ಮಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಆಗಿರುವ ಬದಲಾವಣೆಗಳನ್ನು ನಾವೆಲ್ಲ ಕಂಡಿದ್ದೇವೆ. ಕಳೆದ 10 ವರ್ಷದ ಅಂತರದಲ್ಲಿ ಯಾವ್ಯಾವ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂಬುದನ್ನು ನೋಡಿದ್ದೇವೆ. ಮಂಗಳೂರಿಗೆ, ದಕ ಜಿಲ್ಲೆಗೆ ಪ್ರಧಾನಿ ಮೋದಿಯವರು ಅಭೂತಪೂರ್ವ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಹತ್ತು ವರ್ಷ ಹಿಂದಿನ ಮಂಗಳೂರಿಗೂ ಈಗಿನ ಮಂಗಳೂರಿಗೂ ಆಗಿರುವ ಬೆಳವಣಿಗೆ, ಅಭಿವೃದ್ಧಿ ಕಾರ್ಯಗಳನ್ನು ಹೋಲಿಸಿ ನೋಡಬಹುದು ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಂಗಳೂರಿಗೆ ವಿಶೇಷವಾಗಿ, ಹತ್ತು ವರ್ಷಗಳಲ್ಲಿ ಬಂದ ಅನುದಾನಗಳನ್ನು ಯಾರು ಬೇಕಾದರೂ ಗಮನಿಸಬಹುದು. ಬೇರೆ ಬೇರೆ ಅಭಿವೃದ್ಧಿ ಯೋಜನೆಗಳಿಗೆ ನೇರವಾಗಿ ಕೇಂದ್ರದಿಂದ ಶೇ 50- 60ರಷ್ಟು ಹಣ ಬಂದಿದೆ. ಕೆಲವು ಯೋಜನೆಗಳು ರಾಜ್ಯ ಸರಕಾರದ ಮೂಲಕ ಅನುಷ್ಠಾನವಾಗಿರುವಂಥದ್ದು ಮತ್ತೆ ಇನ್ನು ಕೆಲವು ನೇರವಾಗಿ ಕೇಂದ್ರದಿಂದ ಅನುಷ್ಠಾನ ಆಗಿರುವಂಥದ್ದು ಎಂದು ಶಾಸಕರು ವಿವರವಾದ ಮಾಹಿತಿ ನೀಡಿದರು.
10 ವರ್ಷಗಳ ಹಿಂದೆ ಮಂಗಳೂರು ನಗರ ಹೇಗಿತ್ತು? ಈಗ ಹೇಗಿದೆ? ನಗರದ ರಸ್ತೆಗಳು, ಸರ್ಕಲ್‌ಗಳು ಯಾವ ರೀತಿ ಅಭಿವೃದ್ಧಿಗೊಂಡಿವೆ ಎಂಬುದನ್ನು ಮೇಲ್ನೋಟಕ್ಕೇ ಕಾಣಬಹುದು. ಇದಕ್ಕೆ ಕಾರಣ ನರೇಂದ್ರ ಮೋದಿ ಅವರು. ದೇಶದಲ್ಲಿ ಬೇರಾವ ನಗರಗಳಿಗೂ ಸಿಗದಷ್ಟು ಅಭಿವೃದ್ಧಿ ಬೆಂಬಲ ಮಂಗಳುರಿಗೆ ಸಿಕ್ಕಿದೆ. ಸ್ಮಾರ್ಟ್ ಸಿಟಿ ಯೋಜನೆ ಮಾತ್ರವಲ್ಲದೆ ಅಮೃತ ನಗರ ಯೋಜನೆಯೂ ಕೂಡ ಮಂಗಳೂರಿಗೆ ಸಿಕ್ಕಿದೆ. ಮಂಗಳಾದೇವಿ ಮುಂಭಾಗದ ರಸ್ತೆ, ರಥಬೀದಿ ವೆಂಕಟರಮಣ ದೇವಸ್ಥಾನದ ರಸ್ತೆ, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ರಸ್ತೆ, ಕದ್ರಿ ಮಂಜುನಾಥ ದೇವಸ್ಥಾನದ ರಸ್ತೆ - ಹೀಗೆ ಪುಣ್ಯಕ್ಷೇತ್ರಗಳ ಸಂಪರ್ಕ ರಸ್ತೆಗಳೆಲ್ಲ ಇಂದು ಬಹಳಷ್ಟು ಅಭಿವೃದ್ಧಿ ಕಂಡಿವೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ರಸ್ತೆ ಮತ್ತು ಪರಿಸರ ಕೂಡ ಅಭಿವೃದ್ಧಿಗೊಳ್ಳುತ್ತಿದೆ. ಅದೇ ರೀತಿ ಸರ್ಕಲ್‌ಗಳ ಅಭಿವೃದ್ಧಿ,ಯನ್ನು ಗಮನಿಸಬಹುದು. ನಾರಾಯಣಗುರು ವೃತ್ತ,, ಮಂಜೇಶ್ವರ ಗೋವಿಂದ ಪೈ ವೃತ್ತ,, ಮಂಗಳಾದೇವಿ ದೇವಸ್ಥಾನದ ಸಮೀಪದ ವೃತ್ತ- ಹೀಗೆ ಬಹಳಷ್ಟು ವೃತ್ತಗಳು ಅಭಿವೃದ್ಧಿಯಾಗಿವೆ. ಮಾರ್ಣಮಿಕಟ್ಟೆ ವೃತ್ತದ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದು ಶಾಸಕರು ವಿವರಿಸಿದರು.
ಮಂಗಳೂರು ನಗರ ಇಷ್ಟೊಂದು ದೊಡ್ದಾಗಿದೆ. ಮೈಸೂರು ನನಗರದಲ್ಲಿ 3 ಸ್ವಿಮ್ಮಿಂಗ್ ಪೂಲ್‌ಗಳಿವೆ. ಆದರೆ ಅಷ್ಟೇ ಮಹತ್ವದ ನಗರವಾದ ಮಂಗಳೂರಿನಲ್ಲಿ ಈಜುಕೊಳ ಇರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಮ್ಮೆಕೆರೆ ಈಜುಕೊಳವನ್ನು 17 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ. 270 ಕೋಟಿ ರೂ ವೆಚ್ಚದಲ್ಲಿ ವಾಟರ್ ಫ್ರಂಟ್ ಯೋಜನೆಗೆ ಅನುಮೋದನೆ ದೊರೆತಿದೆ. ನೇತ್ರಾವತಿ ಸೇತುವೆಯಿಂದ ತೊಡಗಿ ಕೂಳೂರು ಬ್ರಿಜ್ ತನಕ ಈ ಯೋಜನೆಯಡಿ ರಸ್ತೆ ನಿರ್ಮಾಣವಾಗಲಿದೆ.
ಹೊಯ್ಗೆ ಬಜಾರ್ ತನಕ ವಾಟರ್ ಫ್ರಂಟ್ ಯೋಜನೆಯಡಿ 22 ಕಿ.ಮೀ ಉದ್ದದ ಬದಲಿ ರಸ್ತೆ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯೂ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಆಗಿದೆ. ಕೆಪಿಟಿ ಜಂಕ್ಷನ್‌ನಲ್ಲಿ ಸುಂದರ ಫ್ಲೈ ಓವರ್ ಈಗಾಗಲೇ ಸ್ಯಾಂಕ್ಷನ್ ಆಗಿದೆ., ಸಂಸದ ನಳಿನ್ ಕಟೀಲ್ ಹೇಳಿದ್ದಾರೆ. ಅದನ್ನು ಕ್ಯಾ. ಬ್ರಿಜೇಶ್ ಚೌಟರು ಅನುಷ್ಠಾನ ಮಾಡಿಕೊಡುತ್ತಾರೆ.
ಸುರತ್ಕಲ್, ಕೂಳೂರು, ಕೊಟ್ಟಾರ, ಕುಂಟಿಕಾನ, ಬಿಕರ್ನಕಟ್ಟೆ, ಎಲ್ಲ ಕಡೆ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಮೀನುಗಾರಿಕೆ ಮತ್ತು ಬಂದರು ಇಲಾಖೆ ಮೂಲಕ 280 ಕೋಟಿ ರೂ ವೆಚ್ಚದ ಯೋಜನೆಗಳು ಗುದ್ದಲಿ ಪೂಜೆ ಮಾಡುವುದಕ್ಕೇ ಬಾಕಿ ಇವೆ. ಇದಕ್ಕೆ 50% ಕೇಂದ್ರ ಸರಕಾರದ ಅನುದಾನವಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರದ ಕಡೆಯಿಂದ ಈ ಅನುದಾನವನ್ನು ಬಳಸಿಕೊಳ್ಳುವ ಯೋಜನೆಗಳೇ ಇಲ್ಲವಾಗಿದೆ. ಬಹಳ ದೊಡ್ಡ ಮಟ್ಟದಲ್ಲಿ ಜೆಟ್ಟಿ ಕಾಮಗಾರಿಗಳು ಕೇಂದ್ರದ ಅನುದಾನದಲ್ಲಿ ನಡೆಯುತ್ತಿವೆ. ಲಕ್ಷದ್ವೀಪದ ಪ್ರಯಾಣಕ್ಕಾಗಿಯೇ ಪ್ರತ್ಯೇಕ ಜೆಟ್ಟಿ, ಬೇರೆ ಬೇರೆ ಜೆಟ್ಟಿಗಳ ನಿರ್ಮಾಣ ಪ್ರಗತಿಯಲ್ಲಿದೆ. ಗುರುಪುರ ರಿವರ್ ಐಲಾಂಡ್ ಅಭಿವೃದ್ಧಿ, ಜಪ್ಪಿನಮೊಗರು ಬರ್ತ್, ಇಂತಹ 25 ಯೋಜನೆಗಳಿವೆ. ಇವೆಲ್ಲದಕ್ಕೂ ಕೇಂದ್ರದ ಪಾಲು ಶೇ 50ರಷ್ಟಿದೆ. ಕೇಂದ್ರ ಸರಕಾರ ಅನುಮೋದನೆ ಕೊಟ್ಟಿರುವ ಎಲ್ಲ ಯೋಜನೆಗಳಿಗೆ ಶೇ 50ರ ಅನುದಾನ ಕೇಂದ್ರದಿಂದ ಇದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅದರ ಸಮರ್ಪಕ ಬಳಕೆ ಆಗುತ್ತಿಲ್ಲ ಎಂದು ಶಾಸಕ ಕಾಮತ್ ಹೇಳಿದರು.
ಕದ್ರಿ ಪಾರ್ಕ್ ಪರಿಸರ ಹೇಗಿತ್ತು ಈಗ ಹೇಗಾಗಿದೆ. ನಾವು ತಯಾರಿ ಮಾಡಿ ಕೊಟ್ಟಿದ್ದೇವೆ. ಆದರೆ ರಾಜ್ಯ ಸರಕಾರ ಹನ್ನೊಂದು ತಿಂಗಳು ಕಳೆದರೂ ಅಂಗಡಿಗಳಿಗೆ ಅನುಮತಿ ಕೊಟ್ಟಿಲ್ಲ. ನಾವು ಮಾಡಿಕೊಟ್ಟಿದ್ದನ್ನೂ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡಲು ಆಗುತ್ತಿಲ್ಲ.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್ ಫಾರ್ಮ್‌ಗಳ ನಿರ್ಮಾಣ ಮಾಡಲಾಗಿದೆ. ಕಾಂಗ್ರೆಸ್ ಸರಕಾರದಿಂದ ಇದುಸಾಧ್ಯವಾಗಿಲ್ಲ. ಮಂಗಳೂರು ಸೆಂಟ್ರಲ್‌ನಿಂದ ಕೇರಳ, ಗೋವಾಕ್ಕೆ ಎರಡು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುತುವರ್ಜಿಯಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೆಲವೊಂದು ಪ್ರಗತಿಯಲ್ಲಿವೆ. ಅವೆಲ್ಲವನ್ನೂ ಕ್ಯಾ. ಚೌಟರ ಅವಧಿಯಲ್ಲಿ ಪೂರ್ಣಗೊಳಿಸಿ, ಮತ್ತಷ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಲಾಗುತ್ತದೆ. ಕ್ಯಾ. ಚೌಟ ನೇತೃತ್ವದಲ್ಲಿ ಮಂಗಳೂರು ರೈಲ್ವೇ ಸ್ಟೇಶನ್ ಉನ್ನತೀಕರಣ ಆಗಲಿದೆ. ಅದಕ್ಕಾಗಿ 320 ಕೋಟಿ ರೂ ದೊರೆತಿದೆ ಎಂದು ಶಾಸಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಲೋಕಸಭಾ ಚುನಾವಣೆ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ವಕ್ತಾರ ರಾಜಗೋಪಾಲ ರೈ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ