ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
-ಡಾ. ಗೀತಾ ರಮೇಶ್
ರಾಮಾಯಣವು ಶಾಸ್ತ್ರಗ್ರಂಥವಲ್ಲ ಚರಿತ್ರೆಯಲ್ಲ ಅದು ಕಾವ್ಯ. ಶಾಸ್ತ್ರ ಚರಿತ್ರೆಗಳೆರಡನ್ನು ಒಳಗೊಂಡಿರುವ ಕಾವ್ಯ. ಶ್ರೀರಾಮನ ಮುಖ್ಯ ಗುಣಗಳು ಸತ್ಯಶ್ರದ್ಧೆ, ಭೋಗವಿರಕ್ತಿ. ಅಯೋಧ್ಯಾ ಕಾಂಡವನ್ನು ರಾಮಾಯಣ ಗ್ರಂಥದ ಹೃದಯಭಾಗವೆಂದೂ, ಅರಣ್ಯಕಾಂಡವನ್ನು ಹೃದಯದ ಅಂತರಂಗವೆಂದು ಕರೆಯುತ್ತಾರೆ. ಅಯೋಧ್ಯಾಕಾಂಡದ ಪ್ರಸಂಗದಿಂದಲೇ ರಾಮಾಯಣದ ಕಥಾರಂಭ. ಅಯೋಧ್ಯಾ ಅತ್ಯಂತ ಶಕ್ತಿಶಾಲಿ ಸುಂದರನಗರ, ಇದು ಕೋಸಲದ ರಾಜಧಾನಿ ಕೋಸಲ ದೇಶ ಎಷ್ಟು ದೊಡ್ಡದು ಇತ್ತು ಅಂದರೆ ಉತ್ತರದಲ್ಲಿ ಕಾಂಬೋಡಿಯದವರೆಗೂ, ದಕ್ಷಿಣದಲ್ಲಿ ಗೋದಾವರಿ ತಟದವರೆಗೂ, ಪಶ್ಚಿಮದಲ್ಲಿ ಬಲುಚಿಸ್ಥಾನ ಮತ್ತು ಪೂರ್ವದಲ್ಲಿ ಬಂಗಾಳದವರೆಗೂ ಹರಡಿತ್ತು. ಇಲ್ಲಿ ಹರಿಯುವ ಸರಯೂ ನದಿಯೂ ಅತ್ಯಂತ ಪವಿತ್ರವಾದದ್ದು. ಸರಯೂ ನದಿಯಿಂದ ಗೋದಾವರಿ ತೀರದವರೆಗೂ ಅನೇಕ ಋಷ್ಯಾಶ್ರಮಗಳು ಇದ್ದವು. ಶ್ರೀರಾಮನ ಅರಣ್ಯವಾಸ ವಿಶ್ವಾಮಿತ್ರರಿಂದಲೇ ಪ್ರಾರಂಭವಾಯಿತು. ಮೊದಲ ಆಶ್ರಮ ಶ್ರೀರಾಮ ದರ್ಶನ ಮಾಡಿದ್ದು ಅಂದರೆ ಅದು ಸಿದ್ದಾಶ್ರಮ. ಈ ಸ್ಥಳ ಮಹಾವಿಷ್ಟುವು ತಪಸ್ಸು ಮಾಡಿದ ಜಾಗ, ಕಶ್ಯಪ ಮಹರ್ಷಿಗಳು ಸಾವಿರ ವರ್ಷ ತಪಸ್ಸನ್ನಾಚರಿಸಿ ಅದಿತಿಗೂ ನನಗೂ ಪುತ್ರನಾಗಿ ಜನಿಸಬೇಕೆಂದು ಕೇಳಿದಾಗ, ಮಹಾವಿಷ್ಣುವು ಈ ಸಿದ್ದಾಶ್ರಮದಿಂದ ಮೇಲೆದ್ದು ವಾಮನನಾಗಿ ಕಶ್ಯಪರಲ್ಲಿ ಜನಿಸಿದ.
ಪಿತೃ ವಾಕ್ಯ ಪರಿಪಾಲನೆಗಾಗಿ ರಾಮ ಮತ್ತೆ ವನವಾಸಕ್ಕೆ ಹೋದ. ರಾಮಾಯಣದಲ್ಲಿ ಬಹಳ ಚೆನ್ನಾಗಿ ಭೂಗೋಳಶಾಸ್ತ್ರವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀರಾಮ ಅಯೋಧ್ಯೆ ಬಿಟ್ಟು ಸುಮಂತನೊಂದಿಗೆ ಮೊದಲು ಬರುವುದು ಗಂಗಾನದಿಯ ತೀರ ಶೃಂಗಬೇರಪುರಕ್ಕೆ. ಇದು ಅಯೋಧ್ಯೆಯಿಂದ 4 ಗಂಟೆಗಳಲ್ಲಿ ತಲುಪಬಹುದಾದ ಸ್ಥಳ. ಅಲ್ಲಿ ಗುಹ ಎನ್ನುವ ಬೇಟೆಗಾರ ರಾಮನಸೇವೆ ಮಾಡುತ್ತಾನೆ. ಅನಂತರ ರಾಮ ಸುಮಂತನನ್ನು ಅಯೋಧ್ಯೆಗೆ ವಾಪಸ್ಸಾಗಲು ವಿನಂತಿಸಿಕೊಳ್ಳುತ್ತಾನೆ.
ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
ರಾಮ ಸೀತೆ, ಲಕ್ಷ್ಮಣ ನದಿಯ ಆ ದಡ ಸೇರಿ ಒಂದು ವೃಕ್ಷದ ಕೆಳಗೆ ಆ ರಾತ್ರಿ ಕಳೆದು ಯಮುನಾ, ಗಂಗೆ, ಸರಸ್ವತಿ ಸಂಗಮಿಸುವ ಪ್ರಯಾಗ ಕ್ಷೇತ್ರಕ್ಕೆ ಬರುತ್ತಾರೆ. ದೂರದಲ್ಲಿ ಯಜ್ಞಕುಂಡಗಳಿಂದ ಬರುವ ಸುವಾಸನೆ ಮತ್ತು ಧೂಪವನ್ನು ನೋಡಿ ಇದು ಭಾರಧ್ವಾಜರ ಆಶ್ರಮ ಎಂದು ತಿಳಿದು ಅವರ ಆಶ್ರಮಕ್ಕೆ ಬರುತ್ತಾರೆ. ತಪೋಮಹಿಮರು, ದಿವ್ಯಜ್ಞಾನ ಸಂಪನ್ನರೂ ಆದ ಭಾರಧ್ವಾಜ ಮುನಿಗಳು ಶಿಷ್ಯರೊಡನೆ ಕುಳಿತಿದ್ದರು. ಈ ಮೂವರು ಅವರನ್ನು ನೋಡಿ ಕೈಮುಗಿದು ಅಭಿವಾದನೆ ಮಾಡಿದರು. ಆ ತಪಸ್ವ್ವಿಗಳು ಫಲ ಮೂಲಗಳಿಂದ ಮಾಡಿದ ರುಚಿಯಾದ ವಿವಿಧ ಆಹಾರ ಪದಾರ್ಥಗಳನ್ನು ಅವರಿಗೆ ಕೊಟ್ಟು ಉಪಚರಿಸಿದರು. ಭಾರಧ್ವಜರು ರಾಮನಿಗೆ ತಮ್ಮ ಆಶ್ರಮದಲ್ಲೇ ನೆಲೆಸಲು ಕೇಳಿಕೊಂಡರು.
ಸರ್ವರ ಹಿತದಲ್ಲೂ ಆಸಕ್ತನಾದ ರಾಮ ಹೇಳುತ್ತಾನೆ. ಅಯೋಧ್ಯಾ ನಗರವಾಸಿಗರೂ, ರಾಜ್ಯದ ಇತರ ಪ್ರಜೆಗಳು ಇಲ್ಲಿಗೆ ಸಮೀಪದಲ್ಲಿದ್ದಾರೆ (ಅಯೋಧ್ಯೆಯಿಂದ ಪ್ರಯಾಗಕ್ಕೂ 4-30 ಗಂಟೆಯ ಪ್ರಯಾಣ) ಇಲ್ಲಿ ನನ್ನನ್ನೂ ಸೀತೆಯನ್ನು ನೋಡುವುದು ಸುಲಭವೆಂದು ತಿಳಿದು ಅವರು ಪ್ರೇಕ್ಷಕರಾಗಿ ಬರಬಹುದು. ಈ ಕಾರಣದಿಂದ ಇಲ್ಲಿ ವಾಸ ಮಾಡಲು ನನಗೆ ಇಷ್ಟವಿಲ್ಲ. ಆದ್ದರಿಂದ ದೂರದಲ್ಲಿ ಏಕಾಂತವಾಗಿರುವ ಒಂದು ಉತ್ತಮವಾದ ಆಶ್ರಯ ಸ್ಥಾನವನ್ನು ತಿಳಿಸಿ ಎಂದು ಕೇಳಿದಾಗ, 10 ಯೋಜನ ದೂರದಲ್ಲಿ ಒಂದು ಪರ್ವತವಿದೆ. ಅದರ ಹೆಸರು ಚಿತ್ರಕೂಟ ಗಂಧಮಾದನಗಿರಿಯಂತೆ ಮನೋಹರವಾದ ಬೆಟ್ಟ. ಭಾರಧ್ವಾಜ ಮುನಿಗಳೊಡನೆ ಅನೇಕ ಧರ್ಮ ಸೂಕ್ಷ್ಮಗಳನ್ನು ಮಾತನಾಡಿ ರಾತ್ರಿ ಅಲ್ಲಿಯೇ ತಂಗಿದ್ದರು. ಮಾರನೆಯ ದಿನ ಬೆಳಿಗ್ಗೆ ಎದ್ದು ಅವರಿಗೆ ಅಭಿವಂದಿಸಿ ಚಿತ್ರಕೂಟಕ್ಕೆ ಪ್ರಯಾಣ ಆರಂಭಿಸಿದರು.
ಚಿತ್ರಕೂಟ ಈಗಿನ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಗಡಿಭಾಗ. ಭಾರಧ್ವಾಜ ಮುನಿಗಳ ಆದೇಶದಂತೆ ಸೀತಾದೇವಿ ಆಲದ ಮರಕ್ಕೆ ಪೂಜೆ ಸಲ್ಲಿಸಿ ಚಿತ್ರಕೂಟವನ್ನು ತಲುಪುತ್ತಾರೆ. ಅಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಹೋಗಿ ಮಹರ್ಷಿಗಳಿಗೆ ಅಭಿವಂದನೆ ಸಲ್ಲಿಸಿದರು. ಆಗ ವಾಲ್ಮೀಕಿಗಳು ಅವರನ್ನು ಸ್ವಾಗತಿಸಿ ಸತ್ಕರಿಸಿದರು. ಶ್ರೀರಾಮ, ಲಕ್ಷಣನನ್ನು ನೋಡಿ ಈ ಬೆಟ್ಟ ಸುಂದರವಾಗಿದೆ, ಮರಬಳ್ಳಿಗಳು ತುಂಬಿವೆ. ಫಲ ಮೂಲಗಳು ಹೇರಳವಾಗಿವೆ. ಎಂದು ಹೇಳಿ ಲಕ್ಷ್ಮಣನಿಗೆ ಪರ್ಣಶಾಲೆಯನ್ನು ನಿರ್ಮಿಸಲು ಹೇಳಿದ. ಆ ಪರ್ಣಶಾಲೆಯಲ್ಲಿ ರಾಮ ಸೀತೆ ಲಕ್ಷ್ಮಣ ರಮ್ಯವಾದ ಚಿತ್ರಕೂಟ ಪರ್ವತವನ್ನು, ಅಲ್ಲಿ ಹರಿಯುವ ಮಲ್ಯವತೀ ನದಿಯನ್ನು ಮತ್ತು ಮೃಗಪಕ್ಷಿಗಳ ಹಿಂಡನ್ನು ಕಂಡು ಆನಂದಪಟ್ಟರು.
ಮಂದೆ ರಾಮ ದಂಡಕವನ್ನು ಪ್ರವೇಶಿಸುತ್ತಾನೆ. ಇದು ಈಗೀನ ಔರಂಗಬಾದಿನ ಹತ್ತಿರದ ಪ್ರದೇಶ ಎಂದು ಹೇಳಬಹುದು. ಶ್ರೀರಾಮನು ದಂಡಕಾರಣ್ಯವನ್ನು ಪ್ರವೇಶಿಸಿ, ಋಷಿಗಳಿಂದ ತುಂಬಿದ್ದ ಆ ಕಾಡನ್ನು ನೋಡಿದನು. ತಪಸ್ವಿಗಳ ಆಶ್ರಮಗಳಿಂದ ಅರಣ್ಯ ಶೋಭಿಸುತ್ತಿತ್ತು. ಸಾಮಾನ್ಯ ಅತಿಥಿಯಾಗಿ ಬಂದ ರಾಘವನನ್ನು ಋಷಿಗಳು ಸತ್ಕರಿಸಿದರು. ಋಷಿಗಳು ರಾಮನಿಗೆ ನಾವು ನಿನ್ನ ಪ್ರಜೆಗಳು, ನಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡರು. ಶ್ರೀರಾಮ ಅವರ ಆತಿಥ್ಯವನ್ನು ಸ್ವೀಕರಿಸಿ ಅವರಿಗೆ ಅಭಯವನ್ನಿತ್ತು ದಂಡಕಾರಣ್ಯದೊಳಗೆ ಮುಂದೆ ಹೋದನು.
ಮುಂದೆ ವಿರಾಧನೆಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ವಿರಾಧ ಮೊದಲು ಗಂಧರ್ವನಾಗಿದ್ದ, ಕುಬೇರನ ಶಾಪದಿಂದ ರಾಕ್ಷಸನಾದ. ಶ್ರೀರಾಮ ನಿನ್ನನ್ನು ಸೋಲಿಸಿದಾಗ ನಿನಗೆ ಶಾಪವಿಮೋಚನೆ ಎಂದು ಕುಬೇರ ಹೇಳಿದ್ದ. ವಿರಾಧ ತನ್ನ ಶಾಪ ನಿವಾರಣೆಯಾದದ್ದನ್ನು ತಿಳಿದು ಶರಭಂಗ, ಸುತೀಕ್ಷಣರ ಆಶ್ರಮದ ದಾರಿಯನ್ನು ತಿಳಿಸಿದ. ಶರಭಂಗ ಮುನಿಗಳು ಬ್ರಹ್ಮಲೋಕ, ಸ್ವರ್ಗಲೋಕ ಇನ್ನು ಅನೇಕ ಪುಣ್ಯಲೋಕಗಳನ್ನು ಸಾಧಿಸಿಕೊಂಡಿದ್ದರು. ಪ್ರಿಯ ರಾಮ ಬಂದಿರುವುದು ತಿಳಿದು, ಬ್ರಹ್ಮಲೋಕಕ್ಕೆ ಹೋಗದೆ ರಾಮನಿಗಾಗಿ ಕಾದರು. ರಾಮ ಆಶ್ರಮಕ್ಕೆ ಬಂದ ಕೂಡಲೇ ಅವನನ್ನು ಸತ್ಕರಿಸಿ ತಾವು ಪಡೆದಿರುವ ಎಲ್ಲ ಲೋಕಗಳನ್ನು ಅವನಿಗೆ ಅರ್ಪಿಸಲು ಮುಂದಾದರು. ಆಗ ರಾಮ ಆ ಸಮಸ್ತಲೋಕವನ್ನು ನಾನೇ ಸಂಪಾದಿಸುವೆ, ನನಗೆ ಅರಣ್ಯದಲ್ಲಿ ವಾಸಮಾಡಲು ಒಂದು ಸ್ಥಳವನ್ನು ತೋರಿಸಿ ಎಂದು ಹೇಳಿದಾಗ, ಸುತೀಕ್ಷಣರ ಆಶ್ರಮಕ್ಕೆ ಹೋಗಲು ಸಲಹೆ ನೀಡಿದರು. ಶರಭಂಗರು ಅಗ್ನಿಯಲ್ಲಿ ಅಜ್ಞಾಹುತಿಯನ್ನಿತ್ತು ಅಗ್ನಿ ಪ್ರವೇಶ ಮಾಡುತ್ತಾರೆ. ಆ ಅಗ್ನಿಯಿಂದ ತರುಣನೊಬ್ಬ ಪುಟಿದೇಳುತ್ತಾನೆ. ಅವರೇ ಶರಭಂಗ ಮಹರ್ಷಿಗಳು. ಹೀಗೆ ಅವರು ಬ್ರಹ್ಮಲೋಕವನ್ನು ಸೇರುತ್ತಾರೆ. ಆಗ ಆಶ್ರಮದಲ್ಲಿದ್ದ ಋಷಿಗಳೆಲ್ಲರೂ ಗುಂಪಾಗಿ ರಾಮನ ಬಳಿ ಬಂದರು. ಎಂತೆಂತಹ ಋಷಿಗಳು ಇದ್ದರು ಅಂದರೆ, ಅವರಲ್ಲಿ ಕೆಲವರು ವಾನಪ್ರಸ್ಥರು, ಸೂರ್ಯಚಂದ್ರ ಕಿರಿಣಗಳನ್ನೇ ಆಹಾರವನ್ನಾಗಿ ಮಾಡಿಕೊಂಡವರು, ಎಲೆಗಳನ್ನು ಮಾತ್ರ ತಿನ್ನುವವರು ಮತ್ತು ನೀರಿನಲ್ಲಿ ಮುಳುಗಿ ತಪಸ್ಸು ಮಾಡುವವರು ಹೀಗೆ 25ಕ್ಕಿಂತ ಹೆಚ್ಚಿನ ರೀತಿಯ ಋಷಿಗಳು ಅಲ್ಲಿದ್ದರು. ಇವರೆಲ್ಲರೂ ಬ್ರಹ್ಮವರ್ಚಸ್ಸುಯುಕ್ತರು, ಯೋಗಾನುಷ್ಠಾನತತ್ಪರರು, ಏಕಾಗ್ರಚಿತ್ತರು ಆಗಿದ್ದರು. ಈ ಋಷಿಗಳೆಲ್ಲ ರಾಮನಿಗೆ ರಾಜಧರ್ಮದ ವಿಚಾರವನ್ನು ತಿಳಿಸಿದರು. ನಂತರ ಶ್ರೀರಾಮನಿಗೆ ತಮ್ಮನ್ನು ಪರಿಪಾಲಿಸಬೇಕೆಂದು, ರಾಕ್ಷಸರ ಉಪದ್ರವದಿಂದ ಕಾಪಾಡಬೇಕೆಂದು ಪ್ರಾರ್ಥಿಸಿದರು. ಆಗ ಶ್ರೀರಾಮನು ತಂದೆಯ ಆಜ್ಞೆಯನ್ನು ಪಾಲಿಸುವುದಕ್ಕೆ ನಾನು ಕಾಡಿಗೆ ಬಂದೆ. ನಿಮೆಲ್ಲರ ಅಭೀಷ್ಟವನ್ನು ನೆರೆವೇರಿಸಲು ನಾನು ಶ್ರಮಿಸುತ್ತೇನೆ. ರಾಕ್ಷಸರನ್ನು ಸಂಹರಿಸುತ್ತೇನೆ ಎಂದು ಹೇಳಿ ಅವರಿಂದ ಬೀಳ್ಕೊಂಡನು.
ಆ ಘೋರ ಅರಣ್ಯದಲ್ಲಿ ಒಂದು ಕಡೆ ಹೂ ಹಣ್ಣುಗಳು ವಿಪುಲವಾಗಿದ್ದ ಒಂದು ಆಶ್ರಮವನ್ನು ಶ್ರೀರಾಮನು ಕಂಡನು. ಅದೇ ಸುತೀಕ್ಷಣರ ಆಶ್ರಮ. ಸುತೀಕ್ಷಣ ಮಹರ್ಷಿಗಳನ್ನು ಭೇಟಿ ಮಾಡಿ ಅವರಿಗೆ ನಮಸ್ಕರಿಸಿದರು. ಆ ತಪಸ್ವಿಗಳು ಕೂಡ ತಾವು ಸಂಪಾದಿಸಿದ ಸಮಸ್ತಲೋಕಗಳನ್ನು ರಾಮನಿಗೆ ಅರ್ಪಿಸಲು ಮುಂದಾದರು. ಮತ್ತು ತಮ್ಮ ಆಶ್ರಮದಲ್ಲೇ ವನವಾಸ ಮಾಡಲು ರಾಮನನ್ನು ಪ್ರಾರ್ಥಿಸಿದರು. ಶ್ರೀರಾಮ ಹೇಳುತ್ತಾನೆ. ನಾನು ನಿಮ್ಮ ಆಶ್ರಮದಲ್ಲಿ ಉಳಿಯಲಾರೆ, ನಾನು ಕ್ಷತ್ರಿಯನಾದ್ದರಿಂದ ಮೃಗಗಳ ಬೇಟೆ ಮಾಡುತ್ತೇನೆ, ಇದರಿಂದ ಆಶ್ರಮವಾಸಿಗಳಾದ ತಪಸ್ವಿಗಳಿಗೆ ಬೇಸರವಾಗುತ್ತದೆ. ನಾನು ಇನ್ನು ಅನೇಕ ಋಷಿಗಳ ಆಶ್ರಮವನ್ನು ನೋಡಬೇಕೆಂದು ಅವರಿಂದ ಬೀಳ್ಕೊಂಡನು. ಸುತೀಕ್ಷಣರು ಮತ್ತೊಮ್ಮೆ ಆಶ್ರಮಕ್ಕೆ ಬರಲು ಹೇಳಿದರು. ಧರ್ಮವೃತನೆಂಬ ಮುನಿ ರಾಮನೊಡನೆ ಮುಂದೆ ನಡೆದನು. ಅವರು ಪಂಚಾಪ್ಸಾರವೆಂಬ ವಿಸ್ಮಯವಾದ ಸರೋವರವನ್ನು ವೀಕ್ಷಿಸಿದರು. ಅದು ಮಾಂಡಕರ್ಣಿ ಎಂಬ ಋಷಿಯಿಂದ ಆಗಿರುವ ಸರೋವರ ಎಂದು ಅದರ ಪೂರ್ತಿ ವಿವರವನ್ನು ತಿಳಿಸಿದರು.
ಮುಂದೆ ಅನೇಕ ಆಶ್ರಮಗಳಿರುವ ತಪೋವನವು ಶ್ರೀರಾಮನಿಗೆ ಕಾಣಿಸಿತು. ಅದು ಅತ್ರಿ ಮಹಾಮುನಿಗಳ ಆಶ್ರಮ. ಶ್ರೀರಾಮನು ಸೀತಾ ಲಕ್ಷ್ಮಣರೊಡನೆ ಆಶ್ರಮವನ್ನು ಪ್ರವೇಶಿದನು. ಆ ತಪಸ್ವಿಗಳ ಆಶ್ರಮಗಳಲ್ಲಿ ಸಂಚರಿಸುತ್ತಾ. ಕೆಲವು ಕಡೆ 10 ತಿಂಗಳು, ಕೆಲವು ಕಡೆ 4-5 ತಿಂಗಳು, ಮತ್ತೊಮ್ಮೆ 1 ವರ್ಷ ಹೀಗೆ ಶ್ರೀರಾಮನು ಮುನಿಗಳ ಆಶ್ರಮಗಳಲ್ಲಿ ಸಂತೋಷದಿಂದ ಇರಲು, 10 ವರ್ಷಗಳು ಸಂದವು. ಶ್ರೀರಾಮನು ಸುತೀಕ್ಷಣರ ಆಜ್ಞೆಯಂತೆ ಮತ್ತೊಮ್ಮೆ ಅವರ ಆಶ್ರಮಕ್ಕೆ ಆಗಮಿಸಿದನು. ಸುತೀಕ್ಷಣರಲ್ಲಿ ಅಗಸ್ತ್ರರನ್ನು ಭೇಟಿ ಮಾಡಬೇಕೆಂದು ಕೇಳಿಕೊಂಡನು. ಆಗ ಸುತೀಕ್ಷಣರು, ಅಗಸ್ಯರ ಸೋದರರ ಆಶ್ರಮ ಮತ್ತು ಅಗಸ್ತ್ಯ ಆಶ್ರಮದ ಹಾದಿಯನ್ನು ವಿವರಿಸಿದರು.
ಆಗ ಶ್ರೀರಾಮನು ಸುತೀಕ್ಷಣರಿಗೆ ನಮಸ್ಕರಿಸಿ, ನಿರ್ಗಮಿಸಿದನು. ಸ್ವಲ್ಪ ದೂರ ನಡೆಯುವುದರಲ್ಲಿ ಅಗಸ್ತ್ಯರ ಸೋದರರ ಆಶ್ರಮ ಕಾಣಿಸಿತು. ಆಶ್ರಮದೊಳಗೆ ಹೋಗಿ ಮುನಿಗಳಿಗೆ ನಮಸ್ಕರಿಸಿದರು. ಆ ಮುನಿಗಳು ರಾಘವನನ್ನು ಪ್ರೀತಿಯಿಂದ ಸ್ವಾಗತಿಸಿ ಫಲ ಮೂಲಗಳನ್ನು ಕೊಟ್ಟರು. ಆ ರಾತ್ರಿ ಅಲ್ಲಿಯೇ ತಂಗಿದ್ದರು. ಮುಂಜಾನೆ ಎದ್ದು, ಋಷಿಗಳಿಗೆ ಅವರ ಅಗ್ರಜರನ್ನು ನೋಡುವುದಾಗಿ ಅರಿಕೆ ಮಾಡಿದರು.
ಆ ತಪಸ್ವಿಗಳು ಅವರನ್ನು ಹರಸಿ ಕಳುಹಿಸಿದರು. ದಂಡಕವನ ಈಗಿನ ಚತ್ತಿಸ್‌ಘಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದ ಪ್ರಾಂತ್ಯ. ಅಗಸ್ತ್ಯರ ಆಶ್ರಮ ಕರ್ನಾಟಕದ ಶೃಂಗೇರಿ ಬಳಿ ಇರುವ ಹರಿಹರಪುರ. ಅಗಸ್ತ್ಯರ ಆಶ್ರಮದ ಬಳಿ ಹೋಗಿ, ಅವರ ಶಿಷ್ಯರನ್ನು ಭೇಟಿ ಮಾಡಿ, ಅಗಸ್ತ್ಯರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ತಿಳಿಸಿದಾಗ ಶಿಷ್ಯರು ಅಗಸ್ತ್ಯರಿಗೆ ವಿಷಯವನ್ನು ತಿಳಿಸುತ್ತಾರೆ. ಆಗ ಅಗಸ್ತ್ಯರೇ ಆ ಮೂವರನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸುತ್ತಾರೆ. ಅನಂತರ ವೈಶ್ಯದೇವವನ್ನಾಚರಿಸಿ ಅರ್ಘ್ಯಗಳಿಂದ ವಾನಪ್ರಸ್ಥ ಧರ್ಮಾನುಸಾರ ಭೋಜನ ಮಾಡಿಸಿದರು. ಅನಂತರ ಶ್ರೀರಾಮನಿಗೆ ಎಲ್ಲ ವಿಧಿಗಳ ವಿಶೇಷತೆಯನ್ನು ವಿವರಿಸಿದರು.
ಧರ್ಮನಿಷ್ಠನಾಗಿ ಮಹಾರಥವೆನಿಸಿದ ರಾಜನು ಸಕಲ ಪ್ರಜೆಗಳಿಗೂ ಪೂಜ್ಯನು, ಸನ್ಮಾನ್ಯನು ನೀನು ನನಗೆ ಅತ್ಯಂತ ಪ್ರಿಯನಾದ ಅತಿಥಿ ಎಂದು ಹೇಳಿ ರಾಮನಿಗೆ ಸುವರ್ಣರತ್ನಗಳಿಂದ ಭೂಷಿತವಾದ ದಿವ್ಯಚಾಪವನ್ನು ತೋರಿಸಿ ಇದು ವಿಷ್ಟುವಿನ ಚಾಪ ವಿಶ್ವಕರ್ಮನು ನಿರ್ಮಿಸಿದ್ದು, ಸೂರ್ಯನಂತೆ ಬೆಳಗುವ ಅಮೋಘಾಸ್ತ್ರವು ಬ್ರಹ್ಮದತ್ತವಾದದ್ದು.
ಈ ಎರಡು ಬತ್ತಳಿಕೆಗಳು ಇಂದ್ರನು ನನಗೆ ಕೊಟ್ಟಿದ್ದಾನೆ. ಇವುಗಳಲ್ಲಿರುವ ಬಾಣಗಳು ಅಕ್ಷಯವಾದವು. ಈ ಚಿನ್ನದ ಒರೆಯಲ್ಲಿ ಚಿನ್ನದ ಹಿಡಿಕೆಯುಳ್ಳ ಖಡ್ಗವಿದೆ. ಶ್ರೀರಾಮ ಪೂರ್ವದಲ್ಲಿ ವಿಷ್ಟುವು ಈ ಧನಸ್ಸನ್ನು ಹಿಡಿದು ಯುದ್ಧ ಮಾಡಿ ಮಹಾ ದೈತ್ಯರನ್ನು ಸಂಹರಿಸಿದ್ದಾನೆ. ವೀರಾಗ್ರಣಿ ಈ ಧನಸ್ಸು; ಬತ್ತಳಿಕೆಗಳು ನಿನ್ನ ವಶದಲ್ಲಿರಲಿ. ನೀನು ನನ್ನನ್ನು ನೆನೆಸಿದಾಗ ಪ್ರತ್ಯಕ್ಷನಾಗುತ್ತೇನೆ ಎಂದು ಹರಸಿ, ಇಲ್ಲಿಗೆ ಎರಡು ಯೋಜನಗಳ ದೂರದಲ್ಲಿ ಪಂಚವಟಿ ಎಂಬ ಪ್ರದೇಶವಿದೆ. ಅಲ್ಲಿ ನೀನು ಸೀತಾಲಕ್ಷ್ಮಣರೊಡನೆ ವಾಸಿಸಬಹುದು, ತಂದೆಯ ಆಜ್ಞೆಯನ್ನು ಪಾಲಿಸಬಹುದು ಎಂದು ಹೇಳಿ ಕಳುಹಿಸಿಕೊಟ್ಟರು. ಹೀಗೆ ಶ್ರೀರಾಮನು ಎಲ್ಲಾ ಋಷಿಗಳ ಆಶ್ರಮವನ್ನು ಸಂದರ್ಶಿಸಿದ.
ಮುಂದೆ ಶ್ರೀರಾಮ ರಾವಣನ ಸಂಹಾರ ಮಾಡಿದ ಮೇಲೆ ಪುಷ್ಪಕವಿಮಾನದಲ್ಲಿ ಪ್ರಯಾಣಿಸುವಾಗ ಸೀತೆಗೆ ಎಲ್ಲರ ಆಶ್ರಮವನ್ನು ತೋರಿಸಿ ನಡೆದ. ಕೊನೆಗೆ ಭಾರದ್ವಾಜರ ಆಶ್ರಮವನ್ನು ತೋರಿಸಿ ಅಲ್ಲಿ ಕಾಣುವುದೇ ಆಯೋಧ್ಯೆ ಎಂದು ಹೇಳಿ ತಾನು ನಮಸ್ಕರಿಸಿ ಸೀತೆಗೆ ನಮಸ್ಕರಿಸಲು ಹೇಳಿದ. ಹೀಗೆ ಶ್ರೀರಾಮನು ತನ್ನ ಇಡೀ ವನವಾಸದಲ್ಲಿ ಋಷಿ ಮುನಿಗಳ ಸಹವಾಸದಲ್ಲಿಯೇ ಇದ್ದ.
- ಡಾ. ಗೀತಾ ರಮೇಶ್
ಎಂ.ಎಸ್ಸ್ಸಿ., ಪಿಹೆಚ್.ಡಿ.
ಪ್ರಾಧ್ಯಾಪಕರು
9448871273
ಪರಿಚಯ: ಇವರು ಅನೇಕ ಇಂಜಿನಿಯರಿಂಗ್, ಪದವಿ ಕಾಲೇಜುಗಳಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಅನೇಕ ದೂರದರ್ಶನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿಷಯ ಮಂಡನೆ ಮಾಡಿದ್ದಾರೆ. ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ