ ನಾಮವೇ ಪಾಯಸ. ಕೃಷ್ಣ ನಾಮ ಸಕ್ಕರೆ. ವಿಠ್ಠಲ ನಾಮ ತುಪ್ಪ, ಎಲ್ಲ ರಾಮನೇ, ಪಾಯಸ, ಸಕ್ಕರೆ ತುಪ್ಪ ! ಎಲ್ಲವೂ ರಾಮನ ಅವತಾರ, ರಘುಕುಲ ಸೋಮನ ಅವತಾರ. ರಾಮನವಮಿ ಬಂದರೆ ಸಾಕು ಸಂಗೀತಕ್ಕೊಂದು ಉತ್ಸಾಹ ಬರುತ್ತದೆ. ರಾಮನವಮಿ ಸಂಗೀತೋತ್ಸವದ ಪರಂಪರೆಯೇ ನಾಡಿನಲ್ಲಿದೆ. ತಿಂಗಳುಗಟ್ಟಲೆ ರಾಮನ ಹೆಸರಲ್ಲಿ ಸಂಗೀತಸೇವೆ, ರಾಮನ ಜನ್ಮದಿನಕ್ಕೆ ಪಾನಕ ಸೇವೆ. ದೇವರಿದ್ದಾನೋ ಇಲ್ಲವೋ ಎಂಬ ವಾದ ಬೇರೆ. ರಾಮ ಮಾತ್ರ ಆತ ಇರುವ ದೇವರಾಗಲಿ, ಇಲ್ಲದ ದೇವರಾಗಲಿ, ಮನುಷ್ಯನಾಗಲೀ, ಕಲ್ಪನೆಯಾಗಲೀ ಅವನು ಸಜ್ಜನರ ಪಾಲಿನ ದೇವರು. ದೇವರೇ ಇಲ್ಲವೆನ್ನುವ ನಾಸ್ತಿಕರ ಪಾಲಿಗೂ ಸಚ್ಚಾರಿತ್ರö್ಯಕ್ಕೆ ಉದಾಹರಣೆ ಬೇಕೆಂದರೆ ರಾಮನೇ ಕಾಣುವುದು.
ರಾಮನೆಂದರೆ ಮನುಷ್ಯ, ಮನುಷ್ಯನಿಗೆ ಸ್ವಾಭಾವಿಕವೆನಿಸುವ ಮೋಹಪರವಶತೆ, ದುಃಖ, ಸಂತಸ, ತಮಾಷೆ ಎಲ್ಲವೂ ಇರುವ ಮನುಷ್ಯ. ವನವಾಸದ ಮೊದಲ ದಿನ ಲಕ್ಷ್ಮಣನೊಂದಿರೆ ಆತ ಮನುಷ್ಯನಂತೆಯೇ ಮಾತನಾಡುತ್ತಾನಂತೆ. ಕೈಕೇಯಿಗೆ ಈಗ ಆನಂದವಾಗಿರಬಹುದು, ಭರತನು ಬಂದ ವೇಳೆ ರಾಜ್ಯ ಆಸೆಯಿಂದ ದಶರಥನನ್ನು ಆಕೆ ಸಾಯಿಸಬಹುದು. ಸವತಿ ಮಾತ್ಸರ್ಯದಿಂದ ತನ್ನ ತಾಯಿಗೆ ವಿಷ ಪ್ರಾಶನ ಮಾಡಿಸಬಹುದು. ಇತ್ಯಾದಿ ಮಾಯಾ ಜಿಂಕೆಯ ವಿಷಯದಲ್ಲಂತೂ ಕ್ಷಣದ ಮೋಹಕ್ಕಾಗಿ ಸಾಕಷ್ಟು ಸಂಕಷ್ಟಗಳನ್ನು ಆತ ಎದುರಿಸಬೇಕಾಯಿತು. ಸೀತಾಪಹರಣದ ನಂತರವಂತೂ ಉಕ್ಕಿ ಬರುವ ಕೋಪವನ್ನು ಆತನಿಗೆ ಹತ್ತಿಕ್ಕಿಕೊಳ್ಳಲಾಗುವುದಿಲ್ಲ. ಈ ದೇವಾಂಶ ಸಂಭೂತ ಎನಿಸಿಕೊಂಡ ರಾಮ ಆಗಂತೂ ಅಪ್ಪಟ ಮನುಷ್ಯನೇ ಆಗುತ್ತಾನೆ. ಹತಾಶನಾಗಿ ತ್ರಿಲೋಕಗಳನ್ನೇ ಸುಟ್ಟು ಭಸ್ಮಮಾಡುವ ಮಾತನಾಡುತ್ತಾನೆ.
ರಾಮನೆಂಬಾತ ಆದರ್ಶ ಗೆಳೆಯ. ಗುಹ ಮತ್ತು ಸುಗ್ರೀವನ ವಿಷಯದಲ್ಲಿ ಇದು ಅರ್ಥವಾಗುತ್ತದೆ. ವನವಾಸದಿಂದ ತಾನು ಹಿಂತಿರುಗಿದ ಸುದ್ದಿಯನ್ನು ಮೊಟ್ಟ ಮೊದಲು ಗುಹನಿಗೆ ತಿಳಿಸಬೇಕೆಂದು ಆತ ಹನುಮಂತನಿಗೆ ಹೇಳುತ್ತಾನೆ. ರಾಮನೆಂದರೆ ಸದ್ಗುಣಗಳ ಮೊತ್ತ. ರಾಜ್ಯಕ್ಕಾಗಿ ಭರತನನ್ನು ಕೊಲ್ಲಬೇಕೆಂದು ಲಕ್ಷ್ಮಣ ಸಲಹೆ ಕೊಟ್ಟಾಗ ಮಿತ್ರರನ್ನು ಬಾಂಧವರನ್ನು ನಾಶ ಮಾಡಿ ದೊರೆಯುವ ಸಂಪತ್ತು ನನಗೆ ಬೇಡ. ಅದು ವಿಷ ಮಿಶ್ರಿತ ಊಟದ ಹಾಗೆ ಅನ್ನುತ್ತಾನೆ.
ವನವಾಸದಿಂದ ಹಿಂದಿರುಗಿದ ನಂತರವೂ ಭರತನೇ ರಾಜ್ಯವಾಳಲಿ ಎನ್ನುತ್ತಾನೆ. ಭರತನು ಪ್ರಾಣ ತ್ಯಾಗ ಮಾಡಬಾರದೆಂಬ ಕಾರಣದಿಂದ ಮಾತ್ರ ರಾಮನು ರಾಜಸಿಂಹಾಸನವನ್ನು ಏರುತ್ತಾನೆ.
ರಾಜನಾದವನು ಹೇಗಿರಬೇಕು ಎನ್ನುವುದಕ್ಕೆ ಕಾಲನ ಪ್ರಕರಣದಲ್ಲಿ ರಾಮ ತಳೆದ ಕಠಿಣ ನಿರ್ಧಾರವನ್ನು ಉದಾಹರಿಸಬಹುದು. ಲಕ್ಷ್ಮಣನೆಂದರೆ ರಾಮನಿಗೆ ಸಹೋದರ ಮಾತ್ರವಲ್ಲ, ನೆರಳು, ರಾಮನ ಬದುಕಿನ ತುಂಬ ಲಕ್ಷ್ಮಣನಿದ್ದಾನೆ, ರಾಮನಿಗೆ ಆತ ಎಂದೂ ಅಗೌರವ ತೋರಿದವನಲ್ಲ, ಈಗಲೂ ಅತ್ಯುತ್ತಮ ಸಹೋದರ ಸಂಬಂಧಕ್ಕೆ ಇವರೇ ಉದಾಹರಣೆ. ಆದರೆ ಕಾಲಪುರುಷನ ಜೊತೆ ಮಾತನಾಡುವ ವೇಳೆ ದೂರ್ವಾಸರ ಪ್ರವೇಶದಿಂದ ಅನಾಹುತವಾಗುತ್ತದೆ. ಕಾಲದ ನಿರ್ಗಮನಕ್ಕೂ ಮುನ್ನ ಯಾರನ್ನೂ ಒಳಗೆ ಬಿಡಬಾರದೆಂಬ ನಿಯಮ ಮುರಿದು ಹೋಗಿರುತ್ತದೆ. ರಾಜ್ಯದ ಉಳಿವಿಗಾಗಿ ಲಕ್ಷ್ಮಣ ಮುನಿಯನ್ನು ಒಳಗೆ ಬಿಡುತ್ತಾನೆ. ಆ ತಪ್ಪಿಗಾಗಿ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವ ಅನಿವಾರ್ಯ ಸ್ಥಿತಿ ರಾಮನ ಪಾಲಿಗೆ. ಸಹೋದರನ ಮೇಲಿನ ಪ್ರೀತಿ ಹಾಗೂ ವ್ಯವಸ್ಥೆಯನ್ನು ಕಾಪಾಡುವ ಸಂಘರ್ಷದಲ್ಲಿ ಧರ್ಮಪ್ರಜ್ಞೆಯೇ ಅಲ್ಲಿ ಗೆಲ್ಲುತ್ತದೆ.
ಹೀಗೆ ರಾಮನ ಕುರಿತು ಹೇಳುತ್ತ ಹೋದರೆ ಅದನ್ನೆಲ್ಲ ನಂಬುವ ಕಾಲದಲ್ಲಿ ನಾವಿದ್ದೇವೆ ಎಂದು ಅನಿಸುವುದಿಲ್ಲ. ಏಕೆಂದರೆ ಇಂದಿನ ಆಡಳಿತಗಾರರು ಯಾವುದನ್ನು ಪಾಲಿಸಲಿ ಎಂದು ಬಯಸೋಣ ? ಅಧಿಕಾರದಲ್ಲಿರುವವರು ನೈತಿಕ ಪ್ರಜ್ಞೆ ಇರಬೇಕು ಎನ್ನುವುದನ್ನೇ? ಬಂಧುಗಳಿಗೆ ಮಿತ್ರರಿಗೆ, ಅಧಿಕಾರ ವ್ಯಾಪ್ತಿ ಮೀರಿ ಸಹಾಯ ಮಾಡುತ್ತ ಪ್ರಜೆಗಳ ಹಿತವನ್ನು ಮರೆಯಬಾರದು ಎನ್ನುವುದನ್ನೇ ? ರಾಮನ ಆಡಳಿತದಲ್ಲಿ ಸಾಕೇತದಲ್ಲಿ ಯಾವ ಮನೆಗಳಿಗೂ ಬಾಗಿಲುಗಳೇ ಇರಲಿಲ್ಲವಂತೆ. ಏಕೆಂದರೆ ಕಳ್ಳರು, ಕಾಮುಕರು, ಅನೀತಿವಂತರು, ಸೌಜನ್ಯವಿಲ್ಲದವರೇ ಅಲ್ಲಿ ಇರಲಿಲ್ಲವಂತೆ. ಅಂಥ ನಂಬಿಕೆಯ ರಾಜ್ಯ ರೂಪಿಸಿ ಎಂದೇ? ಸ್ವಂತ ಜೀವನವನ್ನು ತೇಯುತ್ತ ಸಮಾಜದಲ್ಲಿ ಶಾಶ್ವತ ಜೀವನ ಮೌಲ್ಯಗಳನ್ನು ಸ್ಥಾಪಿಸಲು ಮುಂದಾಗಿ ಎಂದು ಹೇಳೋಣವೇ? ಯಾವುದನ್ನು?
ಮರ್ಯಾದಾ ಪುರುಷೋತ್ತಮನ ನಾಡಿನಲ್ಲಿ ಮರ್ಯಾದೆಯ ಮರ್ಯಾದೆ ನಿತ್ಯವೂ ಕಳೆಗುಂದುತ್ತಿದೆ. ಸ್ವಾರ್ಥ, ದುರಹಂಕಾರ ಹೆಚ್ಚುತ್ತಿದೆ. ರಾಮನ ಆದರ್ಶ, ಆತನ ಆಡಳಿತದ ಬಗ್ಗೆ ಹೇಳಿದರೆ ಕೇಳುವ ಮತ್ತು ಪಾಲಿಸುವ ಆಡಳಿತಗಾರರು ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ `ರಾಮ? ಯಾವ ರಾಮ?' ಎಂದು ಕೇಳಿದವರನ್ನೇ ಅಣಕಿಸುವ ಕಾಲದಲ್ಲಿ ನಾವಿದ್ದೇವೆ. `ಇದು ಕಲಿಯುಗ, ತ್ರೇತಾಯುಗವಲ್ಲ' ಎಂಬ ಉತ್ತರದೊಂದಿಗೆ ಆದರ್ಶದ ಮಾತನಾಡುವವನನ್ನು ಮೂರ್ಖ, ಬದುಕುವ ದಾರಿ ಗೊತ್ತಿಲ್ಲದ ಎಂದು ಗೇಲಿ ಮಾಡಿದರೂ ಅಚ್ಚರಿಯಿಲ್ಲ. ಆದರೆ ಸಮಾಧಾನದ ಸಂಗತಿಯೆಂದರೆ ರಾಮನಂಥ ಮನಸ್ಸುಗಳು ಈಗಲೂ ಇವೆ. ಈ ಕ್ಷಣದಲ್ಲಿಯೂ ಭಾರತೀಯ ಸಂಸ್ಕೃತಿ ಮೌಲ್ಯಗಳ ಪ್ರತಿನಿಧಿ ರಾಮನೇ, ಎಂದೇ ರಾಮ ನಾಮ ಇಲ್ಲಿ ನಿರಂತರ.
ಧರ್ಮದ ವಿಷಯದಲ್ಲಿ ರಾಮನ ಆದರ್ಶ ಇದೆಯಲ್ಲ. ಅದನ್ನು ಪಾಲಿಸುವವರೆಲ್ಲ ಈಗಲೂ ಇದ್ದಿದ್ದರೆ ಇದು ಬಹುಶಃ ರಾಮರಾಜ್ಯವಾಗುತ್ತಿತ್ತೇನೋ. ಸ್ವಾರ್ಥಕ್ಕಿಂತ ಪ್ರಜೆಗಳ ಸುಖ ಮುಖ್ಯ ಎನ್ನುವ ಶ್ರೀರಾಮ ಯಾವತ್ತಿಗೂ ಆದರ್ಶ ಪುರುಷ. ಪ್ರಜೆಗಳಿಗಾಗಿಯೇ ಸ್ವಾರ್ಥದ ಬದುಕನ್ನು ತ್ಯಾಗ ಮಾಡಿದವ ತ್ಯಾಗಮಯಿ ಅಂದೆನಿಸಿಕೊಳ್ಳಲಿಲ್ಲ. ಆದರೆ ಧರ್ಮದ ಎದುರು ಸ್ವಾರ್ಥ ಮುಖ್ಯವೇ ಅಲ್ಲ, ಅನ್ನುವ ಆತನ ಗುಣವಿದೆಯಲ್ಲ, ಅದೇ ಸಿಕ್ಕಾಪಟ್ಟೆ ಇಷ್ಟವಾಗುವುದುದು. ಈ ಕಾರಣಕ್ಕೆ ರಾಮ ಪುರುಷೋತ್ತಮನಾಗಿದ್ದು, ಹಾಗಂತ ಯಾರದ್ದೋ ಮಾತಿಗೆ ಬದುಕನ್ನು ಹಾಳು ಮಾಡಿಕೊಳ್ಳುತ್ತೇವಲ್ಲ, ಅದು ಮೂರ್ಖತನ. ಕಂಡಿದ್ದು ಕೇಳಿದ್ದು, ಸತ್ಯವಾ ಎಂಬುದನ್ನು ಪದೇ ಪದೇ ಪರೀಕ್ಷಿಸಿಕೊಂಡರೆ ಬದುಕು ಬಂಗಾರ. ಆದ್ರೆ ಬದುಕಿನ ಜತೆಜತೆ ಸಾಮಾಜಿಕ ಕಳಕಳಿ ಇಟ್ಟುಕೊಂಡಿರುತ್ತೇವಲ್ಲ ಅದೇರಿ ನಿಜವಾಗಿ ನೆಮ್ಮದಿ ನೀಡುವುದು. ರಾಮನವಮಿ ದಿವಸ ಕೋಸಂಬರಿ ಪಾನಕ ಮಾಡಿ ಪುಣ್ಯ ಬಂತೆಂದು ಸಂತಸ ಪಡುವ ಸ್ತ್ರೀಯರು, ಅದನ್ನುಂಡು ಪ್ರಸಾರ ಸಿಕ್ಕಿತೆನ್ನುವ ಪುರುಷ ಮಕ್ಕಳು ರಾಮಾಯಣದ ಸೀತಾರಾಮರ ಕಥೆ ನಮಗೆ ನೀಡುವ ಎಚ್ಚರಿಕೆ ಪ್ರಜ್ಞೆಗಳನ್ನು ಕುರಿತು ಕಿಂಚಿತ್ತಾದರೂ ಗಮನ ಹರಿಸದಿದ್ದರೆ ರಾತ್ರಿಯಿಡಿ ರಾಮಾಯಣ ಕೇಳಿ ಬೆಳಿಗ್ಗೆ ಎದ್ದು ಸೀತೆ ರಾಮರಿಗೇನು ಸಂಬಂಧ ಎಂದರಂತೆ ಅಲ್ಲವೇ ?
ಶ್ರೀಮತಿ ಕೆ.ವಿ. ಪದ್ಮಾವತಿ
ಕನ್ನಡ ಉಪನ್ಯಾಸಕರು, ಬೆಂಗಳೂರು
ಲೇಖಕರ ಸಂಕ್ಷಿಪ್ತ ಪರಿಚಯ:
1980 ಮೇ 28ರಂದು ಶ್ರೀ ವೆಂಕಟರಾಮ್ ಕೆ.ಎಸ್. ಮತ್ತು ಶ್ರೀಮತಿ ಶಕುಂತಲಾ ದಂಪತಿಗಳ ಪ್ರಥಮ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನನ.
ಶಾಲಾ-ಕಾಲೇಜು ದಿನಗಳಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ರತ್ನ', ದೂರಶಿಕ್ಷಣದಲ್ಲಿ ಪದವಿ ಪೂರೈಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ನಲ್ಲಿ 8ನೇ ರ‍್ಯಾಂಕ್ ವಿಜೇತೆ, ಚರಿತ್ರೆ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಉನ್ನತ ಶ್ರೇಣಿಯಲ್ಲಿ ಬಿ.ಎಡ್. ಪದವಿ ಪಡೆದು ಪ್ರೌಢ ಶಾಲಾ ಶಿಕ್ಷಕಿಯಾಗಿ ವೃತ್ತಿ ಆರಂಭ.
ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತ ವಿದ್ಯಾರ್ಥಿಗಳ ನೆಚ್ಚಿನ 'ಗುರು'ಗಳಾಗಿ ಮೆಚ್ಚುಗೆ ಗಳಿಸಿ, ಪತಿ ಕುಮರೇಶ್, ಪುತ್ರ ರತ್ನ ರಿಷಾಂಕ್ ಮತ್ತು ಯೆಶಾಂಕ್‌ರೊಂದಿಗೆ ಸುಮಧುರ ಬಾಳ್ವೆ ನಡೆಸುತ್ತಿರುವ ಆದರ್ಶ ಗೃಹಿಣಿ.
ಸಾಹಿತ್ಯಕ ನೆಲೆಯಲ್ಲಿ ತಮ್ಮದೇ ವಿಶೇಷ ವ್ಯಕ್ತಿತ್ವದಿಂದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾಂದರ್ಭಿಕ ಲೇಖನಗಳು ಪ್ರಕಟವಾಗಿ ಜನಮನ್ನಣೆ ಗಳಿಸಿ ಭರವಸೆಯ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಸಂಸ್ಕೃತಿ ಚಿಂತಕ - ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ಬರವಣಿಗೆಯ ಬೆಳ್ಳಿಹಬ್ಬ ಸಂಭ್ರಮದಲ್ಲಿ ಅವರ ನಿತ್ಯಾಂಕಣ ಸದ್ವಿಚಾರಗಳ ಸಂಕಲನ 'ಸತ್ಸಂಗ ಸಂಪದ' ಬಿಡುಗಡೆಯ ಸಂದರ್ಭದಲ್ಲಿ 'ಪ್ರಣವ ಪುರಸ್ಕಾರ -2022' ಕ್ಕೆ ಭಾಜನರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ